ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:17 PM

ಗುರುಬಲ!

Posted by ekanasu

ವಿಶೇಷ ವರದಿ

ಶಿಕ್ಷಣ ಕ್ಷೇತ್ರ ಕಾಶಿ ಎನಿಸಿಕೊಂಡಿರುವ ನಾಡು ದಕ್ಷಿಣ ಕನ್ನಡ ಜಿಲ್ಲೆ. ಇದೇ ಜಿಲ್ಲೆಯ ಪುಟ್ಟ ಹಳ್ಳಿಯೊಂದು ನಾಡಿಗೆ ಇನ್ನೊಂದು ದೊಡ್ಡ ಕೊಡುಗೆಯನ್ನು ಇದೇ ಕ್ಷೇತ್ರಕ್ಕೆ ನೀಡಿದೆ.ಸುಳ್ಯ ತಾಲೂಕಿನಲ್ಲಿರುವ ಏನೇಕಲ್ ಎಂಬ ಪುಟ್ಟ ಹಳ್ಳಿಯಲ್ಲಿರೋ ಶಿಕ್ಷಕರ ಸಂಖ್ಯೆ ಕನಿಷ್ಢ 165.ಹಳ್ಳಿ ತುಂಬ ಮೇಷ್ಟ್ರುಗಳೇ ಇದ್ದಾರೆ.ಇಡೀ ರಾಜ್ಯದಲ್ಲೇ ಇದೊಂದು ದೊಡ್ಡ ಕೊಡುಗೆ.ಏನೇಕಲ್ ಎಂಬ ಪುಟ್ಟ ಗ್ರಾಮ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ಗ್ರಾಮ ಹೇಳಿಕೊಳ್ಳುವುದಕ್ಕೆ ಪುಟ್ಟ ಗ್ರಾಮವಾದರೂ ಈ ಹಳ್ಳಿಯ ಕೊಡುಗೆ ದೊಡ್ಡದೇ.ಈ ಊರಿನಲ್ಲಿರುವ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು. ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಮತ್ತು ರಾಜ್ಯದ ವಿವಿದೆಡೆ ಶಿಕ್ಷಕರಾಗಿ ಇಂದು ದುಡಿಯುತ್ತಿದ್ದಾರೆ.ಅಷ್ಟೆ ಏಕೆ ವಿದೇಶದಲ್ಲೂ ಉಪನ್ಯಾಸಕರಾಗಿ ಕೆಲಸ ಮಾಡೋದ್ರಲ್ಲೂ ಇಲ್ಲಿನ ಜನ ಇದ್ದಾರೆ.ಈ ಊರಿಗೆ ದಿವಂಗತ ಪಿ.ಎಸ್.ರಾಮಣ್ಣ ಗೌಡರೇ ಮೊದಲ ಶಿಕ್ಷಕರು. ಆ ಬಳಿಕ ಇಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡೋಕ್ಕೆ ಇಲ್ಲಿನ ಹೈದರು ಶುರುಮಾಡಿದರು.ಹಿರಿಯರ ಮಾದರಿಯ ಹೆಜ್ಜೆ , ಮುಂದಿನವರಿಗೆಲ್ಲಾ ದಾರಿದೀಪವಾಯಿತು.ಹಾಗಾಗಿ ಶಿಕ್ಷಕರಾಗುವವರ ಸಂಖ್ಯೆ ಇಲ್ಲಿ ಬೆಳೆಯುತ್ತಲೇ ಹೋಯಿತು.ಕಳೆದ 2 ವರ್ಷದ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ ಈ ಹಳ್ಳಿಯಲ್ಲಿ 165 ಜನ ಶಿಕ್ಷಕರು ಪಟ್ಟಿಯಲ್ಲಿ ಸಿಕ್ಕಿದ್ದಾರೆ.ಇದ್ಯಾಕೆ ಇಲ್ಲಿ ಗುರುತ್ವಾಕರ್ಷಣ ಬಲ ಬಂದಿದೆ ಅಂತ ಕೇಳಿದ್ರೆ , ಹಿರಿಯರ ಮಾರ್ಗದರ್ಶನ ಮತ್ತು ಅವರ ಆದರ್ಶದ ಹೆಜ್ಜೆಗಳ ಪ್ರೇರೇಪಣೆ ಒಂದು ಕಡೆಯಾದ್ರೆ ಇಲ್ಲಿನ ಯುವಕ ಮಂಡಲದ ಪಾತ್ರವೂ ಮುಖ್ಯವಾಗಿದೆಯಂತೆ.ಯುವಕ ಮಂಡಲದಲ್ಲಿ ಯುವಕರು ಜೊತೆಯಾಗಿ ಸೇರಿದಾಗ ಮಾಹಿತಿ ನೀಡುವ ಕಾರ್ಯಕ್ರಮ ಹಾಗೂ ಹಿರಿಯರ ಪ್ರೋತ್ಸಾಹ ಇಲ್ಲಿನ ಯುವಕರಿಗೆ ಸ್ಫೂರ್ತಿಯಾಯಿತು ಅದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೇ ಇರುವ ಭವಿಷ್ಯ ಮನಗಂಡು ಶಿಕ್ಷರಾದರು ಅಂತಾರೆ ಇವರು.ಇದರ ಜೊತೆಗೆ ಈ ಪುಟ್ಟ ಗ್ರಾಮವು ಆರ್ಥಿಕವಾಗಿಯೂ ಹಿಂದಿತ್ತು.ಹೀಗಾಗಿ ಉನ್ನತ ಶಿಕ್ಷಣವು ಕನಸಿನ ಮಾತಾಗಿತ್ತು.ಜೊತೆಗೆ ಬಹುತೇಕ ಮನೆಯವರು ಕೂಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಓದಿದ ಮಂದಿಗೆ ಉದ್ಯೋಗವೂ ಬೇಗನೆ ಬೇಕಿತ್ತು. ಹೀಗಾಗಿ ಕಡಿಮೆ ವ್ಯಾಸಾಂಗ ಮಾಡಿ ಬೇಗನೆ ಉದ್ಯೋಗ ಗಿಟ್ಟಿಸಿಕೊಳ್ಳುವ ಅನಿವಾರ್ಯತೆಯೂ ಇತ್ತು.ಆಗ ಶಿಕ್ಷಣ ಕ್ಷೇತ್ರ ಇವರನ್ನು ಆಕರ್ಷಿಸಿದೆ.

ಈಗ ನೋಡಿದರೆ ಈ ಪುಟ್ಟ ಗ್ರಾಮ ಅಷ್ಟೊಂದು ಹಿಂದೆ ಉಳಿದಿಲ್ಲ. ಆದರೂ ಕೂಡಾ ಇಂದಿನ ಹೆಚ್ಚಿನ ಯುವಕರೂ ಶಿಕ್ಷಣ ಕ್ಷೇತ್ರದತ್ತಲೇ ಆಕರ್ಷಿತರಾಗಿದ್ದಾರೆ.ಮೊದಲಿನ ಸಮೀಕ್ಷೆಯಂತೆ 165 ಜನ ಶಿಕ್ಷಕರಿದ್ದರೆ ಆ ಬಳಿಕವೂ ಇದೇ ಕ್ಷೇತ್ರಕ್ಕೆ ಬರುವುದಕ್ಕೆ ಟ್ರೈನಿಂಗ್ ಮಾಡಿದವರು ಇದ್ದಾರೆ.ಇನ್ನು ಕಂಪ್ಯೂಟರ್ ತರಬೇತಿ ಶಿಕ್ಷಕರು ಇಲ್ಲಿದ್ದಾರೆ. ಇವರೆಲ್ಲಾ ಸೇರಿದಾಗ 250 ರ ಗಡಿ ದಾಡುತ್ತದೆ. ಇನ್ನೂ ಈ ಏನೇಕಲ್ಲಿನಲ್ಲಿ ವಿಶೇಷ ಅಂದ್ರೆ ಸುಮಾರು 50 ಕ್ಕೂ ಅಧಿಕ ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಇರೋದು ಗಮನಾರ್ಹವಾಗಿದೆ. 1984 ರ ಸುಮಾರಿಗೆ ಒಂದೇ ವರ್ಷದಲ್ಲಿ 22 ಜನರು ಶಿಕ್ಷಕರಾಗಿ ನೇಮಕವಾದದ್ದು ಇಲ್ಲಿನ ಹೆಮ್ಮೆಗೆ ಇನ್ನೊಂದು ಗರಿ.

ಹಾಗಂತ ಈ ಪುಟ್ಟ ಗ್ರಾಮದ ಜನಸಂಖ್ಯೆ ಸುಮಾರು 2000. ಇಲ್ಲಿನ ಮನೆ ಹಾಗೂ ಜನಸಂಖ್ಯೆ ಆಧಾರವನ್ನು ನೋಡಿದರೆ ಸರಾಸರಿ ಮನೆಗೊಬ್ಬರಂತೆ ಇಲ್ಲಿ ಶಿಕ್ಷಕರಿದ್ದಾರೆ. ಅದು ಮಾತ್ರ ಅಲ್ಲ, ಇನ್ನು ಸರಕಾರಿ ಕಚೇರಿಗಳಲ್ಲಿ ಉದ್ಯೋಗದಲ್ಲಿ , ಯೋಧರಾಗಿ , ಬ್ಯಾಂಕ್ ಅಧಿಕಾರಿಗಳಾಗಿ , ಪ್ರಾಂಶುಪಾಲರಾಗಿಯೂ ಸೇವೆ ಮಾಡೋವವರು ಈ ಊರಲ್ಲಿ ಇದ್ದಾರೆ.ಇನ್ನೂ ವಿಶೇಷ ಅಂದ್ರೆ ವಿದೇಶದಲ್ಲೂ ಉಪನ್ಯಾಸಕರಾಗಿ ಸೇವೆ ಮಾಡೋರು ಇದೇ ಏನೇಕಲ್ಲಿನ ಮಂದಿ ಇದ್ದಾರೆ.

ಉದ್ಯೋಗ ಅಂತ ಅಂದ್ರೆ ಸಾಫ್ಟ್ವೇರ್ ಅಂತ ತಿಳಿದಿರೋ ಇಂದಿನ ಕಾಲದಲ್ಲಿ ಪಾಠ ಹೇಳಲು , ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕೆ ಜನ ಸಿಗದೇ ಇರೋ ಈ ವೇಳೆಯಲ್ಲಿ ಅದರಲ್ಲೂ ಕೆಲವು ವಿಷಯಗಳನ್ನು ಬೋಧಿಸಲು ಅಧ್ಯಾಪರುಗಳೇ ಸಿಗುತ್ತಿಲ್ಲವಾಗುತ್ತಿರುವ ಇಂದಿನ ದಿನದಲ್ಲಿ ಏನೇಕಲ್ ಎಂಬ ಪುಟ್ಟ ಗ್ರಾಮದ ಜನತೆ ಇಂದಿಗೂ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಹ್ಯಾಟ್ಸ್ ಅಪ್ ಏನೇಕಲ್ ಪ್ಯೂಪಲ್ಸ್. ಶಿಕ್ಷಕರ ದಿನಾಚರಣೆಗೆ ನಿಜವಾದ ಅರ್ಥ ನೀಡುತ್ತಿರುವ ಈ ಗ್ರಾಮ ನಿಜಕ್ಕೂ ರಾಜ್ಯದ ಹೆಮ್ಮೆ.

ಮಹೇಶ್ ಪುಚ್ಚಪ್ಪಾಡಿ.

1 comments:

BIDIRE said...

chennagide nirupne

Post a Comment