ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಗೋಧೂಳಿಯ ಸಮಯವಾಗಿತ್ತು... ಇನ್ನೂ ಒಂದಷ್ಟು ಬೆಳಕಿತ್ತು...ಆದರೆ ಮನದಲ್ಲಿ ಅವ್ಯಕ್ತ ಭಯ... ಏನೋ ಗೊತ್ತಿಲ್ಲ... ಎದೆ ಸಣ್ಣಗೆ ಢವಢವಿಸುತ್ತಿತ್ತು... ಎಷ್ಟಾದರೂ ನಾವು ಮಾಡುತ್ತಿರುವುದು ಸರಿಯೇ...? ಎಂಬ ಸಣ್ಣದೊಂದು ಸಂದೇಹ ಮನದೊಳಗೆ ಮನೆ ಮಾಡಿತ್ತು... ಹಿಡಿದ ಕಾರ್ಯ ಕೊನೆತಲುಪಲೇ ಬೇಕೆಂಬ ಛಲ ಒಂದೆಡೆ...ಹೊಸತೊಂದರ ಶೋಧದ ತವಕ ಮತ್ತೊಂದೆಡೆ... ಯಾರೂ ಈ ತನಕ ಕಂಡರಿಯದ ಹೊಸ ಜಾಗದ ಅನ್ವೇಷಣೆಯ ಹುಮ್ಮಸ್ಸು... ಇವೆಲ್ಲವೂ ಸೇರಿ ಧೈರ್ಯಮಾಡಿ ಮುಂದುವರಿದೆವು... ಆದರೆ...ನಮ್ಮ ಸಾಹಸಕ್ಕೆ ಹಂತ ಹಂತಕ್ಕೂ ಎಡರು...ತೊಡರುಗಳು... ಆತಂಕ ಮನದೊಳಗೆ ಮನೆಮಾಡಿತ್ತು...ಏನಾಗುವುದೋ ಎಂಬ ಕುತೂಹಲ ನಮ್ಮನ್ನು ಬಿಡದೆ ಕಾಡುತ್ತಿದ್ದವು...ಆದರೂ ಮುಂದುವರಿದೆವು...
ನಿಮಗೂ ಕುತೂಹಲವಾಗಿರಬಹುದಲ್ಲವೇ...? ಏನಿದೆಂಬ ಸಂದೇಹವೇ...? ಸೂರ್ಯನ ಕೆಂಪುಕಿರಣಗಳು ದೂರದ ಬಾನಲ್ಲಿ ಕಾಣುತ್ತಿದ್ದವು...ಆದರೆ ಒಂದು ಚೂರೂ ಈ ಭಾಗದ ನೆಲದ ಮೇಲೆ ಬೀಳುವ ಪ್ರಯತ್ನವನ್ನು ಸಹ ಅವು ಮಾಡುತ್ತಿರಲಿಲ್ಲ. ಕಾರಣ ಅಷ್ಟೂ ದಟ್ಟವಾಗಿ ಬೆಳೆದ ಕಾನನ... ಕಾನನ ಗರ್ಭದೊಳು ನಮ್ಮ ಪ್ರವೇಶ...
ಕಾಲಿಡಲು ಭಯ...ಕುರುಚಲು ಪೊದೆಗಳು... ನೆಲವೇ ಕಾಣದಷ್ಟು ದಟ್ಟನೆ ಬೆಳೆದ ಕಾಡು ಬಳ್ಳಿಗಳು, ಹುಲ್ಲುಗಳು... ಒಂದಷ್ಟು ಮುಂದೆ ಸಾಗಿದಂತೆ ಸುರಳಿ ಸುರಳಿಯಾಗಿ ವಿವಿಧಾಕಾರಗಳಲ್ಲಿ ನೇತಾಡುತ್ತಿರುವ ದಪ್ಪನೆಯ ಬಳ್ಳಿಗಳು.. ಬಾನೆತ್ತರಕ್ಕೆ ಬೆಳೆದುನಿಂತ ವೈವಿಧ್ಯಮಯ ಸಸ್ಯ ಸಂಕುಲ... ವಿಕಾರವಾಗಿ ಚೀತ್ಕರಿಸುವ ಜೀರುಂಡೆಗಳ ಸದ್ದು... ನಮ್ಮ ಹೆಜ್ಜೆ ಸಪ್ಪಳಕ್ಕೆ...ಟ್ವಿಟ್...ರ್..ಟ್ವಿಟ್...ರ್ ಸದ್ದುಮಾಡುತ್ತಿದ್ದ ಅದ್ಯಾವುದೋ ಒಂದು ಪಕ್ಷಿ ಪ್ರುರ್...ರ್...ನೆ ಹಾರಿ ಹೋಯಿತು... ನಮ್ಮ ಕಾಲ ಹೆಜ್ಜೆಯ ಸದ್ದು ಹಾಗೇ ಸಾಗುತ್ತಿತ್ತು... ಅಷ್ಟರಲ್ಲೇ ಧುತ್ತನೆ ಹೆದರಾದ ಹಳದಿವರ್ಣದ ನಾಗರಾಜ...ಈಗಂತೂ ನಿಜಕ್ಕೂ ನಮ್ಮೆದೆಯ ಸದ್ದು ನಮಗೇ ಕೇಳತೊಡಗಿತು...

ಕಾರಣ ಇಷ್ಟೇ... ಋಷಿ ಮೂಲ ಹಾಗೂ ನದೀ ಮೂಲ ಹುಡುಕಬಾರದೆಂಬ ಹಿರಿಯರ ಮಾತು ಕ್ಷಣ ಕ್ಷಣಕ್ಕೆ ಮನದಲ್ಲಿ ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಮರುಕಳಿಸುತ್ತಿದ್ದವು... ಹೌದು ನಾವು ನದೀ ಮೂಲವೊಂದರ ಶೋಧನೆಗೆ ತೆರಳಿದ್ದವು...!
ಅದು ಹತ್ತಾರು ವರುಷದ ಹಿಂದಿನ ಘಟನೆ... ಎಲ್ಲೋ ತೇಲಿ ಬಂದ " ನಂದಿನಿ ನದಿಯ ತಟದಲ್ಲಿ ... ಶ್ರೀ ಕ್ಷೇತ್ರ ಕಟೀಲಿನಲಿ..." ಎಂಬ ಹಾಡು ಅದ್ಯಾಕೋ ಅತ್ಯಂತ ಆಸಕ್ತಿ ಹುಟ್ಟಿಸಿತ್ತು. ಅಂದಿನಿಂದ ನಂದಿನಿ ನದೀ ಎಂಬ ಹೆಸರು ಮನದಲ್ಲಿ ಅಚ್ಚೊತ್ತಿತ್ತು. ಅದೇ ನಂದಿನಿ ನದಿಯ ಮೂಲ ಯಾವುದೆಂಬ ಕುತೂಹಲ ದಿನ ದಿನಕ್ಕೆ ಅಧಿಕವಾಗುತ್ತಾ ಸಾಗಿತು...ಅಂತೂ ಮೂಲ ಶೋಧಿಸುವ ಸುನಿಧ ಒದಗಿಯೇ ಬಿಟ್ಟಿತು.
ನಂದಿನಿ ನದಿಯ ಕುರಿತು ಕಟೀಲು ಕ್ಷೇತ್ರದಲ್ಲೊಂದು ಐತಿಹ್ಯವಿದೆ. ನಂದಿನಿ ಕಾಮಧೇನಿವಿನ ಮಗಳು. ಬರಗಾಲ ನಿವಾರಣೆಗಾಗಿ ಇಳೆಗೆ ಬರಲು ವಿನಂತಿಸಿದರೂ ಆಕೆ ಒಪ್ಪಲಿಲ್ಲ. ಅದಾಗ ಜಾಬಾಲಿ ಮುನಿಯ ಶಾಪದಿಂದ ಮಾಘಶುದ್ದೆ ಪೌರ್ಣಮಿಯಂದು ನಂದಿನಿ ನದಿಯಾಗಿ ಹರಿದಳು.


ಕನಕಾದ್ರಿಯಲ್ಲಿ ಹುಟ್ಟಿನ ಪಡುಗಡಲು ಸೇರುತ್ತಾಳೆ.ತನ್ಮೂಲಕ ಬರಗಾಲ ನಿವಾರಣೆಯಾಗುತ್ತದೆ. ಈ ನದಿಯ ಕಟಿ ಪ್ರದೇಶದಲ್ಲಿ ದುರ್ಗಾ ಮಾತೆ ಲಿಂಗರೂಪಿಣಿಯಾಗಿ ಆವಿರ್ಭವಿಸಿದ ಕಾರಣಕ್ಕೆ ಕಟೀಲು ಎಂಬ ಹೆಸರು ಬಂತು. ಮುಂದೆ ಈ ಕ್ಷೇತ್ರ ಕಾರಣೀಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯುತ್ತದೆ ಎಂಬುದು ಈ ಕಥೆಯ ಸಾರಾಂಶ.
ಈ ಕಥೆಯಲ್ಲಿದ್ದಂತೆ "ಕನಕಾದ್ರಿ" ಪ್ರದೇಶದ ಹುಡುಕಾಟಕ್ಕೆ ನಮ್ಮ ತಂಡ ಸಿದ್ಧಗೊಂಡಿತು. ಕನಕಾದ್ರಿ ಈಗಿನ ಮಿಜಾರು ಪ್ರದೇಶಕ್ಕೆ ಸನಿಹವಾದುದು ಎಂಬ ಅಂಶ ನಮ್ಮ ಗಮನಕ್ಕೆ ಬಂತು. ಮಿಜಾರು ಮೂಡಬಿದಿರೆಯಿಂದ ಸುಮಾರು ಎಂಟು ಕಿಲೋ ಮೀಟರ್ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸಿಗುವ ಈ ಪ್ರದೇಶ ಮೂಡಬಿದಿರೆಯಿಂದ ಮಂಗಳೂರಿಗೆ ಸಾಗುವ ಹೆದ್ದಾರಿಯಲ್ಲಿ ಕಾಣಸಿಗುತ್ತದೆ. ಮಿಜಾರಿನಲ್ಲಿ ಕನಕಾದ್ರಿ ಎಂಬಸ್ಥಳವಿದೆಯೇ ಎಂಬ ನಮ್ಮ ತಂಡದ ಸಂದೇಹಕ್ಕೆ ಉತ್ತರ ನೀಡಿದವರು ಮಿಜಾರು ಗುತ್ತಿನ ಭಗವಾನ್ ದಾಸ್ ಶೆಟ್ಟಿ ಹಾಗೂ ಮುಂಡಬೆಟ್ಟು ಗುತ್ತಿನ ಸುಧಾಕರ ಪೂಂಜ. ಇವರೀರ್ವರು ನಮ್ಮ ತಂಡಕ್ಕೆ ಮಾರ್ಗದರ್ಶಕರಾಗಿ ಜೊತೆಯಾದರು.

ಅಲ್ಲಿಂದ ನಮ್ಮ ಪಯಣ ಆರಂಭ. ಮಿಜಾರಿನಿಂದ ಸರಿಸುಮಾರು ಎರಡು ಕಿಲೋಮೀಟರ್ಗಳಿಗೂ ಅಧಿಕ ಹಾದಿ ಕ್ರಮಿಸಿದೆವು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾನನ. ಎಲ್ಲಿನೋಡಿದರೂ ಮರಗಳು... ಅದರ ನಡುವೆ ನಮ್ಮ ಪಯಣ... ಹೆಜ್ಜೆ ಹೆಜ್ಜೆಗೂ ಆತಂಕದ ಸ್ಥಿತಿ... ತರಗೆಲೆಗಳ ಮಧ್ಯೆ ನಾಗಾರಾಜ ಎಲ್ಲಿ ಎದುರಾಗುತ್ತಾನೋ ಎಂಬ ಭಯ... ಒಂದೆರಡು ನಾಗರಾಜನ ಪ್ರತ್ಯಕ್ಷ ದರ್ಶನವಾದನಂತರವಂತೂ ಈ ಸಾಹಸ ಬೇಡವೇ ಬೇಡ ಎಂದು ಕಾಲಿಗೆ ಬುದ್ದಿಹೇಳುವ ಮನಸ್ಸೂ ಒಂದೆಡೆಯಾಗಿತ್ತು. ಆದರೂ ಛಲ ಬಿಡದೆ ಸಾಗಿದೆವು. ಮುಂದೆ ಸಾಗುತ್ತಿದ್ದಂತೆ ಅದೊಂದು ಕಡಿದಾದ ಪ್ರದೇಶ. ಅದರೊಳಗೊಂದು ಪುರಾತನ ನಾಗಬನ. ನಾಗಬದಲ್ಲಿ ನಾಗರ ಕಲ್ಲುಗಳಿವೆ. ಜೊತೆಗೆ ನೆಲತಾಗುವ ಬಿಳಲುಗಳು...ದಟ್ಟನೆಯ ಹಸಿರ ರಾಶಿ... ಕಣ್ಣಿಗೆ ಕಾಣುವ ನಿಜನಾಗ!...ಇವೆಲ್ಲವನ್ನೂ ನೋಡುತ್ತಾ ನೋಡುತ್ತಾ ಮುಂದೆ ಸಾಗಿದೆವು... ಅದಾಗಲೇ ಬೃಹದಾಕಾರದಲ್ಲಿ ನಿರುಮ್ಮಳ ನೀರು ವಿಸ್ತಾರವಾಗಿ ಹರಿವಿನಿಂತಂತ ಸರೋವರವೊಂದು ಕಾಣಸಿಕ್ಕಿತು. ನಮ್ಮ ಸಂತಸಕ್ಕೆ ಪಾರವೇ ಇಲ್ಲ... ಆದರೆ ಈ ನೀರಿನ ಮೂಲವೆಲ್ಲಿ ಎಂಬ ಕುತೂಹಲ...

ಅಲ್ಲಿಂದ ಎಡಭಾಗಕ್ಕೆ ಹೊರಳಿ ಬಾಗಿ ಕತ್ತಲಲ್ಲಿ ಹಾದಿ ಮಾಡುತ್ತಾ ನೀರ ಹಾದಿಯನ್ನೇ ಅನುಸರಿಸಿ ನೀರಿಗೆ ವಿರುದ್ಧವಾಗಿ ಸಾಗತೊಡಗಿದೆವು. ಹೆಜ್ಜೆ ಹೆಜ್ಜೆಗೆ ನೀರಲ್ಲಿ ನಾಗದರುಶನವಾಗುತ್ತಿತ್ತು. ಬಹು ಜಾಗರೋಕತೆಯಿಂದಲೇ ನಮ್ಮ ಪಯಣ ಮುಂದುವರಿಸಿದೆವು. ನೀರ ಹಾದಿ ಕಿರಿದಾಗತೊಡಗಿತು. ಅದೇನೋ ಅವ್ಯಕ್ತವಾದ ಅನುಭವ... ಕಾನನ ಗರ್ಭದೊಳು ಸಾಗುತ್ತಿದ್ದಂತೆಯೇ ಸಹಜವಾಗಿಯೇ ಅಳುಕು...ಜೊತೆಗೆ ತಣ್ಣನೆಯ ಅನುಭವ... ಬಂಡೆಗಳನ್ನೇರಿ, ತೊರೆಯ ಮೂಲವನ್ನು ಹುಡುಕುವ ಆಸಕ್ತಿಯಿಂದ ಮತ್ತಷ್ಟು ದೂರ ಸಾಗಿದೆವು... ಕಲ್ಲ ಬಂಡೆಗಳ ನಡುವಿನಿಂದ ನೀರಧಾರೆಯ ಸದ್ದು ಕೇಳಿಬರಲಾರಂಭಿಸಿತು...ಅಂತೂ ಮೂಲ ಶೋಧಿಸಿದೆವು ಎಂಬ ನಿಟ್ಟುಸಿರು ಬಿಡುತ್ತಿದ್ದಂತೆಯೇ ಮತ್ತೆ ನಿರಾಸೆ...ಇದು ಮೂಲ ಅಲ್ಲ ಎಂಬ ಸಂದೇಹ...ಮತ್ತೆ ಪ್ರಯಾಸದ ಪ್ರಯಾಣ...ಮತ್ತೂ ಮುಂದೆ ಸಾಗಿದೆವು...ಕತ್ತಲೆ ಪೂರ್ಣವಾಗಿತ್ತು... ಕೊನೆಗೂ ನಾವು ಗೆದ್ದುಬಿಟ್ಟೆವು.. ಅದೊಂದು ತುಸು ವಿಶಾಲ ಪ್ರದೇಶ... ನಾಲ್ಕಾರು ಉಂಡೆ ಕಲ್ಲುಗಳು...ಜೊತೆಗೆ ಒಂದಷ್ಟು ಭೀಕರ ಸ್ವರೂಪದ ಮರದ ಕಾಂಡ... ಅದರ ಮಧ್ಯೆ ಹನಿ ಹನಿಯಾಗಿ ಜಿನುಗುವ ನೀರು...ಅದೇ ನಂದಿನಿ ನದಿಯ ಮೂಲ!...ಕೊನೆಗೂ ನಂದಿನೀ ನದೀ ಮೂಲ ಶೋಧಿಸಿದ ಉಲ್ಲಾಸ ನಮ್ಮದು... ಅತ್ಯಪರೂಪದ ವೃಕ್ಷಸಂಕುಲದ ಮಧ್ಯೆ ನಂದಿನಿಯ ಉಗಮ... !
ಅಲ್ಲಿಂದ ತೊರೆಯಾಗಿ ಸಾಗುವ ನಂದಿನಿ ಮಿಜಾರಿಗೆ ಸಾಗಿ ತೋಡಿನ ರೂಪದಲ್ಲಿ ಮುಂದುವರಿಯುತ್ತಾಳೆ. ಅಲ್ಲಿಂದ ನೀಕರ್ೆರೆ, ಕಟೀಲು, ಎಕ್ಕಾರು , ಸೂರಿಂಜೆ , ಶಿಬರೂರು , ಪಾವಂಜೆ ಮೂಲಕ ಕೂಳೂರು ಪ್ರದೇಶದಲ್ಲಿ ಫಲ್ಗುಣೀ ನದೀಗೆ ಜೊತೆಯಾಗಿ ಪಡುವಣ ಕಡಲಿಗೆ ಸೇರುತ್ತಾಳೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಡಲು ಸೇರುವ ಏಕೈಕ ನದಿ ಈ ನಂದಿನಿ...
ಕನಕಗಿರಿಗೆ ಬಂಗಾರ ಗುಡ್ಡೆ ಎಂಬ ಹೆಸರು ಇದೆ. ಇಲ್ಲಿ ನಿಧಿ ಇರಬಹುದೆಂಬ ಊಹೆಯೂ ಇದೆ. ಬಂಗಾರದ ನಿಕ್ಷೇಪ ಈ ಭಾಗದಲ್ಲಿ ಇದೆ ಎಂಬುದು ಬ್ರಿಟಿಷ್ ಕಾಲದಲ್ಲಿ ದಾಖಲಾದ ಸಂಗತಿಯಾಗಿದೆ. ಇದಕ್ಕೆ ಪೂರಕ ದಾಖಲೆಗೂ ಲಭ್ಯವಿದೆ.


ಹರೀಶ್ ಕೆ.ಆದೂರು


3 comments:

Anonymous said...

Nandini Nadiya kuritu tilisiddakke dhanyavadagalu Sir.

suresh mayasandra said...

Lekhana tumba chennagide.
Mayasandra Suresh

Anonymous said...

Thank you very much for the information.

Post a Comment