ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:49 PM

ರಾಧೆಯ 'ಕೃಷ್ಣ'

Posted by ekanasu

ವೈವಿಧ್ಯ




ಎಲ್ಲ ಯುವತಿಯರಿಗೂ ಕೃಷ್ಣ ರಾಧೆಯರೆಂದರೆ ಪ್ರೀತಿ, ಹುಚ್ಚು ನಮ್ಮ ಪ್ರೀತಿಯೂ ಹಾಗೇ ಇರಲಿ ಅನ್ನೋ ಬಯಕೆ. ಕೃಷ್ಣನ ಬಿದಿರ ಕೊಳಲ ದನಿಗೆ ಧ್ವನಿಯಾದಳು, ಹಾಡಾದಳು ರಾಧೆ.... ಅಂಥಾ ರಾಧೆಯೊಬ್ಬಳಿದ್ದಳು ಅನ್ನೋದೇ ಖುಷಿ.... ಹಾಗಂತ ಊಹಿಸಿಕೊಳ್ಳೋದೂ ಅದೆಷ್ಟು ಸೊಗಸು. ಅವಳು ಕಲ್ಪನೆಯೋ ಕಥೆಯೋ... ತೊರೆದರೂ ತನ್ನ ತೊರೆಯದು ಪ್ರಿಯಾನ ಅದೆಂಥ ಪ್ರೀತಿಯ ಭಾವಪರವಶತೆ ಅವಳಲ್ಲಿ.... ಹೀಗೆಯೂ ಆಕೆ ಆತನನ್ನು ಪ್ರೀತಿಸಿರಬಹುದೇ..... ಪ್ರೀತಿಸಿದ್ದಳು ಅನ್ನೋದು ಸಿಗುವ ನಿಜ.... ಹುಡುಗಿಯರೆಲ್ಲರ ಕಣ್ಣಲ್ಲಿ ಕೃಷ್ಣನಿದ್ದರೂ ನಮಗೆ ಆತ್ಮೀಯವಾಗೋದು ರಾಧೆ. ನನಗಂತೂ ಕೃಷ್ಣನ ನಂಬೋಕೇನೇ ಆಗಲ್ಲ. ಬಹುಷಃ ಎಚ್.ಎಸ್.ವಿ. ಅದಕ್ಕೆ ಬರೆದಿರಬೇಕು ನನಗೂ ಆಕೆ ಕೃಷ್ಣನ ತೋರವ ಪ್ರೀತಿಯು ನೀಡಿದ ಕಣ್ಣು.



ಹೌದು ರಾಧೆಯ ಕಣ್ಣಾಗಿ ನಾವು ಕೃಷ್ಣನನ್ನು ನೋಡಿದಾಗಲೇ ನಮಗೆ ಆತ ಆತ್ಮೀಯನಾಗೋದು. ರಾಧೆ ಅನ್ನೋ ಸೊಗಸು ಆತನ ಪ್ರೀತಿಯಾಗದಿದ್ದರೆ 'ದೇವ' ಎಂಬೋದು ಬಿಡಿ ಆತ ಒಬ್ಬ ಒಳ್ಳೆಯ ಮನುಷ್ಯ ಅಂತ ಊಹಿಸೋಕೂ ಕಷ್ಟವಾಗುತ್ತಿತ್ತು.
ಮನುಷ್ಯ ಜನ್ಮವೆಲ್ಲವೂ ಪೂಜಿಸೋ 'ಕೃಷ್ಣ' ಇಡೀ ಮಹಾಭಾರತದ ಉದ್ದಕ್ಕೂ ರಾಜಕೀಯದ ಪಗಡೆಯಾಡುತ್ತಾನೆ. ವೀರನೆಂದೆಣಿಸಿಕೊಂಡ ಅರ್ಜುನನ ಜೊತೆ ಕೃಷ್ಣ ಅಂತನ್ನುವವನೊಬ್ಬ ಇರದೇ ಇರುತ್ತಿದ್ದರೆ ಆತ ಮನುಕುಲಕ್ಕೆ ಅಪರಿಚಿತನಾಗುತ್ತಿದ್ದನೇನೋ...

ಅಸುರನ ಕೈಯಿಂದ ಬಿಡಿಸಿದ ಹದಿನಾರು ಸಾವಿರ ಹುಡುಗಿಯರನ್ನು ಕೃಷ್ಣ ಮದುವೆಯಾಗಿ ವೀರನಾಗುತ್ತಾನೆ. ಪಾಪ ಆ ಹುಡುಗಿಯರು ಮತ್ತೆ ಏನಾದರೋ... ಆ ಹೊತ್ತಿಗೆ ರಾಧೆ ಎಲ್ಲಿದ್ದಳೋ... ಹೇಗಿದ್ದಳೋ... ಹೌದು ಕೃಷ್ಣ ರಾಧೆಯನ್ನು ಪ್ರೀತಿಸಿದ್ದ...
ಸುಳ್ಳಲ್ಲ... ಆಕೆ ಗೊಲ್ಲರ ಹುಡುಗಿ... ಅವನ ಧರ್ಮಕ್ಕೆ ಅಡ್ಡಿಯಾದಳೋ... ಅಂತೂ ಅವ ಹೊರಟು ಬಿಟ್ಟ... ರಾಧೆ ಮರುಗಿದಳೋ... ಕೊಳಲಿನ ಹಾಡು ಏನಾಯಿತೋ... ಹುಚ್ಚಾದಳೋ... ಹಾಗೇ ಕಳೆದುಹೋದಳೋ... ಯಾರೂ ಬರೆಯಲಿಲ್ಲ.
ಕೊನೆಗೂ ಕೃಷ್ಣ ಧರ್ಮ ಸ್ಥಾಪಕವಾದ... ರಾಜಕೀಯ ದಾಳದಲ್ಲಿ ಲೋಕ ದೇವನಾದ... ರಾಧೆ ಎಚ್.ಎಸ್.ವಿ. ಹೇಳುವಂತೆ ಲೋಕದ ಕಣ್ಣಿಗೆ ಒಂದು ಹೆಣ್ಣಾದಳು. ಎಲ್ಲರ ಪ್ರೀತಿಗೆ ಮಾದರಿಯಾದಳು. ಆಕೆಯ ಪ್ರೀತಿಯನ್ನು ಭಕ್ತಿ ಎಂದರು... ವೃಂದಾವನ ಕಟ್ಟಿ ಪೂಜಿಸಿದರು. ಎದ್ದು ಹೊರಟ ಕೃಷ್ಣನನ್ನು ದೇವನನ್ನಾಗಿಸಿದರೇ ಹೊರತು ರಾಧೆಯನ್ನು 'ಭಕ್ತಿ' ಎಂಬ ನೆಪದಲ್ಲಿ ಭಕ್ತಳನ್ನಾಗಿಸಿದರು.

ಧೀಷ್ಮಾ ಡಿ. ಶೆಟ್ಟಿ

0 comments:

Post a Comment