ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನುಡಿಸಿರಿ
ಆಳ್ವಾಸ್ ನುಡಿಸಿರಿ ಉದ್ಘಾಟಿಸಿದ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಹೀಗೆ ಹೇಳಿದ್ದಾರೆ.
೧.ಸಾವಿರಾರು ವರ್ಷಗಳಿಂದ ತನ್ನ ಪಾತ್ರವನ್ನು ತಿದ್ದಿಕೊಳ್ಳುತ್ತಾ ಬಂದ ಕನ್ನಡ ಮನಸ್ಸಿನ ಅಭಿವ್ಯಕ್ತಿಯನ್ನು ಅದು ಹಿಂದೆ ಹಿಂದೆ ಉಳಿಸುತ್ತಾ ಹೋದ ನೆನಪುಗಳಲ್ಲಿ ಹುಡುಕಬೇಕಾಗುತ್ತೆ.

೨.ಕಲೆ, ಸಾಹಿತ್ಯ, ವಾಸ್ತು ಮುಂತಾಗಿ ಎಲ್ಲೆಲ್ಲಿ ಕನ್ನಡಿಗನ ಮನಸ್ಸು ನಿರ್ಭಿಡೆಯಿಂದ ಮುಕ್ತ ಅಭಿವ್ಯಕ್ತಿ ಸಾಧಿಸಿದೆಯೋ ಅಲ್ಲಲ್ಲೆಲ್ಲಾ ನಾವು ಕನ್ನಡ ಮನಸ್ಸಿನ ಪಾತ್ರ ನಿರ್ಮಿತಿಯನ್ನು ಗ್ರಹಿಸುತ್ತಾ ಹೋಗಬೇಕಾಗುತ್ತದೆ.

೩. ಮಹತ್ವಾಕಾಂಕ್ಷೆ
ವಿನಯ
ಕೂಡುಬಾಳು
ಬದಲಾವಣೆಗೆ ತೆರೆದುಕೊಂಡ ಮನಸ್ಸು-ಇವು ಕನ್ನಡ ಮನಸ್ಸಿನ ಮುಖ್ಯ ಲಕ್ಷಣಗಳಾಗಿವೆ.ಅ.ಮಹತ್ವಾಕಾಂಕ್ಷೆ: ಕನ್ನಡ ಸಾಹಿತ್ಯ ಚರಿತ್ರೆ ಗಮನಿಸಿದಾಗ ನಿರಂತರವಾಗಿ ಬೃಹತ್ ಕಾವ್ಯಗಳ ನಿರ್ಮಾಣ ನಡೆಯುತ್ತಾ ಬಂದಿರುವುದನ್ನು ಗಮನಿಸಬಹುದು. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸ ಭಾರತ, ಭರತೇಶವೈಭವ, ಶ್ರೀ ರಾಮಾಯಣ ದರ್ಶನಂ...ಹೀಗೆ. ಇಪ್ಪತ್ತನೇ ಶತಮಾನವನ್ನಷ್ಟೇ ಗಮನಿಸಿದರೂ ಮಹತ್ವಾಕಾಂಕ್ಷೆಯ ಕಾದಂಬರಿಗಳು ನಮ್ಮಲ್ಲಿ ನಿರ್ಮಿತವಾಗಿರುವುದನ್ನು ನೋಡಬಹುದು. ಬೃಹತ್ ಮತ್ತು ಮಹತ್ ಒಮ್ಮೈಗೂಡಬೇಕೆಂಬುದು ಕನ್ನಡ ಮನಸ್ಸಿನ ಯಾವತ್ತಿನ ಅಭಿಲಾಷೆ. ಆಧುನಿಕ ಸಾಹಿತ್ಯದಿಂದಲೂ ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು.

ಬಾಹುಬಲಿಯ ನಿರ್ಮಾಣ, ಹಂಪೆಯ ಉಗ್ರನರಸಿಂಹ ಶಿಲ್ಪದ ನಿರ್ಮಾಣ, ಬಿಜಾಪುರದ ಗೋಲ್ಗುಂಬಜ್, ಬಾದಾಮಿ ಪಟ್ಟದಕಲ್ಲಿನ ಗುಹಾಂತರ್ದೇವಾಲಯಗಳು, ಶ್ರೀರಂಗಪಟ್ಟಣದ ಶ್ರೀರಂಗಮೂರ್ತಿ-ಹೀಗೆ ಬೃಹತ್ ಮಹತ್ತಿನ ಕೂಡುವಳಿಯ ಅನೇಕ ಮಹತ್ವಾಕಾಂಕ್ಷೀ ಯತ್ನಗಳನ್ನು ನಾವು ನೋಡಬಹುದು. ಮೈಸೂರು ಅರಮನೆ, ತುಂಗಭದ್ರ ಡ್ಯಾಮ್, ವಿಧಾನಸೌಧ, ಮುಂತಾದ ಆಧುನಿಕ ಉದಾಹರಣೆಗಳೂ ನಮ್ಮ ಕಣ್ಮುಂದೆ ಇವೆ.

ಬ.ವಿನಯ: ನಮ್ಮ ಸಾಹಿತ್ಯದಲ್ಲಿ ಭಕ್ತಿ ತನ್ನ ಸಾತತ್ಯವನ್ನು ಮೊದಲಿನಿಂದಲೂ ಸಾಧಿಸುತ್ತಾ ಬಂದಿದೆ. ಭಕ್ತಿಯ ಪ್ರಧಾನ ಲಕ್ಷಣವೇ ವಿನಯ. ಶ್ರೇಷ್ಠವಾದುದಕ್ಕೆ ಎಂಥವರೂ ತಲೆಬಾಗಲೇ ಬೇಕು-ಎಂಬುದನ್ನು ಕನ್ನಡ ಮನಸ್ಸು ಒಂದು ಮುಖ್ಯ ಮೌಲ್ಯವಾಗಿ ಗುರುತಿಸಿಕೊಂಡಿದೆ.

ಕ.ಕೂಡುಬಾಳು-ಬಹುಳ ಸಂಸ್ಕೃತಿಗೆ ತೆರೆದುಕೊಂಡ ಮನಸ್ಸು: ಕನ್ನಡ ಸಮುದಾಯ ಅನೇಕ ಭಾಷೆ, ಧರ್ಮ, ಸಂಪ್ರದಾಯ, ಆಚರಣೆಗಳ ಸಂಯುಕ್ತ ಸಮುದಾಯವಾಗಿದೆ. ವೈಷ್ಣವ ಮತ್ತು ಶೈವ ಸಂಪ್ರದಾಯಗಳು ಸಿಡಿದು ಬೇರ್ಪಟ್ಟಾಗ ಹರಿಹರ ಅಭೇದ ಕಲ್ಪನೆಯನ್ನು ಮೂರ್ತೀಕರಿಸಿಕೊಂಡ ಸಂಯುಕ್ತ ದೈವದ ಕಲ್ಪನೆಯನ್ನು ಹುಟ್ಟು ಹಾಕಿದ್ದು ನಮ್ಮ ಹಿರಿಯರು. ಹರಿಹರ, ಶಂಕರನಾರಾಯಣ ಮೊದಲಾದ ಕಲ್ಪನೆಗಳನ್ನು ಇಲ್ಲಿ ಗಮನಿಸಬಹುದು. ಜೈನ ಮತ್ತು ವೈದಿಕ ಧರ್ಮಗಳ ಒಡಕು ಕೊನೆಗೆ ಏಕೀಕರಣದಲ್ಲಿ ತೊಡಗಿದ್ದಕ್ಕೆ ಉದಾಹರಣೆ ಧರ್ಮಸ್ಥಳದಂಥ ಕ್ಷೇತ್ರವನ್ನು ಗಮನಿಸಬಹುದು. ಹಳೇಬೀಡು ಬೇಲೂರು ದೇವಾಲಯಗಳ ನಿರ್ಮಾಣವೂ ಧರ್ಮಸಹಿಷ್ಣುತೆಯ ಅಭಿವ್ಯಕ್ತಿಯೆಂದೇ ನಾವು ಗ್ರಹಿಸಬಹುದು.
ಹಿಂದು ಮುಸ್ಲಿಮ್ ಸಂಪ್ರದಾಯಗಳು ಕಟ್ಟಾವಿರೋಧದಲ್ಲೇ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತವಾದರೂ ಅವುಗಳ ಬೆಸುಗೆಗೆ ಕನ್ನಡ ಮನಸ್ಸು ಹವಣಿಸಿದ್ದಕ್ಕೆ ಸಾಕ್ಷಿಯಾಗಿ ಬಾಬಾಬುಡನ್ ಗಿರಿ-ದತ್ತಪೀಠಗಳಂತಹ ಕ್ಷೇತ್ರಗಳಿವೆ. ಷರೀಫ, ರಾಮದಾಸರಂಥ ಅವಧೂತ ಸಂತರಿದ್ದಾರೆ. ಸಂಗೀತ ಮತ್ತು ವಾಸ್ತುವಿನಲ್ಲೂ ಈ ವಿಭಿನ್ನ ಸಂಸ್ಕೃತಿಗಳ ಅನ್ಯೋನ್ಯ ಒಡನಾಟವನ್ನು ಗುರುತಿಸಲಿಕ್ಕೆ ಬರುತ್ತದೆ. ಹಿಂದುಸ್ಥಾನಿಸಂಗೀತ ಅದಕ್ಕೆ ತಕ್ಕ ಉದಾಹರಣೆ . ಗುಂಬಜ್ ಮತ್ತು ದುಂಡು ಗೊಪುರಗಳ ಸಾರೂಪ್ಯದ ನಿರ್ಮಾಣದಲ್ಲೂ ಇದನ್ನು ನಾವು ಗುರುತಿಸಬಹುದು.
ಕರ್ನಾಟಕದಲ್ಲಿ ಕನ್ನಡವೊಂದೇ ಬಳಕೆಯ ಭಾಷೆಯಾಗಿಲ್ಲ. ಕೊಂಕಣಿ, ತುಳು, ಕೊಡವ ಮೊದಲಾದ ಬೇರೆ ಬೇರೆ ಭಾಷೆಗಳು ಇಲ್ಲಿ ಜೀವಂತ ಚಾಲ್ತಿಯಲ್ಲಿ ಇವೆ. ಬೇರೆ ಬೇರೆ ಮಾತೃಭಾಷೆಯ ಲೇಖಕರು ಕನ್ನಡವನ್ನು ಪರಿಸರದ ಭಾಷೆಯೆಂದು ಪರಿಗ್ರಹಿಸಿ ಕನ್ನಡದಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅವರಲ್ಲಿ ಕೆಲವರು ಕನ್ನಡದ ಮೇಜರ್ ಲೇಖಕರಾಗಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗಿದೆ. ಕನ್ನಡ ನಿರೂಪಣಾ ಭಾಷೆಯಾಗಿದ್ದು ಅದರಲ್ಲಿ ಇತರ ಪ್ರಾದೇಶಿಕ ಭಾಷೆಗಳನ್ನು ಹಾಸುಹೊಕ್ಕಾಗಿ ಬಳಸಿ ಒಂದು ಹೊಸ ಭಾಷಾ ಶಯ್ಯೆಯನ್ನೇ ನಾವು ನಿರ್ಮಿಸುವುದು ಸಾಧ್ಯವಿದೆ. ದೇವನೂರು ಮಹಾದೇವ, ವೈದೇಹಿ, ಚೆನ್ನಣ್ಣ, ಮತ್ತು ಅನೇಕ ಮುಸ್ಲಿಮ್ ಲೇಖಕರು ಅಂಥ ಸಮರ್ಥ ಪ್ರಯೋಗಗಳನ್ನು ಈಗಾಗಲೇ ಮಾಡಿ ತೋರಿಸಿದ್ದಾರೆ.

ಬದಲಾವಣೆಗೆ ತೆರೆದುಕೊಂಡ ಮನಸ್ಸು:

ಕನ್ನಡದ ಮನಸ್ಸು ಬದಲಾವಣೆಗೆ ತೆರೆದುಕೊಂಡ ಮನಸ್ಸಾಗಿದೆ. ಧರ್ಮ, ಸಾಹಿತ್ಯ, ಸಂಗೀತ, ವಾಸ್ತು, ಚಿತ್ರಕಲೆ-ಈ ಎಲ್ಲ ವಿಷಯಗಳಲ್ಲೂ ಇದನ್ನು ಗಮನಿಸಬಹುದು. ಸಾಹಿತ್ಯದ ವಿಷಯ ಉದಾಹರಣೆಗೆ ಗಮನಿಸಿ. ಚಂಪೂಕಾವ್ಯದ ಮಹತ್ವದ ಯಶಸ್ಸಿನ ನಂತರವೂ ವಚನ ಸಾಹಿತ್ಯದ ವಿಶಿಷ್ಟ ತಿರುವು ಕನ್ನಡಗಿರ ಬದಲಾವಣೆಗೆ ತೆರೆದುಕೊಂಡ ಮನಸ್ಸನ್ನು ಸೂಚಿಸಬಲ್ಲುದು. ಮುಂದೆ ರಗಳೆ.ಆಮೇಲೆ ಷಟ್ಪದಿ ಈ ಎಲ್ಲವೂ ಅಚ್ಚರಿಹುಟ್ಟಿಸುವ ಬದಲು ದಾರಿಗಳೇ ಆಗಿವೆ. ವೀರದಿಂದ ಭಕ್ತಿ, ಭಕ್ತಿ ಮುಂದೆ ದೇಶಭಕ್ತಿಯಾಗಿ, ಪ್ರಕೃತಿ ಆರಾಧನೆಯಾಗಿ ಪರಿಣಮಿಸಿದ್ದು, ಸಾಹಿತ್ಯದಲ್ಲಿ ಇದ್ದ ಧಾರ್ಮಿಕ ಒತ್ತಡವು ಕ್ರಮೇಣ ಮರೆಯಾಗಿ ಅಧ್ಯಾತ್ಮವು ಆ ಸ್ಥಾನವನ್ನು ಆವರಿಸಿದ್ದು ಮೊದಲಾದವನ್ನು ನೋಡಬಹುದು.
ಜೈನ ವೀರಶೈವ ವೈದಿಕ ಧರ್ಮಗಳು ಹೇಗೆ ತಿಕ್ಕಾಟದೊಂದಿಗೇ ನಿಧಾನವಾಗಿ ಸಮನ್ವಯ ಸಾಧಿಸಿದವು ಎಂಬುದನ್ನು ನಮ್ಮ ಇತಿಹಾಸ ತೋರಿಸುತ್ತಿದೆ.

ಮುಕ್ತಾಯ: ಕರ್ನಾಟಕದ ಬಗ್ಗೆ ಎರಡು ಕಲ್ಪನೆಗಳು ಸಾಧ್ಯ. ಒಂದು-ಅದನ್ನು ಏಕಶಿಲಾ ಸಂಪದ್ವಲಯವಾಗಿ ನೋಡುವುದು. ಹಾಗೆ ನೋಡಿದಾಗ ನಮ್ಮ ಕರ್ನಾಟಕ ಒಳಗೊಳ್ಳುವುದು ಕನ್ನಡಿಗರನ್ನು ಮಾತ್ರ. ಭಾಷೆಯೆಂದರೆ ಕನ್ನಡ ಭಾಷೆಯನ್ನು ಮಾತ್ರ. ಸಂಸ್ಕೃತಿ ಅಂದಾಗ ಮೇಲ್ವರ್ಗದ ಮುಖ್ಯಧಾರೆಯ ಸಂಸ್ಕೃತಿಯನ್ನು ಮಾತ್ರ.
ಕರ್ನಾಟಕದ ಬಗ್ಗೆ ಇನ್ನೊಂದು ಕಲ್ಪನೆ ಸಾಧ್ಯ. ಅದು ಅಖಂಡ ಕರ್ನಾಟಕದ ಕಲ್ಪನೆ. ಅಲ್ಲಿ ಕನ್ನಡಿಗರು ಮಾತ್ರ ಕನ್ನಡನಾಡಿನ ಪ್ರಜೆಗಳಾಗಿರುವುದಿಲ್ಲ. ಈ ನಾಡಿನಲ್ಲಿ ಬಾಳುತ್ತಿರುವ ಅನ್ಯಧರ್ಮೀಯರೂ, ಅನ್ಯ ಭಾಷಿಕರೂ, ಬೇರೆ ಬೇರೆ ಪ್ರಾಂತೀಯ ಭಾಷೆಗಳನ್ನು(ತುಳು, ಕೊಂಕಣಿ, ಕೊಡವ ಇತ್ಯಾದಿ) ಆಡುವ ಜನರನ್ನೂ ಅದು ಒಳಗೊಳ್ಳುವುದು.ಶಿಷ್ಟ, ಜಾನಪದ ಎಲ್ಲವೂ ಅಲ್ಲಿ ಸಮಾನ ಸ್ಥಾನಮಾನವನ್ನು ಪಡೆಯುವುವು.ಇದು ಕೋಡುಗಲ್ಲಿನ ಸಂಸ್ಕೃತಿಯಲ್ಲ. ರೆಂಬೆಕೊಂಬೆ ಚೆಲ್ಲಿದ ಮಹಾವೃಕ್ಷದ ಸಂಸ್ಕೃತಿ. ನಾವೀಗ ಪುರಸ್ಕರಿಸಬೇಕಾದ್ದು ಈ ಬಗೆಯ ಅಖಂಡ ಕರ್ನಾಟಕದ ಕಲ್ಪನೆಯನ್ನ. ನಾವು ಕಟ್ಟ ಬಯಸುವುದು ಸಂಕುಚಿತ ಕರ್ನಾಟಕವನ್ನಲ್ಲ; ವಿಸ್ತೃತ ಕರ್ನಾಟಕವನ್ನು.

0 comments:

Post a Comment