ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ಸಂಪಾದಕೀಯ
ಘಟನೆ 1
ಇಡೀ ಕನ್ನಡ ಚಿತ್ರರಂಗವೇ ದು:ಖ ತಪ್ತವಾಗಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿ ವರ್ಗಗಳು ಜಮಾಯಿಸಿದ್ದಾರೆ. ಎಲ್ಲರ ಕಣ್ಣಲ್ಲೂ ಧಾರೆ ಧಾರೆ ಕಣ್ಣೀರು... ಆಕ್ರಂದನ... ಎಂದೂ ಕಂಡರಿಯದಷ್ಟು ಅಭಿಮಾನಿ ವರ್ಗ ಅಗಲಿದ "ಅಣ್ಣಾವ್ರಿಗೆ" ಕಂಬನಿ ಮಿಡಿಯುತ್ತಿರುವ ಸನ್ನಿವೇಶ. ಅದೆಲ್ಲಿಂದಲೋ ಬಂದ "ಸುದ್ದಿವಾಹಿನಿಯ" ವರದಿಗಾರರು ನೇರ ಅಗಲಿದ ನಾಯಕನ ಪತ್ನಿಯಲ್ಲೊಂದು ಪ್ರಶ್ನೆಯ ಬಾಣವನ್ನೇ ಎಸೆದರು "ನಿಮಗೇನನ್ನಿಸುತ್ತಿದೆ ಈಗ "...!!!

ಘಟನೆ 2
ನಿಡುಗಾಲ ಬೆಳ್ಳಿತೆರೆಯಲ್ಲಿ ಕನ್ನಡವನ್ನು ಮಿನುಗಿಸಿದ ಸಾಹಸಸಿಂಹ ವಿಷ್ಣುವರ್ಧನ್ ಅಗಲಿದ ದಿನ. ಕನ್ನಡ ಚಿತ್ರರಂಗವೂ ಸೇರಿದಂತೆ ಅಭಿಮಾನಿಗಳು ನೋವಿನಲ್ಲಿ ಮುಳುಗಿದ್ದರು. 24x7 ಸುದ್ದಿವಾಹಿನಿಯೊಂದರ ವರದಿಗಾರರು ಭಾರತೀ ವಿಷ್ಣುವರ್ಧನ್ ಅವರ ಮುಂದೆ ನಿಂತು "ಈ ಸಂದರ್ಭದಲ್ಲಿ ನಿಮಗೇನನ್ನಿಸುತ್ತದೆ" ಎಂಬ ಪ್ರಶ್ನೆಯನ್ನು ಕೇಳಿದರು...!!!

ಘಟನೆ 3
ಇಡೀ ದೇಶವೇ ಕಂಬನಿಯಿಟ್ಟಿದೆ. ಮುಂಜಾನೆಯೇ ಕೆಟ್ಟ ಘಟನೆಯೊಂದಕ್ಕೆ ಮಂಗಳೂರಿನ ವಿಮಾನ ನಿಲ್ದಾಣ ಸಾಕ್ಷಿಯಾಯಿತು. ಅದು ಘೋರ ವಿಮಾನ ದುರಂತ. 156ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದರು. ಜನತೆ ದಿಕ್ಕೆಟ್ಟು ಹೋಗಿದ್ದರು. ಎಲ್ಲರ ಮನೆ - ಮನದಲ್ಲಿ ದು:ಖ ಮಡುಗಟ್ಟಿತ್ತು. ಮುದ್ರಣ ಮಾಧ್ಯಮ, ಅಂತರ್ಜಾಲ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮದ ವರದಿಗಾರರು ಸ್ಥಳದಲ್ಲಿ ಜಮಾಯಿಸಿದ್ದರು. 24x7 ಸುದ್ದಿವಾಹಿನಿಯಲ್ಲಂತೂ ನಿರಂತರ ನೇರ ಪ್ರಸಾರಗಳು. ಆಂಗ್ಲ, ಕನ್ನಡ, ಹಿಂದಿ, ಮಲೆಯಾಳಂ ಹೀಗೆ ಎಲ್ಲಾ ಭಾಷೆಯ ವಾಹಿನಿಗಳಿಗಂತೂ "ದೊಡ್ಡ ಸುದ್ದಿ ಸಿಕ್ಕಿತಲ್ಲ" ಎಂಬ ಒಂದು ಸಮಾಧಾನ!. ಆ ರೀತಿಯಲ್ಲಿ ಸುದ್ದಿ ವಾಹಿನಿಗಳ ಮುಖ್ಯಸ್ಥರು ಪ್ಯಾನಲ್ ನಲ್ಲಿ ಕೂತು "ಘಟನೆ ಹೀಗೇ ಆಯಿತು " ಎನ್ನುವಂತಹ ರೀತಿಯಲ್ಲಿ ತಮ್ಮದೇ ಆದ "ನಿರ್ಣಯ"ಗಳನ್ನು ಮಂಡಿಸುತ್ತಿದ್ದರು.!!!. ಒಂದೊಂದು ವಾಹಿನಿಯಲ್ಲೂ ಒಂದೊಂದು ಬಗೆಯಂತೆ ಬಾಯಿಗೆ ಬಂದಂತಹ ರೀತಿಯಲ್ಲಿ "ಲೆಕ್ಕಾಚಾರ"ಗಳನ್ನು ನೀಡಿ ವೀಕ್ಷಕರನ್ನೇ ಗೊಂದಲಕ್ಕೀಡು ಮಾಡಿತು. ಆಸ್ಪತ್ರೆಯ ಬೆಡ್ ಮೇಲೆ ನರಳಾಡುತ್ತಿದ್ದ ಗಾಯಾಳುಗಳ ಮುಖಕ್ಕೆ ಮೈಕ್ ಹಿಡಿದು "ತಾನೇನೋ ಘನಕಾರ್ಯ ಮಾಡಿದೆ " ಎಂಬಂತೆ ಫೋಸ್ ನೀಡಿಕೊಂಡರು ಮಾಧ್ಯಮದ ವರದಿಗಾರರು. ಈ ಘಟನೆ ನಡೆದು ಇನ್ನೂ ಹೆಚ್ಚು ಸಮಯ ಕಳೆದಿಲ್ಲ...

ಘಟನೆ 4
ಮುಂಬೈ ಉಗ್ರರ ಧಾಳಿ ಪ್ರಕರಣ. ಘಟನೆ ನಡೆದು ಸಮಯ ಸಂದು ಹೋದರೂ, ಅಂದು ಅಲ್ಲಿದ್ದ ಮಾಧ್ಯಮಗಳ ಅವಸರದ ಕಾರ್ಯಾಚರಣೆಯಿಂದಾದ ಅನಾಹುತಗಳು ಇನ್ನೂ ಜನತೆಯ ಮನದಿಂದ ಮಾಸಿಲ್ಲ. ಕಾರಣ ಮಾಧ್ಯಮಗಳ "ಲೈವ್ " ರಿಪೋರ್ಟಿಂಗ್ ಟ್ರೆಂಡ್. ಮಾಧ್ಯಮಗಳ ಈ ರೀತಿಯ ಪೈಪೋಟಿಯಿಂದಾಗಿ ಉಗ್ರನಿಗ್ರಹ ಕಾರ್ಯಾಚರಣೆಗೆ ನಿಜವಾಗಿಯೂ ತೊಡಕಾಯಿತು. ಅಲ್ಲಿನ ಸುದ್ದಿವಾಹಿನಿಗಳ ಮಾಧ್ಯಮ ವರದಿಗಾರರು ಉಗ್ರರು "ಹೀಗೇ ಹೋಗಿದ್ದಾರೆ ಎಂದು ತಾವೇ "ನಟನೆ" ಮಾಡಿ ತೋರಿಸಿದ ಪರಿಯಂತೂ ಅಸಹ್ಯ ಹುಟ್ಟಿಸುವಂತಿತ್ತು.

ಘಟನೆ 5
ಕನ್ನಡದ ಸುದ್ದಿ ವಾಹಿನಿಯೊಂದರ ಪ್ಯಾನಲ್ ಡಿಸ್ ಕರ್ಶನ್. ಅಲ್ಲಿ ವಿವಿಧ ಪಕ್ಷಗಳ ರಾಜಕೀಯ ಪ್ರಮುಖರ ಸಮಾಗಮ. ಸುದ್ದಿವಾಹಿನಿಯ ಮುಖ್ಯಸ್ಥರು, ಸಂದರ್ಶನಕಾರರ ಮೊನಚು, ಕೆಣಕು ನುಡಿಗಳು. ಘಟನೆಯ ನೇರ ಪ್ರಸಾರ. ಪ್ರಮುಖ ರಾಷ್ಟ್ರೀಯ ಪಕ್ಷವೊಂದರ ನಾಯಕರೋರ್ವರ ಮಾತುಗಳಂತೂ ಅವರ "ಸಂಸ್ಕಾರ"ಕ್ಕೆ ಹಿಡಿದ ಕೈಗನ್ನಡಿ ಎಂಬಂತಿತ್ತು. ಉತ್ತಮ ಸಮಾಜ ನಿರ್ಮಿಸಲು ನೆರವಾಗಬೇಕಾಗಿದ್ದ ಮಾಧ್ಯಮಗಳು ಸಹಸ್ರಾರು ವೀಕ್ಷಕರಿಗೆ ಪ್ರಸಾರ ಮಾಡಿದ ಪರಿ ಇದು.

ಘಟನೆ 6
ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವ ರಿಯಾಲಿಟಿ ಶೋ ಎಂಬ "ಕಂಟಕ". ಮುಗ್ಧಮಕ್ಕಳನ್ನು ವೇದಿಕೆಯಲ್ಲಿ "ನಿಜಾರ್ಥದಲ್ಲಿ ಅವಮಾನಿಸುವ " ವ್ಯವಸ್ಥಿತ ಸಂಚು. ಇದಕ್ಕೆ ಹೆತ್ತವರ ಪ್ರೋತ್ಸಾಹ. ವ್ಹಾವ್...! ಪೂರ್ವಜನ್ಮಗಳ ಅನಾವರಣವೆಂಬ ನಾಟಕ. ಇಲಿ ಹೋದಲ್ಲಿ ಹುಲಿ ಹೋಯಿತು ಎಂಬಂತೆ ವೈಭವೀಕರಿಸುವ "ರಹಸ್ಯ"ಬಹಿರಂಗಗಳು!!!. ಅನಾರೋಗ್ಯ ಪೀಡಿತರನ್ನು ಕ್ಯಾಮರಾ ಮುಂದೆ ಕೂರಿಸಿ ಅಳುವ ತಾರೆಯರು...ಅತ್ತರೆ ಟಿ.ವಿ ಚಾನಲ್ ಗೆ ಒಂದಷ್ಟು ಟಿ.ಆರ್.ಪಿ ಸಿಗುತ್ತೆ ಎಂದು ತೆರೆಮರೆಯಲ್ಲಿ ಹೇಳಿಕೊಳ್ಳುವ ಇವರು ವೀಕ್ಷಕರನ್ನು ಮೂರ್ಖರನ್ನಾಗಿಸುವುದಲ್ಲದೆ ಮತ್ತೇನು...?

ಘಟನೆ 7
"ಎಸ್ಕ್ಲೂಸಿವ್" ಎಂಬ ಮಹಾನ್ವೇಷಣೆ!!!. ಕನ್ನಡದ ಇಪ್ಪತ್ತನಾಲ್ಕು ಗಂಟೆಗಳ ಸುದ್ದಿವಾಹಿನಿಯನ್ನೊಮ್ಮೆ ಟ್ಯೂನ್ ಮಾಡಿನೋಡಿ. ತಕ್ಷಣಕ್ಕೆ ಕಣ್ಣಿಗೆ ರಾಚಿಸುವಂತೆ ಕಾಣುತ್ತದೆ "ಎಸ್ಕ್ಲೂಸಿವ್" ! "ಎಸ್ಕ್ಲೂಸಿವ್"!! ಎಂಬ ಫ್ಲ್ಯಾಷ್.ಅದೇ ಸಂದರ್ಭದಲ್ಲಿ ಮತ್ತೊಂದು ಕನ್ನಡ ಚಾನೆಲ್ ಟ್ಯೂನ್ ಮಾಡಿ ಅದೇ ಸುದ್ದಿಯನ್ನು ಅದೇ ರೀತಿ "ಎಸ್ಕ್ಲೂಸಿವ್" ಎಂಬ ಶೀರ್ಷಿಕೆಯಡಿ ಆ ವಾಹಿನಿಯೂ ಭಿತ್ತರಿಸುತ್ತಿರುತ್ತವೆ!. ಅಂದರೆ "ಎಸ್ಕ್ಲೂಸಿವ್"
ಮಹಾನ್ವೇಷಣೆಗೆ ಬೆಲೆ ಎಲ್ಲಿದೆ!!?. ಇತ್ತೀಚಿನ ಒಂದು ಘಟನೆ ನೋಡಿ... ರಾಜಧಾನಿ ಬೆಂಗಳೂರು ನಗರದಲ್ಲಿ ನಡೆದ ಘಟನೆ. ಕಾಗೆಯೊಂದು ಮರದಲ್ಲಿದ್ದ ಸಣ್ಣ ದಾರವೊಂದಕ್ಕೆ ಸಿಕ್ಕಿ ಹಾಕಿಕೊಂಡಿತ್ತು. ಇತ್ತೀಚೆಗೆ ಆರಂಭಗೊಂಡ ಆಂಗ್ಲ ಸುದ್ದಿವಾಹಿನಿಯೊಂದರಲ್ಲಿ ಇದು "ಲೈವ್ ನ್ಯೂಸ್" ಆಗಿ ಪ್ರಸಾರಗೊಂಡಿತು. ಅದಕ್ಕೆ ಪಿ.ಟಿ.ಸಿ.ಯನ್ನೂ ಕೊಡಲಾಗಿತ್ತು. ಇಂದಿನ ಮಾಧ್ಯಮದ ಓಘ ಎತ್ತ ಸಾಗುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿ.

ಘಟನೆ 8
ಇತ್ತೀಚೆಗೆ ಕನ್ನಡದ ಸುದ್ದಿವಾಹಿನಿ ಭಿತ್ತರಿಸಿದ "ಬೆಂಕಿಯಾಹುತಿ" ಘಟನೆಯ ವರದಿ ಹೀಗಿತ್ತು.
ನ್ಯೂಸ್ ರೀಡರ್: .... ಅವರೇ ಈಗ ಪರಿಸ್ಥಿತಿ ಹೇಗಿದೆ...?
ವರದಿಗಾರ: ಈಗ ಪರಿಸ್ಥಿತಿ ಸಹಜಸ್ಥಿತಿಯಲ್ಲಿದೆ. ಇನ್ನೂ ಹೆಚ್ಚು ಬೆಂಕಿ ಹತ್ತುವ ಲಕ್ಷಣವಿದೆ. ಆಗ ಮಾಹಿತಿನೀಡುತ್ತೇನೆ.
ಅಂದರೆ "ಬೆಂಕಿ" ಜೋರಾಗಿ ಹತ್ತಿದಲ್ಲಿ ಅದು ಸುದ್ದಿಯಾಗುತ್ತದೆ ಆ ವರದಿಗಾರನಿಗೆ. ಆದರೆ ಬೆಂಕಿ ಆನಾಹುತದಿಂದ ಅಲ್ಲಾಗುತ್ತಿರುವ ನಷ್ಟ, ಅದರಿಂದಾಗುತ್ತಿರುವ ತೊಂದರೆ, ಆ ಘಟನೆಯಿಂದ ನೊಂದುಕೊಂಡ ಮನಸ್ಸಿನ ಬಗೆಗೆ ಆ ವರದಿಗಾರನಿಗೆ ಯಾವುದೇ ಕಾಳಜಿಯೇ ಇಲ್ಲ!!

ಘಟನೆ 9
ಮನದಿಂದ ಮಾಸದ ಎನ್ ಕೌಂಟರ್ ಘಟನೆಯೊಂದು ಮುದ್ರಣ ಮಾಧ್ಯಮದಲ್ಲಿ ಸುದ್ದಿಯಾಗಿತ್ತು. ಸುದ್ದಿಯಾಗಬೇಕಾದದ್ದೇ. ಕಾರಣ ಅದೊಂದು ಪ್ರಮುಖ ಘಟನೆ. ಎನ್ ಕೌಂಟರ್ ನಲ್ಲಿ ಕುಖ್ಯಾತ ರೌಡಿ ಸಾವನ್ನಪ್ಪಿದ್ದ. ಘಟನೆ ನಡೆದದ್ದು ರಾತ್ರಿ 11ರ ಸುಮಾರು. ಪೋಲೀಸರ ಈ ಕಾರ್ಯ ಶ್ಲಾಘನಾರ್ಹ. ಆದರೆ ಪ್ರಶ್ನೆ ಅದಲ್ಲ. ಅದು ಇತರ ವರದಿಗಾರರಿಗೆ ಗೊತ್ತಾಗಿಲ್ಲ.ಮರುದಿನ ಕೇವಲ ಒಂದೇ ಒಂದು ದಿನಪತ್ರಿಕೆ ಆ ಘಟನೆಯನ್ನು ಚಿತ್ರಸಮೇತ ವರದಿಮಾಡಿತ್ತು. ಪೊಲೀಸರೇ ಈ ಮಾಹಿತಿಯನ್ನು ಪ್ರಮುಖ ಪತ್ರಿಕೆಯ ವರದಿಗಾರರಿಗೆ ನೀಡಿದ್ದರೇ...? ಆ ಸಂದರ್ಭದಲ್ಲಿ ಅಲ್ಲಿ ಆ ವರದಿಗಾರ ಪ್ರತ್ಯಕ್ಷನಾಗಿದ್ದು ಹೇಗೆ...?

ಘಟನೆ 10
ಪಬ್ ದಾಳಿಯೂ ಸೇರಿದಂತೆ ಇನ್ನೂ ಅನೇಕ ವೇಳೆ ಪೊಲೀಸರಿಗೆ ಮಾಹಿತಿ ದೊರಕುವ ಮೊದಲೇ ಮಾಧ್ಯಮದವರು ಘಟನಾ ಸ್ಥಳದಲ್ಲಿದ್ದು ಘಟನೆಗಳ ನೇರ ಪ್ರಸಾರ ಮಾಡಿದ ಸಂಗತಿ ಎಲ್ಲರಿಗೂ ಗೊತ್ತಿರುವ ಸತ್ಯ. ಈ ರೀತಿ ಘಟನೆ ನಡೆಯುತ್ತದೆ ಎಂಬ ಮಾಹಿತಿ ಮಾಧ್ಯಮದವರಿಗೆ ಮೊದಲೇ ನೀಡಿ ಘಟನೆ ನಡೆಸುವ ಅನೇಕ ಸಂಘಟನೆಗಳು ಇಂದು ತಲೆಯೆತ್ತಿವೆ. ಇದಕ್ಕೆ ಮಾಧ್ಯಮಗಳ ಕೃಪಾಕಟಾಕ್ಷವೂ ದೊರಕುತ್ತಿದೆ!!!.
ಹೇಗಿದೆ ಇಂದಿನ ಮಾಧ್ಯಮ ನೀತಿ ರೀತಿ!!!

ಮೇಲಿನ ಹತ್ತು ಘಟನೆಗಳು ಮೇಲ್ನೋಟಕ್ಕೆ ಸಾಮಾನ್ಯವೇ. ಹೌದು. ಆದರೆ ಘಟನೆಯಲ್ಲಿರುವ ಸೂಕ್ಷ್ಮಗಳನ್ನು , ಒಳಾರ್ಥಗಳನ್ನು ನೋಡುವ ಕಣ್ಣು ಇರಬೇಕು. ಆಗ ಈ ಘಟನೆಗಳು ಎಷ್ಟರ ಮಟ್ಟಿಗೆ ಆಘಾತವನ್ನೊದಗಿಸುತ್ತವೆ ಎಂಬುದನ್ನು ಅರ್ಥೈಸಬಹುದಾಗಿದೆ. ಪತ್ರಿಕಾ ರಂಗ ಪ್ರಸ್ತುತ "ಪತ್ರಿಕೋದ್ಯಮ"ವಾಗಿ ಮಾರ್ಪಾಡಾಗಿದೆ. ಜೊತೆ ಜೊತೆಗೆ ತನ್ನ ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ. ಸಂವಿಧಾನದ ನಾಲ್ಕನೇ ಅಂಗವಾಗಿ ಇರುವ ಪತ್ರಿಕೋದ್ಯಮ ಇಂದು ತನ್ನ ಜವಾಬ್ದಾರಿಯನ್ನು ಅಕ್ಷರಶಃ ಮರೆತಿದೆ. ಇದನ್ನು ಎಚ್ಚರಿಸುವ , ಒಂದು ಸಮರ್ಥ ಮಂಡಳಿ ಅತ್ಯವಶ್ಯಕ. ಮಾಧ್ಯಮ ನಿಯಂತ್ರಣ ಮಂಡಳಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.
"ಮಾಧ್ಯಮಗಳು ವಿಶೇಷವಾಗಿ ಇಂಗ್ಲಿಷ್ ಪತ್ರಿಕೆಗಳು ಮತ್ತು ಟೆಲಿವಿಜನ್ ಈ ದೇಶದಲ್ಲಿ ಹಿಂದೂ ಸಮಾಜದ ವಿರೋಧಿಗಳಾಗಿ ಪರಿವರ್ತನೆಗೊಂಡಿವೆ. ಹಿಂದೂ ಧರ್ಮ ಸಂಸ್ಕೃತಿಯನ್ನು ಗೇಲಿ ಮಾಡುವುದೇ ಈ ಮಾಧ್ಯಮಗಳ ಉದ್ದೇಶವಾಗಿದೆ. ಸ್ವಾತಂತ್ರ್ಯದ ಪ್ರಾರಂಭದಿಂದಲೂ ಇಂಗ್ಲಿಷ್ ಪತ್ರಿಕೆಗಳು ಕಮ್ಯೂನಿಸ್ಟ್ ಬುದ್ಧಿಜೀವಿಗಳ ಹಿಡಿತದಲ್ಲಿದ್ದು ಅವು ನೆಹರು ಪರವಾಗಿ ಜನಾಭಿಪ್ರಾಯವನ್ನು ರೂಪಿಸುವಲ್ಲಿ ವಿಶಿಷ್ಟಪಾತ್ರ ನಿರ್ವಹಿಸಿದೆ. ಇಂಗ್ಲಿಷ್ ಪತ್ರಿಕೆಗಳು ಕಮ್ಯೂನಿಸ್ಟ್ರ ಪ್ರಚಾರ ಸಾಧನಗಳಾಗಿ ನೆಹರೂ ಹೊಗಳಿಕೆಗೆ ಮೀಸಲಾಗಿದ್ದವು. " ಇದು ಗೋಪಾಲರಾವ್ ಹೇಜೀಬ್ ತಮ್ಮ ಲೇಖನವೊಂದರಲ್ಲಿ ಹೇಳಿಕೊಂಡ ಮಾತುಗಳು.
ಅವರ ಪ್ರಕಾರ ಭಾರತೀಯ ಪತ್ರಕರ್ತರಲ್ಲಿ ವೃತ್ತಿಪರತೆಯ ಲಕ್ಷಣವೇ ಇಲ್ಲ. ಪರಿಣಾಮವಾಗಿ ವಸ್ತುನಿಷ್ಠತೆ ಕೂಡಾ ಕಾಣುತ್ತಿಲ್ಲ. ಸ್ವಾತಂತ್ರ್ಯಪೂರ್ವದ ಬ್ರಿಟಿಷ್ ಮತ್ತು ಸ್ವಾತಂತ್ರ್ಯಾನಂತರದ ನೆಹರೂ ಪ್ರಭಾವ ಇಂದಿನ ಪತ್ರಿಕೋದ್ಯಮದಲ್ಲಿ ನಿಚ್ಚಳವಾಗಿ ಕಾಣುತ್ತಿದೆ ಎಂದೆನ್ನುತ್ತಾರೆ.
ಹಿರಿಯ ಪತ್ರಕರ್ತ ಡಾ.ಕೆ.ಎಸ್.ನಾರಾಯಣಾಚಾರ್ಯರು ಒಂದೆಡೆ ಹೇಳುತ್ತಾರೆ "ಪತ್ರಿಕಾರಂಗವಿರಲಿ, ವಿದ್ಯುನ್ಮಾನ ಮಾಧ್ಯಮವಿರಲಿ, ನೈಜಕ್ಕೆ ವಿರುದ್ಧವಾಗಿ ಹೋಗುತ್ತಿರುವುದು ವೃತ್ತಿಯಾಗಿಬಿಟ್ಟಿದೆ. ದೇಶಕ್ಕಿಂತ ವ್ಯಕ್ತಿಗೆ ಪ್ರಾಮುಖ್ಯಕೊಟ್ಟರೆ ಅಪಾಯಗಳು ಸಂಭವಿಸುತ್ತವೆ." ಇದು ಇಂದಿನ ಮಾಧ್ಯಮರಂಗದಲ್ಲಿ ನಾವು ಕಾಣುತ್ತಿರುವ ಸತ್ಯ.
ಹಿರಿಯ ಪತ್ರಕರ್ತ, ಸಂಪಾದಕರಾಗಿ ಅನುಭವ ಹೊಂದಿದ ಎಮ್.ಡಿ.ನಲಪತ್ ಒಂದೆಡೆ ಹೀಗೆ ಅಭಿಪ್ರಾಯ ಪಡುತ್ತಾರೆ. "ಮಾಧ್ಯಮಗಳಿಗೆ ಬಹುಸಂಖ್ಯಾತರ ಶ್ರದ್ಧೆಯನ್ನು ಹೀನೈಸುವ ಬೈಗಳು ಉದ್ರೇಕಕಾರಿಯಾಗುವುದಿಲ್ಲ. ಅದಕ್ಕೆ ಕೆಲವೊಮ್ಮೆ ವ್ಯಕ್ತವಾಗುವ ಪ್ರತಿಕ್ರಿಯೆಗಳು ಉದ್ರೇಕಕಾರಿಯಾಗುತ್ತವೆ" ಎಂಬುದಾಗಿ.
ಮಾಧ್ಯಮ ಚಿಂತಕ ಉಮೇಶ ಉಪಾಧ್ಯಾಯರು ಲೇಖನವೊಂದರಲ್ಲಿ ಹೀಗೆಂದಿದ್ದಾರೆ. " ಮಾಧ್ಯಮಗಳ ಪ್ರಮುಖ ಭಾಗ ಸಕ್ರಿಯ ಅಲ್ಪಸಂಖ್ಯಾತರ ಪರವಾಗಿದೆ. ಮಾಧ್ಯಮ ಮತ್ತು ಬಹುಸಂಖ್ಯಾತ ಜನಾಂಗದ ನಡುವೆ ವಿಶ್ವಾಸದ ಕೊರತೆ ಏರ್ಪಡಲು ಇಷ್ಟೇ ಸಾಕಾಗುತ್ತದೆ"
ಈ ಎಲ್ಲಾ ಹಿರಿಯರ ಮಾತುಗಳು, ಘಟನೆಗಳು ಮಾಧ್ಯಮ ಕ್ಷೇತ್ರ ಇಂದು ಎತ್ತ ಸಾಗುತ್ತಿದೆ;? ಮಾಧ್ಯಮಗಳ ದೃಷ್ಟಿಕೋನ ಯಾವದಿಕ್ಕಿನತ್ತ ಮುಖಮಾಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. 400ವರ್ಷಗಳ ಐತಿಹಾಸಿಕ ದಸರಾ ಉತ್ಸವಕ್ಕೆ ಪ್ರಾಮುಖ್ಯತೆ ನೀಡಲು ಮಾಧ್ಯಮಗಳು ವಿಫಲವಾಗಿದೆ. ಬದಲಾಗಿ ಪಕ್ಷಗಳ ಮೇಲಾಟದ ಸುದ್ದಿಯೇ ಇಂದು ಪ್ರಮುಖವಾಗಿದೆ. ತೇಜೋವಧೆ ಮಾಡುವ , ಮಾನ ಹರಾಜು ಹಾಕುವ ಸುದ್ದಿಗಳು, "ಪೇಯ್ಡ್ "ನ್ಯೂಸ್ ಹಾವಳಿಗಳು ಇಂದು ಮಾಧ್ಯಮಗಳಲ್ಲಿ ಲೀಲಾಜಾಲವಾಗಿ ಸಾಗುತ್ತಿದೆ. "ರಾಜಕೀಯ"ಕ್ಕಿಂತ ಹೊಲಸು ರಾಜಕೀಯಗಳು ಮಾಧ್ಯಮ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಸಾಗುತ್ತಿವೆ. ಇವಕ್ಕೆಲ್ಲ ಕಡಿವಾಣ ಹಾಕುವ ಕಾರ್ಯ ಅಗತ್ಯ ನಡೆಯಬೇಕಾಗಿದೆ. ಪತ್ರಿಕೋದ್ಯಮವಾಗಿ ಮಾಪರ್ಾಡಾದ "ಪತ್ರಿಕಾ ರಂಗ" ಮತ್ತೆ ನೈಜತೆಯತ್ತ ಮುಖಮಾಡಬೇಕಾಗಿದೆ. ಮಾಧ್ಯಮಗಳು, ಪರ್ತಕರ್ತರು ಇಂದು ಸುದ್ದಿಯ ಸೃಷ್ಟಿಕರ್ತರಾಗುತ್ತಿದ್ದಾರೆ. ಇದು ತಪ್ಪು. ಬದಲಾಗಿ ನೈಜ ಸುದ್ದಿಯನ್ನು ಸಮಾಜಕ್ಕೆ ನೀಡುವ ವಾಹಕವಾಗಿ ಕೆಲಸ ಮಾಡಬೇಕಾಗಿದೆ. ಸಮಾಜದ ಕಾವಲು ನಾಯಿ ಎಂದೇ ಗುರುತಿಸಲ್ಪಟ್ಟ ಮಾಧ್ಯಮ ತಮ್ಮ ಕರ್ತವ್ಯವನ್ನು ಎಂದಿಗೂ ಮರೆಯಬಾರದು.

ಹರೀಶ್ ಕೆ.ಆದೂರು
ಸಂಪಾದಕ

2 comments:

pramodc said...

ಘಟನೆ ಹನ್ನೊ೦ದು/ಇನ್ನೊ೦ದು.
ಉತ್ತಮ ಸಮಾಜಕಾಗಿ ಇರುವ ವಾಹಿನಿ ಪೋಲಿಯೋ ಹನಿಯಿ೦ದ ಐದು ಮಕ್ಕಳನ್ನು ತನ್ನ ಬ್ರೇಕಿ೦ಗ್ ನ್ಯೂಸ್ ಅಲ್ಲಿ ಸುಮ್ಮನೆ ಸಾಯಿಸಿ ಹೆತ್ತವರನ್ನು ಈ ಪ್ರೋಗ್ರಾಮ್ ಗೆ ಹೋಗದ೦ತೆ ಮಾಡಿದ್ದು. ಯಾವ ಸೀಮೆಯ ಉತ್ತಮ ಸಮಾಜದ ಜವಬ್ದಾರಿ ಇದು?

ತೇಜಸ್ವಿನಿ ಹೆಗಡೆ said...

ಉತ್ತಮ ಲೇಖನ. ಸಕಾಲಿಕವಾಗಿದೆ.

Post a Comment