ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನುಡಿಸಿರಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ನಡೆಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010ರ ಸರ್ವಾಧ್ಯಕ್ಷರಾಗಿ ಪ್ರಸಿದ್ಧ ಲೇಖಕಿ ವೈದೇಹಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ . ಸಮ್ಮೇಳನವು ಅಕ್ಟೋಬರ ತಿಂಗಳ 29, 30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. ಕನ್ನಡ ಮನಸ್ಸು: ಜೀವನ ಮೌಲ್ಯಗಳು ಎಂಬ ಪ್ರಧಾನ ಪರಿಕಲ್ಪನೆಯಡಿ ಈ ಬಾರಿಯ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.


ಅವಿಭಜಿತ ದಕ್ಷಿಣ ಕನ್ನಡದ ಹೆಸರಾಂತ ಸಾಹಿತಿ, ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಮ್ಮ ಕ್ರೌಂಚ ಪಕ್ಷಿಗಳು ಸಂಕಲನಕ್ಕೆ ಪಡೆದಿರುವ ವೈದೇಹಿಯವರು ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ವಹಿಸುವುದು ನಮಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ. ಅವರು ಅಕ್ಟೋಬರ 29ರಂದು ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು.ಈ ಬಾರಿಯ ಸಮ್ಮೇಳನವು ನುಡಿಸಿರಿಯ ಏಳನೇ ಸಮ್ಮೇಳನವಾಗಿದ್ದು ಈ ಹಿಂದಿನ ವರ್ಷಗಳಲ್ಲಿ ಬರಗೂರು ರಾಮಚಂದ್ರಪ್ಪ, ಚೆನ್ನವೀರ ಕಣವಿ, ಎಸ್ ಎಲ್ ಭೈರಪ್ಪ, ಚಂದ್ರ ಶೇಖರ ಕಂಬಾರ, ಜಿ. ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ ಇವರು ಅಧ್ಯಕ್ಷತೆಯನ್ನು ವಹಿಸಿ ನುಡಿಸಿರಿಯನ್ನು ಮುನ್ನಡೆಸಿದ್ದರು.
ವೈದೇಹಿ ಪರಿಚಯ

ವೈದೇಹಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿರುವ ಮೂಲತ: ಕುಂದಾಪುರದ ಜಾನಕಿ ಶ್ರೀನಿವಾಸ ಮೂರ್ತಿಯವರು ಕವಿತೆ, ಕಥೆ, ನಾಟಕ, ಅಂಕಣ ಬರೆಹ, ಅನುವಾದಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರಾದವರು. ಮರಗಿಡ ಬಳ್ಳಿ, ಅಂತರಂಗದ ಪುಟಗಳು, ಗೋಲ, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಇವರ ಕಥಾ ಸಂಕಲನಗಳು. ಬಿಂದು ಬಿಂದಿಗೆ, ಪಾರಿಜಾತ ಎಂಬ ಕವನ ಸಂಕಲನಗಳು ಹಾಗೂ ಅಸ್ಪೃಶ್ಯರು ಇವರ ಕಾದಂಬರಿ.

ಮಕ್ಕಳ ನಾಟಕ ಕ್ಷೇತ್ರಕ್ಕೆ ವೈದೇಹಿಯವರ ಕೊಡುಗೆ ಅನುಪಮ. ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು, ಗೊಂಬೆ ಮ್ಯಾಕ್ಬೆತ್, ಢಾಣಾ ಢಂಗುರ, ನಾಯಿಮರಿ, ಸೂರ್ಯ ಬಂದ, ಝಂ ಝಾಂ ಆನೆ ಮತ್ತು ಪುಟ್ಟ, ಕೋಟು ಗುಮ್ಮ ಮೊದಲಾದ ಹದಿಮೂರು ಮಕ್ಕಳ ನಾಟಕಗಳನ್ನು ಇವರು ಬರೆದಿದ್ದಾರೆ. ಮಲ್ಲಿನಾಥನ ಧ್ಯಾನ ಇವರ ಪ್ರಸಿದ್ಧ ಅಂಕಣ ಬರಹಗಳ ಸಂಕಲನ. ಇವಲ್ಲದೇ ಸೂರ್ಯ ಕಿನ್ನರಿಯರು, ಭಾರತೀಯ ಮಹಿಳೆಯರ ಸ್ವಾತಂತ್ರ್ಯ, ಬೆಳ್ಳಿಯ ಸಂಕೋಲೆಗಳು, ಸಂಗೀತ ಸಂವಾದ ಮೊದಲಾದ ಅನುವಾದಗಳನ್ನು ಇವರು ಮಾಡಿದ್ದಾರೆ. ಜಾತ್ರೆ. ಮೇಜು ಮತ್ತು ಬಡಗಿ, ಸೇಡಿಯಾಪು ನೆನಪುಗಳು ಇವರ ಇತರ ಕೃತಿಗಳು.

ವೈದೇಹಿಯವರ ಕತೆಗಳು ಮರಾಠಿ, ಇಂಗ್ಲಿಷ್, ಮಲಯಾಳ, ತಮಿಳು, ಹಿಂದಿ, ಗುಜರಾತಿ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಸಿನಿಮಾ ಗುಲಾಬಿ ಟಾಕೀಸು.
ಅನುಪಮ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅನುಪಮಾ ಪ್ರಶಸ್ತಿ,ಭಾರ್ಗವ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ಸದೋದಿತ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ಸಂದಿವೆ. ಪ್ರಸ್ತುತ ಮಣಿಪಾಲದ ಇರುವಂತಿಗೆಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸುತ್ತಿದ್ದಾರೆ.

0 comments:

Post a Comment