ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:27 PM

ಪ್ರೆಟಿ ಗರ್ಲ್

Posted by ekanasu

ಸಿನೆಮಾ
ನನಗೆ ಕೆಲಸದ ಅಗತ್ಯ ಇತ್ತು. ಮನೆಯಲ್ಲಿ ಹೆತ್ತವರಿಗೆ ವಯಸ್ಸಾಗಿದೆ. ದುಡಿಯುವವರು ಯಾರೂ ಇಲ್ಲ. ನಾನು ದುಡಿದರೆ ಅವರು ಎರಡು ಹೊತ್ತಿನ ಊಟ ಮಾಡ್ತಾರೆ. ಅದಕ್ಕಾಗಿ ಕೆಲಸವೊಂದನ್ನು ಹುಡುಕ್ತಾ ಇದ್ದೆ. ಆ ಹೆಂಗಸು ಕೆಲಸ ಕೊಡ್ತೇನೆ ಬರ್ತಿಯಾಂತ ಕರೆದಾಗ ಯಾವ ಕೆಲಸ? ಅಂತ ಪ್ರಶ್ನಿಸದೇ ನಾನು ಆಕೆಯೊಡನೆ ಹೊರಟೆ. ಆಕೆ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಳು. ಮೊದಲ ದಿನ ರಾತ್ರಿಯಾದೊಡನೆ ಮನೆಗೆ ಓಡಿಬಿಡಬೇಕು ಅನಿಸಿತು. ಆದರೆ ಕೈಯ್ಯಲ್ಲಿ ಕಾಸಿರಲಿಲ್ಲ. ಅನಿವಾರ್ಯವಾಗಿ ಈ ಕೆಲಸವನ್ನು ಒಪ್ಪಿಕೊಂಡೆ. ಈಗ ಕೀಳರಿಮೆ ಕಾಡ್ತಾ ಇದೆ. ಮದುವೆ ಎಂಬ ಹೆಸರು ಕೇಳಿದ್ರೆ ಭಯವಾಗುತ್ತೆ. ಇಪ್ಪತ್ತೊಂದು ವರುಷದ ಯುವತಿ ಕ್ಸಿಯಾಕೊ ಕ್ಯಾಮರಾದ ಕಡೆ ಮುಖ ಮಾಡಿ ಮಾತನಾಡುತ್ತಿದ್ದರೆ ವೀಕ್ಷಕನ ಕಣ್ಣು ತುಂಬಿ ಬರುತ್ತದೆ.2009ರಲ್ಲಿ ಕ್ಯಾಮಿಲಾ ಫ್ರೆಂಚ್ ಹಾಗೂ ಜ್ಯೂಡಿ ಬ್ರೆಟ್ಶೆನಿಟ್ ಜತೆಯಾಗಿ ನಿರ್ದೇಶಿಸಿದ ಚೈನೀಸ್ ಸಾಕ್ಷ್ಯಚಿತ್ರ "ಪ್ರೆಟಿ ಗರ್ಲ್ ". ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ತಾಂಡವವಾಡುತ್ತಿರುವ ವೇಶ್ಯಾವಾಟಿಕೆಯ ಸಮಸ್ಯೆ ಈ ಚಿತ್ರದ ಕಥಾವಸ್ತು. ವೇಶ್ಯಾವಾಟಿಕೆಯನ್ನು ಸಾಮಾಜಿಕ ಸಮಸ್ಯೆಯನ್ನಾಗಿ ಬಿಂಬಿಸುವ ಸಾಕ್ಷ್ಯಚಿತ್ರ ಇದರ ಅಪರಿಚಿತ ಮುಖವೊಂದನ್ನು ವೀಕ್ಷಕನಿಗೆ ಪರಿಚಯಿಸುತ್ತದೆ.ಸ್ವಇಚ್ಚೆಯಿಂದ ಯಾರೂ ಇಂತಹ ವೃತ್ತಿಯನ್ನು ಆರಿಸುವುದಿಲ್ಲ. ಹಸಿವಿನ ಅನಿವಾರ್ಯತೆಯೇ ಈ ವೃತ್ತಿಯ ಅಸ್ತಿತ್ವಕ್ಕೆ ಕಾರಣ ಎಂಬ ವಾದ ಈ ಸಾಕ್ಷ್ಯಚಿತ್ರದ್ದು. 2008ರಲ್ಲಿ ಚೀನಾದ ಹೊಸ ವರುಷದ ಪ್ರಾರಂಭದಿಂದ ಹಿಡಿದು 2009ರ ಒಲಿಂಪಿಕ್ಸ್ ಕ್ರೀಡಾಕೂಟದ ಅಂತ್ಯದ ವರೆಗೆ ಬೀಜಿಂಗ್ನಲ್ಲಿ ನಡೆಯುವ ಈ ದಂಧೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಎಲ್ಲೂ ಅಶ್ಲೀಲ ದೃಶ್ಯಗಳನ್ನು ಒಳಗೊಂಡಿಲ್ಲ. ತೆರೆಮರೆಯಲ್ಲಿ ನಡೆಯುವ ವಿಚಾರಗಳನ್ನು ಸಾಂಕೇತಿಕವಾಗಿ ಸೂಚಿಸುವ ಚಿತ್ರ ವೇಶ್ಯೆಯರಿಗೂ ನಮ್ಮನಿಮ್ಮಂತೆ ಬದುಕುವ ಹಕ್ಕಿದೆ ಎಂಬುವುದನ್ನು ತಿಳಿಸಲು ಮಾತ್ರಾ ಮರೆತಿಲ್ಲ.
ಚೀನಾದಲ್ಲಿ ಒಲಿಂಪಿಕ್ಸ್ ಸಂದರ್ಭ ಅದರ ವೀಕ್ಷಣೆಗೆಂದು ಪ್ರಪಂಚದ ನಾನಾ ಕಡೆಗಳಿಂದ ಕ್ರೀಡಾ ಪ್ರೇಮಿಗಳು ಬೀಜಿಂಗ್ಗೆ ಬಂದಿಳಿದರು. ಅವರ ಐಷಾರಾಮಿಗಾಗಿ ಬೀಜಿಂಗ್ನುದ್ದಕ್ಕೂ ಹಲವಾರು ಮಸಾಜ್ ಸೆಂಟರ್ಗಳನ್ನು ತೆರೆಯಲಾಯಿತು. ಇವು ದಿನವಿಡೀ ಮಸಾಜ್ ಸೆಂಟರಗಳಾಗಿ ಕಾರ್ಯವಿರ್ವಹಿಸುತ್ತಿದ್ದರೆ ರಾತ್ರಿಯ ಪಾಳಿಯಲ್ಲಿ ವೇಶ್ಯಾಗೃಹಗಳಾಗುತ್ತಿದ್ದವು. ಚಿತ್ರದುದ್ದಕ್ಕೂ ಅಂತಹ ವೇಶ್ಯಾಗೃಹವೊಂದರಲ್ಲಿ ಕೆಲಸ ಮಾಡುತ್ತಿರುವ ವೇಶ್ಯೆ ಯರೊಂದಿಗೆ ನಿರ್ದೇಶಿಸಿದ ಕ್ಯಾಮಿಲಾ ನಡೆಸಿದ ಮಾತುಕತೆ ಆಸಕ್ತಿದಾಯಕವಾಗಿ ಮೂಡಿಬಂದಿದೆ.

ಎಫೆಂಗ್ ಚೀನಾದ ಗ್ರಾಮೀಣ ಪ್ರದೇಶದಿಂದ ನೌಕರಿಯ ತಲಾಶೆಯಲ್ಲಿ ಬೀಜಿಂಗ್ಗೆ ಬಂದ ಯುವತಿ. ಹಳ್ಳಿಯಲ್ಲಿ ಆಕೆಗೊಂದು ಪುಟ್ಟ ಮನೆಯಿದೆ. ವೃದ್ಧ ತಂದೆ-ತಾಯಂದಿರು ಹಾಗೂ ಇಡೀ ಕುಟುಂಬಕ್ಕೆ ಆಕೆ ತಿಂಗಳಿಗೊಮ್ಮೆ ಕಳುಹಿಸಿ ಕೊಡುವ ಸಂಬಳವೇ ಆಧಾರ. ಆಕೆ ಪೇಟೆಯಲ್ಲಿ ಮಾಡುವ ಕೆಲಸವೇನು? ಎಂಬುವುದು ಅವರಿಗೆ ತಿಳಿದಿಲ್ಲ. ಎಫೆಂಗ್ಗೆ ತಾನು ಮಾಡುವ ವೃತ್ತಿಯಲ್ಲಿ ತೃಪ್ತಿಯಿಲ್ಲ. ಸಮಾಜದ ದೃಷ್ಟಿಯಲ್ಲಿ ಕೆಟ್ಟದಾಗಿರುವ ಆ ವೃತ್ತಿ ಆಕೆಗೆ ಅನಿವಾರ್ಯ. ಬಹಳಷ್ಟು ಶ್ರಮಪಟ್ಟ ಬಳಿಕ ಸಿಕ್ಕ ಕೆಲಸ ಬಿಟ್ಟರೆ ಸಂಸಾರ ಬೀದಿಗೆ ಬರುವುದೆಂಬ ಭೀತಿ ಆಕೆಯನ್ನು ಇಲ್ಲೇ ಇರುವಂತೆ ಮಾಡಿದೆ.

ಆ ವೇಶ್ಯಾವಾಟಿಕೆಯನ್ನು ನಡೆಸುವ ಮೇಲ್ವಿಚಾರಕಿ ಬಳಿ ನಾಲ್ಕು ಸೆಲೂನ್ಗಳಿವೆ. ಆಕೆ ಆರು ಕಾರುಗಳು ಹಾಗೂ ಮೂರು ಮನೆಗಳ ಒಡತಿ. ಆಕೆ ಸ್ವತಃ ಈ ವೃತ್ತಿಯಲ್ಲಿ ಭಾಗಿಯಾಗಿಲ್ಲ. ಇತರರಿಂದ ಈ ಕೆಲಸ ಮಾಡಿಸುವಲ್ಲಿ ನಿಪುಣೆ. ನನ್ನ ಮಗಳು ಚೆನ್ನಾಗಿರಬೇಕು. ಆಕೆಗಾಗಿ ನಾನೊಂದು ಪುಟ್ಟ ಸುಂದರ ಮನೆಯೊಂದನ್ನು ಖರೀದಿಸಬೇಕು. ಅದಕ್ಕಾಗಿ ಹಗಲು ರಾತ್ರಿ ಈ ಕೆಲಸ ಮಾಡುತ್ತಿದ್ದೇನೆ. ಆದರೂ ಬಂದುದರಲ್ಲಿ ಅರ್ಧವನ್ನು ಮೇಲ್ವಿಚಾರಕಿ ಕಿತ್ತುಕೊಳ್ಳುತ್ತಾಳೆ. ಉಳಿದ ದುಡ್ಡು ಮನೆ ಖರೀದಿಸಲು ಎಲ್ಲಿ ಸಾಕು? ಎಂದು ಪ್ರಶ್ನಿಸುವ ತಾಯಿಯ ಮಾತಿನಲ್ಲಿ ಇಣುಕುವ ನಿರಾಸೆ ವಾಸ್ತವದ ಕಠಿಣತೆಯನ್ನು ವೀಕ್ಷಕರಿಗೆ ಪರಿಚಯಿಸುತ್ತದೆ.

ವೇಶ್ಯೆಯರ ಸಹಜವಾದ ದೈನಂದಿನ ಜೀವನವನ್ನು ಬಿಂಬಿಸುವ ಪ್ರೆಟಿ ಗರ್ಲ್ ಅವರ ಮೇಲೆ ಅನುಕಂಪವನ್ನು ಸೂಸುತ್ತದೆ. ಅವರೂ ನಮ್ಮಂತೇ...ಎಂಬ ವಿಚಾರವನ್ನು ಪದೇ ಪದೇ ನೋಡುಗರಿಗೆ ನೆನಪಿಸುತ್ತಿರುತ್ತದೆ. ತಮ್ಮ ಸೆಂಟರ್ಗಳ ಹೊರಗೆ ನಿಂತು ಪುರುಷರನ್ನು ಆಕಷಿಸಲು ಅವರು ಪಡುವ ಪಾಡು ಅಸಹ್ಯವೆನಿಸಿದರೂ ಮನಕರಗುವಂತಿದೆ. ದಿನದ ಕೊನೆಯಲ್ಲಿ ಗಳಿಸಿದ ಹಣವನ್ನು ಲೆಕ್ಕಹಾಕುವಾಗ ಅವರಲ್ಲಿ ಕಾಣುವ ನಿರಾಸೆ, ಕಸ್ಟಮರ್ಗಳಿಗಾಗಿ ಅವರಾಡುವ ಒಳಜಗಳಗಳು ವೀಕ್ಷಕರನ್ನು ಕ್ಷಣಕಾಲ ನಿರ್ಲಿಪ್ತರನ್ನಾಗಿಸುತ್ತದೆ.
ಒಲಿಂಪಿಕ್ ಮುಗಿಯುತ್ತಿದ್ದಂತೆಯೇ ಚೀನಾ ಸರಕಾರ ಎಲ್ಲಾ ಮಸಾಜ್ ಸೆಂಟರ್ಗಳನ್ನು ಮುಚ್ಚುತ್ತದೆ. ವೇಶ್ಯಾವಾಟಿಕೆಗೆ ತೆರೆ ಬೀಳುತ್ತದೆ. ಅವರು ಮತ್ತೆ ನಿರುದ್ಯೋಗಿಗಳಾಗುತ್ತಾರೆ. ಕೀಳರಿಮೆಯಿಂದ ಮುಕ್ತಿ ದೊರಕಿದರೂ ಹಸಿವಿನ ಭೀತಿ ಅವರನ್ನು ಕಾಡತೊಡಗುತ್ತದೆ. ಅವರ ಮುಂದಿನ ಜೀವನ ನೋಡುಗನಿಗೆ ಪ್ರಶ್ನೆಯಾಗಿಯೇ ಉಳಿಯುತ್ತದೆ....ಹೀಗೆ ಸಾಕ್ಷ್ಯಚಿತ್ರ ಕೊನೆಗೊಳ್ಳುತ್ತದೆ.

ತಾಂತ್ರಿಕವಾಗಿ ಸಾಮಾನ್ಯವಾಗಿದ್ದರೂ ಸಾಕ್ಷ್ಯಚಿತ್ರದ ಕಥಾವಸ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಚಿತ್ರದುದ್ದಕ್ಕೂ ವೀಕ್ಷಕ ಚಿತ್ರವನ್ನು ಅನುಭವಿಸುತ್ತಾ ಅದರ ಆಳಕ್ಕಿಳಿಯುತ್ತಾನೆ. ಚಿತ್ರ ಮುಗಿದ ಬಳಿಕವೂ ಆತ ವಿಷಯದ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆ. ವಾಸ್ತವತೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ. ಸಮಾಜದ ಗಂಭೀರವಾದ ಸಮಸ್ಯೆಯೊಂದನ್ನು ಅತೀ ಸೂಕ್ಷ್ಮವಾಗಿ ಬಿಂಬಿಸಿದ ನಿರ್ದೇಶಕರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಇಂತಹ ಸಾಕ್ಷ್ಯಚಿತ್ರಗಳು ಇನ್ನಷ್ಟು ಮೂಡಿಬರಲಿ.
ಅಕ್ಷತಾ ಭಟ್ ಸಿ.ಎಚ್.

1 comments:

Anonymous said...

pretty girl's ugly life.....feel pity.... narration is nice.......

Post a Comment