ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:29 PM

ಕಥೆಗಾರ

Posted by ekanasu

ಸಾಹಿತ್ಯ

ಭಾಗ - 5
ಕೋಣೆಯ ಸುತ್ತಲೂ ಕಣ್ಣಾಡಿಸಿದ ಹುಡುಗಿ ಮಂಚದಿಂದ ಎದ್ದು ನಿಂತು ಮೆಲ್ಲಗೆ ಸ್ವಾತಿಯನ್ನು ನೋಡಿದಳು.
"ನಿಮ್ಮಿಂದ ಸಹಾಯ ಬೇಕಿದೆ. ನನ್ನ ಪರಿಚಯ ಹೇಳಿಕೊಂಡ್ರೆ ನೀವು ಸಹಾಯ ಮಾಡೋದಿಲ್ಲ" ಕಿರು ನಗುವೊಂದಿತ್ತು ಹುಡುಗಿಯ ಮುಖದಲ್ಲಿ.
"ಅಂದ್ರೆ...?!" ಅರ್ಥವಾಗದೆ ಅವಳನ್ನೇ ನೋಡಿದಳು.
"ಕುಳಿತಿರಿ, ನೀವು ಪರಿಚಯ ಹೇಳಿಕೊಂಡ್ರೆ ಸಹಾಯ ಮಾಡಬಹುದೇನೋ"
ಹುಡುಗಿ ಮಂಚದ ಮೇಲೆ ಕುಳಿತು ಸೀರೆಯ ಸೆರಗನ್ನು ಸರಿಪಡಿಸಿಕೊಂಡಳು. ಕ್ಷಣ ಹೊತ್ತಿನಲ್ಲಿ ಎಲ್ಲವನ್ನು ಹೇಳಿ ಬಿಡಬೇಕೆನ್ನುವ ತವಕ ಅವಳ ಮುಖದಲ್ಲಿದ್ದಂತೆ ಕಂಡಿತು.


"ಒಂದು ಬಡ ಕುಟುಂಬದಲ್ಲಿ ಜನಿಸಿದ ಹುಡುಗಿ ನಾನು. ಕಲಿಯುವ ಹಠ ನನ್ನಲ್ಲಿತ್ತು. ಆವತ್ತು ಅವರ ಜೊತೆಗೆ ನಾನು ಹೋಗದಿರುತ್ತಿದ್ದರೆ ಇವತ್ತು ನಾನು ನನ್ನ ಗುರಿಯನ್ನು ಸಾಧಿಸುತ್ತಿದ್ದೆ. ಆದರೆ ಹಾಗಾಗಲಿಲ್ಲ. ಶ್ರೀಮಂತರ ಕೈಗೊಂಬೆಯಾಗಬೇಕಾಗಿ ಬಂತು. ಇವತ್ತು ನನ್ನ ಬಳಿ ಕಾರಿದೆ, ಬಂಗ್ಲೆ ಇದೆ. ಐಶ್ವರ್ಯವಿದೆ. ಆದರೆ ಮಾನಸಿಕ ನೆಮ್ಮದಿ ನನ್ನಲ್ಲಿಲ್ಲ. ನೀವೊಬ್ಬ ಪತ್ರಕರ್ತೆ. ನನ್ನಂತಹ ಹೆಣ್ಣಿನ ನೋವನ್ನು ನಾಲ್ಕು ಜನರ ಮುಂದೆ ತೆರೆದಿಡಬೇಕು"
ಸ್ವಾತಿ ಅವಳ ಕಥೆಯನ್ನು ಕೇಳುತ್ತಾ ಕುಳಿತಳು.
"ನೀವು ನನ್ನನ್ನು ಕೆಟ್ಟವಳೆಂದು ಬರೆದರೂ ಸರಿಯೇ... ಗಂಡಸಿನ ಸುಖಕ್ಕೆ ಮೀಸಲಾದ ನಮ್ಮ ಬದುಕನ್ನು ನೀವು ಬರೆಯಲೇ ಬೇಕು"
ಸ್ವಾತಿ ತಟ್ಟನೆ ಕೇಳಿದಳು.
"ನೀವು ನನ್ನನ್ನೇ ಹುಡುಕಿಕೊಂಡು ಬರುವ ಅವಶ್ಯಕತೆಯೇನಿತ್ತು?"
ಕ್ಷಣ ಹೊತ್ತು ಸೂಜಿ ಬಿದ್ದರು ಕೇಳಿಸುವಷ್ಟು ಮೌನ ನೆಲೆಸಿತು. ಅದರ ಹಿಂದೆಯೇ ನಗು. ಗಾಳಿಯಲ್ಲಿ ಅಲೆಯಲೆಯಾಗಿ ತೇಲಿ ಬಂದಂತೆ...
"ನೀವು ಖ್ಯಾತ ಪತ್ತೇದಾರಿ ಕಾದಂಬರಿಗಾರ ಜೇಮ್ಸ್ ಬರ್ಟ್ರಂಡ್ ಬಗ್ಗೆ ಬರೆದ ಲೇಖನ ಓದಿದೆ. ಅವನೇ ಸೃಷ್ಟಿಸಿದ ಒಂದು ಪಾತ್ರ ನಾನು... ಪಾತ್ರಗಳನ್ನು ಸೃಷ್ಟಿಸುವುದು ಸುಲಭ. ಆದರೆ ಅವುಗಳಿಗೊಂದು ನ್ಯಾಯ ಒದಗಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಜೇಮ್ಸ್ನ ಪಾತ್ರಗಳೆಲ್ಲವೂ ಹಾಗೆ. ಅದರಲ್ಲಿ ನಾನೂ ಒಬ್ಬಳು... ನೀರಜಾ"
ಸ್ವಾತಿ ಅವಕ್ಕಾಗಿ ನಿಂತಿದ್ದಳು.
"ಅಂದ್ರೆ ಜೇಮ್ಸ್ನ `ರಾತ್ರಿಯ ಹುಡುಗಿ' ಕಾದಂಬರಿಯ ನೀರಜಾ ಪಾತ್ರ ನೀವು? ಅವರ ಕೊಲೆಯ ಹಿಂದೆ ನಿಮ್ಮ ಕೈವಾಡ"
"ಅವನನ್ನು ಕೊಲೆ ಮಾಡಿದವಳು ನಾನೇ. ಅವನ ಒಂದು ನಿರ್ಧಾರ ನನ್ನನ್ನು ಇಂತ ಕೂಪದಿಂದ ಮೇಲಕ್ಕೆ ತರಬಹುದಿತ್ತು. ಅವನು ನನಗೆ ನ್ಯಾಯ ಕೊಡೋದಿಕ್ಕೆ ಸೋತ. ಅವನ ಮೇಲೆ ಯಾವತ್ತಿಂದಲೂ ಸೇಡು ಇತ್ತು. ಅದನ್ನು ತಿರಿಸ್ಕೊಂಡು ಬಿಟ್ಟೆ. ಇವತ್ತು ಪೊಲೀಸರಿಂದ ಹಿಡಿದು ರಾಜಕೀಯದ ವ್ಯಕ್ತಿಗಳೆಲ್ಲಾ ನನ್ನ ಕೈಯಲ್ಲಿದ್ದಾರೆ. ಆ ಕೊಲೆಯ ಆಪಾಧನೆ ನನ್ನ ಮೇಲೆ ಬರುವ ಸಾಧ್ಯತೆಯೇ ಇಲ್ಲ. ಇದು ನನ್ನ ಭಾವಚಿತ್ರ. ಈ ಚಿತ್ರದ ಜೊತೆಗೆ ಬಡ ಹುಡುಗಿಯರು ಹೇಗೆ ಪರಿಸ್ಥಿತಿಯ ಕೈಗೊಂಬೆಯಾಗಿ ಕೀಳು ಮಟ್ಟಕ್ಕಿಳಿಯುತ್ತಾರೆ ಅನ್ನುವುದನ್ನು ಪ್ರಕಟಿಸಿ. ಆದರೆ ಕೊಲೆಯ ವಿಷಯ ಅಲ್ಲ"
ನೀರಜಾ ಬಾಗಿಲು ತೆರೆದು ಬಂದಷ್ಟೇ ವೇಗವಾಗಿ ಹೊರಗೆ ಹೋದಳು. ಸ್ವಾತಿ ಕನಸು ಕಂಡಂತೆ ಅವಳು ಹೋದತ್ತಲೇ ನೋಡುತ್ತಾ ನಿಂತಳು.
ಕಾರು ಬರ್ರನೆ ಕತ್ತಲನ್ನು ಸೀಳಿಕೊಂಡು ಓಡಿತು!!

ಮುಗಿಯಿತು...
- ಅನು ಬೆಳ್ಳೆ

0 comments:

Post a Comment