ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಹಂಬಲದಿಂದ 1976ರಲ್ಲಿ ಸ್ಥಾಪನೆಯಾದ ಪ್ರಾತಿನಿಧಿಕ ಸಂಸ್ಥೆ 'ಕನ್ನಡ ವಿಜ್ಞಾನ ಪರಿಷತ್ತು'. ಡಾ||ಶಿವರಾಮ ಕಾರಂತ, ಜಿ.ಟಿ.ನಾರಾಯಣರಾವ್, ಡಾ||ಬಿ.ಜಿ.ಎಲ್.ಸ್ವಾಮಿ, ಡಾ||ಎಂ.ಶಿವರಾಂ. ಡಾ||ಸಿ.ಆರ್.ಚಂದ್ರಶೇಖರ್, ಡಾ||ಬಿ.ಪಿ.ರಾಧಾಕೃಷ್ಣರಂಥ ವಿಜ್ಞಾನಿಗಳು, ವಿಜ್ಞಾನಬರಹಗಾರರಿಂದ ಮೌಲಿಕ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದ ಹೆಗ್ಗಳಿಕೆ ಕ.ವಿ.ಪ.ದ್ದು.ಈ ಹಿನ್ನೆಲೆಯನ್ನು ಪರಿಷತ್ತಿನ ರಜತೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಥಾಪಕ ಕಾರ್ಯದರ್ಶಿ ಸೂ.ಸುಬ್ರಹ್ಮಣ್ಯಂ ನೆನೆಸಿಕೊಂಡರು. ಬೆಂಗಳೂರಿನ ಬಿ.ಎಂ.ಶ್ರೀ. ಕಲಾಭವನದಲ್ಲಿ ಕಿಕ್ಕಿರಿದು ನೆರೆದಿದ್ದ ವಿಜ್ಞಾನಾಸಕ್ತರ ಸಮ್ಮುಖದಲ್ಲಿ ನೆರವೇರಿದ ಈ ಸಮಾರಂಭದ ಅಧ್ಯಕ್ಷತೆಯನ್ನು ಯುವ ಸಂಸತ್ ಸದಸ್ಯ, ಸ್ವತಃ ಕಂಪ್ಯೂಟರ್ ವಿಜ್ಞಾನಿ ಜನಾರ್ದನ ಸ್ವಾಮಿ ವಹಿಸಿದ್ದರು. ಪ್ರಾಸ್ತಾವಿಕ ಭಾಷಣದಲ್ಲಿ ಸ್ವಾಮಿ ಅವರು ವಿಜ್ಞಾನವನ್ನು ಮಾತೃ ಭಾಷೆಯಲ್ಲಿ ತಿಳಿಹೇಳುವುದರ ಮಹತ್ವವನ್ನು ವಿವರಿಸಿದರು. ಚಿತ್ರದುರ್ಗ ಸಮೀಪದ ಸಣ್ಣ ಹಳ್ಳಿಯಲ್ಲಿ ಕನ್ನಡ ಮಾಧ್ಯ್ಮಮದಲ್ಲೇ ಶಾಲೆ ಕಲಿತು, ನಂತರ ಮಾಧ್ಯಮದ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಉನ್ನತ ಶ್ರೇಣಿಯಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ ಪಡೆದ ತಮ್ಮ ಉದಾಹರಣೆಯ ಮೂಲಕ ಮಾತುಗಳನ್ನು ಆರಂಭಿಸಿದ ಜನಾರ್ದನ ಸ್ವಾಮಿಯವರು ದೇಶ ಕಟ್ಟುವ ಕೆಲಸಕ್ಕೆ ವಿದ್ಯಾವಂತ ಯುವಕರು ಸಜ್ಜಾಗಬೇಕು. ರಾಜಕೀಯದಿಂದ ದೂರವುಳಿದು ರಾಜಕೀಯದ ಅವ್ಯವಸ್ಥೆಗಳ ಬಗ್ಗೆ ಟೀಕೆ ಮಾಡುವುದರ ಬದಲು, ನೇರವಾಗಿ ರಂಗ ಪ್ರವೇಶಿಸಿ ಉತ್ತಮ ಆಡಳಿತ ಕೊಡುವ ಸಂಕಲ್ಪ ತೊಡಬೇಕು ಎಂದರು. ಪ್ರಶಸ್ತಿ ಪುರಸ್ಕೃತರಾದ ನಿಘಂಟು ತಜ್ಞ ಪ್ರೊ||ಜಿ.ವೆಂಕಟಸುಬ್ಬಯ್ಯ, ಗಣಿತ ಹಾಗೂ ಮಾಹಿತಿ ತಂತ್ರಜ್ಞಾನ ಪರಿಣತ ಪ್ರೊ||ಸಿ.ಎಸ್.ಯೋಗಾನಂದ ಹಾಗೂ ವಿಜ್ಞಾನಿ-ವಿಜ್ಞಾನ ಬರಹಗಾರ ಪ್ರೊ||ಹಾಲ್ದೊಡ್ಡೇರಿ ಸುಧೀಂದ್ರ ಅವರು ವಿಜ್ಞಾನ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಬೆಂಗಳೂರು ದೂರದರ್ಶನ ಕೇಂದ್ರದ ಉಪಮಹಾ ನಿರ್ದೇಶಕ ಡಾ||ಮಹೇಶ್ ಜೋಶಿಯವರು ಇದೇ ಸಂದರ್ಭದಲ್ಲಿ ಮಾತನಾಡಿ, ವಿಜ್ಞಾನ ಹಾಗೂ ಆಧ್ಯಾತ್ಮ ನಡುವಣ ಸಂಬಂಧ ಇಂದಿಗೂ ಕುತೂಹಲ ಹುಟ್ಟಿಸುವಂಥದ್ದು. ಒಂದನ್ನೊಂದು ದೂರೀಕರಿಸಿ ಚಿಂತನೆ ನಡೆಸಲು ಸಾಧ್ಯವಿಲ್ಲ. ವಿಜ್ಞಾನದ ಕೊನೆಯೊಂದಿಗೆ ಆಧ್ಯಾತ್ಮ ಆರಂಭವಾಗುತ್ತದೆ. ವಿಜ್ಞಾನವನ್ನು ಅಚ್ಚ ಕನ್ನಡದಲ್ಲಿ ಜನಸಾಮಾನ್ಯರನ್ನು ಮುಟ್ಟಿಸುತ್ತಿರುವ ಈ ಮಹನೀಯರ ಸಾಧನೆ ನಾವೆಲ್ಲರೂ ಹೆಮ್ಮೆ ಪಡುವಂಥ ವಿಷಯ. ವಿಜ್ಞಾನ ಪರಿಷತ್ತು ಇಂಥದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ತುತಾರ್ಹ ಎಂದರು.

ಕನ್ನಡದಲ್ಲಿ ವಿಜ್ಞಾನ ಪ್ರಸರಣೆಯ ಇತಿಹಾಸವನ್ನು ಮೆಲಕು ಹಾಕಿದ ಪ್ರೊ||ಜಿ.ವಿ. ಪಾರಿಭಾಷಿಕ ಪದಗಳ ಕೊರತೆಯಿಂದ ವಿಜ್ಞಾನ ಸಾಹಿತ್ಯ ಆರಂಭದಲ್ಲಿ ಅಷ್ಟು ಬೆಳೆಯಲಿಲ್ಲ. ಕಾಲಕ್ರಮೇಣ ವಿಜ್ಞಾನಿಗಳು ಕನ್ನಡದಲ್ಲಿ ಬರೆಯುವ ಉತ್ಸಾಹ ತೋರಿದ ಕಾರಣ, ಇಂದು ಕನ್ನಡದಲ್ಲಿ ಅತ್ಯುತ್ತಮ ವಿಜ್ಞಾನ ಪುಸ್ತಕಗಳು ಪ್ರಕಟವಾಗುತ್ತಿವೆ ಎಂದರು. ಮತ್ತೊಬ್ಬ ಪುರಸ್ಕೃತ ಪ್ರೊ||ಯೋಗಾನಂದ ಸತ್ಯೇಂದ್ರನಾಥ ಬೋಸ್ ಅವರ ಉಲ್ಲೇಖವನ್ನು ಪ್ರಸ್ತಾಪಿಸಿ ವಿಜ್ಞಾನಿಯೊಬ್ಬ ತನ್ನ ಮಾತೃಭಾಷೆಯಲ್ಲಿ ವಿಜ್ಞಾನವನ್ನು ಪ್ರಸ್ತುತ ಮಾಡಲು ಅಸಮರ್ಥನೆಂದರೆ ಆತನಿಗೆ ಆ ಭಾಷೆಯ ಜ್ಞಾನವಿಲ್ಲವೆಂದು ಅರ್ಥವಲ್ಲ. ಆತನಿಗೆ ವಿಜ್ಞಾನ ಅರ್ಥವಾಗಿಲ್ಲದಿರುವುದೇ ಮುಖ್ಯ ಕಾರಣ ಎಂದರು. ಕೊನೆಯಲ್ಲಿ ಮಾತನಾಡಿದ ಪ್ರೊ||ಸುಧೀಂದ್ರ ತಮ್ಮ ಬರಹಗಳಿಗೆ ತಂತ್ರಜ್ಞಾನದ ಆವಿಷ್ಕಾರಗಳು ಅದರಲ್ಲೂ ಕಂಪ್ಯೂಟರ್ -ಇಂಟರ್‌ನೆಟ್ ಹಾಗೂ ಮಾಧ್ಯಮಗಳ ಪ್ರೋತ್ಸಾಹವೇ ಕಾರಣವೆಂದರು.

ಸಭೆಯಲ್ಲಿ ಹಿರಿಯ ವಿಜ್ಞಾನಿಗಳಾದ ಡಾ||ಬಿ.ಬಿ.ಸುಬ್ಬರಾಯಪ್ಪ, ಡಾ||ಪಿ.ಆರ್.ವಿಶ್ವನಾಥ್, ಡಾ||ಪಿ.ಜೆ.ಭಟ್, ಸಿ.ಆರ್.ಸತ್ಯ ಸೇರಿದಂತೆ ಅನೇಕ ಡಿ.ಆರ್.ಡಿ.ಓ. ವಿಜ್ಞಾನಿಗಳು, ವಿಜ್ಞಾನ ಬರಹಗಾರ ಉದಯಶಂಕರ ಪುರಾಣಿಕ, ಕತೆಗಾರ ನಾಗರಾಜ ವಸ್ತಾರೆ, ಸಾಫ್ಟ್‍ವೇರ್ ತಂತ್ರಜ್ಞ-ಬರಹಗಾರ ಸತ್ಯೇಶ್, ರಂಗಕರ್ಮಿ ನೀಲಿ, ಪ್ರಾಧ್ಯಾಪಕ ಜಿ.ಅಶ್ವಥನಾರಾಯಣ, ಹೋಟೆಲ್ ಉದ್ಯಮಿ ಗೋಪಾಲಕೃಷ್ಣ ಸೋಮಯಾಜಿ, ಪ್ರಕಾಶ ಕೆ.ಎಸ್.ಮುರಳಿ, ಜೈನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಕನ್ನಡ ಗಣಕ ಪರಿಷತ್, ಕನ್ನಡ ಗೆಳೆಯರ ಬಳಗ,
ಕೇಂದ್ರೀಯ ಸದನ ಕನ್ನಡ ಸಂಘ, ಜಿ.ಟಿ.ಆರ್.ಇ. ಕನ್ನಡ ಸಂಘದ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ವರದಿ: ಪ.ರಾಮಚಂದ್ರ ಕತಾರ್

1 comments:

Anonymous said...

ಜನಾರ್ದನ ಸ್ವಾಮಿ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು. ಅವರ ಆಪ್ತ ಮಾತುಗಳು ಅವರು ಪ್ರೊಫೆಶನಲ್ ರಾಜಕಾರಣಿ ಅಲ್ಲವೆಂಬುದನ್ನು ಸಾಬೀತು ಪಡಿಸುತ್ತದೆ. ಚಿತ್ರದುರ್ಗ ಕ್ಷೇತ್ರಕ್ಕೆ ಅತ್ಯಲ್ಪ ಕಾಲದಲ್ಲಿ ನೀಡಿರುವ ಕೊಡುಗೆ ಅಚ್ಚರಿ ಹುಟ್ಟಿಸುತ್ತದೆ. ಡಿ.ಆರ್.ಡಿ.ಓ. ಇಸ್ರೋ, ಬಿ.ಎ.ಆರ್.ಸಿ. ಸಂಶೋಧನಾ ಕೇಂದ್ರಗಳು ಚಿತ್ರದುರ್ಗಕ್ಕೆ ಬರಲು ಜನಾರ್ದನ ಸ್ವಾಮಿ ಕಾರಣರಾಗಿದ್ದಾರೆ. ಭಾರತೀಯ ವಿಜ್ಞಾನ ಕೆಂದ್ರದ ಎರಡನೆಯ ಕ್ಯಾಂಪಸ್ ಕೂಡಾ ಚಿತ್ರದುರ್ಗದಲ್ಲಿ ಆರಂಭವಾಗಲಿದೆ. ಜನಾರ್ದನ ಸ್ವಾಮಿಯವರಿಗೆ ನಮ್ಮೆಲ್ಲರ ಅಭಿನಂದನೆಗಳು.

-ಶಿರೀಶ್,ಚಿತ್ರದುರ್ಗ

Post a Comment