ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಒಂದಾನೊಂದು ಕಾಲಕ್ಕೆ ಅಚ್ಚರಿಯ ಸಂಗತಿಯಾಗಿದ್ದ ವಿಚ್ಛೇದನ ಪ್ರಕರಣಗಳು ಇಂದಿಗೆ ಬಹಳಷ್ಟು ಸಹಜವೆಂಬಂತಾಗಿದೆ. ಭಾರತೀಯ ವಿವಾಹಗಳು ಸ್ತ್ರೀ ದಬ್ಬಾಳಿಕೆಯನ್ನೇ ದೃಷ್ಟಿಯಲ್ಲಿರಿಸಿಕೊಂಡಿವೆ ಎಂಬ ಆರೋಪಗಳು ಹೆಚ್ಚುತ್ತಲಿದೆ. ವಿವಾಹದಲ್ಲಿ ಗೆಳೆತನದ ಬಾಂಧವ್ಯವನು ಪ್ರತಿಪಾದಿಸಿದ್ದು ನಮ್ಮಲ್ಲಿನ ಸಂಸ್ಕೃತಿಯೇ ಆದರೂ ಬಹಳಷ್ಟು ಆಧುನಿಕ ಮನಸ್ಸುಗಳು ಈ ವಿಚಾರವನ್ನು ಒಪ್ಪುತ್ತಿಲ್ಲ. ಅದರಲ್ಲೂ ಹೊಂದಾಣಿಕೆಯಿಂದ ಒಂದಾಗಿ ಬಾಳುವ ಮೂಲಸೆಲೆ ಈಗಿನ ಕಾಲಕ್ಕೆ ಬತ್ತಿಹೋಗಿದೆಯೆನಿಸುತ್ತದೆ. ಪ್ರತ್ಯೇಕವಾಗಿ ಬದುಕುವ ವ್ಯವಸ್ಥೆ ಆಧುನಿಕ ಮನಸ್ಸಿನ ಬೌದ್ಧಿಕ ದಾರಿದ್ರ್ಯ ಎಂದು ಧರ್ಮಭಾರತಿ ಪತ್ರಿಕೆ ಮತ್ತು ಹರೇರಾಮ ಅಂತರ್ಜಾಲ ತಾಣದ ಸಂಪಾದಕ ವಿದ್ವಾನ್ ಜಗದೀಶ್ ಶರ್ಮ ಹೇಳಿದರು.
ಎಸ್. ಈಶ್ವರ ಭಟ್ ಎಳ್ಯಡ್ಕ ಮತ್ತು ಚೌಕ್ಕಾರು ಪರಮೇಶ್ವರ ಭಟ್ ಅವರ ಸಂಗ್ರಹದಲ್ಲಿ ಮೂಡಿಬಂದ ೮೮ ಸಂಸ್ಕೃತ ಸುಭಾಷಿತ ಮತ್ತು ಕನ್ನಡದ ಸರಳ ಅರ್ಥವನ್ನೊಳಗೊಂಡ ’ಸುಪ್ರಿಯ ಸುಭಾಷಿತಾನಿ’ ಕೈಪಿಡಿಯನ್ನು ಪುತ್ತೂರಿನ ಮಾಡಾವಿನ ಎಳ್ಯಡ್ಕದಲ್ಲಿ ಅನಾವರಣಗೊಳಿಸಿ ಅವರು ವಿವಾಹದ ಕುರಿತಂತೆ ಉಪನ್ಯಾಸ ನೀಡುತ್ತಿದ್ದರು.

ಸೃಷ್ಟಿಸಹಜವೆನಿಸುವ ವಿವಾಹಪದ್ಧತಿ ಮನುಷ್ಯನ ಯೋಚನಾಬದ್ಧತೆಯ ಫಲವಾಗಿ ರೂಪುಗೊಂಡ ಹೊಸರೂಪ. ಎಲ್ಲಾ ಜನಾಂಗ, ಸಂಸ್ಕೃತಿ, ಮತ-ಧರ್ಮಗಳು ತಮ್ಮದೇ ಆದ ಕ್ರಮ ಮತ್ತು ಉದ್ದೇಶಗಳಲ್ಲಿ ವಿವಾಹವನ್ನು ಪ್ರಧಾನ ಸಂಸ್ಕಾರವನ್ನಾಗಿ ಒಪ್ಪಿಕೊಂಡಿವೆ. ಅದರಲ್ಲೂ ಭಾರತೀಯ ವಿವಾಹ ಪದ್ಧತಿ ಬೇರೆ ದೇಶಗಳಂತೆ ವೈಯಕ್ತಿಕ ಪ್ರಧಾನವಾಗಿರದೆ ಸಾಮಾಜಿಕ ಪದ್ಧತಿಯಾಗಿದ್ದು; ಸಮಷ್ಟಿಯ ಚಿಂತನೆ, ಸಮಾಯೋಗ ನಡೆಸುತ್ತದೆ. ಭಾರತೀಯ ವಿವಾಹ ಕೇವಲ ಜೀವಗಳ, ಕುಟುಂಬಗಳ ಬೆಸುಗೆಯಷ್ಟೇ ಅಲ್ಲ ಸಮೂಹಗಳ, ಜೀವನಶೈಲಿಯ ಬೆಸುಗೆಯೂ ಹೌದು. ಹಂಚಿ ತಿನ್ನುವ, ಕೂಡಿ ನಲಿಯುವ ಪಾಠ ನಮ್ಮ ವಿವಾಹ ಸಂಸ್ಕೃತಿಯದ್ದು ಎಂದು ಅಭಿಪ್ರಾಯಪಟ್ಟರು.

ಆದರೆ ಇಂದಿನ ಜೀವನಕ್ರಮವನ್ನು ಅವಲೋಕಿಸಿದಾಗ ಬಹಳಷ್ಟು ವಿಷ್ಯಗಳಲ್ಲಿ ಪಾಶ್ಚಾತ್ಯರಾಗಿದ್ದೇವೆ. ಬಹುಷಃ ಹೀಗೆ ಮುಂದುವರೆದಲ್ಲಿ ಸಂಪೂರ್ಣ ಭಾರತೀಯತೆ ಅಳಿದು ಪಾಶ್ಚಾತ್ಯರಾದೇವೆಯೇ ಎಂಬ ಭಯ ಮೂಡುತ್ತಿದೆ. ಅನುಕರಣೆ ಎಂಬುದು ಈಗ ವ್ಯಾಪಕವಾಗಿ ಹಬ್ಬುತ್ತಲಿದೆ.ನಮ್ಮದಲ್ಲದ್ದನ್ನು ನಾವು ಆವಾಹಿಸಿಕೊಳ್ಳುತ್ತಿದ್ದೇವೆ. ಅದನ್ನು ಸೂಕ್ತವಾಗಿ ಅರ್ಥ ಮಾಡಿಕೊಳ್ಳದ ಹೊರತು ಮೌಲ್ಯಗಳ ರಕ್ಷಣೆಯ ಕೆಲಸ ಆಗುವುದಿಲ್ಲ. ಈ ಹಂತದಲ್ಲಿ ನಮ್ಮಲ್ಲಿನ ಸತ್ವವನ್ನು ಅರ್ಥ ಮಾಡಿಕೊಂಡು ಬದುಕುವ ಕೆಲಸ ಆಗಬೇಕು.ಅದರಲ್ಲೂ ಸಂಸ್ಕೃತದಲ್ಲಿ ಬಹುಪ್ರಾಮುಖ್ಯ ಸ್ಥಾನವನ್ನು ಅಲಂಕರಿಸಿರುವ ಸುಭಾಷಿತಗಳು ಬದುಕನ್ನು ನೇರಗೊಳಿಸುವ, ಹಿತವಾಗುವಂತೆ ರೂಪಿಸುವ ಗುಣವುಳ್ಳದ್ದಾಗಿದ್ದು ಅವುಗಳ ನೆರಳಿನಲ್ಲಿ ಬದುಕುವಂತಾಗಬೇಕು ಎಂದು ವಿದ್ವಾನ್ ಜಗದೀಶ ಶರ್ಮ ವಿವರಿಸಿದರು.

ಕೈಪಿಡಿಯ ಕರ್ತೃಗಳಲ್ಲೊಬ್ಬರಾದ ಚೌಕ್ಕಾರು ಪರಮೇಶ್ವರ ಭಟ್ಟರು ಮಾತನಾಡಿ ಇಂತಹ ಕೃತಿಗಳ ಅಗತ್ಯ ಇಂದಿಗಿದೆ. ಪರಂಪರೆಗಳಿಂದ ಬಂದ ನುಡಿ-ಮಾತುಗಳನ್ನು ಉಳಿಸಿಕೊಳ್ಳಬೇಕಾಗಿದೆ. ಹಿರಿಯರು ಕೊಟ್ಟ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಒದಗಿಸುವಂತಾಗಬೇಕು. ಎಷ್ಟೋ ತೆರೆಮರೆಯಲ್ಲಿರುವ ಸಂಸ್ಕೃತ ಶ್ಲೋಕ, ಸುಭಾಷಿತಗಳನ್ನು ಆಯಾಯ
ಪ್ರದೇಶದ ಜನರಿಗೆ ಪರಿಚಯಿಸಿ ಅದರ ಹಾದಿಯಲ್ಲಿ ಮುನ್ನಡೆಸುವಂತಾಗಬೇಕಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕೄಷ್ಣಪ್ರಸಾದ್ ಸಣಂಗಳ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಮನೋರಮಾ ಬಿ.ಎನ್ ನಿರೂಪಿಸಿ, ಸ್ವಾಗತಿಸಿದರೆ; ಎಸ್ ಈಶ್ವರ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಈ ಸಂದರ್ಭದಲ್ಲಿ ಪುಸ್ತಕದ ಪ್ರಕಟಣೆಯಲ್ಲಿ ದುಡಿದವರನ್ನು ಸನ್ಮಾನಿಸಲಾಯಿತು.

ಧ್ಯೇಯ ಸಾಫ್ಟ್ ವೇರ್ ಅಂಡ್ ಸೊಲ್ಯೂಷನ್ಸ್ ನ ಸಂಸ್ಥಾಪಕ ನಿರ್ದೇಶಕ ಮಹೇಶ್ ಎಳ್ಯಡ್ಕ ಮತ್ತು ಶ್ವೇತಾ ಅವರ ವಿವಾಹ ಮಹೋತ್ಸವ ಪ್ರಯುಕ್ತದ ಗೃಹಪ್ರವೇಶ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.

ವರದಿ: ಮನೋರಮಾ ಬಿ.ಎನ್.

0 comments:

Post a Comment