ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಲಿತರ ಕುಂದು ಕೊರತೆಗಳ ಸಭೆಯು ಸುಮಾರು ಒಂದು ವರ್ಷದ ಬಳಿಕ ಇಂದು ನಡೆದಿದ್ದು, ಸಭೆಯಲ್ಲಿ ನೂತನ ಜಿಲ್ಲಾಧಿಕಾರಿ ಸುಬೋದ್ ಯಾದವ್ ಅವರೆದುರು ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಹಾಗೂ ಜಿಲ್ಲಾ ಮಟ್ಟದ ದಲಿತ ನಾಯಕರು ತಮ್ಮ ಹಲವಾರು ಬೇಡಿಕೆಗಳು, ಸಮಸ್ಯೆಗಳನ್ನು ಮುಂದಿರಿಸಿ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.
ಶೇ. 22.75ರ ನಿಧಿಯ ದುರ್ಬಳಕೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳ ದುರಾವಸ್ಥೆ, ಡಿಸಿ ಮನ್ನಾ ಜಾಗವನ್ನು ಪರಿಶಿಷ್ಟೇತರರು ಅತಿಕ್ರಮಿಸಿರುವ ಪ್ರಕರಣಗಳ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇತ್ತೀಚೆಗಷ್ಟೆ ತಾವು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಸಮಸ್ಯೆಗಳ ಕುರಿತಂತೆ ತಕ್ಷಣ ಗಮನ ಹರಿಸಿ ಪರಿಹಾರ ಒದಗಿಸುವ ಪ್ರಯತ್ನ ನಡೆಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಶೇ. 22.75ರ ನಿಧಿಯ ದುರ್ಬಳಕೆಯಾಗಿರುವ ಬಗ್ಗೆ ತಮಗೆ ಗಮನಕ್ಕೆ ಬಂದಿದ್ದು, ನಿಧಿಯನ್ನು ಸಂರ್ಪಕವಾಗಿ ವಿನಿಯೋಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಯ ನಿಗದಿಪಡಿಸಿದರು. ಸಮರ್ಪಕವಾಗಿ ನಿಧಿಯನ್ನು ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ಡಿಸಿ ಮನ್ನಾ ಜಾಗದ ಅತಿಕ್ರಮಣದ ಕುರಿತಂತೆ ಕೆಲವೆಡೆ ಈಗಾಗಲೇ ಸಮೀಕ್ಷೆ ಆರಂಭಿಸಲಾಗಿದೆ. ಇನ್ನೂ ಕೆಲವೆಡೆ ಸಮೀಕ್ಷೆ ಆರಂಭಗೊಳ್ಳಲಿದೆ. ಈ ಬಗ್ಗೆ ಸ್ವಲ್ಪ ಸಮಯ ಬೇಕಾಗಬಹುದು. ಅತಿಕ್ರಮಣವಾಗಿರುವ ಜಾಗವನ್ನು ಸಂಬಂಧಪಟ್ಟ ಅರ್ಹರಿಗೆ ಹಿಂತಿರುಗಿಸಲು ಸಾಧ್ಯವಾಗದಿದ್ದರೆ ಬೇರೆ ಸರಕಾರಿ ಜಮೀನನ್ನು ಒದಗಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಪ್ರತಿಕ್ರಿಯಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುವ ಎಸ್ಸಿ/ಎಸ್ಟಿ ಹಾಸ್ಟೆಲ್ ಗಳಲ್ಲಿ ಗುತ್ತಿಗೆಯಡಿ ಕೆಲಸ ನಿರ್ವಹಿಸುವ ಕೆಲಸಗಾರರು ಮತ್ತು ಖಾಯಂ ಕೆಲಸಗಾರರ ನಡುವಿನ ಭಿನ್ನಾಭಿಪ್ರಾಯಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಹಾಗಾಗಿ ಅಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು. ಈ ಸಂದರ್ಭ ಪ್ರತಿಕ್ರಿಯಿಸಿದ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತರ ಹುದ್ದೆ ಖಾಲಿ ಇದೆ. ಇದೆ ಗ್ರೂಪ್ ಬಿ ನೌಕರರ 37 ಹುದ್ದೆಗಳು ಖಾಲಿ ಇದ್ದು, 13 ಮಂದಿ ವಾರ್ಡನ್ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ಸಾಮಾಜಿಕ ಸಮಾನತೆಯಡಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಜಾಗೃತಿ ಮೂಡಿಸಿದ್ದರೂ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಡೃಶ್ಯತೆ ಇದೆ ಎಂಬ ಅಹವಾಲು ಸಭೆಯಲ್ಲಿ ಪ್ರಸ್ತಾಪವಾಯಿತು.
ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆಸಲಾಗಿರುವ ಸಮೀಕ್ಷೆಯ ಪ್ರಕಾರ ದಲಿತರಿಗೆ ಉನ್ನತ ಶಿಕ್ಷಣಕ್ಕೆ ಸಿಗುತ್ತಿರುವ ಪ್ರೋತ್ಸಾಹ ತೀರಾ ಅತ್ಯಲ್ಪವಾಗಿದೆ. ಬೆರಳೆಣಿಕೆಯ ದಲಿತರು ಮಾತ್ರವೇ ಇಂದು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಮೆಡಿಕಲ್, ಇಂಜಿನಿಯರಿಂಗ್ ಮೊದಲಾದ ಉನ್ನತ ಕ್ಷೇತ್ರಗಳಲ್ಲಿ ಡೊನೇಶನ್ ಹಾವಳಿಯಿಂದಾಗಿ ದಲಿತರಿಗೆ ಸೀಟು ಸಿಗದಂತಾಗಿದೆ. ಈ ಬಗ್ಗೆ ಸರಕಾರ ಕನಿಷ್ಠ ಮೂರು ಕೋಟಿ ರೂ.ಗಳನ್ನಾದರೂ ದಲಿತರ ಉನ್ನತ ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂದು ಅವರು ಸಭೆಯಲ್ಲಿ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೀಘ್ರವೇ ಸುಸಜ್ಜಿತ ಅಂಬೇಡ್ಕರ್ ಭವನವೊಂದನ್ನು ನಿರ್ಮಿಸಲು ಸಹಕರಿಸಿ ಎಂಬ ಕೋರಿಕೆ ಸೇರಿದಂತೆ ದಲಿತರ 19 ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಡಿಸಿಪಿ ಮುತ್ತೂರಾಯ, ಪುತ್ತೂರು ಎಸಿ ಡಾ. ಹರೀಶ್ ಕುಮಾರ್, ಮಂಗಳೂರು ಎಸಿ ಪ್ರಭುಲಿಂಗ ಕವಳಿಕಟ್ಟೆ, ಶಾಸಕ ಯೋಗೀಶ್ ಭಟ್, ಸಮಾಜ ಕಲ್ಯಾಣಾಧಿಕಾರಿ ಅರುಣ್ ಪುರ್ಟಡೊ ಮೊದಲಾದವರು ಉಪಸ್ಥಿತರಿದ್ದರು.

0 comments:

Post a Comment