ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಉಡುಪಿ : ಕೊರೆತ ತಡೆಗಟ್ಟುವ ಸಲುವಾಗಿ ಸಮುದ್ರ ದಂಡೆಗೆ ಸುರಿದ ಶಿಲೆ ಕಲ್ಲು ರಾಶಿ ಕಡಲ ಒಡಲೊಳಗೆ ಜಾರಿಕೊಳ್ಳುತ್ತಿದೆ. ಸಮುದ್ರ ರಾಜನೆಗೆ ಎಣೆಯುಂಟೇ? ರಾಷ್ಟ್ರೀಯ ಹೆದ್ದಾರಿ 17ರ ಮಗ್ಗಲಲ್ಲಿ ಒಪ್ಪ,ಓರಣವಿಲ್ಲದೆ ಸುರಿದ ಕಲ್ಲು ಸಮುದ್ರ ಪಾಲಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ17 ಅಪಾಯದ ಅಂಚಿಗೆ ತಲುಪಿದೆ. ಸೌಪರ್ಣಿಕಾ ಮತ್ತು ಸಮುದ್ರ ತೀರದ ನಡುವೆ ಹಾದು ಹೋಗುವ ಹೆದ್ದಾರಿಯ ಬುಡಕ್ಕೆ ಸಮುದ್ರದ ಅಲೆ ಎಳ್ಳುನೀರು ಬಿಡುತ್ತಿದೆ. ತ್ರಾಸಿಯಿಂದ ಮರವಂತೆವರೆಗಿನ ಸಮುದ್ರ ತೀರ ಕೊರೆತಕ್ಕೆ ಸಿಕ್ಕಿ ನಲುಗಿದೆ. ಶಾಶ್ವತ ಸಮುದ್ರ ಕೊರೆತ ಪರಿಹಾರ ಮಾತ್ರ ಪುಸ್ತಕದ ಬದನೆಕಾಯಿ. ಪ್ರತಿ ಮಳೆಗಾಲ ಬಂದಾಗಲೂ ಸಮುದ್ರ ಕೊರೆತ ಪರಿಹಾರದ ಅದೇ ರಾಗ, ಅದೇ ಹಾಡು. ಕೊರೆತ ಮಾತ್ರ ಅವ್ಯಾಹುತ.ತ್ರಾಸಿ ಪ್ರಕೃತಿ ಗಿಫ್ಟ್: ತ್ರಾಸಿ ಬೀಚ್ ವಿಶ್ವವಿಖ್ಯಾತ ಎಂಬ ಮನ್ನಣೆಗೆ ಪತ್ರವಾಗಿದೆ. ಒಂದೆಡೆ ರಕ್ಕಸಾಕಾರದ ಅಲೆಗಳ ಹೋರು. ಮತ್ತೊಂದೆಡೆ ಮಂದಗಾಮಿನಿಯಾಗಿ ಹರಿವ ಸೌಪರ್ಣಿಕಾ ನದಿ, ಕತ್ತೆತ್ತಿ ಬಾನಂಗಳಕ್ಕೆ ಕಣ್ಣು ಹಾಯಿಸಿದರೆ ಅಂಬರವನ್ನೆಲ್ಲಾ ಕೆಂಬಣ್ಣದ ಉಂಡೆ ಮಾಡಿ ಸಮುದ್ರಕ್ಕೆ ಜಾರಿಕೊಳ್ಳುವ ಸೂರ್ಯ ದೇವರ ಒಡ್ಡೋಲಗ. ಮತ್ತೊಂಡೆದೆ ಪಶ್ವಿಮ ಘಟ್ಟದ ಸಾಲು. ಇವೆಲ್ಲದರ ನಡೆವೆ ಸಾಗುವ ಹೆದ್ದಾರಿ. ಜಗ್ಗತಿನ ಅಂದ,ಚಂದವನ್ನೆಲ್ಲಾ ತಂದು ಸುರಿದು ಗುಡ್ಡೆ ಹಾಕಿದಂತೆ ಕಾಣುವ `ತ್ರಾಸಿ ಬೀಚ್' ಮಾನವರಿಗಾಗಿ ಪ್ರಾಕೃತಿ ಮಾತೆ ನೀಡಿದ `ಕೊಡುಗೆ'. ಎಲ್ಲಾ ಇದ್ದರೂ, ಹತ್ತರಲ್ಲಿ ಹನ್ನೊಂದಾಗಿ ಉಳಿದಿದೆ ತ್ರಾಸಿ ಬೀಚ್.

ತ್ರಾಸಿ ಬೀಚ್ ಕೊರೆತ ಇಂದು ನಿನ್ನೆಯ ಕತೆಯಲ್ಲ. ಪ್ರತಿ ಮಳೆಗಾಲದಲ್ಲೂ ಬೀಚ್ ಕೊರೆತದ ಅಪಾಯಕ್ಕೆ ಸಿಲುಕುತ್ತಲೇ ಇದೆ. ಕೊಡಲ ಕೊರೆತ ನಿರಂತರವಾಗಿ ನಡೆದುಕೊಂಡು ಬಂದ ಹಾಗೆ ಜನಪ್ರತಿನಿಧಿಗಳ ಆಶ್ವಾಸನೆಗಳು ಎಗ್ಗಿಲ್ಲದೆ ನಡೆದುಕೊಂಡು ಬರುತ್ತಿದೆ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಕಲ್ಲು ಗುಡ್ಡೆ ಹಾಕಿದ್ದು ಬಿಟ್ಟರೆ ಇದೂವರೆಗೆ ತ್ರಾಸಿ ಬೀಚ್ ಉದ್ದಾರವಾಗಿದ್ದು ಅಷ್ಟಕಷ್ಟೇ. ಅಚ್ಚರಿಯ ವಿಷಯವೆಂದರೆ ತ್ರಾಸಿ ಬೀಚ್ ಅಭಿವೃದ್ಧಿ ಹೆಸರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಉದ್ದಾರವಾಗಿದ್ದಾರೆ ಎನ್ನೋದು ಸ್ಥಳೀಯರ ಆರೋಪ. ಇಂದಿಗೂ ತ್ರಾಸಿ ಬೀಚ್ ಹಾಳುಕೊಂಪೆಯಾಗಿದೆ.

ಹೇಸಿಗೆ ಹುಟ್ಟಿಸುವ ಮಕ್ಕಳ ಪಾರ್ಕ್, ಹಳ್ಳಹಿಡಿದ `ಹೈಮಾಸ್ಕ್' ದೀಪ ಮತ್ತು ವಿಶ್ರಾತಿ `ಬೆಂಚ್'. ಪ್ರಾವಾಸಿ ಮಂದಿರವಿದ್ದರೂ ಉಪಯೋಗಕ್ಕಿಲ್ಲ. ಒಟ್ಟಾರೆ ತ್ರಾಸಿ ಬೀಚ್ ಇದ್ದರೂ ಒಂದೆ ಇಲ್ಲದಿದ್ದರೂ ಒಂದೆ. ಪ್ರವಾಸೋದಮಕ್ಕಂತೂ ತ್ರಾಸಿ ಮರೆತೇ ಹೋಗಿದೆ.

ಹಿಂದೆ ಹೀಗಿರಲಿಲ್ಲ : ತ್ರಾಸಿ ಬೀಚ್ ಹಿಂದೆ ಹೀಗಿರಲಿಲ್ಲ. ಸುಮಾರು ಎರಡು ಕೀ.ಮೀ. ಅಷ್ಟು ಸಮುದ್ರ ಹಿಂದಕ್ಕೆ ಇತ್ತು. ಸಮುದ್ರ ಮತ್ತು ಹೆದ್ದಾರಿ ಮಗ್ಗಲಲ್ಲಿ ಗಾಳಿ ತೋಪು ನಿರ್ಮಿಸಲಾಗಿತ್ತು. ಸಂಜೆ ಹೊತ್ತು ಸೂರ್ಯಾಸ್ತ ನೋಡಲು ಗಾಳಿ ಮರೆದ ತಂಪಿರುತ್ತಿತ್ತು. ಸ್ಥಳೀಯರು ಇಂದಿಗೂ ಗಾಳಿ ನೆರಳಲ್ಲಿ ಓಡಾಡಿದ `ಖುಷಿ' ಮರೆತಿಲ್ಲ. ಇದು 30 ವರ್ಷದ ಹಿಂದಿನ ಕತೆ. ಈಗ ತ್ರಾಸಿ ಚಿತ್ರಣವೇ ಬದಲಾಗಿದೆ. ಸಮುದ್ರ 2 ಕೀ.ಮೀ.ಅಷ್ಟು ಮುಂದಕ್ಕೆ ಬಂದಿದೆ. ಸಮುದ್ರ ತಟದಲ್ಲಿದ್ದ ಗಾಳಿ ಮರಗಳು ನೆಗೆದುಬಿದ್ದು ಅದೆಷ್ಟೇ ಕಾಲವಾಯ್ತು. ಸೂರ್ಯಾಸ್ತ ಬಕಪಕ್ಷಿಯ ಹಾಗೆ ನಿಂತು ನೋಡಬೇಕು. ಪ್ರವಾಸಿಗರಿಗಂತೂ ಇಲ್ಲಿ ಕಿಲುಬುಕಾಸಿನ ಅನುಕೂಲವಿಲ್ಲ. ಒಟ್ಟಿನಲ್ಲಿ ತ್ರಾಸಿ ಹೆಸರಿಗಷ್ಟೇ ವಿಶ್ವವಿಖ್ಯಾತ!

ಮನೋರಮ ಮಧ್ವರಾಜ್ ಅವರು ಲೋಕಸಭ ಸದಸ್ಯರಾಗಿದ್ದ ಕಾಲದಲ್ಲಿ ಮಲ್ಪೆ ಮತ್ತು ತ್ರಾಸಿ ಬೀಜ್ ಅಭಿವೃದ್ಧಿಗೆ 42 ಲಕ್ಷ ರೂ. ಅನುದಾನ ತಂದಿದ್ದರು. ಅದರಲ್ಲಿ ಮಲ್ಪೆ ಮತ್ತು ತ್ರಾಸಿ ಬೀಚ್ಗಳಲ್ಲಿ ಪ್ರವಾಸಿಗರಿಗೆ ಮೂಲ ಭೂತ ಸೌಲಭ್ಯ ಕಲ್ಲಿಸುವ ಜೊತೆಗೆ `ಹೈಮಾಸ್ಕ್' ದೀಪ ಅಳವಡಿಸಲು ಅನುದಾನ ಮೀಸಲಿಡಲಾಗಿತ್ತು. ಅನುದಾನ ಮಾತ್ರ ಖರ್ಚಾಯಿತು. ಹಿಂದೆ ಮುಂದೆ ಯೋಚಿಸದೆ ನಡೆಸಿದ ಕಾಮಗಾರಿಯಿಂದ ಹೈಮಾಸ್ಕ್ ದೀಪ ಸಮುದ್ರ ಪಾಲಾಯಿತು. ಒರಗು ಬೆಂಚ್ ಸಮುದ್ರ ಹಾರಿ ಆತ್ಮಹತ್ಯೆ ಮಾಡಿಕೊಂಡಿತು. ಮಕ್ಕಳ ಉದ್ಯಾನವನ ಮುಖ ಅಡಿಯಾಗಿ ಮಲಗಿದೆ. ಅಭಿವೃದ್ದಿ ಹೆಸರಲ್ಲಿ ಯಾರೋ ಅಭಿವೃದ್ಧಿಯಾದರು!

ಪರಿಹಾರ ಇಲ್ಲದಿದ್ದರೆ ಜಲಪ್ರಳಯ : ತ್ರಾಸಿ ಕಡಲ ಕಿನಾರೆ ಕೊರೆತಕ್ಕೆ ಶಾಶ್ವತ ಪರಿಹಾರ ನೀಡದಿದ್ದರೆ ವಿಶಾಲ ಭೂ ಪ್ರದೇಶ ಮತ್ತು ನೂರಾರು ಕುಟುಂಬಗಳು ನಿರ್ನಾಮವಾಗಲಿವೆ. ಕುರು, ಹಡವು, ಸಾಲ್ಬುಡ, ಪಡುಕೋಣೆ, ಆನಗೋಡು ಮುಂತಾದ ಊರುಗಳು ನಾಮಾವಶೇಷ ಹೊಂದಲಿದೆ. ಮರವಂತೆ ಮಹಾರಾಜ ಶ್ರೀ ವರಹಾ ಸ್ವಾಮಿ ಸಮುದ್ರ ಕೊರತಕ್ಕೆ ಕಾವಲಿದ್ದಾನೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಸ್ವಾಮಿ ಕಾವಲಿದ್ದರೂ, ಎರಡು ಕೀ.ಮೀ.ಮುಂದಕ್ಕೆ ಬಂದ ಸಮುದ್ರಕ್ಕೆ ಹೆದ್ದಾರಿ ಯಾವ ಮಹಾ! ಹಾಗಾನೇದರೂ ಸಮುದ್ರ ಹೆದ್ದಾರಿ ಹಾರಿ ಪಕ್ಕಕ್ಕೆ ನೆಗೆದರೆ ಜಲಪ್ರಳಯ ನಿಶ್ಚಿತ.

ಕಳೆದ ಕೆಲ ವರ್ಷದ ಹಿಂದೆ ಸಮುದ್ರ ರಾಷ್ಟ್ರೀಯ ಹೆದ್ದಾರಿ 17 ಅಂಚನ್ನು ಸವರಿ ಹಾಕಿತ್ತು. ಆ ಸಮಯದಲ್ಲಿ ಸ್ಥಳಕ್ಕೆ ಬಂದ ಕೇಂದ್ರ ಸಚಿವ ಮುನಿಯಪ್ಪ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ನೀಡುವ ಭತವಸೆ ನೀಡಿದ್ದರು. ಸಮುದ್ರ ಕೊರೆತ ತಡೆಗೆ ಒಂದಿಷ್ಟು ಕಲ್ಲು ಹಾಕದ್ದು ಬಿಟ್ಟರೆ ಮತ್ತೇನೂ ಆಗಿಲ್ಲ. ಸಮುದ್ರ ತೀರದಲ್ಲಿ ಏಕಪೋಕವಿಲ್ಲದೆ ಒಟ್ರಾಸಿ ಕಲ್ಲು ಹಾಕಿದ್ದರಿಂದ ಕಲ್ಲೆಲ್ಲಾ ಸಮುದ್ರ ಪಾಲಾಗುತ್ತಿದೆ. ಮತ್ತೆ ಅದೇ ಕೊರೆತ, ಅದೇ ಆಶ್ವಾಸನೆ. ಇನ್ನಾದರೂ ಎಚ್ಚತ್ತು ತ್ರಾಸಿ ಕಡಲ ಕಿನಾರೆ ಕೊರೆತಕ್ಕೆ ಮಂಗಳ ಹಾಡದಿದ್ದರೆ ಜನ ಶಾಪಹಾಕಿಯಾರು?

ಶ್ರೀಪತಿ ಹೆಗಡೆ ಹಕ್ಲಾಡಿ

1 comments:

suresha belagaje said...

ಲೇಖನ ಚೆನ್ನಾಗಿತ್ತು. ಅದು ಬೀತ್ತು ಅಲ್ಲ. ಬಿತ್ತು....

ಸುರೇಶ ಬೆಳಗಜೆ
ಪ್ರಜಾವಾಣಿ, ಗುಲ್ಬರ್ಗ

Post a Comment