ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


I had never liked the title ISBS which to me seemed not only unwidely, but also tainted with officialdom - Lionel fieldon.
ಸ್ವತಂತ್ರ ಪೂರ್ವ ಭಾರತದ ಮೊತ್ತ ಮೊದಲ ಬ್ರಾಡ್ಕಾಸ್ಟಿಂಗ್ ಕಂಟ್ರೋಲರ್ ಲಿಯೊನಲ್ ಫೀಲ್ಡನ್. ಆತನ ಆತ್ಮ ಚರಿತ್ರೆ ಬ್ರಿಟಿಷರ ಆಳ್ವಿಕೆಯ ಸಂದರ್ಭ ದೇಶದಲ್ಲಿದ್ದ ಬಾನುಲಿ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

1927ರಲ್ಲಿ ಕೆಲ ವ್ಯಾಪಾರಿಗಳು ಜತೆಯಾಗಿ ಅತ್ಯಲ್ಪ ವೆಚ್ಚದಲ್ಲಿ ಕಲ್ಕತ್ತಾ ಹಾಗೂ ಮುಂಬಯಿಗಳಲ್ಲಿ ಎರಡು ಪುಟ್ಟ ಬಾನುಲಿ ಕೇಂದ್ರಗಳನ್ನು ಸ್ಥಾಪಿಸಿದರು. ಮುಂದೆ ಆ ಕೇಂದ್ರಗಳು ಬ್ರಿಟಿಷ್ ಸರಕಾರದ ಕೈಸೇರಿ "ಇಂಡಿಯನ್ ಸ್ಟೇಟ್ ಬ್ರಾಟ್ಕಾಸ್ಟಿಂಗ್ ಸರ್ವೀಸ್" ರೂಪುಗೊಂಡಿತು.

ಆಗಿನ ಬ್ರಾಟ್ಕಾಸ್ಟಿಂಗ್ ಕಂಟ್ರೋಲರ್ ಲಿಯೊನಲ್ ಫೀಲ್ಡನ್ ಐಎಸ್ಬಿಎಸ್ ಎಂಬ ಹೆಸರಿನಿಂದ ಸಂತುಷ್ಟನಾಗಿರಲಿಲ್ಲ. ಆ ಹೆಸರು ಆತನಿಗೆ ತೀರಾ ವ್ಯಾವಹಾರಿಕವೆನಿಸಿತು. ಈ ಹೆಸರನ್ನು ಬದಲಾಯಿಸಲು ಆತ ಆಗಿನ ಸೆಕ್ರೆಟೆರಿಯೇಟ್ಗೆ ಮನವಿ ಮಾಡಿದ. ಸೆಕ್ರೆಟೆರಿಯೇಟ್ ಆತನ ಮನವಿಯನ್ನು ತಿರಸ್ಕರಿಸಿತು. ವಯ್ಸ್ರಾಯ್ ಲಿನ್ಲಿಥ್ಗ್ಲೋ ಅವರಲ್ಲಿ ಆತ ಈ ಬಗ್ಗೆ ಹೇಳಿಕೊಂಡ. ಐಎಸ್ಬಿಎಸ್ ಗೆ ಪರ್ಯಯ ಪದವೊಂದನ್ನು ಸೂಚಿಸುವಂತೆ ಆತ ಕೇಳಿಕೊಂಡಾಗ ವಯ್ಸ್ರಾಯ್ ಸೂಚಿಸಿದ ಪದವೇ " ಆಲ್ ಇಂಡಿಯಾ". ಫೀಲ್ಡನ್ಗೆ ಈ ಪದ ಇಷ್ಟವಾಯಿತಾದರೂ ಪದದಲ್ಲಿ "ಪ್ರಸಾರ"ದ ಬಗ್ಗೆ ಉಲ್ಲೇಖವಿರದಿದ್ದದ್ದು ಯೋಚನೆಗೀಡು ಮಾಡಿತು. ಆತನ ಗೊಂದಲವನ್ನು ಗಮನಿಸಿದ ವಯ್ಸ್ರಾಯ್ ಕೆಲ ನಿಮಿಷಗಳ ಕಾಲ ಯೋಚಿಸಿ "ಆಲ್ ಇಂಡಿಯಾ ರೇಡಿಯೋ"? ಎಂದು ಪ್ರಶ್ನಾರ್ಥಕವಾಗಿ ಫೀಲ್ಡನ್ನ್ನನ್ನು ನೋಡಿದರು. ಅದ್ಭುತ! ಎಂದು ಉದ್ಘರಿಸಿದ ಫೀಲ್ಡನ್. ಹೀಗೆ ಹುಟ್ಟಿತು "ಆಲ್ ಇಂಡಿಯಾ ರೇಡಿಯೋ".ದ್ವಿತೀಯ ಮಹಾಯುದ್ಧದ ಸಂದರ್ಭ. ನಾಜಿ ಪ್ರಚಾರಕ್ಕಾಗಿ ಹಿಟ್ಲರ್ ಬಾನುಲಿಯನ್ನು ಮಾಧ್ಯಮವನ್ನಾಗಿ ಉಪಯೋಗಿಸುತ್ತಿದ್ದ ಸಮಯ. ಆತನ ಪ್ರಚಾರ ಸಂದೇಶಗಳು ಪ್ರಬಾವಶಾಲಿಯಾಗಿದ್ದು ಇಡೀ ಪ್ರಪಂಚವನ್ನೇ ಆವರಿಸಿದ್ದವು. ಇದನ್ನು ತಡೆಯಲು ಹಾಗೂ ದೇಶದಲ್ಲಿ ಬಾನುಲಿ ಪ್ರಸಾರದ ವಿಸ್ತಾರವನ್ನು ಇನ್ನಷ್ಟು ಹೆಚ್ಚಿಸಲು ಆಲ್ ಇಂಡಿಯಾ ರೇಡಿಯೊ ಎಲ್ಲಾ ವರ್ತಾ ಬುಲೆಟಿನ್ಗಳನ್ನು ಒಂದೇ ನಿಲಯದಿಂದ ಪ್ರಸಾರಗೊಳಿಸಲು ನಿರ್ಧರಿಸಲಾಯಿತು.

ಆಲ್ ಇಂಡಿಯಾ ರೇಡಿಯೋ ಸ್ವತಂತ್ರ ಚಳುವಳಿಕಾರರಿಗೆ ಸಹಾಯಕಾರಿಯಾಗಿರಲಿಲ್ಲ. ಆಗ ಬ್ರಿಟಿಷರ ಆಡಳಿತಕ್ಕೊಳಪಟ್ಟಿದ್ದ ಇದು ಕೇವಲ ಬ್ರಿಟಿಷ್ ಪ್ರಚಾರಕ್ಕಷ್ಟೇ ಸೀಮಿತವಾತ್ತು. ಹಾಗಾಗಿ ಸ್ವತಂತ್ರ ಚಳುವಳಿಕಾರರು "ಭೂಗತ ರೇಡಿಯೋ'ವನ್ನು ಅವಲಂಬಿಸುವಂತಾಯಿತು. ಉಷಾ ಮೆಹ್ತಾ, ವಿಠಲ್ ದಾಸ್ ಕಾಕರ್, ಚಂದ್ರಕಾಂತ್ ಜಾವೇರಿ ಮುಂತಾದ ಯುವ ಕಾಂಗ್ರೆಸ್ ಚಳುವಳಿಕಾರರು 1942ರಲ್ಲಿ ಭೂಗತ ರೇಡಿಯೋವೊಂದನ್ನು ಪ್ರಾರಂಭಿಸಿದರು. ಆದರೆ ಅದು ಹೆಚ್ಚು ಕಾಲ ಬದುಕುಳಿಯಲಿಲ್ಲ. ಭೂಗತ ರೇಡಿಯೋದ ಸುಳಿವು ಸಿಕ್ಕ ಬ್ರಿಟಿಷ್ ಪೋಲೀಸ್ ಕೂಡಲೇ ಅದನ್ನು ವಶ ಪಡಿಸಿಕೊಂಡಿತು.

ಸ್ವತಂತ್ರ್ಯಾನಂತರ ಆಕಾಶವಾಣಿ

ಸ್ವತಂತ್ರ್ಯಾನಂತರ ಆಲ್ ಇಂಡಿಯಾ ರೇಡಿಯೋ ( ಆಕಾಶವಾಣಿ) ರಾಷ್ಟ್ರೀಯ ಪ್ರಸಾರ ಮಾಧ್ಯಮವಾಗಿ ಹೊರಹೊಮ್ಮಿತು. ದೆಹಲಿ, ಮುಂಬಯಿ, ಮದ್ರಾಸ್ ಕಲ್ಕತ್ತಾ ಹಾಗೂ ತಿರುವೆರಾಪಳ್ಳಿಗಳಲ್ಲಿ ಆರು ಪ್ರಮುಖ ಕೇಂದ್ರಗಳನ್ನು ಹೊಂದಿದ್ದ ಆಕಾಶವಾಣಿ ದೇಶದೆಲ್ಲೆಡೆ ಲಕ್ಷಾಂತರ ಕೇಳುಗರನ್ನು ಹೊಂದಿತ್ತು. ಎರಡು ವರುಷಗಳಲ್ಲೇ 25 ಪ್ರಾದೇಶಿಕ ಕೇಂದ್ರಗಳು ಪ್ರಾರಂಭಗೊಂಡವು. 1957ರ ಅಕ್ಟೋಬರ್ನಲ್ಲಿ 'ವಿವಿಧ ಭಾರತಿ' ಸೇವೆ ಪ್ರಾರಂಭಗೊಂಡಿತು. ಇದರಿಂದ ಆಕಾಶವಾಣಿಯ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಯುವಜನತೆಯ ಧ್ವನಿ 'ಯುವವಾಣಿ' 1969ರಲ್ಲಿ ಪ್ರಾರಂಭಗೊಂಡು ಪ್ರಾದೇಶಿಕ ಭಾಷೆಗಳಲ್ಲೂ ಪ್ರಸಾರಗೊಳ್ಳತೊಡಗಿತು. 1977ರಲ್ಲಿ ಮದ್ರಾಸ್ನಲ್ಲಿ ಎಫ್ಎಂ ಪ್ರಸಾರವನ್ನು ಪ್ರಾರಂಭಿಸಲಾಯಿತು. ತನ್ನ ರಾಷ್ಟ್ರೀಯ , ಅಂತರಾಷ್ಟ್ರೀಯ ಹಾಗೂ ಸ್ಥಳೀಯ ಸೇವೆಗಳಿಂದ ಆಕಾಶವಾಣಿ ವೈವಿಧ್ಯಮಯ ಮಾಧ್ಯಮವಾಗಿ ಹೊರಹೊಮ್ಮಿತು.

ವಾಣಿಜ್ಯೀಕರಣದತ್ತ ಆಕಾಶವಾಣಿ

ಆಗಿನ ಮಾಹಿತಿ ಹಾಗೂ ಪ್ರಸಾರ ಮಂತ್ರಿ ಬಿ.ವಿ ಕೇಸ್ಕರ್ ಆಕಾಶವಾಣಿಯಲ್ಲಿ ಸಿನಿಮಾ ಗೀತೆಗಳ ಪ್ರಸಾರವನ್ನು ತೀವ್ರವಾಗಿ ಖಂಡಿಸಿದ್ದರು. ಸಿನಿಮಾ ಸಂಗೀತ ಕೀಳು ಮಟ್ಟದ್ದೆಂಬ ಅಭಿಪ್ರಾಯ ಅವರದಾಗಿತ್ತು. ಹಾಗಾಗಿ ಆಕಾಶವಾಣಿಯಲ್ಲಿ ಕೇವಲ ಶಾಸ್ತ್ರೀಯ ಸಂಗೀತಕ್ಕಷ್ಟೇ ಸ್ಥಾನವಿತ್ತು. ನೆರೆ ರಾಷ್ಟ್ರ ಶ್ರೀಲಂಕಾದ "ರೆಡಿಯೋ ಸಿಲೋನ್" ತನ್ನ ಪ್ರಭಾವಶಾಲಿ ಟ್ರಾನ್ಸ್ಮೀಟರ್ಗಳಿಂದ ಹಿಂದಿ ಚಿತ್ರಗೀತೆಗಳನ್ನೊಳಗೊಂಡ ಮನರಂಜನಾ ಕಾರ್ಯಕ್ರಮಗಳನ್ನು ಭಾರತಕ್ಕೂ ಬಿತ್ತರಿಸತೊಡಗಿತು ಭಾರತದ ಕೇಳುಗರು ಸಹಜವಾಗೇ ಅದೆರೆಡೆಗೆ ಆಕರ್ಷಿತರಾದರು. ಕೇಳುಗರನ್ನು ಮತ್ತೆ ತನ್ನೆಡೆಗೆ ಆಕರ್ಷಿಸಲು ಆಕಾಶವಾಣಿ "ವಿವಿಧ ಭಾರತಿ" ಸೇವೆಯನ್ನು ಪ್ರಾರಂಭಿಸಿತು. 1967ರಲ್ಲಿ ಜಾಹೀರಾತುಗಳು ಆಕಾಶವಾಣಿಯನ್ನು ಪ್ರವೇಶಿಸಿದವು. ಪ್ರಾಯೋಜಿತ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತರಗೊಳ್ಳತೊಡಗಿದವು. 1986ರಲ್ಲಿ ಆಕಾಶವಾಣಿಯ ವಾರ್ಷಿಕ ಲಾಭ ರೂ 200 ಮಿಲಿಯನ್ ದಾಟಿತ್ತು. 1990ರಲ್ಲಿ ಈ ಆದಾಯ 370 ಮಿಲಿಯನ್ಗೇರಿತ್ತು. ಆಕಾಶವಾಣಿ ಸಂಗೀತ ಕಾರ್ಯಕ್ರಮಗಳಲ್ಲಿ ಶೇ 60 ರಷ್ಟು ಸ್ಥಾನ ಸಿನಿಮಾ ಗೀತೆಗಳಿಗೆ ನೀಡಲಾಯಿತು. ಮೊತ್ತಮೊದಲ ಎಫ್ ಎಂ ಪ್ರಸಾರವನ್ನು 1977ರಲ್ಲಿ ಮದ್ರಾಸ್ ಕೇಂದ್ರದಿಂದ ಪ್ರಾರಂಭಿಸಲಾಯಿತು. ಬಳಿಕ ಮುಂಬಯಿಯಲ್ಲಿ ಎಫ್ಎಂ ಚಾನೆಲೊಂದನ್ನು ಪ್ರಾರಂಭಿಸಿ ಅದನ್ನು ಖಾಸಗಿ ಸಂಸ್ಥೆಗಳಿಗೆ ಲೀಸ್ ನೀಡಲಾಯಿತು. ಪ್ರತೀ ಗಂಟೆಯ ಕಾರ್ಯಕ್ರಮ ಪ್ರಸಾರಕ್ಕೆ ಮೂರು ಸಾವಿರ ರುಪಾಯಿ ದರವನ್ನು ಆಕಾಶವಾಣಿ ಖಾಸಗಿ ಸಂಸ್ಥೆಗಳಿಂದ ಪಡೆಯತೊಡಗಿತು. ಹತ್ತು ಸೆಕೆಂಡುಗಳ ಜಾಹೀರಾತಿಗೆ 300 ರೂಪಾಯಿ ದರವನ್ನು ನಿಗದಿಪಡಿಸಲಾಯಿತು. ಆಥರ್ಿಕವಾಗಿ ಆಕಾಶವಾಣಿ ಸದೃಢವಾಗತೊಡಗಿತು. ಕಳೆದ ಒಂದು ದಶಕದಿಂದ ನಡೆದ ಬದಲಾವಣೆಗಳು ಆಕಾಶವಾಣಿಯನ್ನು ಮತ್ತೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿದೆ.

ಪ್ರಸಾರ ಭಾರತಿ

ಪ್ರ್ರಾಯಶಃ ಪ್ರಂಪಚದ ಯಾವುದೇ ದೇಶದಲ್ಲಿ ಸರಕಾರವು ಪ್ರಭಾವಶಾಲೀ ಸಮೂಹ ಮಾದ್ಯಮಗಳ ಮೇಲಿನ ತನ್ನ ಹಿಡಿತವನ್ನು ಖಾಸಗೀ ವಲಯಕ್ಕೆ ಬಿಟ್ಟುಕೊಟ್ಟ್ರಲಿಕ್ಕಿಲ್ಲ. ಆದರೆ ಇದಕ್ಕೆ ಅಪವಾದವೆಂಬಂತೆ 1997ರಲ್ಲಿ ಭಾರತ ಸರಕಾರ ತನ್ನ ಅಧೀನ ದಲ್ಲಿದ್ದ 'ಆಕಾಶವಾಣಿ' ಹಾಗೂ 'ದೂರದರ್ಶನ' ಗಳನ್ನು 'ಪ್ರಸಾರ ಭಾರತಿ' ಎಂಬ ಸಂಸ್ಥೆಗೆ ಒಪ್ಪಿಸಿತು.

ಎ. ಕೆ ಚಂದಾ ಹಾಗೂ ಬಿ.ಜಿ ವರ್ಗೀಸ್ ಸಮಿತಿಗಳ ಶಿಫಾರಸ್ಸಿನ ಮೇರೆಗೆ ಆಗಿನ ಮಾಹಿತಿ ಹಾಗೂ ಪ್ರಸಾರ ಮಂತ್ರಿ ಎಲ್.ಕೆ. ಅಡ್ವಾಣಿಯವರು 1979ರಲ್ಲೇ ಪ್ರಸಾರ ಭಾರತಿ ಬಿಲ್ಲನ್ನು ಸಂಸತ್ತಿಗೆ ಮೊತ್ತಮೊದಲ ಬಾರಿ ಪರಿಚಯಿಸಿದರು. ಭಾರತದಲ್ಲಿ ಸ್ವಾಯತ್ತ ಸಾರ್ವಜನಿಕ ಪ್ರಸಾರದ ಅಗತ್ಯತೆಯನ್ನು ಸುಮಾರು ಇಪ್ಪತ್ತು ವರುಷಗಳ ಹಿಂದೆಯೇ ಕಂಡುಕೊಳ್ಳಲಾಯಿತು. ಹಾಗಾಗಿ ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು.ಪ್ರಸಾರ ಭಾರತಿ ಕಾಯ್ದೆಯ ಪ್ರಕಾರ ಆಕಾಶವಾಣಿ ಹಾಗೂ ದೂರದರ್ಶನಗಳು ಸ್ವಾಯತ್ತ ಮಾಧ್ಯಮಗಳಾಗಿವೆ. ಸುದ್ಧಿ ಮತ್ತು ಕಾರ್ಯಕ್ರಮ ಪ್ರಸಾರಕ್ಕೆ ಸಂಬಂಧಿಸಿದಂತೆ ಇವೆರಡು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾದರೂ ಇವುಗಳ ಸಂಪೂರ್ಣ ಸ್ಥಿರ ಹಾಗೂ ಚರಾಸ್ತಿಗಳು ಪ್ರಸಾರ ಭಾರತಿಯ ಅಧೀನದಲ್ಲಿವೆ. ಜೈಪಾಲ್ ರೆಡ್ಡಿಯವರ ಆಡಳಿತಾವಧಿಯಲ್ಲಿ ಪ್ರಸಾರ ಭಾರತಿ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಲಾಯಿತು. ದೂರದರ್ಶನ ಹಾಗೂ ಆಕಾಶವಾಣಿಯ ಜಾಹೀರಾತು ಸಮಯವನ್ನು ನಿಯಂತ್ರಿಸುವ ಹಕ್ಕನ್ನು ಪ್ರಸಾರ ಭಾರತಿಗೆ ನೀಡಲಾಯಿತು. ಈ ಮೂಲಕ ಎರಡೂ ಮಾಧ್ಯಮಗಳ ಪ್ರಮುಖ ಹಣಕಾಸಿನ ಮೂಲವನ್ನು ಪ್ರಸಾರ ಭಾರತಿ ನಿಯಂತ್ರಿಸುವಂತಾಯಿತು.

ಪ್ರಸಾರ ಭಾರತಿಯ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಇಂದು ಪ್ರಸಾರ ಭಾರತಿಯಲ್ಲಿ ನಲವತ್ತು ಸಾವಿರ ನೌಕರರಿದ್ದಾರೆ. ಇವರೆಲ್ಲರೂ ಕೇಂದ್ರ ಸರಕಾರೀ ನೌಕರರ ದರ್ಜೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಪ್ರಸಾರ ಭಾರತಿಯನ್ನು ತೆಗೆದು ಹಾಕಲು ಕೇಂದ್ರ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಪ್ರಸಾರ ಭಾರತಿಗೆ ಲಭಿಸುತ್ತಿರುವ ಆರ್ಥಿಕ ನೆರವು ಅತ್ಯಲ್ಪ. ತಮ್ಮ ಸಂಪೂರ್ಣ ಖರ್ಚನ್ನು ಭರಿಸಲು ಇಂದು ಆಕಾಶವಾಣಿ ಹಾಗೂ ದೂರದರ್ಶನಗಳು ವಿವಿಧ ಮೂಲಗಳನ್ನು ಅವಲಂಭಿಸುವಂತಾಗಿದೆ. ಖಾಸಗಿ ಎಫ್.ಎಂಗಳಂತೆ ಆಕಾಶವಾಣಿ ಇಂದು ತನ್ನ ಶ್ರೋತೃಗಳನ್ನೇ ಜಾಹೀರಾತುದಾರನ್ನಾಗಿಸುವ ಸ್ಥಿತಿ ಎದುರಾಗಿದೆ. ಪ್ರಸಾರ ಭಾರತಿ ಈ ಎರಡೂ ಮಾಧ್ಯಮಗಳಿಗೆ ಆರ್ಥಿಕ ಬೆಂಬಲವನ್ನು ನೀಡುವ ಸ್ಥಿತಿಯಲ್ಲಿಲ್ಲ. ಅಲ್ಲದೇ ಪ್ರಸಾರ ಭಾರತಿಯಿಂದಾಗಿ ಈ ಎರಡೂ ಮಾಧ್ಯಮಗಳ ನೌಕರರು ಕೇಂದ್ರ ಸರಕಾರೀ ನೌಕರ ದರ್ಜೆಯನ್ನೂ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಇಂಥಹ ಸಂದರ್ಭದಲ್ಲಿ ಪ್ರಸಾರ ಭಾರತಿಯ ಅಸ್ತಿತ್ವದ ಪ್ರಯೋಜನವಾದರೂ ಏನು? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಆಕಾಶವಾಣಿ ಮತ್ತು ದೂರದರ್ಶನಗಳು ಮತ್ತೆ ಕೇಂದ್ರದ ಸುಪರ್ದಿಗೆ ಬಂದಲ್ಲಿ ಆರ್ಥಿಕವಾಗಿ ಹಾಗೂ ನೈತಿಕವಾಗಿ ಅವು ಮತ್ತೆ ಮೊದಲಿನಂತೆ ಸದೃಢವಾಗುವುದರಲ್ಲಿ ಸಂಶಯವಿಲ್ಲ.

- ಅಕ್ಷತಾ ಭಟ್ ಸಿ.ಎಚ್.

2 comments:

Anonymous said...

article focussed on the unknown factors of media akashvani..the existence & continuation of prasara bharathi is questionable..... timely article ..

Anonymous said...

prasara bharathige akashavaniyannu kotta haage mantri mandalavannuu kodabahudalla....

Post a Comment