ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಬೀಚ್ ಅಂದ್ರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಹಾಗಂತ ಇಡೀ ದಿನ ಬೀಚ್ನ ಹತ್ತಿರವೇ ಕುಳಿತಿರುವುದಕ್ಕೆ ಸಾಧ್ಯವೆ? ಕಡಲ ದಂಡೆಯ ಮೇಲೆ ಕುಳಿತು ಉಪ್ಪು ನೀರಿನ ಮೇಲಿನಿಂದ ಹಾದು ಬರುವ ಗಾಳಿಯನ್ನು ಸೇವಿಸುತ್ತಾ ದಿವ್ಯ ದಿಗಂತದವರೆಗೂ ನೀಲ ಜಲರಾಶಿಯನ್ನೇ ನೋಡುತ್ತಿದ್ದರೆ, ಆ ಅಗಾಧ ನೀರಿನೆದುರು ನಮ್ಮ ಅಸ್ತಿತ್ವ ಕೇವಲ ಒಂದು ತೃಣದಂತೆ ಕಾಣುವುದರಲ್ಲಿ ಸಂದೇಹವಿಲ್ಲ. ಅಂತಹ ಸಮುದ್ರಕ್ಕೆ ಇದುರಾಗಿ ಕುಳಿತಾಗ ಒಮ್ಮೆ ಮನಸ್ಸಿನ ಚಿಂತೆಗಳೆಲ್ಲಾ ದೂರವಾಗಿ ನಾವು `ರಿಲ್ಯಾಕ್ಸ್' ಆಗುತ್ತೇವೆ. ಕಡಲು ಒಮ್ಮೆ ಉಕ್ಕೇರುವುದಿದೆ, ಮಗದೊಮ್ಮೆ ಶಾಂತವಾಗಿ ತನ್ನ ಅಸ್ತಿತ್ವವೇ ಇಲ್ಲದಂತೆ ಇರುವುದಿದೆ. ಇಂತಹ ಕಡಲು ನಮಗೆ ಬೇಕೆಂದಲ್ಲಿ ಸಿಗಲಾರದು. ನನ್ನೂರಿಗೆ ಹತ್ತಿರವಿರುವ ಬೀಚ್, ಕಾಪು ಬೀಚ್. ಕರಾವಳಿಯ ಅತೀ ಸುಂದರ ಮತ್ತು ಸಮೃದ್ಧಭರಿತವಾದ ಬೀಚ್ಗಳಲ್ಲಿ ಇದೂ ಒಂದು. ಪಶ್ಚಿಮದ ತೀರದಲ್ಲಿ ಗೋಧಿಹುಡಿಯ ಬಣ್ಣದಷ್ಟೇ ಸ್ವಚ್ಛವಾದ ಮರಳರಾಶಿ, ತೆಂಗಿನ ಮರದ ತೋಪುಗಳು, ಕಡಲಿಗೆ ಬೆದರಿ ತೀರಕ್ಕೆ ಬಂದು ನಿಂತಂತಿರುವ ಬಂಡೆಗಳು, ಬಂಡೆಗಳನ್ನು ಬಿಡಲಾರೆವೆನ್ನುವಂತೆ ಮುತ್ತಿಕ್ಕುವ ಅಲೆಗಳು, ಅಲೆಗಳಲ್ಲಿಯೆ ಜೀವ ಪಡೆದ ಪಾಚಿಗಳು, ಪಾಚಿಗಳನ್ನು ತಿನ್ನಲು ಬರುವ ಜಲಚರಗಳು, ಮತ್ತೆ ಹಿಂದಿರುಗಲಾರೆವೆಂದು ಮರಳ ಮೇಲೆಯೆ ಜೀವ ಕಳೆದುಕೊಳ್ಳುವ ಚಿಪ್ಪುಗಳು... ವಾಹ್! ಇಷ್ಟೇಯೆ?... ಇಲ್ಲ ಇನ್ನಷ್ಟಿದೆ ಈ ಮರಳ ದಂಡೆಯಲ್ಲಿ.

ಸಂಜೆಯ ಹೊತ್ತು ಪಶ್ಚಿಮದ ಕಡಲ ಕಿನಾರೆಯಲ್ಲಿ ಕುಳಿತು ಯೌವನದ ಕುರುಹಾಗಿ ಬೆಳೆದ ಮೊಡವೆಗಳನ್ನು ಚಿವುಟುತ್ತಾ ಕಲ್ಪನೆಗಳ ಕೂಸನ್ನು ಹುಟ್ಟಿಸಿಕೊಳ್ಳುವ ಹಾಗೆ ಬಾನಿನ ಬಣ್ಣದ ತಟ್ಟೆಯಾಗುವ ಸೂರ್ಯ, ಮುಖಕ್ಕೆ ತೇಜಸ್ಸು ನೀಡುವ ರೋಮಾಂಚನದ ಘಳಿಗೆ... ಇಂತಹ ಅದೆಷ್ಟೋ ಘಳಿಗೆಗಳನ್ನು ಮನಸ್ಸಿನಾಳಕ್ಕೆ ಇಳಿಸಿ ಮೆಲುಕು ಹಾಕುವುದು ವೈಯಕ್ತಿಕ ನೆನಪುಗಳ ಸವಾರಿಯಷ್ಟೆ. ಆದರೆ ಆ ನೆನಪುಗಳನ್ನು `ಮಾಸ್' ಆಗಿ ಕಾಣಿಸುವುದು ದೃಶ್ಯಮಾಧ್ಯಮಗಳು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕಾಸರಗೋಡುಗಳ ಉದ್ದಕ್ಕೂ ಭೂಪಟದ ನೀಲಿಯ ಜಲರಾಶಿಯ ಸವಿಯನ್ನು ಅದೆಷ್ಟೋ ಸಿನಿಮಾಗಳಲ್ಲಿ ನಾವು ನೋಡಿರುತ್ತೇವೆ. ಆ ದೃಶ್ಯಗಳನ್ನು ಕಾಣುವಾಗಲೆಲ್ಲಾ ಆನಂದಪಡುವುದಿದೆ. ಅದನ್ನು ನೋಡಿದ ಮೇಲೆ ಒಮ್ಮೆ ಬೀಚ್ಗೆ ಹೋಗಿ ಬರೋಣವೆಂದುಕೊಂಡು ಸಂಸಾರ ಸಮೇತವಾಗಿ; ಇಲ್ಲ, ಒಬ್ಬಂಟಿಯಾಗಿ ಸಮುದ್ರವನ್ನು ನೋಡಲು ಕಾತರಿಸುತ್ತೇವೆ. ಅಲ್ಲೆಲ್ಲಾದರೂ ಒಂದುಕಡೆ ಕುಳಿತು ಬಾಯಿಗೂ ಕೈಗೂ ಜಗಳವಾಡುವಂತೆ ಪಾಪ್ಕಾರ್ನ್ ಅಥವಾ ಚರುಂಬುರಿಯನ್ನೊ ತಿನ್ನುತ್ತಾ ಕಣ್ಣಿಗೆಲ್ಲಾ ಕಾಣುವುದನ್ನು ಸ್ವಂತವಾಗಿಸುತ್ತಾ ಕುಳಿತುಕೊಳ್ಳುತ್ತೇವೆ. ಹೀಗೆ ಸ್ವಂತವಾಗುವುದನ್ನು ದೃಶ್ಯಮಾಧ್ಯಮಗಳು ಬಂಧಿಸಿ ಮೂಟೆ ಕಟ್ಟಿ ಎಲ್ಲೋ ಬಚ್ಚಿಡುತ್ತವೆ. ಈ ಬಚ್ಚಿಟ್ಟ ಸುರುಳಿಗಳು ಬಿಚ್ಚಿಕೊಂಡು ಕಣ್ಣಿಗೆ ಹಬ್ಬ ತರುವುದಂತು ಸುಳ್ಳಲ್ಲ. ಹಾಗೆ ಪಟ್ಟಿ ಮಾಡುತ್ತಾ ಕುಳಿತರೆ ಒಂದೇ ಎರಡೆ... ಸಾವಿರಾರು ಸಿನಿಮಾಗಳು ನಮಗೆ ನೆನಪಾಗದಿರದು. ಕಣ್ಣ ಮುಂದೆ ದುತ್ತನೆ ನಿಂತು ನೆನಪುಗಳನ್ನು ರೈಲಿನ ಹಳಿಯಂತೆ ನೂಕುತ್ತಾ ಕಿರಿದು ಅಗಲವಾಗುತ್ತಾ ಕಾಣಿಸಿಕೊಳ್ಳುವುದು ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ `ರಣಧೀರ' ನೆನ್ನುವ ದೃಶ್ಯಕಾವ್ಯದ ಸಿನಿಮಾ.

`ಒಂದಾನೊಂದು ಊರಲಿ ಒಬ್ಬ ಹುಡುಗನಿದ್ದನು, ಯಾರಿಗೂ ಬೆದರದ ರಣಧೀರನು.
ರಾವಣನಂತವನೊಬ್ಬ ಅವನ ಸಾಕುತ್ತಿದ್ದನು, ಕಾರಣ ಹುಡುಗನು ಅನಾಥನು.
ಭೀಷ್ಮ, ಅರ್ಜುನರೆಲ್ಲಾ ಹುಡುಗಿಯರ ಕಥರೇನೆ
ಹಾಗೇನೆ ಈ ಹುಡುಗ, ಮಾಡಲೆಂದು ಹೋದಾಗ'

ತಟ್ಟನೆ ಹಾಡು ನಿಂತಾಗ ಮಕ್ಕಳ ಒಕ್ಕೊರಲಿನ ದನಿ, `ಏನಾಯ್ತು ಅಂಕಲ್, ಏನಾಯ್ತು?'

`ಪ್ರೀತಿಯ ಕಡಲಲ್ಲಿ ಬಿದ್ದನೊ...' ರವಿಮಾಮನ ಉತ್ತರವಾಗುತ್ತಲೇ ರಣಧೀರನ ಕಥೆ ಆರಂಭವಾಗುತ್ತದೆ.

ದೃಶ್ಯಗಳನ್ನು ಹೊಸತನದಲ್ಲಿ ಕಟ್ಟಿಕೊಡುವ ವಿಶೇಷ ಅಭಿರುಚಿ ರವಿಚಂದ್ರನ್ರಿಗಿದ್ದಷ್ಟು ಆಗ ಬೇರಾರಿಗೂ ಇರಲಿಲ್ಲವೆನ್ನಬಹುದು. ಹಾಗಾಗಿ ಹೊಸ ಹೊಸ ಲೊಕೇಷನ್ ಹುಡುಕುತ್ತಾ ಕಂಗಳಲ್ಲಿ ಕನಸುಗಳನ್ನು ಕಟ್ಟಿಕೊಳ್ಳುತ್ತಾ ಚಿತ್ರಕ್ಕೆ ಚೌಕಟ್ಟನ್ನು ಬರೆದಂತೆ ಸಿನಿಮಾದಲ್ಲಿ ಶ್ರೀಮಂತಿಕೆಯನ್ನು ತುಂಬುವುದು ಅವರ ಕ್ರೇಜ್ ಗಳಲ್ಲಿ ಒಂದು.

ಆಗ ನನಗೆ ಮೀಸೆ ಚಿಗುರುವ ವಯಸ್ಸಿರಬಹುದು. ಪಿಯುಸಿ ಕಲಿಯುತ್ತಿದ್ದೆ. ನನ್ನೂರಿನಿಂದ ಏಳೆಂಟು ಮೈಲಿಗಳ ದೂರದ ಇನ್ನಂಜೆಯೆಂಬ ಹಳ್ಳಿಯ ಎಸ್.ವಿ.ಎಚ್. ಪದವಿ ಕಾಲೇಜಿಗೆ ನಡೆದುಕೊಂಡೆ ಹೋಗಬೇಕು. ಸರಿಯಾದ ವಾಹನ ವ್ಯವಸ್ಥೆಯೂ ಇರಲಿಲ್ಲ. ಇದ್ದರೂ ದುಡ್ಡು ಕೊಟ್ಟು ಪ್ರಯಾಣಿಸುವಷ್ಟು ಅನುಕೂಲತೆ ಇರಲಿಲ್ಲ. ಹಾಗಾಗಿ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಕಾಲಿಗೆ ಜೋಡುಗಳನ್ನು ಹಾಕುವಷ್ಟು ಕೂಡ ದಾರಿದ್ರ್ಯ ಬಿಟ್ಟಿರಲಿಲ್ಲ. ಕಲ್ಲು ಮುಳ್ಳುಗಳ ದಾರಿ ಸವೆಸುವಾಗಲೆಲ್ಲ ಮುಂಬರುವ ಸುಖದ ದಿನಗಳ ಕನಸಿನ ಮೂಟೆಯ ಭಾರ ಒಳಗೊಳಗೆ ಖುಷಿಕೊಡುವುದಿತ್ತು.

ಅಂತು ಆ ದಿನ ಅಷ್ಟು ದೂರದಿಂದ ನಡೆದುಕೊಂಡು ಬಂದಿದ್ದೇ, ಏನಕ್ಕೋ ಕಾಲೇಜಿಗೆ ರಜ ಘೋಷಿಸಲಾಗಿತ್ತು. ಕ್ಲಾಸ್ಮೇಟ್ಸೆಲ್ಲಾ ಸೇರಿ ಎಲ್ಲಿಗಾದರೂ ಹೋಗಿ ಬರೋಣವೆಂದುಕೊಂಡೆವು. ಮಹೇಶನೆನ್ನುವಾತ ನಮ್ಮ ಗುಂಪಿಗೆ ಮುಖಂಡ. ಆಗಲೆ ಅವನಿಗೆ ಸೈಕಲ್ ಇದ್ದದ್ದರಿಂದ ಆತ ನಮ್ಮ ದೃಷ್ಟಿಯಲ್ಲಿ ಹೀರೋ. ಅವನು ಏನು ಹೇಳಿದ್ರೂ ಎಲ್ಲರೂ `ಎಸ್' ಅನ್ನುತ್ತಿದ್ದರು. ಓದುವ ವಿಷಯದಲ್ಲಿ ಆತ ನನ್ನಿಂದ ಬಹಳಷ್ಟು ಕೇಳಿ ತಿಳಿದುಕೊಳ್ಳುತ್ತಿದ್ದ. ಎಲ್ಲರೂ ಕಾಪು ಬೀಚ್ಗೆ ಹೋಗುವುದೆಂದು ನಿರ್ಧಾರವಾದ ಮೇಲೆ ಆತ ನನ್ನನ್ನೂ ಒತ್ತಾಯಿಸಿದ. ಮನೆಯವರ ಅನುಮತಿಯಿಲ್ಲದೆ ಹೀಗೆಲ್ಲ ಹೋಗುವುದಕ್ಕೆ ಅವಕಾಶವಿರಲಿಲ್ಲ. ನಾನು ನಿರಾಕರಿಸಿದಷ್ಟು ಆತ ಒತ್ತಾಯಿಸುತ್ತಿದ್ದ. ಆತನ ಒತ್ತಾಯಕ್ಕೆ ಮಣಿದು ಅವನ ಸೈಕಲ್ ಏರಿ ಹೊರಟೆವು. ನಮ್ಮ ಪ್ರಯಾಣ ಕಾಪು ಬೀಚ್ನತ್ತ ಸಾಗಿತ್ತು.

ಕರಾವಳಿಯವನಾಗಿ ಮೊದಲ ಬಾರಿಗೆ ಸಮುದ್ರವನ್ನು ಅಷ್ಟು ಹತ್ತಿರದಿಂದ ನೋಡುವಾಗ ಪುಳಕಿತನಾಗಿದ್ದೆ. ಆ ಅಲೆಗಳು, ಅವುಗಳ ಅಬ್ಬರ! ಮರಳ ದಂಡೆಗೆ ಬಡಿದು ತೋರಿಸುವ ಅದರ ಪೌರುಷ! ಮತ್ತೆ ಶಾಂತವಾಗಿ ಹಿಂತಿರುಗುವ ಪರಿ. ಅದೆಷ್ಟೋ ಹೊತ್ತು ನೋಡುತ್ತಾ ಮೂಕನಂತೆ ನಿಂತು ಬಿಟ್ಟಿದ್ದೆ. ಗೆಳೆಯರು ಒತ್ತಾಯಿಸಿದರೂ ನೀರನ್ನು ಮುಟ್ಟದೆ ಪುಕ್ಕಲನಂತೆ ದೂರಕ್ಕೆ ನಿಂತು ಅಲೆಗಳ ಆಟ, ಸಮುದ್ರದ ಬೋರ್ಗರೆತ, ದೂರದಿಂದಲೇ ಅಲೆಗಳನ್ನು ಸೃಷ್ಟಿಸಿ ದಂಡೆಗೆ ಅಪ್ಪಳಿಸುವ ದೃಶ್ಯವನ್ನು ನೋಡುತ್ತಿದ್ದೆ. ನಮ್ಮ ಗುಂಪು ಅದಾಗಲೆ ಬಂಡೆಗಳ ಕಡೆಗೆ ಸಾಗಿತ್ತು. ನಾನೂ ಅತ್ತ ಹೆಜ್ಜೆ ಹಾಕಿದೆ. ನೀರಿನ ಹಿನ್ನಲೆಯಲ್ಲಿ ದೈತ್ಯ ಬಂಡೆಗಳು ಅಚಲವಾಗಿ ನಿಂತಿದ್ದವು. ಒಂದೆಡೆ ನದಿಯ ಸಂಗಮದ ಸಾನಿಧ್ಯ ಮತ್ತೊಂದೆಡೆ ಬೋರ್ಗರೆಯುವ ಸಮುದ್ರ. ಇಷ್ಟಿದ್ದೂ ನಿರ್ಲಿಪ್ತತೆಯಿಂದ ನಿಂತಿದ್ದ ಬಂಡೆಯ ಮೇಲೆ ಆಕಾಶದೆತ್ತರಕ್ಕೆ ನಿಂತ ದೀಪಸ್ತಂಭ!

ಹೀಗೆ ನೋಡುತ್ತಾ ನಿಂತಿರುವಂತೆ ಅಲ್ಲೇ ಪಕ್ಕದಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದೇ ಇರಲಿಲ್ಲ. ಯಾರೋ ಕರೆದು ನಮ್ಮ ಗಮನವನ್ನು ಅತ್ತ ಸೆಳೆದರು. ರವಿಚಂದ್ರನ್ರವರು ಕುದುರೆಯ ಮೇಲೆ ಕುಳಿತು ಬರುತ್ತಿರುವ ದೃಶ್ಯ ಅದು. ಟೈಟಲ್ ಸಾಂಗ್ `ಸಂಗೀತದ ಅಲೆಗಳ ಮೇಲೆ ಪ್ರೀತಿಯ ಮೆರವಣಿಗೆ' ಸಾಗುತ್ತಿದ್ದಂತೆ ವೇಗವಾಗಿ ಸಮುದ್ರದಂಡೆಯಲ್ಲಿ ಕುದುರೆಯೇರಿ ಸಮುದ್ರದ ಅಲೆಗಳನ್ನು ಬೆಳ್ಳಿ ತೆರೆಗಾಗಿ ಚಿತ್ರೀಕರಿಸುತ್ತಿದ್ದರು. ದೂರದಲ್ಲಿಯೆ ನಿಂತು ನೋಡುತ್ತಿದ್ದೆವು. ಸಮಯದ ಅಭಾವ ಮತ್ತು ಮನೆಯಲ್ಲಿ ಅನುಮತಿಯಿಲ್ಲದೆ ಬಂದದ್ದರಿಂದ ಗೆಳೆಯರನ್ನು ಎಚ್ಚರಿಸಿಬೇಕಾಗಿತ್ತು. ಅಂತು ಸ್ವಲ್ಪ ಹೊತ್ತು ಇದ್ದು ವಾಪಾಸಾದೆವು.

ಆ ಬಳಿಕ ಒಂದೆರಡು ವರ್ಷದಲ್ಲಿ ಚಿತ್ರ ಬಿಡುಗಡೆಯಾಯಿತು. ನಾವು ನೋಡಿದ ಚಿತ್ರೀಕರಣದ ಭಾಗಗಳನ್ನು ನೋಡಬೇಕೆನ್ನುವ ಉದ್ದೇಶದಿಂದ ಸಿನಿಮಾ ನೋಡಬೇಕೆಂದುಕೊಂಡೆ. ಕೊನೆಗೂ ಆ ಸಿನಿಮಾ ಉಡುಪಿಯಲ್ಲಿ ಆಶೀರ್ವಾದ್ ಥಿಯೇಟರ್ಗೆ ಬಂತು. ಮೊದಲ ಬಾರಿಗೆ ಸಿನಿಮಾಸ್ಕೋಪ್ ಚಿತ್ರ ನಮ್ಮೂರಿನ ಥಿಯೇಟರ್ಗೆ ಬಂದ ನೆನಪು. ಆ ಚಿತ್ರಕ್ಕೆ ಪರದೆಯ ಅಗಲ ಸಾಕಾಗದೆ ಸ್ವಲ್ಪ ಮುಂದಕ್ಕೆ ದೊಡ್ಡ ಸ್ಕ್ರೀನ್ ಅಳವಡಿಸಿದ್ದರು. ಆದರೂ ಎರಡೂ ಬದಿಗಳಲ್ಲಿ ಚಿತ್ರಗಳು ಪರದೆಯ ಹೊರಕ್ಕೆ ಕಾಣಿಸುತ್ತಿದ್ದವು.

ರಣಧೀರ ಚಿತ್ರದಲ್ಲಿ ರವಿಚಂದ್ರನ್ರವರು ಮುರಳಿಯಾಗಿ ತನ್ನ ಪ್ರೀತಿಯನ್ನು ಕಳೆದುಕೊಂಡು ಶಿಷ್ಯನ ಜೊತೆಗೆ, `ರಣಧೀರ ಅನ್ನೋದರಲ್ಲಿರೋ ಮಜಾ ಈ ಮುರಳಿ ಅನ್ನೋ ಹೆಸರಿನಲ್ಲಿಲ್ಲ' ಎಂದು ಕಿಕ್ಕ್ ಏರಿಸಿಕೊಂಡು ಅಲೆಗಳ ನಡುವೆ ಹೇಳುತ್ತಾ ಸಾಗುವ ದೃಶ್ಯ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು. ಅದಲ್ಲದೆ, ಕಾಪು ಬೀಚ್ನ ಹೈಲೈಟ್ ಆಗಿರುವ ಬಂಡೆಯ ದೃಶ್ಯಗಳನ್ನು `ಬಾ ಬಾರೋ ಬಾರೋ ರಣಧೀರ, ಬಾ ಎಂದರೆ...' ಹಾಡಿನ ಹಿನ್ನಲೆಯಲ್ಲಿ ಫೈಟಿಂಗ್ ದೃಶ್ಯಗಳಲ್ಲಿ ಸುಂದರವಾಗಿ ಚಿತ್ರೀಕರಿಸಲಾಗಿದೆ. ಬಂಡೆಗಳ ಮೇಲಿನಿಂದ ಸಮುದ್ರಕ್ಕೆ ಹಾರುವ ದೃಶ್ಯ, ನೀರಿನಲ್ಲಿ ಹೊಡೆದಾಟದ ದೃಶ್ಯ, ನದಿ ಸಂಗಮದ ಹಿನ್ನಲೆಯಲ್ಲಿಯ ದೃಶ್ಯ ನೋಡಿದಷ್ಟು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

1989ರಲ್ಲಿ ಅದ್ದೂರಿಯಾಗಿ ಚಿತ್ರ ಬಿಡುಗಡೆಗೊಂಡು ಜಯಭೇರಿ ಬಾರಿಸಿದ ನೆನಪು. ಆಗ ಆ ಚಿತ್ರ ನನ್ನಂತಹ ಕನಸು ಕಣ್ಣಿನ ಹುಡುಗರನ್ನೆಲ್ಲಾ ಬಡಿದೆಬ್ಬಿಸಿತ್ತು. ಮುಖ್ಯ ಭೂಮಿಕೆಯಲ್ಲಿ ರವಿಚಂದ್ರನ್, ಖುಷ್ಬೂ, ಲೋಕೇಶ್, ಅನಂತ್ನಾಗ್, ಸುಮಿತ್ರಾ, ಜಗ್ಗೇಶ್, ಅರವಿಂದ್ ಮುಂತಾದವರಿದ್ದು, `ಪ್ರೇಮ ಲೋಕ'ದಂತೆ ಅದ್ದೂರಿಯ ತಾರಾಂಗಣ ಈ ಚಿತ್ರಕ್ಕಿತ್ತು.

ಮುಂದಿನ ವಾರ ಮತ್ತೆ ಇದೇ ಬೀಚ್ಗೆ...

0 comments:

Post a Comment