ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:07 PM

ಅರಿಯದ ಅಪಾಯಗಳು

Posted by ekanasu

ವೈವಿಧ್ಯ

ಅನೇಕ ಸಾವಯವ ಸಂಯುಕ್ತಗಳು ಅಪಾಯಕಾರಿಯಾಗಿ ಕಂಡು ಬರದೆ ಇದ್ದರೂ, ಅವುಗಳು ಮಾನವ ಜೀವನದ ಮೇಲೆ ಮಾರಕ ಪರಿಣಾಮಗಳನ್ನು ಬೀರುತ್ತವೆ. ಮಕ್ಕಳ ಆಟಿಕೆಯಲ್ಲಿರುವ (ಗೊಂಬೆ ಇತ್ಯಾದಿ) ಮತ್ತು ಉಗುರುಗಳಿಗೆ ಮೆರಗು ನೀಡುವ ಬಣ್ಣಗಳಲ್ಲಿ ನಮ್ಮ ಭೂಮಿಯನ್ನು ರಕ್ಷಿಸಿ ಕಾಪಾಡುವ ಓಝೋನ್ ಪದರವನ್ನು ನಾಶಮಾಡುವ ಅಪಾಯಕಾರಿ ವಸ್ತುಗಳಿರುವುದು, ಅಂತೆಯೇ ವಿಷಕಾರಿ ಸಾವಯವ ಕ್ಲೋರೈಡ್ಗಳು ನೀವು ಬಳಸುವ ಶೂಗಳ ತಳದಲ್ಲಿ ಕಂಡು ಬರುವುದು ನಿಮಗೆ ತಿಳಿದಿದೆಯೇ?
ವಾತಾವರಣದಲ್ಲಿರುವ ಕೃತ್ರಿಮ ವಸ್ತುಗಳಲ್ಲಿ ಇವುಗಳ ಪಾಲು ಶೇಕಡಾ-50% ಆಗಿದ್ದು ಈ ಸಾವಯವ ಸಂಯುಕ್ತಗಳು ಓಝೋನ್ ಪದರದಲ್ಲಿ ರಂಧ್ರವನ್ನು ಮಾಡುವುದಲ್ಲದೆ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಕಾರಣವಾಗಿದೆ. ಇವುಗಳು ನಮ್ಮ ಆಹಾರ ಸರಪಣಿಗಳಲ್ಲಿ ಅಡಕವಾಗಿರುವುದರ ಪರಿಣಾಮವಾಗಿ ಮಾನವ ಸಂತತಿಯೇ ವಿನಾಶದ ಅಂಚಿನಲ್ಲಿದೆ. ಎಲ್ಲೆಡೆ ಕಂಡುಬಾರದ ಹಳದಿ ಬಣ್ಣದ ಈ ಅನಿಲವು (ಕ್ಲೋರಿನ್) ಮೊದಲ ವಿಶ್ವಯುದ್ದದಲ್ಲೆ ವಿಷಪೂರಿತ ಅನಿಲವಾಗಿ ಬಳಕೆಯಾಯಿತು. ಭೂಮಿಯ ಪದರದಲ್ಲಿ ಇದರ ಪಾಲು ಶೇಕಡಾ 0.13% ಮಾತ್ರ ( ಕ್ಲೋರೈಡ್ ಉಪ್ಪಿನ ರೂಪದಲ್ಲಿರುತ್ತದೆ) ಸಮುದ್ರದ ನೀರಿನಲ್ಲಿ ಶೇಕಡಾ1.9% ರಷ್ಟು ಕ್ಲೋರೈಡ್ ಅಯೋನ್ ಗಳ ರೂಪದಲ್ಲಿದೆ. ಇಂದು ನಮಗೆ ಲಭ್ಯವಿರುವ ಕ್ಲೋರಿನ್ ಮಾನವ ರಚಿತವಾಗಿದ್ದು ಇದನ್ನು ಯಾವುದೇ ವಸ್ತುವಿನೊಂದಿಗೆ ಸುಲಭವಾಗಿ ಸೇರಿಸಬಹುದಾಗಿದೆ.
ಶೇಕಡಾ 80% ಉತ್ಪಾದನೆಗೊಂಡ ಕ್ಲೋರಿನ್ನನ್ನು ಸಾವಯವ ಕ್ಲೋರೈಡ್ಗಳ ರೂಪದಲ್ಲಿ ವಸ್ತುಗಳನ್ನಾಗಿ ಮಾರ್ಪಾಡಿಸಿ ಗ್ರಾಹಕರಿಗೆ ಮಾರಲಾಗುತ್ತದೆ. ಇಲ್ಲವಾದಲ್ಲಿ ಅವು ಅನುಪಯುಕ್ತವಾಗುತ್ತವೆ. ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ 35 ವಿಲಿಯನ್ ಟನ್ ಕ್ಲೋರಿನ್ನನ್ನು ಉಪಯೋಗಿಸಲಾಗುತ್ತದೆ. ಕ್ಲೊರೋ-ಪ್ಲೊರೋ ಕಾರ್ಬನ್ ಮತ್ತು ಹೆಲೋನ್ಸ್ ಗಳನ್ನು ಕ್ಲೋರಿನ್ ಮತ್ತು ಬ್ರೋನಿನ್ ನಿಂದ ತಯಾರಿಸಲಾಗುತ್ತಿದೆ. ಇದು ಮುಂದೆ ವಾತಾವರಣದಲ್ಲಿ ವಿಕಿರಣವನ್ನು ಹೆಚ್ಚು ಮಾಡಿ ಕ್ಯಾನ್ಸರ್, ಕುರುಡತನ ಮತ್ತು ಸಾವಿಗೂ ಕರಣವಾಗಬಹುದು.
ನಾವು ನಿತ್ಯಬಳಸುವ ಫ್ರಿಜ್ ಮತ್ತು ಹವಾನಿಯಂತ್ರಣದ ಉಪಕರಣದಲ್ಲಿ ಹಾಗೂ ಬೆಂಕಿನಂದಿಸುವ ಉಪಕರಣಗಳಲ್ಲಿ ಎಲ್ಲಾ ಸ್ಪ್ರೇಗಳಲ್ಲಿ ನೊರೆಯುಕ್ತ ಪ್ಲಾಸ್ಟಿಕ್ ಮತ್ತು ವಾಹನದ ಒಳಭಾಗದ ವಸ್ತುಗಳಲ್ಲಿ, ಕುರ್ಚಿಗಳಲ್ಲಿ, ಸೋಫಾಗಳಲ್ಲಿ, ಕ್ಲೋರೊ –ಫ್ಲೋರೊ ಕಾರ್ಬನ್ ಗಳ ಬಳಕೆ ಅತೀವವಾಗಿ ಕಂಡು ಬರುತ್ತದೆ.


ಕೃಷಿಪ್ರದಾನ ರಾಷ್ಟ್ರವಾದ ಭಾರತದಲ್ಲಿ ಕ್ಲೋರೈಡ್ನಿಂದ ಮಾಡಿದ ಕೀಟನಾಶಕಗಳ ಬಳಕೆಯಿಂದ, ಭೂಮಿಯಲ್ಲಿನ ಮಣ್ಣಿನಫಲವತ್ತತೆಯು ಕಡಿಮೆಯಾಗುವುದು ತಿಳಿದುಬಂದಿದೆ. ಕ್ಲೋರಿನ್ನನ್ನು ಕೃಷಿ ಮಾತ್ರವಲ್ಲದೆ, ಅರಣ್ಯೀಕರಣ, ಧಾತು-ಶೋದನಾ ಶಾಸ್ತ್ರ, ಆಹಾರ-ತಿನಿಸುಗಳಲ್ಲಿ, ಪ್ಲಾಸ್ಟಿಕ್ ಗಳಲ್ಲಿ, ಕಟ್ಟಡ ಕೈಗಾರಿಕೆಗಳಲ್ಲಿ,ನೀರಿನ ಶುದ್ದೀಕರಣದಲ್ಲಿ, ಕಾಗದ-ಕಾರ್ಖಾನೆಗಳಲ್ಲಿ ಕೂಡ ಬಳಸುತ್ತಾರೆ.
ನಾವು ಬರೆಯಲು ಬಳಸುವ ಬಿಳಿ ಕಾಗದದ ಹಾಳೆಗಳು ತುಂಬಾ ಆಕರ್ಷಿತವಾಗಿಕಂಡು ಬಂದರೂ, ಇವುಗಳನ್ನು ಕ್ಲೋರಿನಿಂದ ಬಿಳಿಮಾಡಲಾಗುತ್ತದೆ. ಅಷ್ಟೆ ಅಲ್ಲದೆ ಬಟ್ಟೆಗಳನ್ನು ಶುಚಿಮಾಡುವಾಗಲೂ(ಡ್ರೈಕ್ಲೀನಿಂಗ್ ) ಕ್ಲೋರಿನನ ಬಳಕೆಯಾಗುತ್ತದೆ. ”ಹೊಳೆಯುವುದೆಲ್ಲ ಚಿನ್ನವಲ್ಲ” ಎಂಬಂತೆ ಯಾವುದೇ ವಸ್ತುಗಳು ಎಷ್ಟೇ ಆಕರ್ಷಿಕವಾಗಿ ಕಂಡು ಬಂದರೂ ಕ್ಲೋರಿನ್ ನಿಂದಾಗುವ ವಿನಾಶವನ್ನು ಮನಸ್ಸಿನಲ್ಲಿಡಬೇಕು. ಮುಖ್ಯವಾಗಿ ಕಾಗದ ಮತ್ತು ಮಳಿಗೆಗಳಲ್ಲಿ ಬಳಸಲಾಗುವ ಕ್ಲೋರಿನ್ ಬ್ಲೀಚಿಂಗ್, ನಮ್ಮ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಕಾರ್ಖಾನೆಗಳು ಉಗುಳುವ ಈ ವಿಷಪೂರಿತ ಅನಿಲವು ನದಿ –ಸಮುದ್ರವನ್ನು ಸೇರುವುದಲ್ಲದೆ, ಈ ತ್ಯಾಜ್ಯ ವಸ್ತುಗಳು ಸಮುದ್ರದ ಜಲಚರಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
ಒಟ್ಟಿನಲ್ಲಿ ಈ ಎಲ್ಲಾ ಕಾರಣಗಳಿಂದಾಗಿ ನಾವು ಕ್ಲೋರಿನ್ ನಿಂದ ಬ್ಲೀಚ್ ಮಾಡಿದಂತಹ ಕಾಗದ ಮತ್ತು ಪ್ಯಾಕೇಜ್ ಗಳನ್ನು ಬಳಸದಿರುವುದು ಒಳಿತು. ಮಕ್ಕಳ ಒಳ ಅಂಗಿಗಳಲ್ಲಿ ಹಾಗೂ ಟೆವೆಲ್ ಗಳಲ್ಲಿ ಇವುಗಳ ಬಳಕೆ ಹೇರಳವಾಗಿದೆ. ಸಾವಯವ ಕ್ಲೋರೈಡ್ ಕೀಟನಾಶಕಗಳು ಅಂದರೆ ಡಿ.ಡಿ.ಟಿ ಇವುಗಳ ಬಳಕೆ ಪರಿಸರಕ್ಕೆ ಹಾನಿಕಾರಕವಾದವು. ಇಂತಹ ಕ್ಲೋರಿನೇಟೆಡ್ ಹೈಡ್ರೋಕಾರ್ಬನ್ ಗಳು ಉಷ್ಣವಲಯ, ಶೀತವಲಯದ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಈ ರೀತಿಯ ಸಾವಯವ ಕ್ಲೋರೈಡ್ಗಳು ನಿಧಾನವಾಗಿ ಮಣ್ಣಿನಲ್ಲಿ ಕೊಳೆಯುತ್ತವೆ. ಹಾಗೂ ಅತಿ ಬೇಗನೆ ನಾಶವಾಗದ ಕಾರಣದಿಂದಾಗಿ ಇವು ಕ್ಯಾನ್ಸರ್ ನಂತಹ ರೋಗಗಳಿಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ ಇವುಗಳು ಮಾನವನಲ್ಲಿರುವ ರೋಗ ನಿರೋಧಕ ಶಕ್ತಿ, ಜನನಶಕ್ತಿಯನ್ನು ಕುಗ್ಗಿಸುತ್ತದೆ. ಇಷ್ಟೆಲ್ಲಾ ಹಾನಿಯನ್ನುಂಟು ಮಾಡುವ ಕ್ಲೋರೈಡ್ಗಳು, ಮಾನವನ ಜೀವನಕ್ಕೆ ಭವಿಷ್ಯಕ್ಕೆ ಮಾರಕವಾಗಿದೆ.

ಡಾ|| ಜಿ.ಎಚ್.ಪ್ರಭಾಕರ ಶೆಟ್ಟಿ
(ಲೇಖಕರು ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ನಿವೃತ್ತ ಉಪನ್ಯಾಸಕರೂ ಹೌದು. ಸರಳ ಸಜ್ಜನ, ನೇರ ನಡೆನುಡಿಯ ಸ್ನೇಹಮಯೀ ವ್ಯಕ್ತಿತ್ವ. ಬರವಣಿಗೆಯನ್ನು ಹವ್ಯಾಸವಾಗಿ ರೂಢಿಸಿಕೊಂಡವರು. - ಸಂ.)

1 comments:

Anonymous said...

Sir article is useful to know the general truth. Thank you sir.

Post a Comment