ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಗ್ರಲೇಖನಒಂದು ಕ್ಷಣ ಇಂದಿನ ಮಾಧ್ಯಮಗಳತ್ತ ಅವಲೋಕಿಸಿ... ಹೆಚ್ಚೇಕೆ ಈಗ ನೀವು ಓದುತ್ತಿರುವ ಪತ್ರಿಕೆಯನ್ನೇ ಒಂದುಬಾರಿ ತಿರುವಿ ಹಾಕಿ; ನಿಮ್ಮೆದುರಿರುವ ಟಿ.ವಿ. ಸ್ವಿಚ್ಚ್ ಆನ್ ಮಾಡಿ , ಹಾಗೆಯೇ ಒಂದಷ್ಟು ಚಾನಲ್ ಬದಲಾಯಿಸಿ, ಕಂಪ್ಯೂಟರ್ ಪರದೆಯಲ್ಲಿ ಮೂಡುತ್ತಿರುವ ಅಂತರ್ಜಾಲ ತಾಣಗಳತ್ತ ಒಂದು ನೋಟ ಬೀರಿ; ಎಲ್ಲದರಲ್ಲೂ ಕಾಣವುದು "ರಾಜಕಾರಣಿಗಳ ಕೆಸರೆರಚಾಟ"ದ್ದೇ ಪ್ರಮುಖ ಸುದ್ದಿ.
ಆಡಳಿತ ಪಕ್ಷದೊಳಗಿನ ತಿಕ್ಕಾಟ, ಆಡಳಿತ ಪಕ್ಷ - ವಿಪಕ್ಷಗಳ ನಡುವಿನ ಕೋಲಾಹಲ, ಒಬ್ಬರ ಮೇಲೊಬ್ಬರು ವಕ್ರ ಹೇಳಿಕೆಗಳನ್ನು ನೀಡುತ್ತಿರುವ ಕಾರ್ಯ, ಇದಲ್ಲದೆ ಪ್ರಸ್ತುತ ರಾಜಕೀಯ ಮೇಲಾಟ...ಇಷ್ಟೇ ಅಲ್ಲ... ಹೇಗಾದರೂ ಮಾಡಿ ಆಡಳಿತ ಪಕ್ಷವನ್ನು ಕೆಳಗಿಳಿಸಿಯೇ ಸಿದ್ಧ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಾ "ನಾವು ಭಾರೀ ಸಭ್ಯರು" ಎಂಬ ಫೋಸ್ ನೀಡುತ್ತಾ ತಾನು ಪರಮಪೂಜ್ಯ ಬಾಪೂಜಿಯವರ ಕಟ್ಟಾಶಿಷ್ಯ ಎಂಬಂತೆ ಮಾಧ್ಯಮದೆದುರು ತೋರಿಸಿಕೊಳ್ಳುವ (ಆಚಾರದಲ್ಲಿ ಒಂದಂಶವನ್ನೂ ಪಾಲಿಸದೆ !) ಹೊಲಸು ರಾಜಕೀಯ ಪುಢಾರಿಗಳು ಪರಸ್ಪರ ಹೇಳಿಕೆಗಳ ಮೂಲಕ ತೀಟೆ ತೀರಿಸುತ್ತಿರುವ ಸಂಗತಿಗಳು ಇಂದು ಮುದ್ರಣ, ವಿದ್ಯುನ್ಮಾನ ಹಾಗೂ ನವ ಮಾಧ್ಯಮಗಳ ಪ್ರಮುಖ ಸುದ್ದಿಗಳಾಗಿ ಕಂಡುಬರುತ್ತಿವೆ.
"...ನಾಯಕರು ಮುಖ್ಯಮಂತ್ರಿಯವರನ್ನು ತೀವ್ರ ಜರೆದಿದ್ದಾರೆ...", "ತಿರುಗೇಟು ನೀಡಿದರು..." , "ಪಾಪದ ಕೊಡ ತುಂಬಿದೆ ", "ರಾಜಕೀಯ ದ್ವೇಷದ ಹುಳಿ", "ಹೋರಾಟ", "ಆಗ್ರಹ" ... ಅಯ್ಯೋ ಅಯ್ಯೋ ...ಸಾಕಪ್ಪಾ ಸಾಕು ಎಂಬಂತೆ ಇಂದು ಈ ರಾಜಕೀಯ ವ್ಯಕ್ತಿಗಳ ಹೇಳಿಕೆಗಳು, ನಡತೆಗಳು ಇಂದು ಸುದ್ದಿಯಾಗುತ್ತಿವೆ.

ಆಡಳಿತ ಪಕ್ಷದ ನಾಯಕನ ಹೇಳಿಕೆಯೊಂದಕ್ಕೆ ಅಭಿಪ್ರಾಯ ಪಡಕೊಳ್ಳಲು ವಿಪಕ್ಷ ನಾಯಕನ ಹೇಳಿಕೆ ಪಡೆಯುತ್ತಿರುವುದು ಅಥವಾ ವಿಪಕ್ಷ ನಾಯಕನೇ ಮಾಧ್ಯಮದ ಮುಂದೆ ಬಂದು ಆ ಹೇಳಿಕೆಗೆ ಒಂದು ಆಕ್ಷೇಪ ವ್ಯಕ್ತಪಡಿಸುವುದು , ಈ ರೀತಿಯಾಗಿ ಒಬ್ಬರ ಮೇಲೊಬ್ಬರು ನಿರಂತರ ಆಪಾದನೆ ನೀಡುತ್ತಾ ಅದೇ ಒಂದು ಸರಪಳಿಯಂತಾಗಿ ಸುದ್ದಿಯಾಗುತ್ತಿರುವುದು ಇಂದು ಸಾಮಾನ್ಯ.

ಕೆಲವೊಂದು ರಾಜಕೀಯ ವ್ಯಕ್ತಿಗಳಿಗೆ ಮಾಧ್ಯಮಗಳ ಮುಂದೆ ಹೇಗಾದರೊಂದು ರೀತಿ ಕಾಣಬೇಕೆಂಬ ತೆವಲು. ಅದಕ್ಕಾಗಿ ಏನೆಲ್ಲಾ ಕಸರತ್ತು ನಡೆಸುತ್ತಾರೆ. ಒಟ್ಟಾರೆ ಮಾಧ್ಯಮದಲ್ಲಿ ತನ್ನ ಮುಖ ತೋರಬೇಕು, ಹೆಸರು ಕಾಣಬೇಕು ಎಂಬುದೊಂದೇ ಅವರ ಗುರಿ. ಇನ್ನೂ ಒಂದು ವರ್ಗದ ರಾಜಕಾರಣಿಗಳಿದ್ದಾರೆ. ದೂರದ ದೆಹಲಿಯಲ್ಲೋ ಅಥವಾ ವಿದೇಶದಲ್ಲೋ ಎಲ್ಲೋ ಒಂದು ಕಡೆ ನಡೆದ ಘಟನೆಗೆ ಎಲ್ಲೋ ಮೂಲೆಯಲ್ಲಿ ಕೂತು ಸುದ್ದಿಗೋಷ್ಠಿ ನಡೆಸಿ "ತೀವ್ರ ಖಂಡನೆ ವ್ಯಕ್ತಪಡಿಸಿದ್ದೇನೆ" ಎಂದು ಬಾಯಲ್ಲೇ ಹೇಳಿಕೆ ನೀಡಿ ತನ್ನ ತೀಟೆ ತೀರಿಸುವ ಮಂದಿ. ಈ ಪುಣ್ಯಾತ್ಮರು ಯಾವೊಂದು ಉತ್ತಮ ಕಾರ್ಯವನ್ನೂ ಕೃತಿಯಲ್ಲಿ ತೋರಿಸಿದ ಉದಾಹರಣೆಗಳೇ ಇರದು.!

ಸದನದಲ್ಲಿ ಕಲಾಪಕ್ಕೆ ಅಡ್ಡಿ ಪಡಿಸುವ ಮಂದಿ ಮಾಧ್ಯಮಗಳತ್ತ ದೃಷ್ಠಿನೆಟ್ಟು ಏಕೆ ಧರಣಿ ನಡೆಸಬೇಕು ?, . ಮಾಧ್ಯಮಗಳತ್ತ ನೋಡಿ ಘೋಷಣೆಗಳನ್ಯಾಕೆ ಕೂಗಬೇಕು ?, ಮಾಧ್ಯಮ ಮಿತ್ರರು ಬರುವುದನ್ನೇ ಪ್ರತಿಭಟನೆ ನಡೆಸಲು ಕಾಯುವ ಅನಿವಾರ್ಯತೆಯೇಕೆ ?, ಸುದ್ದಿಗೋಷ್ಠಿಗಳಲ್ಲಿ ಕ್ಯಾಮರಾ ಮುಂದೆ ಫೋಸ್ ಯಾಕೆ ನೀಡಬೇಕು ?, ಕಾರ್ಯಕ್ರಮಗಳಲ್ಲಿ ಮಾಧ್ಯಮ ಮಿತ್ರರತ್ತ ಗಮನಯಾಕೆ ಇರಬೇಕು?
ಈ ಎಲ್ಲಾ ಪ್ರಶ್ನೆಗಳನ್ನೂ ಒಮ್ಮೆ ಕೂಲಂಕುಶವಾಗಿ ಕೆದಕಿನೋಡಿದರೆ ಪ್ರಮುಖವಾಗಿ ಗೋಚರಿಸುವ ಮೊದಲ ಅಂಶವೆಂದರೆ "ಪ್ರಚಾರ ಪ್ರಿಯತೆ "
ರಾಜಕೀಯ ವ್ಯಕ್ತಿಗಳ ಕೆಸರೆರಚಾಟ, ವಿನಾ ಹೇಳಿಕೆ, ದುರುದ್ದೇಶಪೂರಿತ ಮಾತುಗಳು, ಇವ್ಯಾವುದನ್ನೂ ಮಾಧ್ಯಮಗಳು ವರದಿ ಮಾಡುವುದೇ ಇಲ್ಲ ಎಂಬ ದೃಢ ನಿರ್ಧಾರವನ್ನು ಸಾರ್ವತ್ರಿಕವಾಗಿ ಎಲ್ಲಾ ಮಾಧ್ಯಮಗಳು ಕೈಗೊಳ್ಳಲಿ. ಇದಾದದ್ದೇ ಆದಲ್ಲಿ ಪಕ್ಷ - ವಿಪಕ್ಷ, ಪಕ್ಷ - ಪಕ್ಷಗಳೊಳಗಿನ ಕಚ್ಚಾಟ, ಚೀರಾಟಗಳು ಒಂದೇ ಪೆಟ್ಟಿಗೆ ನಿಂತುಬಿಡುತ್ತವೆ.

ಅವಕಾಶವಾದಿತ್ವ, ಜನಪ್ರಿಯತೆ, ಅನುಕಂಪ ಪಡೆದುಕೊಂಡು ದ್ವೇಷ ಸಾಧನೆ ಮಾಡಲು ರಾಜಕಾರಣಿಗಳು ಮಾಧ್ಯಮವನ್ನು ಒಂದು ವೇದಿಕೆಯನ್ನಾಗಿ ದುರುಪಯೋಗ ಪಡಿಸುತ್ತಿರುವುದೇ ಇಂದು ದೊಡ್ಡ ಆತಂಕಕಾರಿ ಅಂಶವಾಗಿದೆ.ಯಾವುದಾದರೊಂದು ತಪ್ಪು ಸರಕಾರದಲ್ಲಿ ಕಂಡುಬಂದರೆ ಸಮಗ್ರ ವರದಿ ನೀಡಿ ಮಾಧ್ಯಮಗಳು ಇತರರ ಹೇಳಿಕೆ, ಆರೋಪಗಳಿಗೆ ಅವಕಾಶ ಕೊಡದೆ ನಿರ್ಭೀತ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ಪ್ರಕಟಿಸಲಿ. ರಾಜಕಾರಣಿಗಳ ಅನಾವಶ್ಯಕ ಹೇಳಿಕೆಗಳನ್ನು ಪಡೆದು ಜನತೆಗೆ ತಿಳಿಸುವ ಕಾರ್ಯಗಳು ಮಾಧ್ಯಮಗಳಲ್ಲಾದಾಗ ಮಾತ್ರ ಹೇಳಿಕೆಗೆ ಪ್ರತಿ ಹೇಳಿಕೆ , ಆ ಪ್ರತಿಹೇಳಿಕೆಗೆ ಮತ್ತೊಂದು ಪ್ರತಿಹೇಳಿಕೆ, ಪ್ರತಿಭಟನೆ ಈ ರೀತಿಯ ಗೊಂದಲ ಸೃಷ್ಠಿಯಾಗುತ್ತದೆ. ಈ ಕ್ರಿಯೆಯೇ ನಿಂತುಹೋದಲ್ಲಿ ಯಾವುದೇ ರೀತಿಯ ಗೊಂದಲಗಳೂ ಸೃಷ್ಠಿಯಾಗುವುದಿಲ್ಲ.

ಸಮಸ್ಯೆಗಳು ಎಲ್ಲಿ ಸೃಷ್ಟಿಯಾಗುತ್ತದೆ ಎಂದರೆ ಅದನ್ನು ವೈಭವೀಕರಿಸಿ ಜನಕ್ಕೆ ತಿಳಿಸುವ ಕಾರ್ಯಮಾಡಿದಾಗ ಮಾತ್ರ. ಒಂದೊಮ್ಮೆ ಮಾಧ್ಯಮಗಳು ಯಾವುದೇ ಇಂತಹ ಹೊಲಸು ಕಾರ್ಯಗಳನ್ನು ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಂಡು ಕುಳಿತದ್ದೇ ಆದರೆ ಯಾವ ಹೇಳಿಕೆಗಳನ್ನು ನೀಡಲು ಯಾವುದೇ ರಾಜಕಾರಣಿಗಳಿಗೂ ಅವಕಾಶಗಳೇ ಇರುವುದಿಲ್ಲ. ಯಾವ ಸಮಸ್ಯೆಗಳೂ ಸೃಷ್ಠಿಯಾಗುವುದೂ ಇಲ್ಲ.

- ಹರೀಶ್ ಕೆ.ಆದೂರು.

1 comments:

Anonymous said...

media is working as commercial film producer with lot of fun without any message of goodwill, to attract audience... that is the tragedy of media nowadays... who has to set right... is it not our responsibility to bring the media into the right track...

Post a Comment