ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:19 PM

ಮಧ್ವಾಚಾರ್ಯ

Posted by ekanasu

ವೈವಿಧ್ಯ


ನನ್ನೂರು ಬೆಳ್ಳೆ, ಆದರೂ ಆ ಊರಿಗೆ ಆ ಹೆಸರು ಹೇಗೆ ಬಂತೋ ಗೊತ್ತಿಲ್ಲ. ನಾವೆಲ್ಲ ಬೆಳ್ಳೆಯೆಂದರೆ ಬಿಳಿಯ ಬಣ್ಣವೆಂದೇ ತಿಳಿದಿದ್ದೆವು. ಅದಲ್ಲದೆ ಈಗಾಗಲೆ ತಿಳಿಸಿದಂತೆ ತುಳುವಿನಲ್ಲಿ ಬೊಲ್ಲೆ ಅನ್ನುವ ಹೆಸರು ಇದೆ. ಇದು ಬೊಲ್ಲ ಅಂದ್ರೆ ನೆರೆ ಪದದ ಉತ್ಪತ್ತಿಯೆಂದುಕೊಂಡಿದ್ದೆವು. ಇದು ಸ್ವಲ್ಪ ಮಟ್ಟಿಗೆ ಸರಿ. ಆದರೆ ಬೆಳ್ಳೆ ಎಂದರೆ ನೆರೆ ಬಂದು ನೀರು ಇಳಿದು ಹೋದ ಪ್ರದೇಶವೆನ್ನುವ ಅರ್ಥವೂ ಇದೆ.

ಬೆಳ್ಳೆಗೆ ಇನ್ನೊಂದು ಹೆಸರು ಮಧ್ವನಗರ. ಮಣಿಪಾಲದ ಬಳಿಯ ಮಾಧವನಗರ ಮತ್ತು ನಮ್ಮ ಮಧ್ವನಗರಕ್ಕೆ ಅಲ್ಪಸ್ವಲ್ಪ ಉಚ್ಚಾರ ಮತ್ತು ಇಂಗ್ಲೀಷ್ ಬರವಣಿಗೆಯಲ್ಲಿ ಸಾಮ್ಯತೆಯಿರುವುದರಿಂದ ಕೆಲವೊಮ್ಮೆ ಪರವೂರಿನವರಿಗೆ, ಅಂಚೆ ಇಲಾಖೆಯವರಿಗೆ ಗೊಂದಲವೂ ಇದೆ.

ಮಧ್ವನಗರ ಹೆಸರು ಇತ್ತೀಚಿನದ್ದು. ಪಾಜಕಾಕ್ಷೇತ್ರವೆನ್ನುವುದು ಇದರ ಮತ್ತೊಂದು ಹೆಸರು. ಕಾರಣ ನಮ್ಮ ಬೆಳ್ಳೆ ಆಚಾರ್ಯ ಮಧ್ವರು ಜನ್ಮವೆತ್ತಿದ ಸ್ಥಳ. ಇಂದಿಗೂ ಅಲ್ಲೊಂದು ಮಠವಿದೆ. ಇದು ಪ್ರವಾಸಿ ತಾಣವೂ ಹೌದು. ಹೆಚ್ಚಾಗಿ ಉತ್ತರ ಕರ್ನಾಟಕದ ಪ್ರವಾಸಿಗರು ವರ್ಷಂಪ್ರತಿ ಇಲ್ಲಿಗೆ ಬರುತ್ತಾರೆ. ಇಲ್ಲಿಯ ಪ್ರಸಿದ್ಧ ದೇವಾಲಯವಾದ ಕುಂಜಾರುಗಿರಿಯು ದುರ್ಗಾ ಬೆಟ್ಟವೆಂದೇ ಜನಜನಿತವಾಗಿದೆ.

ಆಚಾರ್ಯ ಮಧ್ವರು ಪೂಜೆ ಮಾಡುತ್ತಿದ್ದ ಶ್ರೀ ಕೃಷ್ಣನ ಗುಡಿಯೂ ಮಠದಲ್ಲಿದೆ. ಉಡುಪಿಯ ಅಷ್ಟಮಠಗಳಲ್ಲೊಂದಾದ ಕಾಣಿಯೂರು ಮಠದ ಸಂಸ್ಥಾನಕ್ಕೊಳಪಟ್ಟ ಮಧ್ವ ಮಠವು ಹಲವು ಕೌತುಕಗಳನ್ನೊಳಗೊಂಡ ಮತ್ತು ಆಚಾರ್ಯ ಮಧ್ವರ ಕೆಲವೊಂದು ಪವಾಡಗಳು ನಡೆದ ಪುಣ್ಯದ ಸ್ಥಳ.

ಮಠದ ಪಕ್ಕದಲ್ಲಿಯೆ ಒಂದು ಸರೋವರವಿದ್ದು ಸುತ್ತಮುತ್ತ ಹಸಿರುಮರಗಳ ನೆರಳು ಇಡೀ ಪ್ರದೇಶಕ್ಕೆ ಮರುಗು ನೀಡಿದಂತೆ ಇದೆ. ಹುಣಿಸೆಹಣ್ಣಿನ ಮರ, ಆಲದ ಮರ, ನೆಲ್ಲಿಕಾಯಿಯ ಮರ ಹೀಗೆ ದೈತ್ಯಮರಗಳು ಸಮೃದ್ಧವಾಗಿವೆ. ಇಲ್ಲಿಯ ಹುಣಿಸೆ ಮರ ಮತ್ತು ಆಲದ ಮರಗಳು ಬಹಳ ಪ್ರಸಿದ್ಧವಾದವುಗಳು. ಮೊದಲೆ ಹೇಳಿದಂತೆ ಆಚಾರ್ಯ ಮಧ್ವರು ಪವಾಡಪುರುಷರು. ಈ ಎರಡು ಮರಗಳ ಬಗ್ಗೆ ಅಂತಹ ಪವಾಡಗಳು ನಡೆದ ಘಟನೆಗಳಿವೆ.

ಮೊದಲನೆಯದಾಗಿ ಆಚಾರ್ಯರ ತಂದೆ ಕಕ್ರಶೆಟ್ಟಿಯೆನ್ನುವ ವ್ಯಕ್ತಿಯಿಂದ ಎಷ್ಟೋ ಹಣವನ್ನು ಸಾಲವಾಗಿ ಪಡೆದಿದ್ದರಂತೆ. ಈ ಕಕ್ರಶೆಟ್ಟಿಯ ಸಾಲವನ್ನು ತೀರಿಸುವ ದಾರಿ ಕಾಣದೆ ಕಂಗಾಲಾಗಿದ್ದ ಮಧ್ವಾಚಾರ್ಯರ ತಂದೆ ಒಮ್ಮೆ ಮೌನವಾಗಿ ಕುಳಿತಿರುವಾಗ ಬಾಲಕ ಮಧ್ವಾಚಾರ್ಯರು ತಂದೆಯನ್ನು ಚಿಂತೆಯ ಕಾರಣ ಕೇಳಿದರಂತೆ. ಕಾರಣ ತಿಳಿದ ಬಾಲಕ ತಮ್ಮ ಅಂಗಳದಲ್ಲಿದ್ದ ಹುಣಿಸೆ ಮರದ ಬೀಜಗಳನ್ನು ತೆಗೆದುಕೊಂಡು ಒಂದು ಬಟ್ಟೆಯಲ್ಲಿ ಕಟ್ಟಿ, ಆ ಗಂಟನ್ನು ಕಕ್ರ ಶೆಟ್ಟಿಗೆ ಕೊಟ್ಟರಂತೆ. ಕಕ್ರಶೆಟ್ಟಿಗೆ ಆಶ್ಚರ್ಯವಾಗಿ ಇದೇನೆಂದು ಕೇಳಿದಾಗ ಆಚಾರ್ಯರು ಇವು ನೀನು ತಂದೆಗೆ ಸಾಲವಾಗಿ ಕೊಟ್ಟಿರುವಂತದ್ದು ಅದನ್ನು ಹಿಂತಿರುಗಿಸುತ್ತಿದ್ದೇನೆ ಎಂದರೆಂತೆ. ಬಟ್ಟೆ ಬಿಚ್ಚಿ ನೋಡಿದರೆ ಲಕಲಕ ಹೊಳೆಯುವ ನಾಣ್ಯಗಳು. ಶೆಟ್ಟಿ ಸಂತೋಷದಿಂದ ಮನೆಗೆ ಬಂದು ನೋಡಿದರೆ ಅಲ್ಲಿ ನಾಣ್ಯದ ಬದಲಾಗಿ ಹುಣಿಸೆ ಬೀಜಗಳಿದ್ದವಂತೆ. ಇದು ನಾವು ಕೇಳಿ ತಿಳಿದುಕೊಂಡ ಕಥೆ.

ಅದೇ ಹುಣಿಸೆ ಮರದ ಪಕ್ಕದಲ್ಲಿಯೆ ಒಂದು ಆಲದ ಮರವಿದೆ. ಮಧ್ವಾಚಾರ್ಯರು ಬಾಲ್ಯ ಕುತೂಹಲಕ್ಕೊ ಅಥವಾ ತಿಳಿಯದೆಯೋ ಅಲ್ಲೊಂದು ಆಲದ ಗಿಡವನ್ನು ಬುಡಮೇಲಾಗಿ ನೆಟ್ಟರಂತೆ. ಆ ಗಿಡ ಚಿಗುರಿ ದೊಡ್ಡ ಮರವಾಗಿ ಬೆಳೆಯಿತು. ಈಗ್ಗೆ ಹತ್ತು ಹನ್ನೆರಡು ವರ್ಷಗಳ ಹಿಂದೆಯಷ್ಟೆ ಆ ಮರ ಸತ್ತು ಹೋಯಿತೆನ್ನುವ ಸುದ್ದಿ ತಿಳಿಯಿತು. ಆದರೆ ಅವರು ಚಿನ್ನದ ನಾಣ್ಯವೆಂದು ಕೊಟ್ಟ ಹುಣಿಸೆ ಬೀಜದ ಮರ ಮಾತ್ರ ಇನ್ನೂ ಇದೆ.

ಇನ್ನೊಂದು ಸ್ವಾರಸ್ಯಕರ ಘಟನೆಯಿದೆ. ಒಮ್ಮೆ ಮಧ್ವಾಚಾರ್ಯರು ಕುಂಜಾರುಗಿರಿ ದೇವಾಸ್ಥಾನದಲ್ಲಿರುವಾಗ ಅವರ ತಂದೆ ಕರೆದರಂತೆ. ಆ ಕರೆಗೆ ಓಡೋಡುತ್ತಾ ಬರುವಾಗ ಬೆಟ್ಟದ ಬುಡದಲ್ಲಿ ಮಣಿಮಂತನೆನ್ನುವ ರಾಕ್ಷಸ ಹಾವಿನ ರೂಪದಲ್ಲಿ ಮಲಗಿದ್ದನಂತೆ. ಆಚಾರ್ಯರು ಆ ಹಾವಿನ ಹೆಡೆಯ ಮೇಲೆ ಕಾಲಿಟ್ಟು ಅವನನ್ನು ಸಂಹಾರ ಮಾಡಿದರೆನ್ನುವ ಕಥೆಯಿದೆ. ಆ ಸ್ಥಳದಲ್ಲಿ ಈಗಲೂ ಪಾದ ಮತ್ತು ಹಾವಿನ ರೂಪವಿದ್ದು ಅಲ್ಲಿ ಇಂದಿಗೂ ಮಧ್ವರ ಇನ್ನೆರಡು ಅವತಾರಗಳನ್ನೆಲಾದ ಹನುಮ, ಭೀಮರ ಜೊತೆಗೆ ಮಧ್ವರ ಕೆತ್ತನೆಯ ಪ್ರತಿಮೆಗಳಿರುವ ಮಂಟಪವೂ ಸಾಕ್ಷಿಯಾಗಿ ನಿಂತಿದೆ.

ಇಂತಹ ಪವಾಡಪುರುಷನ ಬಗ್ಗೆ ಸಿನಿಮಾ ಮಾಡಲು ಹೊರಟವರು ಬನ್ನಂಜೆ ಗೋವಿಂದಾಚಾರ್ಯರು (ಕಥೆ-ಸಂಭಾಷಣೆ-ಹಾಡು), ವಿ. ಆರ್. ಕೆ. ಪ್ರಸಾದ್(ಸಹ ನಿರ್ದೇಶನ) ಮತ್ತು ಜಿ.ವಿ.ಅಯ್ಯರ್ (ನಿರ್ದೇಶನ) ಅವರುಗಳು. ಆ ಸಿನಿಮಾದ ಶೂಟಿಂಗ್ ಪಾಜಕಮಠದಲ್ಲಿ ಮತ್ತು ಅದರ ಸುತ್ತ ಮುತ್ತ ಐದಾರು ದಿನಗಳ ಕಾಲ ನಡೆದಿತ್ತು. ಆಗ ನಟಿ ವಿನಯಪ್ರಸಾದ್ (ಆಗ ಅವರ ಹೆಸರು ವಿನಯಾ ಭಟ್) ಅವರು ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಟೀವಿ ಧಾರಾವಾಹಿಗಳಲ್ಲಿ ಅವರನ್ನು ನೋಡಿ ನಮಗೆ ಗೊತ್ತಿತ್ತು ಮಾತ್ರವಲ್ಲ; ಅವರು ರೂಪದರ್ಶಿ ಅಭಿನಯಿಸಿದ, ನಾಗತಿಹಳ್ಳಿ ಚಂದ್ರಶೇಖರವರ `ಬಾ ನಲ್ಲೆ ಮಧುಚಂದ್ರಕ್ಕೆ' ಕಾದಂಬರಿ ಉದಯವಾಣಿಯ ವಿಶೇಷಾಂಕದಲ್ಲಿ ಪ್ರಕಟವಾಗಿ ನನ್ನಂತಹ ಯುವಕರನ್ನು ಮೋಡಿ ಮಾಡಿತ್ತು. ಆ ಕಾದಂಬರಿಗೆ ರೂಪದರ್ಶಿಕೆಗಾಗಿ ಮಣಿಪಾಲದ ಎಂಡ್ ಪಾಯಿಂಟ್ನಲ್ಲಿ ತೆಗೆದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಹಾಗಾಗಿ ವಿನಯಪ್ರಸಾದ್ ನಮಗೆ ಪರಿಚಿತರು. ಅವರು `ಮಧ್ವಾಚಾರ್ಯ' ಚಿತ್ರದ ಅಭಿನಯಕ್ಕಾಗಿ ನಮ್ಮೂರಿಗೆ ಬರುತ್ತಿದ್ದಾರೆನ್ನುವ ಸುದ್ದಿ ತಿಳಿದೊಡನೆ ನಾವೆಲ್ಲ ಮಠಕ್ಕೆ ಓಡಿದೆವು. ಆಗ ಸರೋವರದ ಮೆಟ್ಟಿಲುಗಳ ಮೇಲೆ ನಿಂತು ಬಟ್ಟೆಯೊಗೆಯುವ ದೃಶ್ಯದ ಚಿತ್ರೀಕರಣವಾಗುತ್ತಿತ್ತು. ಅದರ ಪಕ್ಕದಲ್ಲಿಯೆ ಒಂದು ಗಡಿಗೆ ರೂಪದ ಒಂದು ಸಣ್ಣ ಪಾತ್ರೆಯಿದೆ. ಅದನ್ನು ಒಂದು ಕಲ್ಲಿನಿಂದ ಮುಚ್ಚಿಡಲಾಗಿದೆ. ಅದು ಮೊಸರಿನ ಪಾತ್ರೆ. ಆಚಾರ್ಯ ಮಧ್ವರಿಗೆ ಮೊಸರಿನ ಗಡಿಗೆಯ ಜವಾಬ್ದಾರಿಯನ್ನು ಕೊಟ್ಟ ಅವರ ತಾಯಿ ಬೇರೆಲ್ಲೋ ಹೋದಾಗ ಗೆಳೆಯರ ಜೊತೆಗೆ ಆಡಲು ಹೊರಟ ಮಧ್ವರು ಗಡಿಗೆಗೆ ಕಲ್ಲಿನಿಂದ ಮುಚ್ಚಿದರೆನ್ನುವ ಪ್ರತೀತಿ ಇದೆ.

ಚಿತ್ರೀಕರಣವೆಂದರೆ ಒಂದೇ ಟೇಕ್ನಲ್ಲಿ ಎಲ್ಲವೂ ಮುಗಿಯುವುದಿಲ್ಲ. ಒಂದೇ ದೃಶ್ಯವನ್ನು ಐದಾರು ಬಾರಿ ಚಿತ್ರೀಕರಿಸುತ್ತಿದ್ದರು. ನಮಗಂತೂ ಕುತೂಹಲ. ಕಾಲುಗಳು ನೋವಾಗುವವರೆಗೂ ಅಲ್ಲೇ ನಿಂತು ನೋಡುತ್ತಿದ್ದೆವು. ಶೂಟಿಂಗ್ ನ ಸಲುವಾಗಿ ಕೆಲವೆಡೆ ಬೈಹುಲ್ಲಿನ ಮಾಡುಗಳು, ಹಳೇಯ ಕಾಲದ ಮನೆಯನ್ನು ಹೋಲುವಂತೆ ಬಣ್ಣಗಳನ್ನು ಬಳಿದಿದ್ದರು. ಇನ್ನುಳಿದಂತೆ ನಾವು ನಿತ್ಯವೂ ನೋಡುತ್ತಿದ್ದ ಪಾಜಕದ ಮಠ ಸುಣ್ಣ ಬಣ್ಣ ಹಚ್ಚಿ ವಿಚಿತ್ರವಾಗಿ ಕಾಣುತ್ತಿತ್ತು.

ಕೆಲವೊಮ್ಮೆ ಚಿತ್ರೀಕರಣ ಬೊರ್ ಹೊಡೆಸಿದಾಗ ನಾವೆಲ್ಲಾ ಅಲ್ಲಿಯೆ ಪಕ್ಕದಲ್ಲಿರುವ ಅಮ್ಟೆಕಾಯಿಯ ಮರದ ಹತ್ತಿರ ಬರುತ್ತಿದ್ದೆವು. ಆ ಕಾಯಿಯನ್ನು ಪೇಟ್ಲಕ್ಕಾಗಿ ಉಪಯೋಗಿಸುತ್ತಿದ್ದೆವು. ಪೇಟ್ಲವೆಂದರೆ ಸಿಮೆಕೋಲನ್ನು ಹದಿನೈದಿಂಚು ಅಳತೆಯ ತುಂಡು ಮಾಡಿ ಅದರೊಳಗೆ ಅಮ್ಟೆಕಾಯಿಯನ್ನು ಇಟ್ಟು ಸಿಮೆಕೋಲಿನ ತೂತಿಗೆ ಸರಿಹೊಂದುವ ಸಪೂರದ ಕೋಲಿನಿಂದ ದೂಡಿದ ಕೂಡಲೆ ಪಟ್ ಸದ್ದಿನೊಂದಿಗೆ ಸಿಡಿಯುತ್ತದೆ. ಈ ಅಮ್ಟೆಕಾಯಿ ಸಾಧಾರಣವಾಗಿ ನಿಂಬೆಹಣ್ಣಿನ ಪರಿಮಳದಂತಿರುತ್ತದೆ. ಅದರ ವೈಜ್ಞಾನಿಕ ಹೆಸರು ಗೊತ್ತಿಲ್ಲ. ನಾವೆಲ್ಲಾ ಮರದ ತುತ್ತ ತುದಿಗಿದ್ದ ಆ ಕಾಯಿಗಳನ್ನು ಕೊಯ್ದು ಒಂದಷ್ಟು ಕಿಸಿಗೆ ತುಂಬಿಸಿಕೊಳ್ಳುತ್ತಿದ್ದೆವು.

ಅಷ್ಟರಲ್ಲಿಯೆ ಒಂದು ಕಡೆ ಚಿತ್ರೀಕರಣ ಮುಗಿದು ಇನ್ನೊಂದೆಡೆ ಸಜ್ಜಾಗುವಾಗ ಅಲ್ಲಿಯ ದೊಡ್ಡ ಲೈಟಿಂಗ್ಸ್ಗಳು, ಪ್ರತಿಫಲನದ ಸಾಧನಗಳು, ಲೈಟ್ ಬಾಯ್ಸ್ ಅವರನ್ನೆಲ್ಲಾ ನೋಡುತ್ತಾ ಆಶ್ಚರ್ಯಪಡುತ್ತಿದ್ದೆವು. ಅವರುಗಳಲ್ಲಿಯ ತಾಳ್ಮೆ, ಸಮಯ ಪರಿಪಾಲನೆ ಮುಂತಾದುವುಗಳ ಬಗ್ಗೆ ಹೆಮ್ಮೆಯೆನಿಸುತ್ತಿತ್ತು.

ಕುಂಜಾರು ಗಿರಿಯ ಪಾದೆಕಲ್ಲಿನ ದಾರಿಯ ದೃಶ್ಯವಂತು ಅದ್ಭುತವಾಗಿ ಮೂಡಿ ಬಂದಿದೆ. ಆಚಾರ್ಯ ಮಧ್ವರು `ಎಲ್ಲೆಲ್ಲೂ ಅಳುವ ಜನರೆ ಇದ್ದಾರಲ್ಲ; ನಗುವವರು ಯಾರು ಇಲ್ಲವೆ?' ಅನ್ನುವ ತಲ್ಲಣದಿಂದ ದೇವಾಸ್ಥಾನದ ಬಾಗಿಲಿಗೆ ಬಂದು ಕುಳಿತುಕೊಳ್ಳುವ ಸನ್ನಿವೇಶವಂತು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅವಿನಾಶ್, ಜಯಂತಿ, ಎಲ್.ವಿ.ಶಾರದ, ಜಿ.ವಿ.ಕಲ್ಪನ, ವಿನಯಾ ಭಟ್, ಪೂರ್ಣಪ್ರಸಾದ್, ಡಿಜಿ.ಹೆಗಡೆ, ವಿ.ಆರ್.ಕೆ. ಪ್ರಸಾದ್, ಹೊನ್ನಪ್ಪ ಭಾಗವತರ್, ರವೀಂದ್ರರಂತಹ ಕಲಾವಿದರಿರುವ ಚಿತ್ರ ಸಮೃದ್ಧವಾಗಿ ಮೂಡಿಬಂದಿದೆ.

ಎರಡು ಮೂರು ದಿನಗಳವರೆಗೂ ಒಂದು ರೀತಿಯ ವೇದಾಧ್ಯನ, ಪ್ರವಚನಗಳು ನಡೆಯುವ ಒಂದು ಧಾರ್ಮಿಕ ಕಾರ್ಯಕ್ರಮದಂತೆ ಚಿತ್ರೀಕರಣ ನಡೆದು ಹೋದ ಮೇಲೆ ಉಳಿದದ್ದು ಚಿತ್ರೀಕರಣ ತಂಡ ಹಚ್ಚಿದ ಬಣ್ಣಗಳು, ಸೆಟ್ಗಳು ಮಾತ್ರ.

ಮಧ್ವಾಚಾರ್ಯ ಚಿತ್ರ ಬಿಡುಗಡೆಯಾದರೂ ಅದನ್ನು ಥಿಯೇಟರ್ನಲ್ಲಿ ನೋಡುವ ಭಾಗ್ಯಸಿಗಲಿಲ್ಲವಾದರೂ ನಮ್ಮೂರಿನಲ್ಲಿ ಚಿತ್ರೀಕರಣ ನಡೆದಿದೆಯೆನ್ನುವ ಕುತೂಹಲದಿಂದ ಸಿಡಿ ತರಿಸಿ ನೋಡಿದೆ. ಆಗಿನ ದೃಶ್ಯಗಳು ಈಗ ವಿರಳವಾದರೂ ಒಂದು ಊರಿನ ದಾಖಲೆಯಾಗಿ, ಚರಿತ್ರೆಯ ಸಾಕ್ಷಿಯಾಗಿ ಚಿತ್ರ ನಿಂತಿರುವುದು ಸುಳ್ಳಲ್ಲ. ಊರಿನಿಂದ ದೂರವಿದ್ದರೂ ನೆನಪುಗಳನ್ನು ಕೆದಕುವ ನನ್ನೂರಿನ ದೃಶ್ಯಗಳು ಕಾಡುತ್ತಲೇ ಇರುವಾಗ ಹೀಗೆ ನಿಮ್ಮ ಮುಂದೆ ಬಿಚ್ಚಿಡೋಣವೆನಿಸುತ್ತದೆ.


0 comments:

Post a Comment