ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಉಡುಪಿ : ಸರಕಾರ ಪೌರಾಡಳಿತ ಸಂಸ್ಥೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಅದನ್ನು ಸದ್ಬಳಕೆ ಮಾಡಬೇಕು ಎಂದು ಪೌರಾಡಳಿತದವರಿಗೆ ಕಿವಿಮಾತು ಹೇಳಿದ ರಾಜ್ಯ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಜನಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಹೊಂದಾಣಿಕೆ ಇದ್ದಲ್ಲಿ ಜನತೆಯ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿ ನಗರಸಭೆ ಅಮೃತ ಮಹೋತ್ಸವ ಅಂಗವಾಗಿ ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳವಧಿಯ ರಾಜ್ಯ ಮಟ್ಟದ ಪೌರಸಭೆಗಳ ಸಮಾವೇಶವನ್ನು ಗುರುವಾರ ಉದ್ಘಾಟಿಸಿದರು.

ಸಮೀಕ್ಷೆಯೊಂದರ ಪ್ರಕಾರ ಶೇ. 34ರಷ್ಟು ಜನತೆ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ವೃದ್ಧಿಯಾಗಲಿದೆ. ಪೌರಾಡಳಿತ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಹೀಗೆ ಬಂದ ಹಣವನ್ನು ಪ್ರತಿಯೋರ್ವ ಸದಸ್ಯರು ಸಮಾನವಾಗಿ ಹಂಚಿಕೊಳ್ಳುವ ಬದಲಿಗೆ ನಿಗದಿತ ವಾರ್ಡುಗಳು ಸರ್ವಾಂಗೀಣ ಪ್ರಗತಿಯನ್ನು ಸರದಿಯಲ್ಲಿ ಹಮ್ಮಿಕೊಳ್ಳುವುದು ಸೂಕ್ತ. ಅದರಿಂದ ಸಂಪನ್ಮೂಲದ ಸದ್ಬಳಕೆಯಾಗುವ ಜೊತೆಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಅಧಿಕಾರ ವಹಿಸಿಕೊಂಡ ಜನಪ್ರತಿನಿಧಿಗಳು ಪಕ್ಷ ಹಾಗೂ ಜಾತ್ಯತೀತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದರು.


ರಾಜ್ಯದ ಇತರ ಪೌರಸಂಸ್ಥೆಗಳಿಗೆ ಹೋಲಿಸಿದಲ್ಲಿ ಕರಾವಳಿ ಜಿಲ್ಲೆಗಳ ಪೌರಾಡಳಿತ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಉಡುಪಿ ನಗರಸಭೆ ಇಲ್ಲಿನ ಪರಿಶಿಷ್ಟ ಜಾತಿ- ಪಂಗಡದವರಿಗೆ ಆರೋಗ್ಯ ವಿಮೆ ಜಾರಿ ತಂದಿರುವುದು ಸಂತಸದಾಯಕ. ಇದು ಇತರ ಪೌರಸಂಸ್ಥೆಗಳಿಗೆ ಮಾದರಿ ಎಂದರು.ಅಭ್ಯಾಗತರಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಗೃಹಮಂತ್ರಿ ಡಾ. ವಿ. ಎಸ್. ಆಚಾರ್ಯ, ಭವಿತವ್ಯವನ್ನು ಲಕ್ಷ್ಯದಲ್ಲಿರಿಸಿ ನಗರಾಡಳಿತ ಸಂಸ್ಥೆಗಳು ಯೋಜನೆ ರೂಪಿಸಬೇಕು. ಪೌರಸಂಸ್ಥೆಗಳ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ ಹಾಗೂ ಬೆಳಕಿನ ವ್ಯವಸ್ಥೆಗೆ ಸರಕಾರ ಆದ್ಯತೆ ನೀಡಲಿದ್ದು, ಪ್ರಸಕ್ತದ ರಾಜ್ಯ ಸರಕಾರ ಈ ಹಿಂದಿಗಿಂತ ಅಧಿಕ ಪ್ರಮಾಣದಲ್ಲಿ ರಾಜ್ಯದ ಪೌರಾಡಳಿತ ಸಂಸ್ಥೆಗಳಿಗೆ 1,441 ಕೋಟಿ ರೂ. ನೀಡಿದೆ ಎಂದರು.ಪೌರಸಂಸ್ಥೆಗಳ ನಿಯಮಾವಳಿ ಹಳೆಯದಾಗಿದ್ದು, 1964ರ ನಿಯಮವನ್ನು ತಿದ್ದುಪಡಿ ಮಾಡುವ ಆವಶ್ಯಕತೆ ಇದೆ. ಪೌರಾಡಳಿತ ಸಂಸ್ಥೆಗಳಿಗೆ ಆಡಳಿತಾಧಿಕಾರ, ಆಥರ್ಿಕ ನಿರ್ವಹಣೆ ಮತ್ತು ತರಬೇತಿ ನೀಡಬೇಕಾದುದು ಅತೀ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸಚಿವ ಆಚಾರ್ಯ ನಗರಸಭೆ ಪ್ರಗತಿ ಕಾರ್ಯಗಳ ಹೊತ್ತಗೆ `ಅಭಿವೃದ್ಧಿಯತ್ತ ದಾಪುಗಾಲು' ಅನಾವರಣಗೊಳಿಸಿದರು. ಧ್ವನಿತಟ್ಟೆ (ಸಿಡಿ)ಯನ್ನೂ ಹೊರತರಲಾಯಿತು.
ನಗರಸಭೆಯಿಂದ ಪೌರಕಾರ್ಮಿಕರಿಗೆ ನಿರ್ಮಿಸಲಾದ ವಸತಿಗೃಹಗಳ ಕೀಲಿಕೈಯನ್ನು ಸಂಸದ ಡಿ. ವಿ. ಸದಾನಂದ ಗೌಡ ಹಸ್ತಾಂತರಿಸಿದರು.
ರಾಜ್ಯ ಮೂರನೇ ಹಣಕಾಸು ಆಯೋಗ ಅನುಷ್ಠಾನ ಸಮಿತಿ ಅಧ್ಯಕ್ಷ ಎ. ಜಿ. ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ. ಸುಧಾಕರ ಶೆಟ್ಟಿ, ಮುಖ್ಯಮಂತ್ರಿಗಳ ಸಲಹೆಗಾರ ಡಾ. ಎ. ರವೀಂದ್ರ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಸ್. ಡಿ. ಮೀನಾ, ಪೌರಾಡಳಿತ ನಿರ್ದೇಶನಾಲಯ ಆಯುಕ್ತ ಅಂಜುಂ , ಸಹ ಆಯುಕ್ತ ಸುಪ್ರಸನ್ನ, ಜಿಲ್ಲಾಧಿಕಾರಿ ಹೇಮಲತಾ ಪೊನ್ನುರಾಜ್, ನಗರಸಭಾ ಉಪಾಧ್ಯಕ್ಷೆ ಇಂದಿರಾ ಶೇಖರ್, ನಿಯೋಜಿತ ನಗರಸಭಾಧ್ಯಕ್ಷ ಕಿರಣ್ಕುಮಾರ್, ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಪೌರಾಯುಕ್ತ ಗೋಕುಲದಾಸ ನಾಯಕ್ ವೇದಿಕೆಯಲ್ಲಿದ್ದರು.
ನಗರಸಭಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೌರಸಮಾವೇಶ ಸಮಿತಿ ಸಂಚಾಲಕ ಪಾಂಡುರಂಗ ಮಲ್ಪೆ ವಂದಿಸಿದರು. ಉದಯವಾಣಿ ಮಂಗಳೂರು ಬ್ಯೂರೊ ಮುಖ್ಯಸ್ಥ ಮನೋಹರ ಪ್ರಸಾದ್ ನಿರೂಪಿಸಿದರು.

ವರದಿ: ಕಿರಣ್ ಮಂಜನಬೈಲು

0 comments:

Post a Comment