ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:48 PM

ರಂಗನ ನೆನಪು

Posted by ekanasu

ಸಾಹಿತ್ಯ

ನನ್ನ ದೊಡ್ಡ ತಮ್ಮ ಪರಶುವಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಪ್ರೀತಿ. ಅವನು ಆರಂಭಿಕ ದಿನಗಳಲ್ಲಿ ಮನೆಯಲ್ಲಿದ್ದ ಕುರಿ ಮರಿ, ಕೋಳಿ,ಕೋಳಿಮರಿಗಳು, ಬೆಕ್ಕಿನ ಮರಿ ಇತ್ಯಾದಿಗಳನ್ನು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದ. ಅವುಗಳ ಆರೈಕೆಯ ನೆವದಲ್ಲಿಯೇ ಶಾಲೆಯನ್ನು ತಪ್ಪಿಸಿ ಅಕ್ಕಂದಿರ ಕೈಯಲ್ಲಿ ಕಡುಬು(ಏಟು) ತಿನ್ನುತ್ತಿದ್ದನು. ಅದೊಂದು ದಿನ ಅವನು ತನಗೆ ಕೊಟ್ಟಿದ್ದ ಬ್ರೆಡ್ಡು, ಚಹವನ್ನು ನಮ್ಮೆಲ್ಲರಿಗಿಂತ ಸ್ಪಲ್ಪ ಲಗೂನೇ ಮುಗಿಸಿ ಒಳಗೆ ಬಂದು ಮತ್ತೆ ಬ್ರೆಡ್ ಎಂದು ಕೇಳಿದ. ಅಕ್ಕಂದಿರು ತಮ್ಮ ಪಾಲಿನದರಲ್ಲಿ ಸ್ಪಲ್ಪ ಸ್ವಲ್ಪ ತೆಗೆದು ಅವನ ಪುಟ್ಟ ಕೈಗಿಟ್ಟರು.ಅವನು ಮತ್ತೆ ಹಿತ್ತಿಲು ಬಾಗಿಲಿಗೆ ನಡೆದನು. ಅವನು ಆಡುತ್ತ ತಿನ್ನುತ್ತಿದ್ದಾನೆಂದು ನಾವು ಆ ಕಡೆ ಗಮನ ಹರಿಸಿರಲಿಲ್ಲ. ಆದರೆ ಭೂಪ ಮತ್ತೆ ಎರಡೆ ನಿಮಿಷದಲ್ಲಿ ಬಂದು ಮತ್ತೆ ಬ್ರೆಡ್ ಎಂದು ಕೈ ಚಾಚಿದನು. ಈ ಸಲ ಎಲ್ಲರ ಕೈಯಲ್ಲೂ ಬ್ರೆಡ್ ಖಾಲಿಯಾಗಿತ್ತು. ಅಕ್ಕ ಬ್ರೆಡ್ಡಿನಂತೆಯೇ ಮೆತ್ತಗೆ ಚಪಾತಿ ಬೇಯಿಸಿ ಕೊಡುವುದಾಗಿ ಹೇಳಿದರೂ ಅವನ ಹಟ ನಿಲ್ಲಲಿಲ್ಲ. ನಾನು ಕೈ ತೊಳೆದುಕೊಳ್ಳಲು ಹೊರಗೆ ಹೋದಾಗ ಏನೊ ಕುಂಯ್ ಕಂಯ್... ಅಂತ ಶಬ್ದ ಕೇಳಿ ಬಂತು. ಸುತ್ತಲೂ ನೋಡಿದೆ. ಸೀಳು ಬಿಟ್ಟ ಹರವಿಯಲ್ಲಿಂದ ಆ ಸದ್ದು ಬರುತ್ತಿತ್ತು. ಹೋಗಿ ಅದರ ಮೇಲೆ ಮುಚ್ಚಿದ್ದ ಹಳೆಯ ಬುಟ್ಟಿಯನ್ನು ತೆಗೆದೆ. ಪರಮಾಶ್ಚರ್ಯ, ಜೊತೆಗೆ ವಾಕರಿಕೆಯೂ ಬಂತು. ಅಡಪು ಹತ್ತಿ ತುಪ್ಪುಳೆಲ್ಲ ಉದರಿದ ಸೊರಗಿದ ಕಂದು ಬಣ್ಣದ ನಾಯಿ ಮರಿ ಅದರಲ್ಲಿತ್ತು.

ನನಗೆ ಇದು ನನ್ನ ತಮ್ಮಣ್ಣನ ಕೆಲಸವೇ ಎಂದು ಖಾತ್ರಿಯಾಯಿತು. ಅವನು ಬ್ರೆಡ್ ಪಸಿಗೆ ಎತ್ತಿದ್ದು ಕೂಡ ಈ ನಾಯಕ್ಕ(ಣ್ಣ)ನಿಗೇ ಎಂದು ನಗೆ ಬಂದಿತು. ಮನೆಯ ಮಾಳಿಗೆ ಹಾರಿ ಹೋಗುವಂತೆ ನಗುತ್ತ ಒಳಬಂದಾಗ ನನ್ನ ಅಕ್ಕಂದಿರೂ ಸಹ ಕಾರಣವನ್ನೇ ತಿಳಿಯದೆ ನನ್ನೊಂದಿಗೇನೆ ನಗತೊಡಗಿದ್ದರು. ನನಗೆ ಜೋರಾಗಿ ನಗು ಉಕ್ಕಿ ಉಕ್ಕಿ ಬರುತ್ತಿದ್ದುದರಿಂದ ಮಾತು ಬರದೇ, ಸಣ್ಣಕ್ಕನ ಕೈಯನ್ನು ಹಿಡಿದೆಳೆದುಕೊಂಡು ಹರವಿಯನ್ನು ತೋರಿಸಿದೆ. ಅವಳೂ ಕೂಡ ಅದನ್ನು ನೋಡಿ ತಮ್ಮಪ್ಪನ ಸಾಹಸಕ್ಕೆ ಮೆಚ್ಚಿಕೊಂಡಳೇನೋ ಎಂಬಂತೆ ಒಳಗೋಡಿ ಬಂದು ಅವನನ್ನು ಎತ್ತಿಕೊಂಡು ಹರವಿಯ ಹತ್ತಿರ ಬಂದು ಮತ್ತೆ ನಗತೊಡಗಿದಳು. ನಮ್ಮ ವಿಪರೀತ ನಗುವನ್ನು ಕೇಳಿ ದೊಡ್ಡಕ್ಕನೂ ಹೊರಗೆ ಬಂದು ಅಲ್ಲಿ ಏನು ನಡೆದಿದೆ ಎಂದು ಪರಾಮರ್ಶಿಸಿದಳು.

ಅವಳೂ ಕೂಡ ನಗೆ ತಡೆಯದೇ ಒಳಗೆ ಬಂದು ಅವ್ವನಿಗೆ ಕರೆದು ಹರವಿ ಹತ್ತಿರ ಏನೊ ಇದೆ ಎಂಬಂತೆ ಆಕರ್ಷಕವಾಗಿ ಹೇಳಿದಳು. ಅವ್ವ ಹೊರಗೆ ಬಂದು ಹರವಿಯಲ್ಲಿ ಇಣುಕಿ ನೋಡಿ, ನಮ್ಮೆಲ್ಲರ ಮಂಗತನಕ್ಕೆ ಆಕೆಯೂ ಸೀರೆಯ ಸೆರಗನ್ನು ಬಾಯಿಗೆ ಅಡ್ಡ ಹಿಡಿದು ಸಾಕಷ್ಟು ನಕ್ಕರು. ಅಲ್ಲಿಗೆ ಅವ್ವನೂ ನಕ್ಕ ನಂತರ ನಮ್ಮ ನಗುವಿನ ಅಲೆ ಕಡಿಮೆಯಾಯಿತು. ಅಪ್ಪ ಆಗಲೇ ಹೊರಗೆ ಹೋಗಿದ್ದರು. ಅವ್ವ ಯಪ್ಪಾ ರಾಮಣ್ಣ ಎಲ್ಲಿ ಹುಡುಕ್ಯೊಂಡ್ಬಂದೆಪಾ ಎಷ್ಟು ಚಂದೈತಿ ನಿನ್ನ ನಾಯಿ ಮರಿ? ಎಂದಾಗ ನಾವೆಲ್ಲರೂ ಮತ್ತೊಮ್ಮೆ ನಕ್ಕೆವು. ಈ ಸಲ ಅವನಿಗೆ ಒಂಥರಾ ಅವಮಾನವಾದಂತಾಯಿತೇನೊ. ಅವನು ಅಳತೊಡಗಿದನು. ಅವ್ವ ಒಂದು ಸಣ್ಣ ಜರಲನ್ನು ಎತ್ತಿಕೊಂಡು ಆ ನಾಯಿ ಮರಿಯನ್ನು ದೂರ ಓಡಿಸಲು ಪ್ರಯತ್ನಿಸತೊಡಗಿದರು. ಆದರೆ ತಮ್ಮ ಅದನ್ನು ಗಬ್ಬಕ್ಕನೇ ಎತ್ತಿಕೊಂಡು ಅಂಗಿಯಲ್ಲಿಟ್ಟುಕೊಂಡು ಅವುಚಿಕೊಂಡನು. ಆ ರೋಗಿಷ್ಟ ನಾಯಿ ಮರಿಯಿಂದ ನಮಗೇನಾದರೂ ತೊಂದರೆಯಾದೀತೆಂದು ಅದನ್ನು ಹೊರಗೆ ಹಾಕಲು ನಾವೆಲ್ಲರೂ ಅವ್ವನ ಸಹಾಯಕ್ಕೆ ನಿಂತೆವು. ಆದರೆ ತಮ್ಮ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದಲ್ಲದೇ ಬೋರಾಡಿ ಅಳತೊಡಗಿದನು.

ಅವ್ವ ಅವನ ಕೈಯಿಗೆ ಒಂದೇಟು ಬಿಟ್ಟು ಬಿಟ್ಟಾಗ ಅವನು ಕೈ ಸಡಿಲಿಸಿದನು. ನಾಯಿ ಮರಿ ಕೆಳಗೆ ಬಿದ್ದು ಕುಂಯ್ಯೋ ಮರ್ಯೋ ಅಂತ ಕಿವಿಗಡಚಿಕ್ಕುವಂತೆ ಒದರತೊಡಗಿತು. ಅದಕ್ಕೆ ಅಷ್ಟು ಹೊತ್ತಿಗೆ ಪರಶು ತನ್ನ ಪರವಾಗಿಯೂ, ನಾವೆಲ್ಲರೂ ವಿರೋಧವಾಗಿಯೂ ಇರುವುದು ತಿಳಿದು ಬಿಟ್ಟಿತ್ತು. ಅವ್ವ ಅದನ್ನು ಕೋಲಿನಿಂದ ತಿವಿದು ಹೊರಗೆ ಹಾಕಲು ಪ್ರಯತ್ನಿಸತೊಡಗಿದರು. ಆದರೆ ಅದು ಕೋಲನ್ನು ನೋಡಿದ್ದೇ ತಡ ಮತ್ತಷ್ಟು ಚೀರಿಕೊಂಡು ಮನೆಯ ಆ ಮೂಲೆ ಸೇರಿ ಉಚ್ಚೆ ಹೊಯ್ಕೊಂಡು ಅಳತೊಡಗಿತು. ನಾವು ಎಲ್ಲರೂ ಎಷ್ಟು ಪ್ರಯತ್ನಿಸಿದರೂ ಅದು ಮೂಲೆ ಬಿಟ್ಟು ಕದಲಲಿಲ್ಲ. ಅದರ ಅವತಾರ, ಪುಕ್ಕಲುತನ, ಹಟಮಾರಿತನವನ್ನು ಕಂಡು ಅವ್ವನಿಗೆ ಪಾಪ ಎನ್ನಿಸಿತೇನೊ. ಅವರು ಕೋಲನ್ನು ಹೊರಗೆಸೆದು, ಅಳುತ್ತಿರುವ ತಮ್ಮನನ್ನು ಸಮಾಧಾನ ಪಡಿಸಿದರು.


ಅಂದಿನಿಂದ ಪರಶುವಿಗೆ ಆ ನಾಯಿ ಮರಿ ಹೊಸ ಮಿತ್ರನಾಯಿತು. ಅದು ಹುಟ್ಟಿದಾಗಿನಿಂದಲೂ ಅವನು ಅದನ್ನು ನೋಡಿದ್ದನಂತೆ. ಅದು ಮುದ್ದಾಗಿತ್ತಂತೆ. ನಂತರ ಅದರ ತಾಯಿ ಲಾರಿನೋ ಯಾವುದೋ ವಾಹನದ ಬಾಯಿಗೆ ಸಿಕ್ಕು ಸತ್ತು ಹೋಗಿತ್ತಂತೆ. ಮರಿಗಳೆಲ್ಲ ಬೀದಿಯ ಪಾಲಾಗಿ ಕೊನೆಗೊಂದು ದಿನ ತಮ್ಮನ ಇಷ್ಟದ ಮರಿಯು ಅವನಿಗೆ ಸಿಕ್ಕಿದ್ದೇ ತಡ ಅವನು ಅದನ್ನು ಎತ್ತಿಕೊಂಡು ಬಂದಿದ್ದನಂತೆ. ಅದರ ಹಣೆಯ ಮೇಲೆ ಬಿಳಿಬಣ್ಣದಲ್ಲಿ ಮನುಷ್ಯರ ಪಾದದ್ವಯದ ಗುರುತು ಅವನಿಗೆ ಪತ್ತೆ ಹಚ್ಚುವಲ್ಲಿ ಸಹಾಯಕವಾಗಿತ್ತು. ಆ ಗುರುತು ಎಷ್ಟೊಂದು ಒಪ್ಪಿತ್ತು ಅದರ ಹಣೆಗೆ. ಕೊನೆಗೆ ಅದು ಗಂಡು ಮರಿ ಎಂದು ತಿಳಿದು ನಾವೆಲ್ಲರೂ ಅದಕ್ಕೆ ರಂಗ ಎಂದು ಹೆಸರಿಟ್ಟೆವು. ಆ ನಾಮಕರಣ ನನ್ನದೇ ಆಯ್ಕೆ. ಕ್ರಮೇಣ ಪರಶುವಿನ ಪೋಷಣೆಯಲ್ಲಿ ಅದರ ಮೈ ಗಾಯಗಳೆಲ್ಲ ಉದುರಿ ಹೊಸ ತುಪ್ಪುಳ ಬಂದಿತು. ನೋಡು ನೋಡುತ್ತಿದ್ದಂತೆ ಅದು ದುಂಡಗೆ ಆರೋಗ್ಯವಂತನಾಗಿ ಬೆಳೆಯತೊಡಗಿತು. ತಮ್ಮ ಅದಕ್ಕೆ ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದನು. ಅದು ಚುರುಕಾಗಿ ಮನೆ ತುಂಬ ಓಡಾಡತೊಡಗಿತು. ಯಾರಿಗೂ ಕಚ್ಚುತ್ತಿರಲಿಲ್ಲ. ಆದರೆ ಯಾರನ್ನೂ ಮನೆಯ ಹತ್ತಿರ ಬರಗೊಡುತ್ತಿರಲಿಲ್ಲ. ನಮಗೆ ಅದು ಎಂದರೆ ಮನೆಯ ಒಬ್ಬ ಸದಸ್ಯನಂತೆ ಆಗಿಬಿಟ್ಟಿತು. ನಾವು ಹಚಾ, ಚೂ ಅನ್ನುವುದನ್ನು ಬಿಟ್ಟು ಬಾ ರಂಗ, ಹೋಗು ರಂಗ, ತಿನ್ನು ರಂಗ ಎಂದು ಉಪಚರಿಸತೊಡಗಿದೆವು. ಹೀಗೆ ರಂಗ ನಮು ಮನೆಯ ಮಗನಾಗಿ ಬೆಳೆಯತೊಡಗಿದನು. ಅವನು ನಮ್ಮ ಮನೆಯಿಂದ ಹೊಲಕ್ಕೆ ಹೊಲದಿಂದ ಮನೆಗೆ ಪ್ರತಿ ದಿನ ಹತ್ತೆಂಟು ಸಲ ಅಲೆದಾಡುತ್ತಿದ್ದನು. ಊಟಕ್ಕೆ ನಮ್ಮೆಲ್ಲರಂತೆ ಅವನಿಗೂ ಒಂದು ಶುಚಿಯಾದ ತಟ್ಟೆ ಇರುತ್ತಿತ್ತು. ಆದರೆ ಅವನು ತನ್ನ ಜನ್ಮಜಾತ ಗುಣವಾದ ಮಾಂಸಪ್ರಿಯತೆಯನ್ನು ಬಿಡಲಿಲ್ಲ. ಎಲ್ಲಿಯಾದರೂ ಮಾಂಸದ ಊಟ ಸಿಕ್ಕರೆ ಅವತ್ತು ಹೊಟ್ಟೆ ಬಿರಿಯ ತಿಂದು ಬಂದು ಮನೆಯಲ್ಲಿ ಹಾಕಿದ ಆಹಾರವನ್ನು ತಿನ್ನದೇ ಇದ್ದುಬಿಡುತ್ತಿದ್ದನು. ಹೊಟ್ಟೆಯಲ್ಲಿದ್ದುದು ಜೀರ್ಣವಾಗುವವರೆಗೂ ಮನೆಯಲ್ಲಿ ಉಣ್ಣದೇ , ಹೊಲಸು ಹೂಸು ಬಿಡುತ್ತ ಇದ್ದುಬಿಡುತ್ತಿದ್ದನು. ಅದೊಂದೆ ಅವನ ಕೆಟ್ಟ ಚಟ. ಹಾಗಾದಾಗೆಲ್ಲ ತಮ್ಮ ರಂಗನ ಕೊರಳಿಗೆ ಸರಪಳಿ ಕಟ್ಟಿ ಹೊರಗೆ ಕಟ್ಟಿ ಹಾಕಿ ಬಿಡುತ್ತಿದ್ದನು.

ಹೀಗೆ ರಂಗ ನಮ್ಮ ಪ್ರೀತಿಯಲ್ಲಿ ಬೆಳೆದು 14 ವರ್ಷಗಳವರೆಗೆ ನಮ್ಮೊಂದಿಗೆ ಇದ್ದನು. ಅವನು ಈ ಜಗತ್ತನ್ನು ತ್ಯಜಿಸುವ ಮೊದಲು ಮರೆವು ಉಂಟಾಗಿ ಮನೆ ತೊರೆದು ಹೋಗಿದ್ದನು. ಆಗೆಲ್ಲ ನಾವು ಹುಡುಕಾಡಿ ಅತ್ತಿದ್ದೆವು. ಎಲ್ಲೋ ಹೋಗಿ ದಾರಿಯ ಹೆಣವಾದನೇನೊ ರಂಗ ಎಂದು ಹಲುಬಿದ್ದೆವು. ಆದರೆ ಹಾಗೇನೂ ಆಗಿರಲಿಲ್ಲ. ನನ್ನ ಸಹೋದರರ ಸ್ನೇಹಿತರು ರಂಗನನ್ನು ಗುರುತಿಸಿ ಕರೆತಂದು ನಮ್ಮ ಮನೆಗೆ ತಲುಪಿಸಿದರು. ನಾವು ಅವರಿಗೆ ಧನ್ಯವಾದಗಳನ್ನು ಹೇಳಿದೆವು. ರಂಗ ಅದಾಗಲೆ ಕೊನೆಯ ಹಂತದಲ್ಲಿದ್ದ. ಅವನಿಗೆ ಊಟ ಸೇರುತ್ತಿರಲಿಲ್ಲ. ಆಗೀಗ ಬಾಯಾರಿ ಸ್ವಲ್ಪ ನೀರು ಕುಡಿಯುತ್ತಿದ್ದ. ಹೀಗೆಯೇ ಒಂದು ವಾರ ಕಳೆಯಿತು.

ಅದೊಂದು ದಿನ ರಂಗನು ಬೆಳಿಗ್ಗೆಯಿಂದಲೇ ಎಲ್ಲಿಗೋ ಹೋಗುವವರು ಅವಸರ ಮಾಡುತ್ತ ಸಿದ್ಧತೆ ನಡೆಸಿರುತ್ತಾರಲ್ಲ ಹಾಗೆ ಅವನೂ ಸಿದ್ಧನಾಗುತ್ತಿರುವಂತೆ ಓಡಾಡತೊಡಗಿದ್ದ. ಅವನು ಆರಾಮವಾಗುತ್ತಿರುವನೇ ಎಂದು ನನಗಂತೂ ಬಹಳ ಸಂತೋಷವಾಗಿತ್ತು. ಆ ದಿನ ಅಕ್ಕ ತಮ್ಮಂದಿರ ಸಲುವಾಗಿ ಬೂಂದಿ ಮಾಡಿದ್ದಳು. ನಾನು ರಂಗನಿಗೆ ತಿನ್ನಿಸಲು ಹೋದೆ. ಅವನು ಒಲ್ಲೆ ಎಂದು ಮುಖ ತಿರುಗಿಸಿದನು. ಅಕ್ಕ ಪರಿಪರಿಯಾಗಿ ಗೋಗರೆದಾಗ ರಂಗ ನನ್ನ ಕೈಲಿಂದ ಬೂಂದಿ ಉಂಡಿಯನ್ನು ಕೈಯಲ್ಲಿರುವಂತೆಯ ನಿಧಾನಕ್ಕೆ ಅರ್ಧ ತಿಂದನು. ನಂತರ ಸಾಕೆಂದು ಮುಖ ತಿರುಗಿಸಿದನು. ನೀರು ಕುಡಿಸಿದೆ. ಸ್ವಲ್ಪ ಹೊತ್ತು ವಿರಮಿಸಿದನು. ನಂತರ ಎದ್ದು ಮನೆ ಪಕ್ಕದ ಭರಮಪ್ಪನ ಕಟ್ಟೆ(ಬಂಗಾಳಿ ಕಟ್ಟೆ), ತುಂಬ ತಾನು ಎಲ್ಲೆಲ್ಲಿ ಕೂಡ್ರುತ್ತಿದ್ದನೋ ಅಲ್ಲೆಲ್ಲ ಮೂಸಿ ನೋಡಿ ಬಂದನು. ನಮ್ಮ ಮನೆಯ ಒಳಹೊರಗೆ, ಅಂಗಳ, ಹಟ್ಟಿ, ಕಟ್ಟೆ ಎಲ್ಲ ಕಡೆ ಓಡಾಡಿದನು. ಅವನು ಪ್ರಜ್ಞೆ ಇಲ್ಲದಂತೆ ಓಡಾಡುವುದನ್ನು ಕಂಡು ನಾವೆಲ್ಲರೂ ದುಃಖಕ್ಕೀಡಾದೆವು. ಅಪ್ಪ ಸಹೋದರರು ಎಲ್ಲರೂ ಮನೆ ಸೇರುವ ತನಕ ರಂಗನ ಚಡಪಡಿಕೆ ಹೇಳತೀರದು. ಎಲ್ಲೆಲ್ಲಿಗೋ ಹೋಗಿದ್ದವರು ಆ ಸಮಯಕ್ಕೆ ಅಂದು ಮದ್ಯಾಹ್ನವೇ ಮನೆ ಸೇರಿದ್ದರು. ರಂಗ ಮತ್ತೆ ಭರಮಪ್ಪ ದೇವರ ಕಟ್ಟೆ ಹತ್ತಿದನು. ಆ ಹೊತ್ತಿಗೆ ಸೂರ್ಯ ಪಶ್ಚಿಮಕ್ಕೆ ಜಾರತೊಡಗಿದ್ದನು. ರಂಗನೇನು ಸಂತನೊ ಎನ್ನಿಸಿಬಿಟ್ಟಿತ್ತು. ಅಂತಹ ಅವನು ಪಶ್ಚಿಮಕ್ಕೆ ಮುಖಮಾಡಿ ಅವ್ವಾ ಓಓಓ... ಎಂದು ಧ್ವನಿ ಹೊರಡಿಸಿದನು. ಅತ್ತನೋ ಪ್ರಾರ್ಥಿಸಿದನೋ ತಿಳಿಯಲಿಲ್ಲ. ಅಲ್ಲಿಯೇ ಒರಗಿ ಪ್ರಾಣ ಬಿಟ್ಟು ಬಿಟ್ಟನು. ಮನೆಯಲ್ಲಿ ಒಬ್ಬ ಸದಸ್ಯನನ್ನು ಕಳೆದುಕೊಂಡದ್ದಕ್ಕೆ ನಾವೆಲ್ಲರೂ ಅತ್ತೆವು. ಅವನ ಬಾಲ ಲೀಲೆಗಳೆಲ್ಲ ನೆನಪಾದವು. ಸಹೋದರರು ರಂಗನ ಪಾರ್ಥಿವ ಶರೀರವನ್ನು ಎತ್ತಿಕೊಂಡು ಹೋಗಿ ನಮ್ಮ ತೋಟದಲ್ಲಿಯೇ ಸಂಸ್ಕಾರ ಮಾಡಿದರು.

ನಂತರದ ದಿನಗಳಲ್ಲಿ ನಮ್ಮ ಮನೆಯಲ್ಲಿ ಯಾವುದೇ ನಾಯಿ ಮರಿ ಬಂದರೂ ಏನಾದರೂ ಆಗಿ ಸತ್ತು ಹೋದವು. ಆದರೂ ನನ್ನ ಸಹೋದರರು ಮನೆಯಲ್ಲಿ ಒಂದು ನೆಚ್ಚಿನ ನಾಯಿಯನ್ನು ಸಾಕುವಲ್ಲಿ ಕೊನೆಗೂ ಯಶಸ್ವಿಯಾದರು. ನನ್ನ ತಮ್ಮ ಪರಶು ತಂದಿರುವ ಭೀಮ ಐದು ವರ್ಷಗಳ ಹಿಂದೆ ಇನ್ನೂ ಮರಿ. ಈಗ ಅವನು ಬೆಳೆದು ನಿಂತಿದ್ದಾನೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿರುವ ಹುಲಿಯನಂತೆಯೇ ಅವನು ಆಕರ್ಷಕವಾಗಿಯೂ, ನಮ್ಮೆಲ್ಲರ ಪ್ರೀತಿಯನ್ನಷ್ಟೇ ಅಲ್ಲದೇ ನೆರೆಹೊರೆಯವರ ಮೆಚ್ಚಯನ್ನೂ ಗಳಿಸಿದ್ದಾನೆ. ಅವನು ಸ್ನಾನಪ್ರಿಯ, ಶುಚಿಪ್ರಿಯ. ದಿನಕ್ಕೆ 3 ಸಲ ಸ್ನಾನ ಮಾಡಿಸಿದರೂ ಒಲ್ಲೆ ಎನ್ನಲಾರ. ಭೀಮನ ಬಗ್ಗೆ ಯಾವಾಗಲಾದರೂ ಹೇಳುತ್ತೇನೆ.

- ಸಾವಿತ್ರಿ ವಿ ಎಚ್

0 comments:

Post a Comment