ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:20 PM

ಇವರು ಮಹಾಗುರು...

Posted by ekanasu

ವಿಶೇಷ ವರದಿ

1.12 ಲಕ್ಷ ಜನರಿಗೆ ಸ..ರಿ..ಗ..ಮ..ಕಲಿಸಿದ `ಮಹಾಗುರು'
ಉಡುಪಿ ವಾಸುದೇವ ಭಟ್ಟರ ದೇಹಕ್ಕೆ ಎಪ್ಪತ್ಮೂರು ; ಕಂಠಕ್ಕೆ ಇಪ್ಪತ್ಮೂರು!

ಉಡುಪಿ : ಒಂದಲ್ಲಾ ಎರೆಡಲ್ಲಾ.. ಬರೋಬ್ಬರಿ ಲಕ್ಷದ ಪಕ್ಕಾಲೆಕ್ಕಾ! `ಒಂದು ಲಕ್ಷ ಹನ್ನೆರಡು ಸಾವಿರ'ವಿದ್ಯಾರ್ಥಿಗಳಿಗೆ ಸಾ... ..ರೀ..ಗಾ..ಮಾ..ಹೇಳಿ ಕೊಡೋದು ಅಂದ್ರೆ ಅದೇನು ಹುಡುಗಾಟನಾ? ಹೌದು.. ಇದು ಹುಡುಗಾಟವಲ್ಲಾ ಸತ್ಯ ಎಂದು ನಿರೂಪಿಸಿದ್ದಾರೆ `ಉಡುಪಿ ವಾಸುದೇವ ಭಟ್'ಇದುವರಗೆ ಒಂದು ಲಕ್ಷ ಹನ್ನೆರಡು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಭಟ್ಟರ ಶಿಷ್ಯರಾಗಿದ್ದಾರೆ. ಇವರೆಲ್ಲಾ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲಾವಿದರಿದ್ದಾರೆ. ಅಷ್ಟೆಲ್ಲಾ ಯಾಕೆ ಭಟ್ಟರ ಶಿಷ್ಯರಲ್ಲಿ ಕರ್ನಾಟಕ ಸಂಗೀತ ಕಲಿತ ಮುಸ್ಲೀಂ ವಿದ್ಯಾರ್ಥಿಗಳಿದ್ದಾರೆ. ಸ್ವರ ಆಲಾಪನೆ ಪಾಠ ಹೇಳಿಸಿಕೊಂಡ ಚರ್ಚ್ `ಫಾದರ್' ಬರುತ್ತಾರೆ. ಇವರದ್ದು ಧರ್ಮ, ಜಾತಿ, ಪಂಗಡ ಮತ್ತು ಜನಾಂಗ ಮೀರಿದ ಸಂಗೀತ. `ನಾದವೈಭವಂ' ವಾಸುದೇವ ಭಟ್ಟರೆಂದು ಅಡ್ಡ ಹೆಸರಲ್ಲಿ ಗುರುತಿಕೊಂಡ ಇವರು ಸಂಗೀತ ಕ್ಷೇತ್ರದ `ಮಾಹಾಗುರು' ಇಷ್ಟೊಂದು ಶಿಷ್ಯರನ್ನು ಹೊಂದಿದ ಮತ್ತೊಬ್ಬ `ಮಾಸ್ಟ್ರು' ಸಿಗಲಿಕಿಲ್ಲ.

ಸಾರಿಗೆ ಅಧಿಕಾರಿ ಇವರ ಮುಂದೆ ಮಂಡಿಯೂರಿ ಗುರುಗಳೇ `ಸಲಾಂ' ಎಂದಿದ್ದಾರೆ. ಜಿಲ್ಲಾಧಿಕಾರಿ ಗತ್ತುಗೈರತ್ತು ಬಿಟ್ಟು ವಿನಯವಾಗಿ ಚಾಪೆ ಮೇಲೆ ಕುಳಿತು ಸಂಗೀತ ಪಾಠ ಹೇಳಿಸಿಕೊಂಡಿದ್ದಾರೆ. ಉನ್ನತ ಸ್ಥಾನದಲ್ಲಿರುವ ಹೆಚ್ಚಿನವರು ಭಟ್ಟರ ಗುರುಕುಲದ ಕದ ತಟ್ಟಿದ್ದಾರೆ. ಇಷ್ಟೊಂದು ಶಿಷ್ಯರಿಗೆ ಪಾಠ ,ಮಾಡಿದರೂ ಭಟ್ಟರಲ್ಲಿ ಇನ್ನೂ ಸಂಗೀತದ ನಿನಾದ ತುನಿಯುತ್ತದೆ. ಇವರ ದೇಹಕ್ಕೆ ಎಪ್ಪತ್ಮೂರಾಗಿರಬಹುದು. ಇವರ ಕಂಠಟಕ್ಕೆ ಇಪ್ಪತ್ಮೂರರ ಜವ್ವನ. ವೇದಿಕೆಯೇರಿ ಗಂಟೆ ಗಟ್ಟಲೇ ಹಾಡುತ್ತಾರೆ. ಶಿಷ್ಯಂದಿರಿಗೆ ಚಕ್ಲಮಕ್ಲಹಾಕಿ ದಿನವಿಡೀ ಕುಳಿತು ಪಾಠ ಮಾಡುತ್ತಾರೆ. ಆದರೂ ಇವರಿಗೆ ಸಂಗೀತದ ದಾಹ ತಣಿದಿಲ್ಲ. ತಣಿಯೋದು ಅಲ್ಲಾ.

ಪರಿಚಯ ಏನೂ ಅಂದ್ರೆ : ಮೈಸೂರು ದಿ. ಅನಂತಸ್ವಾಮಿ ಮತ್ತು ದಿ. ಸಿ. ಅಶ್ವಥ್ ಸುಗಮ ಸಂಗೀತವನ್ನು ಜನಪ್ರಿಯಗೊಳಿಸಿದ, ಜೊತೆಗೆ ಮನೆಮನೆಗೆ ತಲುಪಿಸುವ ಕೆಲಸ ಮಾಡಿದರೋ ಹಾಗೆ ವಾಸುದೇವ ಭಟ್ಟರು `ದಾಸ ಸಾಹಿತ್ಯ'ವನ್ನು ಮನೆ ಮನೆ ಮುಟ್ಟಿಸಿದರು.ತಾವೇ ಸಂಗೀತ ಸಂಯೋಜಿಸಿ ದಾಸ ಸಾಹಿತ್ಯಕ್ಕೆ ಹೊಸ `ಟಚ್' ಕೊಟ್ಟರು. ವಾಸುದೇವ ಭಟ್ಟರ 73 ವರ್ಷಗಳ ಹಿಂದೆ ಉಡುಪಿಯಲ್ಲಿ ಜನಿಸಿದರು. ಖ್ಯಾತ ಪರ್ತಕರ್ತ ಉಡುಪಿ ವಿ.ಎಸ್.ಭಟ್ ಇವರ ತಂದೆ. ರಮಾ ತಾಯಿ. ತಂದೆಯಿಂದ ಭಟ್ಟರಿಗೆ ಪರ್ತಕರ್ತ `ಗೆಟಪ್' ಬಂದರೆ, ತಾಯಿಯ ಭಜನಾಲಯ ಇವರನ್ನು ಮಹಾಗುರುವಾಗಿ ರೂಪಿಸಿದೆ.
ಅಪ್ರತಿಮ ಪಿಟೀಲು ವಾದಕ ಪಿಟೀಲು ವೈಧ್ಯನಾಥನ್ ಭಟ್ಟರ ಅಜ್ಜ, ಜೊತೆಗೆ ಗುರು. ಒಂಬತ್ತರ ಎಳೆವೆಯಲ್ಲೇ ಭಟ್ಟರನ್ನು ಸಂಗೀತಕ್ಕೆ ಕೂರಿಸಿದ ವೈದ್ಯನಾಥನ್ ಹನ್ನೆರಡನೇ ವಯಸ್ಸಿಗೆ ಕಚೇರಿ ಕೊಡುವಷ್ಟು ಮಟ್ಟಕ್ಕೆ ವೊಮ್ಮಗನನ್ನು ಬೆಳೆಸಿದ್ದರು. ಅಜ್ಜನ ನಿರೀಕ್ಷೆ ಹುಸಿ ಮಾಡದ ವೊಮ್ಮಗ ಉಡುಪಿ ಮಾಧ್ವ ಮಂಟಪದಲ್ಲಿ `ಪ್ರೋಗ್ರಾಮ್' ಕೊಟ್ಟು ಸಂಗೀತಾಭಿಮಾನಿಗಳ ಮತ್ತು ಅಜ್ಜನ ಮೆಚ್ಚುಗೆಗಳಿಸಿದರು. ಅಲ್ಲಿಂದ ಇಲ್ಲ್ಲಿಯವರಗೆ ಭಟ್ಟರ ಮುಂದಡಿಯಿಟ್ಟರೇ ವಿನಃ ಹೊರಳಿ ನೋಡಲಿಲ್ಲ. ಸಂಗೀತ ಕ್ಷೇತ್ರದ ಹಾಡುಗಾರಿಕೆ ವಾದ್ಯ ಎಲ್ಲದರಲ್ಲೂ ಭಟ್ಟರು ಕೈ ಆಡಿಸಿ ಸೈ ಎನಿಸಿಕೊಂಡರು.
ಪ್ರಸಕ್ತ ಚಲನ ಚಿತ್ರದಲ್ಲಿ ದೊಡ್ಡ ಹೆಸರು ಮಾಡಿದ ಸಾಧು ಕೋಕಿಲ, ಮನೋಹರ್, ಶಂಕರ್ ಶ್ಯಾನುಭೋಗ್, ಮಣಿಪಾಲು ಅರುಣ ಕುಮಾರಿ, ಸುಗಮ ಸಂಗೀತದ ಕೆದಲಾಯ ಮುಂತಾದ ಘಟಾನುಗಟಿಗಳು ಭಟ್ಟರ ಗರಡಿಯಲ್ಲಿ ಪಳಗಿದ್ದಾರೆ. ಭಟ್ಟರ ಯಶೋಗಾಥೆ ಇಷ್ಟಕ್ಕೆ ಮುಗಿಯೋದಿಲ್ಲ. ಕನ್ನಡ ಚಲನಚಿತ್ರ ಊರ್ವಸಿ ಮತ್ತು ಜಂಗಲ್ ಗರ್ಲ್ ತಮಿಳು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದರು. ಏಸುಕ್ರೈಸ್ತನ ಕುರುತಾದ `ಭುವನಜ್ಯೋತಿ' ಚಿತ್ರಕ್ಕೆ ಇವರು `ಆಲ್ರೌಂಡರ್' ಸಂಗೀತ, ಸಾಹಿತ್ಯ ನಿರ್ದೇಶನ ಹೀಗೆ ಸಾಗುತ್ತದೆ ಪಟ್ಟಿ. ಮನೋಹರ್ ಮತ್ತು ಸಾಧು ಕೋಕಿಲ ಕೂಡಾ ಈ ಸಿನಿಮಾದಲ್ಲಿ ಮುಖ ತೋರಿಸಿದ್ದರು ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ.

ಇವರದ್ದು ಜಾತಿ ಮೀರಿದ ಸಂಗೀತ : ಒಂದು ಕಾಲವಿತ್ತು ಶಾಲೆಗಳಿಗೆ ಸಂಗೀತ ಕಡ್ಡಾಯ ಅನ್ನೋದು. ಹಾಗಾಗಿ ಭಟ್ಟರಿಗೆ ವಾರದಲ್ಲಿ ಮೂರು ಶಾಲೆ ಸಂಗೀತ ಮಾಸ್ಟರ್ `ಗೆಟಪ್ಪೂ' ಮೂಲ್ಕಿ ಫೆಡಲಲ್ ಹೈಸ್ಕೂಲ್. ಕಿನ್ನಗೋಳಿ ಲಿಟ್ಲ್ ಫವರ್ ಪ್ರೌಢಶಾಲೆ ಮತ್ತು ಕುಲಶೇಖರದ ಸ್ಯಾಂಕ್ರೇಟ್ಹೈಸ್ಕೂಲ್ನಲ್ಲಿ ಸಂಗೀತ ಬೋಧಕರಾಗಿ ದುಡಿದಿದ್ದಾರೆ.
ಎನ್ಸಿಸಿ, ಎನ್ಎಸ್ಸೆಸ್ ಕ್ಯಾಂಪ್ಗಳಲ್ಲಿ ಭಟ್ಟರಿಗೆ `ಸ್ಪೆಷಲ್' ಆಮಂತ್ರಣ. ಚರ್ಚ್ ನಡೆಯುವ ಪ್ರಾರ್ಥನೆಗೂ ಭಟ್ಟರ ಸಂಗೀತದ ಗುಂಗಿದೆ. ಕ್ರೈಸ್ತರು ಮಾಡುವ ಪ್ರಾರ್ಥನೆಯನ್ನು ಕರ್ನಾಟಕ ಸಂಗೀತದಲ್ಲಿ ಹೇಳಿಕೊಟ್ಟ ಹೆಗ್ಗಳಿಕೆ ಭಟ್ಟರಿಗೆ ಸಲ್ಲುತ್ತದೆ.
ಆಶ್ರಫ್ ಮತ್ತು ಸೈಯ್ಯದ್ ಎಂಬವರು ಭಟ್ಟರಲ್ಲಿ ಸರಿಗಮ ಕಲಿತಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಹೇಮಲತಾ ಪಿ.ವಾಸುದೇವ ಭಟ್ಟರಲ್ಲಿ ತಂಬೂರಿ ಮೀಟುತ್ತಾ ಸುಶ್ರಾವ್ಯವಾಗಿ ಹಾಡೋದನ್ನ ಕಲಿತಿದ್ದಾರೆ. ಸಾರಿಗೆ ಅಧಿಕಾರಿ ಓಂಕಾರೇಶ್ವರಿ ವೀಣೆ ಮೀಟೋದನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಹತ್ತಿರ ಸಂಗೀತ ಕಲಿತವರ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು `ಮೆಗಾ ಸೀರಿಯಲ್' ಆಗುತ್ತೆ.
ಇಷ್ಟಕ್ಕೆ ಮುಗೀಲಿಲ್ಲ ಭಟ್ಟರ ಪರಾಕ್ರಮ : ಭಟ್ಟರ ಪರಾಕ್ರಮ ಇಷ್ಟಕ್ಕೆ ಮುಗಿಯೋದಿಲ್ಲ. `ಸಂಯಕ್ತ ಕರ್ನಾಟಕ' ಮತ್ತು `ಹೊಸದಿಂಗಂತ'ದಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ದಾಸ ಸಾಹಿತ್ಯದ ಬಗ್ಗೆ ಪುಸ್ತಕ ಬರೆದಿದ್ದಾರೆ. ಸುಮಾರು ನೂರಕ್ಕೂ ಮಿಕ್ಕ ಸಿಡಿ, ಧ್ವನಿ ಸುರುಳಿ ಹೊರಗೆ ಬಂದಿದೆ. ಆಡು ಮುಟ್ಟದ ಸೊಪ್ಪಿಲ್ಲ ಅಂತಾರಲ್ಲಾ ಹಾಗೆ ಭಟ್ಟರು ಕೈಯ್ಯಾಡಿಸದ ಕೆ್ಷೇತ್ರವೇಯಿಲ್ಲ.
ಉಡುಪಿಯಲ್ಲಿ ಭಟ್ಟರು `ನಾದವೈಭವಂ' ಎಂಬ ಸಂಸ್ಥೆ ಹುಟ್ಟುಹಾಕಿದ್ದಾರೆ. ಅದರೆ ಪ್ರಾಯವವೀಗ ಇಪ್ಪತ್ಮೂರು ಭಟ್ಟರಿಗೆ ಮಾತ್ರ ಎಪ್ಪತ್ಮೂರು!
ಇಷ್ಟಲ್ಲಾ ಅದರೂ ಭಟ್ಟರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಸಂಗೀತ ಥೆರಪಿ ಶುರುಹಚ್ಚಿಕೊಂಡಿದ್ದಾರೆ. ಯಾವ ಯಾವ ರಾಗ ರೋಗಿಯ ಮೇಲೆ ಪರಿಣಾಮ ಬೀರುತ್ತದೆ. ಸಂಗೀತ ಅನಾರೋಗ್ಯ ಪೀಡಿತರ ಮೇಲೆ ಯಾವ ಪರಿಣಾಮ ಉಂಟುಮಾಡುತ್ತದೆ ಎಂಬ ಅನ್ವೇಷಣೆಯ ದಾರಿ ಹಿಡಿದಿದ್ದಾರೆ. ಭಟ್ಟರ ಜೊತೆ ಯಾರಾದರೂ ಕೈಜೋಡಿಸಿದರೆ ನಾದ ಥೆರಪಿ ಆದಷ್ಟು ಬೇಗ ಅನಾರೋಗ್ಯ ಪೀಡಿತರ ನೆರೆವಿಗೆ ಬರಲಿದೆ.
ಒಟ್ಟಾರೆ ಭಟ್ಟರು ಕ್ರಿಯಾಶೀಲರು. ಇಳಿ ವಯಸ್ಸಿನಲ್ಲೂ ಉತ್ಸಾಹದ ಬುಗ್ಗೆಯ ಹಾಗಿರುವ ಭಟ್ಟರನ್ನು ಸರಕಾರ ಗುರುತಿಸದಿರುವುದು ದುಃಖದ ಸಂಗತಿ. ವಾಸುದೇವಭಟ್ಟರಿಗೂ ಅವರ ಸಂಗೀತಕ್ಕೂ ಜೈ.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment