ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:00 PM

ಒಡೆದ ನೆಲ

Posted by ekanasu

ಸಾಹಿತ್ಯ


ಅಕ್ಕ ಕಥಾ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಉತ್ತಮ 20 ಕಥೆಗಳಲ್ಲಿ ಒಡೆದನೆಲ ಒಂದು. ನ್ಯೂಜೆರ್ಸಿಯಲ್ಲಿ ನಡೆದ ಸಮ್ಮೇಳನದಲ್ಲಿ ದೀಪ ತೋರಿದೆಡೆಗೆ ಎಂಬ ಸಂಕಲನದಲ್ಲಿ ಈ ಕಥೆ ಪ್ರಕಟಗೊಂಡಿದೆ.ಮೂಡಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ದಿವ್ಯಶ್ರೀ ಡೆಂಬಳ ಈ ಕಥೆಯನ್ನು ಇದೀಗ ಈ ಕನಸಿನ ಅಭಿಮಾನಿ ಓದುಗಮಿತ್ರರಿಗಾಗಿ ನೀಡಿದ್ದಾರೆ. ಇಂದಿನಿಂದ ಪ್ರತಿದಿನ ಇದು ಈ ಕನಸಿನಲ್ಲಿ ಪ್ರಕಟಗೊಳ್ಳಲಿದೆ. - ಸಂ.ಬಿರು ಬೇಸಗೆಯ ಬಿಸಿಗೆ ಬಿರುಕು ಬಿಟ್ಟ ಗದ್ದೆಯ ನಡುವೆ ಭೂಮಿ ಸೀರೆಯ ನೆರಿಗಳನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಮನೆಯ ಕಡೆಗೆ ಹೆಜ್ಜೆಯಿಟ್ಟಳು. ಅವಳಿಗಿಂದು ಎಲ್ಲಿಲ್ಲದ ಖುಷಿ. ಮೊದಲ ಸಂಬಳ ಕೈಗೆ ಸಿಕ್ಕಿದೆ. ವ್ಯಾನಿಟಿ ಬ್ಯಾಗಿನ ಒಳ ಕಳ್ಳಿಯಲ್ಲಿ ಜೋಪಾನವಾಗಿ ಇಟ್ಟಿದ್ದ ಐನೂರರ ಐದು ನೋಟನ್ನು ಮತ್ತೊಮ್ಮೆ ತೆಗೆದು ಗದ್ದೆಯ ನಡುವೆಯೇ ನಿಂತು ಎಣಿಸಿದಳು. ಶಾಲೆಯಿಂದ ಹೊರಟ ಹತ್ತು ನಿಮಿಷದಲ್ಲಿ ಬಹುಷ: ಇದು ಐದನೇ ಬಾರಿ ಇರಬೇಕು !

.... ಇದರಲ್ಲಿ ಮಹಾಲಿಂಗೇಶ್ವರನಿಗೆ ರುದ್ರಾಭಿಷೇಕ, ಅಪ್ಪನಿಗೆ ಶರ್ಟ್ ಫೀಸು, ಅಮ್ಮನಿಗೆ ಒಂದು ಸೀರೆ, ಮನೆಗೆ ಎರಡು ಕುರ್ಚಿ, ಒಂದು ಕಬ್ಬಿಣದ ಟೇಬಲ್, ಅಣ್ಣನಿಗೆ.... ಎಂದು ಲೆಕ್ಕ ಹಾಕುತ್ತಿರುವಾಗ 'ನೀನೇ ನೀನೇ ಜಗವೆಲ್ಲಾ ನೀನೇ... '' ಬ್ಯಾಗಿನೊಳಗಿನ ಮೊಬೈಲು ಕರೆದು ಯೋಚನೆಗೆ ಬ್ರೇಕ್ ಹಾಕಿತು.
ಹಲೋ.. ಯಾರೂ?
ನಾನು ಕಣೇ.. ನಿನ್ನಮ್ಮ.
ಎಲ್ಲಿದ್ದೀ ನೀನು?
ಸಂಪಿಗೆಯಿಂದ ಹೊರಟಿದ್ದೇನೆ. ಅರ್ಧ ಗಂಟೆಯೊಳಗೆ ಬರುತ್ತೇನೆ. ನೀನು ಶಾಲೆಯಲ್ಲೇ ಇರು. ಜತೆಗೆ ಹೋಗುವ...
ನಾನು ಹೊರಟಾಯಿತು. ಸುಂದರಣ್ಣನ ಗದ್ದೆ ದಾಟುತ್ತಿದ್ದೇನೆ. ನೀ ಬೇಗ ಬಾ. ಇಲ್ಲೇ ಎಲ್ಲಾದರೂ ಕೂತಿರುತ್ತೇನೆ... ಎಂದು ಭೂಮಿ ಕಟ್ ಮಾಡಿದಳು.

ಗದ್ದೆಯ ಬದಿಯಲ್ಲೊಂದು ರೆಂಜೆ ಮರ. ಅದಕ್ಕೆ ಯಾರೋ ಪುಣ್ಯಾತ್ಮರು ಕಟ್ಟೆ ಕಟ್ಟಿಸಿದ್ದಾರೆ. ತನ್ನ ನಡಿಗೆಗಿದ್ದ ಅವಸರವನ್ನೆಲ್ಲಾ ಜಾರಿಸಿಕೊಂಡು ಹಗುರ ಹೆಜ್ಜೆಯಿಡುತ್ತಾ ಭೂಮಿ ಆ ಕಟ್ಟೆಯ ಕಡೆಗೆ ನಡೆದಳು. ಇನ್ನೇನೋ ಆ ಕಟ್ಟೆಯ ಹತ್ತಿರ ತಲಪಬೇಕು ಅಷ್ಟರಲ್ಲಿ ಗದ್ದೆಯಲ್ಲಿ ಬಿದ್ದಿದ್ದ ನವಿಲುಗರಿ... 'ಶೂ.. ಎಷ್ಟು ಲಾಯ್ಕಿದ್ದು... ' ಭೂಮಿ ಎತ್ತಿಕೊಂಡಳು. ಅದನ್ನು ತಿರುಗಿಸಿ ಮುರುಗಿಸಿ ಅದರ ಚಂದವನ್ನೆಲ್ಲಾ ಕಣ್ದುಂಬಿಕೊಂಡಳು. ಬಲ ಕೆನ್ನೆಯ ಮೇಲೆ ಅದನ್ನೊಮ್ಮೆ ಮೆಲ್ಲಗೆ ಸರಿಸಿ ಮನಸ್ಸಿಗೆ ಕಚಗುಳಿಯಿಟ್ಟಳು.

ಅಣ್ಣನಿಗೆ ನವಿಲುಗರಿ ಎಂದರೆ ಪ್ರಾಣ. ಸಣ್ಣದಿರುವಾಗ ರಜಾದಿನಗಳಲ್ಲಿ ಗುಡ್ಡದಲ್ಲಿ ಗರಿಗಳನ್ನು ಹುಡುಕುತ್ತಾ ಪಿಲಿಂಗಲ್ಲಿನವರೆಗೂ ಹೋಗುತ್ತಿದ್ದೆವು. ಅಲ್ಲಿಂದಾಚೆಗೆ ಹೋಗಲು ಹೆದರಿಕೆ. ಪಿಲಿಂಗಲ್ಲು ಹೆಸರು ಕೇಳಿದರೆ ಊರಿನ ಎಲ್ಲ ಮಕ್ಕಳಿಗೂ ಮೈಯಿಡೀ ಚಳಿ ಹರಿದಾಡುತ್ತದೆ. ಯಾಕೆಂದ್ರೆ ಅಲ್ಲಿ ಹುಲಿಗಳಿವೆಯಂತೆ. ಶಾಲೆಯ ಮಾಸ್ತರು ನಮ್ಮನ್ನೆಲ್ಲಾ ಅಲ್ಲಿಗೊಮ್ಮೆ ಕರೆದುಕೊಂಡು ಹೋದಾಗಲೂ ಉಸಿರು ಬಿಗಿ ಹಿಡಿದು ನೋಡಿ ಬಂದಿದ್ದೆವು. ಅಲ್ಲಿ ಆನೆಯ ಬೆನ್ನಿನಂತಹ ಒಂದು ದೊಡ್ಡ ಕಪ್ಪು ಕಲ್ಲು. ಅದರ ಮೇಲೆ ಕಂಬಗಳಂತೆ ನಿಂತಿರುವ ಎರಡು ಬೃಹದಾಕಾರದ ಕಲ್ಲುಗಳು. ಹುಲಿಗಳು ಮರಿಗಳಿಗೆ ಇಲ್ಲಿ ಹಾರುವುದಕ್ಕೆ ಕಲಿಸುತ್ತಿದ್ದವಂತೆ. ಆಚೆ ಕಲ್ಲ ಕಂಬದಿಂದ ಈಚೆ ಕಲ್ಲ ಕಂಬಕ್ಕೆ ಹಾರಬೇಕು. ಹಾರುವಾಗ ಕೆಳಗೆ ಬಿದ್ದರೆ ಜೋಕೆ. ಒಂದೋ ರಭಸಕ್ಕೆ ಮರಿ ಸಾಯುತ್ತೆ. ಇಲ್ಲದಿದ್ರೆ ಬಿದ್ದ ಮರಿಯನ್ನು ಬಿಟ್ಟು ತಾಯಿ ಹೋಗುತ್ತೆ. ಇದು ನಾವು ಕೇಳಿದ್ದ ಕತೆಗಳು. ಆದ್ದರಿಂದ ಹಿರಿಯರಿಲ್ಲದೇ ಯಾರೂ ಆ ಕಡೆಗೆ ಹೋಗುವ ದೈರ್ಯ ಮಾಡುತ್ತಿರಲಿಲ್ಲ.
ಅಣ್ಣನಿಗೆ ಹುಂಬ ಧೈರ್ಯ ಇದ್ದುದರಿಂದ ದೂರದಲ್ಲಿ ಕಲ್ಲು ಕಾಣುವವರೆಗೆ ನಾವು ನವಿಲುಗರಿ ಹುಡುಕಾಟದಲ್ಲಿ ಕಳೆಯುತ್ತಿದ್ದೆವು. ಕೊರಳಲ್ಲಿದ್ದ ಬೈರಾಸನ್ನು ತಲೆಗೆ ಮುಂಡಾಸು ಕಟ್ಟಿ , ಸಿಕ್ಕಿದ ನವಿಲುಗರಿಗಳನ್ನು ತಲೆಯ ಎಡಭಾಗಕ್ಕೆ ಸಿಕ್ಕಿಸಿ ಆತ ಕೃಷ್ಣನಾಗುತ್ತಿದ್ದ. ಮತ್ತೆ ಊರ ಮಕ್ಕಳೆಲ್ಲಾ ಸೇರಿ ರೆಂಜೆ ಮರದಡಿ ಮುಟ್ಟಾಟ ಆಡುತ್ತಿದ್ದೆವು.
ನಾಳೆಗೆ...

0 comments:

Post a Comment