ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:40 PM

ಕರುಳ ಬೆಂಬಿಡದೆ...

Posted by ekanasu

ಸಾಹಿತ್ಯ
ಆಗಷ್ಟ ತಿಂಗಳ ದಿನಗಳವು. ಮಳೆಗೆ ಹೊತ್ತು ಗೊತ್ತು ಇಲ್ಲದೆ ಸುರಿಯುವುದೇ ಕೆಲಸ. ನನ್ನ ಒಂಭತ್ತನೆಯ ತರಗತಿಯ ಅಭ್ಯಾಸಕ್ಕೂ ಶ್ರಾವಣದ ಸಂಭ್ರಮ ತೊಡರಿಕೊಂಡಿತ್ತು. ಜೊತೆಗೆ ಬೆಳಗಿನ ಓಟ, ಮಲ್ಲಿಗೆ ತೋಟದ ಒಡನಾಟ, ವ್ಯಾಯಾಮ, ಕುಟ್ಟಿ(ಅವ್ವಿ) ಮತ್ತು ಅಪ್ಯಾನೊಂದಿಗೆ ಆಟಗಳು... ಯಾವುದನ್ನೂ ನಾನು ತಪ್ಪಿಸಿಕೊಳ್ಳುತ್ತಿರಲಿಲ್ಲ.ಅವತ್ತು ಕೂಡ ಎಂದಿನಂತೆ ನನ್ನ ಬೆಳಗಿನ ಓಟ ಶುರುವಾಗಿತ್ತು. ರುದ್ರಯ್ಯಜ್ಜನವರ ತೋಟದ ಬದುವಿನಲ್ಲಿದ್ದ ಹುಣಸೆ ಮರದಲ್ಲಿ ಯಾವುದೊ ಒಂದು ಪಕ್ಷಿಯು ಆಕ್ರಂದನವೆಬ್ಬಿಸಿತ್ತು. ಪುಟ್ಟ ಗಾತ್ರದ ಕಂದು ಮೈಬಣ್ಣದ ಅದರ ಪುಕ್ಕಗಳಲ್ಲಿ ಅಲ್ಲಲ್ಲಿ ಬೆಳ್ಳಿಯ ರೇಕುಗಳಂತೆ ಗೆರೆಗಳಿದ್ದವು. ನಾನು ಓಡುವುದನ್ನು ನಿಲ್ಲಿಸಿ ಅದನ್ನೇ ಸ್ವಲ್ಪ ಹೊತ್ತು ಗಮನಿಸಿದೆ. ನಂತರ ನನ್ನ ಬಾಯಿಂದ ಪಾಪ ಎಂಬ ಶಬ್ದ ಹೊರಬಿದ್ದಿತ್ತು.ಮತ್ತೆ ನನ್ನ ಓಟವನ್ನು ಮುಂದುವರೆಸಲು ಕಾಲು ಕಿತ್ತೆ. ನಾಲ್ಕಾರು ಹೆಜ್ಜೆ ಇರಿಸುವಷ್ಟರಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು. ಹುಣಸೆ ಮರದಲ್ಲಿ ಆಕ್ರಂದಿಸುತ್ತಿದ್ದ ಪಕ್ಷಿಯದೇ ಪ್ರತಿರೂಪವಾದ ಎರಡು ಮರಿಗಳು ತೊಯ್ದು ತೊಪ್ಪೆಯಾಗಿ ಬಿದ್ದಿದ್ದವು. ಆದರೂ ಅವು ತಲೆ ಮೇಲೆತ್ತಿ ಚಿಂವ್ ಗುಟ್ಟತೊಡಗಿದ್ದವು. ನನಗೇಕೋ ಆ ಕ್ಷಣ ಆ ಮರಿಗಳ ಮೇಲೆ ಪ್ರೀತಿ ಎನ್ನಿಸಿತು. ಅವುಗಳನ್ನು ಎತ್ತಿಕೊಂಡು ಎರಡು ಮುಷ್ಟಿಯಲ್ಲಿ ಒಂದೊಂದನ್ನು ಹಿಡಿದುಕೊಂಡು ಮನೆಯ ಕಡೆ ಹೊರಟೆ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಮನೆ ತಲುಪಿದ್ದೇ ತಡ ನನ್ನ ಮುಖವನ್ನು ನೋಡಿದ ಅಪ್ಪ ಯಾಕವ್ವಿ ಎಷ್ಟು ದೌಡು(ಬೇಗನೆ) ಬಂದೆಲ್ಲ... ಎಂದು ಕೇಳಿದ್ದರು. ನಾನು ಸುಮ್ಮನೆ ನಕ್ಕೆ.

ಅಪ್ಪ ಏನನ್ನುತ್ತಾರೋ ಎಂಬ ಹೆದರಿಕೆಯಿಂದಲೇ ಅವರ ಕೈಯನ್ನು ಹಿಡಿದುಕೊಂಡು ಕರೆದೊಯ್ದು ಕೊಟ್ಟಿಗೆಯಲ್ಲಿ ಬಿದಿರಿನ ಬುಟ್ಟಿಯಲ್ಲಿ ಮುಚ್ಚಿದ್ದ ಪಕ್ಷಿ ಮರಿಗಳನ್ನು ತೋರಿಸಿದೆ. ಅಪ್ಪ ಏನೂ ಅನ್ನಲಿಲ್ಲ. ಒಳಗಿನಿಂದ ಗೋದಿ ರವೆಯನ್ನು ತಂದು ಅವುಗಳಿಗೆ ಹಾಕಲು ತಿಳಿಸಿದರು. ನನಗೆ ಭಯ ಹೊರಟು ಹೋಗಿ ನಿರುಮ್ಮಳವಾಯಿತು. ಅಷ್ಟು ಹೊತ್ತಿಗೆ ನನ್ನ ತಮ್ಮಂದಿರು, ಅಕ್ಕನ ಮಕ್ಕಳು ಎಲ್ಲರೂ ಆ ಮರಿಗಳ ಸುತ್ತ ಜಮಾಯಿಸಿ ಅವುಗಳ ಮೃದುವಾದ ಪುಕ್ಕಗಳನ್ನು ಸವರಿ ನೋಡಲು ನಾ ಮುಂದು ತಾ ಮುಂದು ಎಂದು ಗದ್ದಲವೆಬ್ಬಿಸಿದ್ದರು. ನಮ್ಮ ಗದ್ದಲ ಕೇಳಿ ಅವ್ವ ಮತ್ತು ಅಕ್ಕಂದಿರೂ ಸಹ ಕೊಟ್ಟಿಗೆಗೆ ಬಂದರು. ಅಷ್ಟು ಸಣ್ಣ ಮರಿಗಳನ್ನು ತರುವ ಕಾರಣವೇನಿತ್ತು, ಅಷ್ಟಕ್ಕೂ ಅವು ಏನು ಕೋಳಿ ಮರಿಗಳೇ ನಮ್ಮ ನುಚ್ಚು, ಕಾಳು ತಿಂದು ಬೆಳೆಯಲು ಎಂದು ಅವ್ವ ಆಕ್ಷೇಪಿಸಿದರು.

ಅಕ್ಕಂದಿರು ತಮಾಷೆಗೆ ಬೈಯ್ದರೂ ನಂತರ ಆ ಮರಿಗಳ ಅಂದ ಚೆಂದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಪ್ಪ ಮತ್ತು ಇತರರೆಲ್ಲ ನನ್ನ ಪಕ್ಷವಹಿಸಿಕೊಂಡಿದ್ದರಿಂದ ನನಗೆ ಅವ್ವನ ಆಕ್ಷೇಪದಿಂದ ದುಃಖವೇನೂ ಆಗಲಿಲ್ಲ. ಆದರೇ ಹೊತ್ತು ಮೇಲೇರಿದಂತೆಲ್ಲ ಅವುಗಳ ಕೂಗಾಟ ಹೆಚ್ಚಾಯಿತು. ನಾನು ಸುರಿದಿದ್ದ ಗೋದಿರವೆಯನ್ನು ಅವು ತಿನ್ನಲೇ ಇಲ್ಲ. ತಟ್ಟೆಯಲ್ಲಿ ಹಾಕಿದ ನೀರು ಹಾಗೇ ಇತ್ತು. ನಾನು ತಮ್ಮಂದಿರು ಸರದಿಯ ಮೇಲೆ ಅವುಗಳಿಗೆ ನೀರು ಕುಡಿಸಲು ಪ್ರಯತ್ನಿಸಿ ಸೋತೆವು. ನನಗೆ ಅವ್ವ ಹೇಳಿದ ಮಾತುಗಳು ನಿಜವೆಂದು ಪಶ್ಚಾತಾಪವಾಗತೊಡಗಿತ್ತು. ಅಪ್ಪ ವಿವಿಧ ಜಾತಿಯ ಕೋಳಿಗಳನ್ನು ಅದೆಷ್ಟು ಜತನದಿಂದ ಸಾಕುತ್ತಾರಲ್ಲವೇ, ಈ ಕಾಡು ಪಕ್ಷಿಗಳನ್ನು ಸಾಕುವುದು, ಪಳಗಿಸುವುದು ಅವರಿಗೆ ಕಷ್ಟವಾಗಲಿಕ್ಕಿಲ್ಲವೆಂದು ಯೋಚಿಸಿ ಅವರ ಹತ್ತಿರ ಗೋಗರೆದು ಬೇಡಿಕೊಂಡೆ.

ಆದರೆ ಅಪ್ಪ ನಿಧಾನ ದಾಟಿಯಲ್ಲೇ ಸ್ವಲ್ಪ ಗಂಭೀರವಾಗಿ ಹೇಳಿದ್ದರು, ಅವೆಲ್ಲ ಸಾಕೂ ಪಕ್ಷಿ ಅಲ್ಲ ಏನವ್ವ. ಅವು ಸ್ವತಂತ್ರಾಗಿ ಬೆಳೆಯಾವು, ಅವು ಎಲ್ಲಿದ್ದವು ಅಲ್ಲೇ ಬಿಟ್ಟು ಬಂದು ಬಿಡು. ಇಲ್ಲಿದ್ರ ಅವು ಸತ್ತು ಹೊಕ್ಕಾವು...ಎಂದಾಗ ನನಗೆ ಆ ಪಕ್ಷಿಗಳ ಸಾಕಣೆಯ ಬಗ್ಗೆ ಇಟ್ಟುಕೊಂಡಿದ್ದ ಕೊನೆಯ ನಿರೀಕ್ಷೆಯೂ ಸುಳ್ಳಾದಂತಾಗಿ ಕಣ್ಣಲ್ಲಿ ನೀರು ಬಂದಿತ್ತು. ಆ ಕ್ಷಣದಲ್ಲಿ ನಾಯ್ಕರ ಮನೆಯ ಮಂದಿನ ಗೂಡಿನಲ್ಲಿದ್ದ ನೂರಾರು ಹಕ್ಕಿಗಳು ಮತ್ತು ಅವುಗಳ ಪೋಷಕ ಅಡವೆಪ್ಪ ಕಣ್ಮುಂದೆ ಬಂದು ನನ್ನ ಹೊಸ ಪಕ್ಷಿ ಮರಿಗಳು , ಕಂಬನಿ ತುಂಬಿದ ಕಣ್ಣುಗಳಿಗೆ ಮಬ್ಬಾಗಿ ಕಂಡವು.

ಅಡವೆಪ್ಪ ಅಷ್ಟು ಹಕ್ಕಿಗಳನ್ನು ಸಾಕುವುದು ಸಾಧ್ಯವಾಗಿರುವಾಗ ನನಗೆ ಈ ಎರಡು ಮರಿಗಳನ್ನು ಸಾಕುವುದಕ್ಕೆ ಆಗುವುದಿಲ್ಲವೇ ಎಂಬುದು ನನ್ನ ಹಟವಾಗಿತ್ತು. ಅಪ್ಪಾಜಿಯೊಂದಿಗೆ ಆ ವಿಷಯಕ್ಕೇ ಸಣ್ಣದೊಂದು ಜಗಳವೇ ಆಯಿತು. ಆದರೆ ಕೊನೆಗೆ ಸಂಸತ್ತು ಸದಸ್ಯರೆಲ್ಲರೂ (ಅಮ್ಮ ಮತ್ತು ಸಹೋದರರು, ಸಹೋದರಿಯರು) ಒಮ್ಮತದಿಂದ ಆ ಮರಿಗಳನ್ನು ಅವುಗಳ ಜಾಗಕ್ಕೆ ಬಿಡುವುದೇ ಒಳಿತು ಎಂದು ಅಭಿಪ್ರಾಯ ಪಟ್ಟಾಗ ನನ್ನ ಆಟ ಏನೂ ನಡೆಯಲಿಲ್ಲ. ಅಪ್ಪ ನನ್ನ ಊದಿದ ಮುಖವನ್ನು ನೋಡಿ ಸಮಾಧಾನಪಡಿಸಲು ಅಂಥದೇ ಸ್ವಲ್ಪ ದೊಡ್ಡ ಮರಿಗಳನ್ನು ತಂದರೆ ಅವು ಖಂಡಿತ ನಾವು ಹಾಕಿದ ಕಾಳುಗಳನ್ನು ತಿನ್ನುತ್ತವೆಯೆಂದೂ, ಅಂಥ ಮರಿಗಳನ್ನು ಹುಡುಕಿ ತಾವೇ ತಂದು ಕೊಡುವುದಾಗಿಯೂ ಭರವಸೆಕೊಟ್ಟು ತಲೆ ನೇವರಿಸಿದರು.

ಅಷ್ಟು ಹೊತ್ತಿಗೆ ಮನೆಯ ಪಕ್ಕದ ಬಂಗಾಳಿ ಮರದಲ್ಲಿ ಯಾವುದೋ ಅಪರಿಚಿತ ಪಕ್ಷಿ ಚಿಂವ್ ಗುಟ್ಟುತ್ತಿದೆ ಎಂದು ತಮ್ಮಂದಿರು ರಿಪೋರ್ಟ ಮಾಡತೊಡಗಿದ್ದರು. ನಾನು ಆ ಕಡೆ ಲಕ್ಷಗೊಟ್ಟು ಆಲಿಸಿದೆ. ಸಂಶಯವೇ ಇಲ್ಲ. ಅದು ರುದ್ರಯ್ಯಜ್ಜನವರ ಹುಣಸೇಮರದಲ್ಲಿ ಆಕ್ರಂದಿಸುತ್ತಿದ್ದ ಪಕ್ಷಿಯ ಧ್ವನಿಯೇ ಆಗಿತ್ತು. ಹೊರಗೆ ಓಡಿ ಹೋಗಿ ನೋಡಿದೆ. ಆ ಪಕ್ಷಿ ಟೊಂಗೆಯಿಂದ ಟೊಂಗೆಗೆ ಪುಟುರ್ ಪುರ್ ಅಂತ ಹಾರಾಡುತ್ತ ರೋಧಿಸತೊಡಗಿತ್ತು. ಆ ಸಮಯದಲ್ಲಿ ನನಗೆ ಅವ್ವ್ಮನನ್ನು ಬಿಟ್ಟು ಒಂದೆರಡು ದಿವಸ ಅಜ್ಜಿಯ ಮನೆಯಲ್ಲಿದ್ದಾಗ ಉಂಟಾಗುತ್ತಿದ್ದ ಚಡಪಡಿಕೆ ನೆನಪಾಯಿತು. ಆಗ ಎಷ್ಟು ಚಡಪಡಿಸುತ್ತಿದ್ದರೆಂದು ನನಗೆ ಆಮೇಲೆ ಆಕೆಯ ಮಾತುಗಳಿಂದಲೇ ತಿಳಿಯುತ್ತಿತ್ತು. ಈಗ ಈ ತಾಯಿ ಪಕ್ಷಿಯೂ ತನ್ನ ಮರಿಗಳಿಗಾಗಿ ಹಲುಬುತ್ತಿದೆ ಎಂದು ನಿಧಾನಕ್ಕೆ ಅರ್ಥವಾಯಿತು.
ಅಷ್ಟು ಹೊತ್ತಿಗೆ ಅವ್ವ ಒಂದು ಹಸಿ ತೊಗರಿ ಕಟ್ಟಿಗೆಯನ್ನು ಹಿಡಿದು, ನನಗೆ ಏನು ನಡೆಯಲಿದೆ ಎಂದು ಅರ್ಥವಾಗಿ ಬಿಟ್ಟಿತು. ಅಂದರೆ ನಾವು ಯಾರಾದರೂ ಹಟಮಾರಿತನವನ್ನು ತೋರಿದಾಗೆಲ್ಲ ಅಪ್ಪ ಸಮಾಧಾನ ಮಾಡುತ್ತಿದ್ದರು. ನಾವು ಅಪ್ಪನ ಮಾತನ್ನೂ ಕೇಳದೆ ಮೊಂಡುತನಕ್ಕೆ ಇಳಿದಾಗ ಅವ್ವ ಒಂದು ಸಣ್ಣ ದೊಣ್ಣೆಯನ್ನು ಹಿಡಿದು ನಮ್ಮನ್ನು ರಿಪೇರಿ ಮಾಡುತ್ತಿದ್ದರು. ಅವತ್ತೂ ಕೂಡ ಅವ್ವ ಆ ಕಾರಣಕ್ಕೇ ಕಟ್ಟಿಗೆಯನ್ನು ಹಿಡಿದುಕೊಂಡು ನನ್ನ ಸಮೀಪ ಬಂದಾಗ, ಮೆಲ್ಲಗೆ ಆ ಮರಿಗಳನ್ನು ಮನಸ್ಸಿಲ್ಲದ ಮನಸ್ಸಿನಿಂದ ಎತ್ತಿಕೊಂಡು ಹೋಗಿ ಬಂಗಾಳಿ ಮರದ ಕೆಳಗಿರಿಸಿ, ಬಸಲಿಂಗಪ್ಪ ಕಾಕಾವರ ಮನೆ ಕಟ್ಟೆಯ ಮೇಲೆ ಸುಮ್ಮನೆ ಕುಳಿತುಕೊಂಡೆ. ಯಾರು ಕರೆದರೂ ಮನೆಯೊಳಗೆ ಬರದೆ, ಅವತ್ತು ಶಾಲೆಗೂ ಚಕ್ಕರ್ ಹಾಕಿ, ಸ್ನಾನ ತಿಂಡಿ ಏನೂ ಮಾಡದೇ ನನ್ನ ಅಸಮಾಧಾನವನ್ನು ವ್ಯಕ್ತ ಮಾಡಿದೆ. ಬಹಳ ಹೊತ್ತಿನ ನಂತರ ಸುಸ್ತಾದಂತಾಗಿ ಒಳಗೆ ಹೋಗಿ ಮಲಗಿಕೊಂಡೆ. ನಿದ್ರೆ ಆವರಿಸಿತ್ತು. ಎಚ್ಚೆತ್ತಾಗ ಆ ಪಕ್ಷಿಯ ರೋಧನ ಕೇಳಿಸುತ್ತಿರಲಿಲ್ಲ. ಎದ್ದು ಹೋಗಿ ನೋಡಿದೆ. ಮರದ ಕೆಳಗೆ ಮರಿಗಳು ಇರಲಿಲ್ಲ. ಅದರ ತಾಯಿಯೇ ಒಯ್ಯಿತೋ ಅಥವಾ ಬೆಕ್ಕು, ಮುಂಗುಸಿ ಏನಾದರೂ ತಿಂದು ಬಿಟ್ಟವೋ ಎಂದು ಚಿಂತೆಯಾಯಿತು. ಮನೆಯ ಸುತ್ತ ಕೋಟೆ ಗೋಡೆಯ ಪಕ್ಕದಲ್ಲಿ, ತಿಪ್ಪೆಯ ಮೇಲೆ ಅವುಗಳ ಪುಕ್ಕಗಳೇನಾದರೂ ಬಿದ್ದಿವೆಯೇ ಎಂದು ಹುಡುಕಿದೆ. ಹಾಗೇನೂ ಬಿದ್ದಿರಲಿಲ್ಲ. ಸ್ವಲ್ಪ ಸಮಾಧಾನವಾದರರೂ, ಪೂರ್ಣ ನೆಮ್ಮದಿಯಾಗಲಿಲ್ಲ. ಮನೆಯಲ್ಲಿ ಎಲ್ಲರ ಮೇಲಿನ ಕೋಪ ಹಾಗೇ ಉಳಿದಿತ್ತು ವಿಶೇಷವಾಗಿ ಅವ್ವನ ಮೇಲೆ!

ಒಂದೆರಡು ದಿನಗಳು ದುಮ್ಮನೇ ಉರಿಯುತ್ತಲೇ ಕಳೆದವು. ಆ ದಿನ ಬೆಳಿಗ್ಗೆ ಎದ್ದಾಗ ನನ್ನ ದೊಡ್ಡ ತಮ್ಮ ಪರಶು ಅಕ್ಕೋ... ಎಂದು ಸಂಭ್ರಮದಿಂದ ಕೂಗುತ್ತ ನನ್ನ ಹತ್ತಿರ ಓಡಿ ಬಂದಾಗ ನನ್ನ ಮುಖದ ಬಿಗುವು ಸ್ವಲ್ಪ ಸಡಿಲಾಯಿತ್ತು. ಏನು ಎಂಬಂತೆ ನೋಡಿದೆ. ಅವನು ನನ್ನ ಕೈಯನ್ನು ಹಿಡಿದುಕೊಂಡು ಸ್ವಲ್ಪ ಅವಸರದಿಂದಲೇ ಎಳೆದುಕೊಂಡು ಮರದ ಕಡೆ ನಡೆದನು. ಕೈ ಮೇಲೆತ್ತಿ ಮರದ ಕಡೆ ತೋರಿಸಿದನು. ಹೌದು ಅದೇ ಪಕ್ಷಿ ತಾಯಿ ತನ್ನ ಮರಿಗಳಿಗೆ ವಾತ್ಸಲ್ಯದಿಂದ ಗುಟ್ಟಿ ಕೊಡತೊಡಗಿತ್ತು. ನಾವಿಬ್ಬರು ಸಂತಸದಿಂದ ಚೀರಾಡುತ್ತಿರುವಾಗ ಅದು ಮನೆಯಲ್ಲಿ ಎಲ್ಲರಿಗೂ ಕೇಳಿ ಅವರೂ ಹೊರಬಂದು ಮರದಲ್ಲಿದ್ದ ಪಕ್ಷಿ ಮತ್ತು ಅದರ ಮರಿಗಳ ಸಮ್ಮಿಲನವನ್ನು ನೋಡಿ ಸಂತಸಗೊಂಡರು. ನಾನೂ ನನ್ನ ಹಟವನ್ನು ಮರೆತು ಮತ್ತೆ ಎಂದಿನಂತೆ ಕೇಕೆ ಹಾಕುತ್ತ, ನಗುತ್ತ ಓಡಾಡತೊಡಗಿದೆ.
ಸಾವಿತ್ರಿ ವಿ ಎಚ್

0 comments:

Post a Comment