ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:01 PM

ಸ್ವೀಟ್ ಸೊಳೆ...

Posted by ekanasu

ವೈವಿಧ್ಯ
ಮೊನ್ನೆ ಕೊಕ್ಕಡಕ್ಕೆ ಹೋಗಿ ಬರ್ತಾ ಇದ್ದೆ.ಪೆರಿಯಶಾಂತಿಯಲ್ಲೊಬ್ಬ ಸಾರ್ ಹಲಸಿನ ಹಣ್ಣು ಬೇಕಾ ಅಂದ. ಬೈಕ್ ನಿಲ್ಲಿಸಿದ್ದೇ ತಡ ಹತ್ತಿರ ಬಂದ.ಊರ ಜನ ಅಂತ ಗೊತ್ತಾದ ಮೇಲೆ. "ಪೆಲಕ್ಕಾಯಿ ಬೋಡಾ " ಅಂತ ತುಳುವಿನಲ್ಲಿ ಕೇಳಿದ, ಸುಮ್ಮನೆ. ಆ ನಂತರ ನಾನೂ ಆ ಬಗ್ಗೆ ಸ್ವಲ್ಪ ಹೀಗೇ ಸುಮ್ಮನೆ ಕೇಳಿದೆ.ಒಳ್ಳೇ ಇಂಟೆರೆಸ್ಟಿಂಗ್ ಇದೆ ಅಂತ ಅನಿಸಿತು. ಸರಿಯಾಗಿ ನೋಡಿದ್ರೆ ನಿರುದ್ಯೋಗ ಸಮಸ್ಯೆಗೆ ಇದೂ ಒಂದು ಪರಿಹಾರ ಅಲ್ವೇ. .?. ಯಾಕೆ ಗೊತ್ತಾ. .?. ಸೂರ್ಯ ಮುಳುಗುವ ಹೊತ್ತಿನವರೆಗೆ ಇವರು ಸಂಪಾದಿಸುವ ಹಣ ಸರಿಸುಮಾರು ಸೀಸನ್ನಲ್ಲಿ 600 ರಿಂದ 700 . .!!.
ಆತನ ಹೆಸರು ಮಹಮ್ಮದ್.ಊರು ನೆಲ್ಯಾಡಿ.ಆತನ ಕಾಯಕ ಹಲಸಿನ ಹಣ್ಣು ಮಾರೋದು. ಜೂನ್‌ನಿಂದ ಅಬ್ಬಬ್ಬಾ ಅಂದರೆ ಸಪ್ಟಂಬರ್‌ವರೆಗೆ ಈ ಕೆಲಸ.ಉಳಿದ ಸಮಯದಲ್ಲಿ ಇನ್ಯಾವುದಾದರೂ ಹಣ್ಣುಗಳ ಮಾರಾಟ.ಆದರೆ ಆತನಿಗೆ ಇಂಥದ್ದೇ ಅಂತ ಅಂಗಡಿ ಇಲ್ಲ.ರಸ್ತೆಯೇ ಈತನಿಗೆ ಎಲ್ಲವೂ.ಹಾಗಂತ ಈತ ಬೀದಿ ವ್ಯಾಪಾರಿಯಲ್ಲ. ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದ ಕ್ರಾಸ್‌ನ ಪೆರಿಯಶಾಂತಿಯಲ್ಲಿ ಈತ ಹಲಸಿನ ಹಣ್ಣುಗಳನ್ನು ರೆಡಿ ಪ್ಯಾಕೇಟ್ ಮಾಡಿ ನಿಲ್ಲುತ್ತಾನೆ.ಬೆಳಗ್ಗೆ ಸೂರ್ಯ ಉದಯಿಸಿ ಇನ್ನೇನು ನೆತ್ತಿಗೆ ಬರುತ್ತಾನೆ ಅನ್ನುವಷ್ಟರಲ್ಲಿ ಈ ಮಹಮ್ಮದ್ ಪೆರಿಯಶಾಂತಿಯಲ್ಲಿ ಉದಯಿಸಿಕೊಳ್ಳುತ್ತಾನೆ.ಅಲ್ಲಿಂದ ಆತನ ಕಾಯಕ ಶುರು.ಅದೆಲ್ಲಿಂದಲೇ ವಾಹನ ಬರಲಿ ಹಲಸಿನ ಹಣ್ಣಿನ ಪ್ಯಾಕೇಟ್ ತೋರಿಸುತ್ತಾನೆ.ಸಾರ್ ಸ್ವೀಟ್ ಇದೆ ಅಂತ ಬೊಬ್ಬಿಡುತ್ತಾನೆ. ದೂರದ ಊರಿನ ಜನ ಗಾಡಿ ನಿಲ್ಲಿಸ್ತಾರೆ.ರೇಟ್ ಎಷ್ಟಪ್ಪಾ ಅಂತಾರೆ. ಸಾರ್ , ಹತ್ತು ಅಂತಾನೆ. ಏನ್ಪಪ್ಪಾ ಈ ಚಿಕ್ಕ ಪ್ಯಾಕೇಟ್‌ಗೆ ಹತ್ತು ರುಪಾಯಿಯಾ ಅಂತಾರೆ.ಅಲ್ಲಾ ಸಾರ್ ಹತ್ತು ರುಪಾಯಿಗೆ ಎರಡು ಪ್ಯಾಕೇಟ್ ಅಂತಾನೆ ಈ ಚಾಲಕಿ ಮಹಮ್ಮದ್. ಇನ್ನು ಊರ ಜನರಿಂದ ಏನಾದ್ರು ತಪ್ಪಿ 5 ರುಪಾಯಿ ಹೆಚ್ಚು ಬಂದ್ರೂ ಈತನಿಗೆ ಅದೇನೋ ಕಿರಿಕಿರಿ. ಛೇ . . ಛೇ ಅವ್ರಿಗೆ ಲಾಸ್ ಆಯ್ತು.ಅವ್ರು ನಮ್ಮ ಊರಿನೋರೇ ಅಂತಾನೆ.
ಅದೆಲ್ಲಾ ಸರಿ.

ಮಹಮ್ಮದ್ ಇದನ್ನು ಹೇಗೆ ತಯಾರು ಮಾಡ್ತಾನೆ ಮತ್ತು ಮಾರ್ಕೇಟಿಂಗ್ ಹೇಗೆ ಅಂತ ಆತನಲ್ಲಿ ಕೇಳಿದ್ರೆ ಆತ ವಿವರಿಸ್ತಾ ಹೋಗ್ತಾನೆ.ನೆಲ್ಯಾಡಿಯ ಆಸುಪಾಸಿನ ಕೃಷಿಕರ ತೋಟದಲ್ಲಿ ಹಲಸಿನ ಹಣ್ಣು ಇದೆಯಾ ಅಂತ ವಿಚಾರಿಸಿದ ಬಳಿಕ ಒಂದು ಹಣ್ಣಿಗೆ 30 ರುಪಾಯಿಯಂತೆ ನೀಡಿ ಅದನ್ನು ಪಡೆಯುತ್ತಾನೆ.ಇನ್ನು ಈ ಹಣ್ಣನ್ನು ಮರದಿಂದ ಕೀಳಲು ಮರವೇರುವ ಕಾರ್ಮಿಕನಿಗೆ ಒಂದು ಹಣ್ಣಿಗೆ 5 ರಿಂದ 10 ರುಪಾಯಿ ಕೊಡಬೇಕು.ಇದಾದ ನಂತರ ಈ ಎಲ್ಲಾ ಹಣ್ಣುಗಳನ್ನು ಮನೆಗೆ ಕೊಂಡೊಯ್ದು ಅದನ್ನು ಹದ ಮಾಡಿದ ಬಳಿಕ ಚಿಕ್ಕ ಚಿಕ್ಕ ಪ್ಯಾಕೇಟ್ ಮಾಡಲಾಗುತ್ತದೆ. ಒಂದು ಪ್ಯಾಕೇಟ್‌ನಲ್ಲಿ ಇಷ್ಟೇ ಹಣ್ಣು ಅಂತೇನಿಲ್ಲ. ಪ್ಯಾಕೇಟ್‌ನ ಅರ್ಧದಷ್ಟು. ಇದೆಲ್ಲಾ ಆದ ಮೇಲೆ ಮಾರಾಟಕ್ಕೆ ಸಿದ್ದವಾಗುತ್ತದೆ.ಇದಾಗುವ ವೇಳೆ ಒಂದು ಹಲಸಿನ ಹಣ್ಣಿನ ಅಸಲು 40 ರಿಂದ 50 ರುಪಾಯಿ ಆಗಿರುತ್ತದೆ.

ಬೆಳಗ್ಗೆ 11 ಗಂಟೆಯ ನಂತರ ಪೆರಿಯಶಾಂತಿ ಕ್ರಾಸ್‌ನಲ್ಲಿ ಮಹಮ್ಮದ್ ಬಂದು ನಿಲ್ಲುತ್ತಾನೆ.ಹಲಸಿನ ಹಣ್ಣುಗಳ ವ್ಯಾಪಾರ ಶುರುಮಾಡುತ್ತಾನೆ.ಬೆಳಗ್ಗೆ ಹದ ಮಾಡಿದ ಹಣ್ಣು ಮಧ್ಯಾಹ್ನದ ವೇಳೆಗೆ ಮುಗಿಯಬೇಕು ಎನ್ನುವುದು ಈ ವ್ಯಾಪಾರಿಯ ಟಾರ್ಗೆಟ್.ಯಾಕೆ ಗೊತ್ತಾ ಆ ಮೇಲೆ ಹಣ್ಣಿನ ಒರಿಜಿನಲ್ ಸ್ಮೆಲ್ ಹೋಗುತ್ತದೆ.ಒಂದು ಹಣ್ಣಿನಲ್ಲಿ ಸಾಮಾನ್ಯ ದಿನಗಳಲ್ಲಿ 150 ರುಪಾಯಿವರೆಗೂ ಮಾಡುತ್ತಾನಂತೆ.ಇನ್ನು ಮಧ್ಯಾಹ್ನದ ಊಟವೂ ಪೆರಿಯಶಾಂತಿ ಕ್ರಾಸ್‌ಗೇ ಬರುತ್ತದೆ.ಅದರ ಜೊತೆಗೆ ಇನ್ನೊಂದು ಹಲಸಿನ ಹಣ್ಣಿನ ಪ್ಯಾಕೇಟ್‌ಗಳು ಕೂಡಾ.ಮತ್ತೆ ವ್ಯಾಪಾರ ಶುರು.ಇನ್ನು ವಾರಾಂತ್ಯದ ದಿನಗಳಲ್ಲಿ ದಿನಕ್ಕೆ 5 -6 ಹಲಸಿನ ಹಣ್ಣು ಮುಗಿಯುತ್ತಂತೆ.ಒಂದು ಪ್ಯಾಕೇಟ್‌ಗೆ 5 ರುಪಾಯಿಯ ಹಾಗೆ ಮಾರಾಟ.ಹೀಗೇ ಸೀಸನ್‌ನಲ್ಲಿ , ವಾರಾಂತ್ಯದ ಸಮಯದಲ್ಲಿ ದಿನಕ್ಕೆ 600 ರಿಂದ 700 ರುಪಾಯಿ ಸಿಗುತ್ತಂತೆ ಈ ಮಹಮ್ಮದ್‌ಗೆ.ಇನ್ನು ಹಲಸಿನ ಹಣ್ಣು ಹೆಚ್ಚಾಗಿರುವ ಸಂದರ್ಭದಲ್ಲಿ ಇಡೀ ಹಣ್ಣು ಕೂಡಾ ಮಾರಾಟವಾಗುತ್ತದೆ.ಅದಕ್ಕೆ 150 ರುಪಾಯಿ , 200 ರುಪಾಯಿ ದರ ಇರುತ್ತೆ.ಬೇಡಿಕೆಗೆ ಅನುಗುಣವಾಗಿ ರೇಟ್ ಕೂಡಾ ಹೆಚ್ಚು ಕಮ್ಮಿ ಆಗುತ್ತೆ.ಸಂಜೆ ಸುಮಾರು 6 ಗಂಟೆಯವರೆಗೆ ಈ ವ್ಯಾಪಾರ ನಡೆಯುತ್ತದೆ.

ಆತ ಅಂತಾನೆ ,

ಇಲ್ಲಿ ನಾನೋಬ್ನೇ ಮಾರೋದಲ್ಲ ಕೆಲವೊಂದು ದಿನ 4 -5 ಜನವೂ ಇರ್‍ತಾರೆ ಹಾಗಾಗಿ ಒಂದೊಂದು ದಿನ ತುಂಬಾ ಲಾಭವಾಗುತ್ತದೆ.ಇನ್ನೂ ಒಂದೊಂದು ದಿನ ನಷ್ಟವೂ ಆಗುತ್ತದೆ.ಹಲಸಿನ ಹಣ್ಣು ಪ್ಯಾಕೇಟ್ ಉಳಿಯುತ್ತದೆ.ಕೊನೆಗೆ ಅದನ್ನು ಕಾಡಿನ ಮಂಗಗಳಿಗೆ ಎಸೆದು ಹೋಗೋದು ಅಂತಾನೆ ಮಹಮ್ಮದ್. ಎಲ್ಲಾದ್ರೂ ಪ್ರವಾಸಿಗರ ವಾಹನ ನಿಲ್ಸಿದ್ರೆ ಬಂಪರ್ ಎಂದು ಖುಷಿ ಪಡ್ತಾನೆ.ಇನ್ನು ಪೆರಿಯಶಾಂತಿ ಒಂದು ಸ್ವಲ್ಪ ಕಾಡಿನ ಪ್ರದೇಶವಾದ್ದರಿಂದ ಕೆಲವು ವಾಹನದೋರು ನಿಲ್ಸೋದೇ ಇಲ್ಲ.ಹೆದರಿಕೆಯೂ ಆಗುತ್ತಲ್ಲ ಅಂತಾನೆ.ಒಟ್ಟಾರೆ ಹೇಳೋದಾದ್ರೆ ಲಾಭ ಇದೆ.ಹಲಸಿನ ಹಣ್ಣು ಮುಗಿದ ಮೇಲೆ ಅನಾನಸು ಇದೆ , ಮತ್ತೆ ಇನ್ಯಾವುದಾದ್ರೂ ಹಣ್ಣು ಸಿಗುತ್ತೆ , ಬೇಸಗೆಯಲ್ಲಾದ್ರೆ ಕಬ್ಬಿನ ಜ್ಯೂಸ್ ಕೂಡಾ ಇಲ್ಲೇ ಮಾಡ್ತೀವಿ.ಕಾಡಿನ ನಡುವೆ ಅಲ್ವಾ ಖುಷಿ ಇರುತ್ತೆ ಅಂತಾನೆ.

ಒಂದು ಕೆಲಸದಲ್ಲಿ ಸವಾಲುಗಳು ಇದ್ದೇ ಇರ್‍ತವೆ ಬಿಡಿ.ಅದೆಲ್ಲವನ್ನೂ ಮೆಟ್ಟಿ ನಿಂತಾಗಲಷ್ಟೇ ಯಶಸ್ಸು ಸಾಧ್ಯ.ಅಂತಹದ್ದರಲ್ಲಿ ಏನೂ ಕೆಲಸವೇ ಸಿಕ್ತಿಲ್ಲ ಅನ್ನೋ ಜನರಿಗೆ, ಇದನ್ನೊಂದು,ಅಂದರೆ ಹಲಸಿನ ಹಣ್ಣು ವ್ಯಾಪಾರ ಮಾಡೋದು ಕೂಡಾ ಒಂದು ಉದ್ಯಮವಾಗಬಹುದಲ್ವಾ. .? ಹೀಗೇ ರಸ್ತೆಬದಿ ಮಾರಾಟ ಮಾಡಬೇಕೆಂದೇನಿಲ್ಲ.ನಗರದ ಮಾರುಕಟ್ಟೆ ಹಿಡಿಬಹುದಲ್ವಾ. .?. ಮನಸ್ಸಿದ್ದರೆ , ಸವಾಲು ಸ್ವೀಕರಿಸಬಹುದಾದರೆ ಎಲ್ಲವೂ ಸಾಧ್ಯ ಅಲ್ವೇ. . .? ಅದಕ್ಕೆ ಈ ಮಹಮ್ಮದ್ ಒಬ್ಬ ಸಾಕ್ಷಿ ಅಷ್ಟೆ.
ಮಹೇಶ್ ಪುಚ್ಚಪ್ಪಾಡಿ

2 comments:

Arun Kashyap said...

ನಿರುದ್ಯೋಗ ಸಮಸ್ಯೆಗೆ ಈ ವ್ಯಾಪಾರ ಒಂದು ಬ್ರಹ್ಮಾಸ್ತ್ರಾ....
ಹಲಸಿನ ಹಣ್ಣನ್ನು ಮುಂಬೈಯಲ್ಲಿ ಮಾರಾಟ ಮಾಡಿ ಕೊಟಿಗಟ್ಟಲೆ ಸಂಪಾದನೆ ಮಾಡಿದ ಉದಾಹರಣೆಯನ್ನು ನಮ್ಮ ತಂದೆ ಹೇಳಿದ್ದರೂ......
ಎಷ್ಟೊ ರಾಜ್ಯಗಳಲ್ಲಿ ಈ ಹಣ್ಣಿನ ಪರಿಚಯ ಇನ್ನೂ ಇಲ್ಲಾ....
ಈ ವ್ಯಾಪಾರದ ಬೆಲೆ ಇನ್ನೂ ಬಹಳ ಜನಕ್ಕೆ ಗೊತ್ತಿಲ್ಲಾ.....

’ಮಹೇಶ್ ಪುಚ್ಚಪ್ಪಾಡಿಯವರ ಈ ಲೆಖನ ತುಂಬಾ ಚೆನ್ನಾಗಿದೆ’
ಸ್ವಾವಲಂಬಿ ಉದ್ಯಮದ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಜನಗಳಿಗೆ ಅಗತ್ಯವಿದೆ.

Anonymous said...

ನಿರುದ್ಯೋಗ ಸಮಸ್ಯೆಗೆ ಈ ವ್ಯಾಪಾರ ಒಂದು ಬ್ರಹ್ಮಾಸ್ತ್ರ. ಹಲಸಿನ ಹಣ್ಣನ್ನು ಮುಂಬೈಯಲ್ಲಿ ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡಿದ ಉದಾಹರಣೆಯನ್ನು ನಮ್ಮ ತಂದೆ ಹೇಳಿದ್ದರು.

ಎಷ್ಟೊ ರಾಜ್ಯಗಳಲ್ಲಿ ಈ ಹಣ್ಣಿನ ಪರಿಚಯ ಇನ್ನೂ ಇಲ್ಲಾ, ಈ ವ್ಯಾಪಾರದ ಬೆಲೆ ಇನ್ನೂ ಬಹಳ ಜನಕ್ಕೆ ಗೊತ್ತಿಲ್ಲ.

'ಮಹೇಶ್ ಪುಚ್ಚಪ್ಪಾಡಿಯವರ ಈ ಲೇಖನ ತುಂಬಾ ಚೆನ್ನಾಗಿದೇ.'

ಸ್ವಾವಲಂಬಿ ಉದ್ಯಮದ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಜನಗಳಿಗೆ ಅಗತ್ಯವಿದೆ.

-ಅರುಣ್ ಕಶ್ಯಪ್,
ಬೆಂಗಳೂರು.

Post a Comment