ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕಿನ್ನಿಗೋಳಿ: ಅಚ್ಚರಿಯ ಸಾಧಕ ಡಾ.ಮೋಹನ ಆಳ್ವರ ಸಂಗ್ರಹಗಳ ಪಟ್ಟಿಗೆ ಹೊಸ ಸೇರ್ಪಡೆ 3ಸಾವಿರಕ್ಕೂ ಹೆಚ್ಚಿನ ಕನ್ನಡದ ಪತ್ರಿಕೆಗಳು! ಬಹುಶಃ ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಮೂಡುಬಿದ್ರೆಯ ಆಳ್ವಾಸ್ ಪದವೀ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯವಸ್ಥಿತವಾದ ಪತ್ರಿಕಾ ಸಂಗ್ರಹಾಲಯ ಉದ್ಘಾಟನೆಗೊಳ್ಳಲಿದೆ.

ನಾನಾ ನಮೂನೆಯ ಗಣಪತಿ ವಿಗ್ರಹಗಳು, ಪುರಾತನ ವಸ್ತುಗಳು, ಯಕ್ಷಗಾನ, ಜಾನಪದ ವಸ್ತುಗಳು, ಶೋಭಾವನದಲ್ಲಿ ನೂರಾರು ಸಸ್ಯ ವೈವಿಧ್ಯಗಳು, ಛಾಯಾಚಿತ್ರಗಳು ಹೀಗೆ ಡಾ. ಮೋಹನ ಆಳ್ವರ ಸಂಗ್ರಹದ ಹವ್ಯಾಸಗಳು ಹಲವಾರು. ಈಗ ನಿವೃತ್ತ ಉಪನ್ಯಾಸಕ, ಸಾಗರದ ಪ್ರಸಿದ್ಧ ಪತ್ರಿಕಾ ಸಂಗ್ರಾಹಕ ಮೋಹನ ಗಣಪತಿ ಹೆಗಡೆ ತನ್ನಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ಪತ್ರಿಕೆಗಳನ್ನು ಆಳ್ವಾಸ್ ಸಂಸ್ಥೆಗೆ ನೀಡಿದ್ದಾರೆ. ಇದರ ಜೊತೆಗೆ ಕ್ರಿಯಾಶೀಲ ಪತ್ರಕರ್ತರಾಗಿದ್ದು, ಪ್ರಸ್ತುತ ಆಳ್ವಾಸ್ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿರುವ ಹರೀಶ್ ಆದೂರು ಅವರೂ ಕೂಡ ಸಾವಿರಾರು ಪತ್ರಿಕೆಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ದ್ವಿಪ್ರತಿ ಇರುವ ಪತ್ರಿಕೆಗಳನ್ನು ಸಂಸ್ಥೆಯ ಪತ್ರಿಕಾ ಸಂಗ್ರಹಾಲಯಕ್ಕೆ ನೀಡಿ ಸಂಗ್ರಹವನ್ನು ಶ್ರೀಮಂತವಾಗಿಸಿದ್ದಾರೆ.

ರಾಜ್ಯದ ಯಾವುದೇ ವಿವಿ ಅಥವಾ ವಿದ್ಯಾಲಯ, ಸಂಸ್ಥೆಗಳಲ್ಲಿ ಇರದಂತಹ ಅಧ್ಯಯನಕ್ಕೆ, ಸಂಶೋಧನೆಗೆ ಸಹಕಾರಿಯಾಗಬಲ್ಲ ರೀತಿಯಲ್ಲಿ ಶೋಕೇಸ್ ವ್ಯವಸ್ಥೆಯೊಳಗೆ ವಿವಿಧ ಪತ್ರಿಕೆಗಳನ್ನು ಬಿಡಿಸಿಡುವ ಕಾರ್ಯ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ನಡೆಯುತ್ತಿದೆ.
ಉದ್ಯೋಗ, ಸಾಹಿತ್ಯ, ಅಪರಾಧ, ಸಾಮಾನ್ಯ ವಿಚಾರ, ರಾಜಕೀಯ, ಸಿನಿಮಾ, ಧಾರ್ಮಿಕ, ಮನೋರಂಜನೆ, ಮಕ್ಕಳ ಪತ್ರಿಕೆ ಹೀಗೆ ವಿವಿಧ ವಿಭಾಗಗಳಾಗಿ ವಿಂಗಡಿಸಿ ಜಿಲ್ಲಾವಾರುವಿನಂತೆ ವ್ಯವಸ್ಥೆಗೊಳಿಸಲಾಗುತ್ತಿದೆ. ದಿನ, ವಾರ, ಪಾಕ್ಷಿಕ, ಮಾಸ, ದ್ವೈಮಾಸಿಕ ಹೀಗೆ ನಾನಾ ನಮೂನೆಯಲ್ಲೂ ವಿಭಾಗಿಸಲಾಗುವುದು. ವಿಶಿಷ್ಟ ಪತ್ರಿಕೆಗಳನ್ನು ಉದಾಹರಣೆಗೆ ಗಿಡುಗ, ನಾಗರಹಾವು, ಹದ್ದಿನ ಕಣ್ಣು ಹೀಗೆ ಪ್ರಾಣಿ ಪಕ್ಷಿಗಳ ಹೆಸರಿನ ಪತ್ರಿಕೆಗಳನ್ನೂ ಪ್ರತ್ಯೇಕವಾಗಿ ಜೋಡಿಸಿಡಲಾಗುವುದು. ಸ್ವಾತಂತ್ರ್ಯ ಪೂರ್ವದ, ಸ್ವಾತಂತ್ರ್ಯ ಹೋರಾಟ ಕಾಲದ, ತುರ್ತು ಪರಿಸ್ಥಿತಿ ಕಾಲದ ಪತ್ರಿಕೆಗಳು ಹೀಗೆ ನಾನಾ ವಿಧದಲ್ಲೂ ಅಧ್ಯಯನಕಾರರಿಗೆ ಇಲ್ಲಿನ ಕನ್ನಡ ಪತ್ರಿಕೆಗಳ ದೊಡ್ಡ ಸಂಗ್ರಹ ಸಹಕಾರಿಯಾಗಲಿದೆ. ಮುಖ್ಯವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಲಿಕೆಗೆ ಹೊಸಚೈತನ್ಯವನ್ನು ನೀಡಲಿದೆ. ಒಂದು ಪುಟದಿಂದ ಹಿಡಿದು ನೂರಿನ್ನೂರು ಪುಟಗಳವರೆಗಿನ, ಕೈಬರಹದಿಂದ ತೊಡಗಿ ಬಹುವರ್ಣದ, ಪೋಸ್ಟ್ ಕಾರ್ಡ್ ಆಕಾರದಿಂದ ಆರಂಭಿಸಿ ಯುದ್ಧಪಟಗಳು ಎಂಬ ದೊಡ್ಡ ಸೈಜಿನವರೆಗಿನ ಪತ್ರಿಕೆಗಳೂ ಇಲ್ಲಿನ ಸಂಗ್ರಹಾಲಯದಲ್ಲಿದೆ. ಪತ್ರಿಕೆಗಳ ಮುಖ್ಯವಾಗಿ ಕನ್ನಡದ ಪತ್ರಿಕೆಗಳ ಇತಿಹಾಸ ಅಧ್ಯಯನಕ್ಕೆ ಈ ಸಂಗ್ರಹಾಲಯ ದೊಡ್ಡ ಆಕರವಾಗಿದೆ.
ಸದ್ಯ ಒಂದು ರೂಮಿನಲ್ಲಿ ಕಪಾಟುಗಳಲ್ಲಿಡಲಾಗುತ್ತಿದೆ. ಮುಂದೆ ದೊಡ್ಡ ಮಟ್ಟದಲ್ಲಿ ಪ್ರದರ್ಶನಕ್ಕಿಡಲಾಗುವುದು ಎಂದು ಮಾಹಿತಿ ನೀಡಿದ ಹರೀಶ್ ಆದೂರು ತಾನು ವೈಯಕ್ತಿಕವಾಗಿ ಪತ್ರಿಕೆಗಳ ಸಂಪಾದಕ, ಪ್ರಕಾಶಕ, ಬೆಲೆ, ಪುಟ, ಅವುಗಳ ವಿಶಿಷ್ಟತೆ ಹೀಗೆ ನಾನಾ ಮಾಹಿತಿಗಳ ದಾಖಲೀಕರಣವನ್ನೂ ಮಾಡುತ್ತಿದ್ದೇನೆ ಎಂದು ಹೇಳಿದರು. ಆದೂರು ಮತ್ತವರ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಜೋಡಿಸಿಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪತ್ರಿಕೆಗಳ ರಕ್ಷಣೆಗಾಗಿ ದೊಡ್ಡ ಸೈಜಿನ ಪ್ಲಾಸ್ಟಿಕ್ ಲಕೋಟೆಗಳನ್ನು ಮಾಡಿಸಲಾಗಿದೆ.
ಪತ್ರಿಕೆಗಳನ್ನು ಸಂಸ್ಥೆಗೆ ನೀಡಿರುವ ಮೋಹನ ಗಣಪತಿ ಹೆಗಡೆಯವರ ಹೆಸರನ್ನು ಗೌರವಯುತವಾಗಿ ಪತ್ರಿಕಾ ಸಂಗ್ರಹಾಲಯದಲ್ಲಿ ಬಳಸಿಕೊಳ್ಳುತ್ತೇವೆ.
ಹಳೆಯ ಪತ್ರಿಕೆಗಳನ್ನು ಹೆಚ್ಚು ಸಲ ತಿರುವಿ ಹಾಕಿದಾಗ ಅವು ಹಾಳಾಗುವ ಸಾಧ್ಯತೆಗಳಿರುವುದರಿಂದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಿದ್ದರೆ ಪತ್ರಿಕೆಗಳ ಯಥಾಪ್ರತಿ(ಕ್ಸೆರಾಕ್ಸ್) ನೀಡುತ್ತೇವೆ. ವಿವಿಧ ಪತ್ರಿಕೆಗಳ ವಿನ್ಯಾಸ, ಹೂರಣ, ವಸ್ತು ವೈವಿಧ್ಯ ಇತ್ಯಾದಿ ವಿಚಾರಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಲಿಕೆಯಲ್ಲಿ ದೊಡ್ಡ ಕೊಡುಗೆ ನೀಡಬಲ್ಲವು. ಪಠ್ಯಗಳ ಓದಿಗಿಂತ ಪ್ರಾಯೋಗಿಕ ಅನುಭವ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಅದಕ್ಕೆ ಈ ಪತ್ರಿಕಾ ಸಂಗ್ರಹಾಲಯ ಪೂರಕವಾಗಲಿದೆ ಎಂದು ಹರೀಶ್ ಆದೂರು ಮಾಹಿತಿ ನೀಡಿದರು.
ಮೂಡುಬಿದ್ರೆ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸೆಮಿನಾರ್ ಹಾಲ್ ಮತ್ತು ಮೋಹನ ಗಣಪತಿ ಹೆಗಡೆ ಸಂಗ್ರಹದ ಪತ್ರಿಕಾ ಸಂಗ್ರಹಾಲಯವನ್ನು ತಾ.24ರ ಬೆಳಿಗ್ಗೆ ಕುವೆಂಪು ವಿವಿಯ ಸತೀಶ್ ಕುಮಾರ್ ಅಂಡಿಂಜೆ ಉದ್ಘಾಟಿಸಲಿದ್ದಾರೆ. ಡಾ.ಮೋಹನ ಆಳ್ವ, ಡಾ.ಪ್ರಭಾಕರ ಶೆಟ್ಟಿ, ಕುರಿಯನ್ ಉಪಸ್ಥಿತರಿರುತ್ತಾರೆ .
ಚಿತ್ರ-ವರದಿ: ಮಿಥುನ್ ಕೊಡೆತ್ತೂರು, ಕಿನ್ನಿಗೋಳಿ.

0 comments:

Post a Comment