ಪ್ರಾದೇಶಿಕ ಸುದ್ದಿ
ಮಂಗಳೂರು: ದಕ್ಷಿಣಕನ್ನಡ ,ಉಡುಪಿ, ಕಾಸರಗೋಡು ಜಿಲ್ಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದಿ.ಹಾರನಹಳ್ಳಿ ರಾಮಸ್ವಾಮಿ ಸ್ಮರಣಾರ್ಥ ಜಿಲ್ಲಾ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯನ್ನು ಶನಿವಾರ (ಜ.30) ಕೊಡಿಯಾಲಬೈಲ್ ಕರ್ಣಾಟಕ ಬ್ಯಾಂಕ್ ಆಡಿಟೋರಿಯಂನಲ್ಲಿ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಲೋಕಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ನಾಡಿನ ಹಿರಿಯ ಪತ್ರಿಕೆ `ಸಂಯುಕ್ತ ಕರ್ನಾಟಕದ' ವಿದ್ಯಾರ್ಥಿಗಳ ಪುರವಣಿ,ಪುಟಾಣಿಗಳ ಪುರವಣಿ `ಕಿಂದರಿಜೋಗಿ ಹಬ್ಬ'ಕ್ಕೆ ಇದೀಗ ಸಿದ್ಧತೆಗಳು ಪೂರ್ಣಗೊಂಡಿವೆ.ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯ - ರಾಷ್ಟ್ರ
ಫೆ.3-7: ಸ್ವರಾಜ್ಯಮೈದಾನದಲ್ಲಿ
ಮೂಡಬಿದಿರೆ:ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 3ರಿಂದ 7ರ ತನಕ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಬಾಲ್ಬ್ಯಾಂಡ್ಮಿಂಟನ್ ಚಾಂಪಿಯನ್ ಶಿಪ್ ನಡೆಯಲಿದೆ. ರಾಷ್ಟ್ರದ 65ವಿಶ್ವವಿದ್ಯಾನಿಲಯಗಳ 650ಕ್ರೀಡಾಪಟುಗಳು ಹಾಗೂ 120 ತರಬೇತುದಾರರು ಭಾಗವಹಿಸಲಿದ್ದಾರೆ.ಇದಕ್ಕಾಗಿ ಪೂರ್ವಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 6 ಅಂಗಣಗಳಲ್ಲಿ ಬಾಲ್ ಬ್ಯಾಂಡ್ಮಿಂಟನ್ ನಡೆಯಲಿದ್ದು ಕರ್ನಾಟಕದ ಪ್ರಥಮ ಏಕಲವ್ಯ ಪ್ರಶಸ್ತಿ ವಿಜೇತ ಬಾಲ್ಬ್ಯಾಂಡ್ಮಿಂಟನ್ ಪಟು ಮಹಮ್ಮದ್ ಇಲ್ಯಾಸ್ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಪಂದ್ಯಾಟ ನಾಕೌಟ್ ಕಮ್ ಲೀಗ್ ಮಾದರಿಯಲ್ಲಿ ನಡೆಯಲಿದೆ.
ಕ್ವಾರ್ಟರ್ ಫೈನಲ್ ತನಕ ನಾಕೌಟ್ ಹಾಗೂ ಸೆಮಿಫೈನಲ್ ಪಂದ್ಯಾಟ ಲೀಗ್ ಮಾದರಿಯಲ್ಲಿ ನಡೆಯಲಿದೆ. ಕಳೆದ ಬಾರಿ ಅಖಿಲ ಭಾರತ ವಿ.ವಿ.ಪಂದ್ಯಾಟ ಮದ್ರಾಸ್ ವಿ.ವಿ.ಆಶ್ರಯದಲ್ಲಿ ನಡೆದಿತ್ತು.
ತಮಿಳ್ನಾಡಿನ ಅಣ್ಣಾಮಲೈ ವಿ.ವಿ. ಕಳೆದ ಬಾರಿಯ ವಿಜೇತ ತಂಡವಾಗಿ ಹೊರಹೊಮ್ಮಿತ್ತು. ಆಂದ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿ.ವಿ.ರನ್ನರ್ಸ್ ಅಪ್ ಪಡೆದಿತ್ತು.ಮಂಗಳೂರು ವಿ.ವಿ. ತೃತೀಯ ಸ್ಥಾನಪಡೆದುಕೊಂಡಿತ್ತು.
ತರಬೇತಿ: ಈ ಬಾರಿಯ ಬಾಲ್ ಬ್ಯಾಂಡ್ಮಿಂಟನ್ ಚಾಂಪಿಯನ್ ಶಿಪ್ಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ತಂಡದ ನಾಯಕ ಪವನ್ ನೇತೃತ್ವದಲ್ಲಿ ವ್ಯವಸ್ಥಿತ ತರಬೇತಿ ನಡೆಯುತ್ತಿದೆ. ಫೆಬ್ರವರಿ 7ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರದ ಪ್ರಥಮ ಅರ್ಜುನ ಪ್ರಶಸ್ತಿ ವಿಜೇತ ಬಾಲ್ ಬ್ಯಾಂಡ್ಮಿಂಟನ್ ಆಟಗಾರ ಆಂದ್ರಪ್ರದೇಶದ ಪಿಚ್ಚಯ್ಯ ಬಹುಮಾನ ವಿತರಿಸಲಿದ್ದಾರೆ.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ನಿರಂತರವಾಗಿ ಶಿಕ್ಷಣ, ಸಾಹಿತ್ಯ, ಕ್ರೀಡೆ, ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಏಕಲವ್ಯ ಕ್ರೀಡಾಕೂಟ, ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ ಮೊದಲಾದ ರಾಷ್ಟ್ರೀಯಮಟ್ಟದ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದೆ.
ರಾಜ್ಯ,ರಾಷ್ಟ್ರೀಯಮಟ್ಟದ ಕ್ರೀಡಾಪಟುಗಳನ್ನು ನಾಡಿಗೆ ನೀಡಿದ ಹೆಮ್ಮೆ ಆಳ್ವಾಸ್ ಶಿಕ್ಷಣ ಸಂಸ್ಥೆಗಿದೆ ಎಂದವರು ತಿಳಿಸಿದರು. ಮಂಗಳೂರು ವಿ.ವಿ.ದೈ.ಶಿ.ನಿ.ನಾಗಲಿಂಗಪ್ಪ, ಆಳ್ವಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್, ಉಪನ್ಯಾಸಕ ಹರೀಶ್ ಆದೂರು ಉಪಸ್ಥಿತರಿದ್ದರು.
ಪ್ರಾದೇಶಿಕ ಸುದ್ದಿಸಕಲೇಶಪುರ : ಯಸಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ದ ಸೂಕ್ತ ಕ್ರಮ ಕೈ ಗೊಳ್ಳುವ ಬರವಸೆಯನ್ನು ಜಿ.ಪಂ.ಕಾರ್ಯನಿರ್ವಹಣಾದಿಕಾರಿ ನೀಡಿದ ಮೇರೆಗೆ ಗ್ರಾ.ಪಂ. ಎದುರು ಸೋಮವಾರದಿಂದ ಆರಂಬಿಸಿದ್ದ ಸಾಮ್ರಾಟ್ ಅಶೋಕ್ ಯುವಕ ಸಂಘದ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ.ಬುಧವಾರ ಇಬ್ಬರು ಅಸ್ವಸ್ಥಗೊಂಡು ಪಟ್ಟಣದ ಕ್ರಾಫರ್ಡ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಂಘದ ಅಧ್ಯಕ್ಷ ದೇವೇಂದ್ರ ಹಾಗೂ ಶರೀಪ್ ಅಸ್ವಸ್ಥಗೊಂಡಿರುವ ಪ್ರತಿಭಟನಾಕಾರರಾಗಿದ್ದು, ಯಸಳೂರಿನಲ್ಲಿ ಕಾರ್ಯಕರ್ತರು ಉಪಾವಾಸ ಸತ್ಯಾಗ್ರಹ ಮುಂದುವರಿಸಿದ್ದರು. ಪ್ರತಿಭಟನಾಕಾರರ ಬೇಡಿಕೆಗಳನ್ನು ತಾಲ್ಲೂಕು ಆಡಳಿತ ಈಡೇರಿಸಲು ಮುಂದಾಗದಿರುವುದು ಚಳವಳಿ ತೀವ್ರವಾಗಲು ಕಾರಣವಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಪವನ್, ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಧರಣಿ ಪ್ರಾರಂಬಿಸಿದ್ದು, ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿಲ್ಲ. ಪರೋಕ್ಷವಾಗಿ ತಾಲ್ಲೂಕು ಆಡಳಿತ ಭ್ರಷ್ಟರನ್ನು ರಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೇಸ್ ಖಂಡನೆ: ಸರಕಾರದ ವಿವಿಧ ಯೋಜನೆಗಳನ್ನು ಗ್ರಾ.ಪಂ.ನ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗ ದುರ್ಬಳಕೆ ಮಾಡಿಕೊಂಡಿದೆ ಎಂದು ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೇಸ್ ಮುಖಂಡರು ತಹಸೀಲ್ದಾರ್ ಚಂದ್ರಮ್ಮ ರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಜ್.ಬಿ. ಕಾಂತರಾಜ್,ಡಿ.ಸಿ.ಸಣ್ಣಸ್ವಾಮಿ,ಲೋಕೇಶ್,ಮ್ನಸೂರ್ ಮುಂತಾದವರು ಇದ್ದರು.
ರಾಜ್ಯ - ರಾಷ್ಟ್ರ
ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ.ಎಸ್.ಈಶ್ವರಪ್ಪ ರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು. ಈ ಸಂದರ್ಭನಿರ್ಗಮನಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್ ಉಪಸ್ಥಿತರಿದ್ದರು.
ರಾಜ್ಯ - ರಾಷ್ಟ್ರ
ಹಂಪಿ:`ಅಂತರಂಗದ ಭಾವಲಹರಿ ಕವಿತೆ- ಬದುಕಿನ ಅನುಭವಗಳಿಂದ ಮಡುಗಟ್ಟಿ ಹೊರಹೊಮ್ಮಬೇಕು, ಕಾವ್ಯ ಸಮಾಜಮುಖಿಯಾಗಿರಬೇಕು ಎನ್ನುವ ಆಶಯವನ್ನು ಸಾಹಿತಿ ಡಾ. ದೊಡ್ಡರಂಗೇಗೌಡರು ವ್ಯಕ್ತಪಡಿಸಿದರು.
ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಪ್ರಯುಕ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಂಪಿಯ ಕಲ್ಲು ಕಲ್ಲುಗಳೂ ವೀಣೆಯ ನಾದವನ್ನು ಹೊರಹೊಮ್ಮಿಸುತ್ತವೆ. ದಕ್ಷ ಆಡಳಿತದೊಂದಿಗೆ ನವರಸ ಕಾವ್ಯಗಳ ವಿಹಾರದಲ್ಲಿ ಜನಮನವನ್ನು ತಣಿಸಿದ ರಾಯರ ರಾಯ ಶ್ರೀಕೃಷ್ಣದೇವರಾಯ. ಅಂತಹ ನೆಲದಲ್ಲಿ ಇಂದು ಕವಿತಾ ವಾಚನ-ಗಾಯನ ಬಹಳಷ್ಟು ಅರ್ಥಪೂರ್ಣವೆಂದು ಕವಿ ದೊಡ್ಡರಂಗೇಗೌಡರು ತಿಳಿಸಿದರು.
'ಬೌದ್ಧಿಕವಾಗಿದ್ದು ಭಾವವಿಲ್ಲದಿದ್ದರೆ ಕವಿತೆ ನೀರಸವಾಗುತ್ತದೆ. ಅಂತ ಕವಿತೆ ಜನಮನದಲ್ಲಿ ಬೇರೂರುವುದಿಲ್ಲ. ಜೀವನ ಭಾವನೆಗಳ ಸಂಗಮವೇ ಕವಿತೆಯಾಗಬೇಕು. ಅನುಭವದ ಪುನರ್ಮನನವೇ ಕವಿತೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ನುಡಿದಂತೆ ನಡೆಯುವ ಗುಣವನ್ನು ಕವಿ ರೂಪಿಸಿಕೊಳ್ಳಬೇಕು. ಬದುಕು- ಬರಹ ಕವಿಗೆ ಅಭೇದ್ಯವಾಗಬೇಕು. ಸಮಾಜಮುಖಿ ಕಾವ್ಯರಚನೆಗೆ ಈ ವೇದಿಕೆ ಸತ್ಪ್ರೇರಣೆಯಾಗಲಿ ಎನ್ನುವ ಆಶಯವನ್ನು ಕವಿಗಳು ವ್ಯಕ್ತಪಡಿಸಿದರು.
`ಅದ್ವಿತೀಯ ಶ್ರೀಕೃಷ್ಣದೇವರಾಯ' ಎನ್ನುವ ಕವನವನ್ನು ದೊಡ್ಡರಂಗೇಗೌಡರು ವಾಚಿಸಿದರು. ಕವಿಗಳು ವಾಚಿಸಿದ ಕವನವನ್ನು ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯಲ್ಲಿ ವೇದಿಕೆಯಲ್ಲೇ ಹಾಡಲಾಯಿತು.ಅಧ್ಯಕ್ಷತೆ ವಹಿಸಿದ್ದ ಡಾ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರು ಮಾತನಾಡಿ `ವೇದಿಕೆ ಬೃಹಸ್ಪತಿ- ಸಭೆ ಸಾಕ್ಷಾತ್ ಸರಸ್ವತಿ' ಕವಿತಾ ವಾಚನ ಕೇಳಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೇಳುಗರು ಸೇರಿರುವುದು ತಮಗೆ ಸಂತಸ ತಂದಿದೆ ಎಂದರು.
'ನಾನು ಹಾಡುವುದು ನನಗೆಂದು ,
ಎದೆಭಾರ ಇಳಿಯಲೆಂದು,
ಎಲ್ಲ ಮರೆತು ಕೇಳುತಿಹ ನಿಮಗೆಂದು' ಎನ್ನುವ ಕವನ ವಾಚಿಸಿದರು.
ಬಸವರಾಜ ವಕ್ಕುಂದ, ರವಿಕೊಟಾರಗಸ್ತಿ, ಡಾ.ಎಲ್ ಎನ್ ಮುಕುಂದರಾಜ್, ಡಾ. ವಿಕ್ರಮ್ ವಿಸಾಜಿ, ಎನ್ ಕೆ ಹನುಮಂತಯ್ಯ, ಡಾ. ಸತ್ಯಾನಂದ ಪಾತ್ರೋಟ, ಡಾ. ಲತಾಗುತ್ತಿ, ಸಂಗಮೇಶ್, ದೊಡ್ಡಾಲೂರು ಲಿಂಗಪ್ಪ, ಸಿದ್ದರಾಮ ಕಲ್ಮಠ, ಸಿದ್ದು ದೇವರಮನಿ, ಪರಮೇಶ್ವರಯ್ಯ ಸೊಪ್ಪಿಮಠ, ಶಿವಲಿಂಗಪ್ಪ ಬಳ್ಳಾರಿ, ವಿಘ್ನೇಶ್ವರ ಹಾಗೂ ಗೀತಾಭಟ್ ತಮ್ಮ ಕವನಗಳನ್ನು ವಾಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನುಬಳಿಗಾರ್, ಜಂಟಿನಿರ್ದೇಶಕರಾದ ಶಂಕರಪ್ಪ ಉಪಸ್ಥಿತರಿದ್ದರು.
ರಾಜ್ಯ - ರಾಷ್ಟ್ರ
ಹಂಪಿ :ನಗುವೇ ನಿಜವಾದ ಜಾತ್ಯತೀತ ಜನತೆಯ ಪಕ್ಷ ಎಂದು ಗಂಗಾವತಿಯ ಬಿ. ಪ್ರಾಣೇಶ ಅವರು ಹೇಳಿದಾಗ ಪ್ರೇಕ್ಷಕ ಸಮೂಹದಲ್ಲಿ ಭಿನ್ನಮತದ ಸುಳಿವೇ ಇರಲಿಲ್ಲ.ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ನಗೆಯ ಅಲೆಗಳ ಜಾತ್ರೆಯಲ್ಲಿ ಅಸಂಖ್ಯೆ ಪ್ರೇಕ್ಷಕರು ನಗೆಗಡಲಲ್ಲಿ ಮಿಂದರು.
ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಜನೋತ್ಸವದ ಎರಡನೇ ದಿನವಾದ ಇಂದು ಜರುಗಿದ ಹಾಸ್ಯಗೋಷ್ಠಿಯಲ್ಲಿ ನಾಡಿನ ಖ್ಯಾತ ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್, ಬಿ. ಪ್ರಾಣೇಶ್ ಹಾಗೂ ಎಂ.ಎಸ್. ನರಸಿಂಹಮೂರ್ತಿ ಅವರು ಹಾಸ್ಯ ಚಟಾಕಿಗಳ ಮೂಲಕ ನಗೆ ಪಟಾಕಿಯನ್ನೇ ಸಿಡಿಸಿದರು.ಒಬ್ಬೊಬ್ಬರು ಒಂದೊಂದು ನಗೆ ಪ್ರಸಂಗವನ್ನು ಪ್ರಸ್ತಾಪಿಸತ್ತಿದ್ದಂತೆಯೇ ಜನ ನಕ್ಕಿದ್ದೇ ನಕ್ಕಿದ್ದು. ಜನರ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡ ಈ ಕಲಾವಿದರ ಹಾಸ್ಯ ಪ್ರವಾಹದಲ್ಲಿ ಸಮಯ ಸರಿದದ್ದೇ ಗೊತ್ತಾಗಲಿಲ್ಲ.
'ಕೃಷ್ಣದೇವರಾಯ ಬಿದಿಗೆ ಚಂದ್ರಮ'
ಶ್ರೀ ಕೃಷ್ಣದೇವರಾಯನ ಆಸ್ಥಾನದ ವಿದೂಷಕ ತೆನಾಲಿ ರಾಮಕೃಷ್ಣ ಮೊಘಲರ ದರ್ಬಾರಿನಲ್ಲಿ ವಿಜಯನಗರದ ಅರಸ ಕೃಷ್ಣದೇವರಾಯರನ್ನು ಬಿದಿಗೆಯ ಚಂದ್ರಮನೆಂದು ಬಣ್ಣಿಸಿದರಂತೆ. ಅದಕ್ಕೆ ರಾಜನ ಆಸ್ಥಾನಿಕರು ಆತನನ್ನು ಹೀಗಳೆದರಂತೆ. ತಕ್ಷಣವೇ ತೆನಾಲಿ ರಾಮಕೃಷ್ಣ , 'ಹುಣ್ಣಿಮೆ ಚಂದ್ರ ದಿನಗಳೆದಂತೆ ಕ್ಷೀಣವಾಗಿ ಅಮಾವಾಸ್ಯೆಯಂದು ಇಲ್ಲವಾಗುತ್ತಾನೆ. ಆದರೆ ಬಿದಿಗೆಯ ಚಂದ್ರ ದಿನೇ ದಿನೇ ಪ್ರವರ್ಧಮಾನನಾಗಿ, ಹುಣ್ಣಿಮೆಯಂದು ಹಾಲ ಬೆಳದಿಂಗಳು ಚೆಲ್ಲುತ್ತಾನೆಂದು ಪ್ರತ್ಯುತ್ತರ ನೀಡಿದನು. ಆತನ ಜಾಣ್ಮೆಗೆ ಎಲ್ಲರೂ ತಲೆದೂಗಿದರಂತೆ' ಎಂದು ಎಂ.ಎಸ್. ನರಸಿಂಹಮೂರ್ತಿ ಅವರು ಹೇಳಿದಾಗ ನೆರೆದ ಜನ ಸಮೂಹವೂ ತಲೆದೂಗಿತು.
ರಿಚರ್ಡ್ ಲೂಯಿಸ್ ಅವರು ಹೊಸಪೇಟೆಯ 'ಮೈನ್ಸ್, ವೈನ್ಸ್ ಮತ್ತು ಫೈ(ನಾ)ನ್ಸ್' ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡಿದರಲ್ಲದೆ, ಇಲ್ಲಿನ ಸೊಳ್ಳೆಗಳ ಜಾಣ್ಮೆಯನ್ನು ಕೊಂಡಾಡಿದರು.ಹಾಸ್ಯವನ್ನೇ ಪ್ರಾಣವಾಗಿಸಿಕೊಂಡ ಗಂಗಾವತಿಯ ಬಿ. ಪ್ರಾಣೇಶ್, ಮಕ್ಕಳಿಗೆ ಒತ್ತಡ ಹೇರಿ ಓದಿಸುವುದರ ವಿರುದ್ಧ ನಗೆಚಾಟಿ ಬೀಸಿದರು. ಒಂದು ಎರಡು ರಾಂಕ್ ಬರುವ ಡಿಗ್ರಿಯನ್ನು ಲೇವಡಿ ಮಾಡುತ್ತ, ಅಂತಹವರಿಗೆ 108 ಡಿಗ್ರಿ ಹೊಂದಿರುವ ಥರ್ಮಾಮೀಟರ್ ನೀಡಿ ಸನ್ಮಾನಿಸಬಾರದೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಪ್ರೇಕ್ಷಕ ಸಮೂಹವನ್ನು ಕೊನೆಯವರೆಗೂ ಹಿಡಿದಿಡುವಲ್ಲಿ ಯಶಸ್ವಿಯಾದ ಈ ಹಾಸ್ಯಗೋಷ್ಠಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಉದ್ಘಾಟಿಸಿದರು.ಅವರು ಈ ಸಂದರ್ಭದಲ್ಲಿ ಮಾತನಾಡಿ, ಆರೋಗ್ಯಕರ ಸಮಾಜಕ್ಕೆ ಆರೋಗ್ಯಕರ ಹಾಸ್ಯ ಒಳಿತನ್ನೇ ಮಾಡುತ್ತದೆ. ಎಲ್ಲ ವಯೋಮಾನಕ್ಕೆ ಒಪ್ಪುವ ಹಾಸ್ಯ ಒಳ್ಳೆಯ ಅಭಿರುಚಿ ಮೂಡಿಸುವುದು. ಹಾಸ್ಯವು ನಗೆಗಷ್ಟೇ ಸೀಮಿತವಾಗದೆ, ಸಮಾಜದಲ್ಲಿ ಜಾಗೃತಿಗೆ ಮುಂದಾಗಬೇಕೆಂದು ಅಭಿಪ್ರಾಯಪಟ್ಟರು.
ಅನಿಲ್ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು.
ವೈವಿಧ್ಯ
ಪ್ರೀತಿ,ಪ್ರೇಮ,ಸ್ನೇಹ,ಕರುಣೆ ಇವು ಮಾನವನ ಪ್ರತ್ಯೇಕವಾದ ಗುಣಗಳು. ಇವುಗಳ ಸಮ್ಮಿಲನವನ್ನೇ ಮಾನವೀಯತೆ ಎಂದು ಕರೆದರೆ ತಪ್ಪಾಗಲಾರದು ಎಂಬುವುದು ನನ್ನ ಅಭಿಪ್ರಾಯ. ಪ್ರೀತಿ,ಪ್ರೇಮ,ವಿಶ್ವಾಸದಿಂದಲೇ ಒಂದು ಸುಭದ್ರ ಸಮಾಜವನ್ನು ಕಟ್ಟಲು ಸಾಧ್ಯವಿದ್ದು ಒಂದು ನಾಡಿನ ಅಭಿವೃದ್ಧಿಯಲ್ಲಿ ಇವು ಮಹತ್ತರ ಪಾತ್ರವನ್ನು ವಹಿಸುತ್ತದೆ ಮತ್ತು ವಹಿಸಿದ ಉದಾಹರಣೆಗಳೂ ಸಾಕಷ್ಟಿವೆ.
ಆದರೆ ಏಕೋ ಏನೋ ಎಲ್ಲೋ ಒಂದು ಕಡೆ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಕೆಟ್ಟ ದಿನಗಳು ಬರುತ್ತಿದೆಯೇ ಎಂಬ ಭಾವನೆಯನ್ನು ಇತ್ತೀಚೆಗೆ ಕನ್ನಡ ನಾಡಿನಾದ್ಯಂತ ನಡೆಯುತ್ತಿರುವ ಘಟನೆಗಳು ಮನಸ್ಸಿನಲ್ಲಿ ಮೂಡಿಸುತ್ತಿರುವುದಂತೂ ಸತ್ಯ.ಪ್ರೀತಿ ಪ್ರೇಮ ಸೌಹಾರ್ದಕ್ಕೆ ಹೆಸರಾಗಿದ್ದ, ಕುವೆಂಪುರಂತಹ ಮಾನವತಾವಾದಿಗಳು, ಬಸವಣ್ಣನವರಂತಹ ವಚನಕಾರರು, ಸಂತ ಶಿಶುನಾಳಶರೀಫರಂಥ ಸೌಹಾರ್ದಪ್ರಿಯರು ಜನ್ಮತಳೆದ ಈ ನಾಡಿನಲ್ಲಿ ಇಂದು ಮಾನವೀಯತೆಯ ವಿರೋಧಿ ಶಕ್ತಿಗಳು ವಿಜ್ರಂಭಿಸುತ್ತಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ನಾವು ಮಾನವೀಯತೆಯನ್ನು ಮರೆಯುತ್ತಿದ್ದೇವೆಯೇ ಎಂಬ ಸಂಶಯವನ್ನು ಮೂಡಿಸುತ್ತದೆ.
ನಿಜ.. ಇತ್ತೀಚಿಗೆ ಕನ್ನಡ ನಾಡಿನಲ್ಲಿ ನಡೆದ ಘಟನೆಗಳು ಮಾನವನ ಸ್ವಭಾವಕ್ಕೆ ತಕ್ಕುದಾದುದಲ್ಲ. ಮಹಿಳೆಯರ ಮೇಲೆ ನಡೆದ ದಾಳಿ, ಧರ್ಮದ ಹೆಸರಿನಲ್ಲಿ ಧಾರ್ಮಿಕ ಮತಾಂಧರು ನಡೆಸುತ್ತಿರುವ ಧರ್ಮ ವಿರೋಧಿ ಪುಂಡಾಟಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಕಳಂಕಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮನುಷ್ಯನ ನಡುವೆ ಶಾಂತಿ ಹಾಗೂ ಸೌಹಾರ್ದತೆಯನ್ನು ಮೂಡಿಸಬೇಕಾದ ಧರ್ಮಗಳು ಇದು ಮಾನವರ ನಡುವೆ ಕಂದಕ ಮೂಡಿಸುತ್ತಿದೆ. ಪರಸ್ಪರ ಒಟ್ಟಿಗೆ ಜೀವಿಸುತಿದ್ದ ಜನ ಧರ್ಮದ ಹೆಸರಿನಲ್ಲಿ ವಿಭಜನೆಗೊಳ್ಳುತ್ತಿರುವುದು ಧಾರ್ಮಿಕ ಅಧಃಪತನದ ಸಂಕೇತ ಎಂದರೂ ತಪ್ಪಾಗಲಾರದು.
ಧರ್ಮಗಳು ಮಾನವನ ಕಲ್ಯಾಣಕ್ಕಾಗಿ ಸ್ಥಾಪಿತವಾಗಿವೆ. ಯಾವುದೇ ಧರ್ಮ ದ್ವೇಷವನ್ನು ಬಿತ್ತುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಗೆಲ್ಲು ಎಂದೇ ಜಗತ್ತಿನ ಎಲ್ಲಾ ಧರ್ಮಗಳು ಅದರ ಅನುಯಾಯಿಗಳಿಗೆ ಕರೆ ಕೊಡುತ್ತದೆ. ಆದರೆ ಧರ್ಮಗಳಲ್ಲಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಮತಾಂಧ ಶಕ್ತಿಗಳು ಧರ್ಮದ ವ್ಯಾಖ್ಯಾನವನ್ನೇ ತಿರುಚಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದನ್ನು ಕಾಣಬಹುದು. ಮನುಷ್ಯ ಮನುಷ್ಯನ ನಡುವೆ ಭಾಂದವ್ಯ ಮೂಡಿಸಬೆಕಿದ್ದ ಬೇಕಿದ್ದ ಧಾರ್ಮಿಕ ಆಚರಣೆಗಳು ಇಂದು ಒಡಕನ್ನು ಮೂಡಿಸುತ್ತಿದೆ. ದೀಪಾವಳಿಯ ದಿನದಲ್ಲಿ ಹಿಂದೂಗಳ ಜೊತೆ ಸೇರಿ ಹಬ್ಬ ಆಚರಿಸುತ್ತಾ ಪಟಾಕಿ ಹೊಡೆಯುತಿದ್ದ ಮುಸ್ಲಿಮರು, ಈದ್ ಹಬ್ಬಗಳಂದು ಮುಸ್ಲಿಮರ ಮನೆಗಳಲ್ಲಿ ಬಂದು ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತಿದ್ದ ಹಿಂದೂಗಳು, ಕ್ರೈಸ್ತರ ಸಾಂತ್ ಮೇರಿ ಹಬ್ಬದ ದಿನ ಇಗರ್ಜಿಗಳಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಲ್ಲುತಿದ್ದ ಎಲ್ಲಾ ಧರ್ಮದ ಜನರು ಈ ರೀತಿಯ ದೃಶ್ಯಗಳು ಇಂದು ಕ್ರಮೇಣ ಕಣ್ಮರೆಯಾಗುತ್ತಿವೆ. ಮನುಷ್ಯ ನಿಧಾನವಾಗಿ ಧರ್ಮದ ಅಮಲಿನಲ್ಲಿ ಮಾನವೀಯತೆಯನ್ನು ಮರೆಯುತ್ತಿರುವುದು ಈ ನಾಡಿನ ದುರಂತ ಎಂದೇ ಹೇಳಬಹುದು.
ಆದರೂ ಒಡೆದು ಹೋಗುತ್ತಿರುವ ಸಮಾಜವನ್ನು ರಕ್ಷಿಸಲು ಬೇಕಾದಷ್ಟು ಜನರು ಅಂದರೆ ಸೌಹಾರ್ದ ಪ್ರಿಯರು ಇಂದಿಗೂ ನಮ್ಮ ನಡುವೆ ಇದ್ದಾರೆ. ಜೊತೆಗೆ ಕನ್ನಡ ಖ್ಯಾತ ಕವಿಗಳೂ, ದಾರ್ಶನಿಕರೂ, ವಚನಕಾರರೂ ಬರೆದ ಸೌಹಾರ್ದ ಸಾಹಿತ್ಯಗಳೂ ಬೇಕಾದಷ್ಟಿವೆ. ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಪ್ರಯತ್ನಗಳು ನಿರೀಕ್ಷಿತ ಮಟ್ಟದ ವೇಗದಲ್ಲಿ ನಡೆಯುತ್ತಿಲ್ಲ ಎಂಬುವುದು ನಿಜವೇ ಆಗಿದ್ದರೂ ಅದಕ್ಕೆ ಬೇಕಾದಂತಹ ಪ್ರಯತ್ನಗಳನ್ನು ಮಾನವ ಪ್ರೇಮಿಗಳು ಮಾಡುತ್ತಿರುವುದಂತೂ ಸತ್ಯ. ಕ್ರಮೇಣ ಕನ್ನಡ ನಾಡು ಕವಿಗಳು ಕಂಡ ಚೆಲುವ ಕನ್ನಡ ನಾಡಾಗಲಿ. ಸರ್ವ ಜನಾಂಗದ ಶಾಂತಿಯ ತೋಟವಾಗಲಿ. ಬಾಡುತ್ತಿರುವ ಸ್ನೇಹದ ಹೂವು ಮತ್ತೆ ಅರಳಲಿ ಎಂದು ಹಾರೈಸೋಣ. ಜೊತೆ ಜೊತೆಗೆ ನಾವುಗಳೂ ಕನ್ನಡ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಮುಂದಾಗೋಣ... ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ...
- ಅಶ್ರಫ್ ಮಂಜ್ರಾಬಾದ್. ತಬೂಕ್. ಸೌದಿ ಅರೇಬಿಯಾ.
ವೈವಿಧ್ಯ
ಅಂದು ಬೆಲ್ಲುಹೊಡೆದಂತೆ ನಾ ಕ್ಲಾಸಿಗೋಡಲಿಲ್ಲ. ಗಂಭೀರವಾಗಿ ಬಂದ ಉಪಾನ್ಯಾಸಕರ ಮುಂದೆ ಮನಸ್ಸಿಲ್ಲದ ಮನಸ್ಸಿನೊಂದಿಗೆ ಕೈಕಟ್ಟಿ ಕೂರಲಿಲ್ಲ. ಕಣ್ತೆರೆದು ನಿದ್ದೆಮಾಡಲಿಲ್ಲ. ಪಾಠ ಕೇಳಲಿಲ್ಲವೆಂದೂ ಅವರು ಶಿಕ್ಷೆ ನೀಡಲಿಲ್ಲ. ಅರ್ಥವಾಗದ ಉತ್ತರಗಳನ್ನು ಉರುಹೊಡೆದು ಇಪ್ಪತ್ತುಸಲ ಬರೆಯಲಿಲ್ಲ.ಅಂದು ನಮಗೆಲ್ಲಾ ಹೊಸ ಅನುಭವ...
ಅಲ್ಲಿ ಕರಿಹಲಗೆಯೊಡನೆ ಬೆಳ್ಳಗಿನ ಸೀಮೆಸುಣ್ಣ ಅರ್ಥವಾಗದಂತೆ ಮಾತನಾಡಲಿಲ್ಲ. ಅಲ್ಲಿ ಕಂಡಿದ್ದು ಕಪ್ಪು ಬಂಡೆಗಳ ಮೇಲೆ ನೀರಧಾರೆಯ ಸರಸ. ಹನಿಹನಿ ನೀರೂ ಪಿಸುಗುಟ್ಟುತ್ತಿತ್ತು. ಅಂದು ದೃಶ್ಯಕಾವ್ಯದ ಪಾಠ ನಾಲ್ಕುಗೋಡೆಗಳ ನಡುವೆ ನಿದ್ದೆಬರಿಸುವ ಕ್ಲಾಸಿನಿಂದ ಮುಕ್ತಿ. ಮನಸ್ಸು ದೃಶ್ಯಕಾವ್ಯದ ಚಿತ್ತಾರ ಬಿಡಿಸಲು ತಯಾರಾಗಿತ್ತು. ಸಿಡಿಯುವ ಹನಿ,ಸೆಳೆಯುವ ಹಸಿರು, ಚಿಮ್ಮುವ ಉತ್ಸಾಹ, ಬೆನ್ನುತಟ್ಟುವ ಮಾರ್ಗದರ್ಶಕ...ಸುಪ್ತಮನಸ್ಸಿನಲ್ಲಡಗಿದ ದೃಶ್ಯಕವಿಗೆ ಸೂರ್ಯೋದಯವಾಗಲು ಇನ್ನೇನು ಬೇಕು?
ದಿಡುಪೆ ಜಲಪಾತದ ತಟದಲ್ಲಿ ಛಾಯಾಗ್ರಹಣ ತರಬೇತಿ...ಕಲ್ಪನಾ ಕಲೆಗೆ ಭಾವನಾತ್ಮಕ ವೇದಿಕೆ. ಜಾರುವ ಕಲ್ಲನ್ನು ಕೊರೆಯುವ ಚಳಿಯನ್ನು ಮೀರಿ ತಾವು ಸೆರೆಹಿಡಿದ ಚೊಚ್ಚಲಚಿತ್ರಗಳನ್ನು ಮತ್ತೆ ಮತ್ತೆ ಉತ್ಸಾಹದಿಂದ ವೀಕ್ಷಿಸಿ ತರಬೇತುದಾರ ಸುಧಾಕರ ಜೈನ್ ಬಳಿಸಾಗುವ ವಿದ್ಯಾರ್ತಿಸಮೂಹ ಅಂದು ಕ್ಲಾಸಿನಲ್ಲಿ ಆಕಳಿಸುವ ಜೋಲುಮೋರೆಯವರಾಗಿರಲಿಲ್ಲ. ಕುತೂಹಲ, ನೋಡಿದ್ದನ್ನೆಲ್ಲ ಸೆರೆಹಿಡಿಯುವ ಹಂಬಲದಲ್ಲಿದ್ದರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ತಿಗಳು. ಮಾತು ಕೃತಿಗಳೆರಡರಲ್ಲೂ ತೀಕ್ಷ್ಣ, ಚಾಣಾಕ್ಷ ಮನಸ್ಸಿನ ಮಾರ್ಗದರ್ಶಕ ಸುಧಾಕರ ಜೈನ್ ವಿದ್ಯಾರ್ತಿಗಳನ್ನು ಅನುಭವದ ಧಾರೆಯಲ್ಲಿ ತೋಯಿಸಿದರು. ಅದುವರೆಗೂ ಕ್ಯಾಮರಾ ಮುಟ್ಟದ ಕೈಗಳು ಕೂಡಾ ಅಂದು ಅತ್ಯದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿಯುವಂತಹವರಾದರು.
ಛಾಯಾಗ್ರಹಣದ ಹಲವಾರು ಮಜಲುಗಳನ್ನು ಭೋರ್ಗರೆಯುವ ದಿಡುಪೆ ಜಲಪಾತದಷ್ಟೇ ಅಬ್ಬರ , ಆದರೆ ಅಷ್ಟೇ ತನ್ಮಯತೆಯಿಂದ ತಿಳಿಸಿಕೊಡುತ್ತಿದ್ದ ಸುಧಾಕರ ಅವರ ಪಾಠಕೇಳುತ್ತಿದ್ದ ನಮಗೆ ಸಮಯದ ಪರಿವೆಯೇ ಇರಲಿಲ್ಲ. ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಅಣಿಯಾಗುವ ಅವಸರವಿರಲಿಲ್ಲ. ಎಲ್ಲಾ ಮಾತುಗಳು, ಕನಸುಗಳು, ಕಲ್ಪನೆಗಳು ಮನದಲ್ಲಿ ನಾಟಿದ್ದವು ದಿಡುಪೆಯ ಜಲಪಾತದ ಬದಿಯ ಮರದ ಬೇರಿನಂತೆ...ಆಳಕ್ಕೆ...
- ಜಯಲಕ್ಷ್ಮೀ ಜೆ.ಆಳ್ವ.
ಚಿತ್ರಗಳು: ಹರೀಶ್ ಕೆ.ಆದೂರು.
ಸಾಹಿತ್ಯ
ಪ್ರೆಂಚ್ ಕಾದಂಬರಿಗಾರ ಗುಸ್ತಾವ್ ಫ್ಲಾಬೇರ್ನ ಜನಪ್ರಿಯ ಕಾದಂಬರಿ `ಮದಾಂ ಬೊವಾರಿ. ಮಧ್ಯಮ ವರ್ಗದ ಹೆಣ್ಣೊಬ್ಬಳು ಆಸೆ ಆಕಾಂಕ್ಷೆಗಳನ್ನು ಹೊತ್ತು, ಸಾಮಾನ್ಯ ವ್ಯಕ್ತಿತ್ವದವನನ್ನು ಮದುವೆಯಾಗಿ ತನ್ನ ಕನಸುಗಳಿಗೆ ತೆರೆ ಹಾಕಿಕೊಳ್ಳುತ್ತಾಳೆ. ಆದರೆ ಅವಳ ಬದುಕು ಅಲ್ಲಿಗೆ ಅಂತ್ಯವಾಗುವುದಿಲ್ಲ. ತಾನು ಕಂಡ ಕನಸಿನಂತೆ ಬದುಕು ರೂಪಿಸಬೇಕೆನ್ನುವಾಗ ಪ್ರೇಮಿಯೊಬ್ಬನ ತೆಕ್ಕೆಗೆ ಜಾರುತ್ತಾಳಾದರೂ ಅದೆಲ್ಲಾ ಕ್ಷಣಿಕ ಮತ್ತು ಸ್ವಾರ್ಥವೇ ತುಂಬಿರುವ ಜನರಿಗೆ ಸುಖದ ಮಹಲು. ಅವರ ಸಾಂಗತ್ಯದಲ್ಲಿ ತನ್ನ ಆಸೆಗಳೆಲ್ಲಾ ಕೈಗೂಡದೆನ್ನುವ ನಿರಾಶೆ ಕಾಡುತ್ತಲೇ ಇರುತ್ತದೆ. ಹೀಗೆ ಭೃಂಗದ ಬೆನ್ನೇರಿ ಕಲ್ಪನಾವಿಲಾಸದಲ್ಲಿ ತೇಲುವ ಬೊವಾರಿಗೆ ಕನಸುಗಳೇ ಬದುಕಾಗುತ್ತವೆ. ಕಂಡ ಕನಸುಗಳೆಲ್ಲಾ ಬರೀ ಭ್ರಮೆಯೆನಿಸುತ್ತದೆ.
ವಾಸ್ತವದ ಅರಿವಾಗುವ ಹೊತ್ತಿಗೆ ಬದುಕು ಇಷ್ಟೇನಾ? ಅನ್ನುವ ಕಟು ಸತ್ಯ, ಉನ್ಮಾದದಿಂದ ಎತ್ತಿ ನೆಲಕ್ಕೆ ಅಪ್ಪಳಿಸುತ್ತದೆ.
ಈ ಕಾದಂಬರಿಯ ಮುಖ್ಯ ಪಾತ್ರ ಬೊವಾರಿಯಾದರೂ ಕಾದಂಬರಿ ಆರಂಭವಾಗುವುದು ಚಾರ್ಲ್ ಸ ಬೊವಾರಿ ಎಂಬ ಹುಡುಗನಿಂದ. ಕುಡುಕ ಮತ್ತು ಜವಾಬ್ದಾರಿಗಳಿಲ್ಲದ ತಂದೆಯ ಮಗನಾದರೂ, ಮಗನ ಉನ್ನತಿಗಾಗಿ ಹಪಹಪಿಸುವ ತಾಯಿಯ ಕನಸಿನಂತೆ ಉನ್ನತ ಶಿಕ್ಷಣ ಪಡೆದ ಚಾರ್ಲ್ ಸ ವೃತ್ತಿಯಲ್ಲಿ ವೈದ್ಯನಾಗುತ್ತಾನೆ.
ಹೀಗೆ ತನ್ನ ವೃತ್ತಿಯಲ್ಲಿ ಹೆಸರುಗಳಿಸಿಕೊಂಡ ಚಾರ್ಲ್ಸಗೆ ಲೊಬಟರ್ೊದ ಹೊಲಮನೆಯ ಮಾಲೀಕ ರುವೊಲ್ಟ್ಗೆ ಚಿಕಿತ್ಸೆ ನೀಡುವ ಸಂದರ್ಭ ಎದುರಾಗುತ್ತದೆ. ಆತನ ಮಗಳು ಎಮ್ಮಳ ಉಪಚಾರಿಕೆ ಪ್ರೇಮಕ್ಕೆ ತಿರುಗಿ, ವೈದ್ಯನ ಹೆಂಡತಿಯಾಗಿ ಕನಸುಗಳ ಮೂಟೆಯನ್ನೇ ಹೊತ್ತುಕೊಂಡು `ಮೆದಾಂ ಬೊವಾರಿಯಾಗಿ ಬರುತ್ತಾಳೆ.
ಚಾರ್ಲ್ ಸನಿಗೆ ತನ್ನ ವೃತ್ತಿಯಿಂದಾಗಿ ಶ್ರೀಮಂತರ ಪಾರ್ಟಿಗಳಲ್ಲಿ ಭಾಗವಹಿಸುವ ಅವಕಾಶ ದೊರಕುತ್ತದೆ. ಆತ ತಾನು ಅತೀಯಾಗಿ ಪ್ರೀತಿಸುವ ಎಮ್ಮಳ ಜೊತೆಗೆ ಆಹ್ವಾನಗಳಿಗೆ ಹೋಗುತ್ತಾನಾದರೂ, ಅವಳು ಅವನನ್ನು ಮತ್ತು ಅವನ ಅಭಿರುಚಿಗಳನ್ನು ನಿಂದಿಸುತ್ತಾಳೆ. ಆತ ತನ್ನ ವೃತ್ತಿಗೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಅನ್ನುವ ನೋವು ಅವಳನ್ನು ಕಾಡುತ್ತಲೇ ಇರುತ್ತದೆ. ಅದೇ ಮುಂದೆ ಗಂಡನ ವೃತ್ತಿಯನ್ನು ವ್ಯವಹಾರದ ಮಟ್ಟಕ್ಕೆ ಇಳಿಸಿ, ರೋಗಿಗಳಿಂದ ಬಾಕಿ ಇರುವ ಹಣವನ್ನು ವಸೂಲಿ ಮಾಡಿಕೊಂಡು, ಐಶರಾಮದ ಜೀವನಕ್ಕೆ ನಾಂದಿ ಹಾಡುತ್ತಾಳೆ. ಆ ಸಮಯದಲ್ಲಿ ಅವಳು ತುಂಬು ಗರ್ಭಿಣಿ.
ಚಾರ್ಲ್ ಸ ತನ್ನ ವೃತ್ತಿಯನ್ನು ಯಾನ್ಪಿಲ್ ಪಟ್ಟಣಕ್ಕೆ ಸ್ಥಳಾಂತರಿಸುತ್ತಾನೆ. ಅಲ್ಲಿ ಒಮ್ಮೆ ಬೊವಾರಿ ದಂಪತಿಗಳನ್ನು ಪಾರ್ಟಿಗೆ ಆಹ್ವಾನಿಸುತ್ತಾನೆ ಒಮೇ. ಆ ಪಾರ್ಟಿಯಲ್ಲಿ ಎಮ್ಮ ಬೊವಾರಿಗೆ ಲಿಯಾನ್ ದುಪ್ವಿ ಎಂಬ ಯುವಕನ ಪರಿಚಯವಾಗುತ್ತದೆ. ಶ್ರೀಮಂತಿಕೆಯ ಕನಸು ಕಾಣುತ್ತಿದ್ದ ಎಮ್ಮಳಿಗೆ ಆತನ ಸಾಂಗತ್ಯ, ಹಾವಭಾವ, ಮಾತು, ಮೌನಗಳು ತುಂಬಾ ಇಷ್ಟವಾಗುತ್ತವೆ. ಅವಳಿಗೆ ತಾನು ಮದುವೆಯಾದ ಹೆಣ್ಣು ಅನ್ನುವ ಮಾನಸಿಕ ಪರಿಧಿಯಿದ್ದರೂ ಅದನ್ನು ಮೀರಿ ಕನಸುಗಳ ನಾಗಲೋಟ ಸಾಗುತ್ತದೆ. ಎಮ್ಮಳ ಪ್ರೀತಿಗೆ ಲಿಯಾನ್ ಕೂಡ ಬಿದ್ದಿರುತ್ತಾನೆ. ಅವಳ ಬಗೆಗಿರುವ ತನ್ನ ಪ್ರೀತಿಯನ್ನು ತೆರೆದಿಡುವ ಹಂಬಲವಿದ್ದರೂ ತೋರಿಸಿಕೊಳ್ಳಲಾರದೆ ಅಸಹಾಯಕನಾಗುತ್ತಾನೆ.
ಎತನ್ಮಧ್ಯೆ ಎಮ್ಮ ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಆ ಮಗು ಅವಳಿಗೆ ಕುರೂಪಿಯಾಗಿ ಕಾಣುತ್ತದೆ. ತನ್ನ ಸೌಂದರ್ಯದ ಎದುರು ಮಗುವನ್ನು ದೂರ ತಳ್ಳುವ ನಿರ್ಧಯಿ ತಾಯಿಯಾಗುತ್ತಾಳೆ. ತನಗೆ ಇದುವರೆಗೂ ಇದ್ದೇ ಇರುವ ನಿಸ್ಸಾಯಕತೆಗೆ ಅವಳಲ್ಲಿ ಗಂಡು ಮಗುವೇ ಬೇಕೆನ್ನುವ ಹಂಬಲ. ಗಂಡಾದರೆ ದೇಶಾಂತರಗಳ ಮತ್ತು ಎಲ್ಲಾ ಭಾವನೆಗಳ ಶೋಧಕ್ಕೂ ಕೈ ಹಾಕಬಲ್ಲನೆಂಬ ಆಶಯವಿರುತ್ತದೆ. ಆದರೆ ಹೆಣ್ಣು ಹೆಜ್ಜೆ ಹೆಜ್ಜೆಗೂ ಹಿಮ್ಮೆಟ್ಟಬೇಕು. ದೈಹಿಕ ದುರ್ಬಲತೆ, ಕಾನೂನಿಗನುಗುಣವಾಗಿ ಅಧೀನತೆ, ಸಂಪ್ರದಾಯಿಕ ನಿರ್ಬಂಧ ಇವೆಲ್ಲದರ ಬಂಧಿಯಾಗಿಯೇ ಉಳಿಯಬೇಕಾದಿತ್ತೆನ್ನುವ ಭಯವೂ ಇರುತ್ತದೆ.
ಹಾಗೆ ಸುಖದ ಬೆನ್ನು ಹತ್ತಿ ಹೊರಟ ಅವಳಿಗೆ ಲಿಯಾನ್ ಆತ್ಮೀಯನಾಗುತ್ತಾನೆ. ಚಾರ್ಲ್ಸನಲ್ಲಿಲ್ಲದ ಗುಣಗಳನ್ನು, ಬಯಕೆಗಳನ್ನು ಲಿಯಾನ್ ತನ್ನ ಪ್ರೇಮಿ ಎಂಬ ಭ್ರಮೆಯಲ್ಲಿ ಕಂಡುಕೊಳ್ಳುತ್ತಾಳೆ. ಅವನಿಗೆ ಉಡುಗೊರೆಗಳನ್ನು ನೀಡುತ್ತಾಳೆ. ಆದರೂ ತನ್ನ ಉದ್ದುದ್ದ ಭಾವನೆಗಳನ್ನು ಅದುಮಿಟ್ಟು ಸಚ್ಚರಿತ್ರಳೆಂದುಕೊಳ್ಳುವ ಹೆಮ್ಮೆಯೂ ಅವಳಿಗೆ ಬೇಕು. ಹೀಗೆ ತನ್ನ ಗಂಡನನ್ನು ಮಗುವನು ನಿರ್ಲಕ್ಷಿಸಿದ ಅವಳು ಲಿಯಾನ್ನಂತೆಯೇ ಮೂವತ್ತು ವರ್ಷ ವಯಸ್ಸಾದರೂ, ಮದುವೆಯಿಲ್ಲದ ಒಳ್ಳೆಯ ವರಮಾನವಿರುವ, ಗಟ್ಟಿ ಹೃದಯದ, ಚತುರ ಮನುಷ್ಯ ರುದೊಲ್ಪ್ನ ತೆಕ್ಕೆಗೆ ಜಾರುತ್ತಾಳೆ. ಹಸಿದ ರುದೊಲ್ಪ್ಗೆ ಹೆಣ್ಣೆಂದರೆ ಮೋಜು ಮಾತ್ರ. ಅದನ್ನು ತಿಳಿಯದ ಎಮ್ಮ ಅವನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅವನ ಸುಖದ ರುಚಿಕೊಂಡ ಅವಳು ಅವನಿಲ್ಲದೆ ಬದುಕೇ ಇಲ್ಲವೆನ್ನುವವರೆಗೂ ಬರುತ್ತಾಳೆ. ಆದರೆ ರುದೊಲ್ಫ್ ಹೆಣ್ಣಿಗ. ನಿಂತ ನೀರಾಗಲಾರ. ಎಮ್ಮಳನ್ನು ದೂರವಿಡುತ್ತಾನೆ. ಇದನ್ನು ಅರಿತ ಎಮ್ಮ ತಾನು ಆವನಿಗೆ ಒಲಿದುದ್ದಕ್ಕಾಗಿ ಪಶ್ಚಾತ್ತಾಪವಿದೆಯೇ ಅಥವಾ ಅವನನ್ನು ಇನ್ನಷ್ಟು ಪ್ರೀತಿಸಬೇಕೆ ಎಂಬ ಜಿಜ್ನಾಸೆಗೆ ಬೀಳುತ್ತಾಳೆ. ಪ್ರೇಮ, ಪ್ರಣಯ ಎನ್ನುವ ಸರಳ ಪ್ರಮೇಯದಲ್ಲಿ ಗೊಂದಲವೆಲ್ಲ ಏಕೆ? ಅನ್ನುವ ರೂದೊಲ್ಫ್ ಕೇವಲ ಅವಳನ್ನು ಒಲಿಸಿಕೊಳ್ಳಲು ಪತ್ರ ಬರೆದಿದ್ದ ಮತ್ತು ಅದು ಹೃದಯದಿಂದ ಅಲ್ಲ. ಸತ್ಯದ ಅರಿವಾಗಿ ಅವಳಲ್ಲಿಯ ಕಾವು, ಕನಸುಗಳೆಲ್ಲಾ ಮುರಿದು ಬಿದ್ದು ಹತಾಶಳಾಗುತ್ತಾಳೆ.
ಎಮ್ಮ ಮತ್ತೆ ಭೃಂಗದ ಬೆನ್ನೇರಿ ಸಾಗುತ್ತಾಳೆ. ಲಿಯಾನ್ ಅವಳಿಗಾಗಿ ಕಾದಿರುತ್ತಾನೆ. ತನ್ನ ಬಾಲ್ಯದ ನೆನಪುಗಳನ್ನು ಕೆದಕಿಕೊಂಡು ತಾನು ಕಟ್ಟಿದ ಗೋಪುರವನ್ನು ಇನ್ನಷ್ಟು ಜೀವಂತವಾಗಿಸುತ್ತಾಳೆ. ನಿನ್ನ ಎಲ್ಲಾ ಪ್ರೇಮಿಗಳನ್ನು ತೊರೆದು ನನ್ನಲಿಯೇ ಅನುರಕ್ತನಾಗು ಎಂದು ಲಿಯಾನ್ನನ್ನು ಕಾಡುತ್ತಾಳೆ. ಅವಳಿಂದ ಸುಖ ಉಂಡ ಲಿಯಾನ್ ಕೊನೆಗೂ ನಮ್ಮಿಬ್ಬರ ಸಂಬಂಧ ಬಿರುಕು ಬಿಡುವಂತೆ ಏನಾದರೊಂದು ಘಟಿಸಬಾರೆದೆ? ಎಂದು ಹಲುಬುತ್ತಾನೆ.
ಎಮ್ಮ ಪ್ರತಿ ಗುರುವಾರವೂ ಲಿಯಾನ್ಗಾಗಿ ಹೋಟೇಲ್ನಲ್ಲಿ ಉಳಿದು ಅವನಿಂದ ಸುಖ ಅನುಭವಿಸುತ್ತಾಳಾದರೂ ತನ್ನ ಖರ್ಚಿನಿಂದಲೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಸಾಲ ಪತ್ರಗಳ ಮೊರೆ ಹೋದವಳು ಸಾಲದ ಹೊರೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಸಾಲದ ಮೇಲೆ ಸಾಲ ಏರಿ ಜೀವನ ಪರ್ಯಂತ ಅದು ಮುಗಿಯುವುದಿಲ್ಲ ಅನ್ನುವ ಹೊತ್ತಿಗೆ ಮನೆಯ ಸಾಮಾನುಗಳೆಲ್ಲಾ ಹರಾಜಗುವ ಸ್ಥಿತಿ ತಲುಪುತ್ತದೆ. ತನ್ನ ಇಬ್ಬರೂ ಪ್ರೇಮಿಗಳ ನಡುವೆ ಹಾದರ ನಡೆಸಿದ ಅವಳು ಹಣಕ್ಕಾಗಿ ಅವರ ಮುಂದೆ ಕೈ ಚಾಚುತ್ತಾಳೆ.
`ಪ್ರೇಮದ ಮೇಲೆ ಬೀಸುವ ಶೀತ ಮಾರುತಗಳಲ್ಲಿ ಅತಿ ಶೀತಲ ಕೊರತೆ ಬರುವುದೆಂದರೆ ಹಣ ಬೇಡಿದಾಗ. ಅದು ಬೇರನ್ನು ಕಿತ್ತೆಸೆಯುತ್ತದೆ ಅನ್ನುವ ಸತ್ಯ ಗೋಚರಿಸುತ್ತದೆ.
ಮರೀಚಿಕೆಯ ಬೆನ್ನು ಹಿಡಿದವಳು ಕೊನೆಗೆ ಬದುಕು ಇಷ್ಟೆ ಅನ್ನುವ ಅತೃಪ್ತಿಯಲ್ಲಿ ವಿಷ ಸೇವಿಸಿ ಬದುಕಿಗೆ ವಿದಾಯ ಹೇಳುತ್ತಾಳೆ. ಆ ಸಮಯದಲ್ಲಿ ಚಾರ್ಲ್ಸ್ ನೇ ಎಲ್ಲವೂ ಆಗಿ, ತನ್ನ ಹೆತ್ತ ಕುಡಿಯನ್ನು ನೋಡಲು ಇಚ್ಛೆ ಪಡುತ್ತಾಳೆ. ಅವಳು ಉಳಿಸಿದ ಸಾಲದ ಶೂಲದಲ್ಲಿ ಸಿಲುಕಿ ಚಾರ್ಲ್ಸ್ ನೂ ಸಾಯುತ್ತಾನೆ. ಮುಂದೆ ಮಗಳು ಬರ್ಥ ಅಜ್ಜಿಯ ಊರಿಗೆ ಹೋದರೂ, ಒಂದು ಜವಳಿ ಕಾರ್ಖಾನೆಯಲ್ಲಿ ಕೂಲಿ ಹೆಣ್ಣಾಗಿ ಕೆಲಸ ಮಾಡುತ್ತಾಳೆ.
ಕಾದಂಬರಿಯ ಪೂರ್ವಾರ್ಧ ನಿಧಾನಗತಿಯಲ್ಲಿ ಸಾಗಿದರೂ ಉತ್ತರಾರ್ಧ ಲವಲವಿಕೆಯಂದ ಮತ್ತು ಕಾವ್ಯಾತ್ಮಕವಾಗಿ, ಸುಂದರ ಪದಗಳ ಜೋಡಣೆಯಿಂದ ಹೆಚ್ಚು ಕುತೂಹಲಕರವಾದ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ.ಮದಾಂ ಬೊವಾರಿ ಒಮ್ಮೆ ಓದಲೇ ಬೇಕಾದ ಕೃತಿ. ಇದನ್ನು ಅನುವಾದಿಸಿದ ವಿ. ನಾಗರಾಜ ರಾವ್ ಅವರ ಪ್ರಯತ್ನವನ್ನು ಹೊಗಳಲೇಬೇಕು. ಈ ಪುಸ್ತಕವನ್ನು ಪ್ರಕಟಿಸುವವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು 2.
- ಅನುಬೆಳ್ಳೆ
ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು ; ಇಬ್ಬರ ಸ್ಥಿತಿ ಗಂಭೀರ
ರಿಯಾದ್ : ಮಕ್ಕಾದಿಂದ ಉಮ್ರಾ ನಿರ್ವಹಿಸಿ ಮರಳುತಿದ್ದ ಮಂಜೇಶ್ವರ ಸಮೀಪದ ಕುಂಜತ್ತೂರಿನ ಕುಟುಂಬವಿದ್ದ ಕಾರೊಂದು ಮುಂಭಾಗದ ಚಕ್ರ ಸಿಡಿದ ಕಾರಣ ಉರುಳಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ರಿಯಾದ್ ಬಳಿ ಸಂಭವಿಸಿದೆ. ಮೃತರನ್ನು ಕುಂಜತ್ತೂರಿನ ನಿವಾಸಿ ಜುಬೈರ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ಸಮೇತ ತಮ್ಮ ಇತರ ಕುಟುಂಬಿಕರೊಂದಿಗೆ ರಿಯಾದಿನಿಂದ ಮಕ್ಕಾಗೆ ತೆರಳಿ ಅಲ್ಲಿ ಉಮ್ರಾ ನಿರ್ವಹಿಸಿ ಮರಳಿ ರಿಯಾದಿಗೆ ಹಿಂದಿರುಗುತಿದ್ದಾಗ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಇವರ ಸಂಬಂಧಿಕ ಗರ್ಭಿಣಿ ಮಹಿಳೆಯೋರ್ವರು ತೀವ್ರವಾಗಿ ಗಾಯಗೊಂಡಿದ್ದು ಆಕೆಯ ಮಗು ಮೃತಪಟ್ಟಿರುವುದಾಗಿ ಆಕೆಯ ಸ್ಥಿತಿ ಗಂಭೀರವಿರುವುದಾಗಿಯೂ ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಕಾರು ಪಲ್ಟಿ ಆಗಿದ್ದು ಆ ಸಂಧರ್ಭದಲ್ಲಿ ಕಾರಿನಲ್ಲಿದ್ದ ಇವರ ಸಂಬಂಧಿಕರ ಮಗುವೊಂದು ರಸ್ತೆಗೆ ಎಸೆಯಲ್ಪಟ್ಟ ಕಾರಣ ಆ ಮಗುವನ್ನು ಎತ್ತಿಕೊಳ್ಳಲು ಹೋದ ಇವರ ಪತಿಯ ಕಾಲಿನ ಮೇಲೆ ಟ್ರಕ್ ಒಂದು ಚಲಿಸಿದ ಕಾರಣ ಅವರ ಎರಡು ಕಾಲು ತುಂಡಾಗಿವೆ. ಒಟ್ಟಿನಲ್ಲಿ ಒಂದು ಅಪಘಾತ ಸಂಭವಿಸಿ ಚೆತರಿಸಿಕೊಳ್ಳುತ್ತಿದ್ದಂತೆ ನಡೆದ ಇನ್ನೊಂದು ಅಪಘಾತ ಮನ ಕಲುಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಮತ್ತು ಮಂಗಳೂರಿನ ಆಸುಪಾಸಿನ ನಿವಾಸಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳಿಗೆ ಸಾಂತ್ವಾನ ಹೇಳುತಿದ್ದರು.
ವರದಿ : ಅಶ್ರಫ್ ಮಂಜ್ರಾಬಾದ್. ತಬೂಕ್. ಸೌದಿ ಅರೇಬಿಯಾ .
ರಾಷ್ಟ್ರದ ಹಿತಕ್ಕೆ ಧಕ್ಕೆಯಾದಾಗ ಒಗ್ಗಟ್ಟು: ಒಡಿಯೂರು ಶ್ರೀ
ವಿಟ್ಲ : ಕರ್ಮ ಧರ್ಮಯುಕ್ತವಾಗಿದ್ದಾಗ ಸಮಾಜಕ್ಕೆ ಒಳಿತಾಗುತ್ತದೆ. ಸಮಗ್ರ ರಾಷ್ಟ್ರದ ಹಿತಕ್ಕೆ ಧಕ್ಕೆಯಾದಾಗ ಒಗ್ಗಟ್ಟಾಗಬೇಕು. ಪರರಿಗಾಗಿ ಸಹಕಾರದ ಬದುಕನ್ನು ಬಾಳಿದಾಗ ಸಮಾಜ ಸಂಘಟನೆ ಸಾಧ್ಯ. ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಕರೆ ನೀಡಿದರು.
ಅವರು ದಕ್ಷಿಣದ ಗಾಣಗಾಪುರ, ತುಳುನಾಡಿನ ದತ್ತಪೀಠವೆಂದು ಕರೆಯಲ್ಪಡುತ್ತಿರುವ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಸೋಮವಾರ ಸಮಾಜ ಸಂಘಟನಾ ಸಮಾವೇಶ ಹಾಗೂ ಒಡಿಯೂರು ರಥೋತ್ಸವದ ಅಂಗವಾಗಿ ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಟನಾ ಸಂದೇಶವನ್ನು ನೀಡಿದರು. ಭಾರತೀಯ ಸಂಸ್ಕೃತಿ ಎಲ್ಲಿಯೂ ಸಿಗದು. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮಲ್ಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಸುದ್ದಿ ಬಿಡುಗಡೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ, 10 ಮಂದಿಗೆ ಸಹಾಯಧನ ವಿತರಿಸಿದರು. ಸಾದ್ವೀ ಶ್ರೀ ಮಾತಾನಂದಮಯೀ ಅವರು ಭಾಗವಹಿಸಿದ್ದ ಸಂಘಟನಾ ಪ್ರಮುಖರಿಗೆ ಸಂಘಟನಾ ಸಂಕಲ್ಪವನ್ನು ಬೋಧಿಸಿದರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರಕಾರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ನಾಡೋಜ ಡಾ.ಎಸ್.ಆರ್.ನಾಯಕ್ ಅವರು `ಒಡಿಯೂರುದ ಸಿರಿ' ಸಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿ 84 ಜೀವರಾಶಿಗಳಲ್ಲಿ ಮಾನವನೇ ಅತೀ ಹೆಚ್ಚು ಕ್ರೂರಿ. ಇಂದು ಮನುಷ್ಯನಿಗೆ ಯಾವುದೇ ವಿಚಾರಗಳಲ್ಲಿ ತೃಪ್ತಿ ಎಂಬುವುದಿಲ್ಲ. ಇದೇ ಅಶಾಂತಿಗೆ ಕಾರಣವಾಗಿದೆ. ಒಡಿಯೂರು ಶ್ರೀಗಳು ಭ್ರಾತೃತ್ವದ ಮೂಲಕ ಸಮಾಜವನ್ನು ಕಟ್ಟುವ ಕಾರ್ಯ ಮಾಡುತ್ತಿರುವುದು ವಿಶ್ವಮಾನವ ಸಂದೇಶವನ್ನು ಸಾರಿದಂತಾಗುತ್ತಿದೆ ಎಂದರು.
ಬ್ರಹ್ಮಶ್ರೀ ವೇ.ಮೂ.ರವೀಶ್ ತಂತ್ರಿ ಕುಂಟಾರು ಅವರು ರ್ಶರೀ ಸಂಸ್ಥಾನದಲ್ಲಿ ಉಚಿತವಾಗಿ ಹೊಲಿಗೆ ತರಬೇತಿ ಪಡೆದ 21 ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿದರು. ಕಾರ್ಕಳ ಸಾಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಶ್ರೀರಾಮ ಭಟ್, ಮುಂಬೈ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ಪ್ರಕಾಶ್ ಎಲ್.ಶೆಟ್ಟಿ, ಮುಂಬೈ ಮಲಾಡ್ ಉದ್ಯಮಿ ಜಯಂತ ಶೆಟ್ಟಿ, ಅಹಮದ್ನಗರ ಉದ್ಯಮಿ ವಿಜಯ ಹೆಗ್ಡೆ ಭಾಗವಹಿಸಿದ್ದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಕೇಂದ್ರದ ಯೋಜನಾಧಿಕಾರಿ ಸತ್ಯಗಣಪತಿ ಪಂಬತ್ತಜೆ ಸ್ವಾಗತಿಸಿ, ನಿರೂಪಿಸಿದರು. ಕಾರ್ಯನಿರ್ವಾಹಕ ಜಗನ್ನಾಥ ರೈ ವಂದಿಸಿದರು. ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ ವೈಭವೋಪೇತ ರಥಯಾತ್ರೆ ಜರುಗಿತು.
ಚಿತ್ರ-ವರದಿ: ಜ್ಯೋತಿಪ್ರಕಾಶ್ ಪುಣಚಾ
ಎಕ್ಸ್ಲೂಸಿವ್
ಈ ಸಾವಿಗೆ ಕಾರಣವಾದ್ರೂ ಏನು...?!!!
ಇಲ್ಲಿ ಸಾವಿಗೆ ಕಾರಣವಿಲ್ಲ.ವೃದ್ದರೆಲ್ಲಾ ಇಲ್ಲಿ ಆರಾಮವಾಗಿದ್ದರೆ ಉಳಿದವರೆಲ್ಲಾ ಸಾವಿನ ಕದ ತಟ್ಟುತ್ತಿದ್ದಾರೆ.ಕಳೆದ 15 ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಮೆತ್ತಡ್ಕದ ಬಡಾವಣೆಯಲ್ಲಿ 25 ಅಪಮೃತ್ಯು ಸಂಭವಿಸಿದೆ.ಆದರೆ ಸತ್ತವರೆಲ್ಲಾ ವೃದ್ದರೂ ಅಲ್ಲ.ಅದ್ಯಾವುದೋ ಕಾಣದ ಶಕ್ತಿಯೊಂದು ಇಲ್ಲಿ ಆಟವಾಡುತ್ತಿದೆ.ಹೀಗಾಗಿ ಈ ಬಡಾವಣೆಯ ಜನ ಭಯಭೀತರಾಗಿ ಇಲ್ಲೊಂದು ಸಭೆ ನಡೆಸಿ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ್ದಾರೆ.ಹಾಗಿದ್ದರೆ ಆ ಶಕ್ತಿ ಯಾವುದು ಎಂಬುದೇ ಪ್ರಶ್ನೆಯಾಗಿದೆ.ಈಗ ಜನರಿಗೆ ಭಯಕ್ಕೆ ಕಾರಣವಾಗಿರುವ ಅಂಶ ಯಾವುದು?!!!
ಇಲ್ಲಿ ಹೀಗೆ ಜನ ಸೇರಿ ಗಂಭೀರವಾಗಿ ಚರ್ಚೆ ಮಾಡುತ್ತಾ ಅದ್ಯಾವುದೋ ಯೋಚನೆಯಲ್ಲಿ ಕುಳಿತಿರುವುದು ಸುಮ್ಮನಲ್ಲ.ತಮ್ಮ ಕುಟುಂಬದ ನಾಳೆಯ ದಿನದ ಬಗ್ಗೆ ಆತಂಕ ಈ ಜನರಿಗೆ.ಅದಕ್ಕೂ ಕಾರಣವಿದೆ.ಇವರ ಬಡಾವಣೆಯಲ್ಲಿ ಕಳೆದ 15 16 ತಿಂಗಳಲ್ಲಿ 25 ಕ್ಕೂ ಹೆಚ್ಚು ಮಂದಿ ಅಪಮೃತ್ಯುವಿನಿಂದ ತೀರಿಕೊಂಡಿದ್ದಾರೆ.ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಸಾಮೆತ್ತಡ್ಕದ ಬಡಾವಣೆಯ ಜನರ ಭಯದ ಪ್ಲಾಶ್ ಬ್ಯಾಕ್.ಸರಿಸುಮಾರು 15 ತಿಂಗಳ ಹಿಂದೆ ಒಬ್ಬ ಬಾಲಕ ಈ ಬಡಾವಣೆಯಲ್ಲಿ ನೀರಿನಹೊಂಡಕ್ಕೆ ಬಿದ್ದು ಸಾವನ್ನಪ್ಪುತ್ತಾನೆ.ಅಲ್ಲಿಂದ ಶುರುವಾಗುವ ಸಾವಿನ ಯಾತ್ರೆ ಪ್ರತೀ ತಿಂಗಳಿಗೆ ಕನಿಷ್ಠ ಒಂದರಂತೆ ಬಡಾವಣೆಯ ಬಹುತೇಕ ಮನೆಯಲ್ಲಿ ಒಂದಿಲ್ಲೋಂದು ಘಟನೆ ನ ಡೆಯುತ್ತಲೇ ಇತ್ತು.ಹೀಗಾಗಿ ಜನ ಮಾನಸಿಕ ನೆಮ್ಮದಿ ಕಳೆಕೊಂಡರು.ಅದಕ್ಕಾಗಿ ದೇವಸ್ಥಾನದಲ್ಲಿ ಬಡಾವಣೆಯ ಜನ ಕೇಳಿದಾಗ 108 ಕಾಯಿ ಗಣಪತಿ ಹೋಮ ಹಾಗೂ ಮಹಾಮೃತ್ಯುಂಜಯ ಹವನಕ್ಕೆ ಸೂಚನೆ ಮಾಡಲಾಗಿದೆ.ಅದಕ್ಕಾಗಿ ಊರ ಜನ ಸೇರಿಕೊಂಡು ಮುಂದಿನ ಹೆಜ್ಜೆಯ ಕುರಿತಾಗಿ ಚರ್ಚೆ ನಡೆಸಿದರು.
ಸಾಮೆತ್ತಡ್ಕದ ಈ ಪ್ರದೇಶದಲ್ಲಿ ಸಸುಮಾರು 100 ರಿಂದ 200 ಮನೆಗಳಿವೆ.ಈಗ ಇಲ್ಲಿ ಹೀಗೆ ಸಾವಿನ ಸರಣಿ ಮುಂದುವರಿಯುತ್ತಿದ್ದಂತೆಯೇ ಅನೇಕರು ಭಯಭೀತರಾಗಿ ಮನೆ ತೊರೆಯಲು ನಿರ್ಧರಿಸಿದ್ದೂ ಇದೆ.ಇನ್ನೂ ಕೆಲವರು ಮನೆಗೆ ಬೀಗಹಾಕಿ ಕೆಲದಿನಗಳ ಕಾಲ ಹೊರಗಡೆ ತೆರಳಿದ್ದಾರೆ.ಇನ್ನೂ ಕೆಲವರು ತಮ್ಮ ಮನೆಗೆ ಯಾವುದೇ ಕಾಟ ಇರದಿರಲಿ ಎಂದು ದೈವದ ಮುಖವನ್ನು ಮನೆಯ ಎದುರು ಇರಿಸಿದ್ದಾರೆ.ಪೂಜೆ ,ಹವನ, ಜ್ಯೋತಿಷ್ಯ ಹೀಗೆ ಪರಿಹಾರ ಅರಸಿಕೊಂಡು ಹೋಗಿದ್ದಾರೆ.ಆದರೆ ಪರಿಹಾರ ಎಲ್ಲೂ ಸಿಕ್ಕಿಲ್ಲ.ಈಗ ಜನರೆಲ್ಲಾ ಸೊಮದೆಡೆ ಸೇರಿ ಮುಂದಿನ ಹೆಜ್ಜೆ ಬಗ್ಗೆ ಚಿಂತಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದೊಂದು ಕಾಕತಾಳೀಯ ಘಟನೆಯೋ ಅಥವಾ ಕಾಣದ ಶಕ್ತಿಯೊಂದರಿಂದ ಮಾಡಲಾಗುತ್ತದೆಯೇ ಎಂಬುದು ಕುತೂಹವಾಗಿಯೇ ಉಳಿದುಕೊಂಡಿದೆ.ಒಂದೇ ಬಡಾವಣೆಯಲ್ಲಿ ಬೆನ್ನುಬೆನ್ನಿಗೇ ಅಪಮೃತ್ಯುಗಳಾಗುವುದಕ್ಕೆ ಏನು ಕಾರಣ ಎಂಬುದೇ ಪ್ರಶ್ನೆಯಾಗಿ ಉಳಿದುಕೊಂಡಿದೆ.
ವಿಶೇಷ ವರದಿ: ಮಹೇಶ್ ಪುಚ್ಚೆಪ್ಪಾಡಿ
ಗಣರಾಜ್ಯೋತ್ಸವ ವಿಶೇಷ ಲೇಖನ
ಇಡ್ತಲೆಗೆ ಒಂದು, ಬಿಳಿ ಆಮೆಗೆ ಅರ್ಧ, ಕರಿಬೆಕ್ಕಿಗೆ ಕಾಲು ಕೋಟಿ !
ವಿಟ್ಲ : ಇರ್ತೆಲೆಗೆ ಒಂದು ಕೋಟಿ, ಬಿಳಿ ಆಮೆಗೆ ಅರ್ಧ ಕೋಟಿ, ಕರಿಬೆಕ್ಕಿಗೆ ಕಾಲು ಕೋಟಿ - ಸುಲಭವಾಗಿ ದುಡ್ಡು ಗಳಿಸುವ ಹೋಸ ಸ್ಕೀಮ್ ಇದೀಗ ಎಲ್ಲೆಡೆ ಚಾಲ್ತಿಯಲ್ಲಿದೆ.
ಒಂದಂಕೆ ಲಾಟರಿ ಹುಚ್ಚು ಹಿಡಿದು ಹೆಂಡ್ತಿ ಮಕ್ಕಳನ್ನು ಬೀದಿಪಾಲು ಮಾಡಿ ಆತ್ಮಹತ್ಯೆಯಲ್ಲಿಯೋ ಹುಚ್ಚಾಸ್ಪತ್ರೆಯಲ್ಲಿಯೋ ಅವಸಾನ ಕಾಣುವವರ ಸಂಖ್ಯೆ ಇದೀಗ ಕಡಿಮೆಯಾಗಿದೆ. ತದನಂತರ ಅಲ್ಪ ಅವಧಿಯಲ್ಲಿ ಅಧಿಕ ಆರ್ಥಿಕ ಸಂಪತ್ತನ್ನು ಗಳಿಸುವ ಅಭಿಲಾಷೆಯನ್ನು ಮೂಡಿಸಿ ವಿದ್ಯಾವಂತರನ್ನು ಬಿಡದೆ ಪಂಗನಾಮ ಹಾಕುತ್ತಿರುವ ಚೈನ್ ಸ್ಕೀಮ್ಗಳು! ಈಗ ಅದೆಲ್ಲವೂ ಹಲವಾರು ಕಾರಣಗಳಿಗೆ ಅಟ್ಟ ಸೇರುತ್ತಿರುವಾಗಲೇ ಬಹುದೊಡ್ಡ ಸ್ಕೀಮ್ ಒಂದು ಸಾರ್ವಜನಿಕರ ಬಾಯಿಯಲ್ಲಿ ಕೇಳಿಬರುತ್ತಿದ್ದು ಈ ಅಂತೆ ಕಂತೆಗಳು ನಿಜವೇ ಎಂದು ಬಹುತೇಕರು ಬಾಯ್ಬಿಡುತ್ತಿದ್ದರೆ, ಕೋಟಿ ಸಂಪಾದನೆಯ ಕನಸುಹೊತ್ತ ಅಲೆಮಾರಿಗಳು ಪ್ರಾಣಿಗಳ ಹುಡುಕಾಟ ಆರಂಭಿಸಿದ್ದಾರಂತೆ.. ಎರಡು ತಲೆ ಹಾವು (ಇರ್ತೆಲೆ) ಸಿಕ್ಕಿ ಬಿಟ್ಟರೆ ಅದಕ್ಕೆ ಅಬ್ಬಬ್ಬಾ ! 1 ಕೋಟಿ ರೂ , ಬಿಳಿ ಆಮೆ ಸಿಕ್ಕಿದರೆ 50 ಲಕ್ಷ !! ಕಪ್ಪು ಬೆಕ್ಕು ಇದ್ದರೆ 25 ಲಕ್ಷವಂತೆ..! ಇದನ್ನೆಲ್ಲ ನಂಬಿಕೊಂಡು ರಾತ್ರಿ ಹಗಲೆನ್ನದೆ ಹುಡುಕಾಟ ನಡೆಸುತ್ತಿರುವ ಸೋಮಾರಿ ಕನಸುಗಾರರಿಗೆ ಯಾವುದು ಅರ್ಥವಾಗುತ್ತಿಲ್ಲ ! ಅವರ ಹುಡುಕಾಟ ಮುಂದುವರಿಯುತ್ತಲೇ ಇರುತ್ತದೆ.
ಜಿಲ್ಲೆಯಾದ್ಯಂತ ವಿಚಿತ್ರ ಪ್ರಾಣಿಗಳ ಮಾರಾಟದ ಹೆಸರಿನಲ್ಲಿ ಹಣ ಮಾಡುವ ದಂಧೆ ಹೊಸತಾಗಿ ಆರಂಭವಾಗಿದೆ. ಒಮ್ಮೆಲೇ ಶ್ರೀಮಂತರಾಗುವ, ಕನಸಿನ ಅರಮನೆಯನ್ನು ಕಟ್ಟುವ ಅದೆಷ್ಟೋ ಮಂದಿ ಈ ಹುಚ್ಚು ಆಸೆಯನ್ನರಸಿ ಉದ್ಯೋಗ ಮಾಡದೆ ಸೋಮಾರಿಗಳಾಗಿ ತಿರುಗುತ್ತಿರುವುದು ಕಂಡುಬರುತ್ತಿದೆ.
ಇವರು ಹೋದಲ್ಲಿ ಬಂದಲ್ಲಿ ಮೊಬೈಲಿನಲ್ಲಿಯೂ ಕೂಡಾ ವಿಚಿತ್ರ ಪ್ರಾಣಿಗಳ ಮಾಹಿತಿಗಳನ್ನು ಕಲೆಹಾಕುತ್ತಲೇ ದೈನಂದಿನ ಬದುಕನ್ನೇ ಮರೆತು ಬಿಡುತ್ತಿದ್ದಾರೆ. ವಿದೇಶದಲ್ಲಿ ಭಾರೀ ಬೇಡಿಕೆಯಿರುವ ಎರಡು ತಲೆ ಹಾವು ಎಲ್ಲಿಯಾದರೂ ಕಂಡರೆ ತಕ್ಷಣ ತಮಗೆ ತಿಳಿಸಿಬಿಡಿ ಸ್ಥಳದಲ್ಲಿಯೇ ನಿಮಗೆ ಕ್ಯಾಶ್ ನೀಡುತ್ತೇವೆ. ಕರಿ ಬೆಕ್ಕು ಇದ್ದರೆ ನಮಗೆ ಬೇಕೇ ಬೇಕು. ಮತ್ತೆ ಬಿಳಿ ಆಮೆ ಕಣ್ಣಿಗೆ ಕಂಡರೆ ತುರ್ತಾಗಿ ಬೇಕಾಗಿದೆ.ನಿಮ್ಮ ಜೀವಮಾನಕ್ಕೆ ಸಾಕಾಗುವಷ್ಟು ಹಣ ಸುರಿಯುತ್ತೇವೆ. ಎಂಬುವುದಾಗಿ ಮಾತುಕತೆ ಮುಂದುವರಿಯುತ್ತದೆ. ಹಣದಾಸೆಯಿಂದ ಕಾಡುಮೇಡು ಸುತ್ತಿ ಇರ್ತಲೆಯೊಂದು ಸಿಕ್ಕಿದಾಗ ಅದನ್ನು ಹಣ ಕೊಟ್ಟು ಪಡೆದುಕೊಳ್ಳುವ ಅರೆಹುಚ್ಚನಿಂದ ಒಂದೊಂದೇ ಪರೀಕ್ಷೆಗಳು ನಡೆದು ನಮ್ಮ ಬೇಡಿಕೆಯಂತೆ ಇಲ್ಲ ಎಂದು ಅದನ್ನು ರಿಜೆಕ್ಟ್ ಮಾಡುತ್ತಾನೆ. ಎರಡು ತಲೆಯ ಹಾವು ಕಡಿಮೆ ಎಂದರೆ ಐದು ಕೆಜಿ ಭಾರವಿರಬೇಕು, ಎರಡೂ ಬದಿಯಲ್ಲಿಯೂ ತಲೆಗಳು ಚಲನೆಯಲ್ಲಿರಬೇಕು,ಹಾವಿನ ಮಧ್ಯಭಾಗದಲ್ಲಿ ಹಿಡಿದೆತ್ತಿದಾಗ ಎರಡೂ ಬದಿಯ ಬಾಯಿಯೊಳಗಿಂದ ನಾಲಗೆಯನ್ನು ಚಾಚಬೇಕು. ಇದನ್ನೇ ನಂಬಿದ ಕೋಟಿ ರೂ. ಆಸೆ ಹೊತ್ತ ಒಬ್ಬ ಯುವಕ ಈ ಬೇಡಿಕೆಗಳನ್ನು ಹೊಂದಿಸುವುದಕ್ಕಾಗಿ ತನ್ನ ಮನೆಯಲ್ಲೇ ಡ್ರಮ್ನಲ್ಲಿ ಎರಡು ಕಿಲೋ ತೂಕದ ಎರಡು ತಲೆಯ ಹಾವನ್ನು ಹಾಕಿ ಹಾಲು, ನೀರು ಹುತ್ತದ ಮಣ್ಣು ಮೊದಲಾದವನ್ನು ಕೊಟ್ಟು ಸಾಕುತ್ತಿದ್ದಾನಂತೆ !. ಹಾಗೆಯೇ ಬಿಳಿ ಆಮೆ ಬೇಕು. ಅದರ ಉಗುರು ಕೂಡಾ ಬಿಳಿ ಇರಬೇಕಾಗುತ್ತದೆ ಎಂಬ ಬೇಡಿಕೆಗೆ ಜನ ಪ್ರಯತ್ನಿಸದಿದ್ದರೂ, ಕರಿ ಬೆಕ್ಕಿಗೆ 25 ಲಕ್ಷ ರೂ.ಗಳ ಮೊತ್ತ ಸಿಗುತ್ತದೆಯೆಂದಾಗ ಕಪ್ಪು ಬೆಕ್ಕು ಅಡ್ಡಬಂದಾಗ ಕಾಲು ಕೋಟಿ ಹಣ ಕಣ್ಣೆದುರಿಗೆ ಬಂದು ಅಲ್ಲಿಂದಲೇ ಪರೀಕ್ಷೆ ನಡೆಯುತ್ತದೆ. ಕರಿ ಬೆಕ್ಕೆಂದರೆ ಕಣ್ಣು, ಬಾಯಿ, ಉಗುರು ಸಹಿತ ಸಂಪೂರ್ಣವಾಗಿ ಕಪ್ಪಾಗಿರಬೇಕು. ಸಮಯಗಳ ಹಿಂದೆ ಸುಬ್ರಹ್ಮಣ್ಯ ಪರಿಸರದಲ್ಲಿ ಇಂಥ ಬೆಕ್ಕು ಸಿಕ್ಕಿತೆಂದಾಗ ಆ ಮನೆಮಂದಿ 25 ಲಕ್ಷದ ಧನಿಕರಾದರೆಂದು ಸುದ್ದಿ ಹರಡಿತು.
ಅದನ್ನು ಪಡೆದುಕೊಳ್ಳುವ ಅಸಾಮಿ ಬಂದು ಎಲ್ಲವನ್ನೂ ಪರೀಕ್ಷಿಸಿ ಸರಿಯಾಗಿದೆ ಅನ್ನುವಾಗಲೇ ಬೆಕ್ಕಿಗೆ ಹಾಲು ಕೊಡಿ ಅಂದನಂತೆ. ಬೆಕ್ಕು ಹಾಲು ಕುಡಿಯುತ್ತಲೇ ಆ ಬೆಕ್ಕು ಕುಡಿಯುತ್ತಿರುವ ಹಾಲು ಕೂಡಾ ಕಪ್ಪಾಗಬೇಕೆಂದು ಅದನ್ನು ರಿಜೆಕ್ಟ್ ಮಾಡಿದನಂತೆ ! ಈ ಸುದ್ದಿ ಹೇಗೆ ಹಬ್ಬಿದೆಯೋ ಯಾರಿಗೂ ಗೊತ್ತಿಲ್ಲ. ಆದರೆ ಹಲವಾರು ಮಂದಿ ಯುವಕರು ಈ ಪ್ರಾಣಿಗಳನ್ನು ಹುಡುಕಿಕೊಂಡು ಗುಡ್ಡ ಬೆಟ್ಟ ಕಾಡು ಮೇಡುಗಳನ್ನು ಅಲೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಂತೆ ಭಾಸವಾಗುತ್ತಾರೆ. ಆಶ್ಚರ್ಯವೆಂದರೆ ಇಷ್ಟರವರೆಗೂ ಅಳತೆಗೆ ತಕ್ಕುದಾದ ಎರಡು ತಲೆ ಹಾವುಗಳಾಗಲೀ ಬಿಳಿ ಆಮೆಗಳಾಗಲೀ ಕಪ್ಪು ಬೆಕ್ಕಾಗಲೀ ಸಿಕ್ಕಿಲ್ಲ, ಹಣವೂ ಸಿಕ್ಕಿಲ್ಲ! ಹೀಗಿದ್ದೂ ಹಲವು ಮಂದಿ ಯುವಕರು ಈ ಪ್ರಾಣಿಗಳ ಭೇಟೆ ಕಾರ್ಯ ಆರಂಭಿಸಿದ್ದಾರೆ. ಈ ಅಲೆಮಾರಿ ಪಡೆಗಳೇ ಪುತ್ತೂರು ಉರಗ ತಜ್ಞ ಐತಾಳ್ ಅವರ ಹಾವುಗಳ ಸಂಗ್ರಹದಲ್ಲಿದ್ದ ಇಡ್ತಲೆ ಹಾವನ್ನು ಸಮಯಗಳ ಹಿಂದೆ ಕಳವು ಮಾಡಿದ್ದರು. ಇದು ಯಾರಿಗೆ ಬೇಕಾಗುತ್ತದೆ ? ಯಾಕಾಗಿ ? ,ಎಲ್ಲಿಗೆ ? , ಯಾವ ಉದೇಶಕ್ಕಾಗಿ ಬೇಕಾಗುತ್ತದೆ ? ಎಂದು ವಿಚಾರಿಸಿದರೆ ಉತ್ತರವೇ ಬೇರೆಯಾಗಿರುತ್ತದೆ. ಇಡ್ತಲೆ ಹಾವಿನ ಬೆನ್ನುಹುರಿಯಲ್ಲಿರುವ ರಸವೊಂದು ಬಹುಪಯುಕ್ತ ಔಷಧಿಗಾಗಿ ವಿದೇಶದಲ್ಲಿ ಬೇಡಿಕೆಯಿದೆ ಎಂದಾದರೆ ಬಿಳಿ ಆಮೆ ಸಕಲ ಸಂಪತ್ತನ್ನು ಕರುಣಿಸುತ್ತದೆಯಂತೆ. ಜ್ಯೋತಿಷಿಯೊಬ್ಬರು ಹೇಳಿದ ಪ್ರಕಾರ ವಾಸ್ತು ದೋಷವಿರುವ ಭೂಮಿಯೊಂದನ್ನು ಸರಿ ಮಾಡಲು ಕರಿಬೆಕ್ಕನ್ನು ಜೀವಂತ ಹೂಳಲು ಬೇಡಿಕೆ ಬಂದಿರುವುದಾಗಿ ಕೇಳಿ ಬರುತ್ತಿದೆ.
ಈ ವಿಚಿತ್ರ ಪ್ರಾಣಿಗಳ ಹುಡುಕಾಟಕ್ಕೆ ಬಲಿ ಬೀಳುವವರ ಸಂಖ್ಯೆ ದಿನದಿಂದಿನಕ್ಕೆ ಹೆಚ್ಚಾಗುತ್ತಿದ್ದು, ಸುಲಭವಾಗಿ ಶ್ರೀಮಂತರಾಗುವ ಕನಸು ಕಂಡ ಅಲೆಮಾರಿಗಳು ಹಣ ಸಿಗುವ ವೇಳೆಗೆ ಅವರು ಹುಚ್ಚರಾಗಿರುತ್ತಾರೆ ಎಂಬುವುದಕ್ಕೆ ಅನುಮಾನವಿಲ್ಲ !
ವರದಿ : ಜ್ಯೋತಿಪ್ರಕಾಶ್ ಪುಣಚಾ
ಗಣರಾಜ್ಯೋತ್ಸವ ವಿಶೇಷ ಲೇಖನ
'...ಎರಡು ಜಡೆಗಳನ್ನು ಮಾತ್ರ ಒಂದೆಡೆ ಸೇರಿಸಲಾಗದು.' ತುಂಬಾ ಹಿಂದಿನಿಂದ ಹೆಣ್ಮಕ್ಕಳ ಕುರಿತು ಕೇಳಿಬರುತ್ತಿರುವ ಮಾತು ಇದು.ಸ್ತ್ರೀಯರಿಬ್ಬರು ಮಾತಾಡಲು ಕುಂತರೆ ಅಲ್ಲಿ ಒಮ್ಮತದ ಅಭಿಪ್ರಾಯ ಮೂಡಲಿಕ್ಕೆ ಸಾದ್ಯವೇ ಇಲ್ಲ.ಅಲ್ಲಿ ಅಸಮಧಾನ ಹುಟ್ಟುತ್ತದೆ.
ಜಗಳಕ್ಕೆ ಸಾವಿರ ದಾರಿಗಳು ತೆರೆದುಕೊಳ್ಳುತ್ತವೆ.ಶುರುವಾಗುತ್ತದೆ ವೈರ... ಪರಿಸ್ಥಿತಿ ಎಲ್ಲಿಗೆ ಬಂದು ತಲುಪುತ್ತದೆಂದರೆ ಮನೆ ಮುರಿಯುತ್ತದೆ.ಮನಸ್ಸಿನ ನಡುವೆ ಒಡೆಯಲಾಗದ ಗೋಡೆ... ಇವತ್ತಿನ ವಿಭಕ್ತ ಕುಟುಂಬಗಳ ಹುಟ್ಟಿನ ಕಾರಣಗಳನ್ನು ಹುಡುಕಿದರೆ ಸಿಗುವ ಪ್ರಮುಖ ಅಂಶಗಳಿವು.ಆದರೆ ಶಿರಸಿ ಸಮೀಪದ ಕೊಪ್ಪಲಗದ್ದೆಯ ಗೌಡರ ಮನೆ ಹೊಕ್ಕರೆ ನಮ್ಮ ಅಭಿಪ್ರಾಯಗಳೇ ಬದಲಾಗುತ್ತದೆ.ಎರಡಲ್ಲ,ಹದಿನೈದಕ್ಕೂ ಹೆಚ್ಚಿನ ಹೆಣ್ಣು ಜೀವಗಳು ಸಾಮರಸ್ಯದಿಂದ ಜೀವನ ನಡೆಸುತ್ತಿರುವುದನ್ನು ಕಂಡು ಅರಿವಿಲ್ಲದೆಯೇ ಅಚ್ಚರಿಯ ಉದ್ಘಾರ ಹೊರಡುತ್ತದೆ.
ಹೌದು! ಇದು ಬರೇ ಅವಿಭಕ್ತ ಕುಟುಂಬದ ಕತೆಯಾದರೆ ಹೇಳುವ ಅಗತ್ಯವೇ ಇರಲಿಲ್ಲ.ಇಂದಿಗೂ ಮಲೆನಾಡಿನಲ್ಲಿ ಓಡಾಡಿದರೆ ಒಂದಾನೊಂದು ಕಾಲದ ಪಳಯುಳಿಕೆಯಂತೆ ಅಲ್ಲೊಂದು,ಇಲ್ಲೊಂದು ಅವಿಭಕ್ತ ಕುಟುಂಬಗಳು ಸಿಗುತ್ತವೆ.ಆದರೆ ಅಲ್ಲಿಯ ಹೊಂದಾಣಿಕೆಯ ಕುರಿತಾಗಿ ಅಷ್ಟು ಪ್ರಬಲವಾಗಿ ಪ್ರತಿಪಾದಿಸಲಾಗದು.ಕೆಲವೊಮ್ಮೆ ಸಣ್ಣ ಸಣ್ಣ ಸಂಗತಿಗಳೂ ಮನೆ ಮುರಿಯುವ ಕಾರಣವಾಗಿಬಿಡುವುದುಂಟು.ಆದರೆ ಕೊಪ್ಪಲಗದ್ದೆಯ ಕರಿಯಾ ಗೌಡರ ಕುಟುಂಬಸ್ತರು ಮಾತ್ರ ಇದೆಲ್ಲದಕ್ಕೆ ಅಪವಾದವೆನ್ನುವ ರೀತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಮೂರು ಪ್ರತ್ಯೇಕ ಕುಟುಂಬಗಳ 39 ಜನರು ಒಂದಾನೊಂದು ಕಾಲದ ರೂಢಿಯಂತೆ ಒಟ್ಟಾಗಿ ಬದುಕುತ್ತಿದ್ದಾರೆ.ಒಂದೇ ಒಂದು ದಿನವೂ ಯಾವುದೇ ಭಿನ್ನಾಭಿಪ್ರಾಯಕ್ಕೆ ಸಿಕ್ಕಿಕೊಳ್ಳದೆಯೇ ಕೂಡು ಕುಟುಂಬದಲ್ಲೂ ನೆಮ್ಮದಿಯಿದೆ ಎಂಬುದನ್ನು ನವ ನಾಗರೀಕತೆಗೆ ಸಾರಿಹೇಳುವ ಸರದಿಯಲ್ಲಿದೆ. ದಿನ ದಿನಕ್ಕೂ ಸಂಕೀರ್ಣವಾಗುತ್ತಿರುವ ಕುಟುಂಬದ ಕುರಿತಾಗಿನ ಸಾಮಾಜಿಕ ದೃಷ್ಠಿಕೋನಕ್ಕೆ ಸಡ್ಡು ಹೊಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇವರ ಮನೆಗೆ ಸೊಸೆಯಂದಿರಾಗಿ ಬಂದ ಹೆಣ್ಮಕ್ಕಳು ಹೇಳುವ ಪ್ರಕಾರ 'ತವರಿನಲ್ಲಿ ಒಬ್ಬೊಬ್ಬರೇ ಇದ್ದು ಬೇಸರಬಂದುಹೋಗಿತ್ತು.ಇಲ್ಲಿ ಎಲ್ಲರೂ ಕೂಡಿ ಬದುಕುತ್ತಿರುವುದರಿಂದ ದಿನಕಳೆದದ್ದೇ ಗೊತ್ತಾಗುತ್ತಿಲ್ಲ...' 
ಹಾಗೆ ನೋಡಿದರೆ ಇದು ವಿಭಕ್ತ ಕುಟುಂಬವೆನ್ನುವುದಕ್ಕೆ ಯಾವ ಪುರಾವೆಗಳೂ ಇಲ್ಲ.ಒಟ್ಟಿಗೆ ಮುಂಜಾನೆ ಏಳುವುದರಿಂದ ಹಿಡಿದು ಸಂಜೆವರೆಗಿನ ಪ್ರತಿಯೊಂದು ಕ್ಷಣವನ್ನೂ ಒಟ್ಟಿಗೆ ಕಳೆಯುತ್ತಾರೆ.ನೀ ನನಗಿದ್ದರೆ ನಾ ನಿನಗೆ... ಅಕ್ಷರಶಃ ನಿಜವಾಗಿದೆ ಈ ಮಾತು ಇಲ್ಲಿ. ಒಂದೇ ಮನೆಯ ಜನರಂತೆ ಇವರು ಬದುಕುತ್ತಿರುವುದಕ್ಕೋ ಎನೋ ಇಲ್ಲಿ ಪ್ರತಿಯೊಬ್ಬರಲ್ಲೂ ಅವಿನಾಭಾವ ಮೈತ್ರಿಯಿದೆ.ಹೊಂದಾಣಿಕೆಯಿದೆ.ನಾವು ಏನೇ ಮಾಡುವುದಿರಲಿ, ಕೂಡಿಕೊಂಡೇ ಮಾಡ್ತೀವಿ. ನಮಗೆ ಹೀಗೇ ಇರೋದು ತುಂಬಾನೇ ಇಷ್ಟ ಅನ್ನುತ್ತಾರೆ ಈ ಮನೆಯ ಮಕ್ಕಳ ಪೈಕಿ ಹಿರಿಯ ನಾರಾಯಣ ಗೌಡ.ಇದೇ ಮತಿಗೆ ತಮ್ಮಂದಿರೂ ಹ್ಞೂಂ ಗುಡುತ್ತಾರೆ.
ವ್ಯಾವಹಾರಿಕವಾಗಿ ಮೂರು ಮನೆಗಳಾಗಿವೆಯೇನೋ ನಿಜ.ಆದರೆ ಮನೆ ಮಾತ್ರ ಭಾಗವಾಗಿಲ್ಲ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಇವರು ತಮ್ಮೆಲ್ಲಾ ಕೆಲಸಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಾರೆ. ಎಲ್ಲರ ಜಮೀನುಗಳಲ್ಲಿ ಎಲ್ಲರೂ ಶ್ರಮಿಸುತ್ತಾರೆ.ಒಂದೇ ಒಂದು ವರ್ಷವೂ ನಮ್ಮ ಕೆಲಸ ಆಳುಗಳಿಲ್ಲದೆಯೇ ಹಿಂದೆ ಉಳಿದದ್ದಿಲ್ಲ ಎನ್ನುವ ಮಾತು ಇವರದ್ದು.ಮನೆಯ ಅಷ್ಟೂ ಜನ ಹೊಲಕ್ಕಿಳಿದು ದುಡಿಯುತ್ತಾರೆ.ಗಂಡಿರಲೀ ಹೆಣ್ಣಿರಲಿ ತಮ್ಮ ಕೆಲಸವನ್ನು ತಾನು ಮಾಡುತ್ತ ನಿರಂತರವಾಗಿ ಮನೆಯ ನೆಮ್ಮದಿಯನ್ನು ಕಾಯ್ದುಕೊಂಡುಹೋಗುವ ಸಲುವಾಗಿ ಇವರೆಲ್ಲರ ಧ್ಯಾನ ! ಅದೇ ರೀತಿ ಖುಷಿಯಿಂದ ಇರುತ್ತಾರೆ.ಇಲ್ಲಿಯ ಉದ್ದಾನುದ್ದ ಪಡಸಾಲೆಯ ಮೇಲೆ ಮಧ್ಯಾಹ್ನವನ್ನು ಕಳೆಯುವುದೇ ಒಂದು ರೋಂಮಾಂಚಕ ಅನುಭವ. ಚಿಕ್ಕವರು,ದೊಡ್ಡವರು ಎಲ್ಲರೂ ಬಂದು ಟಿ,ವಿ.ಯ ಮುಂದೆ ಆಸೀನರಾದರೆ ಅಲ್ಲಿ ಹುಟ್ಟುವ ಮಾತುಗಳು ಸ್ವಾರಸ್ಯ ಕಳೆದುಕೊಂಡ ದಿನಗಳಿಲ್ಲ.ಏನಾದರೊಂದು ಹೊಸ ವಿಷಯದೊಂದಿಗೆ ಶುರೂವಾಗುವ ಮಾತುಗಳು ಸದಾ ಕುತೂಹಲವನ್ನು ಜತೆ ಜತೆಯಾಗಿಯೇ ಇಟ್ಟುಕೊಂಡೇ ಮುಂದುವರೆಯುತ್ತವೆ. 
ಇದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿಯ ಸೊಸೆಯಂದಿರನ್ನು ಮಾತನಾಡಿಸಬೇಕು.ಅತ್ತೆಯರ ಹಾದಿಯಲ್ಲಿ ನಡೆಯುತ್ತೀವಿ ಅನ್ನುತ್ತಾರೆ.ಅತ್ತೆಯಂದಿರು ಈ ಮನೆಗೆ ಕಾಲಿರಿಸಿ ಸುಮಾರಿಗೆ ಅರವತ್ತು ವರ್ಷಗಳೆ ಸಂದಿರಬೇಕು.ಇಲ್ಲೇ ದುಡಿದು, ದಣಿದು,ಬೆಳೆದು ಮಾಗಿದ ಜೀವಗಳವು.ಅವರ ಮಾತಿಗೆ ತಪ್ಪುವುದುಂಟೇ ಎನ್ನುತ್ತಾಳೆ ಈ ಮನೆಯ ಸೊಸೆ ಲಕ್ಷ್ಮಿ.ಯಾವುದೇ ಅಸಮಾಧಾನ ಉಂಟಾದರೂ ಇಲ್ಲಿ ಮಾತು,ಸಮಾಲೋಚನೆಗಳೇ ಅವನ್ನು ಬಗೆಹರಿಸುತ್ತವೆ.ಅತ್ತೆಸೊಸೆಯಂದಿರ ಮಧ್ಯೆ ಈ ನಂಬಿಕೆ ಬೆಳೆದ ಕಾರಣದಿಂದ ಲಾಗಾಯ್ತಿನಿಂದಲೂ ಇಲ್ಲಿ ಮಹಾ ಸಮರಗಳು ನಡೆದೇ ಇಲ್ಲ..ಇದು ಭಾರತಿ ತನ್ನ ಕುಟುಂಬವನ್ನು ತೆರೆದಿಡುವ ರೀತಿ.
ಇಂದಿನ ಸಮಾಜದಲ್ಲಿ ಅದರಲ್ಲೂ ಹೆಣ್ಣು ಹೆತ್ತವರಲ್ಲಿ ಸಾಮಾನ್ಯವಾಗಿ ಒಂದು ಗುಂಗೀ ಹುಳು ಕೊರೆಯುತ್ತಿರುತ್ತದೆ.ತನ್ನ ಮಗಳನ್ನು ಕೂಡುಕುಟುಂಬಕ್ಕೆ ಸೊಸೆಯಾಗಿ ಕಳುಹಿಸಿದರೆ ಅಲ್ಲಿ ಅವಳು ಕೆಲಸ ಮಾಡಿ ಮಾಡಿಯೇ ಸೊರಗುತ್ತಾಳೆ.ಅವಳನ್ನು ಒಬ್ಬನೇ ಮಗನಿರುವ ಕಡೆಗೆ ಸೊಸೆಯಾಗಿ ಕಳುಹಿಸಬೇಕು ಎಂಬ ವಿಚಾರಗಳಿರುತ್ತವೆ.ಹಾಗಾಗಿ ಅವಳ ಮದುವೆಯ ಪ್ರಸ್ತಾಪದ ಜೊತೆಯಲ್ಲಿಯೇ ಒಂದೇ ಮಗನಿರಬೇಕು,ತಂದೆ ಇದ್ದರೂ ಪರವಾಗಿಲ್ಲ,ತಾಯಿಯಿರಬಾರದು(!)ತಂದೆ ತಾಯಿ ಇಬ್ಬರೂ ಇದ್ದರೂ ಹೇಗಾದರೂ ಹೊಂದಿಕೊಳ್ಳಬಹುದು, ಆದರೆ ಅತ್ತಿಗೆಯಂದಿರು ಇದ್ದರೆಂದರೆ ತನ್ನ ಮಗಳನ್ನು ಅವರ ಮನೆಗೆ ಸೊಸೆಯಾಗಿ ಕಳಿಸೋದಿಲ್ಲ ಹೀಗೆ ನಾನಾ ಬಗೆಯ ನಿಬಂದನೆಗಳು ಶುರುವಾಗುತ್ತವೆ.ಇದೆಲ್ಲಾ ನಿಬಂದನೆಗಳು ಪೂರೈಸಿದಮೇಲೂ ಗಂಡು ಹಾಗೂ ಹೆಣ್ಣಿನ ನಡುವೆ ಸಂಭವಿಸುವ ಬಿರುಕಿನ ಬಗ್ಗೆ ಸಾವಿರದೆಂಟು ನಿರೂಪುಗಳು ಸಿಗುತ್ತವೆ.ಕೊಪ್ಪಲಗದ್ದೆಯ ಗೌಡರ ಮನೆಯ ಮದುವೆ ಸಂದರ್ಭಗಳಲ್ಲಿ ಇಂತಹ ಪರಿಸ್ತಿತಿ ಎದುರಾಗಿತ್ತೇ ಎಂದು ಕೇಳಿದರೆ ವಿನಾಯಕ ಗೌಡರು ಹೇಳುವ ಮಾತು.. ಇಷ್ಟು ಮದುವೆಯಾಯ್ತು ನಮ್ಮನೇಲಿ.. ಒಂದೇ ಒಂದು ಹೆಣ್ಣಿನ ತಂದೆ ಸಹ ಈ ರೀತಿಯ ಕೊಂಕು ತಗೆದಿಲ್ಲ.ಇಂದಿಗೂ ಕೂಡ ನಮ್ಮಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ.ಅವರಿಗೂ ಅವರ ಹೆಣ್ಮಕ್ಕಳು ಇಲ್ಲಿ ಖುಷಿಯಿಂದ ಇರುವುದನ್ನು ನೋಡಿ ಸಂತಸವಿದೆ.ಇಲ್ಲಿ ಎಲ್ಲರೊಂದಿಗೆ ಒಂದಾಗಿ ಎಲ್ಲ ಸಂದರ್ಭಗಳನ್ನು ಎದುರಿಸುವ ಪಾಠವನ್ನು ಇವರು ಕಲಿಯುತ್ತಿದ್ದರೆ ಯಾವ ತಂದೆ ತಾಯಿ ತಾನೇ ನೋವು ಮಾಡಿಕೊಳ್ಳುತ್ತಾರೆ ಹೇಳಿ...
ಇವರ ಮನೆಯ ಮದುವೆ ಸಂದರ್ಭಗಳನ್ನು ಕೇಳಿದರೆ ಈಗೆರಡು ವರ್ಷಗಳ ಹಿಂದೆ ನಡೆದ ಸಿನಿಮೀಯ ಘಟನೆಯನ್ನು ವಿವರಿಸುತ್ತಾರೆ. ಯಾವ ಗುಟ್ಟನ್ನೂ ಮುಚ್ಚಿಟ್ಟುಕೊಳ್ಳುವ ಜಾಯಮಾನದವರಲ್ಲ ಇಲ್ಲಿಯವರು.'ನಮ್ಮ ಮನೆಯ ಹುಡುಗನೊಂದಿಗೆ ಮದುವೆ ಗೊತ್ತಾದ ಹುಡುಗಿಯೊಬ್ಬಳು ನಾಪತ್ತೆಯಾಗಿರುವುದಾಗಿ ಸುದ್ದಿ ಬರುತ್ತದೆ.ಇದನ್ನು ತಿಳಿದು ನಾವಲ್ಲಿಗೆ ಹೋದರೆ ಅದೊಂದು ಕಟ್ಟು ಕತೆ.ಅಂತೂ ಬೀಗರಾಗುವವರೊಂದಿಗೆ ಮತುಕತೆ ಮುಗಿಸಿಕೊಂಡು ಬಂದೆವು. ಆದರೆ ಮತ್ತೆರಡೇ ದಿನಕ್ಕೆ ಮತ್ತದೇ ಸುದ್ದಿ.ಈ ಬಾರಿಯೂ ಅದು ನಿಜವಾಗಲಿಲ್ಲವಾದರೂ ಅವರ ಮನೆಗೆ ತೆರಳಿ ಹೀಗೆಲ್ಲಾ ಸುದ್ದಿಯ ಕುರಿತು ವಿಚಾರಣೆ ಮಾಡಿಕೊಂಡು ಬಂದದ್ದಾಯಿತು.ಮದುವೆಯ ದಿನ ಬಂದೇ ಬಿಟ್ಟಿತು.ನೆಂಟರೆಲ್ಲ ಬಂದಿದ್ದರು. ಇನ್ನೇನು ಮಹೂರ್ತ ಬಂದೇ ಬಿಟ್ಟಿತು.ಅಷ್ಟೊತ್ತಾದರೂ ಹಣ್ಣಿನ ಕಡೆಯವರು ಬಂದೇ ಇಲ್ಲ. ಎಷ್ಟು ಕಾದರೂ ಬರಲೇ ಇಲ್ಲ.ಆಗ ನಮ್ಮ ಮನೆಯ ಮರ್ಯಾದೆ ಕಾಪಾಡಿದವಳು ನೇತ್ರಾವತಿ ಎಂಬ ಹೆಣ್ಮಗಳು.ಸಂಭಂಧಿಕರೊಬ್ಬರ ಮಾತಿನ ಮೇರೆಗೆ ತತ್ಕ್ಷಣದಲ್ಲಿ ಹಸೆಮಣೆಯೇರಿದಳು.ಇಂದು ನಮ್ಮೆಲ್ಲರೊಂದಿಗೆ ಚೆನ್ನಾಗಿ ಬೆರೆತಿದ್ದಾಳೆ.ಅವಸರದಲ್ಲಿ ನಮ್ಮವಳಾದರೂ ನಮ್ಮ ಕುಟುಂಬವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ.ಈ ನೆಮ್ಮದಿಯ ಹಿಂದೆ ಒಬ್ಬರನ್ನೊಬ್ಬರು ಪರಸ್ಪರ ಅರ್ಥೈಸಿಕೊಳ್ಳುವುದರ ಪಾಲು ಬಲು ದೊಡ್ಡದಿದೆ.
ಇದೆಲ್ಲಾ ಒತ್ತಟ್ಟಿಗಿರಲಿ,ಇವರ ನಡುವೆ ಭಾಂದವ್ಯ ಇರುವ ರೀತಿಯನ್ನು ನೋಡಿದರೆ ಅಚ್ಚರಿ...ಇಲ್ಲಿಯ ನಾಲ್ಕು ಅಂಕಣದ ದೊಡ್ಡ ಮನೆಯಲ್ಲಿ ಗೋಡೆಗಳ ಸಂಖ್ಯೆ ತುಂಬಾ ಕಡಿಮೆ.ಮನೆಯಲ್ಲೂ ಮನದಲ್ಲೂ ಗೋಡೆಗಳು ಇಲ್ಲಿ ತುಂಬಾ ಕಡಿಮೆ.ಮೂರು ಪ್ರತ್ಯೇಕ ಸಂಸಾರಗಳಿದ್ದರೂ ಒಂದೇ ಮನೆಯಲ್ಲಿ ಸಾಂಗವಾಗಿ ಸಾಗುತ್ತಿವೆ.ಉದ್ದಾನುದ್ದ ಪಡಸಾಲೆ.ಒಳಜಗುಲಿಗೂ ಗೋಡೆಯ ಹಂಗಿಲ್ಲ.ಅಲ್ಲಿಂದ ಹೆಬ್ಬಾಗಿಲ ಮೂಲಕ ಒಳಹೊಕ್ಕರೆ ಅಲ್ಲೂ ಮೂರು ಸಬಂಧ ಒಳ ಕೋಲಿ. ಮುಂದೆ ದೇವರ ಮನೆ ಮಾತ್ರ ಮೂರು ಪ್ರತ್ಯೇಕವಾಗಿದ್ದದ್ದು ಬಿಟ್ಟೆರೆ,ಅಡುಗೆ ಮನೆಯೂ ಕಡ ಒಂದೇ ಇದೆ.ಆದರೆ ದಿನವೂ ಬೇರೆ ಬೇರೆ ಅಡುಗೆ ಮಾಡಿದರೂ ಸಹ ಅದನ್ನು ಹಂಚಿಕೊಳ್ಳುವುದು ರೂಢಿ. ವರ್ಷಕ್ಕೆ ಹೊಸಕ್ಕಿ ಹಬ್ಬ,ದೀಪಾವಳಿ,ಆರಧೃ ಮಳೆ ಹಬ್ಬ , ಚೌತಿ, ತುಳಸಿ ಹಬ್ಬ ಹಾಗೂ ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಊಟ ಮಾಡುತ್ತಾರೆ.ಪ್ರತಿ ನಿತ್ಯವೂ ಎಲ್ಲರಮನೆಯಲ್ಲೂ ಒಂದೇ ಸಲ ಊಟಕ್ಕೆ ತೆರಳುವ ರೂಡಿಯೂ ಇದೆಯಂತೆ.!
ಇದೆಲ್ಲಕ್ಕಿಂತ ಹೆಚ್ಚಿನದಾಗಿ ಇಲ್ಲಿ ಪ್ರತಿಯೊಂದು ಸೌಲಭ್ಯ ಕೂಡ ಒಂದೇ ಇರುವುದು ಇನ್ನೊಂದು ಸೋಜಿಗ.ಮನೆಯಂಗಳದಲ್ಲಿ ತುಳಸಿ ಕಟ್ಟೆ ಒಂದೇ ಇದೆ.ಬಾವಿ ಸಹ ಒಂದೇ ಇದೆ. ಮನೆಯ ಹಿಂದುಗಡೆ ಒಂದೇ ಕೊಟ್ಟಿಗೆಯಲ್ಲಿ ದನಗಳನ್ನು ಸಾಕುತ್ತಾರೆ. ಇವರ ಮನೆಯ ಟೆಲಿಪೋನ್ ಸಹ ಒಂದೇ ಇದೆ. (08384-247627) ಪೋನ್ ಹೊರಗಡೆಯೇ ಇರೋದ್ರಿಂದ ನಾವೆಲ್ಲಿಗೇ ಹೋದ್ರೂ ಯಾರಾದ್ರೂ ಎತ್ತಿ ಮಾತನಾಡಬಹುದು, ಆಮೇಲೆ ವಿಷಯ ಕೇಳ್ಕೊಂಡ್ರೆ ಆಯ್ತಪ್ಪಾ ಅನ್ನುತ್ತಾರೆ ಅಶೋಕ ಗೌಡ.
ಮುಂದೆಯೂ ಕೂಡ ಇದೇ ರೀತಿ ಇರುವಂತೆ ದೇವರು ನಮ್ಮ ಮಕ್ಕಳಿಗೆ ಶಕ್ತಯನಗನು ಕೊಡಲಿ ಅನ್ನುತ್ತಾರೆ ಇಲ್ಲಿಯ ಪ್ರತಿಯೊಬ್ಬರೂ ಸಹ.ಯಾವುದೇ ಸ್ವಾರ್ಥವಿಲ್ಲದ ಬದುಕಿನ ವಾಸ್ತಾವಾಂಶಗಳನ್ನು ಸಹಜವಾಗಿ ಸ್ವೀಕರಿಸುತ್ತ ಸಂಬಂಧಗಳಿಗೆ ಪ್ರಾಶಸ್ತ್ಯವನ್ನು ಕೊಡುವ ಇವರಬದುಕು ನಿಜಕ್ಕೂ ಅನುಕರಣೀಯ.
ದಿನದಿಂದ ದಿನಕ್ಕೆ ಮನುಷ್ಯನೆಂಬೋ ಮನುಷ್ಯ ಈ ಬದುಕು ಕೇವಲ ಸ್ವಂತದ್ದು. ತಾನು ಮನ ಬಂದಂತೆ ಬದುಕುತ್ತೇನೆ ಎಂದು ಸಂಬಂಧಗಳನ್ನು ಕಡೆಗಣಿಸಿ ತನ್ನಸುತ್ತ ತಾನೇ ಜೇಡದಂತೆ ಬಲೆ ನೇಯ್ದುಕೊಳ್ಳುತ್ತಿದ್ದಾನೆ.ಇದರ ಪರಿಣಾಮವಾಗಿ ಸಂಕುಚಿತನಾಗುತ್ತಾ ಆಗುತ್ತಾ ಜೀವನದ ನೈಜ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದಾನೆ.ಬೇರೊಬ್ಬನ ಸಲುವಾಗಿ ಒಂದು ಚಿಕ್ಕ ಹೊಂದಾಣಿಕೆಯನ್ನೂ ಸಹ ಮಾಡಿಕೊಳ್ಳಲು ತಯಾರಿಲ್ಲದ ಪರಿಸ್ಥಿತಿಯಲ್ಲಿ ಇಂದಿನ ಹೊಸ ತಲೆಮಾರೆಂಬ ಪ್ರಭೃತಿಗಳು ತಯಾರಾಗುತ್ತಿವೆ. ಇಂತದ್ದರಲ್ಲಿ ಒಂದೇ ಮನೆಯಲ್ಲಿ ಮೂರು ಪ್ರತ್ಯೇಕ ಕುಟುಂಬಗಳು ಒಂದಾಗಿ ಜೀವಿಸುತ್ತ ಆಧುನಿಕ ಜೀವನಕ್ರಮಗಳೆಂಬ ಜೈಲಿನಿಂದ ಬಿಡಿಸಿಕೊಳ್ಳಲು ಸದಾ ಕಾಲ ತುಡಿಯುತ್ತಿದ್ದಾರೆ.ಇವರ್ಯಾಕೆ ನಮ್ಮ ಬದುಕಿನ ಆದರ್ಶವಾಗಬಾರದು?
3 ಕಣ್ಣುಗಳು...
ಈ ಸಾಮರಸ್ಯದ ಬದುಕಿಗೆ ದೇವಕಿ,ಮಾದೇವಿ,ಬಂಗಾರಿ ಇವರು ಮೂರು ಕಣ್ಣುಗಳಿದ್ದಂತೆ.ಒಂದೊಂದು ಕುಟುಂಬಕ್ಕೆ ಒಬ್ಬೊಬ್ಬರಂತೆ ಹಿರಿಯ ಸಾರಥಿಗಳು.. ಕರಿಯಾ ಹುಲಿಯಾ ಗೌಡರ ಸೊಸೆಯಂದಿರಾಗಿ ಈ ಮನೆಯ ಪ್ರವೇಶ ಪಡೆದ ಇವರ ವಂಶಬಳ್ಳಿ ಬೆಳೆದು ಇಂದಿಗೆ ಐವತ್ತು ಜನರನ್ನು ದಾಟಿದೆ. ಮಕ್ಕಳು,ಮೊಮ್ಮಕ್ಕಳನ್ನು ಕಂಡ ಈ ಹಿರಿಯ ಜೀವಗಳು ಈ ಮನೆಯ ಸಾಮರಸ್ಯದ ರೂವಾರಿಗಳು. ಹತ್ತು ಸೊಸೆಯರೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ಇವರನ್ನು ಮಾತನಾಡಿಸಿದರೆ ಸೊಸೆಯಂದಿರ ಬಗ್ಗೆ ಹೆಮ್ಮೆಯ ಮಾತು ಹೊರಬೀಳುತ್ತದೆ.ಎಲ್ಲೆಲ್ಲಿಂದಲೋ ಬಂದವರು ಹೊಂದಿಕೊಂಡು ಹೋಗ್ತಾರೋ ಇಲ್ಲವೋ....ಅನ್ನುವ ಆತಂಕ ಮೊದಮೊದಲು ಕಾಡಿತ್ತಾದರೂ ಎಲ್ಲ ಸೊಸೆಯಂದಿರು ಹೊಂದಿಕೊಂಡಿದ್ದು ನೋಡಿ ಖುಷಿಯಾಯಿತು.ಎಲ್ಲಾದರೂ ಚಿಕ್ಕಪುಟ್ಟ ಸಮಸ್ಯೆಗಳು ತಲೆದೋರಿದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. "ನಾವು ಬಲ್ಲಾದೋರು ತಿಳಿಸಿ ಹೇಲಿದ್ರೆ ತಾನೇ ಕಿರೀರು ಅರ್ಥ ಮಾಡಿಕಳ್ಳಾದೂ... ಅದರಂತೆ ನಡಿಯಾದೂ..." ಅನ್ನುತ್ತಾರೆ.ಕುಟುಂಬ ಮೂರಾದರೂ ಮನಸ್ಸು ಒಂದೇ.ಇದುವೇ ಈ ಸಂಸಾರದ ಸಂತೋಷದ ಕೀಲಿಕೈ.ಇಂದಿನ ಸಮಾಜದ ಕೌಟುಂಬಿಕ ವ್ಯವಸ್ಥೆ ಇಂತಹ ಸಾವಿರ ಸಂತಸದ ಸಂಗತಿಗಳಿಂದ ಗಾವುದ ಗಾವುದ ದೂರ ಸರಿದಿದೆ.ಅಲ್ಲವೇ?
3 ಹೆಸರಿನ ಆರು ಮಂದಿ!
ಹೌದು! ಸಾಮಾನ್ಯವಾಗಿ ಇಷ್ಟು ದೊಡ್ಡ ಕುಟುಂಬದಲ್ಲಿ ಒಂದೇ ಹೆಸರಿನ ಇಬ್ಬರು ಇದ್ದರೆ ಅವರನ್ನು ಹೇಗೆ ಕರೆದುಕೊಳ್ಳುತ್ತಾರೆ.. ಮಾತನಾಡಿಸಿಕೊಳ್ಳುತ್ತಾರೆ... ಎಂಬ ಸಹಜ ಕುತೂಹಲದಿಂದ ಕೇಳಿದರೆ,ಒಂದಲ್ಲ ಎರಡಲ್ಲ..ಮೂರು ಹೆಸರಿನ ಆರು ಮಂದಿಯಿದ್ದಾರೆ!ಭಾರತಿಯಂದಿರಿಬ್ಬರು,ಮತ್ತಿಬ್ಬರು ಪಾರ್ವತಿಯಂದಿರು.ನೇತ್ರಾ ಎಂಬ ಸೊಸೆಯಂದಿರಿಬ್ಬರು.ಒಟ್ಟೂ ಆರು ಮಂದಿ.ಹಿರಿ ಸೊಸೆಗೆ ದೊಡದಡ ಪರ್ವತಿ ಅಂದರೆ ಕಿರಿಯ ಸೊಸೆಗೆ ಸಣ್ಣ ಪಾರ್ವತಿ ಅಂತ ಕರೆದುಕೊಳ್ಳುತ್ತಾರೆ.ಒಂದೇ ಒಂದು ದಿವಸವೂ ಒಬ್ಬರನ್ನು ಕರೆದರೆ ಇನ್ನೊಬ್ಬರು 'ಓ'ಗೊಟ್ಟ ಪ್ರಸಂಗ ನಡೆದಿಲ್ಲ ಅನ್ನುತ್ತಾರೆ ಗೌಡರ ಮನೆಯ ಸಣ್ಣ ನೇತ್ರಾ!
ಅಹಾ..3 ಚಹಾ! .jpg)
ಮೂರು ಕುಟುಂಬಗಳು ಒಟ್ಟಾಗಿ ಜೀವನಸಾಗಿಸುತ್ತಿರುವ ಕುತೂಹಲದ ಸಂಗತಿಯ ಮಾಹಿತಿಯ ಜಾಡು ಹಿಡಿದು ಕೊಪ್ಪಲಗದ್ದೆಗೆ ತೆರಳಿದಾಗ ಮದ್ಯಾಹ್ನದ ಉರಿ ಬಿಸಿಲು.ನಾಲ್ಕಾರು ಮಹಿಳೆಯರು ಅಂಗಳದಲ್ಲಿ ಅಡಿಕೆ ಸುಲಿಯುತ್ತಿದ್ದರು.ನಮ್ಮನ್ನು ಅವರಿಗೆ ಪರಿಚಯಿಸಿಕೊಂಡು ನಮಗೆಅಗತ್ಯವಿದ್ದ ಮಾಹಿತಿಗಳನ್ನು ಪಡೆದುಕೊಂಡ ನಂತರ ಹೊರಟರೆ ಏಕಕಾಲಕ್ಕೆ ಮೂರೂ ಮನೆಗಳಿಂದ ಚಹಾ ಮಾಡಿಕೊಂಡು ನಮ್ಮೆದುರಿನ ಟೇಬಲ್ಲಿನ ಮೇಲೆ ತಂದಿಟ್ಟರು.!ಅದ್ಯಾವ ಅವಸರದಲ್ಲಿ ಮಾಡಿಕೊಂಡು ಬಂದರೋ ಗೊತ್ತಿಲ್ಲ.ಈಗೀಗ ನಮ್ಮಜೊತೆ ಮಾತಾಡುತ್ತಿದ್ದವರು ಹೋಗಿ ಚಹಾ ತಯಾರಿಸಿ ತಂದಿದ್ದರೆ ನಮಗೆ ಕುಡಿಯಲೂ ಆಗದೇ, ಬಿಟ್ಟು ಹಾಗೇ ಎದ್ದು ಬರಲಿಕ್ಕೂ ಆಗದ ಸಂಕಟ.
ನಾಗರಾಜ,ವೈದ್ಯ,
ಗಣರಾಜ್ಯೋತ್ಸವ ವಿಶೇಷ ಲೇಖನ
ಉದಯ್ ಇಟಗಿ. ಕನ್ನಡ ಸಾಹಿತ್ಯ ಲೋಕದಲ್ಲಿ ಆಗಾಗ ಕೇಳಿಬರುವ ಹೆಸರು.ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಇವರು ಈಗ ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದ ಇವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡ ಇವರು ಇದೀಗ ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸುತಿದ್ದಾರೆ.
ಇವರ ಕೆಲವು ಕವಿತೆ, ಲೇಖನಗಳು ಆನ್‌ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಶ್ರೀ ಉದಯ್ ಇಟಗಿಯವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಇದೀಗ ಅರೇಬಿ ಕವನಗಳನ್ನು ಕನ್ನಡಕ್ಕೆ ಅನುವಾದಿಸುವದರಲ್ಲಿ ನಿರತರಾಗಿದ್ದಾರೆ. ವಿದೆಶದಲ್ಲಿದ್ದುಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಆಸ್ತಿ ...
- ಅಶ್ರಫ್ ಮಂಜ್ರಾಬಾದ್.
ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು! 
ಪ್ರಿಯ ಓದುಗರೇ... ಪ.ಗೋ. ಅವರ 5 ಪತ್ರಗಳನ್ನು ಕಳೆದ ಐದು ವಾರಗಳಿಂದ ನಿಮ್ಮ ಮುಂದಿಟ್ಟಿರುತ್ತೇವೆ. ಅಭೂತಪೂರ್ವ ಪ್ರತಿಕ್ರಿಯೆಗಳು ನಿಮ್ಮೆಲ್ಲರಿಂದ ನಮಗೆ ಬಂದಿವೆ ಎನ್ನಲು ಸಂತೋಷವಾಗುತ್ತಿದೆ. ಇದು ಪ.ಗೋ. ಅವರ 6ನೆಯ ಪತ್ರ. ಕೊನೆಯ ಪತ್ರ ನಿಮ್ಮ ಮುಂದಿಟ್ಟಿದ್ದೇವೆ. ಪ್ರೀತಿಯಿಂದ ಸ್ವೀಕರಿಸಿ. ಮುಂದಿನ ವಾರ ಪ.ಗೋ.ಅವರ ಮತ್ತಷ್ಟು ವೈಶಿಷ್ಠ್ಯಪೂರ್ಣ ಬದುಕು - ಬರಹ ಈ ಕನಸಿನಲ್ಲಿದೆ. ಅಲ್ಲಿಯ ತನಕವೂ ನಿಮ್ಮ ಅಭಿಪ್ರಾಯಗಳು ಹರಿದು ಬರಲಿ ಎಂಬ ಆಶೆ ನಮ್ಮದು. ಇಂತು ಪ್ರೀತಿಯಿಂದ - ಸಂ.
ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು. ನಮ್ಮ ಆಫೀಸಿನಲ್ಲಿ (ಸದ್ಯಕ್ಕೆ ನಾನೊಬ್ಬ ಮಾತ್ರ) ಬನೀನುಧಾರಿಯಾಗಿ ಕೆಲಸ ಮಾಡುವ ಹಾಗಿದ್ದೇನೆ. ಉಳಿದವರಿಗೆ ಅಭ್ಯಾಸವಾಗಿದೆಯೊ ಏನೊ! ಅದಕ್ಕೇ ಕುಮಾರ ಕಂಠನ ಒದ್ದಾಟ ನೋಡಲಾಗದೆ ಅವನನ್ನು ‘ಅಜ್ಜನ ಮನೆಗೆ’ ಪಾರ್ಸೆಲ್ ಮಾಡಿದುದು. ಇನ್ನು ಮುಂದೆಯೂ ಅದೇ ರೀತಿಯ ವ್ಯವಸ್ಥೆಯನ್ನೇ ಏನಾದರೂ ಮಾಡಬೇಕಷ್ಟೆ - ಬೇರೆ ನಿರ್ವಾಹವಿಲ್ಲ.
ಈಗಲಂತೂ, ಪುಟದ ಮೂರನೆ ಗೆರೆಗೆ ಮುಟ್ಟುವಾಗ ಹೊರಗೆ ಇದ್ದಕ್ಕಿದ್ದಂತೆ ಜಡಿಮಳೆ ಸುರಿದು ಮೂರು ಬಾರಿ ಪವರ ಆಫ್ - ಕಾರ್ಯಾಲಯ ಕತ್ತಲಲ್ಲಿ ಮುಳುಗಿತ್ತು. ಈ ಮಳೆಯಿಂದಾಗಿ ಯಾವ ಉಪಕಾರವೂ ಇಲ್ಲ - ನಾಳೆಯ ದಿನ ಸೆಖೆ ಇನ್ನಷ್ಟು ಹೆಚ್ಚುತ್ತದೆ ಅಷ್ಟೆ.
ಅವೆಲ್ಲವೂ ಮುಗಿದು ಈಗ outstanding take.
ಕರ್ನಾಟಕ ಟೈಮ್ಸ್ದ ರೂಮರ್ ವಿಚಾರ ತಿಳಿಸಿ. ಸತ್ಯನ ಪತ್ರ ಬರುವ ಎರಡು ದಿನಗಳ ಮೊದಲಿನಿಂದ ಆರಂಭವಾದ ಒಂದು ದುಸ್ಥಿತಿ ಈಗಲೂ ಮುಂದುವರಿಯುತ್ತಾ ಇದೆ. ನೀವು ‘ವಿಮಾನ ಸಂಚಿಕೆ’ಯ ಕೆಲವು ಜಾಹೀರಾತುಗಳನ್ನು ಓದಿದ್ದರೆ ಪರಿಸ್ಥಿತಿ ಅರ್ಥವಾಗುತ್ತಿತ್ತು. Wanted graduates for trg as Sub Editors ಎಂಬುದರ ಮೂರು repeat insertions ಬಂದವು. ಅರ್ಜಿ ಕೊಟ್ಟವರು ಒಬ್ಬರು ಮಾತ್ರ!
ಅಂದರೆ, ಕಳೆದ ತಿಂಗಳಷ್ಟೇ capital ಎಂದರೆ ರಾಜಧಾನಿ ಎಂದು ಮಾತ್ರವೇ ಗೊತ್ತಿದ್ದ ಒಬ್ಬ graduವೇಟರು ಕೆಲಸ ಬಿಟ್ಟೋಡಿದರು. ಅವರ ಮೊದಲು ಇಬ್ಬರು ಹೋಗಿದ್ದರು. ಈ ದಿನದಿಂದ ಹುರುಳಿ ಭೀಮರಾಯರ ಮಗ ರಾಮಚಂದ್ರರಾಯರು ರಾಜಿನಾಮೆ ಇತ್ತಿದ್ದಾರೆ. ಇನ್ನೊಂದು ವಾರದಲ್ಲಿ ಒಬ್ಬರು ಬಿಡಲಿದ್ದಾರೆ. ಅಲ್ಲಿಗೆ ಹಗಲು ಪಾಳಿಯಲ್ಲಿ ಮೂರು ಜನ, ರಾತ್ರಿಯಲ್ಲಿ ನಾಲ್ವರು ಉಳಿದಂತಾಯಿತು. ಈಗಂತೂ 2nd Pageನ ಜೊತೆಗೆ 3 - 4 ಮತ್ತು ಕೆಲವು ಬಾರಿ ಮುಖಪುಟಕ್ಕೂ matter ತಯಾರಿಸಿಟ್ಟು ಜೊತೆಗೆ ವಾರದ ಆತ್ಮಹತ್ಯೆಯ ಎರಡು ಪುಟಗಳನ್ನು ಸಿದ್ಧಗೊಳಿಸಬೇಕಾಗುತ್ತದೆ. ಆದರೂ ಕೆಲಸ ಹೆಚ್ಚಿರುವುದಕ್ಕೆ ಅಲ್ಲ, ನನ್ನ ಬೇಸರ. ಅನಗತ್ಯವಾದ ತೊಂದರೆಗಳನ್ನು ಬೇಕೆಂದೇ ಕೊಡುತ್ತಾರಲ್ಲ ಎಂಬುದಕ್ಕೆ ಅಷ್ಟೆ. ಆದ್ದರಿಂದ ಇಲ್ಲಿ ಎರಡು ವರ್ಷವಾದರೂ ಕಳೆಯಬೇಕೆಂಬ ಆಸೆ ಇರಿಸಿ ಬಂದು ಸೇರಿದ್ದೆ. ಈಗ ಸಾಧ್ಯವಾದಷ್ಟು ಬೇಗ ಬೇರೆಲ್ಲಾದರೂ ಹೋಗೋಣವೆಂದಿದ್ದೇನೆ. ನಿಮ್ಮಲ್ಲಿ ಏನಾದರೂ opening? (ನಾನು ತಮಾಷೆ ಮಾಡುತ್ತಿಲ್ಲ, serious ಆಗಿಯೇ ಬರೆಯುತ್ತಿದ್ದೇನೆ ... ) ಬೇರೆಯೂ ಪ್ರಯತ್ನ ಮಾಡುತ್ತಾ ಇದ್ದೇನೆ, ನೋಡಬೇಕು.
ಅದು ಹಾಗಾದರೆ, ಕಂಪೋಜಿಂಗ್ ವಿಭಾಗದ ಅವಸ್ಥೆ ಬೇರೆಯೇ ಇದೆ. ದಿನ (ಅಂದರೆ 8 ಘಂಟೆ) ಒಂದಕ್ಕೆ 5 ಕಾಲಂ solid matter ಎಳೆಯುವ ಪ್ರಭೃತಿಗಳು ಇಲ್ಲಿನವರು. ಅದೂ 10 pt.ನಲ್ಲಿ. ಆದರೆ ಪ್ರಯೋಜನವೇನು? ಅವರಿಗೆ ದೊರೆಯುವ ವೇತನವಂತೂ stationary levelನಲ್ಲೇ ಇದೆ. ಯಾರಾದರೂ increment ಸುದ್ದಿ ಎತ್ತಿದರೆ ‘ಸಿಗುವಲ್ಲಿಗೆ ಹೋಗಬಹುದು’ ಎಂಬ ಉತ್ತರ ಸಿದ್ಧವಾಗಿಯೇ ಇರುತ್ತದೆ. ಉತ್ತರ ಪಡೆದು ಕೆಲವರು ಹೋಗಿಯೂ ಇದ್ದಾರೆ. ಆದುದರಿಂದ ಅಲ್ಲೂ shortage. Deadline ಹೇಗೋ meet ಆಗುತ್ತದೆ. ಅಂತೂ ಪರಿಸ್ಥಿತಿ ಯಾವ ಕಾರಣವೂ ಇಲ್ಲದೆ ‘ಅಗ್ದಿ ಭಯಂಕರ’ ಆಗಿ ನಿಂತಿದೆ.
ಆದುದರಿಂದ ಪರಿಸ್ಥಿತಿ ಎಲ್ಲಿ ಬಂದು ನಿಲ್ಲುವುದೋ ಹೇಳಲು ಸಾಧ್ಯವಿಲ್ಲ. ಈಗ, ‘ಮಂಗನ ಕೈಯ ಮಾಣಿಕ್ಯ’ದ ಕಥೆಯೊಂದು ಇಲ್ಲಿ ನಡೆಯುತ್ತಿರುವ ವಿಚಾರ. Too hot to handle. ಅದನ್ನು ನಾನು Kodialabail ಬಿಟ್ಟ ದಿನವೇ ಹೇಳಬಹುದು. ಅದಕ್ಕೆ ಮೊದಲು ಹೇಳಲಾರೆ. ಹಾಗಿದೆ ಸ್ವಾಮೀ, ನಮ್ಮಲ್ಲಿನ ಕಥಿ.
ಶ್ರೀ DH ಶ್ರೀನಿವಾಸರು Chief Reporter, Tainadu ಗೊತ್ತು ತಾನೆ? (DH ಶ್ರೀನಿವಾಸ - ‘ಡಚ್ಚ’ ಮುಂದೆ Deccan Heraladನ Sports Reporter ಆದವರು - ಸಂ.]. ಮಂಗಳೂರಿಗೊಂದು ಬಾರಿ ಬಂದು ಹೋಗಿದ್ದರಂತೆ..... ನನಗೆ ಗೊತ್ತಾಗದಂತೆ. ನಾನು ಆನಂತರ ಸುದ್ದಿ ತಿಳಿದು , ಒಂದು ಕಾರ್ಡ್ ಅವರಿಗೆ ಬರೆದಿದ್ದೆ.
ಅಂದ ಹಾಗೆ ಈ ದಿನ ಕಚೇರಿಗೆ ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ, ಮಾಜಿ ಮಂತ್ರಿ H.K.V.Goudh, ಮಾಜಿ ಮಂತ್ರಿ B.V.Baliga ಇವರು ಆಗಮಿಸಿದ್ದರು. "ನಾನು ಅವರನ್ನು ಮಾತನಾಡಿಸಲಿಲ್ಲ". ಅದುವಲ್ಲದೆ ಬಸವನಗುಡಿ ಕಲಾಮಂದಿರದ ಲೇಖಕ ಮ.ನ.ಮೂರ್ತಿಯವರೂ [ಕಾದಂಬರಿಕಾರ ಮ.ನ.ಮೂರ್ತಿ ‘ಜನವಾಣಿ’, ‘ಪ್ರಜಾಮತ’ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದರು - ಸಂ.]ಬಂದಿದ್ದರು. ‘ಬೆಂಗಳೂರಿನ ವಿಶೇಷ’ ಸುದ್ದಿ ಏನೂ ಹೇಳಲಿಲ್ಲ.
ಉಳಿದವರೆಲ್ಲ ಹೇಗಿದ್ದಾರೆ? ನನ್ನಲ್ಲಂತೂ ಯಾವ ಸುದ್ದಿಯೂ ಇಲ್ಲ. ‘ವಿಚಾರವಾಣಿ’ ಎಂಬ ಮಾಜಿ ಶಿವರಾಮ ಕಾರಂತ ಸಂಪಾದಿತ, ಈಗ ಡಾ||ಯಂ.ಬಿ.ಮರಕಿಣಿ ಎಂಬುವರ editingನಲ್ಲಿ ಹೊರಬರುತ್ತಿರುವ ವಾರಪತ್ರಿಕೆಯೊಂದು ಈಗ ಮೂರು ವಾರಗಳಿಂದ ಪುತ್ತೂರಿನ ವಾಗ್ದೇವಿ (?) ಅಚ್ಚುಕೂಟದಿಂದ ಪ್ರಕಟವಾಗುತ್ತಿದೆ ... ಎಂಬುದೊಂದು ಮಾತ್ರ ಸುದ್ದಿ. ಅಲ್ಲೇ ಇನ್ನೊಂದು ವಾರ ಪತ್ರಿಕೆಯೂ ಜನಸಂಘದ ವತಿಯಿಂದ ಪ್ರಸಿದ್ಧವಾಗುತ್ತಿದೆ. ಅದರ ಹೆಸರು "ಭಾರತ".
ವಿವರವಾಗಿ ಬರೆಯುತ್ತೀರಾ? ಏನು ಸುದ್ದಿಯಾದರೂ ಚಿಂತಿಲ್ಲ ... ಯಾವ method ಆರಂಭಿಸಿದರೂ ಆಗಬಹುದು. ಘಂಟೆಯೂ 1:20 ಆಯಿತು. ಪತ್ರವೂ ಮುಗಿಯುತ್ತಾ ಬಂತು. ಕಣ್ಣೆವೆ ಎಳೆಯುತ್ತಿದೆ. ಬರಲೆ? ನಮಸ್ಕಾರ.
ನಿಮ್ಮ
ಪಗೋ
- ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.
ಭಕ್ತಿ ಸಿಂಚನ
``ಕಳೆ - ಬೆಳೆ'' ತೋಟಿಗರೆಲ್ಲರಿಗೆ ಚೆನ್ನಾಗಿ ಗೊತ್ತಿರಬೇಕಾದ ಎರಡು ಶಬ್ಧಗಳು. ತೋಟದಲ್ಲಿ ಕಳೆಯಬೇಕಾದದ್ದು ಕಳೆ. ಬೆಳೆಯಬೇಕಾದದ್ದು ಬೆಳೆ.
ನಿತ್ಯವೂ ತೋಟಕ್ಕೆ ಹೋಗದ ಕೃಷಿಕರ ತೋಟದಲ್ಲಿ, ಬೆಳೆಗಳಿಗಾಗಿ ಹಾಕಿದ ಸಾರವನ್ನೆಲ್ಲಾ ಹೀರಿಕೊಂಡು , ಕಳೆ ಸಮೃದ್ಧವಾಗಿ, ಬೆಳೆಯಬೇಕಾದ ಬೆಳೆಗಳು ಕಳೆದು ಹೋಗುತ್ತವೆ. ಆದರೆ ನಿಯತವಾಗಿ ತೋಟವನ್ನು ವೀಕ್ಷಿಸುವ ಕೃಷಿಕ ಕಳೆಯನ್ನು ಕಳೆದು ತಾನು ಹಾಕುವ ಸಾರ ಬೆಳೆಗಳಿಗೇ ಹೋಗುವಂತೆ ನೋಡಿಕೊಂಡು ತನ್ನ ತೋಟವನ್ನು ಬೆಳೆಗಳಿಂದ ಸಮೃದ್ಧವಾಗಿರಿಸುತ್ತಾನೆ.
ಮಾನವನ ಜೀವನವೇ ಒಂದು ಸುಂದರವಾದ ತೋಟ. ಜೀವನವನ್ನು ಹಸನುಗೊಳಿಸುವ ಸದ್ಗುಣಗಳೇ ಬೆಳೆಯಬೇಕಾದ ಬೆಳೆ. ಯಾವ ಸತ್ವವನ್ನೂ ಕೊಡದೆ ಜೀವನವನ್ನು ಹಾಳುಗೈಯುವ ದುರ್ಗುಣಗಳೇ ಕಳೆಯಬೇಕಾದ ಕಳೆ. ದುರದೃಷ್ಟವಶಾತ್ ಇಂದಿನ ನಮ್ಮ ಭೋಗ ಜೀವನದಲ್ಲಿ ಬೆಳೆಯಬೇಕಾದ ಸದ್ಗುಣಗಳು ಕಳೆದುಹೋಗುತ್ತವೆ. ಕಳೆಯಬೇಕಾದ ದುರ್ಗುಣಗಳು ಬೆಳೆಯುತ್ತಿವೆ. ಪರಿವರ್ತನೆ ಪರಿವೀಕ್ಷಣೆ ಅಗತ್ಯ. ಕೃಷಿಕ ಆಗಾಗ ತೋಟವನ್ನು ವೀಕ್ಷಿಸುವಂತೆ ನಮ್ಮ ಜೀವನವನ್ನು ನಾವು ಆಗಾಗ ವೀಕ್ಷಿಸಿಕೊಳ್ಳುತ್ತಿರಬೇಕು.
ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:
ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಷೈರಿತಿ
ರಾತ್ರಿ ಎಲ್ಲ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಮುನ್ನ ಆತ್ಮಾವಲೋಕನಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಆ ಸಮಯದಲ್ಲಿ ``ನನ್ನ ಇಂದಿನ ಜೀವನ ಪಶು ಜೀವನಕ್ಕೆ ಸಮನಾಗಿದೆಯೇ? ಅಥವಾ ಸತ್ಪುರುಷರ ಜೀವನಕ್ಕೆ ಸಮನಾಗಿದಯೇ?'' ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕು. ಪಾಶವೀಗುಣಗಳನ್ನು ಗುರುತಿಸಿ ಒಂದೊಂದನ್ನಾಗಿ ಬಿಡುತ್ತಾ ಬಂದರೆ ಮಾನವ ಜೀವನ ಸದ್ಗುಣಗಳ ಬೆಳೆಯಿಂದ ಸಮೃದ್ಧವಾದ ಸುಂದರ ಹೂದೋಟವಾಗುವುದರಲ್ಲಿ ಸಂಶಯವಿಲ್ಲ.
ದಿನದಲ್ಲಿ ಹಗಲು - ರಾತ್ರಿಗಳಿರುವಂತೆ , ಒಂದೇ ಗುಲಾಬಿ ಗಿಡದಲ್ಲಿ ಹೂ - ಮುಳ್ಳು ಎರಡೂ ಇರುವಂತೆ, ಒಂದೇ ಸರೋವರದಲ್ಲಿ ಕೆಸರು - ಕಮಲಗಳಿರುವಂತೆ ಮನುಷ್ಯನ ವ್ಯಕ್ತಿತ್ವದಲ್ಲಿ ಒಳಿತು ಕೆಡುಕುಗಳೆರಡೂ ಇವೆ. ಕೇವಲ ಕೆಡುಕಿದ್ದರೆ ಅವನು ರಾಕ್ಷಸನೆನಿಸುತ್ತಾನೆ. ಕೇವಲ ಒಳಿತೇ ಇದ್ದಾಗ ದೇವನೆನಿಸುತ್ತಾನೆ.
ಒಳಿತು - ಕೆಡುಕುಗಳೆರಡೂ ಸೇರಿಕೊಂಡಾಗ ಮನುಷ್ಯನೆನಿಸುತ್ತಾನೆ. ಆದ್ದರಿಂದ ಜೀವನ ಹೊಸ್ತಿಲು ಇದ್ದಂತೆ. ಮನುಷ್ಯತ್ವದಿಂದ ದೈವತ್ವಕ್ಕೇರಲೂಬಹುದು. ರಾಕ್ಷಸತ್ವಕ್ಕಿಳಿಯಲೂಬಹುದು. ನಮ್ಮ ಗುರಿ ದೇವತ್ವದ ಕಡೆಗೆ ಇರಲಿ. ಅಲ್ಲವೇ?
- ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.ಶ್ರೀ ರಾಮಚಂದ್ರಾಪುರ ಮಠ., ಹೊಸನಗರ.
ಪ್ರತಿಷ್ಠಿತ ಸ್ವರ್ಣಕಮಲ ಪ್ರಶಸ್ತಿಯಲ್ಲಿ ಕನ್ನಡ ಚಿತ್ರಗಳು ತಮ್ಮ ಸಾಧನೆ ಮೆರೆದಿವೆ. ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಕನ್ನಡದ ಗುಬ್ಬಚ್ಚಿಗಳು ಸ್ವರ್ಣಕಮಲ ಪ್ರಶಸ್ತಿಪಡೆದುಕೊಂಡಿದೆ.ಅತ್ಯುತ್ತಮ ಕನ್ನಡ ಭಾಷಾ ಚಿತ್ರವಾಗಿ ವಿಮುಕ್ತಿ ,ಪ್ರಾದೇಶಿಕ ಚಿತ್ರವಾಗಿ ತುಳುವಿನ ಗಗ್ಗರ ಪ್ರಶಸ್ತಿಗೆ ಪಾತ್ರವಾಗಿದೆ.ಕನ್ನಡ ಚಿತ್ರರಂಗಕ್ಕೆ ಒಂದು ಸ್ವರ್ಣಕಮಲ ಹಾಗೂ ಎರಡು ರಜತಕಮಲಗಳು ಪ್ರಾಪ್ತಿಯಾಗಿವೆ.
ಸಾಹಿತ್ಯ
ಈ ಹಿಂದೆ ಯಾನ ಕಥಾಸಂಕಲನದ ಮೂಲಕ ಹೊಸ ಕಥೆಗಳನ್ನು ಸೃಷ್ಟಿಸಿದ ಸೃಜನಶೀಲ ಕಥೆಗಾರ ಪ್ರೇಮಶೇಖರರ ಮತ್ತೊಂದು ಕಥಾಸಂಕಲನ ಕನ್ನಡಿ. ಪತ್ತೆದಾರಿ, ಫ್ಯಾಂಟಸಿಯ ಮೂಲಕ ಕಥೆಯನ್ನು ನಿರೂಪಿಸುವ ಅವರು ಕನ್ನಡಿಯಲ್ಲಿ ತೀರ ಹೊಸತೆನ್ನಬಹುದಾದ ಮತ್ತು ಸಮಾಜದ ಎಲ್ಲಾ ಸ್ತರಗಳ ಕಗ್ಗಂಟು, ವ್ಯಭಿಚಾರ, ಮೋಸ ಮುಂತಾದವುಗಳಿಗೆ ಕನ್ನಡಿ ಹಿಡಿದಿರುವುದು ಅವರ ಸಾಹಿತ್ಯ ಕೃಷಿಯ ಒಳ್ಳೆಯ ಪ್ರಯತ್ನವಾಗಿದೆ.ಕನ್ನಡಿ ಕಥಾಸಂಕಲನದಲ್ಲಿ ಹತ್ತು ಕಥೆಗಳಿದ್ದು ಒಂದೊಂದು ಕಥೆಯು ಸಮಾಜದ ಆಗುಹೋಗುಗಳನ್ನು ಕೂಲಂಕಷವಾಗಿ ಬಿಚ್ಚಿಡುತ್ತ ಹೋಗುತ್ತವೆ. ಕನ್ನಡಿ ಕಥೆಯಲ್ಲಿ ಅನಿವಾರ್ಯ ಕಾರಣಗಳಿಗೆ ಕಸಾಯಿಖಾನೆಯನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿ, ಅಲ್ಲಿ ಕುರಿಗಳನ್ನು ಕಡಿಯುವ ವಿಧಾನದ ಬಗ್ಗೆ ಆಕ್ಷೇಪವೆತ್ತುವ ನಾಯಕ ಹೃದಯತಹ ಕಟುಕನಲ್ಲ.
ಅವುಗಳನ್ನು ಮಾಂಸಕ್ಕಾಗಿ ಸಾಯಿಸುವ ರೀತಿಯಲ್ಲಿ ಅವುಗಳು ಪಡುವ ಯಾತನೆಯನ್ನು ಗಮನಿಸಿ, ಒಂದೆ ಏಟಿಗೆ ಸಾಯಿಸಲು ಸೂಚಿಸುತ್ತಾನೆ. ಆದರೆ ಒಂದೇ ಏಟಿಗೆ ಅವುಗಳನ್ನು ಸಾಯಿಸುವುದರಿಂದ ಅನುಭವಿಸುವ ನೋವು ಹೆಚ್ಚು ಅನ್ನುವುದನ್ನು ಲೇಖಕರು ವೈಜ್ಞಾನಿಕ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುವುದು ಮನಸ್ಸಿಗೆ ಸಮಾಧಾನ ನೀಡುತ್ತದೆ. ಕಥೆ ಓದಿ ಮುಗಿಸಿದರೂ ಕಸಾಯಿಖಾನೆಯ ರೌದ್ರತೆ ಓದುಗನನ್ನು ಕಾಡುತ್ತಲೇ ಇರುತ್ತದೆ.
ಅಲೆಮಾರಿಗಳ ಬದುಕು ಮತ್ತು ಇಂದಿನ ಸಾಮಾಜಿಕ ಸಮಸ್ಯೆಯಾದ `ಭಯೋತ್ಪಾದನೆಯ ಭೀತಿಯನ್ನು ಬಿಂಬಿಸುವ ಕಥೆ ಗಾಯ. ಮನೆಯ ಎದುರು ಬಂದ ಅಲೆಮಾರಿಗಳ ದಿಂಡು ಖಾಲಿ ಜಾಗದಲ್ಲಿ ಪಿರಮಿಡ್ಡಿನಂತೆ ಮನೆಯನ್ನು ನಿರ್ಮಿಸಿ ಊಹಾ ಪೋಹಗಳಿಗೆ ಎಡೆಯಾಗುವುದು ಚೆನ್ನಾಗಿ ನಿರೂಪಿತವಾಗಿದೆ. ಅಪರಿಚಿತರ ಬಗ್ಗೆ ಅನುಮಾನ ಪಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ನೆರೆಕರೆಯವರೆಲ್ಲಾ ಒಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಕಥೆಯ ಉತ್ತರಾರ್ಧ ಪ್ಯಾಂಟಸಿಯಲ್ಲಿ ಕೊನೆಯಾಗುವುದು ತುಸು ಗೊಂದಲವೆನಿಸಿದರೂ ಒಳ್ಳೆಯ ಕಥೆ ಗಾಯ ಸೆಕ್ಯೂಲಿರಿಸಂ ಅನ್ನು ವಿಢಂಬನಾತ್ಮಕವಾಗಿ ನಿರೂಪಿಸುವ ಹಾಗೂ ಸರಕಾರ ಮತ್ತು ಧಾರ್ಮಿಕ ಬಂಡುಕೋರರ ನಡುವಿನ ಕದನವಿರಾಮದ ನಂತರದ ಏಳಿಗೆಯ ಕಥೆ `ಮುಖಾಮುಖಿ. ರಾಜಕೀಯದ ಅಧಿಕಾರವಿರುವಾಗ ಜನಪ್ರತಿನಿಧಿಗಳು ಪ್ರಜೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಮನೋಜ್ಞವಾಗಿ ತೆರೆದಿಡುವ ಕಥೆಯಿದು. `ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ಕಥೆಯಲ್ಲಿ ಅಭಿವೃದ್ಧಿಯಿಂದ ಕೆಡುಕಾಗಿ ಮತ್ತೆ ಅಭಿವೃದ್ಧಿಯನ್ನೇ ಬಯಸದ ಜನ, ವಿಚಾರವಾದಿ ಸಂಘಟನೆಯ ಎದುರು ನಿಲ್ಲುತ್ತಾರೆ. ಈ ಕಥೆ ಅಭಿವೃದ್ಧಿಯ ಹೆಸರಲ್ಲಿ ನಡೆಯುವ ಆಧ್ವಾನಗಳನ್ನು ಚಿತ್ರಿಸುತ್ತದೆ.
ಸಮಾಜದಲ್ಲಿ ಏನನ್ನು ಬಯಸದ ಮತ್ತು ತನ್ನಷ್ಟಕ್ಕೆ ತಾನಿರುವ ವ್ಯಕ್ತಿ ನಾಗಲಿಂಗಂನ ಹೊಸ ಸಂಬಂಧದ ಕಥೆಯಾಗಿ ಮೂಡಿರುವ ಕಥೆ `ಅರ್ಥ. ಪ್ರೊ. ಸಂಗೊಟೈಯವರ ಮಾತಿನಂತೆ ಅವನನ್ನು ವಿಚಾರಿಸುವ ಕಥಾನಾಯಕನಿಗೆ ಮಾತಾಡಲು ಅವಕಾಶ ನೀಡದ ನಾಗಲಿಂಗಂ ತನ್ನ ಹೆಂಡತಿಯ ಸಾವಿಗೆ ಪರೋಕ್ಷವಾಗಿ ಕಾರಣನಾಗುತ್ತಾನೆ. ಮುಂದೆ ಅವನು ಅರೆಸ್ಟ್ ಆಗಿ ಬಿಡುಗಡೆಯಾದರೂ ತನ್ನ ಹೆಂಡತಿಯನ್ನು ಕೊಲೆ ಮಾಡದೆ ಅವಳಾಗಿಯೇ ದೂರವಾಗುವಂತೆ ಮಾಡಿದ ಅವನ ಚಾಣಾಕ್ಷ ಬುದ್ಧಿಗೆ ಬೆರಗಾಗುತ್ತಾನೆ ನಿರೂಪಕ. ಮಗಳ ಸಾವಿನ ಬಗ್ಗೆ ದೂರು ಕೊಟ್ಟ ಅತ್ತೆಯೇ ದೂರನ್ನು ವಾಪಾಸು ತೆಗೆದುಕೊಂಡು ಕೇಸ್ ಅಲ್ಲಿಗೆ ಮುಚ್ಚಿ ಹೋಗುತ್ತದೆ.
ಬಾಲ್ಯ ಸಖ್ಯದ ಇತಿಮಿತಿಗಳಿಗೊಂದು ಪರಿಶುದ್ಧ ಮನಸುಗಳೆರಡರ ವ್ಯಾಪ್ತಿಯೊಳಗೆ ಸುಂದರವಾಗಿ ಕಟ್ಟಿದ ಕಥೆ ಈ ಕಥೆಗಳಿಗೇಕೆ ಆದಿ ಅಂತ್ಯಗಳಿಲ್ಲ? ಏನೋ ನಿರೀಕ್ಷಿಸುವ ಹೊತ್ತಿಗೆ ಏನೂ ನಡೆಯದೆ; ಏನೊ ಆಗದೆನ್ನುವಾಗ ಏನೋ ಘಟಿಸಿ, ನಾವೇ ಆ ಪಾತ್ರಗಳಾಗಿ ಹೋಗುವಷ್ಟು ಮನಸ್ಸನ್ನು ಆವರಿಸುವ ಕಥೆಯಿದು. ಇದೇ ಸಂಕಲನದ ಪ್ಲಸ್ ಪಾಯಿಂಟ್ ಆಗಿರುವ ಈ ಕಥೆ ನಮ್ಮದಲ್ಲದ ಹಾದಿಯಲ್ಲಿ ಬಹುದೂರ ನೆನಪಾಗಿ ಸಾಗುವ ಕಥೆ.
ಈ ಸಂಕಲನದ ಇನ್ನೊಂದು ಉತ್ತಮ ಕಥೆ ಕ್ರೌರ್ಯ ಅಸಹಾಯಕ ಮಹಿಳೆಯೊಬ್ಬಳನ್ನು ಅಮಾನುಷವಾಗಿ ಬಳಸಿಕೊಳ್ಳುವ ನೀತಿ ಗೆಟ್ಟ ಯುವಕರು, ಸಮಾಜ ಎತ್ತ ಸಾಗಿದೆ ಅನ್ನುವುದನ್ನು ತಿಳಿಸಿದರೆ, ಇಂತಹ ಅವಮಾನವೀಯ ಸ್ಥಿತಿಯಲ್ಲಿ ದೂರ ನಿಂತು ಪೌರುಷ ತೋರುವ ಇನ್ನೊಬ್ಬ ಯುವಕ, ತನ್ನ ಹೊಟ್ಟೆ ತುಂಬಿಸುವ ವಾಹನವನ್ನೇ ಬಿಟ್ಟು ಓಡುವ ಡ್ರೈವರ್ ಮತ್ತು ಇಡೀ ಪರಿಸ್ಥಿತಿಯನ್ನು ಪ್ರತಿಭಟಿಸುವ ವಯಸ್ಕನ ಪಾತ್ರ ಚಿತ್ರಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಆ ಕೃತ್ಯದ ಬಗ್ಗೆ ಡಿಟೈಲ್ಡ್ ರೀಪೋರ್ಟ್ ತಯಾರಿಸುವುದಕ್ಕೆ ಮಹಿಳೆಯ ಅಸಹಾಯಕ ಪರಿಸ್ಥಿತಿಯ ಚಿತ್ರಗಳನ್ನು ತೆಗೆಯಲು ಮುಂದಾಗುತ್ತಾನೆ ಯುವಕ. ಅಂತಹ ಪರಿಸ್ಥಿತಿಯಲ್ಲಿ ವೃದ್ಧನ ಮಾತುಗಳು ಮತ್ತು ಸಾಂತ್ವನ ಆ ಮಹಿಳೆಗೆ ಮಾತ್ರವಲ್ಲ ಓದುಗನಿಗೂ `ಕೊನೆಗೂ ಸಹಾಯಕ್ಕೆ ಒಬ್ಬನಿದ್ದಾನಲ್ಲಾ? ಅನ್ನುವ ಸಮಾಧಾನವನ್ನು ನೀಡುತ್ತದೆ.
ಫ್ಯಾಂಟಿಸಿಯ ಲೋಕಕ್ಕೆ ಎಳೆದೊಯ್ಯುವ ಉಗಮ ಮತ್ತು ಹುತ್ತ ಕಥೆಯಲ್ಲಿ ಬರುವ ಪ್ರೊಪೆಸರ್ ಮತ್ತು ಬಾಲ್ಕನಿಯ ಒಂಟಿತನದ ಭಾವೊದ್ವೇಗವನ್ನು ಬಹಳ ಹಾಸ್ಯಮಯವಾಗಿ ನಿರೂಪಿಸುವ ಕಥೆ. ಮುಖದಲ್ಲೊಂದಿಷ್ಟು ಮಂದಹಾಸವನ್ನು ಮೂಡಿಸಬಲ್ಲ ಕಥೆ ಇದು.
ಹಾಸ್ಯದಿಂದ ಆರಂಭವಾಗಿ ಬದುಕಿನ ಕಹಿ ಸತ್ಯವನ್ನು ಬಿಚ್ಚಿಡುವ ಕಥೆ ಮೂಡಲ ಸೀಮೆಯ ಮುಸ್ಸಂಜೆ ಸೊಲ್ಲು ತನ್ನ ಸ್ವಂತ ಅಕ್ಕನೆಂದು ಭ್ರಮಿಸಿದವನು ಆಕೆ ತನ್ನ ತಾಯಿಯೆನ್ನುವ ನಿಗೂಢತೆಯನ್ನು ಬಿಚ್ಚಿಡುವಾಗಿನ ಆನಂದ ಕೇವಲ ಹುಡುಗನದಲ್ಲ, ಓದುಗರದ್ದೂ.
ಪ್ರೇಮಶೇಖರ ಅವರ ಕನ್ನಡಿ ಓದುಗರನ್ನು ಪ್ರತಿಫಲಿಸುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕವನ್ನು ಹೊರತಂದಿರುವವರು ವಿಸ್ಮಯ ಪ್ರಕಾಶನ `ಮೌನ 366, ನವಿಲು ರಸ್ತೆ, ಎ-ಬಿ ಬ್ಲಾಕ್, ಕುವೆಂಪುನಗರ, ಮೈಸೂರು 570 023 ಇವರು.
-ಅನು ಬೆಳ್ಳೆ.
ರಾಜ್ಯ - ರಾಷ್ಟ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ.ಗೋ.ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆಗಳ ಯುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿಯು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು,ಕಾಸರಗೋಡು ಹಾಗೂ ಚಿಕ್ಕಮಗಳೂರು ವ್ಯಾಪ್ತಿಯನ್ನು ಹೊಂದಿದೆ. ಮಿಕ್ಕ ನಾಲ್ಕು ಜಿಲ್ಲೆಗಳ ಪ್ರವೇಶಪತ್ರಗಳನ್ನು ಆಯಾ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಸಂಘದ ಮುಖಾಂತರ ಆಹ್ವಾನಿಸಲಾಗಿದೆ.
ಗ್ರಾಮೀಣ ವರದಿಗಳನ್ನು ಮಾತ್ರ ಪ್ರಶಸ್ತಿಗೆ ಆಹ್ವಾನಿಸಲಾಗಿದೆ.2009ರ ಜ.1ರಿಂದ ಡಿಸೆಂಬರ್ 31ರ ಒಳಗಿನ ವರದಿಗಳನ್ನು ಪರಿಗಣಿಸಲಾಗುವುದು.ವರದಿಯು ಪ್ರಕಟವಾದ ಕುರಿತಂತೆ ದಾಖಲೆ ಅಗತ್ಯ 3ಪ್ರತಿಗಳಲ್ಲಿ ಅರ್ಜಿಸಲ್ಲಿಸಬೇಕಾಗುತ್ತದೆ. ಪ್ರವೇಶ ಪತ್ರಕಳುಹಿಸಲು ಜನವರಿ 31ಕೊನೆಯ ದಿನ.ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ಪತ್ರಿಕಾ ಭವನ,ಉರ್ವಮಾರ್ಕೆಟ್ ,ಮಂಗಳೂರು 575006 ಈ ವಿಳಾಸಕ್ಕೆ ಕಳುಹಿಸಬಹುದು.
ರಾಜ್ಯ - ರಾಷ್ಟ್ರ
ಬೆಳ್ತಂಗಡಿ: ಕಲಾನಿಕೇತನ ನಾಟ್ಯಶಾಲೆ ಬೆಳ್ತಂಗಡಿ ಇದರ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಭರತನಾಟ್ಯ ಕಾರ್ಯಕ್ರಮ ಬೆಳ್ತಂಗಡಿ ಆಶಾಸಾಲಿಯಾನ್ ಕಲ್ಯಾಣಮಂಟಪದಲ್ಲಿ ಶನಿವಾರ ನಡೆಯಿತು. ಡಾ.ಬಿ.ಯಶೋವರ್ಮ ಮತ್ತು ಪ್ರದೀಪ್ ಕುಮಾರ್ ಕಲ್ಕೂರ ಅತಿಥಿಗಳಾಗಿದ್ದರು. ನಾಟ್ಯವಿಧುಷಿ ವಿದ್ಯಾಮನೋಜ್ ಶಿಷ್ಯರಿಂದ ಭರತನಾಟ್ಯಕಾರ್ಯಕ್ರಮ ಕಲಾಸಕ್ತರ ಮನಗೆದ್ದಿತು.








ಚಿತ್ರಿಕೆ
(ಪ್ರಿಯ ಈ ಕನಸು ಓದುಗರೇ...ಮತ್ತೆ ಅರವಿಂದ ನಾವುಡರು `ಚಿತ್ರಿಕೆ'ಯೊಂದಿಗೆ ಪ್ರತೀ ಶನಿವಾರ ನಮ್ಮಮುಂದೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ನೀವೆಲ್ಲಾ ಕೊಟ್ಟ ಪ್ರೋತ್ಸಾಹವನ್ನು ಮುಂದೆಯೂ ನೀಡುವಿರೆಂಬ ನಂಬಿಕೆ ನಮ್ಮದು. ಓದಿ , ಅಭಿಪ್ರಾಯಿಸಿ... ಶುಭವಂದನೆಗಳು , -ಸಂ.)
ಗಡಿಯಾರದ ಮುಳ್ಳು ನಿಲ್ಲುವುದಿಲ್ಲ ; ನಾನು-ನೀನು ಎಲ್ಲರೂ ನಿಂತರೂ. ನಮಗೂ ಸಾಗುತ್ತಿದ್ದೇವೆ ಎಂಬ ಭ್ರಮೆ ಹಚ್ಚಿಸುವಷ್ಟು ವೇಗದಲ್ಲಿ ಒಮ್ಮೊಮ್ಮೆ ಮುಳ್ಳು ನಡೆದು ಬಿಡುತ್ತದೆ. ನಮ್ಮನ್ನೆಲ್ಲಾ ಇಲ್ಲೇ ಬಿಟ್ಟು. ಆಗ ಮಾತ್ರ ನಾವು ನಿಂತಲ್ಲೇ.ಮೊನ್ನೆ ಮೊನ್ನೆ ಹುಟ್ಟಿದ ರಾಘು ಇದ್ದಕ್ಕಿದ್ದಂತೆ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಮದುವೆ ಮಾಡಿಕೊಳ್ಳುವಷ್ಟು ದೊಡ್ಡವನಾದನೇ ? ಹಾಗಾದರೆ ಅವನು ಗೋಲಿಯಾಡಿದ್ದು, ಪೇರಲೆ ಮರದ ಕಾಯಿ ಕೀಳಲು ಹೋಗಿ ಕೆಳ ಬಿದ್ದು ಮೂಳೆ ಮುರಿದುಕೊಂಡಿದ್ದು, ಅದ್ಯಾವುದೋ ಊರಿನ ನೋವಿನೆಣ್ಣೆ ಒರೆಸಿಕೊಂಡು ದೊಡ್ಡವನಾದದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಉಳಿದವರಿಗಿಂತ ಹೆಚ್ಚು ಅಂಕ ಪಡೆಯಲು ಹೋಗಿ ನಗೆಪಾಟಲೀಗೀಡಾದದ್ದು-ಎಲ್ಲವೂ ಇಂದಿನಂತೆ ತೋರುವುದಿಲ್ಲ. ಅವೆಲ್ಲಾ ಸಾಗಿದ್ದು ಯಾರಿಗೆ ನೆನಪಿದೆ ?
ಬಸ್‌ಸ್ಟ್ಯಾಂಡ್‌ನಲ್ಲಿ ಲೋಟ ತೊಳೆಯಲು ಮೊನ್ನೆ ತಾನೇ ಮನೆಯಿಂದ ಓಡಿಬಂದ ಹುಡುಗನಿಗೆ ಇನ್ನೂ ಎಳೆ ವಯಸು. ಮೀಸೆ ಬಂದಿರುವುದರಿರಲಿ, ಹಲ್ಲೂ ಕೂಡ ಇನ್ನೂ ಎಳೆಯದು. ಬರೀ ಬಣ್ಣ ಬಣ್ಣದ ಚಾಕ್‌ಲೇಟ್ ಕವರುಗಳನ್ನು ಕಂಡೇ ಹೊಟ್ಟೆ ತುಂಬಿಸಿಕೊಂಡಾಂತ. ಅದಕ್ಕೇ ಅವನ ಹಲ್ಲುಗಳು ಹುಳುಕು ಆಗಿಲ್ಲ ! ಹೆಚ್ಚೆಂದರೆ ಹನ್ನೆರಡಿರಬಹುದೆನ್ನಿ.
ನೋಡಲು ಉದ್ದುದ್ದ ಬೆಂಡೆಕಾಯಿಯಂತಿದ್ದಾನೆ. ಅದಕ್ಕೇ ಕೆಲಸ ಕೇಳಿಕೊಂಡು ಬಂದಾಗ ಮಾಲೀಕ "ಎಷ್ಟು ವಯಸ್ಸು’ ಎಂದು ಕೇಳಿದ್ದ. ಅದಕ್ಕೆ "ಹದಿನಾಲ್ಕು’ ಎಂದು ಹೇಳಿದಾಗ ಪಕ್ಕದ ಗೋಡೆಗಳೆಲ್ಲಾ ಬಿದ್ದು ಬಿದ್ದು ನಕ್ಕಿದ್ದವು. ಸದ್ದು ಕೇಳಿಸರಲಿಲ್ಲವಷ್ಟೇ, ಯಾರಿಗೂ.
ಮಾಲೀಕ ಷರತ್ತು ವಿಧಿಸಿ ಒಳಗೆ ಕರೆದುಕೊಂಡಿದ್ದಾನೆ. ಬೆಳಗ್ಗೆ ಎದ್ದು ಲೋಟ ತೊಳೆಯಲು ಶುರು ಮಾಡಿದರೆ ಮುಗಿಯುವುದಕ್ಕೆ ಬಸ್ಸಿನ ಜನರೆಲ್ಲಾ ಮನೆ ಮುಟ್ಟಬೇಕು. ಅಲ್ಲಿಯವರೆಗೂ ಇವನಿಗೂ, ಸಬೀನಾಕ್ಕೂ, ಕಾಯಿಗುಂಜಿಗೂ ಗೆಳೆತನ. ಇಷ್ಟಕ್ಕೂ ತನ್ನ ವಯಸ್ಸನ್ನು ಹೆಚ್ಚಿಗೆ ಹೇಳುವಷ್ಟು ಜಾಣನಾದದ್ದು ಯಾವಾಗ ?
ಕತ್ತಲೆಯಲ್ಲೇ ಓದುತ್ತಾ ಕುಳಿತವಳಿಗೂ ಆಯಾಸವಾಗಿದೆ. ಕಣ್ಣುಗಳಿಗೂ ಸುಸ್ತು. ಊರಿಗೆಲ್ಲಾ ಬೆಳಕು ಬಂದರೂ ಈ ಮನೆಯೊಳಗೆ ಇನ್ನೂ ಬಂದಿಲ್ಲ. ಯಾಕೋ, ಅಪ್ಪನಿಗೆ ಕೇಳಿದರೆ ಏನೋ ಕಾರಣ ಹೇಳುತ್ತಾನೆ. ಕಾನೂನು ಉಪದ್ವ್ಯಾಪ ವಿವರಿಸುತ್ತಾನೆ. ಅದೆಲ್ಲಾ ಕೇಳಿಕೊಳ್ಳುವುದಕ್ಕಿಂತ ಕತ್ತಲೆಯೇ ಸಾಕೆಂದೆನಿಸಿದೆ ಈಕೆಗೆ. ಅದಕ್ಕೆ ಬೆಳಕು ಕುರಿತು ಮಾತನಾಡುವುದಿಲ್ಲ. ಅಲ್ಲಿಗೆ ಅವಳಿನ್ನೂ ಬೆಳೆದಿಲ್ಲ !
ಅಬ್ಬಬ್ಬಾ, ಆ ರಾಘು ಇನ್ನಷ್ಟು ದೊಡ್ಡವನಾಗಿ ಬಿಟ್ಟನೆ ? ಮದುವೆಯಾಗಿ, ಅವನ ಮೊದಲನೇ ಮಗಳು ಎಂಜಿನಿಯರ್ ಅಂತೆ. ಎರಡನೇ ಮಗಳೂ ಸಹ ವೈದ್ಯ ವಿದ್ಯಾರ್ಥಿನಿ. ಮೂರು ವರ್ಷ ಕಳೆದರೆ ಅಪ್ಪನ ಆರೋಗ್ಯ ವಿಚಾರಿಸಲು ಮಗಳೇ ಬರುತ್ತಾಳೆ. ಆರೋಗ್ಯ ಕಾಳಜಿಗೆ ಉದ್ದುದ್ದ ಪಟ್ಟಿ ನೀಡುತ್ತಾಳೆ. ಉಪನ್ಯಾಸ ಕೊಡುತ್ತಾಳೆ. ಕೆಮ್ಮಿದ್ದಕ್ಕೆ ಎರಡು ಗುಳಿಗೆ, ತಲೆನೋವಿಗೆ ಮತ್ತೂ ಎರಡು-ಹೀಗೆ ಕಾಳಜಿಯ ಪಟ್ಟಿ ಬೆಳೆಯುತ್ತದೆ.
ಎಷ್ಟೆಲ್ಲಾ ಮಾತ್ರೆ ತೆಗೆದುಕೊಂಡ ಅವನೂ ಒಮ್ಮೆ ಧಡಕ್ಕನೆ ನಿಂತು ಬಿಡುತ್ತಾನೆ. ಸುತ್ತಲಿನ ಜಗತ್ತು ಓಡುತ್ತಲೇ ಇರುತ್ತದೆ. ಕಾಲದ ಹಿಂದೆ. ಏನನ್ನೋ ಬೆನ್ನಟ್ಟಿದಂತೆ. ಆ ಬಸ್‌ಸ್ಟ್ಯಾಂಡ್‌ನ ಹುಡುಗ, ಕತ್ತಲೆಯಲ್ಲಿ ಓದಿದ ಹುಡುಗಿ, ಎಂಜಿನಿಯರೂ, ವೈದ್ಯೆ ಎಲ್ಲರೂ ಬೆನ್ನಟ್ಟಿದವರ ಹಿಂದೆ ಮತ್ತೇನನ್ನೋ ಬೆನ್ನಟ್ಟಿಕೊಂಡು. ಈ ಮ್ಯಾರಥಾನ್‌ನಲ್ಲಿ ಯಾರದ್ದು ಯಾವ ಸ್ಥಾನ ಯಾರು ಹೇಳಬೇಕು ? ಪ್ರಥಮ, ದ್ವಿತೀಯ, ತೃತೀಯ, ಯೋಗ್ಯತೆಗನುಸಾರ ಹಾಕಿಕೊಳ್ಳಬಹುದು.
ಮತ್ತೆ ಗಡಿಯಾರದ ಮುಳ್ಳಿನದ್ದೇ ಮುನ್ನಡೆ. ಅಲ್ಲಿಗೂ ಗಡಿಯಾರ ದಣಿಯದು : ಕಾಲವೂ ಸಹ. ಹಾಗಾದರೆ ನಾವು ನಿಂತದ್ದು ಎಲ್ಲಿ ? ಯಾವ ಕೊನೆಯಲ್ಲಿ ?
-ಅರವಿಂದ ನಾವಡ, ಮೈಸೂರು.
ರಾಜ್ಯ -ರಾಷ್ಟ್ರನವದೆಹಲಿ: 8ನೇ ಶತಮಾನದ ಚಾಲುಕ್ಯರ ಆಳ್ವಿಕೆಯಲ್ಲಿ ಹೊರಹೊಮ್ಮಿದ ಪಟ್ಟದಕಲ್ಲು ವಾಸ್ತುಶಿಲ್ಪ ವೈಭವ ಸಾರುವ ಸ್ತಬ್ಧಚಿತ್ರದೊಂದಿಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯು ರಾಜಧಾನಿಯಲ್ಲಿ ನಡೆಯುವ ಈ ವರ್ಷದ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸುತ್ತಿದೆ.
ದೇವಸ್ಥಾನಗಳ ವಾಸ್ತುಶಿಲ್ಪದ ತೊಟ್ಟಿಲು' ಎಂದೇ ಕರೆಯಲಾಗುವ ಪಟ್ಟದಕಲ್ಲನ್ನು ವಿಶ್ವಸಂಸ್ಥೆಯು 1987ರಲ್ಲಿ 'ವಿಶ್ವ ಪರಂಪರೆ ತಾಣ'ಗಳ ಪಟ್ಟಿಯಲ್ಲಿ ಸೇರಿಸಿತು. ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿನ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಈ ಪಟ್ಟದಕಲ್ಲು ಇದೆ. ಬಾದಾಮಿಯಿಂದ 22 ಕಿ.ಮೀ. ದೂರದಲ್ಲಿದ್ದರೆ ಐಹೊಳೆಯಿಂದ 12 ಕಿ.ಮೀ. ದೂರದಲ್ಲಿರುವ ಪಟ್ಟದಕಲ್ಲು ದೇಗುಲಗಳ ಸಂಕೀರ್ಣವೇ ಆಗಿದೆ. ಪಟ್ಟದಕಲ್ಲು ಉತ್ತರ ಮತ್ತು ದಕ್ಷಿಣ ವಾಸ್ತುಶಿಲ್ದದ ಸಂಗಮವಾಗಿದ್ದು, ಉತ್ತರ ಭಾರತದ ನಾಗರ ಶೈಲಿ ಹಾಗೂ ದಕ್ಷಿಣದ ಡ್ರಾವಿಡಿಯನ್ ಶೈಲಿಯ ಸಂಗಮವಾಗಿದೆ. ಭಾರತದ ಹಿಂದು ದೇವಾಲಯಗಳ ವೇಸರ ಶೈಲಿಯ ವಾಸ್ತುಶಿಲ್ಪದ ಪ್ರಾರಂಭಿಕ ಪ್ರಯೋಗಗಳು ಪಟ್ಟದಕಲ್ಲಿನಲ್ಲೇ ನಡೆದವು ಎಂಬುದಕ್ಕೆ ಇಲ್ಲಿ ಸಾಕಷ್ಟು ಜೀವಂತ ಪುರಾವೆಗಳಿವೆ. ಈ ಎಲ್ಲ ಕಾರಣಕ್ಕೆ ಪಟ್ಟದಲ್ಲನ್ನು 'ವರ್ಲ್ಡ್ ಹೆರಿಟೇಜ್ ಸೈಟ್'ಗಳ ಪಟ್ಟಿಯಲ್ಲಿ ವಿಶ್ವಸಂಸ್ಥೆಯು ಸೇರಿಸಿದೆ.
ಐಹೊಳೆಯನ್ನು ವಾಸ್ತುಶಿಲ್ಪದ ಪ್ರಾಥಮಿಕ ಶಾಲೆ ಎಂದು ಕರೆದರೆ, ಬದಾಮಿಯನ್ನು ಶಿಲ್ಪಕಲೆಯ ಪದವಿ ಕಾಲೇಜು ಎಂದು ಕರೆಯಲಾಗಿದೆ. ಪಟ್ಟದಕಲ್ಲು ಶಿಲ್ಪಕಲೆಯ ವಿಶ್ವವಿದ್ಯಾಲಯವೆಂದೇ ಹೆಸರಾಗಿದೆ.ಪಟ್ಟದಕಲ್ಲಿನಲ್ಲಿ ವಿರುಪಾಕ್ಷ ದೇವಾಲಯ, ಸಂಗಮೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಗಳಗನಾಥ ದೇಗುಲ, ಜೈನ್ ಸಂಪ್ರದಾಯದ ಪಾಪನಾಥ ದೇಗುಲ, ನಾಗನಾಥ, ಚಂದ್ರಶೇಖರ, ಮುಕ್ತೇಶ್ವರ ದೇಗುಲಗಳು ಇಲ್ಲಿದ್ದು, ಪ್ರವಾಸಿಗರನ್ನು ಗತ ಕಾಲಕ್ಕೆ ಕರೆದೊಯ್ಯುತ್ತವೆ.
ಸ್ತಬ್ಧಚಿತ್ರ
ಕರ್ನಾಟಕ ಸರಕಾರದ ವಾರ್ತಾ ಇಲಾಖೆಯು 2010ನೇ ಸಾಲಿನ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಪಟ್ಟದಕಲ್ಲಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯ ಮತ್ತು ನಾಗರ ಶೈಲಿಯ ಕಾಶಿ ವಿಶ್ವನಾಥ ದೇಗುಲವನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತಪಡಿಸುತ್ತಿದೆ. ಸ್ತಬ್ಧಚಿತ್ರದ ಅತ್ಯಂತ ಸುಂದರ ವಿನ್ಯಾಸವನ್ನು ಕರ್ನಾಟಕದ ಖ್ಯಾತ ಕಲಾವಿದ ಶ್ರೀ ಶಶಿಧರ್ ಅಡಪ ಅವರು ರೂಪಿಸಿದ್ದು, ಅದರ '3ಡಿ ಕೀ ಮಾಡಲ್'ಅನ್ನು ಬೆಂಗಳೂರಿನ ಕಲಾವಿದ ಶ್ರೀ ನಂದ ಅವರು ಸಿದ್ಧಪಡಿಸಿದ್ದಾರೆ. ಸ್ತಬ್ಧಚಿತ್ರ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ಸಂಜಯ್ ಮಾರ್ಕೆಟಿಂಗ್ ಅವರು ಕಾರ್ಯಗತಗೊಳಿಸುತ್ತಿದ್ದಾರೆ. 30 ಜನ ನುರಿತ ಫ್ಯಾಬ್ರಿಕೇಷನ್ ಕಲಾವಿದರು ಈ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಣದ ಮೇಲ್ವಿಚಾರಣೆಯನ್ನು ಕಲಾ ನಿರ್ದೇಶಕ ಶ್ರೀ ರಘು ಅವರು ವಹಿಸಿದ್ದಾರೆ.
ಇದು ಶಿವನ ದೇಗುಲವಾದ ಕಾರಣ, ಅದಕ್ಕೆ ಪೂರಕವೆಂಬಂತೆ ಜಾನಪದ ಕಲಾಪ್ರಕಾರ ಡೊಳ್ಳನ್ನು ಈ ಸ್ತಬ್ಧಚಿತ್ರಕ್ಕೆ ಸಂಗೀತವನ್ನಾಗಿ ಅಳವಡಿಸಲಾಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿಗೆ ಸೇರಿದ ಖ್ಯಾತ ಡೊಳ್ಳು ಕಲಾವಿದ ಟಾಕಪ್ಪ ಅವರ ನೇತೃತ್ವದ 25 ಜನ ಕಲಾವಿದರು ಸ್ತಬ್ಧಚಿತ್ರದೊಂದಿಗೆ ಭಾಗವಹಿಸುತ್ತಿದ್ದಾರೆ.
ಪ್ರಾದೇಶಿಕ ಸುದ್ದಿ
ರಾಮಕೃಷ್ಣ ಭಟ್ಟರಿಗೆ ಮುಖ್ಯ ಶಿಕ್ಷಕ ಪಟ್ಟ
ವಿಟ್ಲ : ಪುಣಚಾ ಗ್ರಾಮದ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಶಿಕ್ಷಕರಾಗಿರುವ ಬಳಂತಿಮುಗೇರು ರಾಮಕೃಷ್ಣ ಭಟ್ಟರು ಸೇವಾ ಹಿರಿತನದಲ್ಲಿ ತನಗೆ ಲಭಿಸಬೇಕಾಗಿರುವ ಮುಖ್ಯ ಶಿಕ್ಷಕನ ಹುದ್ದೆಗೆ ಸುಮಾರು ಎರಡು ದಶಕಗಳಿಂದ ನ್ಯಾಯಾಲಯದ ಮೆಟ್ಟಿಲೇರಿ ನಡೆಸುತ್ತಿರುವ ಕಠಿಣ ಹೋರಾಟಕ್ಕೆ ಅಂತಿಮ ಜಯ ದೊರೆತು, ಮುಖ್ಯ ಶಿಕ್ಷಕನ ಪಟ್ಟವನ್ನು ಶುಕ್ರವಾರ ಪಡೆದುಕೊಂಡಿದ್ದಾರೆ.
ನ್ಯಾಯಾಲಯದ ಆದೇಶದಂತೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ತಮ್ಮ ಕಚೇರಿಯ ಶಿಕ್ಷಣಾಧಿಕಾರಿಯನ್ನು ವಿಶೇಷ ಅಧಿಕಾರಿಯಾಗಿ ನಿಯೋಜಿಸಿದ್ದು, ವಿಶೇಷ ಅಧಿಕಾರಿ ಜಯಶೇಖರ ಮೊಸಿಸ್ ಅವರು ತಕ್ಷಣ ಕ್ರಮ ಕೈಗೊಂಡು ಶಾಲಾ ಆಡಳಿತ ಮಂಡಳಿಯನ್ನು ವಜಾಗೊಳಿಸಿದರು. ಶುಕ್ರವಾರ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಚಾಮೇ ಗೌಡ, ವಿಶೇಷ ಅಧಿಕಾರಿ ಪೊಲೀಸ್ ಬಂದೋಬಸ್ತಿನೊಂದಿಗೆ ಶಾಲೆಗೆ ದಿಢೀರನೆ ಆಗಮಿಸಿ ನ್ಯಾಯಾಲಯದ ಆದೇಶದಂತೆ ರಾಮಕೃಷ್ಣ ಭಟ್ಟರನ್ನು ಮುಖ್ಯ ಶಿಕ್ಷಕರನ್ನಾಗಿಸಿ ಅಧಿಕಾರ ನೀಡಿದರು.
ಪುಣಚಾ- ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಮಣಿಲಾ ಶಾಸ್ತ್ರಿ ಮನೆತನದವರ ವಂಶಾಡಳಿತದಲ್ಲಿ ನಡೆದುಕೊಂಡು ಬರುತ್ತಾ, 10.04.1991 ರಲ್ಲಿ ಮಣಿಲಾ ಮನೆತನದ ಮುಖ್ಯ ಶಿಕ್ಷಕರಾಗಿದ್ದ ಪದ್ಮನಾಭ ಶಾಸ್ತ್ರಿಯವರು ನಿವೃತ್ತಿ ಹೊಂದಿದರು. ಆ ಸಂದರ್ಭದಲ್ಲಿ ಸಂಚಾಲಕರಾಗಿದ್ದ ಅವರ ಅಣ್ಣ ರಾಮಕೃಷ್ಣ ಶಾಸ್ತ್ರಿಯವರ ಮಗನಾದ ಹರ್ಷಶಾಸ್ತ್ರಿಗೆ ಸೇವಾ ಹಿರಿತನದ ನಿಯಮವನ್ನು ನಿರ್ಲಕ್ಷಿಸಿ ಮುಖ್ಯ ಶಿಕ್ಷಕನ ಪಟ್ಟವನ್ನು ಆಡಳಿತ ಮಂಡಳಿಯು ನೀಡಿತು. ಆಡಳಿತ ಮಂಡಳಿಯ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿ ಸೇವಾಹಿರಿತನದಲ್ಲಿ ಮೊದಲಿಗರಾದ ಶಿಕ್ಷಕ ಬಳಂತಿಮುಗೇರು ರಾಮಕೃಷ್ಣ ಭಟ್ಟರು 1992ರಲ್ಲಿ ಜಿಲ್ಲಾ ಶಿಕ್ಷಣ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ದೂರನ್ನು ತನಿಖೆ ನಡೆಸಿದ ಇ.ಎ.ಟಿ ಯು ರಾಮಕೃಷ್ಣ ಭಟ್ಟರ ಪರವಾಗಿ ತೀಪರ್ು ನೀಡಿ ಮುಖ್ಯ ಶಿಕ್ಷಕನ ಹುದ್ದೆಗೆ ಹಸಿರು ನಿಶಾನೆ ತೋರಿಸಿತು. ಮುಖ್ಯ ಶಿಕ್ಷಕ ಮತ್ತು ಸಂಚಾಲಕ ಹುದ್ದೆಯನ್ನು ಸ್ವಯಂ ಘೋಷಿತವಾಗಿ ತೆಗೆದುಕೊಂಡಿರುವ ಹರ್ಷ ಶಾಸ್ತ್ರಿ ಮತ್ತು ಈತನ ಪತ್ನಿ ಉಷಾಲಕ್ಷ್ಮಿಯ ಸರ್ವಾಧಿಕಾರಿ ಧೋರಣೆಯಲ್ಲಿ ಕಾನೂನುಪ್ರಕಾರ ಮುಖ್ಯ ಶಿಕ್ಷಕನ ಹುದ್ದೆ ದೊರೆಯಬೇಕಾದ ಹಿರಿಯ ಐದು ಶಿಕ್ಷಕರು ಕೋರ್ಟ್ ಮೆಟ್ಟಿಲೇರಿ ಕಳೆದ 18 ವರ್ಷಗಳ ಸತತ ಪ್ರಯತ್ನದ ನಂತರ ಕೊನೆಗೂ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿವಿಧ ನ್ಯಾಯಾಲಯಗಳಲ್ಲಿ ಮುಖ್ಯ ಶಿಕ್ಷಕನ ಹುದ್ದೆಗೆ ಹೋರಾಟ ನಡೆಸಿದ ರಾಮಕೃಷ್ಣ ಭಟ್ಟರ ಪರವಾಗಿ ಪ್ರತಿ ಹಂತದಲ್ಲಿಯೂ ತೀರ್ಪು ಸಿಕ್ಕಿದ್ದು, ಆಡಳಿತ ಮಂಡಳಿ ಈ ಎಲ್ಲಾ ತೀರ್ಪುಗಳಿಗೂ ಮೇಲ್ಮನವಿ ಸಲ್ಲಿಸುತ್ತಲೇ ಸಮಯ ಮುಂದೂಡುತ್ತಾ ಬಂದಿದೆ. ದ್ವಿಸದಸ್ಯ ನ್ಯಾಯಪೀಠದಲ್ಲಿ ಆಡಳಿತ ಮಂಡಳಿಯ ಮೇಲ್ಮನವಿ ತಿರಸ್ಕೃತಗೊಂಡು ಉಚ್ಛನ್ಯಾಯಾಲಯದ ಬಾಗಿಲು ಮುಚ್ಚಿಕೊಂಡಾಗ ಆಡಳಿತ ಮಂಡಳಿ ಹೋರಾಟ ಕೊನೆಗೊಂಡಿತು. ಈ ಹಿಂದೆ ಬೆಂಗಳೂರು ಶಿಕ್ಷಣ ಇಲಾಖಾ ಆಯುಕ್ತರು ನೀಡಿದ ತೀರ್ಪಿನ ಆದೇಶವನ್ನು ಮೇಲ್ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅದನ್ನು ಪರಿಷ್ಕೃತಗೊಳಿಸಿ 2010ರ ಜ.11 ರಂದು ಆದೇಶ ಮಾಡಿತು. ನ್ಯಾಯವಾದಿ ಒಡಿಯೂರು ಶಿವರಾಮ ಭಟ್ ಮತ್ತು ಸಹಾಯಕ ರಾಜಶೇಖರ್ ಅವರು ರಾಮಕೃಷ್ಣ ಭಟ್ ಪರವಾಗಿ ವಾದಿಸಿದ್ದರು.
ಅನಧಿಕೃತ ಪ್ರೌಢಶಾಲೆ ಮುಚ್ಚುವುದೇ ?
ಪುಣಚ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ 2005-06ನೇ ಸಾಲಿನಲ್ಲಿ ಪ್ರೌಢಶಾಲೆಗೆ ಅನುಮತಿ ದೊರೆತಿದೆಯೆಂದು ಬೊಗಳೆ ಬಿಟ್ಟು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುತ್ತ 4 ವರ್ಷಗಳೇ ಕಳೆದಿದೆ. ಅನುಮತಿ ಪತ್ರ ಪಡೆಯುವುದಕ್ಕೆ ಶತಪ್ರಯತ್ನ ಮಾಡಿದರೂ ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಪ್ರೌಢಶಾಲೆ ತೆರೆಯಲು ಪೂರೈಕೆಯಾಗದಿರುವುದರಿಂದ ಅನುಮತಿ ಪತ್ರ ದೊರೆಯದೆ ವಿದ್ಯಾರ್ಥಿಗಳನ್ನು ಖಾಸಗಿಯಾಗಿ ಪರೀಕ್ಷೆಗೆ ಕೂರಿಸಿ ವಂಚಿಸಿ ಈ ಅನಧಿಕೃತ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಬೀದಿಪಾಲಾಗಿದೆ. ಅಕ್ರಮವಾಗಿ ಸ್ವಯಂಘೋಷಿತ ಅಧಿಕಾರವನ್ನು ಪಡೆದು ಕಾನೂನು ಬಾಹಿರವಾಗಿ ವರ್ತಿಸುತ್ತ ಶಿಕ್ಷಣ ಸಂಸ್ಥೆಯನ್ನು ಹರಾಜು ಮಾಡಲು ಹೊರಟಿರುವುದರಿಂದ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿತ್ತು.
ಇದೀಗ ಇಲ್ಲಿ ನಡೆಯುತ್ತಿರುವ ಅನಧಿಕೃತ ಪ್ರೌಢಶಾಲೆಯನ್ನು ಶಿಕ್ಷಣ ಇಲಾಖೆ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಪುಣಚ ಗ್ರಾಮ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಚಿತ್ರ-ವರದಿ:ಜ್ಯೋತಿಪ್ರಕಾಶ್ ಪುಣಚ
ಪ್ರಾದೇಶಿಕ ಸುದ್ದಿ
ವಿಟ್ಲ ಪಂಚಲಿಂಗೇಶ್ವರನ ವಾರ್ಷಿಕ ಜಾತ್ರೋತ್ಸವದಂಗವಾಗಿ ಮಹಾರಥೋತ್ಸವ ನಡೆಯಿತು.
ವಿಟ್ಲ: ವಿಟ್ಲ ಪಂಚಲಿಂಗೇಶ್ವರನ ವಾರ್ಷಿಕ ಜಾತ್ರೋತ್ಸವ ಸಡಗರದಂದು ಜನಜಂಗುಳಿಯ ಮಧ್ಯೆಯೇ ಆರು ಸರಗಳ್ಳತನ ಪ್ರಕರಣಗಳು ಮತ್ತು ಮೂರು ಪಿಕ್ಪಾಕೆಟ್ ನಡೆದಿರುವುದು ನಾಗರಿಕರನ್ನು ತೀವ್ರ ಆತಂಕಕ್ಕಿಡುಮಾಡಿದ್ದು ಪೊಲೀಸ್ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕೆಲದಿನಗಳ ಹಿಂದಷ್ಟೇ ವಿಟ್ಲ ಠಾಣೆಯಲ್ಲಿ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ನಾಗರಿಕರ ಶಾಂತಿ ಸಭೆ ಕರೆಯಲಾಗಿತ್ತು. ಪ್ರತಿವರ್ಷ ಜಾತ್ರೋತ್ಸವದಲ್ಲಿ ನಡೆಯುತ್ತಿದ್ದ ಸರಗಳ್ಳರ ಹಾವಳಿಯನ್ನು ಸಭೆಯಲ್ಲಿ ಹಾಜರಿದ್ದ ಹಿಂದೂ ಯುವ ಸೇನೆಯ ಅಧ್ಯಕ್ಷ ಹರೀಶ್ ವಿಟ್ಲ ಮತ್ತು ನಾಗರಿಕರು ಠಾಣಾಧಿಕಾರಿಯಲ್ಲಿ ವಿವರಿಸಿ ಹೇಳಿದ್ದಲ್ಲದೇ ಈ ಬಾರಿಯಾದರೂ ಪೊಲೀಸ್ ವ್ಯವಸ್ಥೆ ಚುರುಕಾಗಬೇಕೆಂದು ಒತ್ತಾಯಿಸಿದ್ದರು.
ಶಾಂತಿ ಸುವ್ಯವಸ್ಥೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಹೆಚ್ಚುವರಿ ಪೊಲೀಸರನ್ನೂ ವಿಟ್ಲಕ್ಕೆ ಕಳಿಸಿ ವ್ಯವಸ್ಥೆಯನ್ನು ಬಲಪಡಿಸಿದ್ದರು. ಆದರೆ ಈ ಹಿಂದಿಗಿಂತಲೂ ಈ ಬಾರಿ ಹೆಚ್ಚು ಸರಗಳ್ಳತನ ಪ್ರಕರಣಗಳು ನಡೆದಿರುವುದು ವಿಟ್ಲದ ಪೊಲೀಸ್ ವ್ಯವಸ್ಥೆಗೇ ಸವಾಲಾಗಿದ್ದರೂ ನಾಗರಿಕರಿಗೆ ಮಾತ್ರ ಹಿಂಸೆ ಅನುಭವಿಸುವುದು ತಪ್ಪಲಿಲ್ಲವಾಗಿದೆ. ಗುರುವಾರ ರಥೋತ್ಸವದ ದಿನದಂದು ಹಗಲು ಹೊತ್ತಿನಲ್ಲೇ ಎರಡು ಸರಗಳ್ಳತನ ಪ್ರಕರಣಗಳು ನಡೆದಿವೆ. ವಿಟ್ಲದ ಅನಂತೇಶ್ವರ ದೇವಸ್ಥಾನ ಬಳಿ ಸಂಬಂಧಿಕರೊಡನೆ ನಡೆದು ಹೋಗುತ್ತಿದ್ದ ಕೊಳ್ನಾಡು ಗ್ರಾಮದ ಕುಳಾಲು ನಿವಾಸಿ ವಾರಿಜಾ ಎಂಬಾಕೆಯ ಕುತ್ತಿಗೆಯಲ್ಲಿದ್ದ ಮೂರೂವರೆ ಪವನ್ ತೂಕದ ಚಿನ್ನದ ಸರವನ್ನು ಜನಜಂಗುಳಿಯ ಮಧ್ಯೆಯೇ ಸರಗಳ್ಳರು ಎಗರಿಸಿದ್ದಾರೆ. ಇದಾದ ಕೆಲಹೊತ್ತಲ್ಲೇ ಸಂಜೆ 3.45 ರ ಸುಮಾರಿಗೆ ದೇವಸ್ಥಾನದ ಬಳಿಯಲ್ಲಿದ್ದ ವೀರಕಂಭದ ಕಮಲಾ ಎಂಬವರ 4 ವರ್ಷದ ಪುಟಾಣಿಯ ಕುತ್ತಿಗೆಯಲ್ಲಿದ್ದ 1 ಪವನ್ ತೂಕದ ಚಿನ್ನದ ಸರವನ್ನು ಲಪಟಾಯಿಸಿದ್ದಾರೆ. ಈ ಬಗ್ಗೆ ತಕ್ಷಣವೇ ದೇವಸ್ಥಾನದ ಬಳಿ ಡ್ಯೂಟಿಯಲ್ಲಿದ್ದ ಸಮವಸ್ತ್ರಧಾರಿ ಪೊಲೀಸರಲ್ಲಿ ಮಹಿಳೆಯ ಕಡೆಯವರು ದೂರು ನೀಡಿ ಅಲವತ್ತುಕೊಂಡಿದ್ದಾರೆ. ಆ ಸಮಯ ಪೊಲೀಸರು ಇಷ್ಟೊಂದು ಜನ ಸೇರುವ ಸ್ಥಳಕ್ಕೆ ಚಿನ್ನ ಹಾಕಿ ಬರುವುದು ಯಾಕೆ, ಕದ್ದು ಹೋದರೆ ನಾವೇನು ಮಾಡಬೇಕೆಂದು ಮರುಪ್ರಶ್ನೆ ಹಾಕಿರುವುದನ್ನು ಸ್ವತ; ಸೊತ್ತು ಕಳೆದುಕೊಂಡವರೇ ಮಾಧ್ಯದವರಲ್ಲಿ ಹೇಳುತ್ತಾ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗಲು ಹೊತ್ತಿನಲ್ಲೇ ಎರಡು ಪ್ರಕರಣಗಳು ನಡೆದು ಪೊಲೀಸರ ಗಮನಕ್ಕೆ ತಂದಿದ್ದರೂ ಅವರ್ಯಾರು ರಾತ್ರಿ ಹೊತ್ತು ಎಚ್ಚೆತ್ತಕೊಂಡಿರಲಿಲ್ಲವಾಗಿದೆ. ರಾತ್ರಿ ಹೊತ್ತು ಭಾರೀ ಜನ ಸೇರುತ್ತಿದ್ದ ಸಮಯ 7 ಗಂಟೆಯ ಸುಮಾರಿಗೆ ಮತ್ತೆ ಎರಡು ಸರಗಳ್ಳತನ ಪ್ರಕರಣಗಳು ನಡೆದಿರುವುದು ವರದಿಯಾಗಿದೆ.
ಅನಂತೇಶ್ವರ ದೇವಸ್ಥಾನದ ಎದುರುಗಡೆ ರಸ್ತೆಯಲ್ಲಿ ತೊಟ್ಟಿಲು, ಬೈಕ್ ಸವಾರಿಯ ಪರಿಸರದಲ್ಲಿ ಕಡಂಬುವಿನ ಜಾನಕಿ ಎಂಬವರ ಒಂದೂವರೆ ಪವನ್ ತೂಕದ ಮತ್ತು ಅನಂತಾಡಿಯ ವನಜಾ ಎಂಬಾಕೆಯ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಆಭರಣಗಳು ಕಳ್ಳ ಪಾಲಾಗಿವೆ. ಇದಾದ ಬಳಿಕ ರಥೋತ್ಸವ ನೋಡುತ್ತಾ ಸಂಬಂಧಿಕರೊಡನೆ ಮೈಮರೆತಿದ್ದ ಕೇಪುವಿನ ಮೀನಾಕ್ಷಿ ಎಂಬವರ ಮಗುವಿನ ಕುತ್ತಿಗೆಯಿಂದ ಒಂದು ಚಿನ್ನದ ಸರ ಮತ್ತು ಪುತ್ತೂರು ಪರ್ಲಡ್ಕದ ಲೀಲಾ ಎಂಬವರ ಜತೆಗಿದ್ದ ಐದು ವರ್ಷ ಪ್ರಾಯದ ವಿನೇಶ್ ಎಂಬಾತನ ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದಾರೆ. ಅದೂ ಅಲ್ಲದೇ ಜಾತ್ರೋತ್ಸವದ ಸಂತೆ ವ್ಯಾಪಾರಿ ಇಬ್ರಾಹಿಂ ಎಂಬವರ ಪ್ಯಾಂಟಿನ ಹಿಂಬದಿ ಕಿಸೆಯಲ್ಲಿದ್ದ 4.500 ರೂ ನಗದು ಹಣ ಮತ್ತು ಇನ್ನಿತರ ಚೀಟಿಗಳಿದ್ದ ಪರ್ಸನ್ನು ಕಿಸೆಗಳ್ಳರು ಲಪಟಾಯಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೈಕ್ ಸವಾರಿ ವೀಕ್ಷಿಸುತ್ತಿದ್ದ ನೆಲ್ಯಾಡಿಯ ಜಾನ್ ಎಂಬವರ ನೋಕಿಯಾ ಮೊಬೈಲು ಸೆಟ್ಟೊಂದು ಪಿಕ್ಪಾಕೆಟ್ ಚೋರ ಪಾಲಾಗಿದೆ.
ವಿಟ್ಲದ ಈ ಹಿಂದಿನ ಜಾತ್ರೋತ್ಸವಗಳಲ್ಲಿ ಇಂತಹ ಒಂದೆರಡು ಪ್ರಕರಣಗಳು ನಡೆದಿದ್ದರೂ ಈ ಬಾರಿ ಮಾತ್ರ ಬರೋಬ್ಬರಿ ಒಂಭತ್ತು ಕಳ್ಳತನ ಪ್ರಕರಣಗಳು ನಡೆದಿರುವುದು ಪೊಲೀಸರ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ವಾರಗಳ ಹಿಂದೆಯೇ ಠಾಣೆಯಲ್ಲಿ ನಡೆದಿದ್ದ ಶಾಂತಿ ಸಭೆಯಲ್ಲಿ ಸರಗಳ್ಳರ ಬಗ್ಗೆ ಸಾರ್ವಜನಿಕರು ಸಲಹೆ ನೀಡಿದ ಬಳಿಕವೂ ಪೊಲೀಸರು ಎಚ್ಚೆತ್ತುಕೊಳ್ಳದಿರುವುದು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಥೋತ್ಸವಕ್ಕೆ ತೆರೆದುಕೊಂಡ ಬಾರ್ಗಳು
ವಿಟ್ಲ ಜಾತ್ರಾ ಮಹೋತ್ಸವದ ಮುಂಜಾಗ್ರತವಾಗಿ ಅಬಕಾರಿಯವರ ಆದೇಶದಂತೆ ಮುಚ್ಚಿಕೊಂಡು ಸಾರ್ವಜನಿಕರಲ್ಲಿ ನೆಮ್ಮದಿ ನೀಡಿದ ಬಾರ್,ವೈನ್ ಸ್ಟೋರ್ಸ್ಗಳು ಮಹಾರಥೋತ್ಸವ ದಿನದಂದು ಅಧಿಕಾರಿಗಳ ಜನಪ್ರತಿನಿಧಿಗಳ ಕೃಪಾಕಟಾಕ್ಷದಲ್ಲಿ ತೆರೆದುಕೊಂಡು ಕುಡುಕರಿಗೆ ಸ್ವರ್ಗಸುಖ ನೀಡಿತು. ಅಮಲೇರಿಸಿಕೊಂಡ ಬಹುತೇಕ ಕುಡುಕರ ಕೇಕೆ ಮುಗಿಲುಮುಟ್ಟಿ ಜಾತ್ರೋತ್ಸವಕ್ಕೆ ಹರಿದುಬಂದ ಭಕ್ತಾಧಿಗಳಿಗೆ ಕಿರಿಕಿರಿ ಅನುಭವವಾಗಿ ಇಲಾಖಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು. ಬಾರ್,ವೈನ್ ಸ್ಟೋರ್ಸ್ಗಳಲ್ಲಿ ಭರ್ಜರಿ ವ್ಯಾಪಾರ ನಡೆದು, ಬಸ್ಸು ನಿಲ್ದಾಣ , ನಾಲ್ಕು ಮಾರ್ಗ,ಅಡ್ಡದಬೀದಿ, ಹೊಸ ಬಸ್ಸ ಸ್ಟ್ಯಾಂಡ್, ಆಸ್ಪತ್ರೆ ರೋಡ್ ನಲ್ಲಿ ಅಲ್ಲಿಲ್ಲಿ ಮತಿಗೆಟ್ಟ ಕುಡುಕರು ಬಿದ್ದುಕೊಂಡಿರುವುದು ಕಂಡುಬಂದಿದೆ. ಜನಜಾತ್ರೆ ಸೇರುವ ಸಂದರ್ಭಕ್ಕೆ ಅಹಿತರ ಘಟನೆಗಳು ನಡೆಯದಂತೆ ಮದ್ಯದಂಗಡಿಗಳನ್ನು ಮುಚ್ಚುವುದರ ಮೂಲಕ ಶಾಂತಿಯನ್ನು ಕಾಪಾಡಿಕೊಂಡು ಬರಬೇಕಾದ ಇಲಾಖೆ ರಾಜಾರೊಷವಾಗಿ ಮದ್ಯದಂಗಡಿಗಳಿಗೆ ಮುಕ್ತ ಅವಕಾಶಗಳನ್ನು ನೀಡಿ ಸಾರ್ವಜನಿಕವಾಗಿ ಅಶಾಂತಿಯನ್ನು ಕದಡಲು ಯತ್ನಿಸಿದೆ ಎಂದು ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಾನ್ ಡಿ' ಸೋಜ ಬಹಿರಂಗವಾಗಿ ಆರೋಪಿಸಿ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.
- ಚಿತ್ರ-ವರದಿ: ಜ್ಯೋತಿಪ್ರಕಾಶ್ ಪುಣಚ
ವಿದೇಶೀ ಸುದ್ದಿಸೌದಿ ಅರೇಬಿಯಾ: ಜನಮನಸೂರೆಗೊಂಡ "ಪಿರ್ಸಪ್ಪಾಡ್ " ಆಕರ್ಷಕ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ
ಜೆದ್ದಾ: (ಸೌದಿ ಅರೇಬಿಯಾ) ಜನವರಿ 22 : ಇಂಡಿಯಾ ಫ್ರಟೆರ್ನಿಟಿ ಫೋರಮ್ ಜಿದ್ದಾ ಘಟಕವು ಇಲ್ಲಿನ ಇಂಫಾಲ ಆವರಣದಲ್ಲಿ ಏರ್ಪಡಿಸಿದ್ದ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ "ಪಿರ್ಸಪ್ಪಾಡ್ " ಜನಮನಸೂರೆಗೊಂಡು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಆ ಪ್ರಯುಕ್ತ ನಡೆದ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್: ಕೆ.ಎಂ. ಶರೀಫ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಅನಿವಾಸಿ ಭಾರತೀಯರಿಗಾಗಿ ಜಾತಿ ಧರ್ಮಗಳ ಬೇಧವಿಲ್ಲದೆ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ರಾತ್ರಿ ೯ ಗಂಟೆಗೆ ಮಾಸ್ಟರ್ ಮುನೀರ್ ರವರ ಕಿರಾತ್ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜನಾಬ್: ಸುಹೇಲ್ ಕಂದಕ್ ಇಂಡಿಯಾ ಫ್ರಟೆರ್ನಿಟಿ ಫೋರಮಿನ ಸಾಮಾಜಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ನಂತರ ಆರೋಗ್ಯ ಜಾಗೃತಿ ಅಭಿಯಾನದ ಅಂಗವಾಗಿ ಆರೋಗ್ಯ ಜಾಗೃತಿಯ ಮಾಹಿತಿಯ ಜೊತೆಗೆ ಆವಶ್ಯಕ ವ್ಯಾಯಾಮದ ಬಗ್ಗೆ ಮಾಹಿತಿ ನೀಡಲಾಯಿತು. ಆನಂತರ ಮಕ್ಕಳಿಂದ ಧಾರ್ಮಿಕ ಗೀತೆಗಳ ಗಾಯನದ ಜೊತೆಗೆ ಸಾಂಪ್ರದಾಯಿಕ ದಫ್ ಪ್ರದರ್ಶನವೂ ನಡೆಯಿತು . ಕಿರಾತ್, ರಸಪ್ರಶ್ನೆ, ಚಿತ್ರ ಬಿಡಿಸುವ ಸ್ಪರ್ಧೆಯ ಜೊತೆಗೆ ಕೆಲವು ಒಳಾಂಗಣ ಕ್ರೀಡೆಗಳನ್ನೂ ಆಯೋಜಿಸಲಾಗಿತ್ತು. ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳಾವಕಾಶವನ್ನು ಏರ್ಪಡಿಸಲಾಗಿದ್ದು ಅವರಿಗಾಗಿಯೇ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇಂಡಿಯಾ ಫ್ರಟೆರ್ನಿಟಿ ಫೋರಮ್ ಜಿದ್ದಾ ಘಟಕದ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಜನಾಬ್ ಮಹಮ್ಮದ್ ಹುಸೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ ದಕ್ಷಿಣ ಕನ್ನಡ ಸುನ್ನೀ ಸೆಂಟರ್ ಅಧ್ಯಕ್ಷರಾದ ಜನಾಬ್ ಅಶ್ರಫ್ ಮೈನಾ , ಬಾಮಾ ಅಧ್ಯಕ್ಷರಾದ ಜನಾಬ್: ಹಿದಾಯತ್ ,ಇಂಡಿಯಾ ಫ್ರಟೆರ್ನಿಟಿ ಫೋರಮ್ ಸಂಚಾಲಕರಾದ ಜನಾಬ್: ಪಿ.ಕೆ. ಬಷೀರ್ ಮುಖ್ಯ ಅತಿಥಿಗಳಾಗಿದ್ದರು .
ಜನಾಬ್ ಮಹಮ್ಮದ್ ಅಲಿ ಸ್ವಾಗತಿಸಿದರೆ ಜನಾಬ್ ಅಬ್ದುಲ್ ಮಜೀದ್ ಧನ್ಯವಾದ ಸಮರ್ಪಿಸಿದರು. ಜನಾಬ್ ಎ.ಎಂ.ಆರೀಫ್ ಜೋಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಅಶ್ರಫ್ ಮಂಜ್ರಾಬಾದ್. ಸೌದಿ ಅರೇಬಿಯಾ.
Video
