ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:01 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 1

ಸುಮಾರು 3ಮೈಲಿಗಳಷ್ಟು ದೂರ ನಿರ್ಜನ ರಸ್ತೆಯಲ್ಲಿ ಓಡಿದ ಕಾರು ಏಕಾಏಕಿ ಓಟ ನಿಲ್ಲಿಸಿದಾಗ ಹಣೆಯ ಮೇಲೆ ಕೈ ಹಚ್ಚಿಕೊಂಡ ಸ್ವಾತಿ ಅಸಹಾಯಕತೆಯಿಂದ ಮುಖ ಕಿವುಚಿದಳು. ಜನ ಸಂಚಾರವಿಲ್ಲದ ಈ ರಸ್ತೆಯಲ್ಲಿ ಮತ್ತೆ ಹಿಂದಕ್ಕೆ ಸಾಗೋದು ಅಸಾಧ್ಯ. ಅರಿವಾದಾಗ ಮೆಲ್ಲನೆ ಕೆಳಗಿಳಿದು ಸಹಾಯಕ್ಕಾಗಿ ಅತ್ತಿತ್ತ ನೋಡಿದಳು. `ಮಾದರಿ' ಪತ್ರಿಕೆಯ ಸಾಪ್ತಾಹಿಕ ವಿಭಾಗಕ್ಕೆ ತುರ್ತಾಗಿ ಒಂದು ಬರಹ ಸಿದ್ಧವಾಗಬೇಕಿತ್ತು.ಸಂಪಾದಕ ನೀಡಿದ ಎರಡು ದಿನಗಳ ಗಡುವು ಮುಗಿಯುತ್ತಾ ಬಂದಾಗ ಪ್ರಕೃತಿಯ ಬಗ್ಗೆ ಬರೆಯಬೇಕೆನ್ನುವ ಆತುರದಿಂದ ನಿರ್ಜನ ಪ್ರದೇಶವನ್ನು ಹುಡುಕಿಕೊಂಡು ಬಂದವಳಿಗೆ ಎದುರಾಗಿದ್ದು ಕೆಟ್ಟು ನಿಂತ ಕಾರಿನ ಸಮಸ್ಯೆ. ಬರೆಯುವ ಉತ್ಸಾಹವನ್ನೂ ಕುಂಠಿತಗೊಳಿಸಿದ ಕಾರಿನತ್ತ ಬೇಸರದ ನೋಟ ಬೀರಿದವಳು ಎರಡು ಹೆಜ್ಜೆ ಮುಂದಕ್ಕೆ ಹೊರಳಿದಳು. ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ವೈಭವಕ್ಕೆ ಸೂರ್ಯನ ಸಂಜೆಯ ಬೆಳಕು ಬಂಗಾರದ ಮೆರಗು ನೀಡಿ ಚಿತ್ತವನ್ನು ಹಿಡಿದಿಟ್ಟಿತ್ತು. ಮುಂದಕ್ಕೆ ನಡೆದು ತೆರೆದ ಭಾಗಕ್ಕೆ ಬಂದು ನಿಂತವಳಿಗೆ ಮರೀಚಿಕೆಯಂತೆ ಗೋಚರಿಸಿದ್ದು ಬಣ್ಣ ಕಳೆದುಕೊಂಡ ಎತ್ತರದ, ಎರಡಂತಸ್ತಿನ ಹಳೆಯ ಕಾಲದ ಹಂಚಿನ ಮನೆ!ತಟ್ಟನೆ ಕಾರಿನೊಳಗೆ ಚಿಮ್ಮಿ ಗಾಜುಗಳನ್ನು ಏರಿಸಿ ಚರ್ಮದ ಕೈ ಚೀಲ ತೆಗೆದು ಲಾಕ್ ಮಾಡಿ, ಇಳಿಜಾರಿನ ಹಾದಿ ಹಿಡಿದಳು. ಜನರ ಕುರುಹು ಇಲ್ಲದ ಭಗ್ನ ಅವಶೇಷದಂತೆ ನಿಂತಿದ್ದ ಮನೆಯನ್ನು ನೋಡುತ್ತಲೇ ನಿರಾಶೆ ತುಂಬಿತು. ಪ್ರಕೃತಿಯ ನಡುವೆ ಅಡಗಿ ಕುಳಿತಿರುವ ಮನೆಯಲ್ಲಿ ಯಾರು ಇಲ್ಲವೆನ್ನುವ ಋಣಾತ್ಮಕ ಚಿಂತೆ ಕಾಡಿತು.
ಮನೆಯ ಹಿಂಭಾಗದಿಂದ ಇಳಿದ ದಾರಿಯಿಂದ ಪಕ್ಕದ ಪೊದೆಯ ಬಳಿ ಇಳಿದು ಅಂಗಳಕ್ಕೆ ಬಂದಾಗ ಮರದ ಒಣ ಎಲೆಗಳ ಮೆತ್ತನೆಯ ನೆಲ, `ಯಾರು ಇಲ್ಲ ಹೋಗು' ಅನ್ನುವಂತೆ ಇತ್ತು. ಅಳುಕಿನ ಹೆಜ್ಜೆಗಳು ಸರಿದು ತೆರೆದ ಜಗುಲಿಯ ಬಳಿ ಬಂದು ಮುಚ್ಚಿದ ಬಾಗಿಲ ಮೇಲೆ ಬೆರಳುಗಳನ್ನು ಕುಟ್ಟುವಂತೆ ಪ್ರೆರೇಪಿಸಿತು.
ಟಕ್! ಟಕ್!!
ಟಕ್ ಟಕ್ ಸದ್ದು ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ... ಕೊನೆಗೆ ಗೋಡೆಯ ಮೇಲಿದ್ದ ಹಲ್ಲಿ ದೂರಕ್ಕೆ ಓಡುವಂತಾಗಿತ್ತು. ಬೆದರಿದ ಕೈಗಳು ಬಾಗಿಲ ಮೇಲೆ ಒತ್ತಡ ಹೇರಿದಾಗ ಬಾಗಿಲು ತೆರೆದುಕೊಂಡಿತು. ನಿರಾಶೆಯ ತುದಿಯಲ್ಲಿದ್ದವಳು ಚಕಿತಳಾಗಿ ಹಿಂದಕ್ಕೆ ಹೆಜ್ಜೆ ಇರಿಸಿದಳು. ಬಲವಾದ ಸಂಶಯ ಅವಳನ್ನು ಮುಂದುವರಿಯದಂತೆ ತಡೆಯಿತು.

ಏನೊಂದೂ ಪ್ರತಿಕ್ರಿಯೆ ಇಲ್ಲದಾಗ ಬೆರಗು, ಕುತೂಹಲ ಒಳಗೆ ಇಣುಕುವಂತೆ ಉತ್ತೇಜಿಸಿತು. ಮೆಲ್ಲನೆ ಇಣುಕಿದಳು. ಹೊರಗೆ ಬಿಕಾರಿಯಂತಿದ್ದ ಮನೆ, ಒಳಗೆ ಅಷ್ಟೇ ಚೊಕ್ಕವಾಗಿತ್ತು. ಅಂದರೆ ಈ ಮನೆಯಲ್ಲಿ ಯಾರೋ ವಾಸಿಸುತ್ತಿದ್ದಾರೆ. ಅವನು ಒಬ್ಬ ಕವಿ ಹೃದಯದವನೇ! ಮೆದುಳು ಕೂಗಿ ಹೇಳಿತು. ಅದನ್ನು ರುಜುವಾತು ಪಡಿಸುವಂತೆ ಮೇಜಿನ ಮೇಲೆ ಜೋಡಿಸಿದ ಬರವಣಿಗೆಯ ಪರಿಕರಗಳು, ಪ್ರಕಟಿತ ಪುಸ್ತಕಗಳು. ಧೈರ್ಯ ತುಂಬಿತು. ಹಿಂದಕ್ಕೆ ಸರಿದವಳು ಹೊರಗೆ ಕಣ್ಣು ಹಾಯಿಸಿದಳು. ಬರೆಯುವ ಹೃದಯಿ ಪ್ರಕೃತಿಯ ಮಧ್ಯೆ ಅಡಗಿರುವ ಕವಿತೆಯನ್ನು ಹುಡುಕುತ್ತಿದ್ದಾನೆ. ಅದಕ್ಕಾಗಿ ಇಲ್ಲೆಲ್ಲೋ ಅಲೆದಾಡುತ್ತಿದ್ದಾನೆ. ಸಹಾಯ ಯಾಚಿಸುವುದಕ್ಕಾಗಿ ಕೂಗುವುದು ಅನಿವಾರ್ಯವಾಗಿತ್ತು.

ನಾಳೆಗೆ....
ಅನು ಬೆಳ್ಳೆ

0 comments:

Post a Comment