ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಅಮೆರಿಕಾ ನಮ್ಮೂರಿನ ಪಕ್ಕದ ಊರಿಗೆ ಬಂತು ಅಂದ್ರೆ ಯಾರಿಗಾದರೂ ಆಶ್ಚರ್ಯವಾಗಲೇಬೇಕು. ಹೌದು, ನಮಗೂ ಹಾಗೇ ಅನಿಸಿತ್ತು. ಅದೇನು ನಮ್ಮೂರ ಜಾತ್ರೆಗೆ ಕಡ್ಲೆಕಾಯಿ ಬಂದ ಹಾಗೆಯೇ? ಅಂದುಕೊಂಡಿದ್ದೆವು. ಕೊನೆಗೆ ಗೊತ್ತಾಯ್ತು ಕನ್ನಡ ಚಿತ್ರಗಳ ತ್ಯಾಗರಾಜ ಖ್ಯಾತಿಯ ನಟ ರಮೇಶ ಅರವಿಂದ, ಮುಂಬೈ ಹುಡುಗ ಅಕ್ಷಯ ಆನಂದ್ ಮತ್ತು ಹೇಮಾ ಅನ್ನುವ ಚೆಲುವೆ ನಮ್ಮೂರಿಗೆ ಚಿತ್ರೀಕರಣದಲ್ಲಿ ಭಾಗವಹಿಸಲು ಬಂದಿದ್ದಾರೇಂತ.

ಮೇಷ್ಟ್ರು, ಅವರ ಕಥೆ, ಕಾದಂಬರಿ, ಲೇಖನಗಳಿಂದ ನಮಗೆಲ್ಲಾ ಚಿರಪರಿಚಿತ. ಈ ಮೇಷ್ಟ್ರ ಹೆಸರೇ ಹೇಳಿಲ್ಲ ಅಲ್ವಾ? ಅವರೇ ನಾಗತಿಹಳ್ಳಿ ಚಂದ್ರಶೇಖರ. ಅವರ `ಬಾ ನಲ್ಲೆ ಮಧುಚಂದ್ರಕ್ಕೆ' ನಮ್ಮ ಟೀನೇಜ್ನಲ್ಲಿ ನಮ್ಮನ್ನು ಬಹಳವಾಗಿ ಆಕರ್ಷಿಸಿದ ಕಾದಂಬರಿ. ಆಮೇಲೆ ಅವರ `ನನ್ನ ಪ್ರೀತಿಯ ಹುಡುಗಿಗೆ' ಕಥಾಸಂಕಲನ ನಮ್ಮಲ್ಲಿ ಪುಳಕವನ್ನುಂಟು ಮಾಡಿತ್ತು. ಅಮೆರಿಕಾ! ಅಮೆರಿಕಾ!! ಪ್ರವಾಸಕಥನವಂತು ಅಮೆರಿಕಾದ ಬಗ್ಗೆ ಬಹಳಷ್ಟು ವಿಷಯಗಳನ್ನು ನಮಗೆ ತಿಳಿಸಿತ್ತು. ಅವರ ಚಿತ್ರತಂಡ ನಮ್ಮ ಹಳ್ಳಿಯ ಕಡೆಗೆ ಮುಖಮಾಡಿದೆಯೆಂದರೆ ನೀವೇ ಊಹಿಸಿ ನಮ್ಮೂರಿನ ಪ್ರಕೃತಿ ಸೌಂದರ್ಯವನ್ನು. ನಮ್ಮೂರು ಬೆಳ್ಳೆ ಗ್ರಾಮದ ಪಕ್ಕದಲ್ಲಿಯೆ ಕುರ್ಕಾಲು ಗ್ರಾಮ. ಕುಂಜಾರುಗಿರಿಯಿರುವುದು ಕುರ್ಕಾಲು ಗ್ರಾಮದಲ್ಲಿ. ಈ ಹಿಂದೆ ಹೇಳಿದಂತೆ ಕುಂಜಾರುಗಿರಿಗೆ ದುರ್ಗಾ ಬೆಟ್ಟವೆಂದು ಕೂಡ ಹೆಸರಿದೆ.

ದುರ್ಗಾದೇವಿ ಇಲ್ಲಿ ನೆಲೆಸುವುದಕ್ಕೂ ಒಂದು ಕಥೆಯಿದೆ. ಪ್ರಕೃತಿಯ ತಮೋಗುಣವನ್ನು ನಿಯಂತ್ರಿಸುವ ಲಕ್ಷ್ಮೀದೇವಿಯ ರೂಪವೇ ದುರ್ಗಾ. ದ್ವಾಪರದಲ್ಲಿ ಭಗವಂತನ ಆದೇಶಾನುಸಾರ ಲಕ್ಷ್ಮೀದೇವಿಯು `ಯೋಗಾಮಾಯ' ಎಂಬ ರೂಪವನ್ನು ತಾಳಿದ್ದಳು. ನಂದಗೋಪನ ಪತ್ನಿ ಯಶೋಧೆಯ ಉದರದಲ್ಲಿ ಅವಳು ದುರ್ಗೆಯಾಗಿ ಅವತರಿಸಿದಳು. ಕೃಷ್ಣನನ್ನು ಕಾರಾಗೃಹದಿಂದ ತರುವಾಗ ಯೋಗಮಾಯೆ ಕಂಸನ ಕಾವಲುಗಾರರನ್ನು ನಿದ್ದೆಗೆ ಒಳಪಡಿಸಿದಾಗ ಕಂಸ ಅವಳನ್ನು ಎತ್ತಿ ಬಂಡೆಗೆ ಅಪ್ಪಳಿಸಬೇಕೆಂದುಕೊಂಡ. ಆಗ ಅವಳು ಕಂಸನ ಕೈಯಿಂದ ತಪ್ಪಿಸಿಕೊಂಡು ಆಕಾಶಕ್ಕೇರಿದಳು. ಹೀಗೆ ಕೃಷ್ಣನ ಅವತಾರದ ಸಮಯದಲ್ಲಿ ಅವನ ಅನುಜೆಯಾಗಿ ದುಷ್ಟ ಸಂಹಾರ ಮತ್ತು ಶಿಷ್ಟ ಪರಿಪಾಲನೆಗಾಗಿ ದುರ್ಗೆ ಕುಂಜಾರುಗಿರಿಯಲ್ಲಿ ನೆಲೆಸಿದ್ದಾಳೆನ್ನುವ ಕಥೆ.

ಇಂತಹ ಪ್ರಕೃತಿಯ ಮಡಿಲಿನಲ್ಲಿ ಒಂದಲ್ಲಾ ಒಂದು ಚಿತ್ರದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. ಇದು ಉಡುಪಿಯಿಂದ ಹದಿನೈದು- ಇಪ್ಪತ್ತು ಕಿಲೋ ಮೀಟರ್ ದೂರ ವ್ಯಾಪ್ತಿಯಲ್ಲಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಅಷ್ಟೇ ಇದೆ.

ನಾಗತಿಹಳ್ಳಿ ಚಂದ್ರಶೇಖರ ಅವರು ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದ ಸಿನೆಮಾ `ಅಮೆರಿಕಾ! ಅಮೆರಿಕಾ!!'. ಚಿತ್ರದ ಯಶಸ್ಸು ಕೂಡ ಅವರಲ್ಲಿದ್ದ ಅತ್ಯುತ್ತಮ ಪ್ರತಿಭೆಯನ್ನು ಗುರುತಿಸಿತು. ಪ್ರೀತಿ ಪ್ರೇಮವೆನ್ನುವ ಭ್ರಾಂತುಗೊಳಪಟ್ಟ ಹುಡುಗರನ್ನು ಒಮ್ಮೆ ಚಿಂತಿಸುವಂತೆ ಮಾಡಿತ್ತು ಚಿತ್ರ. ಸೂರ್ಯ ಶಶಾಂಕರ ನಡುವೆ ಸುತ್ತುವ ಭೂಮಿ ಬಾಲ್ಯದ ಗೆಳತಿ. ಮುಗ್ಧ ಮನಸ್ಸುಗಳ ಗೆಳೆತನದ ನಡುವೆ ಒಂದು ಸಣ್ಣ ಬಿರುಕು ಕಾಣಿಸುವುದು ಅವರು ಪ್ರಬುದ್ಧತೆಗೆ ಬಂದಾಗ. ಅಲ್ಲಿಯವರೆಗೂ ಪ್ರೀತಿಯೆನ್ನುವುದರ ಬಗ್ಗೆ ಏನೂ ತೋರಿಸಿಕೊಳ್ಳದ ಸ್ಥಿತಿ ಅವರದ್ದು. ಸಮಸ್ಯೆಯೊಂದು ಉದ್ಬವಿಸುತ್ತಲೇ ಶಶಾಂಕನಷ್ಟೇ ಸೂರ್ಯನನ್ನು ಪ್ರೀತಿಸುವ ಭೂಮಿಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಳಲಾಟ. ಹೀಗೆ ಕಥೆ ಸಾಗುತ್ತದೆ. ನೀವು ಅದನ್ನು ನೋಡಿಯು ಇರುತ್ತೀರಿ. ಆದ್ದರಿಂದ ಆ ಎಳೆಯನ್ನು ಬಿಟ್ಟು ನನ್ನ ಊರಿನಲ್ಲಿ ಚಿತ್ರೀಕರಿಸಿದ ಭಾಗವನ್ನು ನಾನು ಹೇಳಬೇಕಿದೆ.

ಈಗ ನೆನಪಿಸಿಕೊಳ್ಳಿ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಳಿ ಕರೆಯಿತು' ಹಾಡು ಯಾರ ಚಿತ್ತವನ್ನು ಆಕರ್ಷಿಸದೆ ಬಿಟ್ಟಿದೆ? ಆ ಹಾಡಿನ ಸನ್ನಿವೇಶ ಅಮೆರಿಕಾ! ಅಮೆರಿಕಾ!! ಚಿತ್ರದಲ್ಲಿ ಶಶಾಂಕ್ ಉನ್ನತ ವ್ಯಾಸಂಗಕ್ಕಾಗಿ ಹೊರಡುವಾಗ ಅವನ ಅಗಲುವಿಕೆಯ ನೋವಿನಿಂದ ಭೂಮಿ ಮತ್ತು ಸೂರ್ಯರ ಹಿನ್ನಲೆಯಲ್ಲಿ ಮೂಡಿ ಬರುವ ಹಾಡು. ಅದೇ ಹಾಡು ಮುಗಿಯುತ್ತಲೇ ಶಶಾಂಕ್ ತನ್ನ ಸ್ನೇಹಿತರೂ ಬೀಳ್ಕೊಡುವುದಕ್ಕೆ ಬರುವುದಿಲ್ಲವೆನ್ನುವ ನೋವಲ್ಲಿರುವಾಗ ರಸ್ತೆಯಲ್ಲಿ ಎಮ್ಮೆ, ಕೋಣಗಳ ಮೈಯಲ್ಲಿ ಗೆಳೆಯನನ್ನು ಚುಡಾಯಿಸಿ ಬರೆದ ಶಬ್ದಗಳು ಮತ್ತು ಆಡಿನ ಮರಿಯ ಮೇಲೆ `bonvoyage’ ಎಂದು ಬರೆದು ಬೀಳ್ಕೊಡುವ ಸನ್ನಿವೇಶ ಕುಂಜಾರುಗಿರಿಯ ಬುಡದಲ್ಲಿಯೆ ಚಿತ್ರೀಕರಣವಾಗಿರುವಂತದ್ದು.

ಈ ಚಿತ್ರದ ಇನ್ನೊಂದು ಹಾಡು. ಅದೂ ಸಿನಿಮಾ ಆರಂಭವಾದಕೂಡಲೆ ಬರುವ `ಬಾನಲ್ಲಿ ಓಡೋ ಮೇಘ, ಗಿರಿಗೂ ನಿಂತಲ್ಲೆ ಯೋಗ' ಹಾಡಿನ ದೃಶ್ಯವೆಲ್ಲಾ ಚಿತ್ರೀಕರಣವಾಗಿರುವುದು ಗಿರಿಯ ಬುಡದಲ್ಲಿಯೆ. ಅಲ್ಲೊಂದು ಸಣ್ಣ ಗುಡಿಯ ತರಹವಿದೆ. ಅಲ್ಲಿ ಮಧ್ವಾಚಾರ್ಯರನ್ನು ಕೊಲ್ಲಲು ಮಣಿಮಂತನೆಂಬ ರಾಕ್ಷಸ ಹಾವಿನ ರೂಪದಲ್ಲಿ ಕಾದಿದ್ದನಂತೆ. ಅವನ ತಲೆಯ ಮೇಲೆ ಕಾಲಿಟ್ಟು ಸಂಹರಿಸಿದ ಕುರುಹು ಅಲ್ಲಿದೆ. ಆ ಕುರುಹಿನಿಂದಾಗಿ ಕುಂಜಾರುಗಿರಿಯಿರುವ ಗ್ರಾಮಕ್ಕೆ ಕುರುಕಾಲು ಅನ್ನುವ ಹೆಸರು ಬಂದಿದೆ. ಮುಂದೆ ಕುರುಕಾಲು ಕುರ್ಕಾಲು ಗ್ರಾಮವಾಗಿದೆ. ಆ ಗುಡಿಯೆ ಅದು.

ಅಲ್ಲಿಯೆ ಪಕ್ಕದಲ್ಲಿ ಮೂರು ದಾರಿಗಳು ಸಂದಿಸುವ ಕೈಮರವೊಂದು ಇದೆ. ಕಲ್ಲಿನ ಕಂಬದ ಕೈಮರದಲ್ಲಿ ಹಿಂದಿನ ಕಾಲದಲ್ಲಿ ಹಣತೆಯನ್ನು ಹಚ್ಚಿಟ್ಟು ರಾತ್ರಿಯ ಹೊತ್ತು ಅತ್ತಿತ್ತ ಹೋಗುವವರಿಗೆ ಮಾರ್ಗಸೂಚಿಯಾಗಿ ಮಾಡಿದ್ದರಂತೆ. ಆ ಮೂರು ದಾರಿಯಲ್ಲಿ ಒಂದು ಕಡೆ ಶಶಾಂಕ (ಅಕ್ಷಯ ಆನಂದ್) ಕೆಂಪಗಿನ ತೆರೆದ ಜೀಪಿನಲ್ಲಿ ಬರುವ ದೃಶ್ಯ ಮತ್ತು ಸೂರ್ಯ (ರಮೇಶ್ ಅರವಿಂದ) ಸೈಕಲಿನಲ್ಲಿ ಬರುವ ದೃಶ್ಯ ಮತ್ತು ಕೆಳಗೆ ಕೊಳದ ಬಳಿಯಿಂದ ಭೂಮಿ (ಹೇಮಾ) ನೀಲಿ ಬಿಳಿಯ ಕೊಡೆ ಹಿಡಿದುಕೊಂಡು ಬರುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

ಯಾವಾಗಲಾದರೊಮ್ಮೆ ಆ ಹಾಡು ಕೇಳುವಾಗಲೆಲ್ಲಾ ನನ್ನೂರಿನ ನೆನಪಾಗದಿರದು.

ಬಾನಲ್ಲಿ ಓಡೋ ಮೇಘ; ಗಿರಿಗೂ ನಿಂತಲ್ಲೆ ಯೋಗ
ಎಲ್ಲುಂಟು ಒಲವಿರದ ಜಾಗ? ಬಾ ಬಾ ಗೆಳೆಯ ಬೇಗ

ಮುಗಿಲೊಂದು ಮನಸಿನ ಬಿಂಬ; ಮುತ್ತಿನ ಮಣಿಗಳೆ ತುಂಬ
ಎಲ್ಲೋ ದೂರದ ಚುಕ್ಕಿ; ಅದರತ್ತ ಬಿಳಿ ಮುಗಿಲ ಹಕ್ಕಿ

ಮಣ್ಣಲ್ಲಿ ತಾ ಬೇರೂರಿ; ನೆಲ ತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತ ಈ ಬಾಳು; ಹೇ! ನಾಡೆ ನಿನಗೆ ಸವಾಲು

ಬಾನಲ್ಲಿ ಮೂಡಿದರು ಮೇಘ; ಮಳೆಗೂ ಮಣ್ಣಲ್ಲಿ ಜಾಗ
ಅಲ್ಲಿಗೂ ಇಲ್ಲಿಗೂ ಸೇತು; ಮೌನ ಮೌನದ ನಡುವೆ ಮಾತು.

ಇಡೀ ಸಿನಿಮಾದ ಕಥೆಯನ್ನೇ ಕಾವ್ಯದ ರೂಪದಲ್ಲಿ ಕಟ್ಟಿಕೊಡುತ್ತದೆ ಈ ಹಾಡು. ಗಿರಿಯ ಮೇಲಿನಿಂದ ಮೂರುದಾರಿಗಳನ್ನು ಹಿಡಿದಿಟ್ಟ ದೃಶ್ಯವಂತು ತುಂಬಾ ಸುಂದರವಾಗಿ ಮೂಡಿ ಬಂದಿದೆ. ಹಸಿರು ಗಿಡಗಳಿಂದ ಆವೃತ್ತವಾದ ಕೊಳದ ನೀರು, ಅವುಗಳ ಮೇಲಿಂದ ಹಾದು ಬರುವ ಮಂದ ಮಾರುತ ಪರದೆಯ ಮೇಲೆ ವೈಭವಪೂರಿತವಾಗಿ ಮೂಡಿ ಬಂದಿದೆ.

ಅದಲ್ಲದೆ ಒಮ್ಮೆ ಶಶಾಂಕ್ ಇಂಡಿಯಾಕ್ಕೆ ಮರಳುವಾಗ ಕಾರಿನಲ್ಲಿ ಬರುತ್ತಾ ಅಮೆರಿಕಾದ ರಸ್ತೆಗಳ ಬಗೆ ಹೇಳುತ್ತಾ, ಇಲ್ಲಿಯ ರಸ್ತೆಗಳನ್ನು ಹಳಿಯುತ್ತಾನೆ. ಸೂರ್ಯ ತಮಾಷೆ ಮಾಡುತ್ತಾ `ನಮ್ಮಲ್ಲಿ ಪ್ರತಿಯೊಂದು ಹೆಜ್ಜೆಗೂ ಟ್ರಾಫಿಕ್ ಪೊಲೀಸ್ ಇದ್ದಾರೆ' ಅನ್ನುವ ಸೀನ್ ಕೂಡ ನಮ್ಮೂರ ರಸ್ತೆಯದ್ದೆ.

ಈ ಚಿತ್ರ ಬಿಡುಗಡೆಯಾಗಿ ಪ್ರತೀಯೊಬ್ಬರನ್ನೂ ಆಕಷರ್ಿಸಿತ್ತು. ಒಂದು ಅಚ್ಚುಕಟ್ಟಾದ ಚಿತ್ರ ಮಾತ್ರವಲ್ಲ, ಮನೆಮಂದಿಯೆಲ್ಲಾ ನೋಡಬೇಕಾದ ಚಿತ್ರ. ಮನೋಮೂರ್ತಿ ಸಂಗೀತವಿದ್ದ ಈ ಚಿತ್ರದ ಕಥೆ, ಚಿತ್ರಕಥೆ, ನಿದರ್ೆಶನ ನಾಗತಿಹಳ್ಳಿ ಚಂದ್ರಶೇಖರ ಅವರದ್ದು. ನಿರ್ಮಾಣ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಂದಕುಮಾರ್ ಅವರದ್ದು.

ಇನ್ನೊಮ್ಮೆ ಚಿತ್ರ ನೋಡುವ ಅವಕಾಶ ದೊರತರೆ ನಮ್ಮೂರಿನ ದೃಶ್ಯಗಳನ್ನು ನೋಡಲು ಮರೆಯದಿರಿ. ಮತ್ತೆ ಮುಂದಿನವಾರ ನಿಮ್ಮೊಂದಿಗೆ...

0 comments:

Post a Comment