ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:26 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 2

"ಯಾರಿದ್ದೀರಿ?" ಕೂಗು ದಟ್ಟ ಮರಗಳ ಮಧ್ಯೆ ತೂರಿ ಎಲೆಗಳನ್ನು ಮೆಲ್ಲಗೆ ಕಂಪಿಸಿತು. ತಂಗಾಳಿ ಬೀಸಿ ನಕ್ಕಂತಾಯಿತು. ಮನೆಯ ಒಳಗಿನಿಂದ ಏನಾದರೂ ಪ್ರತಿಕ್ರಿಯೆ ಬರಬಹುದೆನ್ನುವ ನಿರೀಕ್ಷೆಯೂ ಸುಳ್ಳಾಯಿತು."ಹಲೋ! ಯಾರಿದ್ದೀರಿ?" ಮತ್ತೊಮ್ಮೆ ಪ್ರಶ್ನಿಸಿದಳು. ಮತ್ತದೆ ಶೂನ್ಯ ಉತ್ತರ.
ಧೈರ್ಯದಿಂದ ಒಳಗೆ ನಡೆದು ನೋಡಿದಳು. ವ್ಯಕ್ತಿ ನಿದ್ರಿಸುತ್ತಿರುವಂತೆ ಕಂಡಿತು. ಹಿಂದಕ್ಕೆ ತಿರುಗಿದವಳಿಗೆ ಅನುಮಾನ ಕಾಡಿತು. ಮೆದುಳು ಚುರುಕಾಯಿತು. ಪರಿಚಿತ ಮುಖ! ಹೌದು, ಪತ್ತೇದಾರಿ ಕಥೆಗಳ ಮಾಂತ್ರೀಕ. ಜೇಮ್ಸ್ ಬರ್ಟ್ರಂಡ್! ಕಳೆದವಾರವಷ್ಟೇ ಸಾಪ್ತಾಹಿಕದಲ್ಲಿ ಅವನ ಸಂದರ್ಶನ ಪ್ರಕಟಿಸಿತ್ತು `ಮಾದರಿ' ಪತ್ರಿಕೆ!
"ಸಾರ್..." ಎಚ್ಚರಿಸುವಂತೆ ಕರೆದವಳು ಹತ್ತಿರಕ್ಕೆ ನಡೆದಳು.
ಬಿಳಿ ಚಹರೆಯ, ತುಂಬು ಗಲ್ಲದ ಮೇಲೆ ಚಿತ್ತಾರ ಬಿಡಿಸಿದಂತೆ ನೀಟಾಗಿ ಬೆಳೆದಿದ್ದ ಗಡ್ಡ! ಪತ್ತೇದಾರಿಕೆಯ ಸೂಕ್ಷ್ಮ ಕಣ್ಣುಗಳು ಮುಚ್ಚಿದಂತೆ ಇವೆ! ಪ್ರತಿಕ್ರಿಯೆ ಇಲ್ಲದೆ ನಿರ್ಜೀವದಂತೆ ಇದ್ದ ದೇಹದ ಮಧ್ಯದಲ್ಲಿ ಹೆಪ್ಪುಗಟ್ಟಿದ ರಕ್ತದ ಮುದ್ದೆ! ಸಣ್ಣ ಚಿತ್ಕಾರವೊಂದು ಸ್ವಾತಿಯ ತುಟಿಗಳಲ್ಲಿ ಮೂಡಿತು.
ಅವಳ ದೃಷ್ಟಿ ಸುತ್ತೆಲ್ಲಾ ಆಡಿತು. ಕಥೆಗಾರ ಕೊಲೆಯಾಗಿದ್ದ! ತಟ್ಟನೆ ವರದಿಗಾರಳ ಪ್ರಜ್ಞೆ ಜಾಗೃತವಾಯಿತು. ಕ್ಯಾಮರಾ ಕಣ್ಣಿಗೆ ಹೊಂದಿಕೊಂಡಿತು. ಫ್ಲ್ಯಾಶ್ ಮೂರು ನಾಲ್ಕು ಬಾರಿ ದೇಹದ ಮೇಲೆ ಬೆಳಗಿತು.

ಧೈರ್ಯವಿದ್ದರೂ ಕೈ, ಕಾಲುಗಳು ಬೆವತವು. ಹೊರಟ ಘಳಿಗೆಯೆ ಅಪಶಕುನದಂತಾಗಿತ್ತು. ಕಾರು ಕೆಟ್ಟು ರಸ್ತೆಯಲ್ಲಿ ನಿಂತರೆ, ಇಲ್ಲಿ ಕಥೆಗಾರನ ಕೊಲೆ!

***

ಭಾವಾವೇಶಕ್ಕೊಳಗಾದ ಸ್ವಾತಿ ಗಣಕಯಂತ್ರಕ್ಕೆ ಸೇರಿಸಿದ್ದ ಕ್ಯಾಮರಾದ ಕೇಬಲನ್ನು ಸರಿಯಾಗಿ ಹೊಂದಿಸಿದ ಬಳಿಕ ಮೌಸ್ನ ಮೇಲೆ ಕೈಯಾಡಿಸಿದಳು. ಚಿತ್ರಗಳು ಒಂದರ ನಂತರ ಇನ್ನೊಂದು ತೆರೆದುಕೊಂಡಿತು. ಅತೀ ಹತ್ತಿರದಿಂದ ತೆಗೆದ ಚಿತ್ರದ ಮೇಲೆ ಕಣ್ಣಾಡಿಸಿದವಳಿಗೆ ಕನ್ನಡದಲ್ಲಿ ಬರೆದ ಕಾಗದದ ಚೂರು ಗೋಚರಿಸಿತು. ಗಣಕಯಂತ್ರದ ಪರದೆಯ ಮೇಲಿದ್ದ ಚಿತ್ರವನ್ನು ಝೂಮ್ಗೆ ತಂದು ನೋಡಿದಳು. ಅಕ್ಷರಗಳು ಚೆನ್ನಾಗಿ ಗೋಚರಿಸಿದವು.
`ನಾನು ನಿರ್ಮಿಸಿದ ಪಾತ್ರಗಳೇ ನನ್ನನ್ನು ಸಾಯಿಸುತ್ತಿವೆ' ವಾಕ್ಯವನ್ನು ಓದಿದ ಬಳಿಕ ಅವಕ್ಕಾಗಿ ಕುಳಿತಳು. ಕಥೆಗಾರನಿಗೆ ತನ್ನ ಸಾವಿನ ಸುಳಿವು ಮೊದಲೇ ತಿಳಿದಿತ್ತೆ? ಪ್ರಶ್ನೆ ಭೂತಾಕಾರವಾಗಿ ಬೆಳೆದು ನಿಂತಿತು.
ಪರದೆಯನ್ನು ಮುಚ್ಚಿ ಆಫೀಸಿನ ಪರಿಚಾರಕನನ್ನು ಕರೆದಳು. ಹುಡುಗ ಅನಂತು ಅವಳ ಎದುರಿಗೆ ಬಂದು ನಿಂತ.
"ಕಳೆದ ವಾರದ ಸಾಪ್ತಾಹಿಕ ಸಂಚಿಕೆ ಬೇಕಿದೆ"
ಹುಡುಗ ಚುರುಕಿನಿಂದ ಪತ್ರಿಕೆಗಳನ್ನು ಜೋಡಿಸಿದ್ದ ರಾಕ್ ಕಡೆಗೆ ನಡೆದ. ಅವಳು ಹೇಳಿದ ಪತ್ರಿಕೆಯನ್ನು ತಂದು ಅವಳ ಮೇಜಿನ ಮೇಲಿರಿಸಿದ. ಪತ್ತೇದಾರಿ ಕಥೆಗಾರ ಜೇಮ್ಸ್ನ ಸಂದರ್ಶನವಿದ್ದ ಪುಟವನ್ನು ತೆರೆದು ಓದಿಕೊಂಡಳು. ಸಂದರ್ಶನದುದ್ದಕ್ಕೂ ನಿರಾಶೆಯ ಉತ್ತರವೇ ನೀಡಿದ್ದ ಕಥೆಗಾರ. ಕನ್ನಡದಲ್ಲಿ ಕೇವಲ ಬೆರಳೆಣಿಕಯಷ್ಟೇ ಪತ್ರಿಕೆಗಳು ಮಾತ್ರ ಪತ್ತೇದಾರಿ ಕಥೆಗಳಿಗೆ ಉತ್ತೇಜನ ನೀಡುತ್ತವೆನ್ನುವುದು ಜೇಮ್ಸ್ನ ಕೊರಗುಗಳಲ್ಲಿ ಒಂದು. ಅವನ ಕಥೆಗಳ ಬಗ್ಗೆ ಹೇಳುತ್ತಾ ಒಂದೊಂದು ಕಥೆಯೂ ಅವುಗಳಲ್ಲಿ ಬರುವ ಪಾತ್ರಗಳೂ, ಅವು ತಮ್ಮ ಬುದ್ಧಿವಂತಿಕೆಯಿಂದ ಕೊಲೆಗಾರನನ್ನು ಪತ್ತೆ ಹಚ್ಚುವ ವಿಧಾನ ಎಲ್ಲವನ್ನೂ ಸ್ವಾರಸ್ಯಕರವಾಗಿ ಚಿತ್ರಿಸಿದ್ದ ಪತ್ತೇದಾರಿ ಕಥೆಗಳ ಮಾಂತ್ರೀಕ.

- ಅನು ಬೆಳ್ಳೆ.

ನಾಳೆಗೆ...
ವಿನ್ಯಾಸ: ಆದೂರು

0 comments:

Post a Comment