ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಶಿಕ್ಷಣ ಎಂದರೇನು, ಮಕ್ಕಳಿಗೆ ಯಾಕೆ ಶಿಕ್ಷಣ ಕೊಡಬೇಕು, ಶಿಕ್ಷಣದ ಹೆಸರಿನಲ್ಲಿ ಈಗ ಪ್ರಾಥಮಿಕ ಹಾಗೂ ಫ್ರೌಢ ತರಗತಿಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವಾಗ ಶಿಕ್ಷಣದ ಉದ್ದೇಶ ಮತ್ತು ಕಾರ್ಯರೂಪ ಒಂದಕ್ಕೊಂದು ಹೊಂದಾಣಿಕೆಯಾಗುತ್ತಿಲ್ಲ ಎಂದೆನಿಸುತ್ತಿದೆ.

ಒಂದೊಂದು ಕ್ಲಾಸ್ಗೂ ಪಠ್ಯ ಪುಸ್ತಕಗಳು. ತರಗತಿಗಳಲ್ಲಿಅದರಲ್ಲಿದ್ದ ಪಾಠಗಳನ್ನು ವಿವರಿಸುವುದು, ಆಮೇಲೆ ಪಾಠದ ಕೊನೆಯಲ್ಲಿ ಇರುವ ಪ್ರಶ್ನೋತ್ತರಗಳನ್ನು, ಅಭ್ಯಾಸಗಳನ್ನು ನೋಟ್ಸ್ಪುಸ್ತಕಗಳಲ್ಲಿ ಬರೆಸುವುದು, ಮಕ್ಕಳು ಅವುಗಳನ್ನು ಬಾಯಿಪಾಠ ಮಾಡುವುದು, ಆ ಮಾಹಿತಿಗಳಲ್ಲಿ ಕೆಲವನ್ನು ನೆನಪಿನ ಆಧಾರದ ಮೇಲೆ ನಡೆಯುವ ಪರೀಕ್ಷೆಗಳಲ್ಲಿ ಬರೆಸುವುದು. ಆ ಪರೀಕ್ಷೆಗಳ ಪೇಪರ್ ಮೌಲ್ಯಮಾಪನ(?) ಮಾಡುವುದು. ನಿರೀಕ್ಷಿಸಿದ ಉತ್ತರ ಇದ್ದರೆ ಅದಕ್ಕೆ ಪೂರ್ವನಿಗದಿ ಪಡಿಸಿದ ಮಾರ್ಕ್ ಕೊಡುವುದು. ಇಲ್ಲದಿದ್ದರೆ ಇಲ್ಲ. ಅದರಲ್ಲಿ ಸಿಕ್ಕಿದ ಮಾರ್ಕ್ ಗಳನ್ನು ಬರೆದು ನಿನ್ನ ಅರ್ಹತೆ ಇಷ್ಟು (ಪ್ರಗತಿ ಪತ್ರ) ಎಂದು ಅದನ್ನು ವಿದ್ಯಾರ್ಧಿಗಳಿಗೆ ಕೊಡುವುದು. ಇದು ಇಂದಿನ ನಮ್ಮ ಯಾಂತ್ರಿಕ ಶಿಕ್ಷಣ ವ್ಯವಸ್ಥೆ. ಅಂದರೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ 'ಪರೀಕ್ಷೆ' ಹಾಗೂ ಅದಕ್ಕೆ ಬೇಕಾದ 'ಮಾಹಿತಿಗಳ ಬಾಯಿಪಾಠ'ದ ಮೇಲೆ ಕೇಂದ್ರಿತವಾಗಿದೆ.
ಮಕ್ಕಳಿಗೆ ಪಠ್ಯದಲ್ಲಿದುದು ಅಥವಾ ನೋಟ್ಸ್ನಲ್ಲಿ ಕೊಟ್ಟದ್ದು ಬಿಟ್ಟು ಬೇರೇ ರೀತಿ ಆಲೋಚಿಸುವ ಹಕ್ಕು ಇಲ್ಲ, ಬರೆಯುವ ಹಕ್ಕು ಇಲ್ಲ. ತನಗೆ ಸಾಧ್ಯವಿಲ್ಲದಿದ್ದರೂ ಬಲವಂತವಾಗಿ ನಿರೀಕ್ಷಿಸಿದ ರೀತಿ0ೆು ಕಲಿ0ುಬೇಕು. ನಿರೀಕ್ಷಿಸಿದ ರೀತಿಯೇ ಉತ್ತರ ಬರೆಯಬೇಕು. ಸ್ವಂತ ಚಿಂತನೆ ಮಾಡುವ ಅವಕಾಶವಿಲ್ಲ.

ನಾವು ಮಕ್ಕಳನ್ನು ಪರೀಕ್ಷೆಗಾಗಿ ತಯಾರು ಮಾಡುತ್ತಿದ್ದೇವೆ. ಮಾರ್ಕ್ ನಲ್ಲಿ ಅಳೆಯುತ್ತೇವೆ. ಇದೇ ಶಿಕ್ಷಣ ಎಂದು ನಾವೆಲ್ಲ ತಿಳಿಯುತ್ತಿದ್ದೇವೆ.

ಇಲ್ಲಿ ಮಕ್ಕಳು ಜ್ಞಾನರಚನೆ ಮಾಡಿಕೊಳ್ಳುವುದಿಲ್ಲ. ಬರೇ ತಾತ್ಕಾಲಿಕ ಮಾಹಿತಿ ಸಂಗ್ರಹ ಮಾಡುತ್ತಾರೆ. ಪರೀಕ್ಷೆಮುಗಿದ ಮೇಲೆ ವಿಷಯಗಳನ್ನೆಲ್ಲ ಮರೆತು ಬಿಡುತ್ತಾರೆ. ಕೆಲವು ಸಮಯದ ಮೇಲೆ ವಿಷಯಗಳ ಬಗ್ಗೆ ಕೇಳಿದರೆ ಹೆಚ್ಚಿನ ಮಕ್ಕಳು ಹೇಳಲು ಅಸಮರ್ಥರು. ಸಾಮಾನ್ಯವಾಗಿ ಬರುವ ಪ್ರಶ್ನೆಗಳಿಗಷ್ಟೇ ಉತ್ತರ ಬಾಯಿಪಾಠ ಮಾಡಿ ಒಳ್ಳೆಯ ಮಾರ್ಕು ತೆಗೆಯುವವರಿದ್ದಾರೆ. ಇವರು ಜಾಣರೆನಿಸಿಕೊಳ್ಳುತ್ತಾರೆ. ಬಾಯಿಪಾಠ ಮಾಡಿಕೊಳ್ಳಲು ಸಾಧ್ಯವಿಲ್ಲದವರು ಅಥವ ಅರ್ಥವಾಗದೇ ನೆನಪಿಟ್ಟುಕೊಳ್ಳಲು ಅಸಮರ್ಥರಾದವರು ದಡ್ಡರೆನಿಸಿಕೊಳ್ಳುತ್ತಾರೆ.

ಈ ರೀತಿಯ ಪರೀಕ್ಷೆಗಳು ವಿದ್ಯಾರ್ಥಿಯ ಇತರ ಸಾಮರ್ಥ್ಯಗಳನ್ನು ಅಥವಾ ಕೌಶಲಗಳನ್ನು ಅಳೆಯುವುದಿಲ್ಲ. ಇಂಥ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದವರು ತಮ್ಮಲ್ಲಿರುವ ಇತರ ಸಾಮರ್ಥ್ಯಕ್ಕೂ ಬೆಲೆ ಕೊಡದೆ, ತಾನು ಅಪ್ರಯೋಜಕ ಎಂದು ಕುಗ್ಗಿ ಹೋಗುತ್ತಾರೆ.

ನಮ್ಮ ಪಠ್ಯಪುಸ್ತಕಗಳೂ ಇದಕ್ಕೆ ಪೂರಕವಾಗಿಯೇ ಇವೆ. ನಮ್ಮ ಪಠ್ಯ ಪುಸ್ತಕಗಳಲಿ ವಿಷಯದ ಹೊರೆ ಜಾಸ್ತಿ ಇದೆಯೇ ಹೊರತು ಬದುಕಿಗೆ ಬೇಕಾದ ಜ್ಞಾನ ಕಟ್ಟಿಕೊಳ್ಳುವಂತಹ ಪಾಠಗಳು ಕಡಿಮೆ. ಬ್ರಿಟಿಷರ ಕಾಲದಿಂದ ಇದ್ದಂತಹ ಪುಸ್ತಕಗಳಲ್ಲಿ ಆಗಾಗ ಸಣ್ಣಪುಟ್ಟ ಬದಲಾವಣೆಗಳನ್ನು ತಂದು ಹಾಗೆಯೇ ಅವನ್ನು ಮುಂದುವರೆಸಿದ್ದೇವೆ.

ಚರಿತ್ರೆಯಲ್ಲಿ ನಾವೇನು ಕಲಿಯುತ್ತೇವೆ...? ಯಾವ ರಾಜರು ಯಾರಡೊನೆ ಹೋರಾಡಿದರು, ಯಾರು ಗೆದ್ದರು ,ಯಾರು ಸೋತರು,ಯಾವ ಇಸವಿಯಲ್ಲಿ ರಾಜ ಪಟ್ಟಕ್ಕೇರಿದ, ಹೇಗೆ ಸಾಮ್ರಾಜ್ಯ ವಿಸ್ತರಿಸಿದ, ಅವರ ಸಾಮ್ರಾಜ್ಯದ ದೇಶದ ಯಾವ ಭಾಗದಲ್ಲಿತ್ತು ಎಂದು ನಕ್ಷೆ ಬರೆಯುವುದು, ಇಸವಿಗಳನ್ನು ನೆನಪಿಡುವುದು...
ಇದರ ಮೇಲಿನ ಪರೀಕ್ಷೆಗಳು ಮಕ್ಕಳಿಗೆ ಅಪ್ರಸ್ತುತ. ಜೀವನಕ್ಕೆ ಏನೂ ಅನ್ವಯವಾಗುವುದಿಲ್ಲ.

ಭೂಗೋಳದಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿನ ಹವಾಮಾನ , ಭೌಗೋಳಿಕ ಲಕ್ಷಣಗಳು, ನದಿಗಳು, ಬೆಳೆಗಳು ಇವುಗಳಬಗ್ಗೆ ಮಾಹಿತಿಗಳನ್ನು ಬಾಯಿಪಾಠ ಮಾಡಿ (ಈ ವ0ುಸ್ಸಿನಲ್ಲಿ ಎಲ್ಲ ನೆನಪಿಡುವುದು ಕಷ್ಟ)ಪರೀಕ್ಷೆ ಮುಗಿದಕೂಡಲೇ ಮರೆತು ಬಿಡುವುದು.
ಇದರಿಂದ ಏನು ಕಲಿತ ಹಾಗಾಯ್ತು.

ಪಠ್ಯಪುಸ್ತಕದಲ್ಲಿ ಕಲಿಯುವ ಪೌರನೀತಿಯೆ ಬೇರೆ. ಸಮಾಜದಲ್ಲಿ ಕಾಣುವ ಪೌರನೀತಿಯೆ ಬೇರೆ.

ಭಾಷಾಪಾಠದಲ್ಲಿ ಕೂಡ ನಾವು ವ್ಯಾಕರಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ ಭಾಷಾ ಪರೀಕ್ಷೆ ಕೂಡ ಸಂಧಿ ಸಮಾಸ ವ್ಯಾಕರಣ, ಪದ್ಯ ಬಾಯಿಪಾಠ, ಪ್ರಶ್ನೋತ್ತರಗಳ ಬಾಯಿ ಪಾಠದ ಮೇಲೆ ಇರುತ್ತದೆ. ಅಭಿವ್ಯಕ್ತಿಗೆ ಅಥವ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಭಾಷಾಶಿಕ್ಷಣ ಅನುವು ಮಾಡಿ ಕೊಡುವುದಿಲ್ಲ. ಭಾಷಾ ಬೋಧನೆ ನಡೆಯುತ್ತಿದೆ ಭಾಷಾ ಬಳಕೆಯಲ್ಲ. ಈರೀತಿಯ ಭಾಷಾಶಿಕ್ಷಣ ಮಕ್ಕಳಲ್ಲಿ ಭಾಷಾಸಾಮರ್ಥ್ಯವನ್ನು ವೃದ್ಧಿಸುವುದಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಓದಿದದರೂ ಒಂದು ಅರ್ಜಿ ಬರೆಯಲು, ಒಂದು ವರದಿ ತಯಾರಿಸಲು, ಒಂದು ವಿಷಯದ ಮೇಲೆ ಸ್ವಂತವಾಗಿ ಹತ್ತು ಹದಿನೈದು ವಾಕ್ಯಗಳನ್ನು ಬರೆಯಲು ಎಷ್ಟು ಮಕ್ಕಳು ಸಮರ್ಥರು ಎಂಬುದನ್ನು ಮರು ಚಿಂತಿಸಬೇಕಾಗಿದೆ.


ಪಠ್ಯದಲ್ಲಿರುವ ಮಾಹಿತಿಗಳನ್ನು ಬಾಯಿ ಪಾಠ ಮಾಡಿ ಪರೀಕ್ಷೆ ಬರೆದು ಮುಗಿಸಿ, ಮುಗಿದ ತಕ್ಷಣ ಪಡೆದ ಮಾಹಿತಿ ಮರೆತು ಬಿಡುವುದಾದರೆ ಅಥವಾ ಕಲಿತದ್ದು ಬದುಕಿಗೆ ಅನ್ವಯಿಸಲು ಆಗುವುದಿಲ್ಲವಾದರೆ ಶಿಕ್ಷಣದಲ್ಲಿ ಎಲ್ಲೋ ಬದಲಾವಣೆ ಆಗಬೇಕು ಅಂತ ಅನಿಸುತ್ತದೆ. ಬರೇ ಬದಲಾವಣೆ ಅಲ್ಲ ಶೈಕ್ಷಣಿಕ ಕ್ರಾಂತಿ ಆಗಬೇಕು.

ದಿನ ದಿನಕ್ಕೆ ಬದುಕಿನ ಅವಶ್ಯಕತೆಗಳು ಬದಲಾಗುತ್ತಲೇ ಇವೆ. ನಮ್ಮ ಮಕ್ಕಳು ಬೆಳೆದು ನಿಲ್ಲುವಾಗ ಅವರಲ್ಲಿ ಜೀವನಕ್ಕೆ ಬೇಕಾದ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸದಿದ್ದರೆ ಶಿಕ್ಷಣಕ್ಕೆ ಏನು ಅರ್ಥ?
ನಮ್ಮ ಮಕ್ಕಳಿಗೆ ಬದುಕಲು ಎಂತಹ ಶಿಕ್ಷಣ ಬೇಕು ಎಂಬುದನ್ನು ಚಿಂತಿಸಿ ಅದಕ್ಕೆ ಪೂರಕವಾದ ಪಠ್ಯಕ್ರಮ ತಯಾರಿಸಬೇಕು. ಶಿಕ್ಷಣದ ಉದ್ದೇಶ ಅವುಗಳಲ್ಲಿ ಪ್ರತಿಫಲಿಸಬೇಕು. ನಮ್ಮ ಮಕ್ಕಳಿಗೆ ತಮ್ಮ ಬದುಕಿನ ಆವಶ್ಯಕತೆಗಳಿಗೆ ಸ್ಪಂದಿಸಲು ಸಾಮರ್ಥ್ಯ ಕೊಡುವ ಶಿಕ್ಷಣದ ಬಗ್ಗೆ ಚಿಂತಿಸಬೇಕು.

ಶಕುಂತಲಾ ನಾಯಕ್

0 comments:

Post a Comment