ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕನ್ನಡ ವಿಜ್ಞಾನ ಪರಿಷತ್ ರಜತೋತ್ಸವ ಪ್ರಶಸ್ತಿ ಪ್ರಕಟ

ಕನ್ನಡದಲ್ಲಿ ವಿಶೇಷವಾಗಿ ವಿಜ್ಞಾನ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಿಗೆ ನೀಡುವ ತನ್ನ ಪ್ರತಿಷ್ಠಿತ ರಜತೋತ್ಸವ ಪ್ರಶಸ್ತಿಯನ್ನು 2005, 2006 ಹಾಗೂ 2007ನೇ ಸಾಲಿಗಾಗಿ ಕನ್ನಡ ವಿಜ್ಞಾನ ಪರಿಷತ್ತು ಪ್ರಕಟಿಸಿದೆ. ಈ ಪ್ರಶಸ್ತಿಯನ್ನು ಕ್ರಮವಾಗಿ ನಿಘಂಟು ತಜ್ಞ ಪ್ರೊ||ಜಿ.ವೆಂಕಟಸುಬ್ಬಯ್ಯ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ಪರಿಣತ ಪ್ರೊ||ಸಿ.ಎಸ್.ಯೋಗಾನಂದ ಹಾಗೂ ವಿಜ್ಞಾನಿ-ವಿಜ್ಞಾನ ಬರಹಗಾರ ಪ್ರೊ||ಹಾಲ್ದೊಡ್ಡೇರಿ ಸುಧೀಂದ್ರ ಪಡೆಯಲಿದ್ದಾರೆ.
ಕನ್ನಡ ವಿಜ್ಞಾನ ಪರಿಷತ್ತು ನೀಡುವ ರಜತೋತ್ಸವ ಪ್ರಶಸ್ತಿಯು ತಲಾ 25,000 ರೂ. ಗೌರವಧನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಅಕ್ಟೋಬರ್ 3, 2010 (ಭಾನುವಾರ) ಬೆಂಗಳೂರಿನ ನರಸಿಂಹರಾಜ ಕಾಲನಿಯಲ್ಲಿರುವ ಬಿ.ಎಂ.ಶ್ರೀ. ಕಲಾಭವನ ದಲ್ಲಿ ಸಂಜೆ 5ಗಂಟೆಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಹಾಗೂ ಕಂಪ್ಯೂಟರ್ ತಜ್ಞ ಜನಾರ್ದನ ಸ್ವಾಮಿ ಅವರು ವಹಿಸಲಿದ್ದು, ಬೆಂಗಳೂರು ದೂರದರ್ಶನದ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ||ಮಹೇಶ್ ಜೋಷಿ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಸೂ.ಸುಬ್ರಹ್ಮಣ್ಯಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ವಿಜ್ಞಾನಿಗಳು ಹಾಗೂ ವಿಜ್ಞಾನ ಬರಹಗಾರರನ್ನು ಒಗ್ಗೂಡಿಸಿ ಸರಳ ಕನ್ನಡದಲ್ಲಿ ವಿಜ್ಞಾನ ಕುರಿತ ಪುಸ್ತಕಗಳನ್ನು ಅವರಿಂದ ಬರೆಸಿ, ಪ್ರಕಟಿಸುವ ಉದ್ದಿಶ್ಯದಿಂದ 1976ರಲ್ಲಿ ಆರಂಭವಾದ ಸಂಸ್ಥೆ ಕನ್ನಡ ವಿಜ್ಞಾನ ಪರಿಷತ್ತು. ಕನ್ನಡ ಭಾಷೆಯ ಮೂಲಕ ವಿಜ್ಞಾನವನ್ನು ಜನಪ್ರಿಯ ಗೊಳಿಸಲು ವೈಜ್ಞಾನಿಕ ಮನೋಧರ್ಮ ಬೆಳೆಸಲು, ಗ್ರಾಮೀಣ ಬದುಕಿಗೆ ವೈಜ್ಞಾನಿಕ ಅರಿವು ಮೂಡಿಸಲು ಸ್ಥಾಪಿತವಾದ ಸಂಸ್ಥೆಯಿದು. ಕನ್ನಡ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿಯನ್ನು ಈ ಹಿಂದೆ ಭೂವಿಜ್ಞಾನಿ ಡಾ||ಬಿ.ಪಿ.ರಾಧಾಕೃಷ್ಣ (2002); ವಿಜ್ಞಾನ ಬರಹಗಾರ ಜಿ.ಟಿ.ನಾರಾಯಣರಾವ್ (2003) ಅವರಿಗೂ ಮತ್ತು ಕೊರವಂಜಿ-ಅಪರಂಜಿ ಟ್ರಸ್ಟ್ (2004) ಸಂಸ್ಥೆಗೂ ಪ್ರದಾನ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.


2 comments:

Padyana Ramachandra said...

2007ರ ಕರ್ನಾಟಕ ವಿಜ್ಞಾನ ಪರಿಷತ್ ರಜತೋತ್ಸವ ಪ್ರಶಸ್ತಿ ಪಡೆಯುತ್ತಿರುವ ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

-ಪ.ರಾಮಚಂದ್ರ,
ರಾಸ್ ಲಫ್ಫಾನ್-ಕತಾರ್

Anonymous said...

ವಿಜ್ಞಾನಿ ಸುಧೀಂದ್ರ ಅವರ ಲೇಖನಗಳನ್ನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಓದುತ್ತಿರುವ ನನ್ನಂಥ ಕಾಲೇಜು ವಿದ್ಯಾರ್ಥಿಗಳಿಗೆ ಈ ಸುದ್ದಿ ಖುಷಿ ತಂದಿದೆ. ಈ ಪುರಸ್ಕಾರವು ಅವರನ್ನು ಮತ್ತಷ್ಟು ವಿಜ್ಞಾನ ಲೇಖನಗಳನ್ನು ಪ್ರೇರೇಪಿಸಲಿ.

ಅನುಪಮ, ಶಿವಮೊಗ್ಗ

Post a Comment