ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಗ್ರಲೇಖನ

ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಟ ನೈತಿಕ ಪ್ರಜ್ಞೆ ಇಲ್ಲವೇ.. ಈ ಪ್ರಶ್ನೆ ಖಂಡಿತವಾಗಿಯೂ ಮಂಗಳವಾರ (ಅಕ್ಟೋಬರ್ 19) ಸುದ್ದಿವಾಹಿನಿಗಳನ್ನು ನೋಡಿದ ರಾಜ್ಯದ ಮಂದಿಗೆಲ್ಲಾ ಮೂಡುವುದರಲ್ಲಿ ಸಂದೇಹವೇ ಇಲ್ಲ.
ಅದು ರಾತ್ರಿ 9ರ ಸುಮಾರಿಗೆ ಪ್ರಮುಖ ಸುದ್ದಿವಾಹಿನಿಗಳು ಭಿತ್ತರ ಮಾಡಿದ ವಿಡಿಯೋ ಕ್ಲಿಪ್ಪಿಂಗ್ , ನೇರ ವರದಿಗಳನ್ನು ನೋಡಿದ ಪ್ರಜ್ಞಾವಂತ ಜನತೆಯೆದುರು ಆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರೇನಾದರೂ ಇದ್ದಿದ್ದೇ ಆದಲ್ಲಿ ಕ್ಯಾಕರಿಸಿ ಉಗಿದೇ ಬಿಡುತ್ತಿದ್ದರೇನೋ...!
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಜಯಗಳಿಸಿದವರೋರ್ವರು ಏಕಾಏಕಿಯಾಗಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣ ಕಾಂಗ್ರೆಸ್ ಮುಖಂಡರಿಗೆ ಆವೇಶ ಬಂದುಬಿಟ್ಟಿದೆ. ತಕ್ಷಣ ತಮ್ಮ "ವ್ಯಕ್ತಿತ್ವ"ವನ್ನೂ ಮರೆತು "ರಾಜಕೀಯವೆಂದರೇ ಹೀಗೆ " ಎಂಬಂತೆ ಮೈಮೇಲೆ ದೆವ್ವ ಬಂದಂತೆ ಆಡತೊಡಗಿದರು. ರಾಜ್ಯದ ಮುಖ್ಯಮಂತ್ರಿಗಳ ಮನೆಯೆದರು ಜಮಾಯಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ನೈತಿಕ ಪ್ರಜ್ಞೆಯನ್ನು ಮರೆತು ಮಾತನಾಡಿದ್ದಾರೆ. "ಮುಖ್ಯಮಂತ್ರಿ" ಎಂಬ ಸ್ಥಾನಕ್ಕೆ ಕನಿಷ್ಠ ಗೌರವ ಕೊಡುವುದಕ್ಕೂ "ಕಾಂಗ್ರೆಸ್ " ಪಕ್ಷಕ್ಕೆ ಸಾಧ್ಯವಾಗಿಲ್ಲ. "ಮುಖ್ಯಮಂತ್ರಿಗಳನ್ನು " ಏಕವಚನದಲ್ಲಿ ಕೂಗಿದ ಕಾಂಗ್ರೆಸ್ ಮುಖಂಡರು ತಮ್ಮ ವ್ಯಕ್ತಿತ್ವ ಏನು ಎಂಬುದನ್ನು ಜನತೆಯೆದುರು ತೋರಿಸಿಕೊಂಡಿದ್ದಾರೆ."ಮುಖ್ಯಮಂತ್ರಿ ಹುದ್ದೆ "ಎಂಬುದು ಒಂದು ಗೌರವದ ಹುದ್ದೆ. ಅಲ್ಲಿ ಯಾರೇ ಕೂತಿರಲಿ ಆ ಸ್ಥಾನಕ್ಕೆ ಆ ಕ್ಷಣದಲ್ಲಿ ಗೌರವ ಕೊಡಬೇಕು. ಅದು ವ್ಯಕ್ತಿಗೆ ಕೊಡುವ ಗೌರವ ಅಲ್ಲ; ಬದಲಾಗಿ ಆ ಸ್ಥಾನಕ್ಕೆ ಆ ಹುದ್ದೆಗೆ ದೊರಕುವ ಮಯರ್ಾದೆ. ಈ ಒಂದು ಮೂಲ ಜ್ಞಾನವೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನ ಮುಖಂಡರಿಗೆ ಗೊತ್ತಿಲ್ಲವೇ...?
"ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನಿಗೆ ಧಿಕ್ಕಾರ "...., "ಕಳ್ಳ , ಸುಳ್ಳ ಬಿಜೆಪಿ ಸರಕಾರ".... , "ಕಳ್ಳ ಮುಖ್ಯಮಂತ್ರಿ ..." ಈ ರೀತಿಯ ಮಾತುಗಳನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ನೇತಾರರು ಮಾಧ್ಯಮದೆದುರು ಹೇಳಿಕೊಂಡಿದ್ದಾರೆ, ಘೋಷಣೆ ಕೂಗಿ ಜಗಜ್ಜಾಹೀರು ಮಾಡಿದ್ದಾರೆ. ಅಂದರೆ ಇಲ್ಲಿ ಮುಖ್ಯಮಂತ್ರಿಗಳನ್ನು "ಏಕವಚನ"ದಲ್ಲಿ ಕರೆದಂತಾಗಿದೆ. "ಸರಕಾರ"ವನ್ನು ಕಳ್ಳ ಸುಳ್ಳ ಎಂದು ಹೀಯಾಳಿಸಿದಂತಾಯಿತು. ವಾಸ್ತವಕ್ಕೆ ಕಾಂಗ್ರೆಸ್ ಪಕ್ಷದವರು ಆಡಳಿತ ಪಕ್ಷವಾದ ಬಿಜೆಪಿಯನ್ನು , ಬಿ.ಜೆ.ಪಿ ಪಕ್ಷದ ಲೋಪ ದೋಷಗಳನ್ನು ಎತ್ತಿ ಹೇಳಬಹುದಿತ್ತು. ಆದರೆ ಬದಲಾಗಿ ಬಿಜೆಪಿ ಪಕ್ಷದಿಂದ ಆರಿಸಿ ಬಂದು ಮುಖ್ಯಮಂತ್ರಿ ಹುದ್ದೆಯನ್ನಲಂಕರಿಸಿದ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಸಿಟ್ಟನ್ನು ನೇರವಾಗಿ "ಮುಖ್ಯಮಂತ್ರಿ" ಹುದ್ದೆಯ ಮೇಲೆ ತೀರಿಸಿಕೊಂಡಂತಾಗಿದೆ. ಆಡಳಿತ ಪಕ್ಷದ ಮೇಲಿನ ಸಿಟ್ಟನ್ನು "ಸರಕಾರ" ಎಂಬ ವ್ಯವಸ್ಥೆಯ ಮೇಲೆ ತೀರಿಸಿಕೊಂಡಂತಾಗಿದೆ.
ನೈತಿಕತೆಯ ಬಗ್ಗೆ ಮಾತನಾಡುತ್ತಿರುವ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಎಷ್ಟರ ಮಟ್ಟಿಗೆ ನೈತಿಕ ಪ್ರಜ್ಞೆಯನ್ನು ಉಳಿಸಿಕೊಂಡಿದೆ ಎಂಬುದನ್ನು ಯೋಚಿಸಲೇಬೇಕಾಗಿದೆ.
ಕಾಂಗ್ರೆಸ್ ಪಕ್ಷ ಕಳೆದ ಹಲವು ದಶಕಗಳ ಕಾಲ ಇದೇ ರಾಜ್ಯವನ್ನು ಆಳಿತ್ತು. ತನ್ನ ಆಳ್ವಿಕೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಯಾವೊಂದೂ "ಅನ್ಯಾಯ"ವನ್ನೂ ಮಾಡೇ ಇಲ್ಲ!. ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದಂತಹ ಘಟಾನು ಘಟಿ ವ್ಯಕ್ತಿಗಳು ಸರಕಾರದ ಯಾವೊಂದು ಸೌಲಭ್ಯಗಳನ್ನು ಬಳಸಿಕೊಂಡೇ ಇಲ್ಲ!!!? ಅಷ್ಟೊಂದು ಪ್ರಾಮಾಣಿಕ ರೀತಿಯಲ್ಲಿ ರಾಜ್ಯಭಾರ ಮಾಡಿದೆಯಲ್ಲಾ...!!! ಆಡಳಿತ ಪಕ್ಷದ ಕುಂದುಕೊರತೆಗಳನ್ನು ಗುರುತಿಸಿ , ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕೈಜೋಡಿಸಬೇಕಾಗಿರುವುದು ವಿಪಕ್ಷದ ಜವಾಬ್ದಾರಿ. "ತನ್ನ ಎಲೆಯಲ್ಲಿರುವ ಹೆಗ್ಗಣವನ್ನು ಬಿಟ್ಟು ಇನ್ನೊಬ್ಬನ ಎಲೆಯಲ್ಲಿರುವ ನೊಣದ ಬಗ್ಗೆ ಮಾತನಾಡಿದ " ಎಂಬಂತೆ ಆಡುತ್ತಿದೆ ಕಾಂಗ್ರೆಸ್ ಪಕ್ಷ. ಸುಧೀರ್ಘವಾದ ತನ್ನ ಆಡಳಿತಾವಧಿಯಲ್ಲಿ ಮಾಡಬಾರದ ಅನಾಚಾರಗಳನ್ನು ಮಾಡಿದ ಈ ರಾಷ್ಟ್ರೀಯ ಪಕ್ಷ ಹಲವಾರು ಬಾರಿ ಜನತೆಯಿಂದ ಛೀಮಾರಿಗೊಳಗಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದ ಶಾಸಕರನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳುತ್ತಿದೆ ಎಂದು ಗಂಟಲು ಹರಿಯುವಂತೆ ಮಂಗಳವಾರ ರಾತ್ರಿವೇಳೆ ಭಾಷಣ ಬಿಗಿದ ಕಾಂಗ್ರೆಸ್ ಪಕ್ಷದ ಈಗಿನ ಮುಖಂಡರೆನಿಸಿಕೊಂಡ ಮಾನ್ಯ ಸಿದ್ಧರಾಮಯ್ಯನವರು ತಾನು ಜೆ.ಡಿ.ಎಸ್. ಪಕ್ಷದಿಂದ ವಲಸೆ ಬಂದು ಕಾಂಗ್ರೆಸ್ ಬಾಗಿಲು ಬಡಿದವನೆಂಬುದನ್ನು ಮರೆತಂತಿದ್ದರು!

- ಹರೀಶ್ ಕೆ.ಆದೂರು.

0 comments:

Post a Comment