ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಇಲ್ಲಿ ನಾನು ಬರೆದಿರುವಂತಹ ಲೇಖನವನ್ನು ಬರೆಯಬೇಕೆಂದು ಯಾವ ಲೇಖಕನೂ ಹಾರೈಸಿಕೊಂಡಿರುವುದಿಲ್ಲ. ಆದರೆ ಬರೆಯದಿದ್ದರೆ ಈ ವ್ಯವಸ್ಥೆಯಲ್ಲಿ ನಾನೊಬ್ಬ ನಾಮರ್ದ ಆದೇನೆಂಬ ಎಚ್ಚರದಿಂದಾಗಿ ಈ ಬರಹ ಬರೆಯುತ್ತಿದ್ದೇನೆ. ಆರಂಭದಲ್ಲೇ ಹೇಳಿಬಿಡುತ್ತೇನೆ, ನಾನು ಈ ಸಲವೂ ಸೇರಿದಂತೆ ಯಾವ ಸಲವೂ ರಾಜ್ಯೋತ್ಸವ ಪ್ರಶಸ್ತಿಗಾಗಿ (ಅಥವಾ ಇನ್ನಾವುದೇ ಪ್ರಶಸ್ತಿಗಾಗಿ) ಅರ್ಜಿ ಹಾಕಿದವನಲ್ಲ, ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಪ್ರಯತ್ನಿಸಿದವನೂ ಅಲ್ಲ. ಮುಂದೆಯೂ ಎಂದೂ ಅರ್ಜಿ ಹಾಕುವುದಿಲ್ಲ, ಯಾವ ರೀತಿಯಲ್ಲೂ ಪ್ರಯತ್ನಿಸುವುದಿಲ್ಲ ಕೂಡ. ಪ್ರಶಸ್ತಿಯೆಂದರೆ ಅದನ್ನು ನೀಡುವವರು ಅರ್ಹರನ್ನು ತಾವೇ ಗುರುತಿಸಿ ಸಗೌರವ ಅವರಿಗೆ ನೀಡಬೇಕಾದ ಸಮ್ಮಾನವಾಗಿರುವುದರಿಂದ ಅದಕ್ಕೆ ಅರ್ಜಿ ಲಗಾಯಿಸುವುದೆಂದರೆ ಪ್ರಶಸ್ತಿಯೆಂಬ ಪದದ ಅರ್ಥಕ್ಕೇ ಅಪಚಾರವೆಂದು ನನ್ನ ಭಾವನೆ. ಹೀಗಿರುವಾಗ, ಪ್ರಶಸ್ತಿಗಾಗಿ ಅರ್ಜಿಗುಜರಾಯಿಸುವುದು ಅಯೋಗ್ಯ ಮತ್ತು ಆತ್ಮಾವಮಾನದ ಕೆಲಸ ಮಾತ್ರವಲ್ಲ, ಹಾಗೆ ಅರ್ಜಿ ಹಾಕಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವುದು ಅನ್ಯಾಯ ಮತ್ತು ಸಾಮಾಜಿಕ ಅಪರಾಧ ಕೂಡ ಎಂಬುದು ನನ್ನ ನಿಲುವು.
ಒಂದು ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿಯೆಂಬುದು ಸರಕಾರವು ತಾನಾಗಿಯೇ ಅರ್ಹರನ್ನು ಗುರುತಿಸಿ ಕೊಡಮಾಡುವ ಅನ್ವರ್ಥ ಪ್ರಶಸ್ತಿಯಾಗಿತ್ತು. ಬರಬರುತ್ತ ಅದು ಅರ್ಜಿಗಳೆಂಬ ರೋಗಕ್ಕೆ ತುತ್ತಾಯಿತು. ವಿಷಾದದ ಸಂಗತಿಯೆಂದರೆ, ಅರ್ಜಿ ಹಾಕಿದವರನ್ನು ಆ ಕಾರಣಕ್ಕಾಗಿಯೇ ಪರಿಗಣನೆಯಿಂದ ಹೊರಗಿಡಬೇಕಾ ಅರ್ಜಿಗಳನ್ನು ಪರಾಂಬರಿಸಿ ಪ್ರಶಸ್ತಿ ನೀಡುವ ಕಾಯಕದಲ್ಲಿ ತೊಡಗಿತು. ಈ ಸಲ ಅರ್ಧದಷ್ಟು ಪ್ರಶಸ್ತಿಗಳನ್ನು ಅರ್ಜಿದಾರರಿಗೆ ನೀಡಲಾಗಿದೆಯೆಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರೇ ಅಧಿಕೃತವಾಗಿ ಘೋಷಿಸಿದ್ದಾರೆ! ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಇದಕ್ಕಿಂತ ದೊಡ್ಡ ಅವಮಾನ ಬೇರೊಂದುಂಟೆ? (ಉಳಿದರ್ಧದಲ್ಲಿ ಕೆಲವಾದರೂ ಅತ್ಯಂತ ಅರ್ಹರಿಗೆ ದೊರೆತಿರುವುದು ಸಮಾಧಾನದ ಸಂಗತಿಯೆನ್ನಿ.)
ಅರ್ಹರು ತಮ್ಮ ಸಾಧನೆಯನ್ನು ಹೇಳಿಕೊಳ್ಳದಿದ್ದರೆ ಪ್ರಶಸ್ತಿಪ್ರದಾನಿಗಳಿಗೆ ಅನೇಕ ಅರ್ಹರ ಬಗ್ಗೆ ಗೊತ್ತಾಗುವುದಾದರೂ ಹೇಗೆ ಎಂಬ ವಾದವೊಂದಿದೆ. ಈ ವಾದ ಅರ್ಥಹೀನ. ಅರ್ಹರನ್ನು ಗುರುತಿಸುವ ಸಾಮಥ್ರ್ಯ ಮತ್ತು ಯೋಗ್ಯತೆ ಇಲ್ಲದವರು ಪ್ರಶಸ್ತಿಗಳನ್ನು ನೀಡುವ ಗೋಜಿಗೇ ಹೋಗಬಾರದು. ಅಂತಹವರು ಪ್ರಶಸ್ತಿ ನೀಡಲಿಕ್ಕೇ ಅರ್ಹರಲ್ಲ. ಸರಕಾರದ ಮಟ್ಟಿಗೆ ಹೇಳುವುದಾದರೆ, ನಾಡಿನ ಯಾವ ಮೂಲೆಯಲ್ಲೋ ಎಲೆಮರೆಯ ಕಾಯಿಯಂತಿರುವ ಅರ್ಹನನ್ನು ಗುರುತಿಸುವ ಕಾರ್ಯ ಸರಕಾರದಂತಹ ಬೃಹತ್ ಸಂಸ್ಥೆಗೆ ಅಸಾಧ್ಯವೇನಲ್ಲ. ಹಾಗೆ ಹೆಕ್ಕಿ ತೆಗೆಯಲು ಅನುವಾಗುವಂತೆ ಸರಕಾರಕ್ಕೆ ಮಾಧ್ಯಮಗಳ ಮತ್ತು ವಿದ್ವಾಂಸರ ಸಹಕಾರ ಖಂಡಿತ ಇರುತ್ತದೆ. ಮೇಲಾಗಿ, ರಾಜಧಾನಿಯಿಂದ ಹಿಡಿದು ದೂರದ ಕುಗ್ರಾಮವೊಂದರವರೆಗೂ ಸರಕಾರವೆಂಬ ವೃಕ್ಷದ ರೆಂಬೆಕೊಂಬೆಗಳು ಚಾಚಿಕೊಂಡಿರುತ್ತವೆ. ಪ್ರತಿವರ್ಷ ಸಾಕಷ್ಟು ಮುಂಚಿತವಾಗಿ ಮತ್ತು ವ್ಯವಸ್ಥಿತವಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯುವ ಕಾರ್ಯವನ್ನು ಆರಂಭಿಸಬೇಕಾದ್ದು ಸರಕಾರದ ಕರ್ತವ್ಯ. ಅದುಬಿಟ್ಟು, ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ ನವೆಂಬರ್ ಒಂದನೇ ತೇದಿ ಇನ್ನೇನು ಬಂದೇಬಿಟ್ಟಿತು ಎನ್ನುವಾಗ ಅರ್ಜಿಗಳನ್ನು ಎದುರಿಟ್ಟುಕೊಂಡು ಅವುಗಳ ತೂಕ (ವಿವಿಧಾರ್ಥಗಳಲ್ಲಿ) ನೋಡಿ ಆ ಪೈಕಿ ಒಂದಷ್ಟಕ್ಕೆ (ತನ್ನ ಆಯ್ಕೆಯ ಇನ್ನೊಂದಷ್ಟರ ಜೊತೆಗೆ) ಪ್ರಶಸ್ತಿ ಘೋಷಿಸುವುದು ಯಾವುದೇ ಸರಕಾರಕ್ಕೆ ಭೂಷಣವಾಗುವ ನಡೆಯಲ್ಲ.
ಅರ್ಜಿ ಗುಜರಾಯಿಸಿ ಅವುಗಳ ಹಿಂದೆ ಅಲೆದಾಡುವ ಭಿಕ್ಷುಕಸಮಾನ 'ಸಾಧಕ'ರನ್ನು ಅವರು ಕೈಕೊಳ್ಳುವ ವಶೀಲಿಬಾಜಿ ಮತ್ತು ಮಾಡುವ ಗೋಗರೆತ ಇವುಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುವ (ಅ)ಕ್ರಮದಿಂದಾಗಿ ಪ್ರತಿಬಾರಿ ಸಾಕಷ್ಟು ಮಂದಿ ಅನರ್ಹರು ಪ್ರಶಸ್ತಿಗಳನ್ನು ಬಾಚಿಕೊಳ್ಳುವುದನ್ನು ನಾವು ನೋಡಿದ್ದೇವೆ. ಈ ವರ್ಷವೂ ಇಂತಹ ಹಲವರು ಪ್ರಶಸ್ತಿ ಗಿಟ್ಟಿಸಿದ್ದಾರೆ. ಮೌಲಿಕ ಕೊಡುಗೆ ನೀಡಿರದ ಇಬ್ಬರು ಈ ಸಲ 'ಸಾಹಿತ್ಯ' ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿದರೆ ಯಾರೋ ಸೃಷ್ಟಿಸಿದ ಜೋಕುಗಳಿಗೆ ಒಣಮಸಾಲೆ ಹಚ್ಚಿ ಒದರಿ ಕಾಸುಮಾಡಿಕೊಳ್ಳುತ್ತಿರುವ ಓರ್ವ ವ್ಯಕ್ತಿಯೂ ಸೇರಿದಂತೆ ಕನಿಷ್ಠಪಕ್ಷ ಮೂವರು ಅನರ್ಹರು 'ಸಂಕೀರ್ಣ' ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ದೃಶ್ಯ ಮಾಧ್ಯಮದಲ್ಲಿನ್ನೂ ಕಣ್ಣು ತೆರೆಯುತ್ತಿರುವ ಒಬ್ಬರಿಗೆ ಮತ್ತು ನಿದ್ದೆ ಬಂದವರಂತೆ ಬೆಪ್ಪುಬೆಪ್ಪಾಗಿ ಕ್ಯಾಮೆರಾ ಮುಂದೆ ವರದಿಗಳನ್ನು ನೀಡುವ ಇನ್ನೊಬ್ಬರಿಗೆ 'ಮಾಧ್ಯಮ' ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. 'ಶಿಕ್ಷಣ' ವಿಭಾಗದ ಪ್ರಶಸ್ತಿ ಪುರಸ್ಕೃತರಲ್ಲಿ ಅರ್ಧದಷ್ಟು ಮಂದಿ ಅನರ್ಹರು. 'ಸಮಾಜಸೇವೆ', 'ಸಾಂಸ್ಕೃತಿಕ ಸಂಘಟನೆ' ಈ ವಿಭಾಗಗಳಲ್ಲೂ ಹಲವು ಅನರ್ಹರಿಗೆ ಪ್ರಶಸ್ತಿ ನೀಡಲಾಗಿದೆ. ಧನಾರ್ಜನೆ, ಗಿಮಿಕ್ ಮತ್ತು ಪ್ರಚಾರ ಇವುಗಳಲ್ಲಿ ಪ್ರವೀಣರಾದ ಕೆಲ ವೈದ್ಯರೂ ಪ್ರಶಸ್ತಿ ಗಿಟ್ಟಿಸಿದ್ದಾರೆ. ಉಳಿದ ಕೆಲವು ವಿಭಾಗಗಳಲ್ಲೂ ಹಲವು ಅನರ್ಹರಿಗೆ ಪ್ರಶಸ್ತಿ ನೀಡಲಾಗಿದೆ.
ದುರಂತವೆಂದರೆ, ಅನರ್ಹರ ಈ ಒತ್ತಡದಿಂದಾಗಿ ಅದೆಷ್ಟೋ ಮಂದಿ ಅರ್ಹರು ಪ್ರಶಸ್ತಿಯಿಂದ ವಂಚಿತರಾಗಿರುವುದು. ಸ್ವಾಭಿಮಾನ ಮತ್ತು ಆದರ್ಶ ನಡೆ ಹೊಂದಿರುವ ಅರ್ಹರನೇಕರು ಕಡೆಗಣನೆಗೆ ತುತ್ತಾಗಿದ್ದಾರೆ. ನನ್ನದೇ ಉದಾಹರಣೆಯನ್ನು ಈ ಸಂದರ್ಭದಲ್ಲಿ ಹೇಳಿದರೆ ಅನುಚಿತವಾಗಲಾರದೆಂದು ಭಾವಿಸುತ್ತೇನೆ.
ಕಳೆದ ನಲವತ್ತೈದು ವರ್ಷಗಳಿಂದ ಸಾಹಿತ್ಯಕೃಷಿಯಲ್ಲಿ ತೊಡಗಿರುವ ನನ್ನ ಎರಡೂವರೆ ಸಾವಿರಕ್ಕೂ ಹೆಚ್ಚು ಕನ್ನಡ ಬರಹಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಹುತೇಕ ಬರಹಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ರಾಜ್ಯದ ಆರು ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರನಾಗಿ ವರ್ಷಗಳ ಕಾಲ ಒಟ್ಟು ಏಳು ವಿವಿಧ ಬಗೆಯ ಅಂಕಣಗಳನ್ನು ನಿರ್ವಹಿಸಿದ್ದೇನೆ. ವರ್ಷಗಳ ಕೆಳಗೆ ನನ್ನ ಕವನಸಂಕಲನವೊಂದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಗತ ಸಮಿತಿಯೊಂದು ಆಯ್ಕೆಮಾಡಿ, ಪ್ರಕಟಣೆಗಾಗಿ ಧನಸಹಾಯ ನೀಡಿ, ಪ್ರಕಟಿತ ಕೃತಿಯನ್ನು ಪರಿಷತ್ತೇ ಬಿಡುಗಡೆ ಮಾಡಿದೆ. ಕನರ್ಾಟಕ, ಆಂಧ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ವಿವಿಧ ಕನ್ನಡ ಸಂಘಸಂಸ್ಥೆಗಳ ಪದಾಧಿಕಾರಿಯಾಗಿ ದಶಕಗಳ ಕಾಲ ಮಹತ್ತ್ವದ ಹಲವು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದೇನೆ. ಲಕ್ಷಾಂತರ ಮಂದಿ ಆ ಯೋಜನೆಗಳ ಫಲಾನುಭವಿಗಳಾಗಿ ವಿವಿಧ ಸಾಧನೆಗೈದಿದ್ದಾರೆ ಮತ್ತು ಸಾವಿರಾರು ಮಂದಿ ತಮ್ಮ ಬಾಳನ್ನು ರೂಪಿಸಿಕೊಂಡಿದ್ದಾರೆ. ಶಾಲಾಮಕ್ಕಳಿಗೆ ವರ್ಷವಿಡೀ ಉಚಿತವಾಗಿ ಪಾಠಗಳನ್ನು ಹೇಳುವ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇನೆ. ಎಪ್ಪತ್ತರ ದಶಕದಲ್ಲಿ, ಪದವೀಧರನಾದ ಬೆನ್ನಿಗೇ ದಾವಣಗೆರೆಯಲ್ಲಿ 'ಪ್ರಜಾಕ್ರಾಂತಿ' ಎಂಬ ವಾರಪತ್ರಿಕೆಯನ್ನು ನಡೆಸಿದ್ದೇನೆ. (ಬೆಂಗಳೂರಿನಿಂದ ದೆಹಲಿಗೆ ಹೋಗಿ ಆಗಾಗ ನೂರು ಪ್ರತಿ ಪತ್ರಿಕೆ ಅಚ್ಚಿಸಿ ಹಂಚಿ ಬರುವವರೊಬ್ಬರಿಗೂ ಈ ಸಲ ಪ್ರಶಸ್ತಿ ನೀಡಲಾಗಿದೆ!)
ಹೀಗೆ ಅರ್ಹತೆಯಿದ್ದೂ, ಪ್ರಶಸ್ತಿಗಾಗಿ ನಾನೊಂದುವೇಳೆ ಪ್ರಭಾವಿಗಳ ಮೂಲಕ ಪ್ರಯತ್ನ ಮಾಡಬೇಕೆಂದಿದ್ದರೆ ನನಗೆ ಅದೇನೂ ಕಷ್ಟವಾಗುತ್ತಿರಲಿಲ್ಲ. ಹಾಲಿ ಮುಖ್ಯಮಂತ್ರಿಯವರ ಅಕ್ಕಪಕ್ಕ ಇರುವ ಮೂವರು ಅತಿಗಣ್ಯರು ನನಗೆ ಆಪ್ತರು. ರಾಜಕಾರಣವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂದು ಪ್ರಸಿದ್ಧರಾಗಿರುವವರ ಪೈಕಿ ಹಲವರು ನನ್ನಿಂದಾಗಿ ಉತ್ತಮ ಭವಿಷ್ಯ ರೂಪಿಸಿಕೊಂಡಿರುವವರು ಅಥವಾ ನನ್ನ ಪರಿಚಿತರು. ಇವರನ್ನು ಉಪಯೋಗಿಸಿಕೊಳ್ಳುವಂತಹ ಹೇಯ ಕೃತ್ಯವನ್ನು ನಾನು ಎಂದೂ ಮಾಡಲಿಲ್ಲ, ಮುಂದೆಂದಿಗೂ ಮಾಡುವುದೂ ಇಲ್ಲ.
ನನ್ನಂತಹ ಮತ್ತು ನನಗಿಂತ ಯೋಗ್ಯರಾದ ಎಷ್ಟೋ ಮಂದಿ ಇಂದು ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಂದ ವಂಚಿತರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯ ಮಟ್ಟಿಗೆ ಹೇಳುವುದಾದರೆ ಈ ವಂಚನೆಗೆ ರಾಜಕಾರಣಿಗಳು ಮತ್ತು ಸಂಬಂಧಿತ ಅಧಿಕಾರಿಗಳು ಇಬ್ಬರೂ ಹೊಣೆಗಾರರು.
ಮುಂದಿನ ವರ್ಷಗಳಲ್ಲಾದರೂ ಸರಕಾರವು ತನ್ನ ಹೊಣೆಗಾರಿಕೆಯನ್ನು ಲೋಪದೋಷರಹಿತವಾಗಿ ನಿರ್ವಹಿಸಲೆಂಬುದು ಕೇವಲ ನನ್ನೊಬ್ಬನ ಅಪೇಕ್ಷೆಯಲ್ಲ, ಸಹೃದಯ ಕನ್ನಡಿಗರೆಲ್ಲರ ಅಪೇಕ್ಷೆ ಕೂಡ. ಅರ್ಜಿಗಳನ್ನು ಪರಿಗಣಿಸಿ ಪ್ರಶಸ್ತಿ ನೀಡುವ ಪದ್ಧತಿಗೆ ಸರಕಾರ ಇತಿಶ್ರೀ ಹಾಡಬೇಕು. ಅರ್ಜಿಗಳನ್ನು ಸಲ್ಲಿಸಕೂಡದೆಂದೂ ಅರ್ಜಿಸಲ್ಲಿಸಿದವರು ಪ್ರಶಸ್ತಿಗೆ ಅನರ್ಹರಾಗುವರೆಂದೂ ಸಾಕಷ್ಟು ಮುಂಚಿತವಾಗಿಯೇ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಬೇಕು. ಅರ್ಹರ ಆಯ್ಕೆಗಾಗಿ ಸಾಕಷ್ಟು ಮೊದಲೇ ಪೂರ್ವಭಾವಿ ಸಿದ್ಧತೆಗಳನ್ನು ಸರಕಾರ ಕೈಗೊಳ್ಳಬೇಕು. ಸಾಧಕರ ಪಟ್ಟಿ ಮಾಡುವ ಕಾರ್ಯ ಗ್ರಾಮಮಟ್ಟದಿಂದ ಮೊದಲ್ಗೊಂಡು ವ್ಯಾಪಕವಾಗಿ ನಡೆಯಬೇಕು. ಈ ಕಾರ್ಯಕ್ಕಾಗಿ ಸರಕಾರಿ ಯಂತ್ರ ಮತ್ತು ಸ್ಥಳೀಯ ಆಡಳಿತದ ಪ್ರಯತ್ನದ ಜೊತೆಗೆ ಸ್ಥಳೀಯ ಗಣ್ಯರ ಸಮಿತಿಗಳೂ ನೇಮಕಗೊಳ್ಳಬೇಕು. ಪಟ್ಟಿಗಳು ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಜರಡಿಹಿಡಿಯಲ್ಪಟ್ಟು ರಾಜ್ಯಮಟ್ಟದ ಸಮಿತಿಗೆ ರವಾನೆಯಾಗಬೇಕು. ಈ ಎಲ್ಲ ಕಾರ್ಯಗಳೂ ಸಾಕಷ್ಟು ಮುಂಚಿತವಾಗಿಯೇ ನಡೆಯಬೇಕು. ಈಗಿನಂತೆ, ಕುತ್ತಿಗೆಗೆ ಬಂದಮೇಲೆ ಜಿಲ್ಲೆಗಳಿಂದ ಹೆಸರು ತರಿಸಿ ಆಯ್ಕೆಮಾಡುವುದಲ್ಲ.
ರಾಜ್ಯಮಟ್ಟದ ಸಮಿತಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ವಿವಿಧ ಅಕಾಡೆಮಿಗಳ ಅಧ್ಯಕ್ಷರು ಇವರೆಲ್ಲರ ಒಟ್ಟು ಸಂಖ್ಯೆ ಚಿಕ್ಕದಿರಬೇಕು. ಈ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳ ವಿದ್ವಾಂಸರನ್ನು ಸದರಿ ಸಮಿತಿಯು ಒಳಗೊಂಡಿರಬೇಕು. ಈ ಸಮಿತಿಯು ಸಾಕಷ್ಟು ವ್ಯವಧಾನ ಇಟ್ಟುಕೊಂಡು ಜಿಲ್ಲಾವಾರು ಪಟ್ಟಿಗಳನ್ನು ಪರಾಮರ್ಶಿಸಿ ಅಂತಿಮ ಆಯ್ಕೆ ಕೈಗೊಳ್ಳಬೇಕು. ಪಟ್ಟಿಯಲ್ಲಿಲ್ಲದ ಅರ್ಹರಿದ್ದಲ್ಲಿ ಅಂತಹವರನ್ನು ಆಯ್ಕೆಮಾಡುವ ಅಧಿಕಾರ ಈ ಸಮಿತಿಗೆ ಇರಬೇಕು, ಆದರೆ ಸಮಿತಿಯ ನಿರ್ಣಯವನ್ನು ಮೀರಿ ಹೆಸರು ಸೇರಿಸುವ ಅಧಿಕಾರ ಮುಖ್ಯಮಂತ್ರಿಯೂ ಸೇರಿದಂತೆ ಯಾರಿಗೂ ಇರಕೂಡದು. ಅವಶ್ಯವಾದಲ್ಲಿ ಈ ಎಲ್ಲ ಅಂಶಗಳನ್ನೊಳಗೊಂಡ ನಿಯಮವೊಂದನ್ನು ಸಕರ್ಾರ ರೂಪಿಸಿ ಜಾರಿಗೊಳಿಸಬೇಕು.
ಈ ಇಡೀ ಕಾರ್ಯವು ಪಾರದರ್ಶಕವಾಗಿರುವ ಉದ್ದೇಶದಿಂದ, ಸಾಧ್ಯವಿದ್ದ ಸಂದರ್ಭಗಳಲ್ಲೆಲ್ಲ, ಆಗುಹೋಗುಗಳ ಮಾಹಿತಿಗಾಗಿ/ಪ್ರಸಾರಕ್ಕಾಗಿ, ಆಯ್ಕೆ ಪ್ರಕ್ರಿಯೆಯ ಸಭೆಗಳಲ್ಲಿ ಮಾಧ್ಯಮಗಳಿಗೆ ಪ್ರವೇಶ ಇರಬೇಕು. ಮಾಧ್ಯಮಗಳು ಮತ್ತು ತನ್ಮೂಲಕ ಜನರು ಗಮನಿಸುತ್ತಿದ್ದರೆಂದಾದಲ್ಲಿ ಪಾರದರ್ಶಕತೆ ತಂತಾನೇ ಬರುತ್ತದೆ. ಅರ್ಜಿ ನೀಡಿ ಅಲೆಯುವ ಬಾಧಕ 'ಸಾಧಕ'ರ ಪೀಡೆಯೂ ಸರಕಾರಕ್ಕೆ ತಪ್ಪುತ್ತದೆ.
ಒಂದು ಸತ್ಯವನ್ನು ಮಾತ್ರ ಸರಕಾರವು ಸದಾ ನೆನಪಿಟ್ಟುಕೊಳ್ಳಬೇಕು. ಲಕ್ಷ ರೂಪಾಯಿ, ಬಂಗಾರದ ಪದಕ ಮತ್ತು ನಿವೇಶನಾದ್ಯತೆ ಇವುಗಳ ಹೊರತಾಗಿ ರಾಜ್ಯೋತ್ಸವ ಪ್ರಶಸ್ತಿಗೇನಾದರೂ ಗೌರವವೆಂಬುದು ಇರಬೇಕೆಂದಾದರೆ ನೂರು ಯೋಗ್ಯರ ಮಧ್ಯೆಯೂ ಒಬ್ಬನೇ ಒಬ್ಬ ಅಯೋಗ್ಯನಿಗೂ ಪ್ರಶಸ್ತಿ ಸಲ್ಲಬಾರದು. ಮುಖ್ಯಮಂತ್ರಿಯು ತನ್ನ ಕೋಟಾದಡಿ ತನ್ನ ಮನೆಗೆಲಸದವಳಿಗೆ, ಕಾರು ಚಾಲಕನಿಗೆ, (ಮುಂದುವರಿದು, ಬಟ್ಟೆ ಇಸ್ತ್ರಿ ಮಾಡುವವನಿಗೆ, ಮೈ ಮಸಾಜ್ ಮಾಡುವವನಿಗೆ, ನಾಯಿಯನ್ನು ವಾಕಿಂಗ್ ಕರೆದುಕೊಂಡುಹೋಗುವವನಿಗೆ) ಇವರಿಗೆಲ್ಲ ನಿವೇಶನ ನೀಡುವಂತೆ ಅಲ್ಲ ರಾಜ್ಯೋತ್ಸವ ಪ್ರಶಸ್ತಿಯೆಂಬುದು. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಯಾವುದೇ ಪ್ರಶಸ್ತಿಗೆ ಗೌರವವೆಂಬ ಮೌಲ್ಯವಿರುತ್ತದೆ. ಆ ಗೌರವವನ್ನೇ ಕಳೆದುಬಿಟ್ಟು ಪ್ರಶಸ್ತಿಯನ್ನು ಭಿಕ್ಷೆಯನ್ನಾಗಿ ಅಥವಾ ಮಾರಾಟದ ಸರಕನ್ನಾಗಿ ಮಾರ್ಪಡಿಸುವುದು ಸಾಮಾಜಿಕ ಅಪರಾಧವೆಂದೇ ಹೇಳಬೇಕಾಗುತ್ತದೆ.


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment