ವರ್ಷಾಚರಣೆ
ಸಾಣೆ ತಾತನ ಹತ್ತಿರ ಕತ್ತರಿಕೊಟ್ಟು ಇಪ್ಪತ್ತು ನಿಮಿಷಗಳೇ ಆಗಿಹೋಯ್ತು. ಸಿಂಧೂಗೆ ನಿಂತೂ ನಿಂತೂ ಕಾಲುಗಳು ನೋಯತೊಡಗಿದ್ದವು. ಅವಳಿಗಿಂತ ಮತ್ತೆ ಬಂದ ಇಬ್ಬರಿಗೂ ಕತ್ತರಿ ಹರಿತಗೊಳಿಸಿ ಕೊಟ್ಟಿದ್ದ. ಅವಳ ಆಯಾಸ ಈಗ ಕೋಪದತ್ತ ತಿರುಗಿತ್ತು. ಸಿಟ್ಟನ್ನು ಅದುಮಿ ಹಿಡಿದು ಮತ್ತೊಮ್ಮೆ ಸಾಣೆಯವನತ್ತ ನೋಡಿದಳು. ಯಾಂತ್ರಿಕವಾಗಿ ಕೈಗಳು ಸಾಣೆ ಕೆಲಸ ಮುಂದುವರಿಸಿದ್ದರೂ ಅವಳ ಕಣ್ಣುಗಳು ಅವನನ್ನೇ ದಿಟ್ಟಿಸುತ್ತಿವೆ. ಸಿಂಧೂ ಸಹಿಸಲಾರದ ಸಿಟ್ಟಿನಿಂದ ಗರಕ್ಕನೆ ತಿರುಗಿ ನಿಂತಳು...
ಚಟ್ಟಕ್ಕೆ ಹತ್ತುವ ವಯಸ್ಸಾದರೂ ಹದಿಹರೆಯದವರನ್ನು ನೋಡುವ ಚಪಲ! ನಾಚಿಕೆಯಾಗಲ್ವಾ ಇವನಿಗೆ? ಕೆನ್ನೆಗೆರಡು ಬಾರಿಸಿದರೆ ಸರಿಹೋಗುತ್ತಾನೆ. ಇನ್ನು ಯಾವತ್ತೂ ಇವನೊಡನೆ ಕತ್ತರಿಕೊಡಬಾರದು . ಮನದೊಳಗೆ ಅಂದುಕೊಂಡಳು. ಹೋದಸಾರಿ ಬಂದಿದ್ದಾಗಲೂ ಹಾಗೇ ಮಾಡಿದ್ದ. ಅವಳ ಕತ್ತರಿಯನ್ನು ಲೇಟಾಗಿಯೇ ಮಾಡಿಕೊಟ್ಟಿದ್ದ. ಕಾರಣ ಕೇಳಿದ್ದಕ್ಕೆ `ಅವ್ರದ್ದಲ್ಲಾ ಬೀಡಿ ಎಲೆ ಕತ್ತರಿಸುವ ಕತ್ತರಿಗಳು. ನಿನ್ನ ಕತ್ತರಿ ಬಟ್ಟೆ ಕತ್ತರಿಸುವ ಕತ್ತರಿ ತಾನೇ. ಹೆಚ್ಚು ಹೊತ್ತು ಸಾಣೆ ಹಿಡೀಬೇಕಾಗುತ್ತದೆ.'
ಸಿಂಧೂ ನಂಬಿದ್ದಳು. ಆದರೆ... ಆಗಾಗ ಅವನ ದೃಷ್ಟಿ ಅವಳತ್ತ ತಿರುಗಿದಾ ಅವಳಿಗೆ ಅವನ ವರ್ತನೆ ಸರಿ ಕಾಣುತ್ತಿರಲಿಲ್ಲ. ಅವಳ ತಾತ ಇರುತ್ತಿದ್ದರೆ ಈ ಅಜ್ಜನ ವಯಸ್ಸೇ ಆಗಿರುತ್ತಿತ್ತು. ಅವಳ ತಾತ ಯಾವುದೋ ಕಾಯಿಲೆಯಿಂದ ತೀರಿಕೊಂಡು ಎರಡು ವರ್ಷಗಳೇ ಸಂದಿದ್ದವು. ಈ ಮುದುಕನನ್ನು ಎಲ್ಲರೂ ಸಾಣೆ ತಾತ ಎಂದೇ ಕರೆಯುತ್ತಿದ್ದರು. ಹೋದ ಸಾರಿ ಸಿಂಧೂ `ಸಾಣೆತಾತಾ ನನ್ನ ಕತ್ರಿಗೆ ಸಾಣೆ ಹಿಡಿಸಿ ಕೊಡ್ಬೇಕು'' ಎಂದು ಕೊಟ್ಟಾಗ ಎವೆಯಿಕ್ಕದೆ ಅವಳನ್ನೇ ನೋಡಿ ಕತ್ತರಿ ತೆಗೆದುಕೊಂಡಿದ್ದ. ತೆಗೆದುಕೊಳ್ಳುವ ನೆಪದಲ್ಲಿ ಅವಳ ಕೋಮಲವಾದ ಕೈಯನ್ನೂ ಸ್ಪರ್ಶಿಸಿದ್ದ. ಆಗ ಅವಳಿಗೆ ಅವನ ಮೇಲೆ ತಪ್ಪಭಿಪ್ರಾಯವೇನೂ ಬರಲಿಲ್ಲ. ಈಗ ನೋಡುವಾಗ ಈ ವಯಸ್ಸಿನಲ್ಲಿಯೂ ಆತನಿಗೆ ಹೆಣ್ಣಿನ ಹುಚ್ಚಿರಬಹುದು ಎಂದೆನ್ನಿಸಿತು. ಅವನು ನೋಡುವಾಗ ಬಾಯೊಳಗೆ ಮೇಲ್ಭಾಗದಲ್ಲಿ ನೀಳವಾದ ಕಪ್ಪು ಬಣ್ಣಕ್ಕೆ ತಿರುಗಿದ ಎರಡೇ ಹಲ್ಲುಗಳನ್ನು ಗುಂಡುಕಲ್ಲಿನಿಂದ ಚಚ್ಚಿ ಪುಡಿಮಾಡಬೇಕೆನ್ನಿಸಿತು ಸಿಂಧುವಿಗೆ. ಇವನು ಸಾಣೆತಾತನಲ್ಲ..ಮುದುಕ...ಮನದಲ್ಲೇ ಅಂದುಕೊಂಡಳು.
ಈಗ ಇನ್ಯಾರದ್ದೋ ಕತ್ತರಿಯನ್ನು ಸಾಣೆಮಾಡುತ್ತಿದ್ದ. ಅವಳ ಸಿಟ್ಟು ನೆತ್ತಿಗೇರಿತ್ತು. ಯಾಕಪ್ಪಾ ನಾನು ಈ ಮುದುಕನ ಹತ್ತಿರ ಕತ್ತಿರಿ ಕೊಟ್ಟುಬಿಟ್ಟೆ...ಅರ್ಜೆಂಟಾಗಿ ಒಂದು ಚೂಡಿದಾರ್ ಹೊಲಿಯಲು ಬಟ್ಟೆ ಕತ್ತರಿಸಹೋದರೆ ಕತ್ತರಿ ಬಡ್ಡಾಗಿದೆ ಎಂದು ತಂದರೆ ಈ ಮುದುಕ ಹೀಗೆನಾ ಮಾಡುವುದು...ಇವನು ಮಾಡಿಕೊಡದಿದ್ರೆ ಬೇಡ . ನಾನು ಹಾಗೇನೇ ತೆಗೆದುಕೊಂಡು ಹೋಗುತ್ತೇನೆ ಎಂದು ಅತ್ತ ತಿರುಗಿದರೆ ಅವನು ಮಂದವಾಗಿ ನಗುತ್ತಾ ಅವಳನ್ನೇ ನೋಡುತ್ತಿದ್ದ. ಅವಳ ಕತ್ತರಿ ಅವನ ಮಡಿಲಲ್ಲಿ ಆಶಯ ಪಡೆದಿತ್ತು. ಅವಳಸಿಟ್ಟು ಈಗ ಅಳುವಾಗಿ ಮಾರ್ಪಟ್ಟಿತ್ತು. ``ಸಾಣೆತಾತ ನೀನು ಹರಿತ ಮಾಡದಿದ್ರೆ ಬೇಡ. ನನ್ನ ಕತ್ರೀನಾ ಹಾಗೇ ಕೊಟ್ಟುಬಿಡು'' ಎಂದಳು ಅಳುಮಿಶ್ರಿತ ಧ್ವನಿಯಲ್ಲಿ.
ಅವಳು ಅಳುವುದನ್ನರಿತ ತಾತ ಜಾಗೃತನಾದ. ಏಯ್ ಅಮ್ಮಣ್ಣೀ ಅಳಬೇಡ. ಅಳ್ಬೇಡ... ನಿನ್ನ ಕತ್ರೀನಾ ಲಗೂನೆ ಮಾಡಿಕೊಡ್ತೇನೆ...ಕಣ್ಣೊರೆಸಿಕೊ...'' ಎನ್ನುತ್ತಾ ಅವಳ ಕತ್ತರಿ ಸಾಣೆ ಮಾಡಿದ. ಅಲ್ಲೇ ಹೂ ಹಣ್ಣು ತರಕಾರಿ ಅಂಗಡಿಗಳ ಸಾಲಿನ ಕೊನೆಯಲ್ಲಿ ಪ್ಲಾಸ್ಟಿಕ್ ಹಾಕಿದ ಜಾಗದಲ್ಲಿ ಅವನ ವೃತ್ತಿ. ಅವಳು ಕಣ್ಣೊರೆಸಿಕೊಂಡಳು. ಅಷ್ಟರಲ್ಲಿ ತುಂತುರು ಮಳೆ ಬೀಳತೊಡಗಿತು. ಅವಳು ಕೊಡೆ ತಂದಿರಲಿಲ್ಲ. ಈ ಮುದುಕ ಆಗ್ಲೇ ಕೊಡ್ತಿದ್ರೆ ನಾನಾಗ್ಲೇ ಮನೆ ತಲುಪುತ್ತಿದ್ದೆ. ಮಳೆಗೆ ತೋಯಿಸಿಕೊಂಡ್ರೆ ಜ್ವರಗಿರ ಬಂದ್ರೆ... ಇವನು ಮದ್ದು ಮಾಡುತ್ತಾನಾ ಎಂದುಕೊಳ್ಳುತ್ತಿದ್ದಂತೆಯೇ... `ಇಕಾ ಮಗ್ಳೇ ನಿನ್ ಕತ್ರಿ ತಗೋ...ಈ ಕಡೆ ಬಾ ಇಲ್ಲಿ ಕೂತುಕೋ ಎನ್ನುತ್ತಾ ಅವಳಿಗೆ ಕೂತುಕೊಳ್ಳಲು ಮುದುಕ ಸ್ಟೂಲೊಂದನ್ನು ನೀಡಿದ.
ನಿನ್ನಿಂದಾನೇ ಹೀಗೆ ಆಗಿದ್ದು. ಆಗ್ಲೇ ಮಾಡಿಕೊಟ್ಟಿದ್ರೆ ...ಎನ್ನುತ್ತಾ ಅವನತ್ತ ಹಣ ಚಾಚಿದಳು... ``ಬೇಡ ಅಮ್ಮಣ್ಣಿ ಎನ್ನುತ್ತಾ ಅವಳನ್ನು ಕಣ್ಣುಗಳಲ್ಲಿ ತುಂಬಿಕೊಂಡ.
ನಿನ್ನ ಋಣ ನಂಗೆ ಬೇಡ. ಇನ್ಮುಂದೆ ಇಲ್ಲಿ ಬರುವುದೂ ಇಲ್ಲ. ನೀನು ಸಾಣೆಹಾಕಿ ಕೊಡ್ಲೂ ಬೇಡ ಎನ್ನುತ್ತಾ ದುಡ್ಡು ಅವನ ಪಕ್ಕ ಹಾಕಿ ಮಳೆಯನ್ನೇ ನೋಡುತ್ತಾ ನಿಂತುಕೊಂಡಳು.
ಅಮ್ಮಣ್ಣೀ ದುಡ್ಡೇನೂ ಬೇಡ ನಂಗೆ. ನೀನು ತುಸು ಈಕಡೆ ತಿರ್ಗು'' ತಾತ ಮತ್ತೆ ಹೇಳಿದ.
ಏ ಮುದುಕಾ ...ನಿಂಗೆ ಬುದ್ದಿಗಿದ್ದಿ ಇದ್ಯಾ...ಇಲ್ವಾ? ಹುಡುಗೀರ ಹತ್ರ ಹೇಗೆ ನಡ್ಕೋಬೇಕಂತ ನಿಂಗೆ ಗೊತ್ತಿದ್ಯೋ ಇಲ್ವೋ... ಅಲ್ಲಾ ಪೊಲೀಸರನ್ನ ಕರೆಸ್ಲಾ... ಆಗ ಮಳೆ ಜೋರು ಬರುತ್ತಿತ್ತು. ಮಾತ್ರವಲ್ಲ ಅವಳ ಮಾತುಗಳು ಕಠೋರವಾಗಿದ್ದರೂ ಧ್ವನಿ ತಗ್ಗಿಸಿ ಹೇಳಿದ್ದಳು.
ಗೊತ್ತವ್ವಾ ಗೊತ್ತು... ನಾನು ಯಾಕೆ ಹಾಂಗೆ ನಿನ್ನನ್ನೇ ನೋಡ್ತೇನಂತ ನಿಂಗೆ ಕೋಪ ಬಂತಲ್ವಾ... ಆ ಕೋಪದ ಮೋರೆ ನೋಡ್ತಿದ್ರೆ ನಂಗೆ ಬಾಳ ಖುಷಿ ಕಣವ್ವಾ...ನೋಡು ಮಗ್ಳೇ... ಅದ್ಯಾಕೆ ಅಂತ ನಿಂಗೊಂದು ಕತೆ ಹೇಳ್ತೇನೆ...ಕಣವ್ವಾ...ಮುದುಕ ಅಷ್ಟು ಹೇಳಿದೊಡನೆ ಸಿಂಧು ಕುತೂಹಲಗೊಂಡಳು. ಸಾಣೆ ತಾತ ಹೇಳತೊಡಗಿದೆ. ಸುಮಾರು ಮೂವತ್ತೈದು ವರ್ಷಗಳ ಹಿಂದೆ...
ಸಾಣೆ ತಾತನ ಹೆಸರು ಕುರುಂಬಿ. ಅವನ ಊರು ಇಲ್ಲಿಂದ ಸುಮಾರು ಎಂಭತ್ತೈದು ಮೈಲು ದೂರದಲ್ಲಿತ್ತು. ಮುಖ್ಯರಸ್ತೆಯಿಂದ ಒಂದು ಫರ್ಲಾಂಗು ದೂರದಲ್ಲಿ ಹತ್ತು ಸೆಂಟ್ಸ್ ಜಾಗದಲ್ಲಿ ಅವನು ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದ. ಮನೆ ಎದುರುಗಡೆ ಇರುವ ಪುಟ್ಟ ಜಗಲಿಯಲ್ಲಿ ಕೂತು ಅವನು ಸಾಣೆ ಕೆಲಸ ಮಾಡುತ್ತಿದ್ದರೆ ದೆಯ್ಯು ಅಲ್ಲೇ ಸಮೀಪ ಕೂತು ಬೀಡಿ ಕಟ್ಟುತ್ತಿದ್ದಳು. ಮಗಳು ವತ್ಸಲಾ ಶಾಲೆಗೆ ಹೋಗುತ್ತಿದ್ದಳು. ಗಂಡ ಹೆಂಡ್ತಿ ಬಿಡುವಿನ ವೇಳೆಯಲ್ಲಿ ಹಿತ್ತಿಲಿನಲ್ಲಿ ತರಕಾರಿ, ಗೆಣಸು, ಮೆಣಸು ಬೆಳೆಸುತ್ತಿದ್ದರು. ಒಲೆಯ ಬೂದಿ ತರಗೆಲೆ ಸೆಗಣಿಯನ್ನು ಹಾಕಿ ನೀರೆರೆದು ಪೋಷಿಸುತ್ತಿದ್ದರು. ಸಮೃದ್ಧವಾಗಿ ಬೆಳೆದ ತರಕಾರಿಗಳನ್ನು ಸಂತಕೊಯ್ದು ಮಾರಿ ಕೈ ತುಂಬಾ ಸಂಪಾದಿಸುತ್ತಿದ್ದರು. ತಾನು ಅನಕ್ಷರಸ್ಥರಾದರೂ ಮಗಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಬೇಕೆನ್ನುವ ಆಸೆ ಅವರಲ್ಲಿತ್ತು. ಅದಕ್ಕೆ ಸರಿಯಾಗಿ ಅವಳು ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳಿಸುತ್ತಿದ್ದಳು. ಅವಳು ಉಡಲು ಕೂಡಾ ಯಾವ ಕೊರತೆಯನ್ನೂ ಮಾಡುತ್ತಿರಲಿಲ್ಲ ಅವಳ ಹೆತ್ತವರು. ಕೆಂಪು ಮಿಶ್ರಿತ ಬಿಳಿ ಬಣ್ಣದ ಸುಂದರಿಯಾದ ಹುಡುಗಿ ವತ್ಸಲಾ. ನಡೆನುಡಿ ಎಲ್ಲವೂ ಅಪ್ಪಟ ಬಂಗಾರ. ಶಾಲೆಯಲ್ಲಿ ಎಲ್ಲರಿಗೂ ಅವಳನ್ನು ಕಂಡರೆ ಪ್ರೀತಿ. ಅವಳ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಊರಿನಲ್ಲಿ ಹೈಸ್ಕೂಲ್ ಆಯಿತು. ಮಗಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಯಿತೆಂದು ಕುರುಂಬಿ ದಂಪತಿ ಸಂತೋಷಪಟ್ಟರು. ಅವಳು ಓದುವುದನ್ನು ನೋಡಿ ಅವರಿಬ್ಬರು ತುಂಬಾ ಸಂತೋಷಪಡುತ್ತಿದ್ದರು. ಮಗಳು ಕಲಿತು ಟೀಚರು ಆದಂತೆ ಕನಸು ಕಾಣುತ್ತಿದ್ದರು.
ಮಗಳನ್ನು ಹೈಸ್ಕೂಲಿಗೆ ಸೇರಿಸಿ ಬಂದ ಮೇಲಂತೂ ಅವರ ಸಂತಸ ಹೇಳುವುದಕ್ಕಿಲ್ಲ. ಊರ ದೇವಾಲಯದಲ್ಲಿ ಮಗಳ ಹೆಸರಿನಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಿದರು.
ಅಂದು ವತ್ಸಲಾಳ ಶಾಲೆಯ ವಾರ್ಷಿಕೋತ್ಸವ. ಅವಳಿಗೆ ಹೊಸ ಉಡುಪು ಹೊಲಿಸಿದ್ದರು. ಕೆಂಪು ಮೈಗೆ ನೀಲಿ ಹೂಗಳಿರುವ ಸಿಲ್ಕಿನ ಲಂಗ. ನೀಲಿ ರವಿಕೆಯಲ್ಲಿ ಅವಳ ಸೌಂದರ್ಯ ಎದ್ದುಕಾಣುತ್ತಿತ್ತು. ಎರಡೂ ಕೈಗೆ ತಲಾ ಆರು ನೀಲಿ ಗಾಜಿನ ಬಳೆಗಳು. ಎರಡೂ ಜಡೆಗೆ ಕನಕಾಂಬರದ ದಂಡೆ ಮುಡಿದು ಹಣೆಗೆ ಲಾಲ್ ಗಂಧದ ಬೊಟ್ಟು ಇಟ್ಟು ಕಣ್ಣಿಗೆ ಕಾಡಿಗೆ ಹಾಕಿ ಹೊರಟು ನಿಂತ ಮಗಳನ್ನು ದೆಯ್ಯು ಬಿಗಿದಪ್ಪಿ ದೃಷ್ಟಿನೀವಾಳಿಸಿದಳು. ಕುರುಂಬಿಯ ಕಣ್ಣಲ್ಲಿಯೂ ಸಂತಸದ ಕಣ್ಣೀರಿಳಿಯಿತು. ರಾತ್ರಿ ವತ್ಸಲಾಳ ಶಾಲೆಯಲ್ಲಿ ನಾಟಕವಿದ್ದಿತ್ತು. ಹುಡುಗಿಯರಿಗೆ ಉತ್ತಾನಪಾದ ಎಂಬ ಪೌರಾಣಿಕ ನಾಟಕವಿತ್ತು. ಅದರಲ್ಲಿ ವತ್ಸಲಾಳಿಗೆ ಸುನೀತಿಯ ಪಾತ್ರವಿತ್ತು. ಕೆಲವು ದಿನಗಳಿಂದ ಶಾಲೆಯಲ್ಲಿ ನಾಟಕಾಭ್ಯಾಸ ಮಾಡಿಸುತ್ತಿದ್ದರು. ತಮ್ಮ ಮಗಳು ನಾಟಕ ಮಾಡುತ್ತಾಳೆ ಎಂದಾಗ ದಂಪತಿಗೆ ಸ್ವರ್ಗವೇ ಕೈಗೆಟಕಿದಷ್ಟು ಸಂತೋಷ.
ವತ್ಸಲಾ ಹೆತ್ತವರಿಂದ ಬೀಳ್ಕೊಂಡು ಬೇಗ ಬೇಗ ನಡೆದಳು. ಉಳಿದ ಹುಡುಗಿಯರೆಲ್ಲಾ ರಸ್ತೆ ಬದಿಯಲ್ಲಿ ಅವಳಿಗಾಗಿ ಕಾದಿದ್ದರು. ವತ್ಸಲಾ ರಸ್ತೆಗೆ ತಲುಪಿದಳು. ಅವಳ ಸ್ನೇಹಿತೆಯರೆಲ್ಲಾ ಮಾರ್ಗದ ಆ ಕಡೆ ತಿರುಗಿದ್ದರು. ಎಲ್ಲರೂ ಒಟ್ಟಾಗಿ `ವತ್ಸಲಾ ರಾಜಕುಮಾರಿಗೆ ಜಯವಾಗಲೀ ' ಎಂದರು.
ಅವರ ಗುಂಪಿನೊಂದಿಗೆ ಒಂದಾಗಲು ವತ್ಸಲಾ ಬೇಗ ಬೇಗ ರಸ್ತೆದಾಟತೊಡಗಿದಳು. ಅಷ್ಟರಲ್ಲಿ ಅದೆಲ್ಲಿತ್ತೋ...ರಭಸವಾಗಿ ಬಂದ ಕಾರೊಂದು ವತ್ಸಲಾಳನ್ನು ಬಲಿತೆಗೆದುಕೊಂಡಿತು. ಗೆಳತಿಯರೆಲ್ಲಾ ಅತ್ತು ಗೋಳಾಡಿದರು. ವಿಷಯ ತಿಳಿದದ್ದೇ ಕುರುಂಬಿ ದೆಯ್ಯ ಓಡಿ ಬಂದರು.
ದೆಯ್ಯ ದೊಡ್ಡ ಧ್ವನಿಯಲ್ಲಿ ಬೊಬ್ಬಿಡುತ್ತಾ ಮಗಳ ಮೃತದೇಹವನ್ನು ತಬ್ಬಿಕೊಂಡಳು.ಒಂದೇ ಕ್ಷಣ ...ಮರುಕ್ಷಣದಲ್ಲೇ ದೆಯ್ಯುವ ದೇಹ ಅಲ್ಲೇ ಹತ್ತಿರದ ಸರಕಾರಿ ಬಾವಿಯ ತಳ ತಲುಪಿತ್ತು.
ಕುರುಂಬಿಗೆ ದಿಕ್ಕೇ ತೋಚದಾಯಿತು. ಎತ್ತ ನೋಡಿದರೂ ಶೂನ್ಯವೇ ಕಾಣುತ್ತಿತ್ತು. ಅವನಿಗೆ ಜೀವನವೇ ಶೂನ್ಯವಾದಂತಾಯಿತು. ಹೆಂಡತಿ ಮಗಳ ನೆನಪು ತರುವ ಮನೆಯೇ ಬೇಡವೆನ್ನಿಸಿತು. ಗೊತ್ತು ಗುರಿಯಿಲ್ಲದೆ ನಡೆಯತೊಡಗಿದ. ಕೈಯಲ್ಲಿರುವ ದುಡ್ಡು ಕರಗತೊಡಗಿತು. ಕೊನೆಗೆ ಚಿಕ್ಕದೊಂದು ಪೇಟೆಯಲ್ಲಿ ಅಂಗಡಿ ಸಾಲಿನ ಕೊನೆಯ ಸ್ವಲ್ಪವೇ ಜಾಗದಲ್ಲಿ ತನ್ನ ಉದ್ಯೋಗವನ್ನು ಪ್ರಾರಂಭಿಸಿದ. ಅವನೀಗ ಸಾಣೆತಾತ.
ಹಾಗೊಂದು ದಿನ ಬಂದ ಸಿಂಧುವನ್ನು ಕಾಣುತ್ತಿದ್ದಂತೆ ಕೆಲಸ ಮಾಡುತ್ತಿದ್ದ ಕೈಗಳು ಸ್ಥಗಿತಗೊಂಡಿದ್ದವು. ಥೇಟ್ ಅವನ ಸತ್ತು ಹೋದ ಮಗಳನ್ನೇ ಹೋಲುತ್ತಿದ್ದ ಸಿಂಧುವನ್ನು ನೋಡಿ ಭ್ರಮೆಹಿಡಿದವನಂತಾದ. ಮತ್ತೂ ಮತ್ತೂ ಅವಳನ್ನೇ ನೋಡಿದ. ಆ ನೋಟದಲ್ಲಿ ಕರುಳ ಕುಡಿಯನ್ನು ನೋಡಿದ ಹೆತ್ತ ತಂದೆಯ ಮಮತೆಯಿತ್ತು. ಮತ್ತೂ ಮತ್ತೂ ನೋಡುವುದಕ್ಕೋಸ್ಕರ ಅವಳ ಕತ್ತರಿಯನ್ನು ಬೇಗ ಕೊಡಲೇ ಇಲ್ಲ. ಸಿಂಧೂ ಅವನ ನೋಟವನ್ನು ತಪ್ಪು ಅರ್ಥಮಾಡಿಕೊಂಡಿದ್ದಳು. ಸಿಂಧುವನ್ನು ಮೊದಲಬಾರಿ ನೋಡಿ ಕುರುಂಬಿಗೆ ರಾತ್ರಿಮಲಗಿದರೆ ನಿದ್ರೆಯೇ ಬಾರದು. ಮಾರನೆಯ ದಿನದಿಂದ ಮತ್ತೆಂದು ಬರುವಳೋ ಸಿಂಧೂ ಎನ್ನುತ್ತಾ ದಾರಿ ಕಾಯತೊಡಗಿದ...
ಕತೆ ಹೇಳಿದ ತಾತನ ಕಣ್ಣುಗಳಲ್ಲಿ ತುಂಬಿದ ನೀರು ಸುಕ್ಕುಗಟ್ಟಿದ ಕೆನ್ನೆಯ ಮೇಲೆ ಇಳಿಯುತ್ತಿತ್ತು. ಕೇಳಿದ ಸಿಂಧುವಿನ ಕಣ್ಣುಗಳಲ್ಲಿಯೂ ಕಂಬನಿ ತುಂಬಿತ್ತು. ಅವಳ ಕೋಮಲವಾದ ಕೈ ಈಗ ಸಾಣೆತಾತನ ಕಣ್ಣೀರನ್ನು ತೊಡೆಯುತ್ತಿತ್ತು. ತಾತನ ಕೃಶವಾದ ಕೈಗಳು ಸಿಂಧುವಿನ ತಲೆಯನ್ನು ನೇವರಿಸುತ್ತಿತ್ತು.
ತಾತಾ ನಿನಗೆ ನನ್ನನ್ನು ನೋಡಿದರೆ ಸಂತೋಷವಾಗುತ್ತಿದ್ದರೆ ನಾನು ವಾರಕ್ಕೊಮ್ಮೆ ಖಂಡಿತಾ ಬರ್ತೇನೆ... ಎನ್ನುತ್ತಾ ಅಳು ತಡೆಯದೆ ಬಿಕ್ಕಿದಳು... ಬಾ ಮಗಳೇ...ಖಂಡಿತಾ ಬಾ... ಎನ್ನುತ್ತಾ ಸಿಂಧುವನ್ನು ತನ್ನೆದೆಗೆ ಒರಗಿಸಿಕೊಂಡ... ಈಗ ಸಾಣೆತಾತನ ಕಣ್ಣುಗಳಲ್ಲಿ ಆನಂದ ಭಾಷ್ಪ!
- ಸುಮತಿ ಕೆ.ಸಿ. ಭಟ್, ಆದೂರು
(ಕಥೆಗೆ ಬಳಸಲಾದ ಚಿತ್ರ ಕೇವಲ ಸಾಂದರ್ಭಿಕ. ಚಿತ್ರಕ್ಕೂ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲ. - ಸಂ.)
ವರ್ಷಾಚರಣೆ
ಮಾನವ ಜನ್ಮವು ಕೋಟಿ ಜೀವರಾಶಿಗಳಲ್ಲಿ ಅತ್ಯಂತ ಪಾವಿತ್ರ್ಯವೂ ಶ್ರೇಷ್ಠವೂ ಆಗಿದೆ. ತನ್ನ ಜೀವಿತದ ಅತ್ಯಲ್ಪ ಕಾಲದಲ್ಲಿಯೇ ಅಗಾಧವಾದುದನ್ನು ಸಾಧಿಸುವ ಮಾನವನ ಬದುಕಿನ ಒಳ ಹೂರಣಗಳನ್ನು ಯೋಚಿಸುವಾಗ ಅವನ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಚಿಂತಿಸುವಾಗ, ಗುಣತ್ರಯಗಳಿಗನುಸಾರ ಅಂದರೆ ರಾಜಸ, ತಾಮಸ, ಸತ್ವಗುಣಗಳ ಪ್ರಕಾರವೇ ಅವನ ಜೀವನದುದ್ದಕ್ಕೂ ಪ್ರತಿಯೊಂದು ಹಂತದಲ್ಲಿಯೂ ಅವನ ನಡವಳಿಕೆ ಮಾನಸಿಕ ಭಾವನೆ ಶೌರ್ಯ, ಕ್ರೌರ್ಯ, ತ್ಯಾಗ ಮನೋಭಾವನೆಗಳ ಸ್ಪಷ್ಟ ಚಿತ್ರಣ ಗೋಚರಿಸಲ್ಪಡುತ್ತದೆ. ಕೆಲವೊಮ್ಮೆ ಈ ವಿಚಾರಗಳು ಅವನ ವಂಶವಾಹಿನಿಯ ಪ್ರಕಾರವೂ ಬದಲಾಗಲು ಸಾಧ್ಯವಿದೆ.
ಪುರಾಣ ಕಾಲದಿಂದಲೇ ವಿವೇಚಿಸುವಾಗ ಒಬ್ಬ ಉತ್ತಮ ರಾಜನು ಯಾವರೀತಿಯಲ್ಲಿ ಪ್ರಜಾಪಾಲನೆಯನ್ನು ಮಾಡಬೇಕು? ದೇಶ ರಕ್ಷಣೆಯನ್ನು ಹೇಗೆ ಮಾಡಬೇಕು? ಮಾಡುತ್ತಾನೆ ಎಂಬುದನ್ನು ಅನುಸರಿಸಿ ಅವನ ಮನೋಭಾವನೆಯನ್ನು ಅರ್ಥಮಾಡಿಕೊಳ್ಳಬಹುದು. ಉತ್ತಮನಾದ ಒಬ್ಬ ರಾಜನು ಯುದ್ಧದಲ್ಲಿ ಶತ್ರುಗಳನ್ನು ಒದ್ದೋಡಿಸಲು ಬೇಕಾದ ಎಲ್ಲಾ ತಂತ್ರಗಳನ್ನೂ ದೈರ್ಯಗಳನ್ನೂ ಮೈಗೂಡಿಸಿಕೊಂಡು ಎದುರಾಳಿಯನ್ನು ಬಗ್ಗು ಬಡಿಯುತ್ತಾನೆ. ತನ್ನ ಪ್ರಜೆಗಳ ಕಷ್ಟ ಸುಖಗಳಲ್ಲಿ ಭಾಗಿಯಾಗಿ ನ್ಯಾಯ ಅನ್ಯಾಯಗಳ ಪರಿಶೀಲನೆಯಿಂದ ತನ್ನ ಮಕ್ಕಳಂತೆಯೇ ಅವರಿಗೆ ನೆರವಾಗುತ್ತಾನೆ.
``ರಾಜಾ ಪ್ರತ್ಯಕ್ಷ ದೇವತಾ'' ಎಂಬ ಮಾತು ಇಲ್ಲಿ ಪೂರಕವಗುತ್ತದೆ. ಪ್ರಜೆಗಳ ಸಂಕಷ್ಟ ಹೋಗಲಾಡಿಸಲೂ ಇಳೆಯಲ್ಲಿ ಉತ್ತಮ ಮಳೆ, ಬೆಳೆ ಬೆಳೆಯಲೂ ಸಮೃದ್ಧಿ ಸಂಪನ್ನ ರಾಜ್ಯವಾಗಲು ಭಗವಂತನ ಅನುಗ್ರಹ ಸಂಪಾದಿಸಲೂ ಯಾಗ ಯಜ್ಞಗಳನ್ನು ಮಾಡಿ ಪ್ರೀತ್ಯಾಧಾರಗಳಿಂದ ಪ್ರಜಾಪಾಲನೆ ಮಾಡುತ್ತಾನೆ. ಇದನ್ನೇ ರಾಜಧರ್ಮವೆನ್ನುವುದು.
ಆದರೂ ಕೆಲವೊಂದು ಸಂದರ್ಭಗಳಲ್ಲಿ ತನ್ನ ಮನಸ್ಸನ್ನು ನಿಯಂತ್ರಿಸಲು ಅಸಾಧ್ಯವಾಗಿ ಎಷ್ಟೋ ಕ್ಷಾತ್ರ ತೇಜಸ್ಸು, ಯುದ್ಧ ಕೌಶಲ್ಯವಿದ್ದರೂ ರಣರಂಗದಲ್ಲಿ ಹಿಮ್ಮುಖನಾಗುತ್ತಾನೆ. ಉದಾಹರಣೆಗೆ ಭಾರತಾ ಯುದ್ಧದ ಸಂದರ್ಭದಲ್ಲಿ ಪಾಂಡವರು ಕೌರವರೂ ಕುರುಕ್ಷೇತ್ರದಲ್ಲಿ ಚತುರಂಗ ಬಲದೊಡನೆ ಸೆಣಸಲು ಅಣಿಯಾಗುತ್ತಿದ್ದಂತೆಯೇ ಅರ್ಜುನನು ತನ್ನ ಎದುರಾಳಿಗಳಾದ ಗುರು ಹಿರಿಯರನ್ನು ನೋಡಿ ಹಿಡಿದಿದ್ದ ಧನುರ್ಭಾಣಗಳನ್ನು ಕೆಳಗಿಟ್ಟು ಶ್ರೀಕೃಷ್ಣನೊಡನೆ ತಾನು ಯುದ್ಧಮಾಡುವುದಿಲ್ಲ ಗುರುಹಿರಿಯರೊಡನೆಯೂ ಬಂಧುಗಳೊಡನೆಯೂ ಯುದ್ಧಮಾಡಲು ತನ್ನ ಮನಸ್ಸೊಪ್ಪುವುದಿಲ್ಲವೆಂಬ ಅಸಹಾಯಕತೆಯನ್ನು ತೋಡಿಕೊಂಡಾಗ ಶ್ರೀಕೃಷ್ಣನು ರಾಜನೀತಿಯನ್ನು ಬೋಧಿಸಿ ಯುದ್ಧೋನ್ಮುಖನಾಗುವಂತೆ ಹುರಿದುಂಬಿಸುತ್ತಾನೆ. ಆಗಲೂ ಅರ್ಜುನನ ಅನೇಕ ಸಂದೇಹಗಳು ತೊಲಗದಿದ್ದಾಗ ಧರ್ಮ ಯುದ್ಧವೆಂದರೇನೆಂಬುದನ್ನು ತಿಳಿಹೇಳುತ್ತಾನೆ. ತಾನು ಯಾರು ? ಏನು ಎಂಬುದನ್ನು ಮನ ಮುಟ್ಟುವಂತೆ ವಿವರಿಸಿ ಅರ್ಜುನನ ಮನಃ ಪರಿವರ್ತನೆಯನ್ನು ಮಾಡುತ್ತಾನೆ. ಇದರಿಂದ ಏನು ತಿಳಿಯುತ್ತದೆಂದರೆ ಎಷ್ಟೇ ಮೃದುವಾದ ಮನಸ್ಸನ್ನೂ ಎಷ್ಟೇ ಕಠೋರವಾದ ಮನಸ್ಸನ್ನೂ ಪರಿವರ್ತನೆಗೊಳಿಸಿ ಕಾರ್ಯಸಿದ್ಧಿಯನ್ನು ಮಾಡಬಹುದು ಎಂಬ ಸತ್ಯಾಂಶವನ್ನು ಅರ್ಥಮಾಡಿಕೊಳ್ಳಬಹುದು.
``ಪರಿತ್ರಾಣಾಯ ಸಾಧೂನಾಂ ವಿನಾಶಾಯ ದುಷ್ಕೃತಾಮ್ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ''(ಭಗವದ್ಗೀತೆ)
(ಸಾಧುಗಳ ರಕ್ಷಣೆಗಾಗಿಯೂ ದುಷ್ಟರ ವಿನಾಶಕ್ಕಾಗಿಯೂ ಮತ್ತು ಧರ್ಮ ಸಂಸ್ಥಾಪನೆಗಾಗಿಯಯೂ ಪ್ರತಿ ಯುಗದಲ್ಲಿಯೂ ಅವತರಿಸುತ್ತೇನೆ). ಕೇವಲ ಒಬ್ಬ ಗೋವಳನೆಂದು ತಿಳಿದಿದ್ದ ಜನರಿಗೆ ತನ್ನ ಕೌಶಲದಿಂದಲೂ , ಮೇಧಾ ಶಕ್ತಿಯಿಂದಲೂ ಜನತೆಯ ಮನದಲ್ಲಿ ದೇವನಾಗಿ ಮೆರೆದಿದ್ದಾನೆ, ಮೆರೆಯುತ್ತಾ ಇದ್ದಾನೆ ಶ್ರೀಕೃಷ್ಣ. ಅಂದು ಬಹು ಸಂಖ್ಯೆಯಲ್ಲಿ ಜನರು ಕೃಷ್ಣನನ್ನು ಮಾನವನೆಂದು ಬಗೆದಿದ್ದರು. ಇಂದು ಪರಮಾತ್ಮನೆಂದು ಆರಾಧಿಸುತ್ತಾರೆ. (ಆದರೂ ಕೆಲಮಂದಿಗೆ ಅಂದೂ ಶ್ರೀಕೃಷ್ಣ ಅವತಾರ ಪುರುಷ, ಪವಾಡ ಪುರುಷ ಎಂಬ ಭಾವನೆಯಿತ್ತು.)
ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದಶರಥ ಪುತ್ರನಾಗಿ ಅಯೋಧ್ಯೆಯಲ್ಲಿ ಜನಿಸಿದ. ಆಗ ರಾಮ ರಾಜಕುಮಾರ ಎಂಬುದನ್ನೇ ಜನಕೆ ತಿಳಿದಿತ್ತೆ ವಿನಃ ಅವತಾರ ಪುರುಷನೆಂದಲ್ಲ. ಪಿತೃವಾಕ್ಯ ಪರಿಪಾಲನಾರ್ಥವಾಗಿ ಹದಿನಾಲ್ಕು ವರುಷ ವನವಾಸ ಮಾಡಿ ದಾನವರ ನಿರ್ನಾಮ ಮಾಡಿ ಪುನಃ ಅಯೋಧ್ಯೆಗೆ ಮರಳಿದ ಮೇಲೆಯೇ ಅವನ ವ್ಯಕ್ತಿತ್ವ, ಶಕ್ತಿ, ಪೌರುಷ ಮೊದಲಾದ ಧೀರೋದ್ಧಾತ ಗುಣಗಳ ಅರಿವಾದುದು.
ದಾನವನಿಗೂ ಮಾನವನಿಗೂ ವ್ಯತ್ಯಾಸವೇನು? ಎಂಬುದೇ ಒಂದು ವಿಮರ್ಶಾತ್ಮಕ ವಿಚಾರ. ಯಾಕೆಂದರೆ ಸೃಷ್ಟಿಯಲ್ಲಿ ಇತರ ಜೀವಕೋಟಿಗಳಂತಲ್ಲ ಮಾನವರೂ, ದಾನವರೂ. ಅವರ ವರ್ತನೆ , ಜೀವನ ರೀತಿಯ ಫಲವಾಗಿಯೇ ಮಾನವ ದಾನವ ಎಂದು ವರ್ಗೀಕರಿಸಲಾಯಿತು. ತಾಮಸ ಗುಣದಿಂದ ಕೂಡಿದ ಒಂದು ವಿಭಾಗದವರನ್ನು ದಾನವರು , ರಾಕ್ಷಸರು ಎಂದೆಲ್ಲಾ ಕರೆಯಲಾರಂಭವಾಯಿತು. ಕೆಟ್ಟ ಸಂಸ್ಕೃತಿ , ವಾಮಾಚಾರ, ಸ್ವೇಚ್ಛಾಚಾರ, ವ್ಯಭಿಚಾರ, ಸ್ತ್ರೀ ಶೋಷಣೆ, ಅನಾಗರೀಕತೆ ಇವುಗಳೆಲ್ಲ ಮೈವೆತ್ತ ವರ್ಗದವರನ್ನೂ ಅವರ ಸಮುದಾಯದವರನ್ನೂ ದಾನವರು , ರಕ್ಕಸರು, ಎಂದು ಕರೆಯಲ್ಪಟ್ಟಿತು. ನಿಷ್ಕರುಣೆ, ಮುರ್ಖತನ ತನ್ನ ಕಾರ್ಯಸಾಧನೆಗಾಗಿ ಏನನ್ನೂ ಮಾಡಲು ಹೇಸದ ಮತ್ತು ಕೆಟ್ಟ ಆಹಾರ ಸೇವನೆ, ಕ್ರಾಂತಿಕಾರೀ ಮನೋಭಾವನೆ, ದುಡುಕುತನ, ಹಿಂಸಾಚಾರವೇ ಅವರ ವಂಶವಾಹಿನಿಯಲ್ಲಿ ಹಾಸು ಹೊಕ್ಕಾಯಿತು.
ಮಾನವರಂತೆ ಜನನ, ಶರೀರ ರಚನೆ, ವಾಕ್ ಸಾಮರ್ಥ್ಯ,ಎಲ್ಲವನ್ನೂ ಹೊಂದಿದ್ದ ವ್ಯಕ್ತಿಯಾಗಿದ್ದರೂ ಅವನ ಗುಣಗಳಿಂದಲೂ ಕೆಟ್ಟ ಸಂಸ್ಕಾರದಿಂದಲೂ ಇತರರು ಅವರನ್ನು ಬೇರ್ಪಟ್ಟು ನೋಡುವಂತಾಯಿತು. ರಾಕ್ಷಸರಿಗೆ(ರಾವಣನಿಗೆ) ಹತ್ತು ತಲೆ, ತ್ರಿಶಿರನಿಗೆ 3 ತಲೆ ಇತ್ತು ಎಂಬ ವಿಚಾರಗಳನ್ನು ನಾವು ರಾಮಾಯಣ ಗ್ರಂಥವನ್ನು ಓದುವಾಗ ಸಿಗುವ ವಿಚಾರಗಳು. ಅದು ಬಹುಶಃ ಕವಿ ಕಲ್ಪನೆ. ಯಾಕೆಂದರೆ ದುರ್ಗುಣಗಳನ್ನು ಹೊಂದಿದ ಓರ್ವ ವ್ಯಕ್ತಿಯನ್ನು ಕೆಟ್ಟ ರೀತಿಯಲ್ಲಿ ವೈಭವೀಕರಿಸಿದರೆ ಮಾತ್ರ ಅವನಲ್ಲಿರುವ ಕೆಟ್ಟಗುಣಗಳ ತೀವ್ರತೆಯನ್ನು ಆದಷ್ಟು ಭೀಭತ್ಸವಾಗಿ ಕಲ್ಪಿಸಲು ಸಾಧ್ಯವೆಂದೇ ಕವಿಗಳ ಕಲ್ಪನೆಯಾಗಿರಬಹುದು.
ಆದರೆ ಒಂದು ವಿಚಾರವನ್ನು ಹೀಗೂ ಅರ್ಥೈಸಬಹುದು. ಏಕಕಾಲದಲ್ಲಿ ಹತ್ತು ತಲೆಗಳಲ್ಲಿ ಬರಬಹುದಾದ ವಿಚಾರಗಳನ್ನು ವಿಮರ್ಶಿಸುವ , ವಿವೇಚಿಸುವ ಒಂದು ಗುಣ, ಸಾಮರ್ಥ್ಯ (ರಾವಣ)ನಲ್ಲಿತ್ತು ಎಂಬುದು.
ಈಗ ಪ್ರಪಂಚದೆಲ್ಲೆಡೆ ಭಯೋತ್ಪಾದಕರ ಧಾಳಿ, ಆತ್ಮಹತ್ಯಾ ಬಾಂಬರುಗಳು, ಅಲ್ ಖೇಡಾ , ತಾಲೀಭಾನ್, ಲಷ್ಕರ್ ಎ ತೋಯ್ಬಾ ದಂತಹ ಜಾಲ ಪ್ರಪಂಚದಾದ್ಯಂತ ಪರಸರಿಸಲ್ಪಟ್ಟಿದೆ. ಇವರ ಹಿಂಸಾಚಾರ, ಕ್ರೂರ ಕೃತ್ಯದಿಂದಾಗಿ ಇವರೂ ಒಂದರ್ಥದಲ್ಲಿ ದಾನವರೇ ಆಗಿದ್ದಾರೆ.ಅವರಲ್ಲಿ ಸಂಯಮ, ಕರುಣೆ, ಜೀವಭಯ, ಪಾಪಪ್ರಜ್ಞೆ ಯಾವುದೂ ಇಲ್ಲ. ಈ ರೀತಿಯವರು ದಾನವರ ಸಾಲಿಗೇ ಸೇರಿದವರಾಗಿದ್ದಾರೆ. ಇವರ ನಿರ್ನಾಮವಾಗಬೇಕಿದ್ದರೆ ಯಾ ಮನಃ ಪರಿವರ್ತನೆಯಾಗಬೇಕಿದ್ದರೆ ಯಾವ ಅವತಾರ ಪುರುಷನ ಆಗಬೇಕೋ ಅರ್ಥವಾಗುತ್ತಿಲ್ಲ. ಜನ್ಮದಲ್ಲಿ , ಗುಣದಲ್ಲಿ ತಾಮಸನಾಗಿದ್ದರೂ ಎಷ್ಟೋ ದುಷ್ಟರನ್ನು ಶ್ರೇಷ್ಟರನ್ನಾಗಿ ಪರಿವರ್ತಿಸಿದ ಉದಾಹರಣೆಗಳು ನಮ್ಮ ಪುಣ್ಯಭೂಮಿಯಲ್ಲಿ ಸಾಕಷ್ಟಿದೆ.
ಶ್ರೀ ಶಂಕರಾಚಾರ್ಯರು ಭಾರತದ ಉದ್ದಗಲಕ್ಕೂ ಸಂಚರಿಸಿ ಆ ಕಾಲದಲ್ಲಿ ಇದ್ದ ಅಧರ್ಮ, ವಾಮಾಚಾರ , ಹಿಂಸಾಚಾರ, ಮೂಢ ನಂಬಿಕೆಗಳ ಬಗ್ಗೆ ಜನರಿಗೆ ತಿಳುವಳಿ, ಬೋಧನೆಗಳನ್ನು ನೀಡಿ ಧರ್ಮದ ಮಹತ್ವವನ್ನು ಭಾರತದಾದ್ಯಂತ ಪುನರುತ್ಧಾನಗೊಳಿಸುವಲ್ಲಿ ಸಾಫಲ್ಯವನ್ನು ಹೊಂದಿದ್ದರು.
ಕೇರಳದ ಒಂದು ಸಾಧಾರಣ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವನ ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಿ ಮನಸ್ಸನ್ನು ಪರಿವರ್ತನೆಗೊಳಿಸುವಲ್ಲಿ ಸಾಕಷ್ಟು ಸಫಲತೆಯನ್ನು ಪಡೆದಿದ್ದರು.
ಒಂದೇ ಜಾತಿ, ಒಂದೇ ಕುಲ ಒಬ್ಬನೇ ದೇವರು ಎಂಬ ಅವರ ಧ್ಯೇಯ ವಾಕ್ಯ ದೇಶದಾದ್ಯಂತ ಜನತೆಯನ್ನು ಅವರೆಡೆಗೆ ಆಕರ್ಷಿಸಿತು. ಹಿರಿಯರಲ್ಲಿ ಭಕ್ತಿ ಗೌರವ, ಕಿರಿಯರಲ್ಲಿ ವಾತ್ಸಲ್ಯ, ನೆರೆಯವರಲ್ಲಿ ಭಾತೃತ್ವ, ದೇವರಲ್ಲಿ ಭಕ್ತಿ , ಅರ್ಪಣಾ ಮನೋಭಾವ, ಸಚ್ಛಾರಿತ್ರ್ಯಾ ಆತ್ಮಾವಲೋಕನವೇ ಮೊದಲಾದ ಅವರ ವಿಚಾರ ಧಾರೆಗಳಿಂದ ಆಕರ್ಷಿತರಾದ ಜನತೆ ಅವರೊಬ್ಬ ದೈವಾಂಶ ಸಂಭೂತರೆಂದೇ ಗುರುತಿಸಲ್ಪಟ್ಟಿದ್ದರು.
ಅಂದರೆ ತ್ಯಾಗ ಜೀವನ, ಧರ್ಮ ಬೋಧನೆ, ಆದರ್ಶ, ಸುಸಂಸ್ಕೃತ ಅನುಕರಣೀಯವಾದುದು. ಇಂದು ಎಷ್ಟೋ ಮಂದಿ ಶಿಕ್ಷಣ ಸಂಸ್ಥೆಗಳೂ ಮಂದಿರಗಳೂ ಅವರ ಹೆಸರಿನಲ್ಲಿ ನಡೆಸಲ್ಪಡುತ್ತದೆ.
ಶ್ರೀ ರಾಮಕೃಷ್ಣ ಪರಮಹಂಸರು , ಶ್ರೀ ವಿವೇಕಾನಂದರು ಮೊದಲಾದ ಪ್ರಾಥಸ್ಮರಣೀಯರೂ ಇದೇ ಸಾಲಿನಲ್ಲಿ ಸೇರಿದವರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಘಟ್ಟದಲ್ಲಿ ಸತ್ಯ ಶಾಂತಿ ಅಹಿಂಸೆಯೆಂಬ ಮೂಲಮಂತ್ರದಿಂದ ಭಾರತೀಯರ ಮನಸೂರೆಗೊಂಡು ಭಾರತೀಯರನ್ನು ಒಂದೇ ಚೌಕಟ್ಟಿನಲ್ಲಿ ಬಂಧಿಸಿ ಒಂದೇ ಧ್ಯೇಯದಿಂದ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಾಂಭೆಯ ದಾಸ್ಯ ಶೃಂಖಲೆಯಿಂದ ಮುಕ್ತಗೊಳಿಸಿದ ಮಹಾತ್ಮಾಜಿಯವರು ಮುಂದಿನ ಕಾಲದಲ್ಲಿ ದೈವಾಂಶ ಸಂಭೂತರೆಂದೇ ಜನರಿಂದ ಗುರುತಿಸಲ್ಪಡಲು ಹೆಚ್ಚು ದೂರವಿಲ್ಲ.
ಪ್ರತಿಯೋರ್ವ ವ್ಯಕ್ತಿಯಲ್ಲಿಯೂ ಸುಪ್ತವಾಗಿರುವ ಷಡ್ವೈರಿಗಳಾದ ಕಾಮ, ಕ್ರೋಧ, ಲೋಭ, ಮದ, ಮಾತ್ಸರ್ಯ , ಮೋಹಗಳು ಸಮಾನ ನೆಲೆಯಲ್ಲಿರಬೇಕು. ಕೆಲವೊಮ್ಮೆ ಅವುಗಳಲ್ಲಿ ಯಾವುದಾದರೊಂದು ಕೂಡ ಪ್ರಚೋದಿತವಾದರೆ ಎಂತಹ ಗಂಡಾಂತರಗಳನ್ನು ಎದುರಿಸಬೇಕಾಗುತ್ತದಲ್ಲದೆ ವ್ಯಕ್ತಿಯ ವಿನಾಶಕ್ಕೂ ಕಾರಣವಾಗುತ್ತದೆ. ಅಂದರೆ ಅಂತಹ ಕ್ಲಿಷ್ಟ ಸಮಯದಲ್ಲಿಯೂ ವಿವೇಕದಿಂದ ವಿಷಯಗಳನ್ನು ವಿಮರ್ಶಿಸುವ ನಂತರ ಮುಂದಡಿಯಿಡುವ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯವಾಗಿರುತ್ತದೆ.
ಮಾನವನ ಭಾವನೆಗಳನ್ನು ಕೆರಳಿಸದೆ, ಸನ್ಮಾರ್ಗದರ್ಶನವಿತ್ತು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸನಾತನ ಧರ್ಮದ ಸಂಸ್ಕಾರವನ್ನೂ ಉದಾತ್ತ ಧ್ಯೇಯಗಳನ್ನೂ ಚಿಂತಿಸುವಲ್ಲಿಯೂ ಬೋಧಿಸುವಲ್ಲಿಯೂ ಆಚರಿಸುವಲ್ಲಿಯೂ ತ್ಯಾಗ ಮನೋಭಾವನೆಯನ್ನು ಯಾರು ತೋರುತ್ತಾನೋ ಹಿಂಸಾ ಪ್ರವೃತ್ತಿಯನ್ನು ತೊರೆದು ಅಹಿಂಸಾ ಗುಣದಿಂದ ದೇವನಾಗಲೂ ಸಾಧ್ಯವಿದೆ. ತನ್ನ ಸ್ವಭಾವದಿಂದಾಗಿ ಗುಣಗಳಿಂದಾಗಿ ಮಾನವರು ದಾನವನೂ ಆಗಬಲ್ಲ ದೇವನೂ ಆಗಬಲ್ಲ.
ಕೆ.ಚಂದ್ರಶೇಖರ ಭಟ್., ಪೆರಿಂಜೆ
ವರ್ಷಾಚರಣೆ
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು.... ಈ ಮಾತು ಎಷ್ಟೊಂದು ಸುಂದರ ಅಲ್ಲವೇ. ಹಳೆ ಬೇರು ಅಂದರೆ ಅನುಭವಸ್ಥರ ಮಾರ್ಗದರ್ಶನ , ಪ್ರೋತ್ಸಾಹದ ನುಡಿಗಳು , ಗೌರವಪೂರ್ವಕ ಆಶೀರ್ವಾದಗಳು, ಹೊಸ ಚಿಗುರು ಇಂದಿನ ಯುವ ಜನತೆ, ಉತ್ಸಾಹದ ಚಿಲುಮೆ, ಆಸಕ್ತ ಮನೋಭಾವಗಳು ... ಇವೆರಡೂ ಸೇರಿದರೆ ಮರ ಸೊಗಸು... ಅಂದರೆ ಯಾವುದೇ ಒಂದು ಸಂಸ್ಥೆಯಿರಲಿ, ಸಂಘಟನೆಯಿರಲಿ ಅವು ಸುಂದರವಾಗಿ , ಸದೃಢವಾಗಿ, ಸಂತೋಷಪೂರ್ವಕವಾಗಿ , ಸಮತೋಲನವಾಗಿ ಕೂಡಿಬಾಳಲು ಸಾಧ್ಯ ಎಂಬ ಒಂದು ಅರ್ಥಪೂರ್ಣ ಮಾತು.ಇದನ್ನು ಈ ಸಂದರ್ಭದಲ್ಲಿ ಹೇಳಲೇ ಬೇಕು. ಕಾರಣ ಇಷ್ಟೇ. ಇಂದಿಗೆ `ಈ ಕನಸು. ಕಾಂ' ಎಂಬ ಮಂಗಳೂರಿನ ಮೊದಲ ಕನ್ನಡ ಅಂತರ್ಜಾಲ ಸುದ್ದಿ ಮಾಧ್ಯಮಕ್ಕೆ ಒಂದು ವರ್ಷ ಪೂರೈಸುತ್ತಿರುವ ಸುಸಂದರ್ಭ. ಆರಂಭದ ದಿನಗಳಲ್ಲಿ ಅನೇಕ ಮಂದಿ ಹಿರಿಯರ ಹಾರೈಕೆ, ಪ್ರೋತ್ಸಾಹ, ನಲ್ಮೆಯ ಮಾರ್ಗದರ್ಶನ , ಹಿತನುಡಿಗಳು `ಈ ಕನಸು. ಕಾಂ' ಗೆ ಹರಿದು ಬಂದಿತ್ತು. ಅದನ್ನೆಲ್ಲ ಶ್ರದ್ಧಾಪೂರ್ವಕವಾಗಿ ಸ್ವೀಕರಿಸಿರುವುದರಿಂದಲೇ ಈ ಕನಸು ಇಂದು ವರ್ಷಪೂರೈಸುವಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದೆ ಎಂದರೆ ತಪ್ಪಾಗಲಾರದು.
ಅನೇಕ ಅಡೆತಡೆಗಳು ಈ ಕನಸಿನ ಒಂದು ವರ್ಷದ ಹಾದಿಯಲ್ಲಿ ಕಂಡುಬಂದಿದೆ. ಸವಾಲುಗಳನ್ನು ಸಮರ್ಥವಾಗಿ ಈ ಕನಸು ನಿರ್ವಹಿಸಿದೆ. ಉದಯೋನ್ಮುಖ ಬರಹಗಾರರಿಗೆ ತುಂಬು ಪ್ರೋತ್ಸಾಹಗಳನ್ನು ನೀಡಿದೆ ಎಂಬುದು ಖುಷಿಯ ವಿಚಾರ. ಅನೇಕ ಹೊಸ ಹೊಸ ವಿಚಾರಗಳನ್ನು ಸಮಾಜಕ್ಕೆ ಎತ್ತಿ ತೋರಿಸುವ ಮೂಲಕ ಹೊಸತೊಂದು ಪರಂಪರೆಗೆ ಈ ಕನಸು ನಾಂದಿ ಹಾಡಿದೆ ಎಂದರೂ ತಪ್ಪಾಗಲಾರದು. ಅದೆಷ್ಟೋ ಮಂದಿಗೆ `ಅಂತರ್ಜಾಲ'ದಲ್ಲೂ ಸುದ್ದಿಮಾಧ್ಯಮ ಮಾಡಬಹುದೆಂದು ತಿಳಿದಿರಲಿಲ್ಲ. ಆದರೆ ಯಾವುದೇ ಇಸಂಗಳಿಲ್ಲದೆ, ಹಮ್ಮು ಬಿಮ್ಮುಗಳಿಲ್ಲದೆ ಈ ಕನಸು ಅವರಿಗೆಲ್ಲ ಒಂದು `ನವ ಮಾಧ್ಯಮ'ದ ಅನುಭವಗಳನ್ನು ತಿಳಿಹೇಳಿದೆ ಎಂಬ ಸಣ್ಣ ಸಂತೋಷ ಈ ಕನಸಿಗಾಗಿದೆ.
ಯಾವುದೇ ಒಂದು ಮಾಧ್ಯಮವಿರಲಿ ಅದಕ್ಕೆ ಸೂಕ್ತ ಲೇಖನ ಬರಹಗಳಿರದಿದ್ದಲ್ಲಿ ಆ ಮಾಧ್ಯಮ ಮುಂದುವರೆಯುವುದು ಬಹುಕಷ್ಟ. ಆರಂಭದ ದಿನಗಳಲ್ಲಿ ನಾಡಿನ ಗಣ್ಯ ಸಾಹಿತ್ಯ ಮಿತ್ರರೂ, ಹೆಸರಾಂತ ಹಿರಿಯ ಬರಹಗಾರರು ಅನೇಕ ಅಂಕಣ ಬರಹಗಳನ್ನು ನೀಡಿ ಪ್ರೋತ್ಸಾಹ ನೀಡಿದ್ದಾರೆ. ನಾಡಿನುದ್ದಗಲಕ್ಕಿರುವ ಅನೇಕ ಬರಹಗಾರರು ಯಾವುದೇ ಸ್ವಾರ್ಥವಿಲ್ಲದೆ ಮನಪೂರ್ವಕವಾಗಿ ಲೇಖನ , ಸುದ್ದಿಗಳನ್ನು ಪೂರೈಸುತ್ತಿದ್ದಾರೆ. ಅನೇಕ ಉದಯೋನ್ಮುಖ ಸಾಹಿತ್ಯ ಮಿತ್ರರು ನಿರಂತರ ವೈವಿಧ್ಯಮಯ ಬರಹಗಳನ್ನು ನೀಡುತ್ತಿದ್ದಾರೆ. ವಿದೇಶದಲ್ಲಿರುವ ಸಾಹಿತ್ಯಾಸಕ್ತ ಮಿತ್ರರು, ಈ ಕನಸಿನ ಅಭಿಮಾನಿ ಬಳಗ ಈ ಕನಸು ಮಾಧ್ಯಮಕ್ಕೆ ಸಕಾಲಕ್ಕೆ ಸೂಕ್ತ ವರದಿ, ಮಾಹಿತಿ, ಲೇಖನಗಳನ್ನು ಪೂರೈಸುತ್ತಿದ್ದಾರೆ. ಈ ಕನಸಿನ ಶಕ್ತಿಯಾಗಿರುವ ವಿದ್ಯಾರ್ಥಿ ಸಮೂಹ, ಯುವ ಸಮೂಹ ನಿರಂತರ ಬರಹಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಎಲ್ಲಾ ಅನಘ್ರ್ಯ ರತ್ನಗಳಿಗೆ ಈ ಕನಸು.ಕಾಂ. ಶಿರಬಾಗಿ ನಮಿಸುತ್ತದೆ. ಮತ್ತು ಮುಂದೆಯೂ ತಮ್ಮೆಲ್ಲರ ತುಂಬು ಪ್ರೋತ್ಸಾಹವನ್ನು ನಿರೀಕ್ಷಿಸುತ್ತದೆ.
ಈ ಕನಸು.ಕಾಂ ಕೇವಲ ಉದಯೋನ್ಮುಖ ಬರಹಗಾರರಿಗೆ ವೇದಿಕೆಯೊದಗಿಸಿ , ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸಿಲ್ಲ. ಬದಲಾಗಿ ಶಿಕ್ಷಣ, ಆರೋಗ್ಯ, ಮಾರ್ಗದರ್ಶನ ಮೊದಲಾದ ಸಮಾಜ ಮುಖೀ ಕಾರ್ಯಕ್ರಮಗಳಲ್ಲೂ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದೆ. ಮೂಡಬಿದಿರೆಯಲ್ಲಿ ನಡೆದ ಬೃಹತ್ ಉದ್ಯೋಗಮೇಳದಲ್ಲಿ ಈ ಕನಸು .ಕಾಂ ಯಶಸ್ವಿಯಾಗಿ ಭಾಗಿಯಾಗುವ ಮೂಲಕ ಯುವಜನತೆಗೆ ಉದ್ಯೋಗ ನೀಡುವ ಕಾರ್ಯದಲ್ಲಿ ಅಳಿಲ ಸೇವೆ ಮಾಡಿದೆ. ಅನೇಕ ಶಾಲಾ , ಕಾಲೇಜುಗಳಲ್ಲಿ ಅಂತರ್ಜಾಲ ಮಾಧ್ಯಮ, ನವ ಮಾಧ್ಯಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಆರೋಗ್ಯ ಶಿಬಿರಗಳನ್ನೇರ್ಪಡಿಸಿ ಯಶಸ್ವಿಯಾಗಿ ಜನತೆಯ ಆರೋಗ್ಯ ಸೇವೆಯಲ್ಲಿ ಭಾಗಿಯಾಗಿದೆ.
ಯಾವುದೇ ಒಂದು ಜಾತಿ, ಪಂಗಡ, ಮತ, ಧರ್ಮಗಳನ್ನು ಓಲೈಸದೆ, ಸಮದೃಷ್ಠಿಯಿಂದ ಈ ಒಂದು ವರ್ಷಗಳಲ್ಲಿ ಈ ಕನಸು.ಕಾಂ ಕರ್ತವ್ಯ ನಿರ್ವಹಿಸಿದೆ ಎಂಬುದು ಈ ಕನಸಿಗೆ ಸಮಾಧಾನ ತಂದ ವಿಚಾರ. ಹಲವಾರು ಸಂದರ್ಭಗಳಲ್ಲಿ ನೇರವರದಿಗಳನ್ನು, ವಿಡಿಯೋ ಲೈವ್ ಗಳನ್ನು ನೀಡಿ ಜನತೆಗೆ ಕ್ಷಿಪ್ರಗತಿಯಲ್ಲಿ ಮಾಹಿತಿ ತಲುಪಿಸುವಲ್ಲಿ ಈ ಕನಸು ಸಮರ್ಥವಾಗಿದೆ ಎಂಬುದು ಸಂತಸ ತಂದಿದೆ.
ಒಂದು ವರ್ಷಗಳ ಕಾಲ ಈ ಕನಸು.ಕಾಂ ನ ಎಲ್ಲಾ ವಿಚಾರಗಳಿಗೆ ಪ್ರೋತ್ಸಾಹಿಸಿ, ಬೆಂಬಲ ನೀಡಿ, ತಪ್ಪು ಒಪ್ಪುಗಳನ್ನು ತಿದ್ದುವಲ್ಲಿ ಸಹಕರಿಸಿದ ಓದುಗ ಕೋಟಿಗೆ ಕೃತಜ್ಞತೆಗಳು. ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸನ್ಮಿತ್ರರಿಗೂ ಕೃತಜ್ಞತೆಗಳು. ಮುಂದೆಯೂ ತಮ್ಮೆಲ್ಲರ ನಿರಂತರಪ್ರೋತ್ಸಾಹ ನಮ್ಮ ಮೇಲಿರಲಿ ಎಂಬ ಸದಾಶಯ ನಮ್ಮದು. ಶುಭವಾಗಲಿ.
- ಸಂಪಾದಕ.
ವರ್ಷಾಚರಣೆ
ಒಂದು ಪುಟ್ಟ ಕೊಠಡಿಯಲ್ಲಿ , ಒಂದೆರಡು ಬರಹಗಳೊಂದಿಗೆ ಆರಂಭಗೊಂಡ ಈ ಕನಸು.ಕಾಂ. ಇಂದು ವಿಸ್ತಾರವಾಗಿ ಬೆಳೆಯುತ್ತಿದೆ. ಈ ಕನಸು ಆರ್ಥಿಕವಾಗಿ ಸಬಲತೆಯನ್ನು ಸಾಧಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಾನಸಿಕವಾಗಿ ಸದೃಢವಾಗಿದೆ. ಮೌಲಿಕವಾದ ಅಂಶಗಳನ್ನು ತನ್ನ ಓದುಗರಿಗೆ ನಿರಂತರ ನೀಡುತ್ತಾ ಬಂದಿದೆ ಎಂಬುದರಲ್ಲಿ ಎರಡುಮಾತಿಲ್ಲ. ಸೋಲನ್ನು, ಅಡೆ ತಡೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿರುವುದೇ ಈ ಕನಸಿಗೊಂದು ಶಕ್ತಿ ತಂದುಕೊಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅನೇಕಬಾರಿ ತಾಂತ್ರಿಕತೊಂದರೆಗಳುಂಟಾಗಿ ಮಾಧ್ಯಮ ಕೊಂಚ ತಡವಾಗಿ ಸುದ್ದಿ ಬಿತ್ತರಿಸಿದೆಯಾದರೂ, ಹಲವು ಬಾರಿ ಹೊಚ್ಚಹೊಸ ಸುದ್ದಿಯನ್ನು ಮೊದಲು ಬಿತ್ತರಿಸಿ ಓದುಗರನ್ನು ಆಕರ್ಷಿಸಿದೆ ಎಂಬುದನ್ನು ಈ ಕನಸು ಓದಿ ಅಭಿಪ್ರಾಯಿಸಿದ ಸಾವಿರಾರು ಮಂದಿಯ ಅಂತರಾಳದ ನುಡಿಗಳು ನಮಗೆ ತಿಳಿಸಿವೆ.
ಈ ಕನಸಿನ ಬಗ್ಗೆ ಅನೇಕ ಅಭಿಪ್ರಾಯಗಳನ್ನು ಓದುಗ ಮಿತ್ರರು ಈ ಬಾರಿ ಹಂಚಿಕೊಂಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಗಳು. ಹೂರಣ, ವಿನ್ಯಾಸಗಳ ಬಗೆಗೂ ತಿಳಿಸಿದ್ದಾರೆ. ಅನೇಕ ಒತ್ತಡಗಳು, ಆರ್ಥಿಕ ಧೋರಣೆಗಳು, ತಾಂತ್ರಿಕ ತೊಡಕುಗಳು ಸಾಮಾನ್ಯವಾಗಿ ನಮ್ಮೆದುರಿದೆ. ಅಷ್ಟೇ ಅಲ್ಲದೆ ಯಾವುದೇ ವಾಣಿಜ್ಯ ದೃಷ್ಟಿಕೋನವಿರಿಸದೆ ಈ ಕನಸು ಕಾರ್ಯಾಚರಿಸುತ್ತಿರುವುದು ತಮಗೆಲ್ಲರಿಗೂ ಗೊತ್ತಿರತಕ್ಕಂತಹ ಅಂಶ. ತಮ್ಮೆಲ್ಲರ ಅಭಿಪ್ರಾಯಗಳನ್ನು ನಾವು ಸ್ವೀಕರಿಸುತ್ತೇವೆ. ತಮ್ಮೆಲ್ಲರ ಆಶಯಗಳನ್ನು ಬಯಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಒಂದಷ್ಟು ವಿಳಂಬವಾಗಿದೆ. ಆಗುತ್ತಿದೆ. ಕ್ಷಮೆಯಿರಲಿ.
ಇದ್ದ ಕನಿಷ್ಠ ಸಂಪನ್ಮೂಲವನ್ನು ಗರಿಷ್ಠವಾಗಿ ಬಳಕೆಮಾಡಿ ಮಾಧ್ಯಮಲೋಕದಲ್ಲಿ ತನ್ನ ಅಸ್ತಿತ್ವವನ್ನು ಈ ಕನಸು.ಕಾಂ ಉಳಿಸಿಕೊಂಡಿದೆ. ಈ ಕನಸು.ಕಾಂ `ವರ್ಷದ ಕನಸು.' ಇದು ಉದಯೋನ್ಮುಖ ಬರಹಗಾರರಿಗೆ ಒಂದು ವೇದಿಕೆ. ಆರಂಭದ ದಿನಗಳಲ್ಲಿ ವಾರಪತ್ರಿಕೆಯಾಗಿ ಪ್ರಾರಂಭಗೊಂಡ ಈ ಕನಸು.ಕಾಂ ತನ್ನ ಓದುಗರ ನಿರಂತರ ಪ್ರೋತ್ಸಾಹದಿಂದಾಗಿ ದಿನಪತ್ರಿಕೆಯಾಗಿ ಕ್ಷಣ ಕ್ಷಣದ ಮಾಹಿತಿಗಳನ್ನು ಭಿತ್ತರಿಸುವ ಕಾರ್ಯವನ್ನು ಮಾಡುತ್ತಿದೆ. ಇಂದು ವಿಶಾಲವಾದ ಕೊಠಡಿಯಲ್ಲಿ ಈ ಕನಸು ನಲಿದಾಡುತ್ತಿದೆ. ಸಾಧಿಸಿದ್ದು ಕನಿಷ್ಠ. ಸಾಧಿಸಬೇಕಾದದ್ದು ಅನೇಕ. ಸಾಧಿಸುವ ಛಲ ಈ ಕನಸಿನಲ್ಲಿದೆ. ಶಕ್ತಿ , ಪ್ರೋತ್ಸಾಹ ನಿಮ್ಮೆಲ್ಲರಿಂದ ನಮಗೆ ದೊರಕುತ್ತಿದೆ. ಮುಂದೆ ಇನ್ನೂ ಹತ್ತು ಹಲವು ಹೊಸ ವಿಚಾರಗಳು, ಭಾವನೆಗಳೊಂದಿಗೆ ದಿನ ದಿನವೂ ಹೊಚ್ಚ ಹೊಸ ವಿಚಾರಗಳ ಮೂಲಕ ನಿಮ್ಮ ಮುಂದೆ ಈ ಕನಸು ನಿಲ್ಲಲಿದೆ.
- ಹರೀಶ್ ಕೆ.ಆದೂರು
ವರ್ಷಾಚರಣೆ ಕರ್ನಾಟಕ ಅನಿವಾಸಿ ವೇದಿಕೆಯ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಇಂಗ್ಲೆಂಡಿನ ಕರ್ನಾಟಕ ಅನಿವಾಸಿ ವೇದಿಕೆಯವರು ಆಯೋಜಿಸಿದ್ದ ಲಂಡನ್ ಕಣ್ಣು ತದ್ರೂಪ ಬೆಂಗಳೂರಿನಲ್ಲಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕ ಸರಕಾರದಿಂದ ಎಲ್ಲ ರೀತಿಯ ಸಹಕಾರವನ್ನು ಕೊಡಿಸುವುದಾಗಿ ಭರವಸೆಯನ್ನಿತ್ತರು.ಕಾರ್ಯಕ್ರಮವನ್ನು ಕರ್ನಾಟಕ ಅನಿವಾಸಿ ವೇದಿಕೆಯ ಯುರೊಪ್ ನ ಪ್ರತಿನಿಧಿ ಡಾಕ್ಟರ್ ನೀರಜ್ ಪಾಟೀಲ್ ರವರು ಲಂಡನ್ನಿನ ಮ್ಯಾರೀಎಟ್ ಹೋಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದರು.
ಲಂಡನ್ ಕಣ್ಣಿನ ಡಿಸೈನರ್ ಡೇವಿಡ್ ಮಾರ್ಕ್ಸ್ ರವರು ಕಾರ್ಯಕ್ರಮದ ಮೊದಲಿಗೆ ಲಂಡನ್ ಕಣ್ಣಿನಲ್ಲಿ ಗಣ್ಯರಿಗೆ ಒಂದು ಪ್ರವಾಸ ವನ್ನು ವ್ಯವಸ್ಥೆ ಮಾಡಿ ಎಲ್ಲ ರೀತಿಯಾದ ತಾಂತ್ರಿಕತೆಯ ಬಗ್ಗೆ ನಿರೂಪಿಸಿದರು.ಆಮೇಲೆ ಸಭಿಕರನ್ನು ಉದ್ದೇಶಿಸಿ ತಾವು ಎಡತಾಕಿದ ಸಮಸ್ಯೆಗಳನ್ನುಹೇಗೆ ಎದುರಿಸಿದರು ಎಂದು ಬಹಳ ಸುಂದರವಾಗಿ ನಿರೂಪಿಸಿದರು. ಸೌತ್ ಲಂಡನ್ನಿನ ಸಂಸದೆ ,ಮಾಜಿ ಗೃಹ ಸಚಿವೆ ಕೇಟ್ ಹುಯಿ ಯವರು ತಾವು ಹೇಗೆ ಸರಕಾರದಿಂದ ಲಂಡನ್ ಕಣ್ಣು ಸ್ಥಾಪಿಸಲು ಸಹಕಾರವನ್ನು ,ಅವರು ಅನುಬವಿಸಿದ ತೊಂದರೆಗಳನ್ನು ವಿವರಿಸಿದರು.ಪ್ರಪಂಚದಲ್ಲಿ ಇಂದು ಹೆಸರು ಮಾಡುತ್ತಿರುವ ಬೆಂಗಳೂರಿನಲ್ಲಿ ಲಂಡನ್ ಕಣ್ಣು ಖಂಡಿತ ಬಹುದೊಡ್ಡ ಪ್ರವಾಸಿ ಆಕರ್ಷಣೆಯಾಗಲಿದೆ, ಸುಮಾರು ಉದ್ಯೋಗವನ್ನು ,ವ್ಯವ ಹಾರವನ್ನು ಸೃಷ್ಟಿಸಲಿದೆ ಎಂದು ತಮ್ಮಿಂದಾದ ಸಹಕಾರವನ್ನು ಕೊಡುವುದಾಗಿ ಆಶ್ವಾಸನೆಯನ್ನು ಇತ್ತರು.
ಗುಜರಾತ್ ಸಮಾಚಾರ್ ಮತ್ತು ಏಶಿಯನ್ ವಾಯ್ಸ್ ಪತ್ರಿಕೆಯ ಸಂಪಾದಕರಾದ ಸಿ ಬಿ ಪಟೇಲ್ ರವರು ಮಾತನಾಡುತ್ತ ಯೋಜನೆಯು ಬಹು ದೊಡ್ಡದು ಬೆಂಗಳೂರಿನವರಿಗೆ ಮೊದಲ ಆದ್ಯತೆ ,ಬೆಂಗಳೂರಿಗೆ ಬೇಡದೆ ಹೋದರೆ ಗುಜರಾತ್ ನಲ್ಲಿ ಈ ಯೋಜನೆ ಕಾರ್ಯ ರೂಪಕ್ಕೆ ತರಲು ಅಲ್ಲಿನ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ ಎಂದರು.
ಕಾರ್ಯಕ್ರಮದ ಅಂಗವಾಗಿ ಯೂರೋಪಿನ ಬಹುತೇಕ ಎಲ್ಲ ಕನ್ನಡ ಸಂಸ್ಥೆಯ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಬ್ರಿಟನ್ ಸಂಸದೆ ಕೇಟ್ ಹುಯಿ ಯವರು ನಡೆಸಿಕೊಟ್ಟರು. ಸನ್ಮಾನವನ್ನು ಡಾಕ್ಟರ್ ಭಾನುಮತಿ ,ಕನ್ನಡಬಳಗದ ಪರವಾಗಿ , ವಿನಯ್ ರಾವ್ ಕನ್ನಡಿಗರು ಯು ಕೆ ಪರವಾಗಿ ,ಡಾಕ್ಟರ್ ಸುನಿಲ್ ಬಾಗೇವಾಡಿ ವೀರಶೈವ ಯು ಕೆ ಪರವಾಗಿ ,ಡಾಕ್ಟರ್ ಪ್ರಕಾಶ್ ನಾಯಕ್ ಗೌಡ ಸಾರಸ್ವತ್ ಸಭಾ ಪರವಾಗಿ ,ಡಾಕ್ಟರ್ ರಮೇಶ್ ಶೆಟ್ಟಿ ಬಂಟ್ಸ್ ಯು ಕೆ ಪರವಾಗಿ ಸ್ವೀಕರಿಸಿದರು.ವಿಶೇಷವಾಗಿ ಡಾಕ್ಟರ್ ಅಪ್ಪಾಜಿ ಗೌಡ ,ಡಾಕ್ಟರ್ ನಂದಕುಮಾರ್ , ಮಹೇಶ್ ನಾಗರಾಜಯ್ಯ ಮತ್ತು ಸಿ ಬಿ ಪಟೇಲ್ ರವರನ್ನು ಕರ್ನಾಟಕ ಅನಿವಾಸಿ ವೇದಿಕೆಯ ಪರವಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಸನ್ಮಾನಿಸಿದರು.ಕಾರ್ಯಕ್ರಮದ ಮೊದಲಿಗೆ ಕುಂಟಿಕಾನ ಮಠ ಕುಮಾರ್ ರವರು ಸ್ವಾಗತ ಭಾಷಣವನ್ನು ಮಾಡಿದರು.
ಡಾಕ್ಟರ್ ನೀರಜ್ ಪಾಟೀಲ್ ರವರು ಅನಿವಾಸಿ ಕನ್ನಡಿಗ ವೇದಿಕೆಯ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು ಮತ್ತು ಸಂಪತ್ ಯದವಾದ್ ವಂದನಾರ್ಪಣೆ ನೆರವೇರಿಸಿದರು.ಈ ಕಾರ್ಯಕ್ರಮಕ್ಕೆ ಹಲವಾರು ರೀತಿಯಲ್ಲಿ ಶರತ್ ಅಯ್ಯರ್ ,ಚೇತನ ಶರತ್ ,ದೀಪಿಕಾ ಕುಂಟಿಕಾನ ಮಠ ,ಪ್ರಿಯಾ ಸಂಪತ್ ಮತ್ತು ಅನಂತ್ ಭಟ್ ಸಹಕರಿಸಿದರು.
ಏನಿದು ಲಂಡನ್ ಕಣ್ಣು ?. ಲಂಡನ್ನಿನ ಪ್ರೇಕ್ಷಣಿಯ ಸ್ಥಾನಗಳಲ್ಲಿ ಲಂಡನ್ ಕಣ್ಣು ಮೊದಲ ಸ್ಥಾನ .ಸುಮಾರು ೩೦ ಲಕ್ಷ ಜನರು ಒಂದು ವರುಷಕ್ಕೆ ವೀಕ್ಷಿಸುತ್ತಾರೆ.ಇದು ೧೩೫ ಮೀಟರ್ ಎತ್ತರದ ಬಹುದೊಡ್ಡ ಚಕ್ರ .ಅದರಲ್ಲಿ ೨೫ ಜನರು ಕೂರಬಹುದಾದ ಸುಮಾರು ೩೨ ಸಣ್ಣ ಸಣ್ಣ ಕೋಣೆಗಳು.ಹೆಚ್ಹಿನ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿದೆ.
ವರದಿ: ಕುಮಾರ್/ರಾಮಚಂದ್ರ
ವರ್ಷಾಚರಣೆ
ಹಳೆಯ ನಾಣ್ಯಗಳ ಸ೦ಗ್ರಹ-ಇದೊ೦ದು ಅತ್ಯ೦ತ ಕುತೂಹಲಭರಿತವಾದ , ಕ್ರಿಯಾತ್ಮಕ ಹವ್ಯಾಸ. ಇತಿಹಾಸದ ಪುಟಗಳನ್ನು ನಮ್ಮ ಕಣ್ಣ ಮು೦ದೆ ಒ೦ದೊ೦ದಾಗಿ ತೆರೆಯುತ್ತಾ ಹೋಗುತ್ತದೆ ಈ ಹವ್ಯಾಸ. ಇ೦ತಹ ನಾಣ್ಯಗಳ ಚರಿತ್ರೆ ; ಮನುಕುಲದ ಚರಿತ್ರೆಯೊಡನೆ ಹೊಸೆದು, ಬೆಸೆದು ಬ೦ದಿದೆ. ನಾಣ್ಯಗಳ ಮೂಲವನ್ನು ಗುರುತಿಸಬೇಕಾದರೆ ಮಾನವ ಅತ್ಯ೦ತ ಪ್ರಾಚೀನ ಕಾಲಕ್ಕೆ ಸರಿಯಬೇಕು. ಸಮಾಜ-ಜನಾ೦ಗ ಸಾಕಷ್ಟು ಬೆಳೆದ೦ತೆ ಒ೦ದೆಡೆ ನೆಲೆಯಾಗಿ ನಿಲ್ಲುವುದು ಆವಶ್ಯಕವಾದ೦ತೆ ವಸ್ತು ವಿನಿಮಯವೂ ಅನಿವಾರ್ಯವಾಯಿತು.
ಆದರೆ ಈ ವಿನಿಮಯ ಪದ್ದತಿಯಲ್ಲಿ ಅನೇಕ ದೋಷಗಳು ಇದ್ದವು. ಈ ದೋಷಗಳನ್ನು ಹೋಗಲಾಡಿಸುವ ದೃಷ್ಟಿಯಿ೦ದಲೇ ಸರ್ವ ಗ್ರಾಹ್ಯ ಸ೦ಕೇತ ರೂಪದ ವಸ್ತುವನ್ನು ನಿರ್ಮಿಸಿಕೊಳ್ಳುವುದು ಅನಿವಾರ್ಯವಾಯಿತು. ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ವಸ್ತುಗಳನ್ನು ನಾಣ್ಯಗಳ೦ತೆ ಉಪಯೋಗಿಸುವ ಪದ್ದತಿ ಪ್ರಾರ೦ಭವಾಯಿತು.
ಇ೦ತಹ ಒ೦ದೊ೦ದು ನಾಣ್ಯವೂ ಸ೦ಗ್ರಹಕಾರನ ಅಮೂಲ್ಯ ಆಸ್ತಿಯಾಗಿದೆ., ಹಾಗೂ ಆತನ ಆಸಕ್ತಿಯನ್ನು ಕೆರಳಿಸುವ ವಸ್ತುಗಳಾಗಿವೆ. ಏಕೆ೦ದರೆ ಒ೦ದೊ೦ದು ನಾಣ್ಯದ ಹಿ೦ದೆಯೂ ಒ೦ದೊ೦ದು ಕಥೆಯಿದೆ; ಅದರದ್ದೇ ಆದ ಇತಿಹಾಸವಿದೆ. ಪ್ರತಿಯೊ೦ದು ನಾಣ್ಯವೂ ತನ್ನ ಕಾಲದ , ತಾನಿದ್ದ ಸಮಾಜದ ಹಲವು ಮುಖಗಳನ್ನು ನಮ್ಮೆದುರಿಗೆ ತೆರೆದಿಡಬಲ್ಲುದು. ನಾಣ್ಯದ ಮೇಲೆ ಕೆತ್ತಿರುವ ಚಿತ್ರವೂ ತನ್ನದೇ ಆದ ಕಥೆ ಹೆಳುತ್ತದೆ; ನಮೂದಿಸಿರುವ ದಿನಾ೦ಕವು ನಾಣ್ಯದ ಕಾಲವನ್ನು ಸೂಚಿಸುತ್ತದೆ; ತಯಾರಿಸಿರುವ ಲೋಹವು ಅ೦ದಿನ ಕಾಲದ ಆರ್ಥಿಕ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ.
ಹೀಗೆ ಹಲವು ಬಗೆಯಲ್ಲಿ ನಮ್ಮ ಎದುರಿಗೆ ಅದ್ಭುತ ಲೋಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಈ ಪಯಣ ಅತ್ಯ೦ತ ರೋಚಕ. ತನ್ನಲ್ಲಿರುವ ನಾಣ್ಯಗಳ ಬಗೆಗೆ ಓರ್ವ ಸ೦ಗ್ರಹಕಾರ ಎಷ್ಟು ಹೆಚ್ಚು ತಿಳಿದುಕೊ೦ಡಿರುತ್ತಾನೋ, ಅಷ್ಟು ಹೆಚ್ಚು ಆ ನಾಣ್ಯವು ಆತನಿಗೂ, ಅದರಿ೦ದಾಗಿ ಇತರ ಆಸಕ್ತರಿಗೂ ಅಮೂಲ್ಯದ್ದಾಗಿರುತ್ತದೆ. ಇಲ್ಲಿ ಪರಿಚಯಿಸಿರುವ ಅ೦ತಹ ಅದ್ಭುತ ನಾಣ್ಯಗಳು ದ.ಕ.ಜಿಲ್ಲೆಯ ಪ್ರಖ್ಯಾತ ನಾಣ್ಯ ಸ೦ಗ್ರಹಕಾರರಾದ ನೆರಿಯ ರಾಜಗೋಪಾಲ ಹೆಬ್ಬಾರರ ಅಮೂಲ್ಯ ಸ೦ಗ್ರಹವಾಗಿದೆ. ಪ್ರಾಚೀನ ಯುಗಕ್ಕೆ ಸೇರಿದ ಅತಿ ಅಪರೂಪದ ನಾಣ್ಯಗಳು ಹೆಬ್ಬಾರರ ಸ೦ಗ್ರಹದ ವಿಶೇಷತೆ. ಇಲ್ಲಿರುವುದು ಆ ಅದ್ಭುತ ಲೋಕದ ಒ೦ದು ಕಿರು ಪರಿಚಯ ಅಷ್ಟೇ.
ಫೇರೋಗಳ ನಾಡಾದ ಇಜಿಪ್ಟ್ ಇತರ ಎಲ್ಲಾ ನಾಗರಿಕತೆಗಳಿಗಿ೦ತ ಹಲವು ಬಗೆಗಳಲ್ಲಿ ಮು೦ದುವರೆದಿದ್ದರೂ, ಆ ಕಾಲದಲ್ಲಿ ಚಿನ್ನ ಹಾಗೂ ಬೆಳ್ಳಿ ಹೇರಳವಾಗಿ ಉಪಯೋಗವಾಗುತ್ತಿದ್ದರೂ, ನಾಣ್ಯಗಳ ಬಳಕೆಯ ಬಗ್ಗೆ ಮಾತ್ರ ಅವರು ಯೋಚಿಸಿಯೆ ಇರಲಿಲ್ಲವೆ೦ದರೆ ಅಚ್ಚರಿಯಾಗದೆ? ಹಾಗಾದರೆ ಮೊತ್ತಮೊದಲಿಗೆ ನಾಣ್ಯಗಳ ಬಳಕೆ ಎಲ್ಲಿ ಪ್ರಾರ೦ಭವಾಯಿತು ಎ೦ಬ ಪ್ರಶ್ನೆ ಹುಟ್ಟುತ್ತದೆ. ಮೊತ್ತಮೊದಲ ನಾಣ್ಯಗಳ ಬಳಕೆ ಚೀನಾ ಹಾಗೂ ಲಿಡಿಯಾ ದೇಶದಲ್ಲಿ ಸುಮಾರು ಕ್ರಿ.ಪೂ ೭೦೦ ರ ಹೊತ್ತಿಗೆ ಪ್ರಾರ೦ಭವಾಯಿತೆ೦ದು ತಿಳಿದು ಬರುತ್ತದೆ.
ಹಿ೦ದಿನ ಕಾಲದಲ್ಲಿ ಚೀನಾ ದೇಶದಲ್ಲಿ ಕತ್ತಿಯ ಉಪಯೋಗ ಬಹಳವಾಗಿತ್ತು. ಅವರು ಅದನ್ನು ದಿನಬಳಕೆಯ ಉಪಕರಣವಾಗಿಯೂ , ಶಸ್ತ್ರಾಸ್ತ್ರವಾಗಿಯೂ ಉಪಯೋಗಿಸುತ್ತಿದ್ದರು. ಆದುದರಿ೦ದ ಕತ್ತಿಯು ಅಲ್ಲಿಯ ಜನರ ವ್ಯಾಪರದ ಅವಿಭಾಜ್ಯ ಅ೦ಗವಾಗಿತ್ತು. ಅದನ್ನು ತಮಗೆ ಬೇಕಾದ ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಕತ್ತಿಗಳನ್ನು ದಾರದಲ್ಲಿ ಸುರಿದು ಸೊ೦ಟದ ಸುತ್ತ ತೂಗು ಹಾಕಿಕೊಳ್ಳುತ್ತಿದ್ದರು. ದಾರದಲ್ಲಿ ಸುರಿಯಲು ಅನುಕೂಲವಾಗುವ೦ತೆ ಕತ್ತಿಯ ಹಿಡಿಯು ಉರುಟಾದ ರಿ೦ಗ್ ನ೦ತಿರುತ್ತಿತ್ತು. ಹೆಚ್ಚು ಹೆಚ್ಚು ಕತ್ತಿಗಳನ್ನು ಜೊತೆಗೆ ಕೊ೦ಡೊಯ್ಯುವುದು ಅಸಾಧ್ಯವಾದಾಗ ಸ್ವಾಭಾವಿಕವಾಗಿಯೇ ಕತ್ತಿಯ ಸಣ್ಣ ನಮೂನೆಗಳು ಚಲಾವಣೆಗೆ ಬ೦ದವು. ಅದನ್ನು ಚೀನೀಯರು "ಟಾವೋ" (ನೈಫ್ ಕಾಯಿನ್) ಎ೦ದು ಕರೆದರು. ಕ೦ಚು ಹಾಗೂ ತಾಮ್ರದಿ೦ದ ತಯಾರಿಸಲಾಗುತ್ತಿದ್ದ ಇವನ್ನು ನಾಣ್ಯಗಳ೦ತೆ ಬಳಸಲಾಗುತ್ತಿತ್ತು. ಈ ನಾಣ್ಯಗಳ ಮೇಲಿರುವ ಚಿಹ್ನೆಗಳಿ೦ದ ಇದು ಸುಮಾರು ಕ್ರಿ.ಪೂ.೧೦೦೦ ದಲ್ಲೇ ಪ್ರಾರ೦ಭವಾಯಿತೆ೦ದು ನ೦ಬುತ್ತಾರೆ. ಶತಮಾನಗಳು ಉರುಳಿದ೦ತೆ ಕತ್ತಿಯ ಅಲಗು ಚಿಕ್ಕದಾಗುತ್ತಾ ಬ೦ದಿತು. ಕತ್ತಿಯ೦ತೆ ಕಾಣಿಸುತ್ತಿದ್ದ ನಾಣ್ಯವು ಬೀಗದ ಕೈ ಯ೦ತೆ ಕಾಣಿಸಲು ತೊಡಗಿತು. ಕಾಲಕ್ರಮೇಣ ಕತ್ತಿಯ ಅಲಗು ಮಾಯವಾಗಿ ಅದರ ಉರುಟಾದ ಹಿಡಿ ಮಾತ್ರ ಉಳಿಯಿತು. ಈ ನಾಣ್ಯಗಳ ಮಧ್ಯೆ ಚೌಕವಾದ ರ೦ಧ್ರವಿದೆ. ಈ ತರಹದ ನಾಣ್ಯಗಳು ಚೀನಾದಲ್ಲಿ ಕನ್ ಫ್ಯೂಷಿಯಸ್ ನ ಕಾಲದಲ್ಲಿ ಮೊತ್ತಮೊದಲ ಬಾರಿಗೆ ಚಲಾವಣೆಗೆ ಬ೦ದಿತು. ಸುಮಾರು ಕ್ರಿ.ಪೂ.೩ನೇ ಶತಮಾನದಲ್ಲಿ ಅ೦ದರೆ ಚೀನಾದ ಮಹಾಗೋಡೆ ಕಟ್ಟುವ ಕಾಲಕ್ಕೆ ಇದು ಬಹಳವಾಗಿ ಬಳಕೆಯಲ್ಲಿತ್ತು. ಈ ನಾಣ್ಯವು ಭಾರತದ "ಕಾಸು"ವನ್ನು ಬಹಳವಾಗಿ ಹೋಲುತ್ತಿದ್ದುದರಿ೦ದ ಇ೦ಗ್ಲಿಷರು ಇದನ್ನು "ಕ್ಯಾಷ್" ಎ೦ದು ಕರೆದರು. ಇದೇ "ಕ್ಯಾಷ್"ಎ೦ಬ ಶಬ್ಧವನ್ನೇ ನಾವು ಈಗಲೂ "ಹಣ" ಎ೦ಬ ಅರ್ಥದಲ್ಲಿ ಉಪಯೋಗಿಸುತ್ತಿದ್ದೇವೆ. ಈ "ಕ್ಯಾಷ್" ಎ೦ಬ ನಾಣ್ಯಗಳು ಚಲಾವಣೆಗೆ ಬ೦ದ ಅನ೦ತರ ೧೯೧೯ರ ವರೆಗೂ. ಅ೦ದರೆ ಸುಮಾರು ಎರಡೂವರೆ ಸಾವಿರ ವರ್ಷಗಳವರೆಗೂ ಯಾವುದೇ ಬದಲಾವಣೆ ಕಾಣಲಿಲ್ಲವೆ೦ಬುದು ಅತ್ಯ೦ತ ಸೋಜಿಗದ ಸ೦ಗತಿ.
ಚೀನಾ ದೇಶದಲ್ಲಿದ್ದ ಇನ್ನೊ೦ದು ಪ್ರಾಮುಖ್ಯವಾದ ವ್ಯಾಪಾರ ಬಟ್ಟೆಯದಾಗಿತ್ತು. ಕತ್ತಿಯ ಸಣ್ಣ ನಮೂನೆಗಳ೦ತೆಯೇ ಬಟ್ಟೆಯ ವ್ಯಾಪಾರಕ್ಕಾಗಿ "ಶರ್ಟ್" ನ ಆಕಾರದ ಸಣ್ಣ ನಮೂನೆಗಳನ್ನೂ ತಯಾರಿಸಲಾಯಿತು. ಇವನ್ನು ಕೊಟ್ಟು ಬಟ್ಟೆಗಳನ್ನು ಖರೀದಿಸಬಹುದಾಗಿತ್ತು. ಈ ನಾಣ್ಯಗಳನ್ನು "ಪು" ಎ೦ದು ಚೀನೀಯರು ಕರೆದರು. ಕ೦ಚಿನಿ೦ದ ಅಥವಾ ತಾಮ್ರದಿ೦ದ ತಯಾರಿಸಲಾಗುತ್ತಿದ್ದ ಈ ನಾಣ್ಯಗಳು ಬೇರೆ ಬೇರೆ ಬೆಲೆಗಳನ್ನು ಹೊ೦ದಿರುತ್ತಿದ್ದವು. ಈ ನಾಣ್ಯಗಳೂ ಕ್ರಿ.ಪೂ.೭ ನೆಯ ಶತಮಾನದಲ್ಲಿ ಚಲಾವಣೆಗೆ ಬ೦ದವು. ಚೀನಾದಲ್ಲಿನ ನಾಣ್ಯಗಳು ಯಾವ ವಸ್ತುವಿನ ಬೆಲೆಯನ್ನು ಪ್ರತಿನಿಧಿಸುತ್ತವೆಯೋ ಅದೇ ವಸ್ತುವಿನ ಆಕಾರವನ್ನೂ ಹೊ೦ದಿರುವುದು ಬಹಳ ಕೌತುಕ.
ವಸ್ತುವಿನಿಮಯ ಪದ್ದತಿಯಿ೦ದ ಹಿಡಿದು ನಾಣ್ಯಗಳು ಪ್ರಾರ೦ಭವಾಗುವ ತನಕದ ಪಯಣ ನಮ್ಮೆದುರಿಗೆ ಒ೦ದು ಮಾಯಾಲೋಕವನ್ನೇ ಸೃಷ್ಟಿಸುತ್ತದೆ. ಪ್ರತಿಯೊ೦ದು ನಾಣ್ಯ ಅಥವಾ ನಾಣ್ಯಗಳ೦ತೆ ಬಳಕೆಯಾಗುತ್ತಿದ್ದ ಹತ್ತು ಹಲವು ವಸ್ತುಗಳು ಆಶ್ಚರ್ಯಕರವಾದ ಇತಿಹಾಸವನ್ನೇ ತಮ್ಮಲ್ಲಿ ತು೦ಬಿಕೊ೦ಡಿದೆ. ಈ ಅರಿವು ಮೂಡಿದಾಗ ಮಾತ್ರ ಆ ಎಲ್ಲಾ ವಸ್ತುಗಳು ನಮ್ಮ ಪಾಲಿಗೆ ಅಮೂಲ್ಯ ಆಸ್ತಿಯಾಗುತ್ತದೆ.
ಅನು ಪಾವ೦ಜೆ.
ವರ್ಷಾಚರಣೆ
ಸ೦ಪಾದಕರಿಗೆ,
ಈಕನಸು ತನ್ನ ಮೊದಲ ಹುಟ್ಟುಹಬ್ಬದ ಹೊಸ್ತಿಲಲ್ಲಿ ಇದೆ ಎ೦ದು ಕೇಳಿ ಖುಷಿಯಾಗುತ್ತಿದೆ.
ತು೦ಬಾ ಚೆನ್ನಾಗಿ ಬರ್ತಿದೆ...ತಮ್ಮ ಶ್ರಮಕ್ಕಾಗಿ ತಲೆ ಬಾಗುತ್ತೇನೆ...
ಅನು ಪಾವ೦ಜೆ.
ವರ್ಷಾಚರಣೆ
ಸರಳವಾದ ಶೈಲಿಯಲ್ಲಿ ಮನಮುಟ್ಟುವಂತೆ ಬರೆಯುವ ವಿವೇಕ ಶಾನುಭಾಗ ಅವರ ಕಥೆಗಳನ್ನು ಓದಿಯೇ ಆಸ್ವಾದಿಸಬೇಕು. ಇಲ್ಲಿಯ ಹೆಚ್ಚಿನ ಕತೆಗಳಲ್ಲಿ ಉತ್ತರ ಕನ್ನಡದ ಪಾತ್ರ ಚಿತ್ರಣಗಳಿವೆ. ಕೆ.ವಿ. ಸುಬ್ಬಣ್ಣ ಅವರ ನೆನಪಿನ `ಮೊದಲ ಓದು ಪುಸ್ತಕ ಮಾಲಿಕೆಯಲ್ಲಿ ಹೊರ ಬಂದಿರುವ ವಿವೇಕರ ಆಯ್ದ ಕಥೆಗಳ ಸಂಗ್ರಹಯೋಗ್ಯ ಕೃತಿ ಇದು. ಕಂತು ನೀಳ್ಗತೆ ಸೇರಿದಂತೆ ಏಳು ಕಥೆಗಳಿರುವ ಈ ಕೃತಿಯ ಇತರ ಕಥೆಗಳು ಲಂಗರು, ಅಂತ:ಪಟ, ಹುಲಿ ಸವಾರಿ, ಸಶೇಷ, ಮತ್ತೊಬ್ಬನ ಸಂಸಾರ ಮತ್ತು ಶರವಣ ಸರ್ವಿಸಸ್. ಲಂಗರು ಕಥೆಯಲ್ಲಿ ಮಚವೆಯ ಪ್ರಾಮುಖ್ಯತೆ ಕಡಿಮೆಯಾದಂತೆ ರಘುವೀರನ ಜೀವನವೂ ಹದಗೆಡುವಾಗ ಊರಿನವರ ದೃಷ್ಟಿಯಲ್ಲಿ ಭೋಳೇ ಸ್ವಭಾವದವನು ಅನಿಸಿಕೊಳ್ಳಬೇಕಾಗುತ್ತದೆ.
ಆದರೆ ಆತ ಮುಗ್ಧ, ಎಲ್ಲರಿಂದಲೂ ಪಕ್ಕನೆ ಮೋಸಕ್ಕೆ ಒಳಗಾಗುವವ ಮತ್ತು ಸಂಬಂಧಗಳಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸದ ಉದಾರ ಮನಸ್ಸಿನವ. ಹಾಗಾಗಿಯೇ ಅವನು ಅಣ್ಣ ಅನಂತನಿಂದಲೂ ಮೋಸಕ್ಕೊಳಗಾಗಿ ಆಸ್ತಿಯ ಪಾಲಾಗಿ ಮಚವೆಯನ್ನು ಪಡೆದವನು. ಇದು ಅವನ ಮಡದಿಯ ಆರೋಪವೂ ಹೌದು. ಓದಿನಲ್ಲಿ ಅನಂತನಿಗಿಂತಲು ಜಾಣ. ಆದರೆ ವ್ಯವಹಾರದಲ್ಲಿ ಅಣ್ಣನ ಸೂತ್ರವಿರುವಾಗ ಅದರ ಒಳಗುಟ್ಟುಗಳನ್ನು ಅರಿಯುವಲ್ಲಿ ವಿಫಲನಾದವನು. ಮಚವೆಯ ಏರಿಳಿತದಲ್ಲಿ ಅಲೌಕಿಕದ ಬೆನ್ನು ಹಿಡಿದವನಿಗೆ ಶರಾವತಿ ನದಿಗೆ ಸೇತುವೆಯಾದಾಗ ಮಚವೆಯ ಪ್ರಾಮುಖ್ಯತೆ ಹೋಗಿ, ಒಂದು ಅಸ್ಥಿಪಂಜರವಾಗುವ ಸ್ಥಿತಿಯಂತೆ, ಮಡದಿಯ ಆಸ್ತಿಯ ಬೇಡಿಕೆಯಲ್ಲಿ ಮೌನವಾಗುತ್ತಾನೆ.
ಲಂಗರು ಕಥೆಯ ರಘುವೀರನಂತೆ ಅಂತ:ಪಟ ಕಥೆಯ ಮಹಾದೇವ. ಆತ ಕೆಲಸ ಮಾಡುತ್ತಿದ್ದ ಬಟ್ಟೆಯ ಮಿಲ್ಲು ಮುಚ್ಚಿದ ಬಳಿಕ ದರ್ಜೆಯ ಕೆಲಸಕ್ಕೆ ಬರುತ್ತಾನೆ. ಅಲ್ಲಿ ರಾಮಣ್ಣನಿಂದ ಎಲ್ಲವನ್ನೂ ಕಲಿತುಕೊಳ್ಳುತ್ತಾನಾದರೂ ಅಳತೆ ತೆಗೆಯುವ ಕೆಲಸ ಮಾತ್ರ ಕಲಿಯಲು ಅವಕಾಶವಿರುವುದಿಲ್ಲ. ಮದುವೆಯ ಅನಂತರ ಜೀವನ ಸುಸೂತ್ರವಾಗಿ ನಡೆದು, ಮಾವನ ಆಸ್ತಿಗೂ ಭಾದ್ಯಸ್ಥನಾಗುತ್ತಾನೆ. ಹೊಸ ಬದುಕಿಗೆ ಹೊಂದಿಕೊಳ್ಳುವಾಗ ರಾಗಿಣಿಯ ಪರಿಚಯವಾಗುತ್ತದೆ. ಗಂಡನಿಂದ ದೂರವಿರುವ ಅವಳು ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಾಳೆ. ಅವಳ ಸಾನಿಧ್ಯ, ತನ್ನ ಸಂಬಂಧ ನೂನ್ಯತೆಯ ಹೊಳೆಯದಿದ್ದ ಮನಸಿನಲ್ಲಿ ಹೊಸ ಪುಳಕ ಹುಟ್ಟಿಸುತ್ತದೆ. ಈ ಸಂಬಂಧ ಕಾಮಾತಿರೇಕ ತಲುಪಿ, ಈ ದೇಹಗಳ ಮೂಲಕ ಹೊಸ ದಾರಿಯನ್ನು ಹುಡುಕುತ್ತಿದ್ದೇನೆ ಅನಿಸುತ್ತದೆ. ಆದರೆ ಅವಳ ನಿಧರ್ಾರವನ್ನು ಕೇಳಿ ಅಸಾಧ್ಯದ ನಿರ್ಣಯ ನೀಡುತ್ತಾನೆ.
`ಕಂತು ಗ್ರಹಣಕ್ಕೆ ಸಂಬಂಧಿಸಿದ ಒಂದು ಅತ್ಯುತ್ತಮ ಕಥೆ.
ಮಾವಿನೂರಿನಲ್ಲಿ ಪೂರ್ಣ ಗ್ರಹಣ ಗೋಚರಿಸುವುದೆನ್ನುವಾಗ ದೇಶ ವಿದೇಶದಿಂದ ಜನರು ಅಲ್ಲಿಗೆ ಬರುತ್ತಾರೆ. ಸದಾನಂದ ಮಾಸ್ತರರಿಗೆ ಗ್ರಹಣದ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಊರವರಿಗೆ ತಿಳಿಸುವ ಧ್ಯೇಯವಿದ್ದರೂ, ಎಷ್ಟೇ ಸರಳವಾಗಿ ವಿವರಿಸ ಹೋದರೂ ಮತ್ತಷ್ಟು ಕಗ್ಗಂಟಾಗಿ ಆ ವಿವರಗಳು ತಮ್ಮನ್ನೇ ಸುತ್ತಿಕೊಂಡಂತಾಗುತ್ತದೆ. ಗ್ರಹಣದ ಸಂಗತಿ ನಡೆಯುತ್ತಿರುವಾಗಲೇ ಆ ಊರು ಮುಳುಗಡೆಯಾಗುವಾಗ ದೇವಸ್ಥಾನದ ಜವಾಬ್ದಾರಿಯಿರುವ ಗಂಗಾಧರ ನಿಧಿಯನ್ನು ಹುಡುಕಿ ಲಾಭಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಮಾತ್ರವಲ್ಲ ಊರಿನ ಜನರೆಲ್ಲಾ ತಮ್ಮ ತಮ್ಮ ಮುಳುಗಡೆಯಾಗಲಿರುವ ಮನೆಗಳನ್ನು ಗ್ರಹಣ ವೀಕ್ಷಿಸಲು ಬರುವವರಿಗೆ ಬಾಡಿಗೆಗೆ ನೀಡಿ ಹಣ ಗಳಿಸುವ ತಂತ್ರ ಹೂಡುತ್ತಾರೆ. ಜಗನ್ನಾಥ ಮತ್ತು ಆತನ ಅಣ್ಣನ ಮಗ ಪಾಂಡುರಂಗ ಕೂಡ ಇದರಿಂದ ಹೊರತಾಗಿರುವುದಿಲ್ಲ. ಊರಿನವರಿಗೆ ಹಣದ ಅಮಲು ಹತ್ತಿಸಿ ಅವರ ಮನ ಓಲೈಸುವ ಸರಕಾರ ಆ ಜನರ ಮುಗ್ಧತೆಯ ಪ್ರತಿಬಿಂಬದಂತೆ ಕಾಣುತ್ತದೆ.
ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ಚಿತ್ರಿಸುವ ಕಥೆ `ಹುಲಿ ಸವಾರಿ. ಮಾನವೀಯ ಮೌಲ್ಯಗಳೆಲ್ಲಾ ವ್ಯವಹಾರಿಕವಾಗಿ ಮನುಷ್ಯನ ಸ್ಥಿರತೆಯನ್ನು ವಿಭಿನ್ನವಾಗಿ ತಿಳಿಸುತ್ತದೆ. ಆರ್ಥಿಕ ಉದಾರೀಕರಣದ ಇನ್ನೊಂದು ಉತ್ತಮ ಕಥೆ `ಸಶೇಷ. ನಂಬಿಯಾರ್ ಮಧ್ಯಮವರ್ಗದಿಂದ ಬಂದರೂ ಓದಿ ಒಳ್ಳೆಯ ಕೆಲಸ ಹಿಡಿದು ದುಬೈಗೆ ತೆರಳಿ ಡಾಲರ್ಗಳಲ್ಲಿ ಸಂಬಳ ಎಣಿಸುತ್ತಾನೆ. ಆದರೆ ಆತ ಒಂದು ಸಾಲದ ಸಮಸ್ಯೆಯಲ್ಲಿ ಬೀಳುತ್ತಾನೆ. ಆ ಸಾಲ ಎಷ್ಟೆಂದರೆ `ಹನ್ನೆರಡು ರೂಪಾಯಿಗಳು. ತನ್ನ ಅಜ್ಜನಿಂದ ಬಂದ ಖರ್ಚುವೆಚ್ಚಗಳನ್ನು ಬರೆದಿಡುವ ಅಭ್ಯಾಸ, ಈ ಸಮಸ್ಯೆಯನ್ನು ಎತ್ತಿ ಹಿಡಿಯುತ್ತದೆ. ಈ ಅಭ್ಯಾಸ ನಾವು ಗಳಿಕೆಯ ಮಿತಿಯಲ್ಲಿದ್ದೇವೆ ಮತ್ತು ವ್ಯಯಿಸಿದ್ದು ಸಕಾರಣಕ್ಕಾಗಿ ಅನ್ನುವ ಉದ್ದೇಶದಿಂದಾಗಿ ಮಾತ್ರ ಅನ್ನುವುದಕ್ಕಾಗಿ. ಕೊನೆಗೂ ಗೆಳೆಯನ ಮಾತಿನಂತೆ ಖರ್ಚು ಬರೆಯುವುದನ್ನು ನಿಲ್ಲಿಸಿದ ನಂಬಿಯಾರ್ ದಂಪತಿಗಳಿಗೆ ಏನೋ ನಿಯಮ ಮುರಿದ ಅಳುಕು ಇರುತ್ತದೆ.
ಒಂದೇ ಹೆಸರಿನ ಇಬ್ಬರು ಹುಡುಗರ ತಂದೆಯ ಹೆಸರೂ ಒಂದೇ ಮತ್ತು ಅವರಿಬ್ಬರ ಇನಿಶಿಯಲ್ ಕೂಡ ಒಂದೇ! ಆ ಹುಡುಗರನ್ನು ಗುರುತಿಸಬಹುದಾದ ಒಂದೇ ಒಂದು ವ್ಯತ್ಯಾಸವೆಂದರೆ ಒಬ್ಬ ಆಟರ್್ಸ ಮತ್ತೊಬ್ಬ ಸಾಯನ್ಸ್ ವಿದ್ಯಾರ್ಥಿ. ಸೆಲ್ಸ್ ಮನ್ ಜಾನಕೀರಾಮನಿಗೆ ಎರಡು ಸಂಸಾರವಿದೆಯೆನ್ನುವುದು ಊರಿನ ತುಂಬಾ ಬಿರುಗಾಳಿಯಂತೆ ಹರಡಿದ ಸುದ್ದಿ. ಕೊನೆಗೂ ಓದುಗನಿಗೆ ನಿರ್ಧರಿಸಲು ಬಿಟ್ಟಂತೆ `ಮತ್ತೊಬ್ಬನ ಸಂಸಾರ ಕಥೆ ಕೊನೆಗೊಳ್ಳುವುದರಿಂದ `ಹೌದೋ? ಅಲ್ಲವೋ? ಅನ್ನುವುದು ಕಾಡುತ್ತಲೇ ಇರುತ್ತದೆ.
ಈ ಪುಸ್ತಕದ ಇನ್ನೊಂದು ಅತ್ಯುತ್ತಮ ಕಥೆ `ಶರವಣ ಸರ್ವಿಸಸ್ ವೇಗದ ಬದುಕಿನಲ್ಲಿ ಎಲ್ಲವನ್ನೂ ಮನೆಯ ಬಾಗಿಲಿನವರೆಗೆ ತಲುಪಿಸುವುದನ್ನು ನಿರೀಕ್ಷಿಸುವ ಜನರ ದಿನನಿತ್ಯದ ಜಂಜಾಟವನ್ನು ಬಿಚ್ಚಿಡುತ್ತದೆ ಈ ಕಥೆ. ವ್ಯವಹಾರದ ಬೆನ್ನು ಹಿಡಿದ ಮೇಲೆ ಶರವಣನಿಗೆ ಸಂಸಾರದಿಂದ ದೂರವಾಗುವ ಸನ್ನಿವೇಶದಲ್ಲಿ ಎಲ್ಲವನ್ನೂ ಕಳೆದುಕೊಂಡ ಭಾವನೆ ಎದುರಾಗುತ್ತದೆ. ಆದರೂ ವ್ಯವಹಾರವನ್ನು ಬಿಡಲಾರದ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಈ ಕಥೆಯ ಪ್ಲಸ್ ಪಾಯಿಂಟ್ ಶರವಣನ ಫ್ಲ್ಯಾಷ್ಬ್ಯಾಕ್ ಆತನ ಮಾತಿನಿಂದಲೇ ಹೇಳಿಸುವ ತಂತ್ರ. ಇದು ಹೊಸತನವೂ ಹೌದು ಮತ್ತು ಕಥೆಗೆ ಮೆರುಗನ್ನೂ ನೀಡಿರುವುದು ಸತ್ಯ. ಹಾಗಾಗಿ ಈ ಕಥೆ ಬಹಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.
ಈ ಕೃತಿಯ ಏಳು ಕಥೆಗಳೂ ಕನ್ನಡ ಸಾಹಿತ್ಯವನ್ನು ಪ್ರವೇಶಿಸುವವರಿಗೆ ಅಪೂರ್ವ ಕೊಡುಗೆಯೆಂದರೆ ತಪ್ಪಾಗಲಾರದು. ಇಲ್ಲಿಯ ಕಥೆಗಳನ್ನು ಓದಿಯೇ ಆನಂದಿಸಬೇಕು.
ಅನು ಬೆಳ್ಳೆ
ವರ್ಷಾಚರಣೆ
ಬಸ್ಸು ನಿಲ್ದಾಣದಲ್ಲಿ ನಿಂತವನ ಕಾಲು ಸೋತಿದೆ. ಅರ್ಧ ಗಂಟೆಯಿಂದ ಬಸ್ಸೇ ಇಲ್ಲ. ಕೂರಲೂ ಕಲ್ಲು ಬೆಂಚಿಲ್ಲ. ನೋಡುವ ದೃಶ್ಯಗಳನ್ನೇ ಎಷ್ಟೆಂದು ನೋಡುವುದು ಅನಿಸಿಬಿಟ್ಟಿದೆ. ಸಂಚಾರ ವ್ಯವಸ್ಥೆ ಬಗ್ಗೆಯೇ ಹಿಡಿಶಾಪ ಹಾಕುತ್ತಾ ನಿಂತಿದ್ದಾನೆ. ಮುಖದಲ್ಲಿ ಅಸಹನೆ ಮಡುಗಟ್ಟಿದೆ. ಯಾವುದೇ ಕ್ಷಣದಲ್ಲಿ ಸಿಡಿದು ಬಿಡಬಹುದು. ಅದಕ್ಕೆ ಈ ಕ್ಷಣ, ಇನ್ನೆರಡು ಕ್ಷಣದ ನಂತರದ ಕ್ಷಣ ಎಂಬ ಭೇದವಿಲ್ಲ.
ಕೈಯಲ್ಲಿ ಹಿಡಿದ ಚಿಕ್ಕ ಕೈ ಚೀಲವೂ ಭಾರ ಎನಿಸುತ್ತಿದೆ. ಅದರೊಳಗೇನೂ ಇಲ್ಲ, ಹೆಚ್ಚೆಂದರೆ ಅಕ್ಕನ ಮಗುವಿಗೊಂದು ಬಿಸ್ಕತ್ ಪೊಟ್ಟಣ, ಅವನ ತಮ್ಮನಿಗೊಂದು ಚಿಕ್ಕ ಲಾಲಿಪಪ್, ಬಂದಾಗಲೆಲ್ಲಾ ಸದಾ ಕಾಡುವ ಪಕ್ಕದ ಮನೆಯ ನಿಮ್ಮಿಗೊಂದು ಪುಟ್ಟ ಬಣ್ಣದ ಪೆನ್ಸಿಲ್ ಬಾಕ್ಸ್, ಅಕ್ಕನಿಗೆ ಅಮ್ಮ ಕಳಿಸಿಕೊಟ್ಟ ಜೀವಲಸಿನ ಕಾಯಿ...ಇಷ್ಟೇಯೇ ?
ಎರಡು ದಿನ ನಂತರ ಕೊಯ್ಯೋಣ ಎಂದು ಬಿಟ್ಟಿದ್ದ ಬಾಳೆಗೊನೆ ಮೊನ್ನೆ ಗಾಳಿಗೆ ಉರುಳಿತು. "ಹೋಗೋದ್ ಹೋಗ್ತೀಯಾ, ನಾಲ್ಕು ಚಿಪ್ಪು ಹಣ್ಣು ತಗೊಂಡು ಹೋಗ್’ ಎಂದು ಅಮ್ಮ ಕಳಿಸಿದ್ದಾಳೆ. ಒಟ್ಟೂ ಪುಟ್ಟ ಕೈ ಚೀಲದಲ್ಲಿ ಎಷ್ಟೊಂದು ಮಂದಿ !
ಹೇಳಿದ ಟೈಮ್‌ಗೆ ನೀನು ಬರೋದೆ ಇಲ್ಲ ಎಂಬ ದೂರು ಸದಾ ಇವನ ಮೇಲೆ. ಅದಕ್ಕಾಗಿ ಇವತ್ತು ಸ್ವಲ್ಪ ಬೇಗನೇ ನಿಲ್ದಾಣಕ್ಕೆ ಬಂದ. ಆದರೂ ಬಸ್ಸು ಬರಲಿಲ್ಲವೇ? ಮಧ್ಯಾಹ್ನ ೩ ರ ನಂತರ ನಿಲ್ದಾಣದಲ್ಲಿ ಇದೇ ತಕರಾರು. ಬರುವ ಬಸ್ಸು ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಬಂದ ಬಸ್ಸೂ ಕೂಡಲೇ ಹೊರಡುವುದಿಲ್ಲ. ಮನಸ್ಸಿನೊಳಗೆ ಬೇಸರವೋ ಬೇಸರ. ಅವಳ ಆರೋಪ ಇವತ್ತೂ ನಿಜವಾಯಿತಲ್ಲ ಎಂಬ ಆತಂಕ ಈತನದ್ದು. ಅಂತೂ ಬಸ್ಸು ಬಂತು. ಯಾಕೋ ಚಾಲಕನಿಗೆ ನಿಲ್ದಾಣದಲ್ಲಿದ್ದ ರಾಶಿ ಜನ ಕಂಡು ಅಸಹನೆ ಉಕ್ಕಿ ಹರಿಯಿತು. ಅದಕ್ಕೇ ಬಸ್ ತನ್ನ ಫ್ಲಾಟ್‌ಫಾರ್ಮಿಗಿಂತ ಒಂದಷ್ಟು ದೂರ ಹೋಗಿ ನಿಂತಿತು. ರಾಶಿಯ ನಡುವೆ ತೂರಿಕೊಂಡ. ನಂಬರ್ರೇ ನೋಡಲಿಲ್ಲ !
**************
ಅತ್ತಿಂದಿತ್ತ ಶತಪಥ ಹಾಕುತ್ತಿರುವ ಈಕೆಯ ಸಮಸ್ಯೆ ಏನೆಂದು ತಿಳಿಯುತ್ತಿಲ್ಲ. ಅರ್ಧ ಗಂಟೆಯಿಂದ ಆ ಫ್ಲಾಟ್‌ಫಾರ್ಮ್‌ನಲ್ಲಿ ನಾಲ್ಕೈದು ಬಸ್ ಬಂದಿರಬಹುದು. ೧೮, ೧೫, ೩, ೬ ಹೀಗೆ. ಯಾವುದರ ಕಡೆಗೂ ತಲೆ ಎತ್ತಿ ಸಹ ನೋಡಲಿಲ್ಲ. ಪಕ್ಕದಲ್ಲೇ ಇದ್ದ ಟಿಸಿ ಬಳಿ ಹೋಗಿ ತಮ್ಮೂರಿನ ಬಸ್ ನಂಬ್ರವನ್ನೂ ಕೇಳಲಿಲ್ಲ. ಸುಮ್ಮನೆ ಮುಖ ಗಂಟಿಕ್ಕಿಕೊಂಡು ಚಡಪಡಿಸುತ್ತಿದ್ದಾಳೆ. ಮುಂಗಾರು ಮಳೆ ಸುರಿಯುವ ಕ್ಷಣದಲ್ಲೂ ಅವಳ ಮುಖ ಕೆಂಪಗೆ. ಇಷ್ಟೊತ್ತಿಗಾಗಲೇ ಅವನು ಬರಬೇಕಿತ್ತು.
ಈಗ ಬಂದ ಬಸ್ ಕಂಡು ಕೊಂಚ ಉಲ್ಲಸಿತಳಾದಳು. ಇಳಿಯುವವರನ್ನೇ ಸ್ಕ್ಯಾನ್ ಮಾಡತೊಡಗಿದಳು. ಹೆಗಲ ಮೇಲೆ ಪಾಟೀಚೀಲ ಹಾಕಿಕೊಂಡ ಜೀವ ನೋಡಿ "ಬಾರೇ, ಎಷ್ಟ್ಹೊತ್ತು ? ಮಳೆ ಶುರು ಆಗೋದರೊಳಗೆ ಮನೆ ಸೇರ‍್ಕೊಳ್ಳೋಣ’ ಎಂದವಳೇ ಕೈ ಹಿಡಿದು ನಡೆಯತೊಡಗಿದಳು. ಅಷ್ಟರಲ್ಲೇ ಮುಗಿಲು ಕಟ್ಟಿ ಮಳೆ ಹನಿಯಾಗಿ ಉದುರಿಯೇ ಬಿಡಬೇಕೇ ?
***********
ಇವರಿಗೆ ಬಿಡಿ ಯಾವ ಆತಂಕವೂ ಇಲ್ಲ. ಬಂದವನೇ ಬಸ್ಸನ್ನು ಲಂಗರು ಹಾಕಿದ. ಒಮ್ಮೆ ದೀರ್ಘ ನಿಟ್ಟುಸಿರುಬಿಟ್ಟು ಕೆಳಗಿಳಿದು, ಸಹೋದ್ಯೋಗಿಗಳ ಕುಶಲ ಸಮಾಚಾರ ವಿಚಾರಿಸಿ ಮತ್ತೆ ಏರಿ ಕುಳಿತ. ಇಂಜಿನ್ ಸ್ಟಾರ್ಟ್ ಮಾಡಲೇಕೋ ಮನಸ್ಸಿಲ್ಲ. ಆಗಲೇ ಜನರೆಲ್ಲಾ ಹತ್ತಿ ಹತ್ತು ನಿಮಿಷಗಳಾಗಿವೆ. ಎಲ್ಲರ ಮುಖದಲ್ಲೂ ಧಾವಂತ. ಆಗತಾನೇ ಬಂದ ಮತ್ತೊಬ್ಬ ಎಲ್ಲರೂ ಇಳಿಯುವ ಸ್ಥಳವನ್ನು ಕೇಳತೊಡಗಿದ. ಹಣ ನೀಡಿ ಟಿಕೇಟನ್ನೂ ಕೊಟ್ಟ. ಆದರೂ ಬಸ್ಸು ಹೊರಡಲಿಲ್ಲ. ಸಿಟ್ಟು ಬಂದವನೊಬ್ಬ "ಏನಪ್ಪಾ, ಎಷ್ಟೂ ಹೊತ್ತಂತ ನಿಲ್ಲಿಸ್ತೀಯಾ, ಬಸ್ಸಿಗೂ ಬೇಸರವಾಗೋದಿಲ್ವೇ?’ ಎಂದ. ಅದೇ ಹೊತ್ತಿಗೆ ಆರಂಭವಾದ ಉಳಿದವರ ಗುಣುಗುಣು ಆತನ ಮಾತಿಗೆ ಮೊಹರು ಒತ್ತಿದಂತಿತ್ತು. ಡ್ರೈವರ್‌ಗೂ ನಿಜವೆನಿಸಿತು. ಇಂಜಿನ್ ಸ್ಟಾರ್ಟ್ ಆಯಿತು. ಬಸ್ಸು ಮುಂದಕ್ಕೆ ಚಲಿಸಿತು.
****************
ನಿಲ್ದಾಣದೊಳಗಿನ ಹೋಟೆಲ್‌ನೊಳಗೆ ಮಾಣಿಯೊಬ್ಬ ಕುಳಿತಿದ್ದ. ಗಲ್ಲ ಪೆಟ್ಟಿಗೆಯ ಮಹಾಶಯ ಕೊಟ್ಟ ಟಿಕೇಟಿಗೆಲ್ಲಾ ಈತನಿಗೆ ತಿಂಡಿ ಕೊಡುವುದೊಂದೇ ಕೆಲಸ. ದೋಸೆಭಟ್ಟ, ಕಾಫಿಭಟ್ಟ, ತಿಂಡಿ ಭಟ್ಟ, ಪ್ಲೇಟು ತೊಳೆಯುವ ಮಕ್ಕಳೆಲ್ಲರೂ ಇವನೊಬ್ಬನನ್ನು ಸುಧಾರಿಸಿದರೆ ಸಾಕು. ಆದರೆ ಇವನೋ ಊರಿಗೆ ಬಂದವರನ್ನೆಲ್ಲಾ ಸುಧಾರಿಸಬೇಕು. ದೋಸೆ ತಣ್ಣಗಾದದ್ದಕ್ಕೆ ಕಾರಣ ಹೇಳಬೇಕು. ಕಾಫಿ ಸ್ಟ್ರಾಂಗ್ ಆಗಿದ್ದಕ್ಕೆ ವಿವರಣೆ ನೀಡಿ ಸಾಗಹಾಕಬೇಕು. ಎಲ್ಲ ಸದ್ದಿಲ್ಲದೇ ನಡೆಯುವಾಗ ಒಂದು ಅನೌನ್ಸ್‌ಮೆಂಟ್ "ಕಳೆದು ಹೋದ ಇಂಥವರೊಬ್ಬರು ಸಿಕ್ಕಿದ್ದಾರೆ. ಇವರ ಪೈಕಿ ಯಾರಾದರೂ ಇದ್ದರೆ ಕಂಟ್ರೋಲ್‌ರೂಂಗೆ ಬನ್ನಿ’. ಆಗತಾನೇ ಬಿಸಿ ಮಸಾಲೆ ದೋಸೆಗೆ ಆರ‍್ಡರ್‌ಕೊಟ್ಟವ "ಇನ್ನೊಂದು ಹಾಕಿ, ಬರ‍್ತೀನಿ’ ಎಂದವನೇ ಅತ್ತಲೇ ಹೋದ. ಇನ್ನೂ ಬಂದಿಲ್ಲ. ಮಾಣಿಗೆ ದೋಸೆ ಹೇಳಿ ಕಳೆದುಹೋದವರನ್ನು ಹುಡುಕುತ್ತಿದ್ದಾನೆ !
- ಅರವಿಂದ ನಾವಡ
ವರ್ಷಾಚರಣೆ 
ಇಬ್ಬರು ಮಕ್ಕಳು ; ಒಬ್ಬ ಮನೆಯಲ್ಲಿ ಕೂತು ಮಣ್ಣಲ್ಲಿ ಆಡುತ್ತಾನೆ. ತನ್ನ ಮನೆಯ ಹಾಗೆಯೇ ಪುಟ್ಟದಾದ ಇನ್ನೊಂದು ಮನೆ ಹೇಗೆ ಕಟ್ಟಬಹುದು...ಎಂದು ಯೋಚಿಸುತ್ತಾ ತನ್ನನ್ನೇ ಕಳೆದುಕೊಳ್ಳುತ್ತಾ ಭಾವನಾತ್ಮಕ ಪ್ರಪಂಚದೊಳಗೆ ಕಳೆದು ಹೋಗುತ್ತಾನೆ.ಇನ್ನೊಬ್ಬ ಪುಸ್ತಕದಷ್ಟು ದೊಡ್ಡದಿರುವ ಕಂಪ್ಯೂಟರ್ ಎಂಬ ಯಂತ್ರದೊಳಗಿಳಿಯುತ್ತಾನೆ. ಯಾವುದೋ ಆಟ, ಯಾರದೋ ಕಾರ್, ಎಲ್ಲಿಯದೋ ಕಟ್ಟಡ... ಜೊತೆಗೆ ಆತನಿಗೆ ಆಟಿಕೆಯಾಗಿ ಪರಿಚಯವಾದ ಪಿಸ್ತೂಲ್. ಯಾರಿಗೋ ಗುಂಡಿಕ್ಕುತ್ತಾನೆ... ಯಾವುದೋ ಕಟ್ಟಡದೊಳಗೆ ಹೋಗುತ್ತಾನೆ...ಮತ್ಯಾರನ್ನೋ ಕೆಡವಿ ಮುಂದೆ ಸಾಗುತ್ತಾನೆ. ಹೀಗೆ ಮಕ್ಕಳು ತಮ್ಮ ಆಟದ ಸಮಯವನ್ನು ಕಳೆಯುತ್ತಾರೆ.
ನಾವು ಬಸ್ಸಲ್ಲಿ ಕೂತು ನಮ್ಮ ದೇಶದ ಭವಿಷ್ಯದ ಬಗ್ಗೆ ಮಾತಾಡುತ್ತೇವೆ. ಮನೆಯ ಟಿ.ವಿ. ವಾರ್ತೆ ನೋಡಿ ನಮ್ಮ ರಾಜಕಾರಣಿಗಳು, ಆಡಳಿತವರ್ಗದವರು ಏನು ಮಾಡುತ್ತಿದ್ದಾರೆ ಎನ್ನುತ್ತೇವೆ. ಕೊನೆಗೆ ಇವರನ್ನು ಹಿಡಿದು ನೇಣಿಗೇರಿಸಬೇಕೆಂದು ಹೇಳುತ್ತೇವೆ. ಮತ್ತೆಲ್ಲೋ ನಮ್ಮ ಹತ್ತಿರ ಇರುವವರ ಜೊತೆ ಹೆಡ್ಲಿ, ಅಜ್ಮಲ್ ಬಗ್ಗೆ ಗಂಟೆಕಟ್ಟಲೆ ಕೊರೆಯುತ್ತೇವೆ. ಹಾಗೆ ಹೀಗೆ ಅನ್ನೋ ನಮ್ಮದೇ ಆದ ಸಮರ್ಥನೆಯನ್ನು ನೀಡುತ್ತೇವೆ.
ಗೆಳೆಯರೆ ಹೆಡ್ಲಿ, ಅಜ್ಮಲ್ ಅಥವಾ ಇನ್ಯಾರೋ ಯಾರೋ ಒಬ್ಬರ ಮಗನೇ. ನಾವು ಅತ್ಯಂತ ಸಲೀಸಾಗಿ ಗಲ್ಲಿಗೇರಿಸಬೇಕೆಂದು ನ್ಯಾಯ ನೀಡುತ್ತೇವೆ. ಆದರೆ ಇವರ ಹೆತ್ತವರೋ ತನ್ನ ಮಗನೂ ಜೀವನದಲ್ಲಿ ಹೀಗೆ ಆಗಬೇಕೇಂದು ಕನಸು ಖಂಡಿರುತ್ತಾರೆ. ಆದರೆ ಎಲ್ಲೋ ತಪ್ಪಾಗಿ ಬಿಟ್ಟಿರುತ್ತದೆ.ನಮ್ಮ ಮಗು ಮಣ್ಣಲ್ಲಿ ಆಡಿದರೆ ನಮ್ಮ ಪ್ರತಿಷ್ಟೆಗೆ ಕುಂದು...ಮನೆಗೆ ಅವಮಯರ್ಾದೆ. ನನ್ನ ಮಗ ಮಣ್ಣಲ್ಲಿ ಆಡುವುದೇ ಎಂಬ ಪ್ರಶ್ನೆ. ಅದೇ ಮಗು ಯಂತ್ರದ ಮುಂದೆ ಕೂತು ಯಾರನ್ನೋ ಕೊಂದು, ಯಾರನ್ನೋ ದೋಚುವ ಆಟ ಆಡಿದರೆ ನಮ್ಮ ಒಣ ಪ್ರತಿಷ್ಟೆ ಗರಿಗೆದರಿ ನಿಲ್ಕುತ್ತದೆ. ಯಾವುದೋ ಭಾವನೆಗಳಿಲ್ಲದೆ ಒಂದು ಹುಳುವಿಗೆ ಬಿಡಿ, ಮನುಷ್ಯನಿಗೂ ಗೌರವ ಕೊಡಲಾಗದೆ ಕಾರನ್ನು ಏರಿಬಿಡುತ್ತಾನೆ. ಅದೇ ಮಣ್ಣಲ್ಲಿ ತನ್ನದೇ ಯೋಚನೆಯ ಪುಟ್ಟ ಕಟ್ಟದ ಮಗು ಮುದೊಂದು ದಿನ ಜಗತ್ತು ಬೆರಗಾಗುವ ಕಟ್ಟಡವನ್ನು ಕಟ್ಟುವುದು ಹೇಗೆ ಎಂದು ಯೋಚಿಸುತ್ತದೆ.
ಈಗ ಮಗುವಿಗೆ ನಾಮಕರಣ ಆಗುವಾಗಲೇ ಅದು ಡಾಕ್ಟರೋ,ಇಂಜಿನಿಯರೋ ಎಂಬುದನ್ನು ನಿರ್ಧರಿಸಿ ಆಗುತ್ತದೆ. ಹಾಗಿರುವಾಗ ನಮ್ಮ ಮಗು ಯಾವ ಆಟ ಆಡುತ್ತದೆ...ಆ ಆಟ ಮಗುವಿನ ಮನಸ್ಥಿತಿಯನ್ನು ಹೇಗೇ ಬೆಳೆಸಭಹುದು ಎಂದು ಯೋಚಿಸುವುದಕ್ಕೆ ಸಮಯಸಿಕ್ಕಿತ್ತಲ್ಲವೇ? ನಮ್ಮ ಮಗು ಹೀಗೆ ಆಗಬೇಕೆಂದು ಬಯಸುವ ನಮಗೆ ಮಗು ಏನು ಮಾಡುತ್ತಿದೆ ಎಂದು ನೋಡುವಷ್ಟಾದರೂ ಪುರುಸೊತ್ತಿರಬಹುದಲ್ಲವೇ...? ಮಗುವಿನ ಮುಗ್ಧ ನಗು ಮಾಸದಿರಲಿ ಎಂಬ ನಂಬಿಕೆಯಿಂದ.
ಧೀಷ್ಮಾ ಡಿ ಶೆಟ್ಟಿ
ವರ್ಷಾಚರಣೆ
60 ಮೈಲಿಗಳನ್ನು ಮೀರಿ ಬೆಳೆಯುವಾಸೆ,ಆದರೂ ಅಕ್ಕಪಕ್ಕದವರು ರೆಕ್ಕೆ ಹಿಡಿದು ಜಗ್ಗುತ್ತಾರೆ, ಅದರ ಮಧ್ಯೆಯೂ ಮೇಲೇರಿದ ಜೋನಥನ್ ಎಂಬ ಕಡಲಹಕ್ಕಿ ಎಲ್ಲವೂ ಸಾಧ್ಯ ಎಂದು ತೋರಿಸುತ್ತದೆ .ನಾನು ನನ್ನ ಕನಸ ಮೇಲೆ ಕೂತಾಗಿದೆ ಮತ್ತೆ ಮುಂದಿನದು -ಇದು ರಿಚರ್ಡ್ ಬ್ಯಾಕ್ನ "ಜೋನಾಥನ್ ಲಿವಿಂಗ್ಸ್ಟನ್ ಸೀಗಲ್" ಎಂಬ ಕಾದಂಬರಿಯ ಕಥಾಹಂದರ.
ನನಗೂ ಜೋನಾಥನ್ನಂತಾಗುವಾಸೆ. ಎಲ್ಲೋ ಓದಿದ ತುಣುಕಿನ ಬೆನ್ನತ್ತಿ ಇಡೀ ಕಾದಂಬರಿ ಓದುವ ತರಾತುರಿಯಲ್ಲಿ ಅದನ್ನು ಗೆಳತಿಯ ಕೈಯಲ್ಲಿ ಕಂಡು ನನಗೂ ಕೊಡು ನಾನೂ 60 ಮೈಲಿಗಳಾಚೆ ದಾಟಿಹೋಗುತ್ತೇನೆ ಎಂದೆ. ಆದರೆ ಪುಟ್ಟ ಕಡಲಹಕ್ಕಿಯ ಬಳಿ ಇದ್ದಂತೆಯೇ ನನ್ನ ಬಳಿಯೂ ಇದ್ದ ಗೆಳೆಯರ ದಂಡು,' ಏ ಏನದು, ಆ ಕಾದಂಬರಿ ನಮ್ಮ ಪಠ್ಯದಲ್ಲಿ ಇದೆಯೇ' ಎಂಬ ಮೊದಲ ಪ್ರಶ್ನೆ. ಇಲ್ಲ ಅಂದಾಗ 'ಅದು ನನಗೆ ಬೇಡ' ಎಂಬ ಕೊನೆಯ ವರಸೆ, ಇಷ್ಟೆ.
ಇದು ಕೇವಲ ನನ್ನ ಕ್ಲಾಸಿನ ಕತೆಯಲ್ಲ. ಶಾಲಾ ಕಾಲೇಜಿನಲ್ಲಿ ಎದುರಾಗುವ ಪ್ರತಿಯೊಬ್ಬರದೂ. ಜೂನ್ ತಿಂಗಳಲ್ಲಿ ಆರಂಭವಾದ ನಮ್ಮ ತರಗತಿಯೊಂದಿಗೆ ಸಿಲೆಬಸ್ನ ಒಡನಾಟ. ಆ ದಿನದಿಂದ ಸಿಲೆಬಸ್ ರಾಜ್ಯಭಾರ ಶುರು ಹಚ್ಕೊಳತ್ತೆ. ಜೊತೆಗೆ ಅದನ್ನು ನಿಗದಿತ ದಿನದೊಳಗೆ ಹೇಗಾದರೂ ಮುಗಿಸಬೇಕೆಂಬ ಮೇಷ್ಟ್ರ ಕನಸು.
ವಿದ್ಯಾರ್ಥಿ, ಮೇಷ್ಟ್ರು ಅಂದ ಮೇಲೆ ಪಠ್ಯದ ಕಡೆ ಗಮನ ಇರುವುದು ಸಹಜ, ಆದರೆ ಅದುವೇ ಸರ್ವಸ್ವವಲ್ಲ. ಒಬ್ಬ ಕತೆಗಾರನ ಒಂದು ಕತೆಯಿಂದ ಆತನ ದೃಷ್ಟಿಕೋನ ಅರ್ಥ ಆಗೋಕೆ ಸಾಧ್ಯವಿಲ್ಲ. ಆದರೆ ನಮ್ಮ, ಪಠ್ಯಕ್ರಮದಲ್ಲಿರೋದು ಒಬ್ಬ ಕತೆಗಾರನ ಒಂದು ಕತೆ. ಇಂಥ ಸಂದರ್ಭದಲ್ಲಿ ಆತನದೇ ಬೇರೆ ಕೃತಿಗಳನ್ನು ಓದುವಂತೆ ಪ್ರೇರೇಪಿಸುವುದು ಮೇಷ್ಟ್ರ ಕರ್ತವ್ಯ.
ಶಿಕ್ಷಣ ವ್ಯವಸ್ಥಿತವಾಗಿ ಸಾಗಲು ಪಠ್ಯಾನುಕ್ರಮ ಆದರೆ ಮಕ್ಕಳ ಬುದ್ಧಿ ಬೆಳೆಯಲು ಬೇಕಿರುವುದು ಇತರ ಜ್ಞಾನ. ಅಂದಮೇಲೆ ಪಠ್ಯಕ್ಕೆ ಮಾತ್ರ ಜೋತುಬೀಳುವುದು ಎಷ್ಟು ಸರಿ. ಅದರಲ್ಲೂ ಇಂದು ಪಠ್ಯವನ್ನು ಓದೋದು ಕೇವಲ ಅಂಕದ ದೃಷ್ಟಿಯಿಂದ,ಆತ್ಮತೃಪ್ತಿಗಾಗಿ ಅಲ್ಲ. ಓದಿದ ಪುಸ್ತಕವನ್ನು ಚರ್ಚಿಸಿದರೆ, ವಿಚಾರ ವಿನಿಮಯ ಮಾಡಿದರೆ ಒಳಿತಾಗಬಹುದೇನೋ? ಜೋನಾಥನ್ನ ಕನಸಿನಂತೆಯೇ ನಮ್ಮ ಯೋಚನೆಯೂ ಸಾಗಲಿ...
ಚೈತನ್ಯಾ ಆರ್.
ವರ್ಷಾಚರಣೆ
ನನ್ನೊಳಗಿನ
ಕೆನ್ನಾಲಿಗೆಗೆ
ಸಿಲುಕಿ
ಹೊತ್ತಿ ಉರಿವ
ಪತ೦ಗ
- ಅನು ಪಾವಂಜೆ
ವರ್ಷಾಚರಣೆ
ನನ್ನೊಳಗೆ ನಾ
ಇಣುಕಿದಾಗ
ಕ೦ಡದ್ದು
ನಿನ್ನದೇ
ಪ್ರತಿಬಿ೦ಬದ
ಮುಗುಳ್ನಗೆ
ನನ್ನ
ಜೀವನಾಡಿಗೆ
ಉಸಿರು
ಹರಿಸುವ
ಬಗೆ
ಅನು ಪಾವ೦ಜೆ .
ವರ್ಷಾಚರಣೆ
ವರುಷ ತುಂಬಿದ ಹರುಷದಲ್ಲಿದೆ ನಮ್ಮ ಈ ಕನಸು
ಪರುಷವಾಗಲಿ ಸಹೃದಯಗದು ಕಾಣಿಸಲಿ ನನಸು
ಇರುಸು-ಮುರುಸಿಲ್ಲದೆಯೆ ತೋರಲಿ ತನ್ನ ಸಿರಿಚೆಲುವ
ಹರಸುತಿರಲಾ ದೇವನಲ್ಲಿಂದಲೇ ಈ ಮಗುವ
- ಎಚ್. ಆನಂದರಾಮ ಶಾಸ್ತ್ರೀ
ವರ್ಷಾಚರಣೆ
ಈ ಕನಸು ಅಂತಿಂತ ಕನಸಲ್ಲ .ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಲವಾರು ಪತ್ರಿಕೆಗಳಿಗೆ ಒಂದು ಸವಾಲೊಡ್ಡ ಬಹುದಾದ ಒಂದೇ ವರುಷದಲ್ಲಿ ಓದುಗರ ಹೃದಯ ಗೆದ್ದ ಈ ಕನಸು.ನಾನು ಸುಮಾರು ಆರು ತಿಂಗಳಿನಿಂದ ಈ ಪತ್ರಿಕೆಯನ್ನು ಓದುತ್ತ ಬಂದಿದ್ದೇನೆ.ಬಹಳ ಉತ್ತಮವಾದ ಲೇಖನಗಳನ್ನು ,ಸುಂದರವಾಗಿ ಯಾವುದೇ ವ್ಯಾಕರಣ ತಪ್ಪುಗಳಿಲ್ಲದೆ ಬರೆಯುವುದು ಈ ಕನಸಿನ ಸಂಪಾದಕರ ಬಹುದೊಡ್ಡ ಸಾಧನೆ. ಈ ಕನಸಿನಲ್ಲಿ ಪ್ರಕಟವಾದ ಹಲವಾರು ಅಂಕಣಗಳನ್ನು ಓದಿದ್ದೇನೆ , ಮುಖಪುಟದಲ್ಲಿ ಪ್ರಕಟವಾಗುವ ಭಕ್ತಿಸಿಂಚನ ,ಪ ಗೋ ಪತ್ರಗಳು ,ನನ್ನನ್ನು ಆಕರ್ಶಿಸಿದೆ.ಯಾವುದೇ ರೀತಿಯಾದ ಪೂರ್ವಾಗ್ರಹ ಪೀಡಿತ ,ಯಾರದ್ದೇ ಪರವಾಗಿ ಈ ಕನಸು ಕೆಲಸ ಮಾಡುವುದಿಲ್ಲ.ಇದು ಖಂಡಿತ ಒಳ್ಳೆಯ ಪತ್ರಿಕೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಇಂತಹ ಒಂದು ಪತ್ರಿಕೆಯನ್ನು ಕನ್ನಡಿಗರೆಲ್ಲರೂ ಓದಿ ಪ್ರೋತ್ಸಾಹಿಸಬೇಕು ,ಈ ಕನಸಿನ ಕನಸನ್ನು ನನಸು ಮಾಡಬೇಕು . ವರುಷ ತುಂಬಿದ ಹರುಷಕ್ಕೆ ನಾನು ಸಂಪಾದಕರಿಗೆ ಶುಭಾಶಯಗಳು.
ಕುಮಾರ್ ಕುಂಟಿಕಾನ ಮಠ
ಫಾರ್ನ್ಬರ, ಬ್ರಿಟನ್
ವರ್ಷಾಚರಣೆ
ಈ ಕನಸು ಅಂತರ್ಜಾಲ ಪತ್ರಿಕೆಗೆ ಒಂದು ವರ್ಷ ತುಂಬಿದ್ದಕ್ಕೆ ಸಂತಸವಾಗುತ್ತಿದೆ. ಪತ್ರಿಕೆಯನ್ನು ಆರಂಭದಿಂದ ಹಿಡಿಡು ಇಂದಿನವರೆಗೂ ಸೂಕ್ಷ್ಮವಾಗಿ ನೋಡುತ್ತಿದ್ದೇನೆ. ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ಅಭಿನಂದನೆಗಳು. ಮಂಗಳೂರಿನಿಂದ ಆರಂಭವಾದ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆ ಇದು. ಆರಂಭದ ದಿನಗಳಲ್ಲಿ ಈ ಕನಸಿನಲ್ಲಿ ಬರುತ್ತಿದ್ದ ಜೋಗಿ, ಜಯಂತ ಕಾಯ್ಕಿಣಿ ಈಗ ಮರೆಯಾಗಿದ್ದಾರೆ, ಏಕೆ? ಅವರ ಬರಹಗಳನ್ನು ಮತ್ತೆ ಮತ್ತೆ ಓದು ಆನಂದಿಸುವ ಅವಕಾಶವನ್ನು ಮಾಡಿಕೊಡಿ.
ಅದಲ್ಲದೆ, ಪತ್ರಿಕೆಯ ಆರಂಭದಿಂದಲೂ ಸಂಪಾದಕರ ಜೊತೆ ಪತ್ರಿಕೆಯ ಹೂರಣದ ಬಗ್ಗೆ ಸಾಕಷ್ಟು ತಕರಾರುಗಳನ್ನು ಮಾಡುತ್ತಲೇ ಬಂದಿದ್ದೇನೆ. ಆದರೆ ಸಂಪಾದಕರು ಅದ್ಯಾವುದರ ಬಗ್ಗೆಯೂ ಅಷ್ಟಾಗಿ ತಲೆಕೆಡಿಸಿಕೊಂಡಂತಿಲ್ಲ!
ಪತ್ರಿಕೆಯ ವಿನ್ಯಾಸ ಬದಲಾಗಬೇಕು, ಸುದ್ದಿಯ ಪ್ರಕಟಣೆಯ ಜೊತೆಜೊತೆಗೆ ಸುದ್ದಿ ವಿಶ್ಲೇಷಣೆ, ಕಥೆ, ಕವನ, ವೈಚಾರಿಕ ಲೇಖನಗಳನ್ನು ಹೆಚ್ಚೆಚ್ಚು ಪ್ರಕಟಿಸಬೇಕು. ಲೇಖನಗಳು ಹೇಗಿರಬೇಕಪ್ಪಾ ಅಂದರೆ, ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕು ಅನಿಸುವಂತಿರಬೇಕು.
ಪುಸ್ತಕ ವಿಮರ್ಶೆಗಳು ಇನ್ನೂ ಹೆಚ್ಚು ಬರಲಿ. ಬಹಳ ದಿನಗಳಿಂದ ಈ ಕನಸಿನಲ್ಲೇ ಬಂದಿರುವ ಸುದ್ದಿಯಂತೆ ಪತ್ರಿಕೆಯ ವಿನ್ಯಾಸ ಬೇಗ ಬದಲಾಗಲಿ. ಸುದ್ದಿಯನ್ನು ಕೊಡುವ ಶೈಲಿ ಸ್ವಲ್ಪ ಬದಲಾದರೆ ಉತ್ತಮ.
ಇದೆಲ್ಲದರ ಜೊತೆಗೆ, ಎಂದಿನಂತೆ, ಹೊಸ ಬರಹಗಾರರಿಗೆ ಅವಕಾಶ ಕೊಡುವ ಕಾಯಕವನ್ನು ಈ ಕನಸು ಮುನ್ನಡೆಸಿಕೊಂಡು ಹೋಗಲಿ.
-ವಿಜಯ್ ಜೋಶಿ
ವರ್ಷಾಚರಣೆ
ಕನ್ನಡ ನಾಡಿನಿಂದ ಸಾವಿರಾರು ಮೈಲು ದೂರದ ಕೊಲ್ಲಿ ಪ್ರದೇಶದ ಕತಾರ್ ದೇಶದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಪರಿಸರದ ಸುದ್ದಿಗಳ ಶ್ರೀ.ಜ್ಯೋತಿಪ್ರಕಾಶ್ ಪುಣಚ ಅವರ ತಾಜಾ ವರದಿಗಳನ್ನು ಓದಿ ಆನಂದಿಸಲು ಅವಕಾಶ ಮಾಡಿಕೊಟ್ಟ ಹಾಗೂ ನಾಡಿನ ತಾಜಾ ಕನ್ನಡ ವರದಿಗಳ ಜೊತೆಗೆ ಕನ್ನಡ ಭಾವಗೀತೆಗಳನ್ನು ಕೇಳಿ ವಿದೇಶದಲ್ಲಿ ಸವಿಯುವ ಯೋಗ ಕಲ್ಪಿಸಿಕೊಟ್ಟ ಕನ್ನಡ ಇ -ಪತ್ರಿಕೆ ಈ -ಕನಸು ತಂಡಕ್ಕೆ ವಂದನೆಗಳು. ಗೃಹ ಮಂತ್ರಿಗಳು ಗ್ರಹ ಮಂತ್ರಿಗಳಾಗಿ ಮಾಡಿ , ರಾಂಕ್ ಅನ್ನು ರ್ಯಾಂಕ್ ಎಂದು ಪರಿವರ್ತಿಸಿ ಕನ್ನಡ ಭಾಷೆಯ ವಿನೀತತೆಯ ಸತತ ಮಾನಭಂಗವಾಗುತಿದ್ದರೂ ,ಇದರ ಬಗ್ಗೆ ತಲೆ ಕೆಡಿಸಿಕೊಳ್ಳದವು ನಾಡಿನ 'ಕನ್ನಡ ಗಣಕ ಪರಿಷತ್' , 'ಕನ್ನಡ ಅಭಿವೃದ್ದಿ ಪ್ರಾಧಿಕಾರ'ಗಳು. ಇಂತಹ ಪರಿಸರದಲ್ಲಿ ಕನ್ನಡದಲ್ಲಿ ಉತ್ತಮ ಲೇಖನಗಳನ್ನು ನಾಡಿನ ಜನತೆಗೆ ಅರ್ಪಿಸುತ್ತಿರುವ ಕೂಸು 'ಈ ಕನಸು' ಸದಾ ಮುನ್ನಡೆಯಲಿ ಎನ್ನುವ ಹಾರೈಕೆ ನನ್ನದು.
ಪ.ರಾಮಚಂದ್ರ
ರಾಸ್ ಲಫ್ಫಾನ್ , ಕತಾರ್
ರಾಜ್ಯ - ರಾಷ್ಟ್ರ
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಪ್ರಗತಿ ಉದ್ಯೋಗಮೇಳದ ಉದ್ಘಾಟನಾ ಸಮಾರಂಭದ ವಿಡಿಯೋ ವರದಿ ಈ ಕನಸು ಓದುಗರಿಗಾಗಿ.
ವಿಡಿಯೋ ವರದಿ: ವಿಜಯ್ ಬೆಳುವಾಯಿ
ರಾಜ್ಯ - ರಾಷ್ಟ್ರ
ಇಡೀ ವಿದ್ಯಾರ್ಥಿ ಸಮೂಹಕ್ಕೆ ಸಹಕಾರವಾಗುವಂತೆ ಮುಡಬಿದಿರೆಯ ಆಳ್ವಾಸ್ ಮಹಾವಿದ್ಯಾಲಯದಲ್ಲಿ ಪ್ಲೇಸ್ ಮೆಂಟ್ ಸೆಲ್ ಒಂದನ್ನು ಸದ್ಯದಲ್ಲೇ ತೆರೆಯಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಘೋಷಿಸಿದ್ದಾರೆ. ಪ್ರಗತಿ ಕ್ಯಾಂಪಸ್ ಸೆಲೆಕ್ಟ್ ಕಾರ್ಯಕ್ರಮದಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಉದ್ಯೋಗಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ವಿಭಿನ್ನವಾಗಿ ಆಯೋಜಿಸಲಾಗುವುದು ಎಂದರು.




ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಶನ್ ವತಿಯಿಂದ ಮೂಡಬಿದಿರೆಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ ಆಯೋಜಿಸಲಾಗಿದ್ದ `ಪ್ರಗತಿ' ಉದ್ಯೋಗ ಮೇಳವನ್ನು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು. ಕಲೆ,ಸಂಸ್ಕೃತಿ ,ಕ್ರೀಡೆ,ಸಾಹಿತ್ಯದೊಂದಿಗೆ ಶಿಕ್ಷಣಕ್ಕೆ ಮಹತ್ವನೀಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆ ಇದೀಗ ಉದ್ಯೋಗಮೇಳವನ್ನಾಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಶ್ಲಾಘನಾರ್ಹ ಎಂದು ಅಮರನಾಥ ಶೆಟ್ಟಿ ಹೇಳಿದರು.
ಅಂತಿಮ ಪದವಿ ಓದುತ್ತಿರುವ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಭಾಗ್ಯ ಈ ಉದ್ಯೋಗ ಮೇಳದ ಮೂಲಕ ಪ್ರಾಪ್ತವಾಗುತ್ತಿರುವುದು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ ಎಂದವರು ಹೇಳಿದರು. ಇನ್ಫೋಸಿಸ್, ವಿಪ್ರೋ, ಟೆಸ್ಕೋ, ಕೊಟಕ್, ಐ.ಡಿ.ಬಿ.ಐ ಬ್ಯಾಂಕ್, ಡೊಕೋಮೋ, ಗೋಲ್ಡ್ ಫಿಂಚ್,ಇಂಡಿಯಾ ಇನ್ಫೋಲೈನ್, ಎಂಪೆಸಿಸ್, ರಿಲೆಯಾನ್ಸ್ ಕಮ್ಯೂನಿಕೇಷನ್, ಮಾರುತಿ ಮಾಂಡೋವಿ ಮೋಟಾರ್ಸ್, ಅವಿವಾ ಲೈಫ್ ಇನ್ಶ್ಯೂರೆನ್ಸ್ ಇವೇ ಮೊದಲಾದ ಪ್ರತಿಷ್ಠಿತ 30 ಸಂಸ್ಥೆಗಳು `ಪ್ರಗತಿ' ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು ಒಟ್ಟಾರೆ 3154 ವಿವಿಧ ಹುದ್ದೆಗಳಿಗೆ ಈ ಉದ್ಯೋಗ ಮೇಳದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಉದ್ಘಾಟನಾ ಸಮಾರಂಭದಲ್ಲಿ ಕ್ಯಾಂಪಸ್ ಸೆಲೆಕ್ಟ್ ನ ಸಂಯೋಜಕ ಮಹೇಶ್ ಶೇಖ್, ಆಳ್ವಾಸ್ ಎಜುಕೇಷನ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಸ್ವಾಗತಿಸಿದರು. ಉಪನ್ಯಾಸಕ ಉಮೇಶ್ ವಂದಿಸಿದರು. ಉಪನ್ಯಾಸಕಿ ದೀಪಾ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯ - ರಾಷ್ಟ್ರ
ಮುಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಶನ್ ಆಶ್ರಯದಲ್ಲಿರು ಆಳ್ವಾಸ್ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಫೆ.26 ಮತ್ತು 27ರಂದು ನಡೆಯಲಿದೆ. ಪ್ರತಿಷ್ಠಿತ 32ಕಂಪೆನಿಗಳು 3ಸಾವಿರ ಉದ್ಯೋಗಾವಕಾಶಗಳನ್ನು ಉದ್ಯೋಗಾಕಾಂಕ್ಷಿಗಳಿಗಾಗಿ ತೆರೆದಿಡಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪದವಿ ವಿದ್ಯಾರ್ಥಿಗಳು ಹಾಗೂ ರಾಜ್ಯದ ಪದವಿ ಪೂರೈಸಿದ ವಿದ್ಯಾರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಎರಡು ದಿನಗಳ ಕಾಲ ಉದ್ಯೋಗಮೇಳ ನಡೆಯಲಿದ್ದು ಆಸಕ್ತರು ವಿವಿಧ ಕಂಪೆನಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕ್ರಿಕೆಟ್ ತಾರೆ ಕನ್ನಡಿಗ ಅನಿಲ್ ಕುಂಬ್ಳೆ ಭೇಟಿಮಾಡಿ ಸಮಾಲೋಚನೆ ಕೈಗೊಂಡರು.
ಪ್ರಾದೇಶಿಕ ಸುದ್ದಿ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಗ್ರಾಮಪಂಚಾಯಿತಿಗಳಿಗೆ ತಲಾ 15ಲಕ್ಷ ರೂ.ವೆಚ್ಚದಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಿಸಲು ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ ನಿರ್ಮಾಣ ಮಾಡಲು 1.50ಲಕ್ಷದಂತೆ ಒಟ್ಟು 16.50ಲಕ್ಷ ರೂ.ಗಳಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ 22ನೇ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಯಿತಲ್ಲದೆ, ರಾಜ್ಯದ 103 ಗ್ರಾಮಪಂಚಾಯಿತಿಗಳಿಗೆ ಒಟ್ಟು 17 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ತಾಡಿ,ಸರಪಾಡಿ,ಕರಿಯಂಗಳ, ಪಜೀರು,ಅಲಿಕೆ- ಬೆಳ್ತಂಗಡಿಯ ಆಳದಂಗಡಿ,ಅರಸಿನಮಕ್ಕಿ,ಚಾರ್ಮಾಡಿ,ತಣ್ಣೀರುಪಂತ,ಹೊಸಂಗಡಿ. ಪುತ್ತೂರಿನ ಕನಿಯೂರು,ಬೆಟ್ಟಂಪಾಡಿ,ಬನ್ನೂರು,ಇಟ್ಟೂರು, ಆರ್ಯಾಪು. ಸುಳ್ಯದ ನೆಲ್ಲೂರು ಕೆಮ್ಮಾಜೆ,ಎಡಮಂಗಲ,ಅರಂತೋಡು ಆಲೆಟ್ಟಿ, ಅಜ್ಜಾವರ. ಮಂಗಳೂರಿನ ಕುಪ್ಪೆಪದವು,ಪಡುಮಾರ್ನಾಡು,ಪಾವೂರು,ಗುರುಪುರದಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು,ಕರ್ನಾಟಕ ಭೂಸೇನಾ ನಿಗಮದ ಮುಖಾಂತರ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ವ್ಯತ್ಯಯ,50:54 ಅನುದಾನ,ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ,ಅಕ್ರಮ ಮರಳುಗಾರಿಕೆ,ಕೊರಗರಿಗೆ ರಾಜ್ಯ ಸರ್ಕಾರ ನೀಡಿರುವ 5ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ತಲುಪಿಸುವ ಬಗ್ಗೆ ಸವಿವರ ಚರ್ಚೆಯಾಗಿ, ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ವಿತರಣೆಗೆ ಸಂಬಂಧಿಸಿದಂತೆ ಹೊಸ ನೀತಿ ಅಳವಡಿಸಲು ಮತ್ತು ಅಕ್ರಮ ಮರಳುಗಾರಿಕೆ ತಡೆಗೆ ಜಿಲ್ಲಾ ಪಂಚಾಯಿತಿ ನಿರ್ಣಯ ಅಂಗೀಕರಿಸಿತು.
ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಯಲ್ಲಿ ಗ್ರಾಮೀಣರಿಗೆ ಅನ್ಯಾಯವಾಗುತ್ತಿದೆ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, 389 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಿಂದ 509 ಮೆಗಾವ್ಯಾಟ್ ಗಳಷ್ಟು ಹೆಚ್ಚು ವಿದ್ಯುತ್ ಪಡೆದು ಜನರಿಗೆ ವಿದ್ಯುತ್ ವಿತರಿಸಲು ಕ್ರಮಕೈಗೊಳ್ಳ ಲಾಗಿದೆ ಎಂದು ಉತ್ತರಿಸಿದರು.
ಜಿಲ್ಲೆಯಲ್ಲಿರುವ ಜಲ ವಿದ್ಯುತ್ ಯೋಜನೆ ಗಳಿಂದ 90 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದ್ದು, ಜೂನ್ ನಿಂದ ಅಕ್ಟೋಬರ್ ವರೆಗೆ ಮಾತ್ರ ಈ ಯೋಜನೆ ಗಳಿಂದ ವಿದ್ಯುತ್ ಪೂರೈಕೆ ಯಾಗುತ್ತದೆ ಎಂದರು. ಗ್ರಾಮೀಣ ಸಂಪರ್ಕ ಯೋಜನೆಯಡಿ 2008-09 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರಿನ ರಸ್ತೆ, ಸೇತುವೆ ಮತ್ತು ಕಿರುಸೇತುವೆ ಕಾಮಗಾರಿಗೆ 235 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಸ್ಥಾಯಿಸಮಿತಿ ಸದಸ್ಯರಾದ ವೆಂಕಟದಂಬೇಕೋಡಿ, ರಾಜಶ್ರೀ ಹೆಗಡೆ, ಸದಾನಂದ ಮಲ್ಲಿ ಉಪಸ್ಥಿತರಿದ್ದರು.
ಪ್ರಾದೇಶಿಕ ಸುದ್ದಿ
ಮಂಗಳೂರು: ಬಸ್ಸುಗಳಲ್ಲಿ ಚಾಲಕರು - ನಿರ್ವಾಹಕರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಮತ್ತು ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಅವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಪೊನ್ನು ರಾಜ್ ಎಚ್ಚರಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸಾರಿಗೆ ಅದಾಲತ್ ನಲ್ಲಿ ಮಾತನಾಡಿದ ಅವರು ಈ ಎಚ್ಚರಿಕೆಯನ್ನು ನೀಡಿದ್ದು, ಬಸ್ಸು ಸಿಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಸೂಚನೆ ನೀಡಿದರು. ಮೋಬೈಲ್ ಬಳಕೆ, ಅಥವಾ ಇತರ ಪ್ರಯಾಣಿಕರಿಗೆ ತೊಂದರೆ ಆಗುವ ಯಾವುದೇ ದೂರುಗಳನ್ನು ಫೊಟೊ ದಾಖಲೆ ಸಮೇತ ಸಾರ್ವಜನಿಕರು ದೂರು ನೀಡಿದರೆ ಅಂತವರ ಮೇಲೆ ಕಟ್ಟು ನಿಟ್ಟಿನ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಖಾಸಗಿ ಬಸ್ ಚಾಲಕರು ಹಾಗೂ ನಿರ್ವಾಹಕರು ಕಡ್ಡಾಯವಾಗಿ ಗುರುತುಪತ್ರ ಧರಿಸಿ ವಾಹನ ಚಲಾಯಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಪರವಾನಿಗೆ ಪಡೆದ ಬಸ್ಸುಗಳು ತಮ್ಮ ಟ್ರಿಪ್ ಗಳನ್ನು ಕಡಿತಗೊಳಿಸದೆ ಪರವಾನಿಗೆ ಪಡೆದ ಕೊನೆಯ ನಿಲ್ದಾಣದವರೆಗೆ ಸಂಚರಿಸಿ ಕೊನೆಯ ನಿಲ್ದಾಣದಲ್ಲಿ ಲಾಗ್ ಪುಸ್ತಕವನ್ನು ಇರಿಸಿ ಅದರಲ್ಲಿ ಸಹಿ ಮಾಡುವಂತೆ ಸೂಚನೆ ನೀಡಿದರು.ಜೊತೆಗೆ ಬಸ್ಸನ್ನೇರುವ ಸಂದರ್ಭಗಳಲ್ಲಿ ಟಯರ್ ಗಳನ್ನು ಅಡ್ಡ ಹಾಕುವ ಬಗ್ಗೆ ಪರಿಶೀಲಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಖಾಸಗಿ ಬಸ್ ವ್ಯವಸ್ಥೆಗೆ ಪರ್ಯಾಯವಾಗಿ ಕೆಎಸ್ಆರ್ ಟಿಸಿ ಬಸ್ಸುಗಳನ್ನು ನಗರದಲ್ಲಿ ಓಡಿಸುವ ಬಗ್ಗೆ ಸಭೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಯಿತು. ಖಾಸಗಿ ಬಸ್ಸುಗಳ ಬಗ್ಗೆ ಪರ ವಿರೋಧ ಬಂದಿರುವ 200 ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಪ್ರಥಮ ಹಂತವಾಗಿ ಮಂಗಳೂರಿನಿಂದ ಉಡುಪಿಗೆ 6 ಕೆಎಸ್ ಆರ್ ಟಿ ಸಿ ಬಸ್ಸುಗಳಿಗೆ ಪರ್ಮಿಟ್ ನೀಡುವುದಾಗಿ ಹೇಳಿದರು.
ಜಿಲ್ಲಾ ಎಸ್ಪಿ ಡಾ. ಸುಬ್ರಹ್ಮಣ್ಯ್ಯೇಶ್ವರ ರಾವ್,ಆರ್ ಟಿ ಓ ಪುರುಷೋತ್ತಮ, ಕೆ.ಎಸ್.ಆರ್ ಟಿ.ಸಿ ವಿಭಾಗಿಯ ನಿಯಂತ್ರಣಾಧಿಕಾರಿ ಕರುಂಬಯ್ಯ, ನಗರ ಡಿವೈಎಸ್ಪಿ ಬಿ.ಜೆ. ಭಂಡಾರಿ, ಬಸ್ಸು ಮಾಲಿಕ ಮತ್ತು ಶ್ರಮಿಕ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯ - ರಾಷ್ಟ್ರ
ಗ್ವಾಲಿಯರ್ : ಸಿಡಿಲ ಮರಿ ಇದೀಗ ಮತ್ತೊಂದು ಕ್ಯಾತಿಗೆ ಪಾತ್ರರಾಗಿದ್ದಾರೆ. ತನ್ಮೂಲಕ ದೇಶದ ಕ್ರಿಕೆಟ್ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಂತಾಗಿದೆ. ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ರನ್ ಗಳ ಸುರಿಮಳೆಗೈದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಏಕದಿನ ಪಂದ್ಯಗಳ ಪೈಕಿ ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿ ದಾಖಲೆ ಮೆರೆದರು.ಜೊತೆಗೆ ದ್ವಿಶತಕದ ಸಾಧನೆಮೆರೆದರು. ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ಆಫ್ರಿಕಾದ ಬೌಲರುಗಳ ಚೆಂಡುಗಳನ್ನು ಅನಾಯಾಸವಾಗಿ ಸದೆಬಡಿವಲ್ಲಿ ಯಶಸ್ವಿಯಾದರು. ಐವತ್ತು ಓವರುಗಳಲ್ಲಿ ಭಾರತ ಕೇವಲ ಎರಡು ವಿಕೆಟ್ ಕಳೆದುಕೊಂಡು 401 ರನ್ ಬೃಹತ್ ಮೊತ್ತ ದಾಖಲಿಸಿದೆ.
ಮಂಗಳೂರು,ಫೆ.24:ದೇಶದ ಸಾಮಾನ್ಯ ಪ್ರಜೆಗೂ ವೃದ್ಧಾಪ್ಯದ ದಿನಗಳಲ್ಲಿ ಪಿಂಚಣಿ ನೀಡುವಂತಹ ವಿನೂತನ ಯೋಜನೆಯನ್ನು ಭಾರತ ಸರ್ಕಾರ ಹಮ್ಮಿಕೊಂಡಿದ್ದು,ಈ ನೂತನ ಯೋಜನೆಯಡಿ ಮಂಗಳೂರನ್ನು ಪೈಲಟ್ ಪ್ರೊಜೆಕ್ಟ್ ನಡಿ ಸೇರಿಸಲಾಗಿದೆ ಎಂದು ಪ್ರಾಜೆಕ್ಟ್ ನ ಏಡಿಬಿಯ ಸಂವಹನ ಪರಿಣತ ಆಶೀಶ್ ಅಗರ್ ವಾಲ್ ಹೇಳಿದರು.ಇಂದು ಮಂಗಳೂರಿನಲ್ಲಿ ಯೋಜನೆ ಸಂಬಂಧ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಯೋಜನೆಯ ಬಗ್ಗೆ ವಿವರಿಸಿದ ಅವರು, ಈಗಾಗಲೇ ಯೋಜನೆ ಯಡಿ ದೇಶದಾದ್ಯಂತ ಇದುವರೆಗೆ 7.5 ಲಕ್ಷ ಖಾತೆಗಳನ್ನು ತೆರೆ ಯಲಾಗಿದ್ದು, 1000 ಕ್ಕೂ ಹೆಚ್ಚು ಸ್ಥಳಗಳಲ್ಲಿ, 21 ಬ್ಯಾಂಕ್ ಗಳಲ್ಲಿ ಸೌಲಭ್ಯವನ್ನು ಪಡೆಯ ಬಹುದಾಗಿದೆ ಎಂದರು.
ಮಂಗಳೂರಿನ ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್, ಐಎಲ್&ಎಫ್ ಎಸ್ ಸೆಕ್ಯೂರಿಟೀಸ್ ಸರ್ವಿಸಸ್ ಲಿಮಿಟೆಡ್, ಯುಟಿಐ ಫೈನಾನ್ಷಿಯಲ್ ಸೆಂಟರ್, ಸಿಎಎಂಎಸ್, ಎಸ್ ಬಿ ಐ, ಮತ್ತು ಆಕ್ಸಿಸ್ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆಯಬಹುದಾಗಿದ್ದು, ಇದೊಂದು ಜನಸ್ನೇಹಿ ಯೋಜನೆಯಾಗಿದೆ ಎಂದು ವಿವರಿಸಿದರು.ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ ಅವರು, ಹೊಸ ಪಿಂಚಣಿ ವ್ಯವಸ್ಥೆ ಜನಪರ, ಸಾಮಾಜಿಕ ಸುರಕ್ಷಾ ಯೋಜನೆ ಯಾಗಿದ್ದು, ಸಾಮಾನ್ಯ ಜನರು ಯೋಜನೆಯ ಸದ್ಬಳಕೆ ಮಾಡಲು ಕರೆನೀಡಿದರು. ಸರ್ಕಾರ ಖಾಸಗಿ ಕಂಪೆನಿಗಳೊಂದಿಗೆ ಜಂಟಿಯಾಗಿ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಹಮ್ಮಿ ಕೊಳ್ಳುವುದರಿಂದ ಜನ ಸಾಮಾನ್ಯರಿಗೆ ಉಪಕಾರವಾಗಲಿದೆ ಎಂದರು. 2006 ಬಳಿಕ ಸೇವೆಗೆ ಸೇರಿದ ಸರ್ಕಾರಿ ನೌಕರರೂ ಇದರ ಲಾಭವನ್ನು ಪಡೆಯಬಹುದು ಎಂದು ಸಲಹೆ ಮಾಡಿದ ಅವರು, ಕಳೆದ ಎರಡು ದಶಕಗಳಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಾಗಿರುವ ಬದಲಾವಣೆಗಳು ಮತ್ತು ಸರ್ಕಾರದ ಆದ್ಯತಾ ಕ್ಷೇತ್ರಗಳ ಬಗ್ಗೆ ಮಾತನಾಡಿದರು. ಹೊಸ ಪಿಂಚಣಿ ವ್ಯವಸ್ಥೆಯಿಂದ ಸಾಮಾನ್ಯರಿಗೆ ಜೀವನ ಸುರಕ್ಷೆ ಲಭಿಸಲಿದೆ ಎಂದರು.
ಹೊಸ ಪಿಂಚಣಿ ವ್ಯವಸ್ಥೆಯ ಪ್ರಮುಖವಾಗಿ ಎಲ್ಲ ವರ್ಗದ ಜನರಿಗೆ ವೃದ್ಧಾಪ್ಯದಲ್ಲಿ ರಕ್ಷಣೆ ಒದಗಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಭಾರತ ಸರ್ಕಾರದ ವಿತ್ತ ಮಂತ್ರಾಲಯ ವ್ಯವಸ್ಥೆಗೊಳಿಸಿದೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರೂ ಸೇರಿದಂತೆ 18 ರಿಂದ 60 ವರ್ಷದೊಳಗಿನ ನಿವಾಸಿ ಅಥವಾ ಅನಿವಾಸಿ ಭಾರತೀಯರಿಗಾಗಿ ಇದೆ. ಸ್ಟೇಕ್ಹೋ ಕಾರ್ಯಾಗಾರದಲ್ಲಿ ಎಲ್ಲ ಬ್ಯಾಂಕುಗಳ ಪ್ರತಿನಿಧಿಗಳು,ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಷ್ಟ್ರ - ಅಂತಾರಾಷ್ಟ್ರ
ಜೆದ್ದಾ: ಐ.ಎಫ್.ಎಫ್. ನ ಹೆಲ್ತಿ ಲೈಫ್ ಹ್ಯಾಪಿ ಲೈಫ್ ಫುಟ್ಬಾಲ್ ಸರಣಿಗೆ ಚಾಲನೆ 
ಜೆದ್ದಾ: (ಸೌದಿ ಅರೆಬಿಯಾ) ಫೆಬ್ರವರಿ ೨೩ : ಇಂಡಿಯಾ ಫ್ರಟೆರ್ನಿಟಿ ಫೋರಮ್ ಆರೋಗ್ಯ ಜಾಗೃತಿ ಅಭಿಯಾನದ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ "ಹೆಲ್ತಿ ಲೈಫ್ ಹ್ಯಾಪಿ ಲೈಫ್" ಫುಟ್ಬಾಲ್ ಸರಣಿಗೆ ಭಾರತೀಯ ದೂತಾವಾಸದ ಹಿರಿಯ ಅಧಿಕಾರಿ ಸಯೀದ್ ಅಹಮದ್ ಬಾಬಾ ಚಾಲನೆ ನೀಡಿದರು.


ಜೆದ್ದಾ ನಗರದ ಅಲ್ ಬದರ್ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಸರಣಿಯಲ್ಲಿ ಭಾಗವಹಿಸುವ ಸೌದಿ ಅರೇಬಿಯಾದ ವಿವಿಧ ತಂಡಗಳು ಪಾಲ್ಗೊಂಡಿದ್ದವು. ಆರು ವಾರಗಳ ಕಾಲ ನಡೆಯುವ ಈ ಫುಟ್ಬಾಲ್ ಸರಣಿಯ ಫೈನಲ್ ಪಂದ್ಯ ಮಾರ್ಚ್ ೧೯ ರಂದು ನಡೆಯಲಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಯೀದ್ ಅಹಮದ್ ಬಾಬಾ ಅನಿವಾಸಿ ಭಾರತೀಯರು ದುಡಿಮೆಯ ಜೊತೆಗೆ ಕ್ರೀಡಾ ಕ್ಷೇತ್ರದತ್ತ ಹೆಚ್ಚು ಒಟ್ಟು ನೀಡುವುದರ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎಫ್.ಎಫ್.ನ ಜೆದ್ದಾ ವಿಭಾಗದ ಸಂಯೋಜಕರಾದ ಅಬ್ದುಲ್ ಘನಿ ವಹಿಸಿದ್ದರು. ಜನಾಬ್ ಸುಹೈಲ್ ಕಂದಕ್ ಸ್ವಾಗತಿಸಿದರೆ ಜನಾಬ್ ಇಕ್ಬಾಲ್ ಚೆಂಬೂರ್ ವಂದಿಸಿದರು.
ವರದಿ: ಅಶ್ರಫ್ ಮಂಜ್ರಾಬಾದ್. ಸೌದಿ ಅರೇಬಿಯಾ.

ವರದಿ ಕೃಪೆ : ಶ್ರೀ. ಅಲೆಕ್ಸಿಸ್ ಕ್ಯಾಸ್ಟಲಿನೊ, ದೋಹಾ-ಕತಾರ್.
ರಾಜ್ಯ - ರಾಷ್ಟ್ರ
ಸ್ಥಳದಲ್ಲೇ ನೋಂದಾವಣೆಗೆ ಅವಕಾಶ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಶನ್ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳ `ಪ್ರಗತಿ' 26 ಮತ್ತು 27ರಂದು ಮೂಡಬಿದಿರೆಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ನಡೆಯಲಿದ್ದು 32 ಉತ್ಕೃಷ್ಠ ಸಂಸ್ಥೆಗಳು ಭಾಗವಹಿಸಲಿದ್ದು 3ಸಾವಿರಕ್ಕೂ ಮಿಕ್ಕಿದ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.ಉದ್ಯೋಗಾಕಾಂಕ್ಷಿಗಳು ಪದವೀಧರರಾಗಿದ್ದು, ಉದ್ಯೋಗ ಮೇಳದ ಸಂದರ್ಭದಲ್ಲೇ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದ್ದು ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೂ ಎಲ್ಲ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಲಭ್ಯವಾಗಲಿದೆ.
ಉದ್ಘಾಟನೆ: ಉದ್ಯೋಗಮೇಳವನ್ನು 26ರಂದು ಬೆಳಗ್ಗೆ 10ಕ್ಕೆ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಉದ್ಘಾಟಿಸಲಿದ್ದಾರೆ. ಜಯಶ್ರೀ ಅಮರನಾಥ ಶೆಟ್ಟಿ , ಪ್ರಗತಿ ಉದ್ಯೋಗಮೇಳದ ಸಂಯೋಜಕ ಮಹೇಶ್ ಶೇಖ್, ಟ್ರಸ್ಟಿ ವಿವೇಕ್ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಪ್ರೊ.ಕುರಿಯನ್ ಅಧ್ಯಕ್ಷತೆವಹಿಸಲಿದ್ದಾರೆ.
ನೋಂದಾವಣೆ: ಈಗಾಗಲೇ 2ಸಾವಿರ ಉದ್ಯೋಕಾಂಕ್ಷಿಗಳು ನೋಂದಾವಣೆ ಮಾಡಿದ್ದು ಇನ್ನೂ 3ಸಾವಿರ ಮಂದಿಗಳು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ಫೋಸಿಸ್, ಎಚ್.ಡಿ.ಎಫ್.ಸಿ, ಟಾ.ಟಾ, ವಿಪ್ರೋ, ರಿಲಾಯಾನ್ಸ್ ಮೊದಲಾದ ಪ್ರತಿಷ್ಠಿತ ಕಂಎಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸಂದರ್ಶನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ.
ರಾಜ್ಯ -ರಾಷ್ಟ್ರ
ಬೆಂಗಳೂರು: ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕಗೊಂಡಿದ್ದು 8ಮಂದಿ ಮೃತಪಟ್ಟಿದ್ದಾರೆ. ಆಕಸ್ಮಿಕವಾಗಿ ಕಟ್ಟಡದಲ್ಲಿ ಬೆಂಕಿಹತ್ತಿಕೊಂಡಿದ್ದರಿಂದ ಈ ಘಟನೆ ಸಂಭವಿಸಿತು. ಕಟ್ಟಡದೊಳಗಿದ್ದ ಮಂದಿ ದಿಕ್ಕಾಪಾಲಾಗಿ ಓಡಾಡತೊಡಗಿದರು. ದುರಂತದಿಂದ ಪಾರಾಗುವ ನಿಟ್ಟಿನಲ್ಲಿ ಕೆಲವಾರು ಮಂದಿ ಕಟ್ಟಡದ ಮಹಡಿಗಳಿಂದ ಹಾರಿ ಪಾರಾಗಲು ಪ್ರಯತ್ನಿಸಿದರಾದರೂ ತೀವ್ರವಾದ ಗಾಯಗಳಿಂದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.ಗಾಯಾಳುಗಳು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ 40ಕ್ಕೂ ಅಧಿಕಮಂದಿಗೆ ಗಾಯಗಳಾದ ಬಗ್ಗೆ ಮಾಹಿತಿ ಬಂದಿದೆ. ಕಟ್ಟಡದಿಂದ ಜಿಗಿದವರ ಪೈಕಿ 3ಮಂದಿ ಸಾವನ್ನಪ್ಪಿದ್ದು ದೃಢಪಟ್ಟಿದೆ. 10ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇದೀಗ ಬೆಂಕಿ ಹತೋಟಿಗೆ ಬಂದಿದ್ದು ಅಗ್ನಿಶಾಮಕದಳದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ.
ರಾಜ್ಯ - ರಾಷ್ಟ್ರ
ಈ ಕನಸು ಎಕ್ಸ್ಲೂಸಿವ್
ಕಳೆದ ಕೆಲವಾರು ಸಮಯಗಳಿಂದ ರಾಜ್ಯಾದ್ಯಂತ ವಿದ್ಯುತ್ ತೊಂದರೆ ಬಹುವಾಗಿ ಕಾಡತೊಡಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದ ಬಿ.ಜೆ.ಪಿ ನೇತೃತ್ವದ ಸರಕಾರವನ್ನು ಹೇಗಾದರೂ ಮಾಡಿ ಕೆಳಗಿಳಿಸಬೇಕೆಂಬಂತೆ ಪಣತೊಟ್ಟ `ಅಪ್ಪ ಮಕ್ಕಳ ' ರಾಜಕೀಯ ಪಕ್ಷಕ್ಕೆ `ಕೈ'ಜೋಡಿಸಿರುವ ವಿಪಕ್ಷಗಳ ಯೋಜಿತ ತಂತ್ರ ಎಂಬ ನಿಗೂಢಅಂಶ ಪತ್ತೆಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾಗಿದೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕಾಗಿದೆ.
ಹೇಗಾದರೂ ಮಾಡಿ ರಾಜ್ಯ ಸರಕಾರಕ್ಕೆ ಕಳಂಕ ತರಬೇಕು. ರಾಜ್ಯ ಸರಕಾರವನ್ನು ಆಡಳಿತದಿಂದ ಕೆಳಗಿಳಿಸಬೇಕೆಂಬ ಪಣತೊಟ್ಟ ವಿಪಕ್ಷಗಳು ಸರಕಾರಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ವ್ಯವಸ್ಥಿತ ಸಂಚುಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ `ವಿದ್ಯಾರ್ಥಿಗಳ ಪರೀಕ್ಷೆ ಅವಧಿಯಲ್ಲಿ ಸಂಪೂರ್ಣ ವಿದ್ಯುತ್ ಪೂರೈಸುವ ಭರವಸೆ'ನೀಡಿದ ಹೊರತೂ ಇದೀಗ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ವಿದ್ಯುತ್ ವ್ಯತ್ಯಯಗಳು ನಡೆದಿರುವುದು ಈ ಸಂಚಿನ ಫಲಶ್ರುತಿಯಾಗಿದೆ.
ನಿರಂತರ ವಿದ್ಯುತ್ ಅಭಾವದಿಂದ ಸಣ್ಣ ಕೈಗಾರಿಕೆಗಳು, ಕೃಷಿಕಾರ್ಮಿಕರು, ಕೃಷಿಕರು, ಕೂಲಿಯಾಳುಗಳು, ವಿದ್ಯಾರ್ಥಿಗಳು, ಸಮಸ್ತ ನಾಗರೀಕರು ತೀವ್ರ ತೊಂದರೆಯನ್ನನುಭವಿಸುತ್ತಿದ್ದು ಸರಕಾರ ಕೂಡಲೇ ಎಚ್ಚೆತ್ತು ವಿದ್ಯುತ್ ಸಮಸ್ಯೆಗೊಂದು ಪರಿಹಾರ ಕಾಣಿಸಬೇಕಾಗಿದೆ.
ಈ ವರ್ಷ ಸಾಕಷ್ಟು ಮಳೆಬಿದ್ದಿದ್ದರೂ , ಜಲಾಶಯಗಳು ತುಂಬಿತುಳುಕಿದ್ದರೂ ವಿದ್ಯುತ್ ಅಭಾವ ಈ ಪರಿಯಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಕರಾವಳಿಯೂ ಸೇರಿದಂತೆ ರಾಜ್ಯದ ಬಹುಪಾಲು ಜನತೆ ವಿದ್ಯುತ್ ಅಭಾವದಿಂದ ತತ್ತರಿಸುತ್ತಾರೆ. ಯೋಜನೆಗಳನ್ನು ರೂಪಿಸುವವರು `ಎ.ಸಿ.'ರೂಮುಗಳಲ್ಲಿ ಕುಳಿತು ಕಾರ್ಯಾರಂಭಿಸುತ್ತಾರೆ. ಇತ್ತ ಮೈ ಬೆವರು ಹರಿಸಿ ಕೃಷಿಮಾಡಿ ಬದುಕುವ ಮಂದಿಯ ಬವಣೆಯನ್ನು ಸ್ಥಳಕ್ಕಾಗಮಿಸಿ ನೋಡುವ ಕಾರ್ಯ ಆಡಳಿತ ವರ್ಗ ಮಾಡಬೇಕಾಗಿದೆ. ಇದು ಜನಪ್ರತಿನಿಧಿಗಳ ಕರ್ತವ್ಯವೂ ಹೌದು. ಒಂದಷ್ಟು ಎ.ಸಿ.ಕೊಠಡಿಗಳಿಂದ ಹೊರಬಂದು , ಐಷಾರಾಮಿ ಬಂಗಲೆಗಳಿಂದ ಹೊರ ಇಣುಕಿ ಕೃಷಿಭೂಮಿಯತ್ತ ಹೆಜ್ಜೆ ಹಾಕಿ. ರಾಜ್ಯದ ಜನತೆಯ ಬವಣೆಯನ್ನು ಪ್ರತ್ಯಕ್ಷ ವೀಕ್ಷಿಸಿ. ಅದಾಗ ಮಾತ್ರ ನೈಜ ಚಿತ್ರಣದ ಅರಿವು ನಮ್ಮ ಘನ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ , ಅವರ ಹಿಂದೆ ಹಿಂದೆ ಸುತ್ತುವ ಅಧಿಕಾರಿ ವರ್ಗದವರಿಗೂ ಆದೀತು. ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಜನತೆಯ ಕಷ್ಟಗಳನ್ನು ಆಲಿಸಬೇಕು. ಅದಾಗ ಮಾತ್ರ ಜನತೆಗೂ ಹಿತ. ಪಕ್ಷಗಳಿಗೂ ಹಿತ.
ರಾಜ್ಯ - ರಾಷ್ಟ್ರ
ಮೈಸೂರು: ಟಾಟಾ ಕಂಪೆನಿಯ ಮೈಸೂರು ಡೀಲರ್ ಅರಸ್ ಕಾರ್ಸ್ ಗೋದಾಮಿಗೆ ಬೆಂಕಿ ಬಿದ್ದು 50ಕ್ಕೂ ಹೆಚ್ಚು ಹೊಸ ಕಾರುಗಳು ಭಸ್ಮವಾಗಿವೆ.ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಅರಸ್ ಕಾರ್ಸ್ ಸಂಸ್ಥೆಯ ಮೈದಾನದಲ್ಲಿ ಧಿಡೀರ್ ಬೆಂಕಿ ಕಾಣಿಸಿಕೊಂಡಿತು. ಇದರಿಂದಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ರಾಜ್ಯ-ರಾಷ್ಟ್ರ
ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ಜೈಪುರದ ಮಾನಸಿಂಗ್ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತತಂಡವು ರೋಚಕ ಜಯ ಸಾಧಿಸಿದೆ. ತನ್ಮೂಲಕ ಭಾರತ ಉತ್ತಮ ಆರಂಭಿಕ ನೆಲೆಯನ್ನು ಸಾಧಿಸಿದೆ. ಪಂದ್ಯದ ಕೊನೆಯ ಘಟ್ಟ ಅತ್ಯಂತ ರೋಚಕವಾಗಿದ್ದು ಭಾರತ ತಂಡದ ಸಮರ್ಥ ನಿರ್ವಹಣೆಯಿಂದಾಗಿ ವಿಜಯ ಮಾಲೆ ಭಾರತ ತಂಡಕ್ಕೆ ಲಭಿಸುವಂತಾಯಿತು.
ರಾಜ್ಯ - ರಾಷ್ಟ್ರ
ಗದಗ: ನಾಡು, ನುಡಿ ,ಭಾಷೆ, ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈ ವಿಷಯಗಳ ಸುತ್ತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಜಾರಿಗೆ ಸರಕಾರ ಬದ್ಧವಾಗಿದೆ ಎಂದು ಅವರು ಘೋಷಿಸಿದ್ದಾರೆ. ಗದಗದಲ್ಲಿ ನಡೆಯುತ್ತಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಉಲ್ಲೇಖಿಸಿ, ಅದರ ಅನುಷ್ಠಾನದಲ್ಲಿ ನಿರೀಕ್ಷಿತ ಕಾರ್ಯಗಳಾಗುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದರು.
ಪ್ರಾದೇಶಿಕ ಸುದ್ದಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಫೆ.22 ಸೋಮವಾರದಂದು ಸಂಜೆ 6.30ಕ್ಕೆ ಕಲ್ಕತ್ತಾದ ಸಂಗೀತ ಮಾಂತ್ರಿಕ ಸಂದೀಪ್ ಚಟರ್ಜಿ ಅವರ ಸಂತೂರ್ ವಾದನ ಮತ್ತು ಮಣಿಪಾಲದ ರವಿಕಿರಣ್ ಅವರ ಹಿಂದುಸ್ಥಾನಿ ಗಾಯನ ಜುಗಲ್ ಬಂದಿ ಕಾರ್ಯಕ್ರಮ ವಿದ್ಯಾಗಿರಿಯ ಕು.ಶಿ.ಹರಿದಾಸ ಭಟ್ಟ ವೇದಿಕೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಈ ವಿಶೇಷ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಶಶಿಕಾಂತ ಕುಲಕರ್ಣಿ, ಭಾರವೀ ದೇರಾಜೆ, ಶಶಿಕಿರಣ್ ಇವರು ತಬ್ಲಾ ವಾದಕರಾಗಿ ಭಾಗವಹಿಸಲಿದ್ದಾರೆ. ಆಸಕ್ತ ಸಂಗೀತ ಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಆಳ್ವಾಸ್ ನಲ್ಲಿ ನೀನಾಸಂ ನಾಟಕಗಳು
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಫೆ. 23 ಮತ್ತು 24ರಂದು ಸಂಜೆ 7.15ಕ್ಕೆ ವಿದ್ಯಾಗಿರಿಯ ಕು.ಶಿ.ಹರಿದಾಸ ಭಟ್ಟ ವೇದಿಕೆಯಲ್ಲಿ ನೀನಾಸಂ ತಿರುಗಾಟ ನಾಟಕಗಳು ನಡೆಯಲಿವೆ. ಫೆ. 23 ರಂದು ಸಂಜೆ 7.15ಕ್ಕೆ ಕೆ.ವಿ. ಅಕ್ಷರ ನಿರ್ದೇಶನದ ವೆನಿಸ್ಸಿನ ವ್ಯಾಪಾರ ಎಂಬ ನಾಟಕ ನಡೆಯಲಿದೆ.ಫೆ. 24 ರಂದು ಸಂಜೆ 7.15ಕ್ಕೆ ಪೀಯೂಷ್ ಮಿಶ್ರ ಅವರ ಹಿಂದಿ ನಾಟಕ ಗಗನ್ ದಮಾಮಾ ಬಾಜೌ ನ ಕನ್ನಡ ರೂಪ ಆಕಾಶ ಭೇರಿ ಎಂಬ ನಾಟಕ ನಡೆಯಲಿದೆ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಅನುವಾದದ ಈ ನಾಟಕದ ನಿರ್ದೇಶನ ಸಂಜಯ ಉಪಾಧ್ಯಾಯ ಇವರದ್ದು.ಈ ಎರಡು ನಾಟಕಗಳಿಗೆ ಉಚಿತ ಪ್ರವೇಶಾವಕಾಶವಿದ್ದು ಸರಿಯಾದ ಸಮಯಕ್ಕೆ ಆರಂಭಗೊಳ್ಳುವುದು. ಆಸಕ್ತರು ಇದರ ಸದುಪಯೋಗವನ್ನು ಪಡೆಯಬೇಕೆಂದು ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ವರದಿ: ಧನಂಜಯ ಕುಂಬ್ಳೆ
ರಾಜ್ಯ - ರಾಷ್ಟ್ರ
ಹೊಸದಿಲ್ಲಿ: ಹಿರಿಯ ರಾಜಕಾರಣಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡೀಸ್ ಇದೀಗ ನಾಪತ್ತೆಯಾದ ಸುದ್ದಿ ದಟ್ಟವಾಗಿದೆ. ಇದರಿಂದಾಗಿ ಇಡೀ ದಿಲ್ಲಿ ತಲ್ಲಣಗೊಂಡಿದೆ. ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿದೆ. ಜಾರ್ಜ್ ಜೊತೆ ವೈರತ್ವಹೊಂದಿದ ಅವರ ಪತ್ನಿ, ಪುತ್ರ ಜಾರ್ಜ್ ಅವರನ್ನು ಗೌಪ್ಯವಾಗಿಟ್ಟಿದ್ದಾರೆಂಬುದು ಇದೀಗ ಬಂದ ಸುದ್ದಿ. ಜಾರ್ಜ್ ಅವರಿಗೆ ಆರೋಗ್ಯ ಸರಿಯಿಲ್ಲದ ಹಿನ್ನಲೆಯಲ್ಲಿ ಗೌಪ್ಯ ಪ್ರದೇಶದಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ ಎಂಬುದು ಕುಟುಂಬ ವರ್ಗದ ಹೇಳಿಕೆಯಾದರೂ ಅವರನ್ನು ನೋಡಲು ಅವಕಾಶ ನೀಡಿಲ್ಲ ಎಂಬುದು ಅವರ ಆಪ್ತಸ್ನೇಹಿತ ಅಜಯ್ ಸಿಂಗ್ ಅವರ ಆರೋಪ.
ರಾಜ್ಯ - ರಾಷ್ಟ್ರ
ಗದಗದಲ್ಲಿ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡೋಜ ಡಾ.ಗೀತಾ ನಾಗಭೂಷಣ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿದ್ದು ಈ ಬಗ್ಗೆ ಒಂದು ಚಿತ್ರನೋಟ ಇಲ್ಲಿದೆ.



Video





