ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಸಹ ಒಂದು ಕಲೆ. ಅದು ಎಲ್ಲರಿಗೂ ಬರುವುದಿಲ್ಲ. ಒಂದೇ ಒಂದು ಸರಿಯಾದ ನಿರ್ಧಾರ ದಿಂದ ಇಡೀ ಜೀವನವೇ ಬದಲಾಗಬಹುದು ಅಥವಾ ಒಂದೇ ಒಂದು ತಪ್ಪು ನಿರ್ಧಾರದಿಂದ ಜೀವನವಿಡೀ ಕೊರಗುವ ಸ್ಥಿತಿ ಉಂಟಾಗಬಹುದು ಅಥವಾ ಜೀವನದಲ್ಲಿ ಒಳ್ಳೆಯ ಅವಕಾಶಗಳು ಕಳೆದು ಹೋಗಬಹುದು. ತನ್ನ ತೀರ್ಮಾನದಿಂದ ಒಳ್ಳೆಯ ಫಲಿತಾಂಶ ಬಂದರೆ ಆ ವ್ಯಕ್ತಿ ತನ್ನನ್ನು ಹೊಗಳಿಕೊಳ್ಳುತ್ತಾನೆ. ಅದೇ ವ್ಯಕ್ತಿಯ ತೀರ್ಮಾನದಿಂದ ಫಲಿತಾಂಶ ಕಟ್ಟದಾಗಿದ್ದರೆ, ಆ ವ್ಯಕ್ತಿ ತನ್ನ ಸೋಲನ್ನು ತನ್ನ ಸೋಲೆಂದು ಪರಿಗಣಿಸದೇ, ತನ್ನ ಸೋಲಿಗೆ ಬೇರೆಯವರೇ ಹೊಣೆ ಎಂದು ಟೀಕಿಸಿ ಜಾರಿಕೊಳ್ಳುತ್ತಾನೆ. ಇದು ಜನರಲ್ಲಿ ಕಾಣುವ ಸಹಜ ಗುಣವಾಗಿದೆ. ಗೆದ್ದರೆ ನಾನು ಗೆದ್ದೇ ಎನ್ನುತ್ತಾರೆ. ಸೋತರೆ ನಿನ್ನಿಂದಲೇ ಸೋತೆ ಎನ್ನುತ್ತಾರೆ. ಅದೇನೇ ಇರಲಿ ಒಟ್ಟಿನಲ್ಲಿ ಒಂದೇ ಒಂದು ಸರಿ ಅಥವಾ ತಪ್ಪು ನಿರ್ಧಾರದಿಂದ ಅದರ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ಅನುಭವಿಸಲೇ ಬೇಕು.
ನಾವು ಕೊರಗುವ ಮತ್ತು ಖುಷಿಪಡುವ ಸನ್ನಿವೇಶಗಳು ಅನೇಕ. ಉದಾಹರಣೆಗೆ ಆ ಮನೆ ತೆಗೆದುಕೊಳ್ಳದೇ ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಈ ಕೆಲಸವನ್ನು ನಾನು ಮಾಡಬಾರದಾಗಿತ್ತು. ಆ ಹುಡುಗಿಯನ್ನು ಪ್ರೀತಿಸಿದ್ದೇ ತಪ್ಪು, ಬೆಂಗಳೂರಿನಲ್ಲಿ ಮನೆ ಮಾಡಿ ಒಳ್ಳೇ ಕೆಲಸ ಮಾಡಿದೆ, ಉರಾಚೆಯ ಗದ್ದೆ ಮಾರಬಾರದಾಗಿತ್ತು, ಅವಳನ್ನು ಮದುವೆ ಆಗುವ ನಿರ್ಧಾರ ನಿಜವಾಗಲು ಒಳ್ಳೆಯದಾಗಿತ್ತು - ಹೀಗೆ ಒಂದೇ ಎರಡೇ, ಹಲವಾರು ಸಲ ನಾವು ಮಾಡಿದ್ದು ಸರಿ, ನನ್ನ ನಿರ್ಧಾರ ಆ ಸಮಯದಲ್ಲಿ ಸರಿಯಾಗಿತ್ತು. ಹಾಗೆ ಮಾಡಿದ್ದು ತಪ್ಪು, ನಾನು ಹಾಗೆ ಮಾಡಬಾರದಾಗಿತ್ತು ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ತನ್ನ ಜೀವನದಲ್ಲಿ ನಡೆದು ಹೋದ ಸಿಹಿ ಕಹಿ ಘಟನೆಗಳನ್ನು ಜ್ಞಾಪಿಸಿಕೊಂಡು ಒಳಗೊಳಗೇ ಅಳುತ್ತಿರುವುದುಂಟು, ಕೆಲವೊಮ್ಮೆ ಒಂಟಿಯಾಗಿ ತನ್ನಷ್ಟಕ್ಕೆ ತಾನೇ ನಗುತ್ತಿರುತ್ತೇವೆ.

ಕೆಲವರಂತು ಎಲ್ಲವನ್ನೂ ಮರೆತು ಸಾರಾಸಗಟಾಗಿ ದೇವರನ್ನು ದೂಷಿಸುತ್ತಾರೆ. ನನಗೇಕೆ ಈ ಸ್ಥತಿ ಬಂತು? ನಾನು ಏನು ಪಾಪ ಮಾಡಿದ್ದೆ? ನನ್ನ ಜೊತೆಯೇ ಹೀಗೇಕಾಯಿತು? ದೇವರೇ ನಿನಗೆ ಕಣ್ಗಳಿಲ್ಲವೇ? - ಹೀಗೆ ತನ್ನದೇ ಆದ ಶೈಲಿಯಲ್ಲಿ ತನ್ನ ಕೋಪವನ್ನು ವ್ಯಕ್ತಪಡಿಸಿಕೊಳ್ಳುವುದುಂಟು. ತಾನು ತೆಗೆದುಕೊಂಡ ತಪ್ಪು ನಿರ್ಧಾರದ ಬಗ್ಗೆ ಯೋಚನೆ ಮಾಡುವುದಿರಲಿ, ತನ್ನ ತಪ್ಪನ್ನು ತಪ್ಪೆಂದೇ ಪರಿಗಣಿಸುವುದಿಲ್ಲ. ತನ್ನ ನಿಸ್ಸಹಾಯಕತೆಯಲ್ಲಿ ತನ್ನ ಹಣೆಬರಹವೇ ಇಷ್ಟು ಎಂದು ದೂಷಿಸಿಕೊಳ್ಳುವುದಲ್ಲದೇ, ತನ್ನ ಸುತ್ತಮುತ್ತಲಿನವರ ಜೊತೆಯೂ ಅಸಹನೆಯಿಂದ ವರ್ತಿಸುತ್ತಾರೆ. ಕೆಲವರಂತು ಹೆಂಡ ಕುಡಿಯುವಂತಹ ಕೆಟ್ಟ ಚಟಗಳಿಗೂ ಸಹ ಬಲಿಯಾಗುವುದನ್ನು ನಾವು ಕಂಡಿದ್ದೇವೆ, ಮತ್ತೆ ಕೆಲವರು ಆತ್ಮಹತ್ಯೆಯನ್ನೂ ಸಹ ಮಾಡಿಕೊಳ್ಳುತ್ತಾರೆ.

ನಿಮ್ಮ ಜೀವನದಲ್ಲಿ ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಒದಗಿಬಂದರೆ, ಆ ನಿರ್ಧಾರ ದಿಂದ ಆಗುವ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಗಾಳಿಯಲ್ಲಿ ಬಾಣ ಬಿಟ್ಟಹಾಗೆ ಏನನ್ನೂ ಯೋಚಿಸದೇ ಕಣ್ಣುಮುಚ್ಚಿ ನಿರ್ಧಾರ ತೆಗೆದುಕೊಂಡರೆ, ದೊಡ್ಡ ಅನಾಹುತವೇ ಸಂಭವಿಸಬಹುದು. ನಿರ್ಧಾರ ತೆಗೆದುಕೊಳ್ಳುವಾಗ ಅದೃಷ್ಟದ ಮೇಲೆ ನಂಬಿಕೆ ಇಡುವುದು ಅಥವಾ ದೇವರ ಮೇಲೆ ಭಾರ ಹಾಕುವುದು ಶತಮೂರ್ಖತನವಾಗುತ್ತದೆ.

ಏನೇ ನಿರ್ಧಾರ ತೆಗೆದುಕೊಳ್ಳುವಾಗ ನಿಮಗೆ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ಅರ್ಹತೆ ಇದೆಯೇ? ನಿಮ್ಮಿಂದ ಅದು ಸಾಧ್ಯವೇ? ಅದರ ಲಾಭ ನಷ್ಟಗಳೇಣು? ಅಕಸ್ಮಾತ್ ನಷ್ಟವಾದರೆ ನಾನು ಭರಿಸಬಲ್ಲೆನೇ? ನನ್ನ ಮಾನಸಿಕ, ಆರ್ಥಿಕ ಮತ್ತು ದೈಹಿಕ ಸ್ಥಿತಿ ನನ್ನ ನಿರ್ಧಾರಕ್ಕೆ ಅರ್ಹವೇ? ನನ್ನಿಂದ ಪೂರ್ವ ಸಿದ್ಧತೆಗಳು ಮಾಡಲು ಸಾಧ್ಯವೇ? ನನ್ನ ಬಳಿ ಸಮಯ ಇದೆಯೇ? ತಾಳ್ಮೆ ಇದೆಯೇ? ಅದರ ರೂಪುರೇಷೆಗಳು ಹೇಗಿರಬೇಕು? - ಹೀಗೆ ಮುಂತಾದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೂಲಂಕುಶವಾಗಿ ತನ್ನ ಗಮನವನ್ನು ಹರಿಸಬೇಕು.
ನಿಮ್ಮ ನಿರ್ಧಾರ ವ್ಯಾಪಾರದ ಬಗ್ಗೆ ಇರಬಹುದು, ನೌಕರಿ ಬಗ್ಗೆ ಇರಬಹುದು, ಹೊಸ ಜಾಗ ತೆಗೆದುಕೊಳ್ಳುವ ಬಗ್ಗೆ ಇರಬಹುದು, ಹೊಸ ಕೋರ್ಸುಗಳ ಬಗ್ಗೆ ಇರಬಹುದು - ಹೀಗೆ ನಿಮ್ಮ ಅಭಿರುಚಿಯಿರುವ ವಿಷಯಗಳ ಬಗ್ಗೆ ಇರಬಹುದು. ಎಲ್ಲಾ ರೀತಿಯಲ್ಲಿ ಎಲ್ಲಾ ದಿಕ್ಕುಗಳಿಂದ ಯೋಚನೆ ಮಾಡಿ, ಒಂದೇ ದೃಷ್ಟಿಕೋನದಿಂದ ವಿಷಯವನ್ನು ನೋಡುವುದು ಸರಿಯಲ್ಲ. ಕೆಲವರು ನಿರ್ಧಾರವನ್ನು ಜೂಜಾಟದಂತೆ ತೆಗೆದುಕೊಳ್ಳುತ್ತಾರೆ. "ಆದ ಹಾಗೆ ಆಗಲಿ ಮಾದಪ್ಪನ ಜಾತ್ರೆ" ಎಂಬ ಗಾದೆ ಮಾತನ್ನು ಸಹ ಹೇಳುತ್ತಾರೆ. "ಬಂದ್ರೆ ಒಂದು ಹೋದ್ರೆ ಒಂದು" ಎಂಬ ಬೇಜವಾಬ್ದಾರಿ ಡೈಲಾಗು ಬೇರೆ ಹೊಡೆಯುತ್ತಾರೆ. ಕೊನೆಗೆ ಅಳುವುದು - ಕೊರಗುವುದು ಸಹ ಅವರೇ. "ಮಾಡಿದ್ದುಣ್ಣೋ ಮಾರಾಯ" ಎಂಬ ಗಾದೆ ಆಗ ಅವರಿಗೆ ಅರ್ಥವಾಗುವುದು.

ನವೆಂಬರ್ 14 ರಂದು 'ಕೌನ್ ಬನೇಗಾ ಕರೋಡ್ಪತಿ-4' ಎಂಬ ರಿಯಾಲಿಟಿ ಷೋನಲ್ಲಿ ಒಂದು ಘಟನೆಯನ್ನು ನೋಡಿ ಬಹಳ ಬೇಜಾರಾಯಿತು. ಒಬ್ಬ ಸ್ಪರ್ಧಿ ಸರಿಯಾದ ಉತ್ತರವನ್ನು ಹೇಳಿ 1 ಕೋಟಿ ರೂ.ಗಳನ್ನು ಗೆದ್ದುಕೊಂಡಿದ್ದನು, ಕೊನೆಯ ಪ್ರಶ್ನೆ 5 ಕೋಟಿಗೆ, ಉತ್ತರ ತಪ್ಪಾದರೆ ಕೇವಲ 32000/- ರೂ.ಗಳು ಮಾತ್ರ ಕೈಗೆ ಬರುತ್ತವೆ. ಪಂದ್ಯ ಬಿಟ್ಟರೆ 1 ಕೋಟಿ ರೂ.ಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು.
ಪಂದ್ಯದ ರೂಪುರೇಶೆಗಳ ಕಾನೂನಿನ ಪ್ರಕಾರ ಅಮಿತಾಬ್ ಬಚ್ಚನ್ ಆ ಸ್ಪರ್ಧಿಯನ್ನು ಕೇಳುತ್ತಾರೆ - "ಮುಂದಿನ ಪ್ರಶ್ನೆಗೆ ಆಡಲು ಇಷ್ಟವಿದಯೇ? ಅಥವಾ 1 ಕೋಟಿ ರೂ.ಗಳನ್ನು ತೆಗೆದುಕೊಂಡು ಪಂದ್ಯ ಬಿಡುತ್ತೀರೋ?
ಆಗ ಆ ಸ್ಪರ್ಧಿ ಒಂದು ಮಾತನ್ನು ಹೇಳುತ್ತಾನೆ - "ನಾನು ಸಂಕಟದಲ್ಲಿ ಸಿಲುಕಿದಾಗ ಕಣ್ಣು ಮುಚ್ಚಿ ಗಣೇಶನಿಗೆ ಪ್ರಾರ್ಥಿಸಿ ಅವನಿಂದ ನಿರ್ಧಾರ ತೆಗೆದುಕೊಳ್ಳುತ್ತೇನೆ, ದಯವಿಟ್ಟು ಹಾಗೆ ಮಾಡಲು ಸ್ವಲ್ಪ ಸಮಯ ನೀಡಿ".
ಆಗ ಬಚ್ಚನ್ "ಐದು ನಿಮಿಷ ಏನು, ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಿ" ಎನ್ನುತ್ತಾರೆ.
ಆ ಆ ಸ್ಪರ್ಧಿ ಹಾಟ್ ಸೀಟ್ ಮೇಲೆ ಕಣ್ಣುಮುಚ್ಚಿ ಧ್ಯಾನಾವಸ್ಥನಾಗುತ್ತಾನೆ. ಕೆಲ ಸಮಯದ ನಂತರ ಕಣ್ತೆರೆದು "ಗಣೇಶ ನನಗೆ ಹೇಳಿದ - ಪಂದ್ಯ ಮುಂದುವರೆಸಬೇಕಂತೆ" ಎನ್ನುತ್ತಾನೆ.
ಅಲ್ಲಿ ಆಸೀನರಾಗಿದ್ದ ಆತನ ತಂದೆ ತಾಯಿಗೂ ತನ್ನ ಮಗ ಪಂದ್ಯ ಮುಂದುವರೆಸುವುದು ಇಷ್ಟವಿರುವುದಿಲ್ಲ, ಅಲ್ಲಿ ಕುಳಿತಿರುವ ವೀಕ್ಷಕರಿಗೂ ಆತ ಪಂದ್ಯ ಮುಂದುವರೆಸುವುದು ಇಷ್ಟವಿರುವುದಿಲ್ಲ.
ಒಂದುರೀತಿಯ ಅಗ್ನಿ ಪರೀಕ್ಷೆ, ಸೋತರೆ 1 ಕೋಟಿ ರೂ. ಹೋಗುತ್ತದೆ. ಗೆದ್ದರೆ 5 ಕೋಟಿ ರೂ.ಗಳು ಬರುತ್ತದೆ. ಆತ ಆಟ ಮುಂದುವರೆಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಬಚ್ಚನ್ ಪ್ರಶ್ನೆಗೆ ತಪ್ಪು ಉತ್ತರ ನೀಡುತ್ತಾನೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿ ಹೋಗುತ್ತದೆ. ಮುಕ ಸಪ್ಪೆ ಮಾಡಿಕೊಂಡು ಜಾಗ ಖಾಲಿ ಮಾಡುತ್ತಾನೆ.

ನೋಡಿದಿರ ತಪ್ಪು ನಿರ್ಧಾರದ ಪರಣಾಮ! ಈತನ ತಪ್ಪು ನಿರ್ಧಾರಕ್ಕೆ ಯಾರು ಹೊಣೆ? ಈತನೇ ಗಣೇಶನೇ? ಯಾವಾಗಲೂ ಅಳತೆ ಮಾಡಿ ಅಪಾಯವನ್ನು ತೆಗೆದುಕೊಳ್ಳಬೇಕು, ಕೆಲವೊಮ್ಮೆ ಮಿತಿಮೀರಿದ ವಿಶ್ವಾಸವೂ ಒಳ್ಳೆಯದಲ್ಲ. ಸಮಯ ಪಾಠ ಕಲಿಸುತ್ತದೆ ನಿಜ, ಆದರೆ ಹೋದ ಕಾಲ, ಆಡಿದ ಮಾತು ಮತ್ತು ಬಿಟ್ಟ ಬಾಳ ಮತ್ತೆ ಹಿಂತಿರುಗಿ ಬರುವುದಿಲ್ಲ.

ಜಬೀವುಲ್ಲಾ ಖಾನ್,ಬೆಂಗಳೂರು.

0 comments:

Post a Comment