ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:02 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 3


`ನಿಮ್ಮ ಕಥೆಗಳಿಗೆ ಪ್ರೇರಣೆಯೇನು? ಸಹಜ ಘಟನೆಗಳೆ ಇಲ್ಲ, ನಿಮ್ಮ ಊಹನೆಯೆ?' ಸಂದರ್ಶನದ ಪ್ರಶ್ನೆ.
`ನನ್ನ ಕಥೆಯ ಪಾತ್ರಗಳು ಕೇವಲ ಕಾಲ್ಪನಿಕ. ದಿನಪತ್ರಿಕೆಗಳು, ನಿಯತಕಾಲಿಕಗಳು, ಕಥಾಸಂಕಲನಗಳು, ಕಾದಂಬರಿಗಳ ನಿರಂತರ ಓದು ನನಗೆ ಹೊಸ ಹೊಸ ಕಲ್ಪನೆಗಳನ್ನು ನೀಡುತ್ತದೆ'
ಸಂದರ್ಶನವ ಓದಿದ ಬಳಿಕ ದೀರ್ಘ ಆಲೋಚನೆಗೊಳಗಾದ ಸ್ವಾತಿ ಮತ್ತೆ ಕಂಪ್ಯೂಟರ್ನ ಪರದೆಯನ್ನು ತೆರೆದಳು. ಅವನ ಕಥೆಗಳು ಕಲ್ಪನೆಯದ್ದದ್ದಾಗಿದ್ದರೆ ಅವನೇ ನಿರ್ಮಿಸಿದ ಪಾತ್ರಗಳು ಅವನನ್ನು ಕೊಲ್ಲುವುದಕ್ಕೆ ಸಾಧ್ಯವೇ? ಅವನು ಬರೆದ ಕಥೆ, ಕಾದಂಬರಿಗಳನ್ನು ಓದಬೇಕೆನಿಸಿತು.
ತಟ್ಟನೆ ತಲೆಗೆ ಹೊಳೆದದ್ದು ಅದು. ಪತ್ತೇದಾರಿ ಕಥೆಗಾರನ ಮೇಲೆಯೆ ತಾನು ಲೇಖನ ಸಿದ್ಧಪಡಿಸಿದರೆ ಹೇಗೆ? ಮುಂದಿನ ಸಾಪ್ತಾಹಿಕಕ್ಕೆ ಕೊಡಬೇಕಿರುವ ಲೇಖನವು ಆಗಬಹುದು. ಕಥೆಗಾರ ನಿರ್ಮಿಸಿದ ಪಾತ್ರಗಳನ್ನು ತಿಳಿದುಕೊಂಡ ಹಾಗೂ ಆಗುತ್ತದೆ. ಆ ರೀತಿ ಕಲ್ಪನೆ ಹೊಳೆದಿದ್ದೆ ಸಂಜೆ ಕೆಲಸ ಮುಗಿಸಿ ನಗರದ ಪ್ರತಿಷ್ಟಿತ ಪುಸ್ತಕಾಲಯಕ್ಕೆ ನಡೆದಳು. ಜೇಮ್ಸ್ ಬರೆದಿರುವ ಹತ್ತು ಹದಿನೆಂಟು ಪುಸ್ತಕಗಳನ್ನು ಖರೀದಿಸಿದಳು. ಹಿಂದೆ ಕೆಲವೊಂದು ಕಾದಂಬರಿಗಳನ್ನು ಓದಿದ ನೆನಪಿತ್ತು. ಒಂದೊಂದೆ ಕಾದಂಬರಿಯ ಕಥೆಯನ್ನು ನೆನಪಿಸಿಕೊಂಡಳು. ಯಾವ ಪಾತ್ರಗಳು ಕಥೆಗಾರನನ್ನೇ ಕೊಲೆ ಮಾಡುವಂತೆ ಕಾಣಿಸಲಿಲ್ಲ. ಆದರೂ ಕುತೂಹಲ ಅವಳನ್ನು ಬಿಡಲಿಲ್ಲ. ಪ್ರತಿಯೊಂದು ಕಾದಂಬರಿಯನ್ನೂ ಇನ್ನೊಂದು ಬಾರಿ ಓದಿ, ತಿಳಿದುಕೊಳ್ಳಬೇಕೆನ್ನುವ ಹಠ ಅವಳಲ್ಲಿತ್ತು.
ರಾತ್ರಿ ಕಪ್ಪಗಿನ ಬೆಡ್ಶೀಟನ್ನು ಹಾಸಿ ಮಲಗಿಕೊಂಡಿತ್ತು. ಸಾಧಾರಣ ಆ ಪ್ರದೇಶದಲ್ಲಿ ವಿದ್ಯುತ್ ಕಂಬಗಳಲ್ಲಿ ಬಿಟ್ಟು ಬೇರೆಲ್ಲೂ ದೀಪಗಳು ಕಾಣಿಸಲಿಲ್ಲ. ಅವಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಂತೆ ಓದುತ್ತಾ ಕುಳಿತಿದ್ದಳು. ಉಸಿರು ಬಿಗಿ ಹಿಡಿದು... ಕಾದಂಬರಿಯ ಶೀರ್ಷಿಕೆಯೂ ಹಾಗಿತ್ತು.
ಒಂದು ಪರಿಪೂರ್ಣ ಕೊಲೆ!
ಸರಿ ಸುಮಾರು ಹನ್ನೊಂದು ಗಂಟೆಯ ಸಮಯ. ಬಾರ್ನ ಕೌಂಟರ್ ಮುಚ್ಚುವ ಹೊತ್ತು. ಹೊರಗೆ ಬಂದ ಶ್ರೀಮಂತ ಪರಿಶಿತ್ ರಸ್ತೆಯ ಗಲ್ಲಿಯಲ್ಲಿ ತಿರುಗಿ, ದೂರಕ್ಕೆ ನಿಲ್ಲಿಸಿದ ತನ್ನ ಕಾರಿನತ್ತ ಹೆಜ್ಜೆ ಹಾಕಬೇಕ್ಕೆನ್ನುವಷ್ಟರಲ್ಲಿ ಎಲ್ಲಿಂದಲೋ ಹಾರಿ ಬಂದ ಮೂರು ಗುಂಡುಗಳು ಅವನ ಪ್ರಾಣವನ್ನೇ ಅಪಹರಿಸಿದ್ದವು. ಆದರೆ ಸ್ವಾರಸ್ಯವಾಗಿರುವುದು ಅದಲ್ಲ. ಕುಸಿದು ಬಿದ್ದ ಶ್ರೀಮಂತನ ಮೈ ಮೇಲೆ ಬೆಲೆಬಾಳುವ ವಸ್ತುಗಳೆಲ್ಲಾ ಹಾಗೆ ಇವೆ. ಅದಲ್ಲದೆ ಗುಂಡು ಬಿದ್ದ ದೇಹದಿಂದ ಒಂದು ಹನಿ ರಕ್ತವೂ ಹರಿದಿಲ್ಲ!
ಅವನು ಒಳ್ಳೆಯ ವ್ಯಕ್ತಿ! ತಾನಾಯಿತು ತನ್ನ ಕೆಲಸವಾಯಿತು ಅನ್ನುವ ಹಾಗೆ. ಮುಖದಲ್ಲಿ ವಯಸ್ಸಿಗೂ ಮೀರಿದ ಗಂಭೀರತೆ, ಇನ್ನೊಬ್ಬರ ಮೇಲಿರುವ ಕಾಳಜಿ, ಬಡವರ ಮೇಲೆ ಅನುಕಂಪ ಜೊತೆಗೆ ಸಹಾಯಹಸ್ತ. ಇಷ್ಟಿದ್ದೂ ಆ ವ್ಯಕ್ತಿ ಕೊಲೆಯಾಗಿದ್ದು ಹೇಗೆ? ಕೊಲೆ ಮಾಡಿದವರು ಯಾರು? ಗುಂಡು ಹಾರಿದ್ದರೂ ಮೈಮೇಲೆ ಗಾಯಗಳೇಕಿಲ್ಲ?... ಕಥೆ ಹೀಗೆ ಮುಂದುವರಿದಿತ್ತು. ಉಸಿರು ಬಿಗಿ ಹಿಡಿದೇ ಓದಿ ಮುಗಿಸಿದ ಸ್ವಾತಿ ಒಂದು ಟಿಪ್ಪಣಿಯನ್ನು ಬರೆದು ಇಟ್ಟಳು. ಪರಿಶಿತ್ನಂತಹ ಒಳ್ಳೆಯ ಪಾತ್ರ ಕೊಲೆಯಾಗಿದ್ದು ಓದುಗರಲ್ಲಿ ಅನುಕಂಪ ಗಿಟ್ಟಿಸುವಂತಿತ್ತು.
ಆ ದಿನ ಕಛೇರಿಗೆ ರಜೆ ಹಾಕಿ ಉಳಿದ ಪುಸ್ತಕಗಳನ್ನು ಓದಬೇಕೆಂದು ನಿರ್ಧರಿಸಿದ್ದಳು. ದಿನ ಪತ್ರಿಕೆಯಲ್ಲಿ ಪತ್ತೇದಾರಿ ಕಥೆಗಾರನ ಸಾವಿನ ಸುದ್ದಿ ಅಚ್ಚಾಗಿತ್ತು. ಒಮ್ಮೆ ಅದರ ಮೇಲೆ ಕಣ್ಣಾಡಿಸಿದವಳು ಅವನ ವೈಯಕ್ತಿಕ ವಿಷಯವೇನಾದರೂ ಬರೆದಿದೆಯೇ ಎಂದು ಗ್ರಹಿಸಿದಳು. ಎಲ್ಲೂ ಕಾಣಿಸಲಿಲ್ಲ.

... ನಾಳೆಗೆ

- ಅನುಬೆಳ್ಳೆ.

0 comments:

Post a Comment