ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಮತ್ತೊಮ್ಮೆ ಈ ಲೇಖನದ ಮೂಲಕ ನಿಮ್ಮನ್ನು ಕಾಪು ಬೀಚ್ಗೆ ಕರೆದೊಯ್ಯುವ ಅವಕಾಶ ನನಗೆ. ಈ ಬಾರಿ ನನಗೆ ಕಾಪು ಬೀಚ್ ಎಷ್ಟು ಪರಿಚಿತವಾಯಿತು ಅಂದ್ರೆ ಬಿಡುವಾದಾಗಲೆಲ್ಲಾ ಸಮುದ್ರ ದಂಡೆಯಲ್ಲಿ ಕುಳಿತು ರಿಲ್ಯಾಕ್ಸ್ ಆಗುವ ಕನಸು ಕಾಣುತ್ತಿದ್ದೆ. ಬೇರೆಲ್ಲಾ ಬೀಚ್ಗಳಿಗಿಂತಲೂ ಕಾಪು ಬೀಚ್ನ ಬಳಿ ಸಮುದ್ರ ದಂಡೆ ತೀರಾ ಸಮತಟ್ಟಾದ ಇಳಿಜಾರಾಗಿದ್ದು ಕಡಲ ಅಲೆಗಳ ಅಬ್ಬರ ಅಷ್ಟೊಂದು ಬಾದಿಸುವುದಿಲ್ಲ. ಹಾಗಂತ ನಾನು ಕಡಲಿನ ರೌದ್ರವತೆಯ ಅಲೆಗಳ ನಡುವೆ ಚೆಲ್ಲಾಟವಾಡುತ್ತಾ ರಿಸ್ಕ್ ತೆಗೆದುಕೊಳ್ಳುವವನೂ ಅಲ್ಲ. ಮರಗಳ ತಂಪು ತೋಪಿನಲ್ಲಿ ಕುಳಿತು ಅಲೆಗಳ ಸ್ವೇಚಂದ ಆಟವನ್ನು ನೋಡುತ್ತಾ ಮೈ ಮರೆತು ಹೋಗುವವನು ನಾನು. ಹಾಗೇ ನೋಡುತ್ತಾ ನೋಡುತ್ತಾ ನಾನು ದೀಪಸ್ತಂಭವಿರುವ ಬಂಡೆಯೇರಿ ಅದೆಷ್ಟೋ ಹೊತ್ತು ಕುಳಿತಿರುವಾಗ ಕಾಗೆಗಳ ಹಿಂಡು ನನ್ನ ಕೈಯಲ್ಲಿರುವ ಚರುಂಬುರಿಗಾಗಿ ಕಾದು ಕುಳಿತಿದ್ದವು. ಅವುಗಳಿಗೆ ಚರುಂಬರಿಯನ್ನು ಬಿಸಾಡುತ್ತಾ ಎತ್ತರಕ್ಕೆ ಹಾರುವ ಅವುಗಳ ಆಟವನ್ನು ನೋಡುತ್ತಾ ಇರುವಾಗ ಒಂದು ಜೋಡಿ ದೀಪಸ್ತಂಭದ ಒಳಗೆ ಹೋಗುವುದನ್ನು ಕಂಡೆ. ಅರೆ! ಏನಾಶ್ಚರ್ಯ ಲೈಟ್ಹೌಸ್ ಒಳಗಡೆ ಹೋಗುವುದಕ್ಕೆ ಬಿಡುತ್ತಾರೆಯೆ? ಅಂದುಕೊಂಡು ನಾನು ಎದ್ದು ನಿಂತೆ. ಕಾಗೆಗಳು ನಾನು ಎಸೆದ ಕಾಗದದ ಪೊಟ್ಟಣವನ್ನು ಹಿಡಿದುಕೊಂಡು ಒಂದನ್ನೊಂದು ಅಟ್ಟುತ್ತಾ ದೂರ ಹಾರಿದವು.

ಅನುಮಾನಿಸುತ್ತಲೇ ಒಳಗೆ ನಡೆದಾಗ ಹಿಂದಿ ಮಾತನಾಡುವಾತನೊಬ್ಬ ನನ್ನನ್ನು ತಡೆದು ನಿಲ್ಲಿಸಿದ. ನಾನು ಅವನನ್ನು ಮೇಲೆ ಹೋಗ ಬಹುದೆ? ಎಂದು ವಿಚಾರಿಸಿದೆ. ಆತ `ಖಂಡಿತವಾಗಿಯೂ, ಆದರೆ ಕ್ಯಾಮರಾ ತೆಗೆದುಕೊಂಡು ಹೋಗುವಂತ್ತಿಲ್ಲ' ಅಂದ. ನನ್ನ ಬಳಿ ಕ್ಯಾಮರಾ ಇಲ್ಲವಾದರಿಂದ `ಆಯ್ತು' ಅಂದೆ. ಅವನು ಐದು ರೂಪಾಯಿಯ ಒಂದು ಕೂಪನನ್ನು ಹರಿದು ನನ್ನತ್ತ ಚಾಚಿದ. ಅದನ್ನು ತೆಗೆದುಕೊಂಡು ಪರ್ಸ್ ತೆರೆದು ಐದು ರೂಪಾಯಿ ಕೊಟ್ಟು ಮೆಟ್ಟಿಲುಗಳತ್ತ ನಡೆದೆ. ಹೊಗೆ ಕೊಳವೆಯಂತೆ ವೃತ್ತಾಕಾರದಲ್ಲಿರುವ ದೀಪಸ್ತಂಭದ ಒಳಗೋಡೆಗೆ ಅಂಟಿಕೊಂಡಿರುವಂತಹ ಪುಟ್ಟಪುಟ್ಟ ಇಕ್ಕಟ್ಟಾದ ಮೆಟ್ಟಿಲುಗಳ ಮೇಲೆ ಹೆಜ್ಜೆಯಿಡುತ್ತಲೇ ಒಂದು ರೀತಿಯ ಪುಳಕವಾಗುತ್ತಿತ್ತು. ಕುತ್ತಿಗೆ ಎತ್ತಿ ಮೇಲೆ ನೋಡಿದರೆ ಮೇಲ್ಛಾವಣಿಯೆ ಕುಸಿದು ಬಿದ್ದಂತೆ ಕಾಣುತ್ತಿತ್ತು. ಧೈರ್ಯದಿಂದ ಸೈಡ್ ರಿಂಗ್ಸ್ಗಳನ್ನು ಹಿಡಿದುಕೊಂಡು ಮೆಟ್ಟಿಲುಗಳನ್ನು ಏರಿದೆ. ಮೇಲೆ ಹೋದ ಬಳಿಕ ಸಣ್ಣನೆಯ ಬಾಗಿಲಿನಿಂದ ಹೊರಗೆ ಬಂದರೆ ಕಬ್ಬಿಣದ ಆವರಣವಿರುವ ದೀಪಸ್ತಂಭದ ದೀಪವಿರುವ ಸುತ್ತು. ಅಲ್ಲಿಂದ ನಿಂತು ನೋಡಿದರೆ ಒಂದೆಡೆ ಅನಂತತೆಯವರೆ ಚಾಚಿರುವ ವಿಶಾಲವಾದ ಸಮುದ್ರ, ಇನ್ನೊಂದೆಡೆ ತೆಂಗಿನ ಮರಗಳ ಸಮೃದ್ಧ ಹಸಿರು ಹಿನ್ನಲೆಯ ವೈಭವ. ಸಣ್ಣ ಸಣ್ಣ ಗೊಂಬೆಗಳಂತೆ ಕಾಣುವ ಜನರು. ಕಣ್ಣಿನೆತ್ತರಕ್ಕೆ ಹಾರುವ ಸಮುದ್ರ ಕಾಗೆಗಳು, ಪಕ್ಷಿಗಳು. ದೂರದಿಂದ ಬಿಳಿಯ ಬಟ್ಟೆಯ ಸೆರಗನ್ನು ಹಾಸಿಕೊಂಡು ಬರುವ ಸಮುದ್ರದ ಅಲೆಗಳು. ಅಸ್ಪಷ್ಟವಾಗಿ ಕೇಳುವ ಅವುಗಳ ಬೋರ್ಗರೆತದ ಸದ್ದು. ನಾನೇನೋ ಸ್ವರ್ಗದಲ್ಲಿದ್ದೇನೋ ಅನಿಸಿತು. ನನಗಿಂತ ಮುಂದೆ ಏರಿದ ಜೋಡಿ ಹಿಂತಿರುಗುವ ಸೂಚನೆ ಕಂಡಿತು. ನಾನು ಪಕ್ಕಕ್ಕೆ ಸರಿದು ನಿಂತರೆ ಕೆಳಗೆ ಬಿದ್ದೆನೇನೋ ಅನಿಸಿ, ಸ್ವರ್ಗ ಸೇರುವೆನೇನೋ ಎಂದು ಹೆದರಿದೆ. ಕೊನೆಗೆ ಹೆದರಿ ಅವರ ಜೊತೆಗೆ ನಾನು ಕೆಳಗಿಳಿದೆ. ಕೆಳಗಿನಿಂದ ಮೇಲೆ ನೋಡಿದರೆ ದೀಪಸ್ತಂಭದ ದೃಶ್ಯ ಒಂದು ಬಸವನ ಹುಳುವಿನಂತೆ ಕಾಣುತ್ತಿತ್ತು. ಅಲ್ಲಿಂದ ಹೊರಗೆ ಬಂದು ಅಬ್ಬಾ! ಅನ್ನುತ್ತಾ ನಿಟ್ಟುಸಿರಿಟ್ಟೆ.

ಕುಂಜಾರುಗಿರಿಯ ಪಾದೆಯೇರಿ ಕುಳಿತರೆ ಸಂಜೆಯ ಹೊತ್ತು ಜಿಗ್ಗನೆ ಹೊತ್ತಿ ಮಾಯವಾಗುವ ಸರ್ಕಸ್ ಕಂಪನಿಯ ಬೆಳಕಿನಂತೆ ಕಾಣುವ ಲೈಟ್ ಹೌಸ್ನ ಬೆಳಕು ಆಕರ್ಷಕವಾಗಿ ಕಾಣುತ್ತಿತ್ತು. ಕೆಲವೊಮ್ಮೆ ಆ ದೀಪಸ್ತಂಭದ ಬೆಳಕು ನೋಡುವುದಕ್ಕೆ ಸಂಜೆಯ ಹೊತ್ತು ಪಾದೆಯೇರಿ ಕುಳಿತುಕೊಳ್ಳುವುದಿತ್ತು.

ಸರಿಯಾಗಿ ನೆನಪಾಗುತ್ತಿಲ್ಲ ನಾನಾಗ ಡಿಗ್ರಿಯಲ್ಲಿದ್ದಿರಬಹುದು. ಆಗ ಸಲ್ಮಾನ್ಖಾನ್ ಅಭಿನಯದ ಮೊದಲ ಚಿತ್ರ `ಮೈನೆ ಪ್ಯಾರ್ ಕಿಯಾ' ಗಲ್ಲಾಪೆಟ್ಟಿಗೆಯನ್ನು ಬಾಚಿಕೊಂಡು ದೇಶ ವಿದೇಶದ ಮೂಲೆ ಮೂಲೆಗಳಲ್ಲಿಯೂ ಖ್ಯಾತಿ ಪಡೆದಿತ್ತು. ಭಾಗ್ಯಾಶ್ರೀಯೆಂಬ ಚೆಲುವೆ ಮತ್ತು ಸಲ್ಮಾನ್ ಖಾನ್ ಎಂಬ ಚಾಕಲೇಟ್ ಹೀರೋನ ಎಂಟ್ರಿಯ ಚಿತ್ರ ಯುವ ಪ್ರೇಮಿಗಳಿಬ್ಬರ ಸುತ್ತಾ ಹೆಣೆದ ಕಥೆಯಾದರೂ ಅದರ ಹಾಡುಗಳಿಂದಲೇ ಹೆಸರು ಪಡೆದಿತ್ತು. ಹಾಗೆ ಸಲ್ಮಾನ್ ಖಾನ್ನ ಬಗ್ಗೆ ತಿಳಿದುಕೊಳ್ಳುವುದಕ್ಕೆ ದಾರಿಯಾಯಿತು. ಅಂಗಡಿಗಳೆಲ್ಲಾ ಬಣ್ಣ ಬಣ್ಣದ ಪೋಸ್ಟ್ ಕಾರ್ಡ್ಗಳನ್ನು ನೇತು ಹಾಕಿ ಮಾರಾಟಮಾಡುತ್ತಿದ್ದಾಗ ಅದನ್ನೆಲ್ಲಾ ಒಟ್ಟು ಸೇರಿಸುವ ಹುಚ್ಚಿತ್ತು. ಒಂದು ರೂಪಾಯಿ ಕೊಟ್ಟರೆ ಐದು ಚೀಟಿಗಳನ್ನು ಎತ್ತುವ ಅವಕಾಶ. ಅದರಲ್ಲಿ ಒಂದಲ್ಲ ಒಂದು ಕಾರ್ಡ್ ನಮ್ಮ ಪಾಲಿಗಾಗುತ್ತಿತ್ತು.

ಅದೇ `ಮೈನೆ ಪ್ಯಾರ್ ಕಿಯಾ'ದ ಯುವ ಪ್ರೇಮಿ ಇದ್ದಕ್ಕಿದ್ದಂತೆ ಕಾಪು ಬೀಚ್ಗೆ ಬಂದಿಳಿದರೆ ಹೇಗಾಗ ಬೇಡ? ಹೌದು, ಆತ ಬಂದಿಳಿದ್ದದ್ದು ಹಿಂದಿ ಚಿತ್ರ `ಜಾಗೃತಿ'ಯ ಶೂಟಿಂಟ್ ಗಾಗಿ ಅವನ ಜೊತೆಗೆ ನಾಯಕಿಯಾಗಿ ಅಭಿನಯಿಸಿದ ಕರಿಷ್ಮಾ ಕಪೂರ್ ಡ್ಯೂಯೆಟ್ಗಾಗಿ ಕಾಪು ತೀರದಲ್ಲೆಲ್ಲಾ ಮತ್ತು ಸುತ್ತ ಮುತ್ತೆಲ್ಲಾ ಹಾಡಿ ನಲಿಯುವ, ಫೈಟಿಂಗ್ನ ದೃಶ್ಯಗಳ ಚಿತ್ರೀಕರಣವಾಗಿತ್ತು. ಚಿತ್ರೀಕರಣ ನಡೆಯುತ್ತಿರುವಾಗ ಜನ ಸೇರುವುದೇನೋ ಸಹಜ. ಆದರೆ ಶೂಟಿಂಗ್ಗೆ ತೊಂದರೆಯಾಗದಂತೆ ಅದನ್ನು ನೋಡುತ್ತಾ ಖುಷಿಪಡುವುದು ಸಭ್ಯತನ. ಆದರೆ ಶೂಟಿಂಗ್ಗೆ ಜನರ ಗುಂಪೆ ತೊಂದರೆ ಪಡಿಸಿದರೆ, ಸಿನಿಮಾ ಮಂದಿಯ ಗತಿಯೇನು? ಹಾಗೆಯೆ ಸಲ್ಲು ಅಭಿನಯದ ಜಾಗೃತಿ ಚಿತ್ರೀಕರಣವಾಗುತ್ತಿರುವಾಗ ಅಂತಹ ಒಂದು ಕಹಿ ಘಟನೆ ನಡೆದಿತ್ತು. ಯಾವುದೋ ವೃತ್ತಿ ಪರ ಕಾಲೇಜ್ ವಿದ್ಯಾರ್ಥಿಗಳು ಸಿನಿಮಾ ತಂಡದ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದೆ ಆ ಘಟನೆಗೆ ಕಾರಣವಾಯಿತಂತೆ. ಅಂತೂ ಎರಡು ದಿನಗಳ ಚಿತ್ರೀಕರಣ ಸಮುದ್ರ ತೀರದಲ್ಲಿಯೆ ಮುಗಿಸಿ ತಂಡ ಮರಳಿ ಮುಂಬೈ ಸೇರಿದ್ದೆ ಜುಲೈ 3, 1992ರಲ್ಲಿ `ಜಾಗೃತಿ' ಬಿಡುಗಡೆಯಾಗಿ ಜನಪ್ರಿಯ ಸಿನಿಮಾಗಳ ಸಾಲಿಗೆ ಸೇರಿತ್ತು.

ಸುರೇಶ್ ಕೃಷ್ಣ ನಿರ್ದೇಶನದ ರಾಮ್ ಶೆಟ್ಟಿಯವರ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕರಿಷ್ಮಾ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದರೆ ಉಳಿದಂತೆ ಪ್ರೇಮ್ ಚೋಪ್ರಾ, ಅಪರಾಜಿತಾ, ಬೀನಾ ಬ್ಯಾನರ್ಜಿ, ಪಂಕಜ್ ಧೀರ್, ಮೋಹನ್ ಜೋಶಿ ಮೊದಲಾದವರಿದ್ದರು.

ಮುಂಬೈನ ಕಪ್ಪು ಮರಳ ದಂಡೆಗಳಿಗಿಂತ ಆಕರ್ಷಕವಾಗಿರುವ ಕರ್ನಾಟಕದ ಕರಾವಳಿಗಳು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ರಾಮ್ ಶೆಟ್ಟಿಯವರು ಮೂಲತ: ದಕ್ಷಿಣಕನ್ನಡದವರೇ ಆಗಿರುವುದರಿಂದ ತಮ್ಮ `ಜಾಗೃತಿ' ಚಿತ್ರವನ್ನು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಚಿತ್ರೀಕರಿಸುವ ನಿರ್ಧಾರ ಮಾಡಿರಬಹುದು.

ಚಿತ್ರವೇನೋ ಬಿಡುಗಡೆಯಾಗಿ ದಕ್ಷಿಣ ಕನ್ನಡದಲ್ಲಿ ಶೂಟಿಂಗ್ ಆಗಿರುವ ಅನ್ನುವ ಅದ್ದೂರಿ ಪ್ರಚಾರವನ್ನೂ ಪಡೆದುಕೊಂಡಿತ್ತು. ಆದರೆ ಅದು ಮಂಗಳೂರಿನಲ್ಲಿ ಪ್ರದರ್ಶನ ಮುಗಿಸಿ ಉಡುಪಿಗೆ ಬರುವಷ್ಟರಲ್ಲಿ ನಾವು ತುದಿಗಾಲಲ್ಲಿ ನಿಂತಿದ್ದೆವು. ಕೊನೆಗೆ ಉಡುಪಿಯ ಥಿಯೇಟರ್ ಬಂದಾಗ ಹತ್ತು ಹದಿನೈದು ಮಂದಿ ಗೆಳೆಯರೆಲ್ಲ ಸೇರಿ ಸಿನಿಮಾ ನೋಡಲು ಹೊರಟೆವು. ನಮ್ಮ ಭಾಗ್ಯಕ್ಕೆ ಹೆಚ್ಚು ರಷ್ ಇಲ್ಲದ ಕಾರಣ ಟಿಕೇಟೇನೋ ಈಸಿಯಲ್ಲಿ ದೊರೆಯಿತು. ಆದರೆ ಒಳಗೆ ಹಳೆಯ ಸೀಟ್ಗಳಲ್ಲಿ ತಗಣೆ ಕಾಟ. ಮೊದಲೆ ಹಿಂದಿ ಸಿನಿಮಾ, ನಮ್ಮ ಕರಾವಳಿಯಲ್ಲಿ ಶೂಟಿಂಗ್ ಆಗಿದೆಯೆನ್ನುವ ಕಾರಣಕ್ಕೆ ಹೊರಟ ನಮಗೆ ನಿರಾಶೆಯಾಗದಿದ್ದರೂ ಒಂದು ಸಣ್ಣ ಇನ್ಸಿಡೆಂಟ್ ನಡೆಯಿತು.

ನಮ್ಮ ಜೊತೆಗೆ ಬಂದ ಒಬ್ಬ ಗೆಳೆಯನಿಗೆ ಒಂದು ಕರಾಬ್ ಸೀಟ್ ಸಿಕ್ಕಿತ್ತು. ನಾವೆಲ್ಲಾ ಒಂದೇ ಸಾಲಿನಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕೆನ್ನುವ ನಿಧಾರಕ್ಕೆ ಬಂದದ್ದರಿಂದ ಅವನಿಗೆ ಆ ಸೀಟ್ ಅನಿವಾರ್ಯವಾಗಿತ್ತು. ಸಿನಿಮಾದ ಇಂಟರ್ಮಿಷನ್ ಆಗುವ ಅರ್ಧಗಂಟೆ ಮೊದಲು ಆತನ ಸೀಟ್ ಮುರಿದು ದಡಕ್ಕನೆ ಕೆಳಗೆ ಬಿದ್ದ. ಬಿದ್ದ ಅವಮಾನಕ್ಕೆ ಅವನು ನೇರವಾಗಿ ಗೇಟ್ಕೀಪರ್ನ ಬಳಿಗೆ ಹೋಗಿ ಸಿನಿಮಾ ನಡೆಯುತ್ತಿರುವಂತೆಯೆ ಗಲಾಟೆ ಹಚ್ಚಿಕೊಂಡ. ಅಂತು ಅವನನ್ನು ಸಮಾಧಾನ ಪಡಿಸಿ ಕರೆತರಬೇಕಾದರೆ ಸಾಕೋ ಸಾಕಾಗಿತ್ತು. ಅಂತು ಜಾಗೃತಿ ನೋಡಿ ಹಿಂತಿರುಗಿದೆವು. ಹೀಗೆ ಲೇಖನವನ್ನು ಬರೆಯುವಾಗಲು ನೆನಪುಗಳನ್ನು ಮೆಲುಕು ಹಾಕಿಕೊಂಡಾಗ ಅಂತಹ ಘಟನೆಗಳನ್ನು ನೆನೆಸಿಕೊಂಡಾಗ ನಗು ಬರದಿರುವುದಿಲ್ಲ.

0 comments:

Post a Comment