ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:35 AM

ಒಡೆದ ನೆಲ

Posted by ekanasu

ಸಾಹಿತ್ಯ

ಭಾಗ - 2
ನವರಾತ್ರಿ ಬಂತೆಂದರೆ ಸಾಕು ಬೆಳಗ್ಗೆ ನಾನು ಅಣ್ಣನೂ ತಾಮ್ರದ ತಂಬಿಗೆ ಹಿಡಿದು ಈ ಮರದಡಿ ಬರುತ್ತಿದ್ದೆವು. ಪೂಜೆಗೆ ರೆಂಜೆ ಹೂಗಳನ್ನಾಯುವುದಕ್ಕೆ. ಬರುವಾಗ ಆಗ ತಾನೇ ಮರದಿಂದ ಕೆಳಗೆ ಬಿದ್ದ ಚಕ್ರಾಕೃತಿಯ ಪುಟ್ಟ ರೆಂಜೆ ಹೂಗಳ ಪರಿಮಳ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತಿತ್ತು. ನಾನು ಯಾವಾಗಲೂ ಅಣ್ಣನನ್ನು ಸೋಲಿಸಿ ಬಿಡುತ್ತಿದ್ದೆ. ನನ್ನ ಉದ್ದಲಂಗವನ್ನು ಮಡಿಸಿ ಸೊಂಟಕ್ಕೆ ಸಿಕ್ಕಿಸಿ ಹೆಕ್ಕಿದ ಹೂಗಳನ್ನೆಲ್ಲಾ ಅದರಲ್ಲಿ ಹಾಕಿ ಕೊನೆಗೆ ತಂಬಿಗೆಗೆ ತುಂಬಿ ಬಿಡುತ್ತಿದ್ದೆ. ಆದರೆ ಅಣ್ಣ ಅರ್ಧಕ್ಕಾಗುವಾಗಲೇ ಹೋಗೋಣ ಎಂದು ಶುರುವಿಡುತ್ತಿದ್ದ. ತಂಬಿಗೆ ತುಂಬಲಿ ಎಂದರೆ ಸಾಕು ತಂಬಿಗೆಯ ಬಾಯಿಗೆ ಕೈಯನ್ನು ಪೂತರ್ಿ ಮುಚ್ಚಿ ಉಲ್ಟಾ ಮಾಡಿ ಮತ್ತೆ ಸರಿಪಡಿಸಿ ತುಂಬಿದಂತೆ ಕಾಣುವ ಹಾಗೆ ಮಾಡಿಬಿಡುತ್ತಿದ್ದ.ಆಗೆಲ್ಲಾ ಈ ರೆಂಜೆ ಮರ ಹತ್ತುತ್ತಿದ್ದೆವು. ಇದರ ಬುಡದಲ್ಲಿ ಕೂತು ಪರೀಕ್ಷೆಗೆ ಓದುತ್ತಿದ್ದೆವು. ಕಟ್ಟೆಯ ಮೂಲೆಯಲ್ಲಿ ಒಂದೆರಡು ಬಾರಿ ಜೋರಾಗಿ ತಿರುಗಿ ಉದ್ದ ಲಂಗವನ್ನು ಬುಗ್ಗೆ ಮಾಡಿ ಕೂತು ನಾವು ಹುಡುಗಿಯರು ಒಂದಾ ಮಾಡುತ್ತಿದ್ದೆವು. ಅಣ್ಣ ಎಲ್ಲರೆದುರಿಗೇ ಮೇಲಕ್ಕೆ ಹಾರುವ ಹಾಗೆ ಒಂದಾ ಮಾಡಿ ರೆಂಜೆ ಗಿಡದ ಬಾಗಿದ ಗೆಲ್ಲನ್ನು ಒದ್ದೆ ಮಾಡುತ್ತಿದ್ದ. ನಾವೆಲ್ಲ ಅದನ್ನು ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದೆವು. ಇದೆಲ್ಲಾ ಎರಡು ಮೂರನೇ ಕ್ಲಾಸಿನವರೆಗಿನ ಕತೆ.

ಒಂದು ಸಲ ರಜೆಯ ದಿನ ನಾವು ಕುಂಟಾಲ ಹಣ್ಣು ಕೊಯ್ಯುತ್ತಾ ಬರುತ್ತಿದ್ದಾಗ ನಡೆದ ಘಟನೆ ನೆನೆಸುವಾಗ ಮೈ ಈಗಲೂ ಜುಮ್ಮೆನ್ನುತ್ತದೆ. ಅಣ್ಣ ಕುಂಟಾಲ ಗಿಡದ ಗೆಲ್ಲು ಬಗ್ಗಿಸಿ ಹಣ್ಣು ಕೊಯ್ಯುತ್ತಿದ್ದ. ನಾನು ಅಲ್ಲೇ ಪಕ್ಕದಲ್ಲಿದ್ದ ಕೇಪುಳದ ಗಿಡದಿಂದ ಹಣ್ಣು ಕೊಯ್ಯಲು ಕೈಯಿಕ್ಕಿದೆ. ತಕ್ಷಣ ಸರ್ರನೆ ಹರಿದ ಹಾವು.... ಅಣ್ಣಾ.... ಎಂದು ಬೊಬ್ಬಿಟ್ಟು ಓಡಿದೆ. ಅಣ್ಣನೂ ನನ್ನ ಹತ್ರ ಓಡಿ ಬಂದ. ಇಬ್ಬರೂ ನೋಡುತ್ತೇವೆ. ನಾಗರ ಹಾವೊಂದು ಹೆಡೆಯೆತ್ತಿ ನಿಂತಿದೆ. ನಾವು ಕೈಯಲ್ಲಿದ್ದ ಕುಂಟಾಲು, ಕೇಪುಳ ಹಣ್ಣುಗಳನ್ನು ಕೆಳಗಿಟ್ಟು ಕೈ ಮುಗಿದೆವು. ನಾಗರ ಸ್ಲೋ ಮೋಶನ್ ನಲ್ಲಿ ತಲೆಯಲ್ಲಾಡಿಸಿ ಹೊರಟು ಹೋಯಿತು. ಹಣ್ಣುಗಳನ್ನು ಅಲ್ಲೇ ಬಿಟ್ಟು ನಡುಗುತ್ತಾ ಬೇಗ ಬೇಗ ಬರುತ್ತಿರಬೇಕಾದರೆ ...
ಇದೇ.... ಇದೇ...ರೆಂಜೆಮರದ ಹಿಂಭಾಗದಲ್ಲಿ ಜೋರಾಗಿ ಉಸಿರಾಡುವ ನರಳಾಡುವ ಸದ್ದು. ಮೊದಲೇ ಹೆದರಿದ್ದ ನಾವು ಏನಿರಬಹುದೆಂದು ದೂರ ನಿಂತೇ ನೋಡಿದೆವು. ಚೋಮನ ಮಗಳು ಚಂದ್ರಿಯ ಮೇಲೆ ಸುಂದರಣ್ಣ ಹೊರಳಾಡುತ್ತಿದ್ದ. ಏ... ಚಂದ್ರೀ... ನಾನು ಅಣ್ಣನಿಗೆ ಜೋರಾಗಿಯೇ ಹೇಳಿದೆ.

ಸ್ವರ ಕೇಳಿ ಪೆಟ್ಟು ತಿಂದವನಂತೆ ಎದ್ದ ಸುಂದರಣ್ಣ ಕಣ್ಣು ಕೆಂಪು ಮಾಡಿ ನಿಮಗಿಲ್ಲೇನು ಕೆಲಸ ಎಂಬಂತೆ ನೋಡಿದ. ಚಂದ್ರಿ ಸರಕ್ಕನೆ ತನ್ನ ಬಿಳಿ ಎದೆಗೆ ಸೆರಗೆಳೆದುಕೊಂಡು ಕಟ್ಟೆಯಲ್ಲಿಟ್ಟಿದ್ದ ಬೀಡಿ ಚೀಲವನ್ನು ಎಳೆದು ಕಣ್ಣೊರೆಸಿಕೊಳ್ಳುತ್ತಾ ಓಡಿದಳು. ಸುಂದರಣ್ಣ ಕೆಳಗಿದ್ದ ಕತ್ತಿಯನ್ನೆತ್ತಿ ಮುಖ ಒರೆಸುತ್ತಾ ಯಾರಿಗಾದರೂ ಹೇಳಿದರೆ...? ಎಂದು ಗದರಿಸಿದ. ನಾವು ಅವನ ಕಣ್ಣು, ಕತ್ತಿಗೆ ಹೆದರಿ ಮನೆಗೆ ಓಡಿದೆವು. ಬಳಿಕ ಎರಡು ದಿನ ತೀವ್ರ ಜ್ವರ ಬಂದು ನಾನು ಕಂಗಾಲಾಗಿದ್ದೆ.

ಈಗ ಈ ರೆಂಜೆ ಮರ ಪವಿತ್ರ ಸ್ಥಳ. ಮುಟ್ಟಾದ ಹೆಂಗಸರು, ಕೆಳಜಾತಿಯವರು ಈ ಕಟ್ಟೆಯ ನೆರಳಿಗೆ ಸುಳಿಯಬಾರದೆಂಬ ಅಲಿಖಿತ ನಿಯಮವಿದೆ ಊರಲ್ಲಿ. ಬಲ್ಲಾಳರ ಮನೆಗೆ ರೈಟ್ರ್ ಆಗಿ ಬಂದಿದ್ದ ಆನಂದನನ್ನು ತನ್ನ ಎರಡನೇ ಮಡದಿ ಜತೆಗೆ ಹೆಚ್ಚು ಮಾತಾಡುತ್ತಾನೆಂದರಿತ ಬಲ್ಲಾಳ ಕೆಲಸದಿಂದ ತೆಗೆದು ಹಾಕಿದ. ಹಾಗೆ ಬಂದ ಆನಂದ ಈ ರೆಂಜೆ ಕಟ್ಟೆಯಲ್ಲಿ ಮಲಗಿ ನಿದ್ರಿಸುತ್ತಿರುವಾಗ ಕನಸಲ್ಲಿ ದೇವಿ ಪ್ರತ್ಯಕ್ಷಳಾಗಿ ' ಇಲ್ಲಿಂದ ಒಂದು ಮೈಲಿ ದೂರದಲ್ಲಿರುವ ಬೆಟ್ಟದ ತುದಿಯಲ್ಲಿ ನಾನು ನೆಲೆಸುತ್ತೇನೆ. ನೀನು ನನ್ನ ಪ್ರತಿನಿಧಿಯಾಗಿ ಊರ ಜನಕ್ಕೆ ದಾರಿ ತೋರು ' ಎಂದು ದೇವಿ ಹೇಳಿದಳಂತೆ. ಆನಂದ ಅಸಾಮಾನ್ಯ, ದೈವಾಂಶ ಸಂಭೂತ ಎಂದು ಅದರ ಮರುದಿನ ರಾತ್ರಿ ಊರ ನಾಲ್ಕು ಜನಕ್ಕೆ ಕನಸು ಬಿತ್ತಂತೆ. ಅವರೆಲ್ಲಾ ಸುದ್ದಿ ಹೇಳಿ ಕಳೆದ ನಾಲ್ಕು ವರ್ಷಗಳ ಹಿಂದೆ ಊರಲ್ಲಿ ಒಂದು ಸಂಚಲನವೇ ಸೃಷ್ಟಿಯಾಗಿತ್ತು.

ರಾಜಕೀಯದ ಹುಚ್ಚು ಹಿಡಿದ ಸುಂದರಣ್ಣ ಊರ ಹುಡುಗರನ್ನೆಲ್ಲಾ ಸೇರಿಸಿ ನಮ್ಮ ಊರಿಗೆ ದೈವಾನುಗ್ರಹವಾಗಿದೆ. ನಾವು ಸೇರಿಕೊಂಡು ಗುಡ್ಡದ ಮೇಲೆ ಆಶ್ರಮವೊಂದನ್ನು ಕಟ್ಟುವ ಎಂದು ತೀಮರ್ಾನಿಸಿದರು. ಆನಂದ ಪರಮಾನಂದ ಸ್ವಾಮಿಯಾದರು. ಗುಡ್ಡದ ತುದಿ ಸವರಿ ಒಂದು ದೇವಿಗುಡಿ, ಅದರ ಸರಿ ಎದುರು ಭಾಗದಲ್ಲೊಂದು ರೆಂಜೆ ಗಿಡ, ಗುಡಿಯ ಎಡಬದಿಯಲ್ಲೊಂದು ಗುಹೆ, ಆ ಗುಹೆಯಿಂದ 200 ಮೀಟರ್ ದೂರದಲ್ಲಿ ಸ್ವಾಮಿಗಳಿಗೆ ಒಂದು ಆಶ್ರಮ, ಸುತ್ತುಗೋಪುರ, ಹೊರಗಡೆ ಒಂದು ಅನ್ನಛತ್ರ, ಅದರ ಮೇಲ್ಗಡೆ ಹತ್ತಾರು ಅತಿಥಿಗೃಹಗಳು ಹೀಗೆ ಒಂದು ವರ್ಷದಲ್ಲಿ ಸಕಲ ಅಭಿವೃದ್ಧಿ ಕಾರ್ಯಗಳು ನಡೆದವು. ಮಂತ್ರಿಗಳು, ರಾಜಕಾರಣಿಗಳು, ಸಿನಿಮಾ ನಟರ ಆಗಮನದಿಂದ ರಸ್ತೆ, ವಾಹನ ವ್ಯವಸ್ಥೆಗಳೂ ಬಂದವು. ಎಲ್ಲಾ ಕಡೆ ಪ್ರಚಾರವೂ ಆಯಿತು. ಇತ್ತೀಚೆಗೆ ವಿದೇಶದಿಂದ ದುಡ್ಡು ಬೇರೆ ಹರಿದು ಬರುತ್ತಿದೆಯಂತೆ. ಶ್ರೀ ಶ್ರೀ ಶ್ರೀ ಪರಮಾನಂದರ ಕೃಪೆಯಿಂದ ಸುಂದರಣ್ಣ ರಾಜ್ಯದ ಪ್ರಭಾವಿ ರಾಜಕಾರಣಿಯಾದ. ಸುಂದರಣ್ಣನಿಂದ ಪರಮಾನಂದರು ಜಗದ್ವಿಖ್ಯಾತರಾದರು...
'ಏ... ಬಾರಾ... ಏನ್ ಚಂದಾ ನೋಡ್ತಾ ಇದ್ದೀ? ಒಂದು ಕೈಯದ್ದರ ತಕೋ.. ' ಮಾತು ಕೇಳಿ ಎಚ್ಚತ್ತ ಭೂಮಿ ಅಮ್ಮನ ಒಂದು ಕೈಲ್ಲಿದ್ದ ರೇಶನ್ ಸೀಮೆಎಣ್ಣೆಯ ಕ್ಯಾನನ್ನು ಹಿಡಿದು ಮನೆ ಕಡೆ ಹೊರಟಳು. ' ಅಮ್ಮ ನನಗೆ ಸಂಬಳ ಸಿಕ್ಕಿತು' ಭೂಮಿ ಮಾತಿನಲ್ಲೇ ಸಂಭ್ರಮಿಸಿದಳು. 'ಹೌದಾ... ಸುಮ್ಮಗೆ ಖರ್ಚು ಗಿರ್ಚು ಮಾಡ್ಬೇಡಾ. ಹಾಗೆ ಒಂದು ಬ್ಯಾಂಕ್ ಎಕೌಂಟ್ ಮಾಡಿ ಹಾಕಿಡು. ಕಷ್ಟ ಕಾಲಕ್ಕೆ ಬೇಕಾಗುತ್ತೆ'' ಎಂದಳು. ಭೂಮಿಗೆ ತನ್ನ ಯೋಚನೆ ತಲೆಕೆಳಗಾಗುವಂತೆ ಭಾಸವಾಯಿತು. 'ಇಲ್ಲಮ್ಮ ಮುಂದಿನ ತಿಂಗಳಿಂದ ನೀನು ಹೇಳಿದ ಹಾಗೆ. ಈ ಬಾರಿ ನನಗೆ ತೋಚಿದಂತೆ'' ಎಂದು ಕಣ್ಣು ಮಿಟುಕಿಸಿದಳು. ಅಮ್ಮನೂ ನಕ್ಕು ಸುಮ್ಮಗಾದಳು.

ಶಂಕರ ಭಟ್ರು ಸೋಮಕೋಡಿಯಲ್ಲಿ ಅವರ ಅಜ್ಜನ ಕಾಲದಿಂದಲೂ ವಾಸವಿದ್ದಾರೆ. ಆರಂಭದಲ್ಲಿ ಪೌರೋಹಿತ್ಯ ನಡೆಸಿ ಜೀವನ ನಡೆಸುತ್ತಿದ್ದವರು ತೇಜಸ್ವಿಯವರ ಕತೆಗಳ ಹುಚ್ಚು ಹಿಡಿದ ಬಳಿಕ ಅದ್ಯಾಕೋ ಇರುವ ಅಲ್ಪಸ್ವಲ್ಪ ತೋಟದ ಕೃಷಿಯಲ್ಲೇ ಮುಳುಗಿ ಹೋಗಿದ್ದರು. ಇತ್ತೀಚೆಗೆ ಮನೆಯಿಂದ ಹೊರಗೆ ಹೋಗುವುದೇ ಕಡಿಮೆ. ರೇಶನ್, ಸಾಮಾನು, ಕರೆಂಟು ಬಿಲ್ಲು, ತೋಟಕ್ಕೆ ಬೇಕಾದ ಗೊಬ್ಬರ, ಮೈಲುತುತ್ತಿನವರೆಗೂ ಎಲ್ಲಾ ಕಾರ್ಯವನ್ನೂ ನೋಡಿಕೊಳ್ಳುತ್ತಿರುವವರು ಭಟ್ರ ಹೆಂಡತಿ ಗಿರಿಜಮ್ಮನೇ. ತಪ್ಪಿದರೆ ಮಗಳು ಭೂಮಿ ಅಲ್ಪ ಸ್ವಲ್ಪ. ಮಗ ಗೌತಮ ಡಿಗ್ರಿ ಮುಗಿಸಿದ ಬಳಿಕ ಉಂಡಾಡಿ ಗುಂಡನಂತೆ ತಿರುಗುತ್ತಿದ್ದಾಗ ಸೋಡಾ ಮಹಮ್ಮದನ ತಂದೆಯ ಕಾಲು ಹಿಡಿದು ದುಬೈಯಲ್ಲಿ ಒಂದು ಆಯಿಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಟ್ಟದ್ದು ಬಿಟ್ಟರೆ ಶಂಕರ ಭಟ್ರು ಇತ್ತೀಚೆಗೆ ಹೇಳಿ ಕೊಳ್ಳುವಂತ ಯಾವ ಕೆಲಸವನ್ನೂ ಮಾಡಿಲ್ಲ. ಭೂಮಿ ಪಿಯುಸಿ ಮುಗಿಸಿ ಅನಂತರ ಕಂಪ್ಯೂಟರ್ನಲ್ಲಿ ಒಂದು ವರ್ಷದ ಕೋರ್ಸ್ ಮಾಡಿ ಈಗ ಊರ ಸರಕಾರಿ ಶಾಲೆಗೆ ತಾಗಿಕೊಂಡು ಆರಂಭಗೊಂಡ ಕಂಪ್ಯೂಟರ್ ಸೆಂಟರಿನಲ್ಲಿ ಇನ್ಸ್ಟ್ರಕ್ಟರ್ ಆಗಿ ತಿಂಗಳ ಹಿಂದಷ್ಟೇ ಸೇರಿಕೊಂಡಿದ್ದಳು.

'ಈಗ ಕಲಿಯಲು ಯಾರೆಲ್ಲ ಬರ್ತಾರೆ ?' ಅಮ್ಮ ಮೌನ ಮುರಿದಳು.
'ಯಾರು ಬರ್ತಾರಮ್ಮ ಈ ಹಳ್ಳೀಲಿ? ಕಂಪ್ಯೂಟರ್ ಅಂದ್ರೇ ಏನೂಂತ ಗೊತ್ತಿಲ್ಲ. ಇನ್ನು ಕಲಿಯಲು.. ಆ ಚಂದ್ರಿಯ ತಂಗಿ ಪುಷ್ಪ, ಪಕ್ರುನ ಮಗ ಶಿವು... ಮತ್ತೆ ಆ ಮೀನು ಮಾರುವ ಐಸಾಕ್ನ ಮಕ್ಕಳು ಸಫಿಯಾ ಮೈಮೂನಾ ಬರ್ತಾರೆ. ಅವರಿಗೆಲ್ಲಾ ಸರಕಾರದಿಂದ ಸ್ಟೈಫಂಡ್ ಬರುತ್ತೆ. ಮತ್ತೆ ದೇವಸ್ಥಾನದ ಭಟ್ರ ಮಗಳು ಆರತಿ... ಮೊನ್ನೆಯಿಂದ ಸೋಡಾ ಮಹಮ್ಮದ್ ಬರ್ತಾ ಇದ್ದಾನೆ. ಗಲ್ಫ್ಗೆ ಹೋಗ್ತಾನಂತೆ. ಅಲ್ಲಿನ ಕೆಲಸಕ್ಕೆ ಕಂಪ್ಯೂಟರ್ ಗೊತ್ತಿರಬೇಕಂತೆ. ನಿನ್ನೆಯಿಂದ ಅವನೂ ಕಾಣ್ತಾ ಇಲ್ಲ... ' ಎಂದು ಭೂಮಿ ದಾರಿ ಸವೆಸಿದಳು.
'ನೋಡು ಆ ಸೋಡಾ ಮಹಮ್ಮದನ ವಿಷಯ ನಿನಗೆ ಬೇಡ. ಅವ ಬಂದ್ರೆ ಕಲಿಸಲ್ಲ ಅಂತ ಹೇಳು'.' ದೆವ್ವ ಬಂದಂತೆ ಗಿರಿಜಮ್ಮ ದಡಕ್ಕನೇ ನಿಂತು ಮಗಳಿಗೆ ಹೇಳಿದಳು. 'ಯಾಕಮ್ಮ? ಆಗೋಲ್ಲ ಅಂದ್ರೆ ಹೇಗೆ? ನಾನು ಕಲಿಸೋದಕ್ಕೆ ಮಾತ್ರ. ಬಾಕಿಯೆಲ್ಲ ಸರಕಾರ ಮತ್ತು ನಮ್ಮ ದಣಿಗಳದ್ದಲ್ಲವಾ ತೀರ್ಮಾನ'' ಭೂಮಿ ಹೇಳಿದಳು.
'ಆ ಸೋಡಾ ಮಹಮ್ಮದ್ ನೋಡಿದ ಹಾಗಲ್ಲ . ಇಂದು ರೇಶನಿಗೆ ಬಿಳೀ ಕಾರಿನಲ್ಲಿ ಬಂದ ಸುಂದರಣ್ಣ ಕಾರಿನಿಂದ ಇಳಿದವರೇ 'ಏನ್ ಗಿರಿಜಮ್ಮ...' ಅಂತ ಕೇಳಿ ಸ್ವಲ್ಪ ದೂರ ಕರೆದು ಏನ್ ಹೇಳಿದರು ಗೊತ್ತಾ? ಶಿವ... ಶಿವಾ...'

ಏನು?.....
'ನೋಡಿ ಗಿರಿಜಮ್ಮ.. ನಿಮ್ಮನ್ನು ನೋಡಿಯೇ ನಾನು ಕೆಳಗಿನವರೆಗೆ ಬಂದದ್ದು. ಒಂದು ವಿಷಯವಿದೆ. ಆ ಸೋಡಾ ಮಹಮ್ಮದ್ ಇದ್ದಾನಲ್ಲಾ ಅವ ಡೇಂಜರ್ ಮನುಷ್ಯ. ಈಗ ಅವರಲ್ಲಿ 'ಲವ್ ಜಿಹಾದ್' ಅಂತ ಶುರುವಾಗಿದೆ. ಹಿಂದೂ ಹುಡುಗಿಯರನ್ನು ಪ್ರೀತಿಸಿ ಮತಾಂತರ ಮಾಡಿ, ಮದುವೆಯಾಗಿ, ಅವರಿಂದ ಮಕ್ಕಳನ್ನು ಹುಟ್ಟಿಸಿ ಅವರ ಧರ್ಮವನ್ನು ಬೆಳೆಸುತ್ತಾರಂತೆ. ಅದಕ್ಕೆ ಅವರಿಗೆ ಕೆಲವು ಸಂಘಟನೆಯವರು ದುಡ್ಡು ಕೊಡ್ತಾರಂತೆ. ಮಹಮ್ಮದನೂ ಆ ಗ್ರೂಪ್ ನಲ್ಲಿದ್ದಾನಂತೆ.. ನಮಗೆ ಸುದ್ದಿ ಸಿಕ್ಕಿದೆ.
ನಾನೂ ಅವನೂ ಒಂದೇ ತರಗತಿಯಲ್ಲಿ ಓದಿದವರಾದರೂ ಅವನು ಅವನ ಜಾತಿ ಬುದ್ದಿ ಬಿಟ್ಟಿಲ್ಲ ನೋಡಿ. ಆ ಚಂದ್ರಿ ಗೊತ್ತಲ್ಲ ನಿಮಗೆ. ಅವಳನ್ನು ಬುಟ್ಟಿಗೆ ಹಾಕಿಕೊಂಡು ಅವನ ಜಾತಿಗೆ ಮತಾಂತರ ಮಾಡಲು ಹೊರಟಿದ್ದಾನೆ. ಈ ಕೆಳಜಾತಿಯವರಿಗೆ ಬುದ್ಧಿ ಇಲ್ಲ ನೋಡಿ. ದುಡ್ಡು ಕಂಡ್ರೆ ಸಾಕು ಯಾರಿಗೆ ಬೇಕಿದ್ರೂ ಮೈ ಚಾಚ್ತವೆ.. ಅದಕ್ಕೆ ನಾವು ಹಿಂದುಗಳು ಜಾಗ್ರತೆಯಲ್ಲಿರಬೇಕು. ಈಗ ಮೊನ್ನೆಯಿಂದ ಕಂಪ್ಯೂಟರ್ ಕಲಿಯುವುದಕ್ಕೆ ಬೇರೆ ಹೊರಟಿದ್ದಾನೆ. ಅಲ್ಲಿ ಕೆಲವು ಹುಡುಗಿಯರಿದ್ದಾರೆ ನೋಡಿ. ನಿಮ್ಮ ಮಗಳೂ ವಯಸ್ಸಿಗೆ ಬಂದಿದ್ದಾರೆ. ಸ್ವಲ್ಪ ಜಾಗ್ರತೆ ಹೇಳಿ ಗೊತ್ತಾಯಿತಾ'' ಎಂದರು.
'ನೀ ಸುಮ್ಮಗಿರಮ್ಮ. ಆ ಸುಂದರಣ್ಣನ ಕತೆ ನನಗೆ ಗೊತ್ತಿಲ್ವ? ಎಲ್ಲಾ ರಾಜಕೀಯ.... ಧರ್ಮ ರಾಜಕೀಯ, ಜಾತಿ ರಾಜಕೀಯ..ಮಾಡೋದು... ಇವರಿಗೆಲ್ಲಾ ಜನ ಒಟ್ಟಿಗಿರೋದು ನೋಡೋಕಾಗಲ್ಲ. ಏನೇನೋ ಕತೆ ಕಟ್ತಾರೆ..'' ಎನ್ನುತ್ತಾ ಮನೆಯ ಅಂಗಳಕ್ಕೆ ಕಾಲಿಟ್ಟಳು ಭೂಮಿ. ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ಚೆನ್ನಾಗಿ ಸೆಗಣಿ ಸಾರಿಸಿದ್ದ ಅಂಗಳ ತುಂಬಾ ಅಪ್ಪ ವೀಳ್ಯದೆಲೆ ತಿಂದು ಉಗುಳಿದ ಚಿತ್ತಾರ ಕಂಡು ಭೂಮಿಗೆ ಸಿಟ್ಟು ನೆತ್ತಿಗೇರಿತು. 'ಅಪ್ಪಾ.. ಅಪ್ಪಾ... ' ಸಿಟ್ಟಿನ ಭರದಲ್ಲೇ ಕೂಗುತ್ತಾ ಒಳ ಹೋದಳು.

ನಡುಮನೆಯಲ್ಲಿ ಶಂಕರ ಭಟ್ರು ಎರಡೂ ಕೈಗಳಲ್ಲಿ ಎದೆಯನ್ನು ಗಟ್ಟಿಯಾಗಿ ಹಿಚುಕಿಕೊಳ್ಳುತ್ತಾ ಹೊರಳಾಡುತ್ತಿದ್ದರು. ಕೈಯಲ್ಲಿದ್ದುದನ್ನು ಅಲ್ಲೇ ಬಿಸಾಡಿ ಭೂಮಿ 'ಏನಾಯ್ತಪ್ಪಾ... ಏನಾಯ್ತಪ್ಪಾ.... ' ಎಂದು ಅಪ್ಪನ ತಲೆಯನ್ನೆತ್ತಿ ತನ್ನ ಮಡಿಲಲ್ಲಿಟ್ಟು ಅಳತೊಡಗಿದಳು. ಗಿರಿಜಮ್ಮ ಓಡಿಹೋಗಿ ನೀರು ತಂದು ಕುಡಿಸಿದರು.
ಭೂಮಿ ಸೋಡಾ ಮಹಮ್ಮದನಿಗೆ ಫೋನ್ ಮಾಡಿ ಕಾರು ಬರ ಹೇಳಿದಳು.ಹತ್ತು ನಿಮಿಷದಲ್ಲಿ ಬಂದ ಕಾರಿಗೆ ಇನ್ನೂ ಒದ್ದಾಡುತ್ತಲೇ ಇದ್ದ ಶಂಕರ ಭಟ್ರನ್ನು ಹತ್ತಿಸಿ ಆಸ್ಪತ್ರೆಗೆ ಸೇರಿಸಿದರು. ತಕ್ಷಣಕ್ಕೆ ಬೇಕಾದ ಮದ್ದನ್ನೆಲ್ಲಾ ಮಹಮ್ಮದನೇ ತಂದುಕೊಟ್ಟು ಕೈಯಲ್ಲಿ ಸ್ವಲ್ಪ ದುಡ್ಡನ್ನೂ ಕೊಟ್ಟು ಹೋದ.
ಭೂಮಿ ಅಳುತ್ತಲೇ ಮೊಬೈಲ್ ಕೈಗೆತ್ತಿಕೊಂಡಳು. 'ಅಣ್ಣಾ ... ನೀನು ತಕ್ಷಣ ಹೊರಟು ಬಾ.. ಇಲ್ಲಿ ಅಪ್ಪನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಐಸಿಯು ನಲ್ಲಿದ್ದಾರೆ. ಡಾಕ್ಟರರು ಕಷ್ಟ ಎಂದಿದ್ದಾರೆ. ಬೇಗ ಬಾ''' ಎಂದಳು
ಆಮೇಲೆ ರಾತ್ರಿ ಒಂದೆರಡು ಬಾರಿ ಗೌತಮನೇ ಫೋನು ಮಾಡಿದ. ಆರು ತಿಂಗಳ ಹಿಂದೆಯಷ್ಟೇ ಬಂದಿದ್ದೇನೆ. ಮತ್ತೆ ಮರಳಿ ಬರಲು ಸಾಧ್ಯವಿಲ್ಲ. ಕಂಪೆನಿ ರಜೆ ಕೊಡುತ್ತಿಲ್ಲ.. ನೀನು ಅಪ್ಪನನ್ನು ಚೆನ್ನಾಗಿ ನೋಡಿಕೋ. ದೇವರಿದ್ದಾನೆ ಏನೂ ಆಗೋಲ್ಲ.. ದುಡ್ಡು ಎಷ್ಟು ಬೇಕಿದ್ರೂ ಕಳಿಸ್ತೇನೆ ಎಂದೆಲ್ಲಾ ಹೇಳಿದ.

ಮರುದಿನ ಬೆಳಗ್ಗೆ ಡಾಕ್ಟರರು ಭೂಮಿಯ ಬಳಿ ಬಂದು 'ಮನಸ್ಸು ಗಟ್ಟಿ ಮಾಡಿಕೊಳ್ಳಿ. ಬರಬೇಕಾದವರನ್ನೆಲ್ಲಾ ಬರಹೇಳಿ. ಐ ಯಾಮ್ ಸ್ವಾರಿ... ' ಎಂದು ಹೇಳಿ ಹೋದರು. ಭೂಮಿ ಉಕ್ಕಿ ಬರುತ್ತಿರುವ ದು:ಖದೊಂದಿಗೆ ಮೂರ್ಚೆ ತಪ್ಪಿ ಬಿದ್ದಿದ್ದ ಅಮ್ಮನ ಮುಖಕ್ಕೆ ನೀರೆರಚಿ ಎಬ್ಬಿಸಿ ಐಸಿಯು ಒಳಹೊಕ್ಕು ನೀರಿನ ಬಾಟ್ಲಿಯ ಮುಚ್ಚಳಕ್ಕೆ ನೀರು ಸುರಿದು ಅಪ್ಪನ ಬಾಯಿಗೆ ಬಿಟ್ಟಳು. ಅಣ್ಣನ ಹೆಸರು ಹೇಳಿ ಇನ್ನೊಂದು ಮುಚ್ಚಳ ನೀರು..
ಅಣ್ಣನಿಗೆ ಫೋನಿನಲ್ಲಿ ಎಲ್ಲಾ ವಿವರಗಳನ್ನು ಅಳುತ್ತಲೇ ಹೇಳಿದಳು. ಆ ಕಡೆಯಿದ್ದ ಅಣ್ಣನಿಗೂ ದು:ಖ ಒತ್ತರಿಸಿ ಬಂತು. ಕೊನೆಗಾತ ಹೇಳಿದ. ಭೂಮಿ ನನ್ನ ದುರ್ದೈವ. ಅಪ್ಪನ ಚಿತೆಗೂ ಕೊಳ್ಳಿ ಇಡಲಾಗುತ್ತಿಲ್ಲ. ನಾನು ಸುಂದರಣ್ಣನಿಗೆ ಫೋನು ಮಾಡಿ ವ್ಯವಸ್ಥೆ ಮಾಡಲು ಹೇಳುತ್ತೇನೆ. ನೀನು ಸಾಧ್ಯವಾದರೆ ಗಣೇಶಣ್ಣ್ಣನಿಗೆ ಹೇಳಿ ಅಂತ್ಯ ಸಂಸ್ಕಾರವನ್ನು ರೆಕಾರ್ಡ್ ಮಾಡಿ ಕಳಿಸುವೆಯಾ..?.. ದಯವಿಟ್ಟು.. ಎಂದು ಅತ್ತ.
'ಥೂ.. ನಿನ್ನ.. ' ಅಳುವಿನ ನಡುವೆಯೂ ಕೋಪಗೊಂಡ ಭೂಮಿ ಕಾಲ್ ಕಟ್ ಮಾಡಿದಳು.

ಸುಂದರಣ್ಣನ ನೇತೃತ್ವದಲ್ಲಿ ಅಂತ್ಯ ಸಂಸ್ಕಾರಕ್ಕೆ ತಯಾರಿಗಳು ನಡೆಯಿತು. ಮಗ ಬಾರದೇ ಇರುವ ಕಾರಣ ಶಂಕರ ಭಟ್ರ ಅಣ್ಣನ ಮಗ ಗಣೇಶ ಚಿತೆಗೆ ಬೆಂಕಿ ಇಡುವುದೆಂದು ಹಿರಿಯರು ತೀರ್ಮಾನಿಸಿದರು.
ನಡುಮನೆಯಲ್ಲಿ ತಲೆಯ ಮೇಲೆ ಮತ್ತು ಕಾಲಿನಕೆಳಗೆ ಇಟ್ಟಿದ್ದ ಪಡಿಯಕ್ಕಿಯಲ್ಲಿ ತುಪ್ಪದ ದೀಪ ಉರಿಯುತ್ತಿತ್ತು. ಈ ನಡುವೆ ಬಿಳಿ ಬಟ್ಟೆ ಮುಚ್ಚಿಕೊಂಡ ಶಂಕರ ಭಟ್ರ ದೇಹ. ನಾಲ್ಕು ಜನ ಬಂದು ದೇಹವನ್ನು ಎತ್ತಿ ಸ್ನಾನ ಮಾಡಿಸಿ, ಹಣೆಗೆ ಗಂಧವನ್ನಿಟ್ಟು, ಮಲ್ಲಿಗೆಯ ಹಾರವೊಂದನ್ನು ಹಾಕಿ , ಬಿದಿರಿನಿಂದ ಮಾಡಿದ ಚಟ್ಟದಲ್ಲಿ ಮಲಗಿಸಿದರು. ಗಣೇಶ ಮಡಕೆಯಲ್ಲಿ ಹಾಕಿದ ಕೆಂಡವನ್ನು ಹಿಡಿದುಕೊಂಡು ಮುಂದೆ ಮುಂದೆ .. ನಾಲ್ಕು ಜನರ ಹೆಗಲ ಮೇಲೆ ಭಟ್ರ ದೇಹ ಹಿಂದೆ ಹಿಂದೆ.. ಕಣ್ಣಿನಿಂದ ರಕ್ತವೇ ಹೊರಬರುತ್ತಿದೆಯೋ ಎಂಬಷ್ಟು ಕೆಂಪಗಾಗಿದ್ದ ಕಣ್ಣನ್ನೂ ಮತ್ತೂ ಒರೆಸುತ್ತಾ ಭೂಮಿ ಮತ್ತು ಗಿರಿಜಮ್ಮ ಜನರ ಜತೆ ಭಾರವಾದ ಹೆಜ್ಜೆಯಿಡುತ್ತಾ ಸಾಗಿದರು.
ಕಟ್ಟಿಗೆಯ ರಾಶಿಯ ಮೇಲೆ ದೇಹವನ್ನಿಟ್ಟರು. ಗಿರಿಜಮ್ಮ ಹಣೆಯ ಕುಂಕುಮ ಒರೆಸಿ, ಕರಿಮಣಿ ತೆಗೆದಿಟ್ಟು, ಕೈಯ ಬಳೆಗಳನ್ನೊಡೆದು ಒಮ್ಮೆ ತನ್ನ ಬಾಳಸಂಗಾತಿಯ ಕೆನ್ನೆಯನ್ನು ಸವರಿದರು. ಗಿರಿಜಮ್ಮನ ಕಣ್ಣಿನಿಂದ ಇಳಿದ ನೀರು ಭಟ್ರ ಕೆನ್ನೆಯಲ್ಲಿ ಹರಿಯಿತು. ಭೂಮಿ ತಾನಳುತ್ತಾ ಅಮ್ಮನಿಗೆ ಸಮಾಧಾನ ಹೇಳುತ್ತಿದ್ದಳು.

ಇನ್ನೇನು ಕಿಚ್ಚು ಕೊಡಬೇಕು ಎನ್ನುವಷ್ಟರಲ್ಲಿ ಭೂಮಿ ಗಣೇಶಣ್ಣನಲ್ಲಿ ಏನೋ ಹೇಳಿ ಮನೆಯತ್ತ ಹೋದಳು. ಎರಡೇ ನಿಮಿಷದಲ್ಲಿ ಮರಳಿ ಬಂದ ಭೂಮಿಯ ಕೈಯಲ್ಲಿ ವೈನಿಟಿ ಬ್ಯಾಗ್ನಲ್ಲಿದ್ದ ಐನೂರರ ಐದು ನೋಟುಗಳು ಮತ್ತು ಗದ್ದೆಯಲ್ಲಿ ಸಿಕ್ಕಿದ ನವಿಲುಗರಿಯಿತ್ತು. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಗೋಳೋ.. ಎಂದು ಅತ್ತ ಭೂಮಿ ಅವನ್ನು ಅಪ್ಪನ ಕೈಯಲ್ಲಿಟ್ಟು ಕುಸಿದು ಕುಳಿತಳು.
ದಿವ್ಯಶ್ರೀ ಡೆಂಬಳ.

0 comments:

Post a Comment