ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಹೊಸಂಗಡಿ ಗ್ರಾಮದಲ್ಲೊಂದು ಹೊಸ ಪ್ರಯೋಗ
ಪೆರಿಂಜೆ: ಬೆಳ್ಳಂಬೆಳಗ್ಗೆ ಶಾಲೆಗೆ ತೆರಳುವ ವಿದ್ಯಾರ್ಥಿಗಳನ್ನು ನೋಡುತ್ತಿದ್ದಂತೆ ಒಂದು ಅಚ್ಚರಿ...ಇದೇನಿದು ಎಂಬ ಕುತೂಹಲ ...ವಿಚಾರಿಸಿದರೆ ಆಸಕ್ತಿದಾಯಕ ಉತ್ತರ.ಪೆರಿಂಜೆ ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ತಮ್ಮ ಪಾಠದ ಚೀಲದೊಂದಿಗೆ ಕೆ.ಜಿ.ಕಟ್ಟಲೆ ಪ್ಲಾಸ್ಟಿಕ್ ಸಂಗ್ರಹಿಸಿದ ಗೋಣಿಗಳಿದ್ದವು...! ಇದೇನೆಂದು ಅಚ್ಚರಿಯಿಂದ ವಿಚಾರಿಸಿದ ಪುಟ್ಟ ಮಕ್ಕಳ ಬಾಯಲ್ಲಿ ಕೇಳಿಬಂದ ಉತ್ತರ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದ್ದವು...! "ನಮ್ಮೂರಲ್ಲಿ ರಸ್ತೆಬದಿಗಳಲ್ಲಿ ಯಾವುದೇ ಪ್ಲಾಸ್ಟಿಕ್ ಎಸೆಯುವಂತಿಲ್ಲ...ಇವೆಲ್ಲವನ್ನು ಒಟ್ಟುಮಾಡಿ ತಂದಿದ್ದೇವೆ. ನಮಗೆ ಪ್ರೈಸ್ ಕೊಡ್ತಾರಂತೆ"... ಇಷ್ಟು ಸಾಲದೇ... ಎಳೆಯ ಮಕ್ಕಳಲ್ಲೂ ಪ್ಲಾಸ್ಟಿಕ್ ಜಾಗೃತಿ ಮೂಡಿದೆ ಎಂದರೆ ಅದಕ್ಕಿಂತ ಹೆಚ್ಚೇನು ಬೇಕು ಹೇಳಿ...?!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಟ್ಟ ಗ್ರಾಮ ಹೊಸಂಗಡಿ. ತಾಲೂಕು ಕೇಂದ್ರದಿಂದ 26 ಕಿಲೋಮೀಟರ್ ದೂರದಲ್ಲಿದೆ. 1644 ಹೆಕ್ಟೇರ್ ವ್ಯಾಪ್ತಿಯನ್ನು ಈ ಗ್ರಾಮ ಒಳಗೊಂಡಿದೆ. ಹೊಸಂಗಡಿ ಮತ್ತು ಬಡಕೋಡಿ ಗ್ರಾಮಗಳಿಗೆ ಜೊತೆಯಾಗಿ ಹೊಸಂಗಡಿ ಗ್ರಾಮ ಪಂಚಾಯತ್ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಒಟ್ಟಾರೆಯಾಗಿ 4402 ಜನಸಂಖ್ಯೆಯನ್ನು ಈ ಪಂಚಾಯತ್ ಹೊಂದಿರುತ್ತದೆ.2098 ಮಂದಿ ಪುರುಷರು ಹಾಗೂ 2304ಮಂದಿ ಮಹಿಳೆಯರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 1026 ಮಂದಿ ಸದಸ್ಯರಿದ್ದು ಇವರೆಲ್ಲರೂ ಇಂದು ಸುಶಿಕ್ಷಿತರು. ಗ್ರಾಮ ನೈರ್ಮಲ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ತನ್ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ.


ಒಟ್ಟಾರೆ 22 ವಿವಿಧ ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಪೂರಕ ಕಾರ್ಯ ನಿರ್ವಹಿಸುತ್ತಿದೆ.ಕುಡಿಯುವ ನೀರು, ಆರೋಗ್ಯ, ಹಾಗೂ ನೈರ್ಮಲ್ಯಕ್ಕೆ ಈ ಗ್ರಾಮ ಪ್ರಥಮ ಆದ್ಯತೆ ನೀಡಿದೆ. ಪಂಚಾಯತ್ ವ್ಯಾಪ್ತಿಯಲ್ಲಿ 2 ಸಾರ್ವಜನಿಕ ಶೌಚಾಲಯಗಳಿವೆ. 5ನೀರಿನ ಟ್ಯಾಂಕ್ ಪಂಚಾಯತ್ ವ್ಯಾಪ್ತಿಯಲ್ಲಿದೆ. 18 ಪ್ಲಾಸ್ಟಿಕ್ ಸಂಗ್ರಹಣಾ ಸೌಧಗಳನ್ನು ನಿರ್ಮಿಸಲಾಗಿದೆ. ಎರಡು ಕಡೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಡಂಪಿಂಗ್ ಯಾಡರ್್ ರಚಿಸಲಾಗಿದೆ.

ಗ್ರಾಮದ ಪ್ರತಿಯೊಬ್ಬ ನಾಗರೀಕರೂ ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಮನೆ ಮನೆಗಳಲ್ಲೂ ಶೌಚಾಲಯ ಇದೆ. ಬಯಲು ಮಲ ವಿಸರ್ಜನೆಗೆ ಈ ಗ್ರಾಮಪಂಚಾಯತ್ ನಲ್ಲಿ ಎಲ್ಲೂ ಅವಕಾಶವಿಲ್ಲ. ಸ್ವಚ್ಛ ಪರಿಸರ, ನಿರ್ಮಲ ಗ್ರಾಮ, ಆರೋಗ್ಯ ಭಾಗ್ಯ, ಪ್ಲಾಸ್ಟಿಕ್ ಮುಕ್ತ ಪ್ರದೇಶ ಹೀಗೆ ಹಲವು ಮಂತ್ರಗಳನ್ನು ಈ ಗ್ರಾಮಪಂಚಾಯತ್ನಲ್ಲಿ ಅಳವಡಿಸಲಾಗಿದೆ.

ಪ್ಲಾಸ್ಟಿಕ್ ಸಂಗ್ರಹಕ್ಕೂ ಸ್ಪರ್ಧೆ!


ಹೊಸಂಗಡಿ ಗ್ರಾಮ ಪಂಚಾಯತ್ , ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಸ್ವಚ್ಛತಾ ಸಮಿತಿ ಹೊಸಂಗಡಿ - ಬಡಕೋಡಿ, ಶಾಲಾಭಿವೃದ್ಧಿ ಸಮಿತಿಗಳು, ಪ್ರಾಥಮಿಕ ಶಾಲೆಗಳು , ಪೆರಿಂಜೆ, ಪಡ್ಡಂದಡ್ಕ, ಬಡಕೋಡಿ ಇವರ ಆಶ್ರಯದಲ್ಲಿ ಮೂಡಬಿದಿರೆಯ ಆಳ್ವಾಸ್ ಸಮಾಜಕಾರ್ಯ ಕಾಲೇಜಿನ ಸಹಕಾರದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮ ನೈರ್ಮಲ್ಯದ ಅರಿವು ಮೂಡಿಸುವುದು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಪ್ಲಾಸ್ಟಿಕ್ ಶೇಖರಣೆ ಮತ್ತು ಪ್ರಬಂಧ ಸ್ಪರ್ಧೆ ಯನ್ನು ಹಮ್ಮಿಕೊಂಡಿದೆ. ಎರಡು ವಿಭಾಗಗಳಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಮೊದಲ ವಿಭಾಗದಲ್ಲಿ 3ರಿಂದ 5ನೇ ತರಗತಿ ತನಕದ ವಿದ್ಯಾರ್ಥಿಗಳು ಭಾಗವಹಿಸಿದ್ದು, ದ್ವಿತೀಯ ಹಂತದಲ್ಲಿ 6ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಯ ಅವಧಿ ಮೂರು ತಿಂಗಳು. ನವೆಂಬರ್ 1ರಿಂದ ಜನವರಿ31ರ ತನಕ ಈ ಸ್ಪರ್ಧೆಯನ್ನು ಶಾಲಾವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.
ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳು ಶೇಖರಣೆ ಮಾಡಿರುವ ಪ್ಲಾಸ್ಟಿಕ್ಗಳನ್ನು ಒಟ್ಟುಮಾಡಿ ಇಂದು ಶಾಲೆಗೆ ತಂದಿದ್ದಾರೆ.ಅತೀ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ ವಿದ್ಯಾರ್ಥಿಗೆ ಆಯಾಯ ಶಾಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಮೂರು ತಿಂಗಳ ಕಾಲ ನಿರಂತರವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಅತೀಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ ಸ್ಪರ್ಧೆಗೆ "ಶಾಲಾ ನೈರ್ಮಲ್ಯ ರತ್ನ" ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವೂ ನಡೆಯುತ್ತದೆ.
ಒಟ್ಟಿನಲ್ಲಿ ಹೊಸಂಗಡಿ ಗ್ರಾಮ ಪ್ಲಾಸ್ಟಿಕ್ ನಿಯಂತ್ರಿತ ಗ್ರಾಮವಾಗಬೇಕು. ಮನೆ ಮನೆಗಳಲ್ಲೂ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡುವಂತಾಗಬೇಕು. ಯುವಜನತೆ ಮತ್ತು ಮಕ್ಕಳಲ್ಲಿ ಪ್ಲಾಸ್ಟಿಕ್ ಬಗ್ಗೆ ಕಾಳಜಿ ವಹಿಸಬೇಕೆಂಬ ಉದ್ದೇಶ ಈ ಗ್ರಾಮಸ್ಥರದ್ದು ಹಾಗೂ ಗ್ರಾಮದ ಉತ್ಸಾಹಿ ಕಾರ್ಯಕರ್ತರದ್ದು.

ಈಗಾಗಲೇ ಈ ಪಂಚಾಯತಿಗೆ ಕೇಂದ್ರ ಸರಕಾರದ ಉತ್ತಮ ಪುರಸ್ಕಾರಗಳಲ್ಲೊಂದಾದ ಸ್ವಚ್ಛಗ್ರಾಮ ಪುರಸ್ಕಾರ 2006ರಲ್ಲಿ ಸಂದಿದೆ. ಅಂದಿನಿಂದ ನಿರಂತರವಾಗಿ ಈ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ನೈರ್ಮಲ್ಯ , ಆರೋಗ್ಯ, ಕುಡಿಯವ ನೀರು ಹಾಗೂ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡುತ್ತಾ ಬಂದಿದೆ. ಇದೀಗ ಮೈಸೂರು ವಿಭಾಗ ಮಟ್ಟದಲ್ಲಿ ಸ್ವರ್ಣ ನೈರ್ಮಲ್ಯ ಪುರಸ್ಕಾರವನ್ನು ಈ ಗ್ರಾಮಪಂಚಾಯತ್ ತನ್ನದಾಗಿಸಿಕೊಂಡಿದ್ದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದೆ.

ವರದಿ: ಹರೀಶ್ ಕೆ.ಆದೂರು.

0 comments:

Post a Comment