ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಋಷ್ಯಶೃಂಗ ಮುನಿಗಳು ಯಾವುದಾದರೂ ಊರಿಗೆ ಹೋಗಿ ಆತಿಥ್ಯ ಸ್ವೀಕರಿಸಿದರೆಂದರೆ ಆ ಊರಿನಲ್ಲಿ ಮಳೆ ಬರುತ್ತಿತ್ತು.
80ರ ದಶಕದಲ್ಲಿ ನಾನು ಆಂಧ್ರದಲ್ಲಿದ್ದೆ. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ರಾಜಕಾರಣಿಗಳನ್ನು ವಿಡಂಬಿಸಿ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದೆ. ಅದೇ ಸಂದರ್ಭದಲ್ಲಿ ಹೊರನಾಡ ಕನ್ನಡಿಗರ ನಿಯೋಗವೊಂದನ್ನು ಕರೆದುಕೊಂಡು ಅಂದಿನ ನಮ್ಮ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ, ಸಚಿವ ಎಂ.ಪಿ. ಪ್ರಕಾಶ್ ಮೊದಲಾದವರನ್ನು ಪ್ರತ್ಯೇಕವಾಗಿ ಭೆಟ್ಟಿಯಾಗಿ ಹೊರನಾಡ ಕನ್ನಡಿಗರಿಗೆ ಮೆಡಿಕಲ್ ಮತ್ತು ಎಂಜಿನೀರಿಂಗ್ ಶಿಕ್ಷಣದಲ್ಲಿ ಮೀಸಲಾತಿ, ಹೊರನಾಡಿನ ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು, ಹೊರನಾಡಿನ ಸಂಘಸಂಸ್ಥೆಗಳಿಗೆ ಆರ್ಥಿಕ ನೆರವು ಮುಂತಾದ ಬೇಡಿಕೆಗಳನ್ನು ಇಟ್ಟೆ(ವು). ಸುದೀರ್ಘ ಯತ್ನದ ನಂತರ ಬೇಡಿಕೆಗಳು ಈಡೇರಿದವು. ಅದೇ ಸಮಯದಲ್ಲಿ ನನಗೆ ಭಾರತ ಸರಕಾರದ ಘೋಷಣಾಸ್ಪರ್ಧೆಯೊಂದರಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಪುರಸ್ಕಾರ ಲಭ್ಯವಾಗಿತ್ತು. ಈ ಎಲ್ಲ 'ಸಾಧನೆ'ಗಳನ್ನು ಪರಿಗಣಿಸಿ ನನಗೊಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭ ಚೆನ್ನಾಗಿ ನಡೆಯಿತು. ಅದೇ ದಿನ ರಾಮಕೃಷ್ಣ ಹೆಗ್ಡೆಯವರ ಸರಕಾರ ಪದಚ್ಯುತಿ ಹೊಂದಿತು.
1997ನೇ ಇಸವಿ. ನಾನು ಉತ್ತರ ಕರ್ನಾಟಕದಲ್ಲಿದ್ದೆ. 'ಸಂಯುಕ್ತ ಕನರ್ಾಟಕ' ದಿನಪತ್ರಿಕೆಯಲ್ಲಿ ಸುದೀರ್ಘಕಾಲ ನಾನು ಬರೆದಿದ್ದ 'ಅಧಿಕಪ್ರಸಂಗ' ರಾಜಕೀಯ ವಿಡಂಬನಾ ಅಂಕಣ ಉತ್ತರ ಕರ್ನಾಟಕದಲ್ಲಾಗ ಮನೆಮಾತಾಗಿತ್ತು. ಹಾಗಾಗಿ ನನಗಲ್ಲಿ ಅಭಿಮಾನಿಗಳು ಸತ್ಕಾರಕೂಟವೊಂದನ್ನು ಇಟ್ಟುಕೊಂಡರು. ನನಗೆ ಗುಜರಾತ್ ಗೆ ವರ್ಗವಾಗಲಿದ್ದುದರಿಂದ ಅದು ಬೀಳ್ಕೊಡುಗೆಯ ಕೂಟವೂ ಆಗಿತ್ತು. ಆ ಸಮಾರಂಭದಲ್ಲಿ ನಾನು ಎಂದಿನ ನನ್ನ ಹರಿತ ಶೈಲಿಯಲ್ಲಿ ರಾಜಕಾರಣಿಗಳ ಜನ್ಮ ಜಾಲಾಡಿದೆ. ಸಮಾರಂಭ ಮುಗಿಸಿ ಮನೆಗೆ ಬಂದು ಮಲಗಿದೆ. ಮರುದಿನ ದೇವೇಗೌಡರು ಪ್ರಧಾನಿ ಪದವಿ ಕಳೆದುಕೊಂಡರು.

ಆರೇಳು ವರ್ಷಗಳ ಕೆಳಗೊಂದು ದಿನ ನನ್ನನ್ನು ದೆಹಲಿಯ ಸಮಾರಂಭವೊಂದಕ್ಕೆ ಒತ್ತಾಯಪೂರ್ವಕವಾಗಿ ಒಪ್ಪಿಸಲಾಯಿತು. ದೆಹಲಿಯಲ್ಲಿ ಕೆಲ ತಿಂಗಳುಗಳ ಬಳಿಕ ನಡೆಯಲಿದ್ದ ಕನ್ನಡ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲು ನಾನು ಒಪ್ಪಿಕೊಂಡೆ. ಅದೇ ಸಮ್ಮೇಳನದಲ್ಲಿ ನನಗೆ ಸನ್ಮಾನವನ್ನೂ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ಮಂತ್ರಿಯೊಬ್ಬರು ಅಂದು ನನ್ನೊಡನೆ ವೇದಿಕೆ ಹಂಚಿಕೊಳ್ಳಬೇಕಿತ್ತು. ಅವರ ಬಗ್ಗೆ ಮತ್ತು ಆ ದಿನಗಳ ರಾಜ್ಯಾಡಳಿತದ ಬಗ್ಗೆ ನಾನು ಪತ್ರಿಕೆಗಳಲ್ಲಿ, 'ವಿಜಯ ಕರ್ನಾಟಕ' ದಿನಪತ್ರಿಕೆಯ 'ಕಂಡದ್ದು ಕಾಣದ್ದು' ಶಿರೋನಾಮೆಯ ನನ್ನ ಅಂಕಣದಲ್ಲಿ ಸಾಕಷ್ಟು ಲೇವಡಿ ಮಾಡಿದ್ದೆ. ಅಂದು ದೆಹಲಿಯ ಸಮಾರಂಭಕ್ಕೆ ಆ ಮಹನೀಯರು ಬರಲೇ ಇಲ್ಲ. ಅವರು ಬರದಿದ್ದುದು ನನ್ನನ್ನು ಎದುರಿಸಲಾರದೇ ಅಲ್ಲ, ಯಾವ ಮುಹೂರ್ತದಲ್ಲಿ ನನ್ನ ಉಪಸ್ಥಿತಿಯ ಆ ಸಮಾರಂಭಕ್ಕೆ ಆಗಮಿಸಲು ಅವರು ಒಪ್ಪಿದರೋ, ಅನತಿ ದಿನಗಳಲ್ಲಿ ಅವರ ಮಂತ್ರಿ ಪದವಿಯೇ ಹೊರಟುಹೋಗಿತ್ತು.


2006ರ ಜನವರಿ 27. ಬೀದರದಲ್ಲಿ 72ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ. ಉದ್ಘಾಟಿಸಬೇಕಿದ್ದವರು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರು. ಉದ್ಘಾಟನಾ ಸಮಾರಂಭದ ನಿರೂಪಕ ನಾನು. ಪತ್ರಿಕಾ ಬರಹಗಳಲ್ಲಿ ಮತ್ತು ಅಂಕಣಗಳಲ್ಲಿ ಅದಾಗಲೇ ನಾನು ಧರ್ಮಸಿಂಗರನ್ನು ಸಾಕಷ್ಟು ತೊಳೆದಿದ್ದೆ. ಬೀದರದಲ್ಲಿ ಅಂದು ಅವರೂ ನಾನೂ ಮುಖಾಮುಖಿಯಾಗಲಿದ್ದೆವು. ಆದರೆ ಧರ್ಮಸಿಂಗ್ ಅವರು ಸಮಾರಂಭಕ್ಕೆ ಬರಲೇ ಇಲ್ಲ. ಏಕೆಂದರೆ, ಅದೇ ದಿನ ರಾಜಧಾನಿಯಲ್ಲಿ ಅವರ ಸರಕಾರದ ಭವಿಷ್ಯ ನಿರ್ಧಾರವಾಗುತ್ತಿತ್ತು. ಮರುದಿನ ಅವರ ಸರಕಾರ ಬಿದ್ದುಹೋಯಿತು.

ಈಚೆಗಷ್ಟೇ 'ಕನ್ನಡ ಸಾಹಿತ್ಯ ಪರಿಷತ್ತು' ನನಗೆ 2009ನೇ ಸಾಲಿನ 'ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ' ನೀಡಿ ಸನ್ಮಾನಿಸಿತು. ಇದೇ ಅಕ್ಟೋಬರ್ 12ನೇ ತಾರೀಖು ದಾವಣಗೆರೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು. ಅದೇ ದಿನ ರಾಜ್ಯ ಸರಕಾರದ ಸ್ಥಿತಿ ಡೋಲಾಯಮಾನವಾಗಿದ್ದುದು ನಿಮಗೆಲ್ಲ ಗೊತ್ತು.
ಋಷ್ಯಶೃಂಗ ಮುನಿಗಳು ಯಾವುದಾದರೂ ಊರಿಗೆ ಹೋಗಿ ಆತಿಥ್ಯ ಸ್ವೀಕರಿಸಿದರೆಂದರೆ ಆ ಊರಿನಲ್ಲಿ ಮಳೆ ಬರುತ್ತಿತ್ತು. ಆನಂದರಾಮ ಶಾಸ್ತ್ರಿ ವೇದಿಕೆ ಏರಿ ಸನ್ಮಾನ ಸ್ವೀಕರಿಸಿದರೆ ಯಾವನಾದರೂ ರಾಜಕಾರಣಿಯ ಪದಚ್ಯುತಿಯಾಗುತ್ತದೆ ಅಥವಾ ಸರಕಾರವೇ ಬಿದ್ದುಹೋಗುತ್ತದೆ, ಇಲ್ಲವೇ, ಸರಕಾರವನ್ನು ಬೀಳಿಸಲಿಚ್ಛಿಸುವ ವಿರೋಧಿಗಳ ಆಶಾಸೌಧ ಕುಸಿಯುತ್ತದೆ.


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment