ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು :ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಕುಂದುಕೊರತೆ ನಿವಾರಣಾ ಘಟಕವನ್ನು ಸ್ಥಾಪಿಸುವುದಾಗಿ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ್ ಮೂರ್ತಿ ಹೇಳಿದ್ದಾರೆ.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಗುರುವಾರ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈಗ ಇರುವ ಘಟಕವನ್ನು ಪುನರ್ ರಚಿಸಿ ಅದಕ್ಕೆ ಖಚಿತ ಅಧಿಕಾರಗಳನ್ನು ನೀಡ ಲಾಗುವುದು.ಪ್ರಸ್ತಾವಿತ ಘಟಕವನ್ನು ಮುಂದಿನ ಮೂರು ತಿಂಗಳೊಳಗೆ ಸ್ಥಾಪಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳು ಘಟಕದಲ್ಲಿ ವಿಶ್ವಾಸ ವ್ಯಕ್ತಪಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸ ಲಾಗುವುದು ಎಂದು ಕುಲಪತಿಗಳು ತಿಳಿಸಿದರು.ತಾನು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉಪನ್ಯಾಸಕರಿಂದ ಲೈಂಗಿಕ ಕಿರುಕುಳ ಕುರಿತಂತೆ ಒಂದು ಲಿಖಿತ ದೂರು ಬಂದಿರುತ್ತದೆ. ಅದರ ಕುರಿತು ತನಿಖೆ ನಡೆಯುತ್ತಿದೆ. ಪ್ರಾಧ್ಯಾಪಕರನ್ನು ಈಗಾಗಲೇ ಅಮಾನತು ಗೊಳಿಸಲಾಗಿರುತ್ತದೆ ಎಂದು ಪ್ರೊ. ಮೂರ್ತಿ ನುಡಿದರು.


ಪರೀಕ್ಷಾ ಪ್ರಕ್ರಿಯೆಗಳ ಗಣಕೀಕರಣ: ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಶೀಘ್ರ ಮತ್ತು ದೋಷ ರಹಿತವಾಗಿ ಪ್ರಕಟಿಸಲು ಗಣಕೀಕರಣ ಮಾಡಲಾಗಿದೆ. ಇದರಿಂದ ವೃಥಾ ವಿಳಂಬವನ್ನು ತಪ್ಪಿಸಿ ಸುಮಾರು ಎರಡು ತಿಂಗಳು ಮುಂಚಿತವಾಗಿ ಫಲಿತಾಂಶ ಗಳನ್ನು ಪ್ರಕಟಿಸ ಲಾಗಿರುತ್ತದೆ ಮತ್ತು ಸ್ನಾತಕೋತ್ತರ ಪದವೀಧರರಿಗೆ ಟ್ಯಾಂಪರ್ ಪ್ರೂಫ್ ಪದವಿ ಪ್ರಮಾಣ ಪತ್ರಗಳನ್ನು ನೀಡಲು ಆರಂಭಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಸ್ನಾತಕ ಪದವೀಧರರಿಗೂ ವಿಸ್ತರಿಸ ಲಾಗುವುದು ಎಂದು ಹೇಳಿದರು.
ಅವ್ಯವಹಾರ ಕುರಿತ ತನಿಖೆ: ಅ.2008ರ ಬಿಬಿಎಂ ಪರೀಕ್ಷೆಯ ಟ್ಯಾಬುಲೇಶನ್ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣಾ ಅಧಿಕಾರಿಗಳನ್ನು ನೇಮಕ ಮಾಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಅವ್ಯವಹಾರ ನಡೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಗೊಳಿಸಿ ಹಾಗೂ ಅವರಿಗೆ ಈಗಾಗಲೇ ನೀಡಲ್ಪಟ್ಟಿರುವ ಅಂಕಪಟ್ಟಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುಲಪತಿಗಳು ವಿವರಿಸಿದರು.
2008ರ ಅಕ್ಟೋಬರ್ - ನವೆಂಬರ್ ನಲ್ಲಿ ಎಲ್ಎಲ್ಬಿ ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಆರೋಪಿ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದಾವೆ ಕೂಡಾ ಹೂಡಲಾಗಿದೆ ಎಂದು ಪ್ರೊ.ಟಿ.ಸಿ. ಶಿವಶಂಕರಮೂರ್ತಿ ತಿಳಿಸಿದರು.ವಿಶ್ವ ವಿದ್ಯಾ ಲಯದ ಗುಣಮಟ್ಟ ವೃದ್ಧಿಸುವ ದಿಸೆಯಲ್ಲಿ ಮತ್ತು ನಿರ್ಧಾರ ಗಳನ್ನು ಎಲ್ಲಾ ಇಲಾಖೆಗಳ ಮುಖ್ಯಸ್ಥರಲ್ಲಿ ಹಂಚಿ ಕೊಳ್ಳುವ ಸಲುವಾಗಿ ಮೈಸೂರು ಮಾದರಿ ಯಂತೆ ಸ್ನಾತಕೋತ್ತರ ಮಂಡಳಿ ಯನ್ನು ರಚಿಸ ಲಾಗಿರುತ್ತದೆ. ಎಲ್ಲಾ ವಿಭಾಗಗಳ ಹಿರಿಯ ಪ್ರಾಧ್ಯಾಪಕರು ಅಧ್ಯಯನ ಮತ್ತು ಪರೀಕ್ಷಾ ಮಂಡಳಿಗಳ ಅಧ್ಯಕ್ಷರು ಹಾಗೂ ವಿವಿಯ ಶಾಸನ ಬದ್ಧ ಅಧಿಕಾರಿಗಳು ಮಂಡಳಿ ಯಲ್ಲಿರುತ್ತಾರೆ ಎಂದು ಅವರು ತಿಳಿಸಿದರು.
ಅನುದಾನ ಅಗತ್ಯ: ರಾಜ್ಯದ ಇತರ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಮಂಗಳೂರು ವಿಶ್ವವಿದ್ಯಾನಿಲಯದ ಬೆಳವಣಿಗೆ ಏನೇನೂ ಸಾಲದು. ಹಿಂದುಳಿಯಲು ಅನುದಾನದ ಕೊರತೆಯೇ ಕಾರಣ. 1980 ರಲ್ಲಿ ಸ್ಥಾಪನೆಗೊಂಡ ಗುಲ್ಬರ್ಗಾ ಮತ್ತು ಮಂಗಳೂರು ವಿವಿಗಳು ಬೆಳ್ಳಿಹಬ್ಬ ದಾಟಿ ಮುನ್ನಡೆದಿವೆ. ಈ ಮಧ್ಯೆ ಗುಲ್ಬರ್ಗ ವಿವಿಗೆ ವಿಶೇಷ ಅನುದಾನ ಲಭಿಸಿದ್ದು, ಅದರಿಂದ ಒಂದಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಸರಕಾರ, ಜನಪ್ರತಿನಿಧಿಗಳು ಈ ದಿಸೆಯಲ್ಲಿ ಸಹಕರಿಸ ಬೇಕಾಗಿದೆ ಎಂದು ಮನವಿ ಮಾಡಿದ ಅವರು, ಮುಖ್ಯಮಂತ್ರಿಗಳು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುವುದಾಗಿ ತಿಳಿಸಿರುವರೆಂದರು.
ನ್ಯಾಕ್ ಮಾನ್ಯತೆ: ವಿಶ್ವವಿದ್ಯಾನಿಲಯವನ್ನು ನ್ಯಾಕ್ ಮರು ಮೌಲ್ಯಮಾಪನಕ್ಕೆ ಒಳಪಡಿಸುವ ಪ್ರಕ್ರಿಯೆಯನ್ನು ಶೀಘ್ರವೇ ಕೈಗೆತ್ತಿ ಕೊಳ್ಳಲಾಗುವುದು. ಅದಕ್ಕಾಗಿ ವಿವಿ ಮತ್ತು ಘಟಕ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ- ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡ ಬೇಕಾಗಿದೆ. ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾನಿಲಯವನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ಪರಿವರ್ತಿಸ ಬೇಕಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನುಡಿದ ಕುಲಪತಿಗಳು ಮಂಗಳೂರು ಮತ್ತು ಮಡಿಕೇರಿಯ ಘಟಕ ಕಾಲೇಜುಗಳನ್ನು ತಲಾ ರೂ. 2 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಕೊಡಗಿನ ಚಿಕ್ಕಳುವಾರು ಎಂಬಲ್ಲಿ ವಿವಿಯ ಸ್ನಾತಕೋತ್ತರ ಕೇಂದ್ರವನ್ನು ತೆರೆಯುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ. ಬಾಳೇಪುಣಿ ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಪಿ.ಬಿ.ಹರಿಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.

0 comments:

Post a Comment