ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:52 PM

ಅಮ್ಮನ ಹಾಲೇ ಅಮೃತ

Posted by ekanasu

ಆರೋಗ್ಯ

ಹಾಲು ಹಣ್ಣಿಗಿಂತ ಜೇನು ತುಪ್ಪಕ್ಕಿಂತ
ವಾಲಾಡಿ ಬೆಳೆಯ ರಸಬಾಳೆ ಹಣ್ಣಿಗಿಂತ
ತಾಯವ್ವ, ನಿನ್ನಾಲು ಕಡುರುಚಿ
-ಜಾನಪದ ತ್ರಿಪದಿ

ಮಗುವಿಗೆ ಪ್ರಕೃತಿಯ ಕೊಡುಗೆ ಮೊಲೆಹಾಲು. ನವಜಾತ ಜೀವಕ್ಕೆ ಅಮ್ಮನ ಹಾಲೇ ಅಮೃತ. ಮೊಲೆ ಹಾಲು ಮಗುವಿಗೆಂದೇ ತಯಾರಾದ ಪ್ರಕೃತಿಯ ಕೊಡುಗೆ. ನಿಸರ್ಗ ಸೃಷ್ಠಿಯೇ ಶ್ರೇಷ್ಠ. ತಾಯಿ ಹಾಲಿಗೆ ಸರಿಸಮಾನವಾದ ಆಹಾರ ಜಗತ್ತಿನಲ್ಲಿಲ್ಲ . ಹಿಂದೆ, ಇಂದು ಮತ್ತು ಮುಂದೆಯೂ ದೊರೆವ ಮಗುವಿನ ಆಹಾರದಲ್ಲಿ ತಾಯಿಯ ಹಾಲಿಗೆ ಪ್ರಥಮ ಮತ್ತು ಉನ್ನತ ಸ್ಥಾನ.ಜೀವ ಅಂಕುರಿಸುವುದು ಪ್ರಕೃತಿಯ ಒಂದು ಅದ್ಭುತ ವಾದರೆ ಅದು ಜೀವಕಳೆ ತುಂಬಿಕೊಂಡು ಅರಳುವ ಬಗೆ ವೈಚಿತ್ರ್ಯದ ಮತ್ತೊಂದು ಮಜಲು. ಕೇವಲ ಏಳು ಪೌಂಡ್ ತೂಕದ ಎಳಸು ಅಂಗಾಂಗಳ ಹಸುಳೆಯೊಂದು ಧರೆಗಿಳಿದು ಬಂದ ಘಳಿಗೆಯಿಂದ ಅಮ್ಮನ ಅಮೃತ ಕಳಶಗಳಿಗೆ ಅಂಟಿಕೊಳ್ಳುವ ಪರಿಯಲ್ಲಿಯೇ ಅದರ ಪಾಲಿನ ಬದುಕು ಬಿಚ್ಚಿಕೊಳ್ಳತೊಡಗುತ್ತದೆ. ಗೋಲಿ ಕಂಗಳಿಂದ ಪ್ರಪಂಚವನ್ನು ನಿರುಕಿಸಲಾರಂಭಿಸುವ ಖಾಲಿ ಹೊಟ್ಟೆಯ ನವಜಾತ ಶಿಶುವಿಗೆ ಅಮ್ಮನ ಮೊಲೆಹಾಲೇ ಜಿವದ್ರವ: ಅಲ್ಲಿಂದಲೇ ಅದು ತನ್ನ ಹಾಲುಗೆನ್ನೆ ತುಂಬಿಕೊಂಡು ನಳನಳಿಸತೊಡಗುವುದು. ಆದರೆ ಈ ಹಾಲಿನ ಬಗ್ಗೆಯೇ ಎಷ್ಟೊಂದು ಅಪಕಲ್ಪನೆಗಳು! ಹತ್ತಾರು ಅಸತ್ಯಗಳ ಎಳೆಗಳಿಂದ ನಮ್ಮ ನಿಲುವುಗಳನ್ನು ಬಂಧಿಸಿಕೊಂಡು ತೊಳಲಾಡುವ ಬದಲು ವೈದ್ಯವಿಜ್ಞಾನದ ಮೊನಚು ಕತ್ತಿಯಿಂದ ಅಂಥವುಗಳನ್ನೆಲ್ಲಾ ಕಡಿದುಹಾಕುವುದು ಬುದ್ಧಿವಂತಿಕೆಯ ಲಕ್ಷಣ.

ತಾಯಿ ಹಾಲಿನ ಮಹತ್ವ

ಎಳೆಯ ಮಕ್ಕಳಿಗೆ ಯೋಗ್ಯ ಆಹಾರ, ಪ್ರೀತಿ, ವಾತ್ಸಾಲ್ಯ, ಪ್ರೋತ್ಸಾಹ ಮತ್ತು ಸೋಂಕುಗಳ ವಿರುದ್ದ ರಕ್ಷಣೆ ಬೇಕು. ಎದೆಹಾಲು ಕೊಡುಗೆ ಎಲ್ಲಾ ಅಗತ್ಯಗಳನ್ನು ಪೂರೈಸಿ ಅವರ ಜೀವಕ್ಕೆ ಉತ್ತಮ ಬುನಾದಿಯನ್ನು ಹಾಕುತ್ತದೆ.ಮೊಲೆಹಾಲು ಸಂಪೂರ್ಣ ಆಹಾರ, ದೈಹಿಕ ಮತ್ತು ಮೆದುಳಿನ ಬೆಳವಣಿಗೆಗೆ ಸಹಾಯಕಾರಿ. ನಾಲ್ಕು ತಿಂಗಳವರೆಗೆ ಮಗುವಿಗೆ ಅಗತ್ಯವಿರುವ ಸಕಲ ಪೋಷಕಾಂಶಗಳನ್ನು ತಾಯಿ ಹಾಲು ಪೂರೈಸುತ್ತದೆ. ನಂತರವೂ ಇತರ ಆಹಾರದೊಂದಿಗೆ ಹಾಲು ಪೂರಕವಾಗಿರುತ್ತದೆ.

ಮಗುವಿಗೆ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಸೂಕ್ತವಾದ ತಾಯಿಹಾಲು, ಅಜೀರ್ಣ, ಮಲಬದ್ಧತೆಯಂತಹ ತೊಂದರೆಗಳನ್ನು ಅಹ್ವಾನಿಸುವುದಿಲ್ಲ. ಯಾವ ಡಬ್ಬಿಹಾಲು ಸಹ ಕೊಡಮಾಡದ ರೋಗನಿರೋಧಕ ಶಕ್ತಿಯನ್ನು ತಾಯಿಯ ಎದೆಹಾಲು ಒದಗಿಸಬಲ್ಲದು. ಎಲ್ಲಾ ಮಕ್ಕಳಿಗೂ ಒಗ್ಗುವ ಈ ಜೀವದ್ರವ ಅಲರ್ಜಿಯಾಗುವ ಸಂಭವ ಅತಿ ಕಡಿಮೆ. ತಾಯಿಯ ಹಾಲಿನಲ್ಲಿ ಮಗುವಿಗೆ ಬೇಕಾದಷ್ಟು ಲವಣ ಮತ್ತು ನೀರು ಇರುವುದರಿಂದ ಇವುಗಳ ಕೊರತೆ ಅಥವಾ ಹೆಚ್ಚಳದ ಸಾದ್ಯತೆ ಇರುವುದಿಲ್ಲ.

ಮಕ್ಕಳ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ತಾಯಿ ಹಾಲಿನಿಂದ ದೊರಕುತ್ತದೆ. ದಂತಕ್ಷಯವನ್ನು ತಡೆಗಟ್ಟುವ ಪ್ಲೋರಿನ್ ಸಹ ಇದರಲ್ಲಿ ಸೇರಿರುತ್ತದೆ. ಮೊಲೆಹಾಲು ಕುಡಿದು ಬೆಳೆದ ಮಗುವಿಗೆ ಬೆರಳು ಚೀಪುವ ಅಭ್ಯಾಸ ಕಡಿಮೆ ಹಾಗೂ ಮಗುವಿನ ಬೆಳವಣಿಗೆಯ ಹಂತಗಳು ಕ್ರಮಬದ್ಧವಾಗಿರುತ್ತದೆ.ಮಗು ಇಷ್ಟಪಡುವ ರುಚಿ, ವಾಸನೆ, ಬಿಸಿ ಇರುವ ಹಾಲು ಸದಾ ತಾಜಾ ಇರುತ್ತದೆ. ರೋಗಾಣುಗಳಿರುವ ಸಾಧ್ಯತೆ ಇಲ್ಲ. ಇದನ್ನು ಸೇವಿಸಿದ ಮಗು ನಡಿಗೆಯನ್ನು ಬೇಗನೆ ಕಲಿಯುತ್ತದೆ. ಮಗು ತಾಯಿಯ ಹಾಲನ್ನು ಚೀಪಿ ಚೀಪಿ ಕುಡಿಯುವ ಕ್ರಿಯೆಯಿಂದಾಗಿ ಮುಖದ ಮಾಂಸಖಂಡಗಳಿಗೆ ಒಳ್ಳೆಯ ವ್ಯಾಯಾಮ ಸಿಗುವುದರಿಂದ ಮಗುವಿನ ಮುಖ ಸುಂದರವಾಗಿ ರೂಪುಗೊಳ್ಳಲು ಸಹಯಕವಾಗುತ್ತದೆ. ಇಂಥ ಮಗುವಿನ ಧ್ವನಿ ಮತ್ತು ಭಾಷೆ ಕೂಡ ಉತ್ತಮವಾಗಿರುತ್ತದೆ.

ಹುಟ್ಟಿದ ಕ್ಷಣದಿಂದಲೇ ಹಾಲು ಬೇಕೆ?
ತಾಯಿಯ ಪ್ರಥಮ ಹಾಲು "ಕೊಲೆಸ್ಟ್ರಂ" ಎಂಬುದು ರೋಗ ನಿರೋಧಕ ಅಂಶ ಹೊಂದಿದ್ದು ಪ್ರಥಮ ಲಸಿಕೆ ಅಥವಾ ಚುಚ್ಚುಮದ್ದು ಎನ್ನಲಾಗುತ್ತದೆ. ನವಜಾತ ಶಿಶು ಮೊದಲ ಕೆಲವು ದಿನ ಮೊಲೆಯನ್ನು ಚೀಪಲಾರದು ಮತ್ತು ಅದಕ್ಕೆ ಆಹಾರದ ಅಗತ್ಯವೂ ಇರುವುದಿಲ್ಲ. ಎಂದು ಬಹಳಷ್ಟು ಜನ ಭಾವಿಸುತ್ತಾರೆ. ಜನನದ ನಂತರ ಒಂದೆರಡು ದಿನ ಕೆಲವರು ಮಗುವಿಗೆ ಏನನ್ನೂ ಕೊಡುವುದಿಲ್ಲ. ಮತ್ತೆ ಕೆಲವರು ಗ್ಲುಕೋಸ್ ನೀರು, ಸಕ್ಕರೆ ನೀರು ಕುಡಿಸುತ್ತಾರೆ. ಹುಟ್ಟಿದ ಮಗುವಿಗೆ ಚೆನ್ನಾಗಿ ಭೇಧಿ ಆಗಲೆಂದು ಹರಳೆಣ್ಣೆ ಕೊಡುವುದೂ ಉಂಟು, ಜೇನುತುಪ್ಪ ನೆಕ್ಕಿಸುವುದೂ ಕೆಲವೂ ಕಡೆ ರೂಢಿಯಲ್ಲಿದೆ. ಇವೆಲ್ಲಾ ನಂಬಿಕೆ ರೂಢಿಗಳು ಅರ್ಥಹೀನವಷ್ಟೇ ಅಲ್ಲ. ಅಪಾಯಕಾರಿಯೂ ಕೂಡ ಹೌದು.
"ಕೊಲೆಸ್ಟ್ರಂ" ಹಾಲಿನಲ್ಲಿ ಅಧಿಕ ಪ್ರೋಟಿನ್ "ಎ" ಜೀವಸತ್ವಗಳಲ್ಲದೆ ಮಗುವಿಗೆ ರೋಗಾಣುಗಳ ವಿರುದ್ದ ರಕ್ಷಣೆ ನೀಡುವ ವಸ್ತುಗಳೂ ಇವೆ. ಅದುದರಿಂದ ಶಿಶು ಜನಿಸಿದ ದಿನದಿಂದಲೇ ಆದಷ್ಟು ಬೇಗ ಮೊಲೆ ಚೀಪಿಸಲು ಪ್ರಾರಂಭಿಸಬೇಕು. ಇದರಿಂದ ಉಪಯುಕ್ತ ದ್ರವವಾದ "ಕೊಲೆಸ್ಟ್ರಂ" ಸ್ವಲ್ಪವೂ ವ್ಯರ್ಥವಾಗದೆ ಪೂರ್ಣವಾಗಿ ಮಗುವಿಗೆ ಲಭಿಸುವಂತಾಗುತ್ತದೆ ಇದು ಮಗುವಿನ ಆರೋಗ್ಯವನ್ನು ಜೀವನಾದ್ಯಂತ ಕಾಪಾಡುತ್ತದೆ.
ಇದಲ್ಲದೆ ಹೆರಿಗೆಯಾದ ದಿನದಿಂದಲೇ ಹಾಲುಣಿಸುವುದರಿಂದ ಮತ್ತೊಂದು ಪ್ರಯೋಜನವುಂಟು. ಮಗು ಹಾಲು ಚೀಪಿದಾಗ ಉಂಟಾಗುವ ಪ್ರಚೋದನೆಯಿಂದ ತಾಯಿಯ ದೇಹದಲ್ಲಿ ಕೆಲವು ಹಾರ್ಮೋನುಗಳು ತಾಯಿಯ ಗರ್ಭಕೋಶ ಸದೃಢವಾದ ಸಹಜಸ್ಥಿತಿಗೆ ಮರಳಲು ಹಾಗೂ ರಕ್ತಸ್ರಾವ ತಡೆಗಟ್ಟಲು ಸಹಾಯವಾಗಿದೆ. ಅಲ್ಲದೆ ಈ ಪ್ರಚೋದನೆ ಅಧಿಕ ಹಾಲು ಉತ್ಪಾದನೆಗೂ ಸಹಾ ನೆರವಾಗುತ್ತದೆ.


ಮೊಲೆ ಹಾಲು ನೀಡುವ ಸರಿಯಾದ ವಿಧಾನ ಹಾಗೂ ಗಮನದಲ್ಲಿರಬೇಕಾದ ವಿಚಾರಗಳು:
1. ತಾಯಿಯ ಮೊಲೆಯ ತೊಟ್ಟಿನ ಜೊತೆ ತೊಟ್ಟಿನ ಹಿಂಬದಿಯ ಕಪ್ಪು ಭಾಗವೂ ಮಗುವಿಗೆ ಬಾಯಿಯೊಳಗೆ ಇರುವಂತೆ ನೋಡಿಕೊಳ್ಳಬೇಕು.
2. ತಾಯಿಯ ಗಮನ ಮಗುವಿನ ಮುಖದ ಕಡೆ ಇರಬೇಕು.
3. ಮಗುವಿನ ತಲೆ ಮತ್ತು ಕುತ್ತಿಗೆ ನೇರವಾಗಿರಬೇಕು.
4. ಮಗುವಿನ ದೇಹ ತಾಯಿಯ ದೇಹದ ಕಡೆ ಸಂಪೂರ್ಣವಾಗಿ ತಿರುಗಿರಬೇಕು.
5. ಮಗುವಿನ ಇಡೀ ದೇಹವನ್ನು ತಾಯಿ ಎರಡೂ ಕೈಗಳಿಂದ ಸುತ್ತ ಬಳಸಿ ಅಪ್ಪಿಕೊಳ್ಳಬೇಕು.
6. ತಾಯಿ ದೃಷ್ಟಿ ಮಗಿವಿನ ಕಡಗೇ ಇರಬೇಕು. ಕುಳಿತುಕೊಂಡು ಹಾಲುಣಿಸುವುದು ಉತ್ತಮ. ತಾಯಿ ಕುಳಿತುಕೊಳ್ಳುವುದು ಕಷ್ಟವಾಗಿರುವ ಸಂದರ್ಭದಲ್ಲಿ ಮಲಗಿಯೂ ಕೊಡಬಹುದು.
ಮಗು ಹುಟ್ಟಿದ ಅರ್ಧಗಂಟೆಯಿಂದ ಕ್ರಮಬದ್ಧವಾಗಿ ಮಗುವಿಗೆ ಮೊಲೆ ಚೀಪಿಸುತ್ತಿರಬೇಕು. ಮಗುವಿನ ಬಾಯಿಗೆ ಮೊಲೆ ತುರುಕುವುದು, ಅದಿನ್ನೂ ಕುಡಿಯುತ್ತಿರುವಾಗಲೇ ಬಿಡಿಸುವುದು ಸಲ್ಲದ ಕ್ರಮ. ಇದರಿಂದ ಮಗುವಿನ ಎಳೆಯ ಮನಸ್ಸು ಘಾಸಿಕೊಳ್ಳಬಹುದು. ಮೊಲೆಹಾಲುಣಿಸುವ ತಾಯಿಯ ಆಹಾರ ವಿಧಾನವು ಚೆನ್ನಾಗಿರಬೇಕು. ಸೊಪ್ಪು, ತರಕಾರಿ, ಹಣ್ಣುಗಳನ್ನು, ಹಾಲು, ನೀರು ಒಳಗೊಂಡ ಪೌಷ್ಟಿಕ ಸಮತೋಲನ ಸಾಧಿಸಬೇಕಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಆಹಾರ ಸೇವಿಸಕೊಡದು. ಗರ್ಭನಿರೋಧಕ ಮಾತ್ರೆಗಳನ್ನು ನುಂಗಬಾರದು.

ಮಗುವು ಹಾಲು ಕುಡಿಯಲು ಪ್ರಾರಂಭಿಸಿದ ಕೂಡಲೇ ಬರುವುದು ಮುಂಬದಿ ಹಾಲು ಇತದರಲ್ಲಿ ಸಾರಜನಕ, ಸಕ್ಕರೆ(ವಿಟಮಿನ್) ಲವಣಾಂಶಗಳು, ಜೀವಸತ್ವಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಿಂಬದಿ ಹಾಲಿನಲ್ಲಿ ಕೊಬ್ಬಿ ನ ಅಂಶ ಜಾಸ್ತಿ ಇರುತ್ತದೆ. ಆದ್ದರಿಂದ ಪೂರ್ಣ ಪ್ರಮಾಣದಲ್ಲಿ ಹಾಲನ್ನು ನೀಡುವುದು ಸೂಕ್ತ.

ತಾಯಿಯ ದೊರಕುವ ಲಾಭಗಳು
1. ತಾಯಿ ಮೊದಲದಿನದಿಂದಲೇ ಹಾಲು ನೀಡುವುದರಿಂದ ಗರ್ಭಕೋಶ ಬೇಗನೆ ಸಂಕುಚಿತವಾಗುವುದರಿಂದ ಗರ್ಭದಲ್ಲಿನ ರಕ್ತಸ್ರಾವ ಕಮ್ಮಿಯಾಗುತ್ತದೆ.
2. ತಾಯಿ ಹಾಲು ನೀಡುವುದರಿಂದ ತಾಯಿಯ ಅಂಗಾಂಶಗಳಲ್ಲನ ಕೊಬ್ಬು ಕರಗಿ ಸೌಂದರ್ಯ ವೃದ್ಧಿಸುತ್ತದೆ.
3. ಸ್ತನದ ಕ್ಯಾನ್ಸರ್ ಕಡಿಮೆ.
4. ದೈವದತ್ತ ಕೊಡುಗೆ- ಮಾನಸಿಕ ತೃಪ್ತಿ.
5. ಇನ್ನೂಂದು ಗರ್ಭಧರಿಸುವ ಸಂಭವ ಕಮ್ಮಿ-ಕುಟುಂಬ ಯೋಜನೆ ಕಾರ್ಯಕ್ತಮಕ್ಕೆ ಮೊಲೆ ಹಾಲು ನೀಡುವ ಸಹಕಾರಿ.

ಇತ್ತೀಚಿನ ಸ್ತನಪಾನದ ಮಹತ್ವವನ್ನು ಜಗತ್ತಿಗೆ ಸಾರಿಹೇಳುವ ಪ್ರಯತ್ನ ರಾಷ್ಟ್ರದ ಮೂಲೆ-ಮೂಲೆಯಲ್ಲಿಯೂ ನಡೆಯುತ್ತಿದೆ. ಜಾಗತಿಕ ಆರೋಗ್ಯ ಸಂಸ್ಥೆ ಅನೇಕ ಕಾರ್ಯಕ್ರಮಗಳ ಮೂಲಕ ಮಹತ್ವವನ್ನು ಸಾರಿದೆ. ವಿಶ್ವಸಂಸ್ಥೆಯ ಮಕ್ಕಳ ವಿದ್ಯಾನಿಧಿ ಸಂಸ್ಥೆಯು ಮೊಲೆ ಹಾಲು ಸಪ್ತಾಹವನ್ನು ಪ್ರಾರಂಭಿಸಿ ಆಗಸ್ಟ್ 1 ರಿಂದ 7 ಅಂದರೆ ಮೊದಲನೆಯ ವಾರವನ್ನು ಅದಕ್ಕಾಗಿಯೇ ಮೀಸಲ್ಪಟ್ಟಿದೆ.

ಇಷ್ಟೇ ಅಲ್ಲದೆ ತಾಯಿಯ ಹಾಲನ್ನು ಸಂಗ್ರಹಿಸಿ, ಶೇಖರಿಸಿಡುವುವ ಹಾಗೂ ಅದನ್ನು ಉಳಿದ ಮಕ್ಕಳ ಬೆಳವಣಿಗೆಗಾಗಿ ಉಪಯೋಗಿಸುತ್ತಿರುವುದು ಇತ್ತೀಚಿನ ಪ್ರಯೋಗ. ಈಗಾಗಲೇ ಮಹಾರಾಷ್ಟ್ರದ ವಡೋದರದಲ್ಲಿ ಅತೀ ಹೆಚ್ಚು ತಾಯಿಯ ಹಾಲು ಸಂಗ್ರಹಿಸಿ 70,000 ಕ್ಕಿಂತಲೂ ಅಧಿಕ ಮಕ್ಕಳ ಬೆಳವಣಿಗೆಗೆ ಒತ್ತು ನೀಡಿದ್ದು, ಸ್ತನ ಪನದ ಮೌಲ್ಯಕ್ಕೆ ಸಾಕ್ಷಿ. ಇಷ್ಟೆಲ್ಲ ಮುಂದುವರಿದಿರುವ ರಾಷ್ಟ್ರ ಕೇವಲ ಗೊಡ್ಡು ನಂಬಿಕೆಗಳು ಹಾಗೂ ಸೌಂದರ್ಯಪ್ರಜ್ಞೆ ಎಂಬ ನೆಪದಲ್ಲಿ ದೇಶದ ಕುಡಿಗಳನ್ನು ಮುರುಚಿ ಹಾಕುವುದು ಪ್ರಗತಿಯ ಸಂಕೇತವಲ್ಲ.

ಹೂವಿನ ಎಸಳಿನಂತಿರುವ ಮುದ್ದು ಕಂದಮ್ಮಗಳನ್ನು
ಮೊಲೆಹಾಲೆಂಬ ಅಮೃತದಿಂದ ತೋಯಿಸಿ.
ಪ್ರೀತಿ, ಮಮತೆ, ವಾತ್ಸಲ್ಯ, ಅಪ್ಪುಗೆಯನ್ನು ಧಾರೆಯೆರೆದು
ಉಜ್ವಲ ರಾಷ್ಟ್ರದ ಪ್ರಜ್ವಲ ಕಿರಣಗಳಂತೆ ಮಾಡುವುದು
ಪ್ರತಿತಾಯಿಯ ಜವಾಬ್ದಾರಿಯಾಗಿದೆ.ಬರಹ: ಸಂಗೀತ ಹೆಗ್ಡೆ
ತ್ರತೀಯ ಬಿ.ಎಸ್.ಡಬ್ಲ್ಯೂ.
ಆಳ್ವಾಸ್ ಕಾಲೇಜು,

0 comments:

Post a Comment