ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ





ಮಹಿಳೆ ಸಬಲೆ ಅಲ್ಲ...ಆಕೆ ಎಂದಿಗೂ ಅಬಲೆಯೇ... ಈ ಮಾತು ನೂರಕ್ಕೆ ನೂರು ಸತ್ಯ. ಕಟ್ಟಾ ಸ್ತ್ರೀ ವಾದಿಗಳು, ಮಹಿಳಾ ಪರ ಚಿಂತಕರು, ಮಹಿಳಾ ವಾದಿಗಳು ಏನೇ ಹೇಳಲಿ ಸ್ತ್ರೀ ತನ್ನ ಕೆಲವೊಂದು ಕಾರಣಗಳಿಂದಾಗಿ ಪುರುಷರಿಗೆ ಸರಿ ಸಮಾನ ಎನ್ನುವುದನ್ನು ಒಪ್ಪಿಕೊಳ್ಳುವುದು ಅಸಾಧ್ಯದ ಮಾತು.

ಮಹಿಳೆ ಅಥವಾ ಸ್ತ್ರೀಗೆ ಭಾರತದಲ್ಲಿ ಪೂಜ್ಯ ಭಾವನೆಯಿದೆ. ಮಹಿಳೆ ಮನೆ ಒಡತಿಯಾಗಿ, ಮನೆ ಮಗಳಾಗಿ, ಸಾಮಾನ್ಯ ಜೀವನದಲ್ಲಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಸುಖೀ ಕುಟುಂಬಕ್ಕೆ ಇದೇ ಸ್ತ್ರೀ ಭದ್ರ ಬುನಾದಿಯನ್ನೂ ಹಾಕಿದ್ದು ನಾವೆಲ್ಲ ತಿಳಿದುಕೊಂಡಿರುವ ಸತ್ಯ ಸಂಗತಿ. ಅಮ್ಮ ಎಂಬ ಎರಡಕ್ಷರದ ಮಮತೆಯ ಒಡಲಾಗಿ ಇದೇ ಮಹಿಳೆ ಮನೆಯಲ್ಲಿ ಸ್ಥಾನ ಪಡೆದುಕೊಂಡರೆ, ಸಮರ್ಥ ಸಾಧಕಿಯಾಗಿ ರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ.

ಇಷ್ಟೆಲ್ಲಾ ಸಾಧನೆಗಳನ್ನು ಮಹಿಳೆ ಮಾಡಿದ್ದಾಳೆಯಾದರೂ ಹಲವೊಂದು ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ಮಹಿಳೆ ಇಷ್ಟೇ ಸಮಾನತೆಯಲ್ಲಿ ಸಮಾಜದಲ್ಲಿ ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು. ಪ್ರಸಕ್ತ ಸನ್ನಿವೇಶದಲ್ಲಿ ಸ್ತ್ರೀ - ಪುರುಷ ಇಬ್ಬರೂ ಸಮಾನರು ಎಂಬ ಮಾತುಗಳು ಕೇಳಿಬರುತ್ತಿದೆಯಾದರೂ ಹಲವಾರು ಸಂದರ್ಭಗಳಲ್ಲಿ ಈ ಸಮಾನತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಥರ್ಾತ್ ಮಹಿಳೆ ಪುರಷರಿಗೆ ಸಮಾನರಾಗಿ ಕಾಣಿಸಿಕೊಳ್ಳಲು ಸಾಮಾನ್ಯ ಜೀವನ ಪರಿಸ್ಥಿತಿಯಲ್ಲಿ ಅಸಾದ್ಯವಾಗುತ್ತಿದೆ.

ಮಹಿಳೆ ಇಂದು ಅನೇಕ ಸಮಸ್ಯೆಗಳನ್ನು ಸಮಾಜಿಕವಾಗಿ ಎದುರಿಸುತ್ತಿದ್ದಾಳೆ. ಇಂದು ಕಾರ್ಪೋರೇಟ್ ಸೆಕ್ಟರ್ ನಲ್ಲಿ 45 ರಿಂದ 50ಶೇಕಾಡ ಮಹಿಳಾ ಉದ್ಯೋಗಿಳಿಗದ್ದಾರೆ. ಆದರೆ ಮಹಿಳೆ ಎಷ್ಟರ ಮಟ್ಟಿಗೆ ಸುರಕ್ಷಿತಳು ಎಂಬ ಬಗ್ಗೆ ಚಿಂತಿಸಬೇಕಾಗಿದೆ.
ಮನೆ ಒಡತಿಯಾಗಿರುವ ಮಹಿಳೆ ತನ್ನ ಗಂಡ, ಅತ್ತೆಮಾವಂದಿರಿಂದ ತೊಂದರೆಯನ್ನನುಭವಿಸುತ್ತಾಳೆ, ಮನೆಕೆಲಸದಲ್ಲಿ ತೊಡಗಿರುವ ಮಹಿಳೆಯೂ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾಳೆ, ಕಛೇರಿಗಳಲ್ಲಿ ತನ್ನ ಮೇಲಧಿಕಾರಿಗಳಿಂದ ಹಿಂಸೆ ಅನುಭವಿಸುತ್ತಾಳೆ, ಇವಷ್ಟೇ ಅಲ್ಲ ಮಹಿಳೆ ನಿರಂತರವಾಗಿ ಸಾರ್ವಜನಿಕವಾಗಿ ಇನ್ನನೇಕ ತೊಂದರೆಗಳಿಂದ ನಿತ್ಯ ನಿರಂತರ ಪಡಬಾರದ ಪಾಡು ಅನುಭವಿಸುತ್ತಿದ್ದಾಳೆ, ಮುಂದೆಯೂ ಇರುತ್ತಾಳೆ. ಇದು ಬಹುತೇಕ ಮಹಿಳೆಯರ ಸಾಮಾಜಿಕ ಸ್ಥಿತಿ ಗತಿ.


ಇತ್ತೀಚಿನ ದಿನಗಳಲ್ಲಿ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸೆ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರಿಗೆ ನಗರಗಳು ಸುರಕ್ಷಿತ ಎಂಬ ವಿಶ್ವಸಂಸ್ಥೆಯ ಕಾರ್ಯತಂತ್ರದ ಜೊತೆ ಹೆಜ್ಜೆ ಹಾಕಲು ನಿರ್ಧರಿಸಿದೆ. ಇದರೊಂದಿಗೆ ವಿಶ್ವದ ಪ್ರಮುಖ ನಾಲ್ಕು ನಗರಗಳ ಜತೆ ದೆಹಲಿಯೂ ಸೇರ್ಪಡೆಯಾಗಿದೆ. ಕೈರೋ, ಕಿಗಾಲಿ, ಕ್ವಿಟ್ಟೋ ಮತ್ತು ಫೋರ್ಟ್ ಮೊರೆಸ್ಬೇ ಸೇರಿದಂತೆ ದೆಹಲಿಯಲ್ಲಿ ವಿಶ್ವಸಂಸ್ಥೆ ಮಹಿಳೆಯರ ಸರುಕ್ಷತೆ ಬಗ್ಗೆ ಕಾರ್ಯಕ್ರಮಕ್ಕೆ ಮುಂದಾಗಿದೆ.

ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು; ಎಷ್ಟರ ಮಟ್ಟಿಗೆ ಸಾಮಾಜಿಕವಾಗಿ ಸಮಸ್ಯೆಗಳಿಂದ ಮುಕ್ತಳಾಗಿದ್ದಾಳೆ ಎಂಬುದಾಗಿ ...
ಇಡೀ ದೇಶದ ರಾಜಧಾನಿಯಲ್ಲಿಯೇ ಇಂದು ಮಹಿಳೆಯರಿಗೆ ನಗರಗಳು ಸುರಕ್ಷಿತ ಎಂಬ ಹೊಸ ಕಾರ್ಯಯೋಜನೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ. ಇದನ್ನು ಗಮನಿಸದರೆ ಪ್ರಸಕ್ತ ಸನ್ನಿವೇಷದಲ್ಲಿ ಮಹಿಳೆಯರ ಪಾಡು ಹೇಗಾಗುತ್ತಿದೆ ಎಂಬ ಸತ್ಯ ಬಹಿರಂಗಗೊಂಡಂತಾಗುತ್ತಿದೆ. ಇದು ಕೇವಲ ಭಾರತದ ಸ್ಥಿತಿಯಷ್ಟೇ ಅಲ್ಲ; ವಿಶ್ವದಾದ್ಯಂತ ಗಮನಿಸಿದರೂ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ನಿರಂತರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾಳೆಂಬುದು!

ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆ ಸುರಕ್ಷಿತವಾಗಿಲ್ಲ ಎಂಬ ಸತ್ಯವನ್ನು ವಿಶ್ವಸಂಸ್ಥೆಯೇ ಒಪ್ಪಿಕೊಂಡಂತಿದೆ. ಇಡೀ ವಿಶ್ವದಲ್ಲಿ ಆಯ್ದ ಪ್ರಮುಖ ನಾಲ್ಕು ಪ್ರದೇಶಗಳನ್ನು ಅದಕ್ಕಾಗಿಯೇ ಆಯ್ಕೆಗೊಳಿಸಿ ಆ ಭಾಗಗಳಲ್ಲಿ ಮಹಿಳೆಯರಿಗೆ ನಗರಗಳು ಸುರಕ್ಷಿತ ಎಂಬ ಕಾರ್ಯತಂತ್ರವನ್ನು ರೂಪಿಸಲು ಮುಂದಾಗಿದೆ. ಇರಲಿ ಬಿಡಿ; ಕಳೆದ ಒಂದೆರಡು ವರುಷಗಳ ಹಿಂದಿನ ಸ್ಥಿತಿಗತಿಗಳನ್ನವಲೋಕಿಸೋಣ. ನಮ್ಮ ರಾಜ್ಯದ ರಾಜಧಾನಿಯೂ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ನಡೆದ ಅಹಿತಕರ ಘಟನೆಗಳ ಪಟ್ಟಿಯನ್ನೊಮ್ಮೆ ತಿರುವಿ ಹಾಕಿ.

ಅವುಗಳಲ್ಲಿ ಮಹಿಳಾ ದೌರ್ಜನ್ಯ, ಮಹಿಳಾ ಅತ್ಯಾಚಾರ, ಮಹಿಳಾ ಶೋಷಣೆಗಳು ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು. ಇಷ್ಟೇ ಏಕೆ... ಮಹಿಳೆ ರಾತ್ರಿಪಾಳಿಯಲ್ಲೂ ತಾನು ಪುರುಷರಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂಬ ನಿಲುವಿನಿಂದ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದಳು. ಆದರೆ ಆ ಸಂದರ್ಭದಲ್ಲಿ ಆಕೆಯ ಮೇಲಣ ದೌರ್ಜನ್ಯ,ಕೊಲೆ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡವು. ಒಟ್ಟಾರೆಯಾಗಿ ಸಾರ್ವಜನಿಕ ಪ್ರದೇಶಗಳು ಮಹಿಳೆಯರ ಪಾಲಿಗೆ ಅಷ್ಟೊಂದು ಸುಲಭವಾಗಿಲ್ಲ ಎಂಬ ಸತ್ಯ ಮತ್ತೊಮ್ಮೆ ಜಗಜ್ಜಾಹೀರಾದವು.

ಹೆಚ್ಚುಬೇಡ... ಕಳೆದ ಕೆಲ ದಿನಗಳ ಹಿಂದಿನ ಒಂದು ಘಟನೆಯತ್ತ ಅವಲೋಕಿಸೋಣ... ಇಡೀ ಸಮಾಜದ ರಕ್ಷಣೆಯ ಜವಾಬ್ದಾರಿ ಹೊತ್ತಂತಹ ಪೊಲೀಸ್ ಇಲಾಖೆಯಲ್ಲೇ ಇಂತಹ ದೌರ್ಜನ್ಯದ ಕೃತ್ಯಗಳು ನಡೆದಿರುವುದು ಬೆಳಕಿಗೆ ಬರುತ್ತವೆ. ಪೊಲೀಸ್ ಪೇದೆಯೊಬ್ಬ ಸಹೋದ್ಯೋಗಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಗಳು ಮಾಧ್ಯಮಗಳ ಮೂಲಕ ಬಹಿರಂಗಗೊಂಡವು.
ಇದು ಕೇವಲ ಕೆಲವು ಉದಾಹರಣೆಗಳಷ್ಟೇ... ದೈನಂದಿನ ಜೀವನದಲ್ಲಿಯೂ ಮಹಿಳೆ ನಿರಂತರವಾಗಿ ಸಮಾಜಿಕ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾಳೆ. ಬಸ್ಸು, ವಾಹನಗಳಲ್ಲಿ ತೆರಳುವ ಸಂದರ್ಭದಲ್ಲಿ ಸಹ ಪ್ರಯಾಣಿಕರ ಕಿರುಕುಳ, ದೌರ್ಜನ್ಯಗಳ ಮೂಲಕ ಮಹಿಳೆ ಮತ್ತೆ ಮತ್ತೆ ತೊಂದರೆ ಅನುಭವಿಸುತ್ತಿದ್ದಾಳೆ.
ರಾತ್ರಿ ಹನ್ನೆರಡರ ಸಮಯದಲ್ಲೂ ಒಂಟಿ ಮಹಿಳೆ ನಿಭರ್ೀತಿಯಿಂದ ಸಾಗುವ ದೇಶ ನಮ್ಮದಾಗಬೇಕೆಂಬ ಮಹತ್ಮಾಗಾಂಧಿಯವರ ಕನಸು ನನಸಾಗಬೇಕಾಗಿದೆ. ಆ ನಿಟ್ಟಿನಲ್ಲಿ ಸಮಾಜ ಪರಿವರ್ತನೆಯಾಗಬೇಕಾಗಿದೆ. ಮಹಿಳೆಯರಿಗೆ ಆಗುವ ಅನ್ಯಾಯ ಕಡಿಮೆಯಾಗಬೇಕಾಗಿದೆ.


ಬರಹ: ಸುಮತಿ ಕೆ.ಸಿ.ಭಟ್ ಆದೂರು

0 comments:

Post a Comment