ಪ್ರಾದೇಶಿಕ ಸುದ್ದಿ
ಮೂಲ್ಕಿ:ಧನಾತ್ಮಕ ಚಿಂತನೆಯೊಂದಿಗೆ ನಿರಂತರ ಶ್ರಮಕ್ಕೆ ನೀಡಲಾಗುವ ಪ್ರೋತ್ಸಾಹವು ಕಲಾವಿಧನ ಹುಟ್ಟಿಗೆ ಕಾರಣವಾಗುತ್ತದೆ ಎಂದು ಮಿಮಿಕ್ರಿ ಪಟು ಪಟ್ಟಾಭಿರಾಮ ಸುಳ್ಯ ಹೇಳಿದರು.ಮೂಲ್ಕಿಯ ತೋಕೂರು ತಪೋವನ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಹತ್ತು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.ತನ್ನ ನೋವನ್ನು ಲೆಕ್ಕಿಸದೆ ಇತರರನ್ನು ನಗಿಸಿ ಮನ ಬೆಳಗಿಸುವ ಕಲೆ ಕಲಾವಿದನಿಗೆ ಸಿದ್ದಿಸಿದರೆ ಮಾತ್ರ ಆತ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾನೆ. ನಗು ಯಾವತ್ತೂ ಇತರರ ಮನ ಮುದಗೊಳಿಸುವುದರೊಂದಿಗೆ ಸದಾ ಹಸನ್ಮುಖರಾಗಿರುವವರಿಗೆ ಅನಾರೋಗ್ಯ ಕಾಡದು ಎಂದ ಅವರು ಮಕ್ಕಳ ಮನೋಭಾವನೆಯನ್ನು ಹೆತ್ತವರು ಅರಿಯುದರೊಂದಿಗೆ ಅವರ ಬೆಳವಣಿಗೆಗೆ ಆದರ್ಶರಾಗಿರಿ ಎಂದರು.ಶಿಕ್ಷಕ ರಕ್ಷಕ ಸಂಘದ ಪೂರ್ವಾಧ್ಯಕ್ಷ ಜಿನರಾಜ್ ಬಂಗೇರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಹತ್ತು ದಿನಗಳ ಶಿಬಿರದಲ್ಲಿ ಮಕ್ಕಳಿಗೆ ಪೈಂಟಿಂಗ್, ಹಾಡು, ಗೀತೆ, ಪುಷ್ಪಾಲಂಕಾರ, ಕಾಗದದ ಚೀಲ, ಮುಖವಾಡ, ತುಳು ಜಾನಪದ ಆಚರಣೆ, ನೈಸಗರ್ಿಕವಾಗಿ ತಯಾರಿಸುವ ಆಹಾರ, ಚಿತ್ರಗಳು, ಸಂಗೀತ, ಎಂಬ್ರೋಡರಿ ಇನ್ನಿತರ ಕಲೆಗಾರಿಕೆಗೆ ತರಬೇತಿಯನ್ನು ನೀಡಲಾಗುವುದು ಎಂದು ಶಾಲಾ ಮಖ್ಯೋಪಾಧ್ಯಾಯಿನಿ ಗೀತಾ ವೆಂಕಟ್ರಾಮನ್ ತಿಳಿಸಿದರು.
ವಿದ್ಯಾರ್ಥಿಗಳಾದ ಸ್ವೀಡನ್, ಕಾವ್ಯ, ಪ್ರಿಸ್ಕಾ, ಮುಫಿದಾ ಉಪಸ್ಥಿತರಿದ್ದರು.ಮಕ್ಕಳಿಗೆ ಪಟ್ಟಾಭಿರಾಮ ಸುಳ್ಯರವರು ಹಾಸ್ಯ ಚಟಾಕಿ, ಮಿಮಿಕ್ರಿ, ಪ್ರಾಣಿ ಪಕ್ಷಿಗಳ ಧ್ವನಿ, ಚಲನ ಚಿತ್ರ ನಟರ, ರಾಜಕಾರಣಿಗಳ ಅನುಕರಣೆ, ಮುಖಬಾವ, ನಗುವಿನ ವಿವಿಧ ರೂಪಗಳು, ನೆರಳಿನ ಆಟವನ್ನು ಪ್ರದರ್ಶಿಸಿ ರಂಜಿಸಿದರು.
ವರದಿ: ಭಾಗ್ಯವಾನ್ ಮುಲ್ಕಿ
ಪ್ರಾದೇಶಿಕ ಸುದ್ದಿ
ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘವಾದ ಎಡಿಟರ್ಸ್ ಕ್ಲಬ್ ಅಧ್ಯಕ್ಷರಾಗಿ ಕ್ಲಿಕ್ ಪತ್ರಿಕೆಯ ಸಂಪಾದಕ ರಮೇಶ್ ಪಂಡಿತ್ ಆಯ್ಕೆಗೊಂಡಿದ್ದಾರೆ.
ಅಂಕಣ
ರೀಲು ಬಿಚ್ಚುವ ಮುನ್ನ 
ಇಲ್ಲಿ ಚುಮುಚುಮು ಚಳಿ ಆರಂಭವಾಗುತ್ತಿದ್ದಂತೆ ಒಂದು ದಿನ ಹಿರಿಯರಾದ ಬಿ. ಕೃಷ್ಣಾನಂದ ಹೆಗ್ಡೆ ಅವರಿಗೆ ಈಮೇಲ್ ಮಾಡಿದೆ: `ಸರ್, ನಮ್ಮ ಶ್ರೀನಿವಾಸ್ ಬರುವ ಮಾರ್ಚ್ ಕೊನೆಯಲ್ಲಿ ನಿವೃತ್ತರಾಗುತ್ತಿದ್ದಾರೆ. ಆ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸಮಾರಂಭ ಏರ್ಪಡಿಸಿ, ಅವರನ್ನು ಕುರಿತು ಪುಟ್ಟದೊಂದು ಪುಸ್ತಕ ತರೋಣವೇ?
ಹೆಗ್ಡೆಯವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮಂಗಳೂರು ಘಟಕದ ಮೊದಲ ಕ್ಷೇತ್ರ ಪ್ರಚಾರಾಧಿಕಾರಿಯಾಗಿದ್ದವರು. ಅವರು ಅಲ್ಲಿದ್ದಾಗಲೇ ಇಲಾಖೆ ಸೇರಿದವರು ಶ್ರೀನಿವಾಸ್. ತಡಮಾಡದೆ ಹೆಗ್ಡೆಯವರು ಉತ್ತರಿಸಿದರು: ಇದು ಮಾಡಲೇಬೇಕಾದ ಕೆಲಸ; ನಾನು ಜೊತೆಗಿದ್ದೇನೆ.
ಆದರೆ ಶ್ರೀನಿವಾಸ್ ಅವರನ್ನು ಒಪ್ಪಿಸಬೇಕಲ್ಲ! ಅವರು ಇಂಥದ್ದೇನನ್ನೂ ಯಾವತ್ತೂ ನಿರೀಕ್ಷಿಸಿದವರಲ್ಲ. `ಹೀಗೊಂದು ಯೋಚನೆ ಇದೆ. ಹೆಗ್ಡೆಯವರು ಒಪ್ಪಿಗೆ ಸೂಚಿಸಿದ್ದಾರೆ. ನೀವು ಬೇಡ ಅನ್ನಬಾರದು ಎಂದಷ್ಟೇ ಹೇಳಿ ಅವರ ಉತ್ತರಕ್ಕೂ ಕಾಯದೆ ಫೋನ್ ಕೆಳಗಿಟ್ಟೆ. ಈಗ `ಮುಗಿಯದ ರೀಲು ನಿಮ್ಮ ಮುಂದಿದೆ.
ಪುಸ್ತಕದ ಮೊದಲ ಭಾಗದಲ್ಲಿ ಶ್ರೀನಿವಾಸ್ ಅವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸರಕಾರಿ ಸೇವೆಗೆ ಸೇರಿದ ಮೊದಲ ದಿನ ಇದ್ದ ಉತ್ಸಾಹ, ಶ್ರದ್ಧೆ, ಪ್ರಾಮಾಣಿಕತೆ, ಸ್ನೇಹಪರತೆ ಹಾಗೂ ಸಮಾಜಪ್ರೀತಿಯನ್ನು ನಿವೃತ್ತಿಯ ದಿನದ ವರೆಗೂ ಕಾಯ್ದುಕೊಂಡದ್ದು ಅವರ ವಿಶೇಷ. ಇದನ್ನವರು ಪ್ರಜ್ಞಾಪೂರ್ವಕವಾಗಿಯೇನೂ ಮಾಡಿಲ್ಲ. ಅವರಿದ್ದುದೇ ಹಾಗೆ. ನಡುವೆ ಶಿವಮೊಗ್ಗಕ್ಕೆ ವರ್ಗಾವಣೆಯಾದಾಗಲೂ (2001) ಶ್ರೀನಿವಾಸ್ ಎರಡು ಮಾತನಾಡದೆ ಬಸ್ಸನ್ನೇರಿ ಆಗುಂಬೆಯತ್ತ ಹೊರಟರು. ಅಮ್ಮ ಆಸ್ಪತ್ರೆಯಲ್ಲಿ ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದಾಗ ಅವರಿದ್ದುದು ಸುಳ್ಯದಲ್ಲಿ, ಕಾರ್ಯಕ್ರಮದ ನಡುವೆ. ಅವರಿಗೆ ಹೃದಯದ ಬೈಪಾಸ್ ಸರ್ಜರಿಯಾದ ಕೆಲ ಸಮಯದ ಬಳಿಕ ಫೋನ್ ಮಾಡಿ `ಹೇಗಿದ್ದೀರಿ ಎಂದರೆ ಅವರ ಉತ್ತರ: `ಈಗ ಪರವಾಗಿಲ್ಲ, ಕಾರ್ಯಕ್ರಮಕ್ಕಾಗಿ ಕೊಡಗು ಪ್ರವಾಸದಲ್ಲಿದ್ದೇನೆ! ಅವರು ಇಲ್ಲಿ ದಾಖಲಿಸಿರುವ ಘಟನೆಗಳು ಕೇವಲ ಪ್ರಾತಿನಿಧಿಕ. ಅಂಥ ಒಂದಲ್ಲ ಒಂದು ಅನುಭವ ಪ್ರತಿಯೊಂದು ಪ್ರವಾಸದಲ್ಲೂ ಆಗಿದ್ದಿದೆ. ಏಕೆಂದರೆ ಇಷ್ಟೂ ವರ್ಷ ಅವರ ಮನಸ್ಸು ಮತ್ತು ಜೀಪು ಎರಡೂ ಸುತ್ತಾಡುತ್ತಿದ್ದುದು ಹಳ್ಳಿಗಾಡಿನಲ್ಲಿ.
ಪುಸ್ತಕದ ಎರಡನೇ ಭಾಗದಲ್ಲಿ ಶ್ರೀನಿವಾಸ್ ಅವರೊಡನೆ ಒಡನಾಟ ಹೊಂದಿದ ಆತ್ಮೀಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. `ಎರಡೇ ಪ್ಯಾರಾದ ಬರಹ ಕಳಿಸಿಕೊಡಿ ಎಂದದ್ದೇ ಕೆಲವರಿಗೆ ಸಮಸ್ಯೆಯಾಯಿತು. ಯಾವುದನ್ನು ಬರೆಯಲಿ, ಯಾವುದನ್ನು ಬಿಡಲಿ?! `ಶ್ರೀನಿವಾಸ್ ಅವರು ಸಜ್ಜನರಲ್ಲಿ ಸಜ್ಜನ ಎಂದು ಕೃಷ್ಣಾನಂದ ಹೆಗ್ಡೆಯವರು ಬಣ್ಣಿಸಿದರೆ `ಅವರಿಗೆ ಶುಭ ಕೋರುವುದು ನನ್ನ ಸುಯೋಗ ಎಂದಿದ್ದಾರೆ ಖಾದ್ರಿ ಎಸ್. ಅಚ್ಯುತನ್ ಅವರು. ಎಂ.ಎನ್. ಶಂಕರ್ ಅವರು ಎಲ್ಲೇ ಭಾಷಣ ಮಾಡಲಿ, ಶ್ರೀನಿವಾಸ್ ಸುಬ್ರಹ್ಮಣ್ಯದಲ್ಲಿ ಕೇವಲ ಐದುನೂರು ರೂಪಾಯಿಯಲ್ಲಿ ನೂರಾರು ಮಂದಿಗೆ ಶಿರಾ-ಉಪ್ಪಿಟ್ಟು ವ್ಯವಸ್ಥೆಮಾಡಿದ್ದನ್ನು ನೆನಪಿಸದೆ ಮಾತು ಮುಗಿಸುವುದಿಲ್ಲ. ಇಲ್ಲೂ ಅದನ್ನು ಪ್ರಸ್ತಾಪಿಸಿದ್ದಾರೆ. ನಾಲ್ಕು ಪುಟಗಳ ಲೇಖನ ಕಳುಹಿಸಿರುವ ಅವರು ಷರಾ ಸೇರಿಸಿದ್ದಾರೆ: ಇಲ್ಲಿ ಬರೆದಿರುವ ಪ್ರತಿಯೊಂದು ಪದ, ಪ್ರತಿಯೊಂದು ಮಾತೂ ಅಕ್ಷರಶಃ ಸತ್ಯ, ಇದರಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆ ಇಲ್ಲ. ಎಲ್ಲರ ಬರಹಗಳಲ್ಲೂ ಇದು ಸಾಮಾನ್ಯವಾಗಿ ಕಂಡುಬರುವ ಅಂಶ.
`ನಮ್ಮೆಜಮಾನರಿಗೆ ಇಲಾಖೆಯ ಕಾರ್ಯಕ್ರಮಕ್ಕೆ ಹೋಗುವುದೆಂದರೆ ಮತ್ತು ಅದರ ತಯಾರಿ ಅಂದರೆ ಏನೋ ಒಂದು ತರಹದ ಸಡಗರ. ಅದನ್ನು ಅವರಲ್ಲಿ ಇಂದಿಗೂ ಕಾಣುತ್ತಿದ್ದೇನೆ. ಯಜಮಾನರಲ್ಲಿರುವ ಹುಮ್ಮಸ್ಸು, ಆಸಕ್ತಿ ಮತ್ತು ಶ್ರದ್ಧೆ ನಮ್ಮ ಮಕ್ಕಳಲ್ಲೂ ಬಂದರೆ ನನಗಿಂತ ಪುಣ್ಯವಂತರು ಬೇರಾರೂ ಇರಲಿಕ್ಕಿಲ್ಲ. ಗುಂಡಿಬೈಲು ಶ್ರೀನಿವಾಸ್ ಅವರ ಸಂಗಾತಿ ವಿಮಲ ಅವರ ಈ ಮಾತುಗಳನ್ನು ಓದುತ್ತಿದ್ದಂತೆ ನನ್ನ ಕಣ್ಣಾಲಿಗಳು ಒದ್ದೆಯಾದವು. ಸೇವಾನಿವೃತ್ತಿಯ ದಿನ ಶ್ರೀನಿವಾಸ್ ಅವರಿಗೆ ಸಲ್ಲುವ ಅತ್ಯಂತ ಮೌಲ್ಯದ ಉಡುಗೊರೆಯೆಂದರೆ ವಿಮಲ ಅವರ ಮನದ ಮಾತು.
ನನ್ನನ್ನು ಈ ಪುಸ್ತಕ ಸಂಪಾದನೆಗೆ ಪ್ರೇರೇಪಿಸಿದ ಗುಂಡಿಬೈಲು ಶ್ರೀನಿವಾಸ್ ಅವರ ಅಪ್ಪಟ ವ್ಯಕ್ತಿತ್ವಕ್ಕೆ ಕೈಮುಗಿದು ನಮಿಸುವೆ.
ಶಿವರಾಂ ಪೈಲೂರು
ದೆಹಲಿ/ಫೆಬ್ರವರಿ 20, 2010
ಸಾಹಿತ್ಯ
ಸುಪ್ತ ಪ್ರತಿಭೆಯ ವಿಕಸನಕ್ಕೆ ಮುಕ್ತ ಅವಕಾಶಗಳು ದೊರೆತರೆ ನಮ್ಮ ನಡುವಿರುವ ಅದೆಷ್ಟೋ ಅವಕಾಶ ವಂಚಿತ ಪ್ರತಿಭಾವಂತರು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಈ ಮಾತಿಗೆ ಸ್ಪಷ್ಟ ನಿದರ್ಶನ ಹಾಲುಗಲ್ಲದ, ಮುದ್ದು ಮುಖದ, ಮೊದ್ದು ಭಾವನೆಯ ಪುಟ್ಟ ಕಂದ ಸುರತ್ಕಲ್ ನ ಬೇಬಿ ತಶ್ವಿ ರೈ. ನೃತ್ಯವೆಂದಾಕ್ಷಣ ಗರಿಗೆದರುವ ಈ ಬಾಲೆ ಸಹಸ್ರಾರು ಜನರು ನೆರೆದಿರುವ ಸಭಾಂಗಣವಾಗಲೀ, ಅಪರಿಚಿತರೇ ತುಂಬಿರುವ ಮದುವೆ ಮನೆಯೇ ಇರಲಿ ಅಲ್ಲಿ ಎಗ್ಗಿಲ್ಲದೆ ಕುಣಿಯುವ ನರ್ತನದ ನವಿಲು. ಈಕೆಗೆ ಶುಭ ಹಾರೈಸುತ್ತಾ ಈಕೆಯ ಸಾಧನೆಯ ಬಗ್ಗೆ ಒಂದು ಪುಟ್ಟ ಬರಹವಿದು.
ದ.ಕ.ಜಿಲ್ಲೆಯ ಸುರತ್ಕಲ್ ನ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿನಿಯಾಗಿರುವ ಬೇಬಿ ತಶ್ವಿ ರೈ ಭಾರತೀಯ ಮತ್ತು ಪಾಶ್ಚಿಮಾತ್ಯ ನೃತ್ಯ ಪ್ರಕಾರಗಳಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ಬ್ರಹ್ಮಾವರದಲ್ಲಿ ಇತ್ತೀಚೆಗೆ ಕರಾವಳಿ ಕಲಾನಿಕೇತನ ಮಾಬುಕಳ ಇವರ ಆಶ್ರಯದಲ್ಲಿ ನಡೆದ ಕೋಸ್ಟಲ್ ಬ್ಲಾಸ್ಟ್, ನ್ಯೂಯಂಗ್ ಸ್ಟಾರ್ ಬೆಲೂರು ಇವರು ಸಂಘಟಿಸಿದ ಹೆಜ್ಜೆಗಳ ಸದ್ದು ಎಂಬ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದ ಸೋಲೋ ಪ್ರಶಸ್ತಿಯ ಪ್ರಥಮ ಸ್ಥಾನ ಗಳಿಸಿದ್ದಾಳೆ. ಉಡುಪಿಯ ಯು ಛಾನೆಲ್ ಸಂಘಟಿಸಿದ್ದ ಫಿಮೇಲ್ ಡಾನ್ಸ್ ಮಿಡಿಯಾ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಭಾಜನರಾಗಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಖ್ಯಾತಿಯ ಕಲರ್ಸ್ ಛಾನೆಲನ ಚೆಕ್ ಧೂಮ್ ಧೂಮ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ಟ್ವೆಂಟಿ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಅಲ್ಲೀಕೆ ಯಶಸ್ವಿಯಾದರೆ ಕೋಟ್ಯಾಂತರ ರೂಪಾಯಿಗಳ ಬಹುಮಾನ ಪಡೆಯಲಿದ್ದಾಳೆ. ಈ ಸ್ಪರ್ಧೆಯ ಜ್ಯೂರಿಗಳಾದ ಸರೋಜ್ಖಾನ್, ಅಹಮ್ಮದ್ಖಾನ್ ಮತ್ತು ವಿಂಧುಸಿಂಗ್ ಈಕೆಗೀಗಾಲೇ ಬಿರುದು ನೀಡಿ ಗುರುತಿಸಿದ್ದಾರೆ.
ಚಿತ್ರದಲ್ಲೂ ಪಾತ್ರಗಿಟ್ಟಿಸಿಕೊಂಡಿರುವ ತಶ್ವಿ ರೈ ಕನ್ನಡದಲ್ಲಿ ಚಿತ್ರೀಕರಣ ಪೂರೈಸಿರುವ ಏನಂತಿಯಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಚಿತ್ರ ನಿರ್ದೇಶಕರಿಂದ ಟೇಕ್ ಒನ್ ಆರ್ಟಿಸ್ಟ್ ಎಂದು ಕರೆಸಿಕೊಂಡಿದ್ದಾಳೆ.
ಸುರತ್ಕಲ್ ನ ಸಂತೋಷ್ ರೈ ಶ್ರೀಮತಿ ನವನೀತ ರೈ ದಂಪತಿಯ ಪುತ್ರಿಯಾಗಿರುವ ತಶ್ವಿ ರೈಯ ಈವರೆಗಿನ ಯಶಸ್ಸಿನ ಮಾರ್ಗದರ್ಶಕ ಮತ್ತು ಗುರುಗಳಾಗಿರುವವರು ಸುನೀಲ್ ಶೆಟ್ಟಿ. ತಶ್ವಿಯ ನೃತ್ಯದಾಸಕ್ತಿ ಆಕೆಯನ್ನು ಉನ್ನತಿಗೇರಿಸಲಿ ಎಂದು ಹಾರೈಸೋಣ.
ಜಗನ್ನಾಥ್ ಶೆಟ್ಟಿ ಬಾಳ
ಪ್ರಾದೇಶಿಕ ಸುದ್ದಿ
ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಸೋಮವಾರ ನಡೆದ ದ್ವಜಾರೋಹಣವು ಸಸಿಹಿತ್ಲು ಭಗವತಿ ಅಮ್ಮನವರು ಮತ್ತು ಪರಿವಾರ ದೈವಗಳ ಉಪಸ್ಥಿತಿಯಲ್ಲಿ ಜರುಗಿತು.
ಚಿತ್ರ:ಚಿತ್ರಾಲಯ ಮೂಲ್ಕಿ.
ಅಂಕಣ
ಆತ್ಮೀಯ ಓದುಗರೇ...
ಗೆಳೆಯ ಶಿವರಾಂ ಪೈಲೂರು ಅವರಿಂದ ಇ-ಮೇಲ್ ಒಂದು ಇತ್ತೀಚೆಗೆ ಬಂದಿತ್ತು. ಶೀರ್ಷಿಕೆ ನೋಡಿಯೇ ಒಂದಚ್ಚರಿ...`ಮುಗಿಯದ ರೀಲು' ನಾಡಿದ್ದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ನೀವು ಬನ್ನಿ ಎಂಬ ಆಮಂತ್ರಣ. ಜೊತೆಗೆ ಒಂದೆರಡು ಫೋಟೋ ಪುಟ್ಟ ಲೇಖನ. ಖುಷಿಯಾಯ್ತು. ಶಿವರಾಂ ಪೈಲೂರು ಏನಾದರೊಂದು ಸಾಧನೆ ನಿರಂತರ ಮಾಡುತ್ತಾ ಬಂದಿದ್ದಾರೆ. ಇದೀಗ ಮುಗಿಯದ ರೀಲಿನ ಜೊತೆಗೆ ಮತ್ತಷ್ಟು ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆಂಬ ಹೆಮ್ಮೆ ಸಂತಸ ನನಗಾಯಿತು. ಆ ಕಾರಣಕ್ಕಾಗಿಯೇ ಅವರ ಪ್ರಯತ್ನಕ್ಕೆ ಈ ಕನಸು .ಕಾಂ ಮೂಲಕ ಬೆಂಬಲ ನೀಡಬೇಕೆಂಬ ಆಸೆ ಚಿಗುರೊಡೆಯಿತು. ಮುಂದೆ `ಮುಗಿಯದ ರೀಲು' ನಿಮ್ಮೆಲ್ಲರ ಪ್ರೀತಿಯ ಈ ಕನಸಿನಲ್ಲಿ ನಿಮ್ಮೆದುರು ಕಾಣಿಸಿಕೊಳ್ಳಲಿದೆ.
ಈ ಹಿಂದೆ ನಿರಂತರ ಧಾರಾವಾಹಿಯ ರೂಪದಲ್ಲಿ ನಮ್ಮ ಓದುಗರಿಗೆ ಒಂದಿಲ್ಲೊಂದು ವಿಚಾರಗಳನ್ನು ನೀಡಿದ ಸಂದರ್ಭದಲ್ಲಿ ನಮ್ಮೆಲ್ಲಾ ಪ್ರೀತಿಯ ಓದುಗ ಮಿತ್ರರೆಲ್ಲರೂ ತೋರಿದ ಪ್ರೋತ್ಸಾಹ `ಮುಗಿಯದ ರೀಲು' ಬರಹಕ್ಕೂ ದೊರಕಬಹುದೆಂಬ ವಿಶ್ವಾಸ ನಮ್ಮದು. ಇಂದಿನಿಂದ ಮುಗಿಯದ ರೀಲು ನಿಮ್ಮೆದುರು. ಓದಿ ಪ್ರೋತ್ಸಾಹಿಸುವ ಮಹತ್ತರ ಜವಾಬ್ದಾರಿ ನಿಮ್ಮದು...
ಪ್ರೀತಿಯಿಂದ
- ಸಂ.
ಇದು ಶಿವರಾಂ ಪೈಲೂರು ಕಳುಹಿಸಿದ ಮಿಂಚಂಚೆ... ನೀವೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಅಂದ ಹೆಚ್ಚಿಸಿ.
ಏಪ್ರಿಲ್ ೩ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಗುಂಡಿಬೈಲು ಶ್ರೀನಿವಾಸ್ ಅಭಿನಂದನೆ ಹಾಗೂ ‘ಮುಗಿಯದ ರೀಲು’ ಪುಸ್ತಕ ಬಿಡುಗಡೆ ಕಾರ್ಯಕ್ರಮ.
ಏ.೩ರ ಕಾರ್ಯಕ್ರಮಕ್ಕೆ ಖಂಡಿತ ಬನ್ನಿ. (ಸ್ಥಳ: ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನ, ತಾಲೂಕು ಪಂಚಾಯತ್ ಕಚೇರಿ ಆವರಣ, ನೆಹರೂ ಮೈದಾನ ರಸ್ತೆ, ಮಂಗಳೂರು; ಸಮಯ: ಅಪರಾಹ್ನ ೩ಕ್ಕೆ)
ಪ್ರೀತಿಯಿಂದ,
ಶಿವರಾಂ ಪೈಲೂರು
ಸಿನೆಮಾ ರೀಲುಗಳೊಂದಿಗೆ ಗುಂಡಿಬೈಲು ಶ್ರೀನಿವಾಸ್ ಅವರ ಒಡನಾಟ ಆರಂಭವಾದುದು 1971ರಲ್ಲಿ. ಪಿಯುಸಿ ಬಳಿಕ ಉಡುಪಿಯ ಕಲ್ಪಾನಾ ಟಾಕೀಸಿನಲ್ಲಿ ಅವರ ಉದ್ಯೋಗ ಶುರು. ನಂತರ ಅವರು ಸೇರಿದ್ದು ಕ್ಷೇತ್ರ ಪ್ರಚಾರ ನಿರ್ದೇಶನಾಲಯವನ್ನು. ಅಲ್ಲಿ ಪ್ರೊಜೆಕ್ಟರನ್ನು ಬೆನ್ನಿಗಂಟಿಸಿಕೊಂಡೆ ಅವರು ಹಳ್ಳಿಹಳ್ಳಿ ಸುತ್ತಿದರು; ಜನತೆಗೆ ಮಾಹಿತಿ, ಮನರಂಜನೆಯ ರಸಪಾಕ ಉಣಬಡಿಸಿದರು.
ಬೇಸಿಗೆಯ ಧಗೆಯಿರಲಿ, ಧೋ ಮಳೆಯಿರಲಿ, ಥರಗುಟ್ಟುವ ಚಳಿಯಿರಲಿ ಶ್ರೀನಿವಾಸ್ ಅವರ ಶ್ರದ್ಧೆ, ಕಾಳಜಿ, ಉತ್ಸಾಹ ಎಂದಿಗೂ ಏರುಗತಿಯಲ್ಲೆ. ಹೃದಯ ಶಸ್ತ್ರಚಿಕಿತ್ಸೆಯ ಬಳಿಕವೂ ಅವರಲ್ಲಿ ಅದೇ ಕಾಯಕಪ್ರೇಮ. ಅವರ ಪಾಲಿಗೆ ಒಂದೊಂದು ಕಾರ್ಯಕ್ರಮವೂ ಮುಖ್ಯ; ಪ್ರತಿಯೊಂದು ರೀಲು ಕೂಡ ಅತ್ಯಮೂಲ್ಯ. ರೀಲುಗಳ ಮೂಲಕ ಸರಕಾರದ ವಿಚಾರಗಳನ್ನು ಜನತೆಗೆ ತಿಳಿಸಬೇಕು; ಜನರ ಆಸಕ್ತಿಗೂ ಸ್ಪಂದಿಸಬೇಕು. ಮಕ್ಕಳಿಗಾದರೆ ಮನರಂಜನೆ ಬೇಕೇ ಬೇಕು. ಕಂಬಾರರ `ಮಳೆರಾಯ ಅಚ್ಚುಮೆಚ್ಚು. ಹಳ್ಳಿ ಮಂದಿಗೆ ಸಣ್ಣ ಚಿತ್ರಗಳಿಗಿಂತ ಎರಡು ತಾಸಿನ ತುಕ್ರನ ಕಥೆ, ಮೊದಲ ಹೆಜ್ಜೆ ಮುಂತಾದ ಪಿಚ್ಚರೇ ಇಷ್ಟ. ಪೇಟೆ ಜನಕ್ಕೆ ತುಸು ಮಸಾಲೆ ಇದ್ದರೆ ಚೆನ್ನ. ಹೀಗೆ ಥರಾವರಿ ಸಮುದಾಯ, ಸನ್ನಿವೇಶಕ್ಕೆ ತಕ್ಕಂತೆ ಶ್ರೀನಿವಾಸ್ ರೀಲುಗಳ ಪ್ಯಾಕೇಜ್ ರೂಪಿಸುತ್ತಿದ್ದರು. ಅವರು ಜೀಪು ಹತ್ತಿದರೆಂದರೆ ಅವರೊಂದಿಗೆ ಎರಡು ಟರ್ಪಾಲಿನ ಬ್ಯಾಗುಗಳ ತುಂಬ ನೂರಾರು ರೀಲುಗಳೂ ಪ್ರವಾಸ ಹೊರಡುತ್ತಿದ್ದವು. ಸಣ್ಣ ಡಬ್ಬಿಯಲ್ಲಿ ಸಣ್ಣ ಚಿತ್ರ, ದೊಡ್ಡ ಡಬ್ಬದಲ್ಲಿ ದೊಡ್ಡ ಚಿತ್ರ. ಶ್ರೀನಿವಾಸ್ ದೊಡ್ಡದೊಡ್ಡ ಡಬ್ಬಗಳನ್ನು ಹಿಡಿದು ಜೀಪಿನಿಂದ ಇಳಿದರೆ ಮಕ್ಕಳಿಗೆ ಖುಷಿಯೋ ಖುಷಿ.
ರೀಲು ತುಂಡಾದರೆ, ಅದರ ಅಂಚು ಹರಿದರೆ ಅದಕ್ಕೆ ಅಂಟು (ಫಿಲಂ ಸಿಮೆಂಟ್) ಹಚ್ಚಿ ಸ್ಪ್ಲೈಸರ್ಗೆ ಅಳವಡಿಸಿ ಮತ್ತೆ ರೀಲಿಗೆ ಜೀವತುಂಬುವುದು ಶ್ರೀನಿವಾಸ್ ಅವರ ನಿತ್ಯದ ಕೆಲಸ. ಒಮ್ಮೆ ತೋರಿಸಿದ ರೀಲನ್ನು ಮತ್ತೆ ಪ್ರದರ್ಶಿಸಬೇಕಿದ್ದರೆ ಅದನ್ನು ಚರಕದಂತಿರುವ ರಿವೈಂಡರಿಗೆ ಹಾಕಿ ಹಿಂದಕ್ಕೆ ಸುತ್ತಿ ಅಣಿಗೊಳಿಸಬೇಕು. ಆಗಲೇ ಅದರ ಅಂಚು ಹರಿದಿದೆಯೋ ಎಂಬುದನ್ನೂ ಪರೀಕ್ಷಿಸಬೇಕು. ಬೆಳ್ಳಂಬೆಳಗ್ಗೆ ಪ್ರವಾಸಿ ಬಂಗಲೆಯ ವರಾಂಡದಲ್ಲಿ ಕುಳಿತು ಶ್ರೀನಿವಾಸ್ ಹಿಂದಿನ ರಾತ್ರಿ ತೋರಿಸಿದ್ದ ರೀಲುಗಳನ್ನೆಲ್ಲ ಒಂದೊಂದಾಗಿ ತೆಗೆದು ರಿವೈಂಡರಿಗೆ ಹಾಕಿ ಒಂದು ಕೈಯಲ್ಲಿ ಅದರ ಹಿಡಿಯನ್ನು ಗಿರಗಿರನೆ ತಿರುಗಿಸುತ್ತ ಇನ್ನೊಂದು ಕೈಯಲ್ಲಿ ರೀಲುಗಳ ಆರೋಗ್ಯ ಪರೀಕ್ಷಿಸುತ್ತ ತಾದಾತ್ಮ್ಯದಲ್ಲಿ ಅದನ್ನು ಸುತ್ತಿಡುತ್ತಿದ್ದ ದೃಶ್ಯದ ನೆನಪು ಸದಾ ಹಸಿರು.
ಶ್ರೀನಿವಾಸ್ ಎಂದೊಡನೆ ಅವರನ್ನು ಬಲ್ಲ ಎಲ್ಲರ ಮನಸ್ಸಿನಲ್ಲೂ ನೆನಪಿನ ರೀಲುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ನಡುರಾತ್ರಿಯಲ್ಲಿ ಜೀಪು ತಳ್ಳಿದ್ದು, ಕಾರ್ಯಕ್ರಮ ಸಿದ್ಧತೆಗೆ ಅವರು ಎಲ್ಲರಿಗಿಂತ ಮೊದಲೇ ಬಂದು ಕಸ ಗುಡಿಸುತ್ತಿದ್ದುದು, ಹಾಡಿಯ ಹಾದಿಯಲ್ಲಿ ಕಾಡಾನೆಗಳ ಹಿಂಡು ಎದುರಾದದ್ದು, ಕೇವಲ ಐದುನೂರು ರೂಪಾಯಿಯಲ್ಲಿ ನೂರಾರು ಮಂದಿಗೆ ಶಿರಾ-ಉಪ್ಪಿಟ್ಟು ವ್ಯವಸ್ಥೆಮಾಡಿದ್ದು... ಹೀಗೆ ಶ್ರೀನಿವಾಸ್ ಒಡನಾಟದ ನೆನಪು ಎಂದಿಗೂ ಮುಗಿಯದ ರೀಲು. ಶ್ರೀನಿವಾಸ್ ಅವರಿಗೂ ರೀಲುಗಳ ನೆನಪು ಎಂದೆಂದಿಗೂ ಮರೆಯಲಾಗದ್ದು. ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ರೀಲುಗಳೊಂದಿಗೆ ಬದುಕಿದವರು; ಅವುಗಳನ್ನು ಅತೀವವಾಗಿ ಪ್ರೀತಿಸಿದವರು; ಧ್ಯಾನಿಸಿದವರು. ರೀಲುಗಳ ಮೂಲಕವೇ ಸಮಾಜದ ಜತೆ ಮಾತನಾಡಿದವರು. ಆ ಕೆಲಸಕ್ಕಾಗಿಯೇ ಜನಮೆಚ್ಚುಗೆ ಗಳಿಸಿದವರು.
ಮುಂದುವರಿಯುತ್ತದೆ...
ವೈವಿಧ್ಯ
ಉಪ್ಪಿನಂಗಡಿ ವಾಸ್ತುಗಿಡ ತಜ್ಞರಾದ ಕೈಲಾರ್ ರಾಜ್ ಗೋಪಾಲ್ ಭಟ್ ತೋಟದಲ್ಲಿ ಬೆಳೆದ ಒಂದೇ ತೆಂಗು ಮೂರು ಗಿಡಗಳನ್ನು ಹೊರತಂದು ಅಚ್ಚರಿಮೂಡಿಸಿದೆ.
ಸಾಹಿತ್ಯ
ಹನುಮಾನ್ ಜಯಂತಿ ಕುರಿತಾಗಿ ರಮೇಶ್ ನಾಯಕ್ ಅವರು ಕಳುಹಿಸಿದ ಲೇಖನವನ್ನು ಈ ಕನಸು ಓದುಗರಿಗಾಗಿ ನೀಡುತ್ತಿದ್ದೇವೆ. ನೀವು ಓದಿ ಪ್ರತಿಕ್ರಿಯಿಸಿ.


ರಾಜ್ಯ - ರಾಷ್ಟ್ರ
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೊಂದಿಗೆ ಸಮಾಲೋಚನೆ ನಡೆಸಿದರು.
ಪ್ರಾದೇಶಿಕ ಸುದ್ದಿ
ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವವು ಬುಧವಾರ ರಾಮ ನವಮಿಯಂದು ವಿಜೃಂಭಣೆಯಿಂದ ಜರುಗಿತು. ಚಿತ್ರ:ಭಾಗ್ಯವಾನ್ ಮುಲ್ಕಿ
ಸಾಹಿತ್ಯ
``ಅಚ್ಚರಿಯೇ...ಹೀಗೂ ಉಂಟೇ... ಇದೇನಿದು...'' ಎಂಬಿತ್ಯಾದಿ ಭಾವನೆಗಳು ಮನದಲ್ಲಿ ಮೂಡುವಂತೆ , ಯಕ್ಷರಂಗದಲ್ಲೊಂದು ಹೊಸಛಾಪು ಮೂಡಿಸಿದವರು ಮಂಟಪಪ್ರಭಾಕರ ಉಪಾಧ್ಯಾಯರು.
ಕರ್ನಾಟಕದ ಗಂಡುಕಲೆಯೆಂದೇ ಖ್ಯಾತಿ ಪಡೆದ ಯಕ್ಷಗಾನವನ್ನು ಒಂದು ವಿನೂತನ ರೀತಿಯಲ್ಲಿ ಜನತೆಯ ಮನ ಮುಟ್ಟುವಂತೆ ,ಹೃದಯ ತಟ್ಟುವಂತೆ ಪ್ರದರ್ಶನ ನೀಡುವ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದಾರೆ ಈ ಮಂಟಪ ಉಪಾಧ್ಯಾಯರು. ನಾಲ್ಕೈದು ಶತಮಾನಗಳ ಚರಿತ್ರೆಯನ್ನು ಹೊಂದಿದ ಯಕ್ಷಗಾನದಲ್ಲಿ ಇಂದಿಗೆ ಹತ್ತು ಹಲವು ಪ್ರಯೋಗಗಳು ನಿರಂತರವಾಗಿ ನಡೆದಿದೆ ನಡೆಯುತ್ತಿದೆ. ಯಕ್ಷಗಾನದ ವಿಭಿನ್ನ ಪ್ರಯೋಗಗಳನ್ನವಲೋಕಿಸಿದಾಗ ಕಾಣಸಿಗುವ ಬಹುಮುಖ್ಯ ಅಂಶವೆಂದರೆ `ಏಕವ್ಯಕ್ತಿ' ಯಕ್ಷಗಾನ.
ಈ ಏಕವ್ಯಕ್ತಿ ಯಕ್ಷಗಾನದ ಪ್ರಯೋಗ ಕಳೆದ ಶತಮಾನದ ಐವತ್ತರ ದಶಕದಲ್ಲಿ ಪ್ರಾರಂಭಗೊಂಡರೂ ಅದಕ್ಕೊಂದು ಖಚಿತ ರೂಪ ನೀಡಿದ ಹಿರಿಮೆ ಶತಾವಧಾನಿ ಆರ್. ಗಣೇಶ್ ಅವರಿಗೆ ಸಲ್ಲಬೇಕು.
ಅವರ ಕಲ್ಪನೆ ಯಶಸ್ವಿಯಾಗಿ ಜನಮನಕ್ಕೆ ತಲುಪುವಲ್ಲಿ ಪ್ರಬುದ್ಧ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯಾಯರ ಕೊಡುಗೆ ಗಮನಾರ್ಹ.
ಹತ್ತು ವರ್ಷಗಳ ಹಿಂದೆ ಭಾಮಿನಿಯಿಂದ ಮೊದಲ್ಗೊಂಡು ನಿರಂತರವಾಗಿ 999ಪ್ರದರ್ಶನ ನೀಡಿದ ಮಂಟಪರು ತಮ್ಮ `ಸಾವಿರನೇ' ಪ್ರದರ್ಶನವನ್ನು ಕಲಾಕಾಶಿ ಮೂಡಬಿದಿರೆಯಲ್ಲಿ ನೀಡಲಿದ್ದಾರೆ. ತನ್ಮೂಲಕ ನಿರಂತರ ಕಲೆ, ಸಾಹಿತ್ಯ,ಶಿಕ್ಷಣದಲ್ಲಿ ಖ್ಯಾತಿ ಪಡೆದ ಮೂಡಬಿದಿರೆಯಲ್ಲಿ ಮತ್ತೊಂದು ದಾಖಲೆ ನಿರ್ಮಾಣಗೊಳ್ಳಲಿದೆ
ಮಂಟಪರ ಏಕವ್ಯಕ್ತಿ ಯಕ್ಷಗಾನದ ಅಭಿಯಾನದಲ್ಲಿ ಕೃಷ್ಣಾರ್ಪಣ, ಯಕ್ಷದರ್ಪಣ, ವೇಣು ವಿಸರ್ಜನ, ಯಕ್ಷಕದಂಬ, ಜಾನಕೀ ಜೀವನ, ಯಕ್ಷನವೋದಯ, ಪ್ರಣಯ(ವಂ)ಚಿತೆ ಹಾಗೂ ದಾಸ ದೀಪಾಂಜಲೀ ಮೊದಲಾದ ಮಜಲುಗಳಲ್ಲಿ ವಿಸ್ತರಿಸಿಕೊಂಡು ಇಡೀ ರಾಜ್ಯಾದ್ಯಂತ ಕಲಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ, ಅನಂತ ಪದ್ಮನಾಭ ಪಾಟಕರ ಮದ್ದಲೆ, ಕೃಷ್ಣಯಾಜಿಯವರ ಚೆಂಡೆ ಏಕವ್ಯಕ್ತಿ ಯಕ್ಷಗಾನದ ಹಿಮ್ಮೇಳದ ಪ್ರಮುಖ ಪಾತ್ರವಹಿಸುತ್ತಿದೆ.
ಕಲಾಪ್ರತಿಭೆ:
ಉಡುಪಿ ಜಿಲ್ಲೆಯ ಪಾರಂಪಳ್ಳಿಯವರಾದ ಮಂಟಪರು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದರು.ಕಮಲಶಿಲೆ, ಪೆರ್ಡೂರು , ಇಡಗುಂಜಿ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮುಂದೆ ನಾಲ್ಕು ವರ್ಷಗಳ ಕಾಲ ತಿರುಗಾಟ ಮಾಡಿದರು.
ಸಮಕಾಲೀನ ಯಕ್ಷದಿಗ್ಗಜರಾದ ದಿ.ಕೆರೆಮನೆ ಮಹಾಬಲ ಹೆಗಡೆ , ದಿ.ಕೆರೆಮನೆ ಶಂಭು ಹೆಗಡೆ, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರ ಪ್ರಸಿದ್ಧ ಪಾತ್ರಗಳಿಗೆ ಸ್ತ್ರೀವೇಷ ಮಾಡಿ ಯಕ್ಷರಸಿಕರ ಮನರಂಜಿಸಿದರು.
ಏಕವ್ಯಕ್ತಿಯಕ್ಷಗಾನದ ಮೂಲಕ ಕಲಾಭಿವ್ಯಕ್ತಿಯ ಹೊಸ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಕೊಟ್ಟವರು ಈ ಮಂಟಪರು. ಶ್ರದ್ಧೆ , ಪರಿಶ್ರಮ, ಪಾತ್ರ ತನ್ಮಯತೆಯಿಂದ ಸ್ಥಾಯೀ ಸಂಚಾರಿ ಭಾವಗಳ ಚಿತ್ರವಿನ್ಯಾಸ ನಿಮರ್ಿಸುತ್ತಾ ರಂಗವನ್ನು ರಂಗೇರಿಸಿದರು.
ಪ್ರಸ್ತುತ ಉದ್ಯಮಿಯಾಗಿ ಬೆಂಗಳೂರಿನಲ್ಲಿ ಯಶಸ್ವೀ ಕಾರ್ಯ ನಿರ್ವಹಿಸುತ್ತಿರುವ ಮಂಟಪರು ವೃತ್ತಿಅರಸುತ್ತಾ ತಮ್ಮಲ್ಲಿಗೆ ಬಂದವರಿಗೊಂದು ಸೂರು ಒದಗಿಸಿದವರು.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಮಂಟಪರು ಕಲಾಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮೆರೆಯಬೇಕೆಂಬ ಹಂಬಲ ಹೊಂದಿದ್ದಾರೆ.
ಏಕವ್ಯಕ್ತೀಯ ಯಕ್ಷಗಾನ ಇವರ ಆತ್ಮ ಸಂತೋಷದ ವಿಷಯ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಯಾವುದೇ ಆರ್ಥಿಕ ಪ್ರತಿಫಲ ನಿರೀಕ್ಷಿಸದ ಮಂಟಪರು ರಂಗದಲ್ಲಿ ಕುಣಿದು ದಣಿದು ತೃಪ್ತಿಪಟ್ಟರು.
ಯಕ್ಷಗಾನವನ್ನು ನಿಜವಾದ ಅರ್ಥದಲ್ಲಿ ತಪ್ಪಸ್ಸೆಂದು ಭಾವಿಸಿ ಕಲಾಸಾಧ್ಯತೆಗಳಲ್ಲಿನ ಹೊಸ ಹೊಸ ಆಯಾಮಗಳನ್ನು ಚಿಂತಿಸುತ್ತ ಅದನ್ನು ಪ್ರದರ್ಶನದಲ್ಲಿ ಅಳವಡಿಸಿ ಪ್ರೇಕ್ಷಕವರ್ಗಕ್ಕೆ ಮುದನೀಡಿದವರು ಮಂಟಪ ಉಪಾಧ್ಯಾಯರು.
ನಡುಮನೆಯಲ್ಲಿ ಯಕ್ಷಗಾನದ ಮೂಲಕ ಆತ್ಮೀಯ ವಲಯದಲ್ಲೂ ಸಹೃದಯ ಸ್ಪಂದನ ಉಂಟುಮಾಡಿದರು. ಸುಸಂಸ್ಕೃತ ತಂಡದೊಂದಿಗೆ ತಿರುಗಾಡುತ್ತ ಯಕ್ಷಗಾನ ಕಲಾವಿದರ ಘನತೆ ಗೌರವಗಳನ್ನು ಎತ್ತಿ ಹಿಡಿದವರು.
ಪ್ರಾದೇಶಿಕ ಸುದ್ದಿ
ಏಪ್ರಿಲ್ 2 ರಂದು ವಿದ್ಯಾಗಿರಿಯಲ್ಲಿ
ಮೂಡಬಿದಿರೆ: ಯಕ್ಷಗಾನ ರಂಗಭೂಮಿಯ ಹೊಸ ಸಾಧ್ಯತೆಯ ಸಾಧಕ, ಮಂಟಪ ಪ್ರಭಾಕರ ಉಪಾಧ್ಯಾಯ ಅವರ ಏಕವ್ಯಕ್ತಿ ಯಕ್ಷಗಾನದ `ಸಾವಿರದ ಸಂಭ್ರಮ' ವೈವಿಧ್ಯಮಯ ಕಲಾ ಪ್ರಕಾರಗಳೊಂದಿಗೆ ಏಪ್ರಿಲ್ 2ರಂದು ದಿನಪೂರ್ತಿ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ ಎಂದು ಮಂಟಪ ಏಕವ್ಯಕ್ತಿ ಸಾವಿರದ ಸಂಭ್ರಮ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭ , ಮೋಹಿನಿ ಆಟ್ಟಂ, ಕಥಕ್ಕಳಿ, ಮಂಟಪ ಹಾಗೂ ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ಸಂವಾದ, ಏಕವ್ಯಕ್ತೀಯಕ್ಷಗಾನ ಸಾವಿರದ ಪ್ರದರ್ಶನ, ಗ್ರಂಥ ಅನಾವರಣ, ಅಭಿನಂದನೆ ಈ ರೀತಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಬೆಳಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದೆ. ಕೆ.ಐ.ಎ.ಡಿ.ಬಿ. ಬೆಂಗಳೂರು ಇದರ ಸಿ.ಇ.ಒ. ಟಿ.ಶ್ಯಾಮ್ ಭಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಿತ್ರನಟ ಎಸ್.ಶಿವರಾಮ್ ವಹಿಸಲಿದ್ದಾರೆ.
ಸಂಜೆ 6.15ರಿಂದ ಅತಿಥಿ ಗಣ್ಯರೊಂದಿಗೆ ಸನ್ಮಾನಿತರ ಶೋಭಾಯಾತ್ರೆ ನಡೆಯಲಿದೆ. 6.30ಕ್ಕೆ ಅಭಿನಂದನಾ ಸಮಾರಂಭ ನಡೆಯಲಿದ್ದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರು ಆಶೀರ್ವಚನ ನೀಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅನನ್ಯವ್ಯಕ್ತಿ ಎಂಬ ಅಭಿನಂದನಾ ಗ್ರಂಥ ಅನಾವರಣಗೊಳ್ಳಲಿದೆ.
ಬೆಳಗ್ಗೆ 10ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು ರಾತ್ರಿ 9ರ ತನಕ ನಿರಂತರ ಕಾರ್ಯಕ್ರಮ ನಡೆಯಲಿದೆ.
ವಾಹನ ವ್ಯವಸ್ಥೆ: ಕಾರ್ಯಕ್ರಮದಲ್ಲಿ ಕಲಾಸಕ್ತರು ಭಾಗವಹಿಸಲು ಅನುಕೂಲವಾಗುವಂತೆ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ವಿದ್ಯಾಗಿರಿಯಿಂದ ಮಂಗಳೂರು, ಉಡುಪಿ, ಕಾರ್ಕಳ, ಪುತ್ತೂರು, ಬೆಳ್ತಂಗಡಿ ಭಾಗಗಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.
ಸಾಧನೆ: ಶತಾವಧಾನಿ ಆರ್. ಗಣೇಶ್ ಅವರ ಪರಿಕಲ್ಪನೆಯೊಂದಿಗೆ ಪ್ರಬುದ್ಧ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನವು ಹತ್ತು ವರ್ಷಗಳ ಹಿಂದೆ ಭಾಮಿನಿಯಿಂದ ಆರಂಭಗೊಂಡಿತು. ಕೃಷ್ಣಾರ್ಪಣ, ಯಕ್ಷ ದರ್ಪಣ, ವೇಣು ವಿಸರ್ಜನ, ಯಕ್ಷಕದಂಬ, ಜಾನಕೀಜೀವನ, ಯಕ್ಷನವೋದಯ, ಪ್ರಣಯ(ವಂ)ಚಿತೆ ಹಾಗೂ ದಾಸ ದೀಪಾಂಜಲೀ ಹೀಗೆ ಹಲವು ಮಜಲುಗಳಲ್ಲಿ ವಿಸ್ತರಿಸಿಕೊಂಡು ಕನರ್ಾಟಕದಾದ್ಯಂತ ಯಕ್ಷರಸಿಕರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
999ನೇ ಪ್ರದರ್ಶನ ಶಿವಮೊಗ್ಗದಲ್ಲಿ 1000ನೇ ಪ್ರದರ್ಶನ ಮೂಡಬಿದಿರೆಯಲ್ಲಿ ನಡೆಯುತ್ತಿರುವುದು ಗಮನಾರ್ಹ ಅಂಶ.
ಪ್ರಾದೇಶಿಕ ಸುದ್ದಿ
ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪಡೆದಿದ್ದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ವಿಧಾನ ಸೌಧದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನುಬಳಿಗಾರ್ ಅವರು ಮುಖ್ಯಮಂತ್ರಿ ಚಂದ್ರು ರಂಗಭೂಮಿಯ ಅದ್ಭುತ ಪ್ರತಿಭೆ. 450 ಚಲನಚಿತ್ರಗಳಲ್ಲಿ ನಟಿಸಿರುವ ಇವರು ಸಣ್ಣ ಪಾತ್ರವಾಗಿರಲಿ ಅಥವಾ ಪೋಷಕ ಪಾತ್ರವಾಗಿರಲಿ ಗುಣಾತ್ಮಕ ಅಭಿನಯ ನೀಡಿದ್ದಾರೆ. ಯಾವುದೇ ಪಕ್ಷದಲ್ಲಿರಲಿ ಅವರ ಕೆಲಸ ಕನ್ನಡದ ಕೆಲಸ, ಅವರ ಪಕ್ಷ ಕನ್ನಡದ ಪಕ್ಷ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಾಡಿನ ಕನ್ನಡ ಪರ ಸಂಘಟನೆಗಳ ಮತ್ತು ಹಿರಿಯ ವಿದ್ವಾಂಸರ ನಿಯೋಗವನ್ನು ಕರೆದೊಯ್ದು ನೆನಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ, ಕನ್ನಡ ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ದೊರಕಿಸುವಲ್ಲಿ ಅವರ ಪಾತ್ರ ಪ್ರಮುಖವಾದ್ದು. ಗಡಿ ಪ್ರದೇಶಗಳ ಒಳಗೆ ಮತ್ತು ಹೊರಗೆ ಅವರು ಮಾಡಿರುವ ಕೆಲಸ ಸ್ತುತ್ಯಾರ್ಹವೆಂದರು.
ಆರೋಗ್ಯ
ಕ್ಷಯ ರೋಗ ಎಲ್ಲಿದ್ದರೂ ಎಲ್ಲೆಡೆ ಇದ್ದಂತೆ. ಭಾರತ ದೇಶದಲ್ಲಿ ಪ್ರತಿ ಒಂದೂವರೆ ನಿಮಿಷಕ್ಕೆ ಒಬ್ಬರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದು, ಕಫದಲ್ಲಿ ಕ್ಷಯರೋಗ ಕ್ರಿಮಿಗಳನ್ನು ಹೊಂದಿರುವ ರೋಗಿಗೆ ಸೂಕ್ತ ಸಮಯದಲ್ಲಿ ಕ್ಷಯರೋಗ ಪತ್ತೆ ಹಚ್ಚಿ ಚಿಕೆತ್ಸೆ ನೀಡದಿದ್ದಲ್ಲಿ ಆ ರೋಗಿಯು ಒಂದು ವರ್ಷದಲ್ಲಿ 10 ರಿಂದ 15 ಆರೋಗ್ಯವಂತರಿಗೆ ರೋಗವನ್ನು ಹರಡುತ್ತಾನೆ. ರೋಗ ಕಂಡ ತಕ್ಷಣ ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆ ನೀಡುವುದರಿಂದ ಕ್ಷಯರೋಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಮಾರ್ಚ್ 24ರಂದು ವಿಶ್ವದಾದ್ಯಂತ ಕ್ಷಯರೋಗ ತಡೆ ದಿನಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷಯರೋಗ ಹಾಗೂ ಅದರ ಚಿಕಿತ್ಸಾ ವಿಧಾನದ ಬಗ್ಗೆ ಕಿರು ಪರಿಚಯ ಮಾಡಿಕೊಳ್ಳುವ ಪ್ರಯತ್ನವೇ ಈ ಲೇಖನ.
ಕ್ಷಯರೋಗ ಹರಡುವ ಬಗೆ:
ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯುಬರ್ಕುಲೈ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಶ್ವಾಸಕೋಶದಲ್ಲಿ ಕ್ಷಯರೋಗ ಕ್ರಿಮಿಯುಳ್ಳ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಲಕ್ಷಾಂತರ ಕ್ರಿಮಿಗಳು ಬಿಡುಗಡೆಯಾಗುವ ತುಂತುರುಗಳಿಂದ ಗಾಳಿಯ ಮೂಲಕ ಅರೋಗ್ಯವಂತನ ಶ್ವಾಸಕೋಶಕ್ಕೆ ಸೇರಿ ಕ್ಷಯರೋಗ ಹರಡುತ್ತದೆ. ಶ್ವಾಸ ಕೋಶದ ಕ್ಷಯ ಒಬ್ಬರಿಂದ ಒಬ್ಬರಿಗೆ ಹರಡುವಂತಹುದು. ಹೆಚ್.ಐ.ವಿ. ಸೋಂಕಿರುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಆ ವ್ಯಕ್ತಿಗಳು ಕ್ಷಯರೋಗದ ಸೋಂಕಿಗೆ ಬಹು ಬೇಗನೆ ತುತ್ತಾಗುತ್ತಾರೆ. ಕ್ಷಯರೋಗವು ಶ್ವಾಸಕೋಶವಲ್ಲದೆ ದೇಹದ ಬೇರೆ ಅಂಗಾಂಗಗಳಲ್ಲಿ ಕಾಣಿಸಿಕೊಳ್ಳಬಹುದು. ಇಂತಹ ರೋಗಿಗಳು ಮತ್ತೊಬ್ಬರಿಗೆ ಕ್ಷಯರೋಗವನ್ನು ಹರಡುವುದಿಲ್ಲ. ಈ ರೋಗದಲ್ಲಿ ಮೂಳೆ ಮತ್ತು ಕೀಲುಗಳ ಕ್ಷಯ, ಕರುಳು ಕ್ಷಯ, ಪುರುಷ ಮತ್ತು ಸ್ತ್ರೀ ಅಂಡಾಶಯ ಹಾಗೂ ಜನನೇಂದ್ರಿಯಗಳ ಕ್ಷಯ, ಮೂತ್ರ ಪಿಂಡ ಮತ್ತು ಮೂತ್ರ ಕೋಶ ಕ್ಷಯ, ಮೆದುಳು ಮತ್ತು ಮೆದುಳು ಪೊರೆ ಹಾಗೂ ಚರ್ಮರೋಗಗಳ ಕ್ಷಯವೆಂಬ ವಿಧಗಳಿವೆ.
ಲಕ್ಷಣಗಳು:
ಸತತವಾಗಿ ಎರಡು ವಾರಗಳಿಗಿಂತ ಹೆಚ್ಚಿನ ಅವಧಿವರೆಗಿನ ಕೆಮ್ಮು, ಜ್ವರ ಅದರಲ್ಲೂ ಸಂಜೆಯ ವೇಳೆ ಹೆಚ್ಚಾಗಿರುವುದು, ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು, ಕಫದಲ್ಲಿ ರಕ್ತ ಬೀಳುವುದು, ಕುತ್ತಿಗೆ, ಕಂಕಳು ಹಾಗೂ ತೊಡೆ ಸಂದುಗಳಲ್ಲಿ ಗಂಟು ಕಾಣಿಸಿಕೊಳ್ಳುವುದು ರೋಗದ ಪ್ರಮುಖ ಲಕ್ಷಣಗಳಾಗಿವೆ. ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ.
ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು:
ಕ್ಷಯ ರೋಗಿಗಳು ಕೆಮ್ಮುವಾಗ ಹಾಗು ಸೀನುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು ಹಾಗೂ ರೋಗಿಯು ಮನಬಂದ ಕಡೆ ಉಗಿಯಬಾರದು. ಕಫವನ್ನು ಡಬ್ಬಿಯಲ್ಲಿ ಶೇಖರಿಸಿ ಗಟ್ಟಿಯಾಗಿ ಮುಚ್ಚಿ ಸುಟ್ಟುಹಾಕಬೇಕು ಇಲ್ಲವೇ ಗುಂಡಿ ತೋಡಿ ಮುಚ್ಚಬೇಕು ಹಾಗೂ ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ಹಾಕಿಸಬೇಕು.
ಡಾಟ್ಸ್ ಚಿಕಿತ್ಸೆ:
ಡಾಟ್ಸ್ ಕೇಂದ್ರದಲ್ಲಿ ಕ್ಷಯರೋಗಕ್ಕೆ ನೇರ ಮೇಲ್ವಿಚಾರಣೆ ಮೂಲಕ ಅಲ್ಪಾವಧಿ ಚಿಕಿತ್ಸೆ ನೀಡಿ ರೋಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಗುಣಪಡಿಸಲಾಗುವುದು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಉಪಕೇಂದ್ರಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಆಯ್ದ ಖಾಸಗಿ ವೈದ್ಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಡಾಟ್ಸ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶಂಕಿತ ಕ್ಷಯರೋಗಿಗಳಿಗೆ ಸರಕಾರ ದ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಕಫ ಪರೀಕ್ಷೆ ನಡೆಸಿದ ನಂತರ ಕ್ಷಯವೆಂದು ಖಚಿತವಾದಲ್ಲಿ ಮಾತ್ರ ಡಾಟ್ಸ್ನಲ್ಲಿ ಚಿಕಿತ್ಸೆಗೊಳಪಡಿಸಲಾಗುವುದು. ಕಫದಲ್ಲಿ ಕ್ಷಯ ಕ್ರಿಮಿಯುಳ್ಳ ರೋಗಿಯ ಮನೆಯ ಸಂಪರ್ಕದವರಿಗೂ ಸಹ ಅತ್ಯಾವಶ್ಯವಾಗಿ ಕಫ ಪರೀಕ್ಷೆ ಮಾಡಿಸಬೇಕು. ಅಂಥವರ ಮನೆಯಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ 6 ತಿಂಗಳ ಔಷಧಿಯನ್ನು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಬಹುದು. ನಿಗದಿಪಡಿಸಿ ಔಷಧಿಯನ್ನು ಪೂರ್ಣ ಅವಧಿ(6 ರಿಂದ 8 ತಿಂಗಳು)ವರೆಗೆ ಮಧ್ಯದಲ್ಲಿ ಬಿಡದೇ ಸೇವಿಸಬೇಕು. ತಪ್ಪಿದಲ್ಲಿ ಅತ್ಯಂತ ತೀವ್ರ ಹಂತದ ರೀತಿಯ ಕ್ಷಯರೋಗ ಉಂಟಾಗುವ ಸಾಧ್ಯತೆಯಿರುತ್ತದೆ. ಯಾವುದೇ ವ್ಯಕ್ತಿ ಸತತವಾಗಿ ಎರಡು ವಾರಗಳ ಮೇಲ್ಪಟ್ಟು ಕೆಮ್ಮುತ್ತಿದ್ದರೆ ಅವರ ಕಫವನ್ನು ತಪ್ಪದೇ 2 ಬಾರಿ ಪರೀಕ್ಷಿಸಿಕೊಳ್ಳತಕ್ಕದ್ದು.
ಬಳ್ಳಾರಿ ಜಿಲ್ಲೆಯಲ್ಲಿ ಜನವರಿ 2009 ರಿಂದ 2010ರ ಫೆಬ್ರುವರಿ ಅಂತ್ಯದವರೆಗೆ 18088 ರೋಗಿಗಳು ಕಫ ಪರೀಕ್ಷೆಗೆ ಒಳಗಾಗಿದ್ದಾರೆ. ಅದೇ ರೀತಿ 3300 ಕ್ಷಯ ರೋಗಿಗಳನ್ನು ಹೊಸದಾಗಿ ಪತ್ತೆ ಹಚ್ಚಲಾಗಿದ್ದು, ಈ ಪೈಕಿ ಕಫದಲ್ಲಿ ಕ್ಷಯರೋಗ ಕ್ರಿಮಿಯುಳ್ಳ 1319 ರೋಗಿಗಳನ್ನು ಗುರುತಿಸಿ ಡಾಟ್ಸ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಹೆಚ್. ನಿಜಾಮುದ್ದೀನ್ ತಿಳಿಸಿದ್ದಾರೆ. ಸಾರ್ವಜನಿಕರು ಕ್ಷಯರೋಗ ನಿಯಂತ್ರಣ ಮಾಡುವಲ್ಲಿ ಸರಕಾರದಿಂದ ಸಿಗುವ ಉಚಿತ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸಹಕಾರ ನೀಡುವುದು ಅತ್ಯಾವಶ್ಯವಾಗಿದೆ.
ಲೇಖನ: ರೂಪಕಲಾ
ವಾರ್ತಾ ಇಲಾಖೆ, ಬಳ್ಳಾರಿ
ಪ್ರಾದೇಶಿಕ ಸುದ್ದಿ
ವಿಟ್ಲ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಾರ್ಚ್ 24ರ ರಾಮನವಮಿಯಿಂದ ಮೊದಲ್ಗೊಂಡು ಮಾರ್ಚ್ 30ರ ಹನುಮಜ್ಜಯಂತಿ ವರೆಗೆ ಅಖಂಡ ನಾಮ ಸಂಕೀರ್ತನೆ ನಡೆಯಲಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ. ಮಾ.30ರಂದು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ನಿರ್ದೇಶನದಂತೆ, ವೇ.ಮೂ.ಕುರೋಮೂಲೆ ಶ್ಯಾಮ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ಹನುಮೋತ್ಸವ ಮತ್ತು ಶ್ರೀ ಪಂಚಮುಖಿ ಆಂಜನೇಯ ಮಹಾಯಾಗವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಬೆಳಿಗ್ಗೆ ಗಂಟೆ 10ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದ.ಕ.ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಕಾರವಾರ ಆಕಾಶವಾಣಿ ನಿಲ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ, ಬೆಂಗಳೂರು ಎಂ.ಆರ್.ಜಿ.ಗ್ರೂಪ್ನ ಸಿ.ಎಂ.ಡಿ. ಪ್ರಕಾಶ್ ಶೆಟ್ಟಿ, ಮಂಗಳೂರು ಭಂಡಾರಿ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಬಿ.ಭುಜಬಲಿ, ಬಿಸಿರೋಡ್ ಉದ್ಯಮಿ ಗಣೇಶ್ ಸೋಮಯಾಜಿ ಭಾಗವಹಿಸಲಿದ್ದಾರೆ. ಬಳಿಕ ಯಾಗ ಪೂರ್ಣಾಹುತಿ, ಸಾಮೂಹಿಕ ಶ್ರೀ ಹನುಮದ್ವ್ರತ ಪೂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿಶೇಷ ಬೆಳ್ಳಿ ರಥೋತ್ಸವ ನಡೆಯಲಿದೆ.
ವರದಿ: ಜ್ಯೋತಿಪ್ರಕಾಶ್ ಪುಣಚ
ಪ್ರಾದೇಶಿಕ ಸುದ್ದಿ
ಬೃಹತ್ ರಥವನ್ನು ಮುತ್ತಪ್ಪ ರೈ ದಂಪತಿಗಳು ಪುತ್ತೂರು ಮಹಾಲಿಂಗೇಶ್ವರ ಸನ್ನಿದಿಗೆ ಸಮರ್ಪಿಸಿದರು.
ಪ್ರಾದೇಶಿಕ ಸುದ್ದಿ
ಪಡುಬಿದ್ರಿ, ಮಾ22 : ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ರವಿವಾರ ಹಗಲು ರಥೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು.
ಚಿತ್ರ:ಭಾಗ್ಯವಾನ್ ಸನಿಲ್
ಪ್ರಾದೇಶಿಕ ಸುದ್ದಿಮಂಗಳೂರು: ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಆಶ್ರಯದಲ್ಲಿ ಯಕ್ಷಗಾನ ಕಲಾವಿದರಿಗೆ 2008 ಮತ್ತು 2009 ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಶಾಸಕ ವಸಂತ ಬಂಗೇರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಕಲಾವಿದರಿಗೆ ಆರೋಗ್ಯ ವಿಮೆ, ನಿವೃತ್ತಿ ವಿಮೆ,ಮತ್ತು ನಿವೃತ್ತಿ ವೇತನ ದೊರಕಿಸಿ ಕೊಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖಾ ಕಾರ್ಯದರ್ಶಿ ಬಿ. ಆರ್. ಜಯರಾಮರಾಜೇ ಅರಸ್ ಅವರು 400 ಯಕ್ಷಗಾನ ಕಲಾವಿದರಿಗೆ ಸರ್ಕಾರ ವತಿಯಿಂದ ಮಾಶಸನ ನೀಡಲು ಚಿಂತನೆ ನಡೆಸಲಾಗಿದ್ದು, ಇದಕ್ಕೆ ಮುಖ್ಯ ಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ,ಮಾಶಸನವನ್ನು 3 ಸಾವಿರ ರೂಪಾಯಿಗಳಿಂದ 12 ಸಾವಿರಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ. ಮುಂದಿನ ವರ್ಷದಿಂದ ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿಯನ್ನು 1 ಲಕ್ಷ ಮೊತ್ತದೊಂದಿಗೆ ಪ್ರದಾನ ಮಾಡಲಾಗುವುದು.ಯಕ್ಷಗಾನಕ್ಕೆ ಸಾಂಸ್ಕೃತಿಕ ಪರಂಪರೆ ಇರುವ ಹಿನ್ನಲೆಯಲ್ಲಿ ಯುನೆಸ್ಕೋ ಮನ್ನಣೆ ಸಿಗುವಂತಾಗಲು ಪ್ರಯತ್ನಗಳು ಮುಂದುವರೆದಿವೆ ಎಂದರು.
ಜಿಲ್ಲಾ ಉಸ್ತುವರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಪ್ರಶಸ್ತಿಯ ಕಿರು ಹೊತ್ತಿಗೆ ಯನ್ನು ಬಿಡುಗಡೆ ಗೊಳಿಸಿದರು. ವಿಧಾನ ಪರಿಷತ್ತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಎಚ್.ಸುಬ್ಬಣ್ಣ ಭಟ್, ಎಂ. ಕೆ. ರಮೇಶ್ ಆಚಾರ್ಯ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.ಅಕಾಡೆಮಿ ರಿಜಿಸ್ಟ್ರಾರ್ ನಾರಾಯಣ ಸ್ವಾಮಿ ಸ್ವಾಗತಿಸಿದರು.ಅಕಾಡರಮಿ ಸದಸ್ಯ ಮುರಳಿ ಕಡೆಕಾರ್ ಅವರು ವಂದಿಸಿದರು.ಪ್ರೊ.ಸುಗ್ಗನಬಳ್ಳಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಪ್ರಾದೇಶಿಕ ಸುದ್ದಿ
ಉಚಿತ ಕೋಚಿಂಗ್ ಕ್ಲಾಸ್ ಗೆ ಚಾಲನೆ ನೀಡುತ್ತಿರುವ ಡಾ.ಎಂ.ಮೋಹನ ಆಳ್ವ
ಮುಲ್ಕಿ: ಪಟ್ಟಣ ಪ್ರದೇಶದ ಶ್ರೀಮಂತ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಕೋಚಿಂಗ್ ಕ್ಲಾಸ್ ನಡೆಸುವ ಮೂಲಕ ಅತ್ಯಧಿಕವಾಗಿ ಹಣ ಬಾಚುತ್ತಿರುವ ಸಂಸ್ಥೆಗಳಿರುವ ಈ ದಿನಗಳಲ್ಲಿ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಮೂಲಕ ಮೂಲ್ಕಿ 9ಮಾಗಣೆ(32ಗ್ರಾಮ)ವ್ಯಾಪ್ತಿಯಲ್ಲಿ ಬರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ ಕೋಚಿಂಗ್ ನೀಡುವ ಕಾರ್ಯ ಶ್ಲಾಘನೀಯ ಎಂದು ಆಳ್ವಾಸ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಹೇಳಿದರು.
ಅವರು ರವಿವಾರ ಮೂಲ್ಕಿ ಬಪ್ಪನಾಡು ಜ್ಞಾನ ಮಂದಿರದಲ್ಲಿ ಶ್ರೀ ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ 2010-11 ಸಾಲಿನ ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ನೀಡಲಾಗುವ ಕೋಚಿಂಗ್ ಕ್ಲಾಸ್ ಉದ್ಘಾಟಿಸಿದ ಬಳಿಕ ಮಾತನಾಡಿದರು.
ಜೀವನ ನಿರ್ಧರಿಸುವ ಪದವಿಪೂರ್ವ ಶಿಕ್ಷಣದ ಜತೆಗೆ ಸಿಇಟಿ ಪರೀಕ್ಷೆ ಎದುರಿಸಲು ಪೂರ್ವಭಾವಿ ಸಿದ್ದತೆಗಳು ಅಧಿಕವಾಗಿದೆ ಎಂದ ಆಳ್ವಾ ವಿದ್ಯಾರ್ಥಿಗಳು ಮುಂಜಾನೆ4:45ಕ್ಕೆ ಎದ್ದು ಪಠ್ಯಗಳನ್ನು ಮನನ ಮಾಡಿಕೊಳ್ಳುವುದು ಮಾತ್ರವಲ್ಲದೆ ತಮ್ಮ 2ವರ್ಷದ ಶಿಕ್ಷಣ ಅವಧಿಗೆ ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಮಾತ್ರವಲ್ಲ ಮುಂದಿನ 2ವರ್ಷ ಟಿ.ವಿ ಮತ್ತು ಮೊಬೈಲ್ ನಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಐಎಎಸ್,ಐಪಿಎಸ್,ಕೆ.ಎ.ಎಸ್ ಮುಂತಾದ ಹಲವು ಪರೀಕ್ಷೆಗಳು ನಡೆಯುತ್ತಿದ್ದು ಪೋಶಕರು ಈಬಗ್ಗೆಯೂ ಗಮನ ಹರಿಸಬೇಕು ಎಂದ ಅವರು ಪರಿಶಿಷ್ಟ ಪಂಗಡದ ಕೊರಗರು ಮತ್ತು ಮನ್ಸ ಜನಾಂಗದಿಂದ ಇಂದಿನ ವರೆಗೂ ಯಾರೊಬ್ಬರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರುವುದರಿಂದ ಅವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಬಹಳ ಅಗತ್ಯ ಎಂದರು.
ಕಾರ್ಯಕ್ರಮದ ಅತಿಥಿಯಾಗಿ ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಅರವಿಂದ ಜೋಶಿ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ, ಟ್ರಸ್ಟಿಗಳಾದ ಬಿ.ಪಿ.ಕಿಶೋರ್,ಪ್ರಭಾ ಶಂಕರ್ ರೈ, ಮುರಳೀಧರ ಭಂಡಾರಿ,ಕರುಣಾಕರ ಶೆಟ್ಟಿ,ಡಾ.ಎಂ.ಎ.ಆರ್ ಕುಡ್ವಾ, ಸಂಯೋಜಕ ಪ್ರೊ.ವೆಂಕಟೇಶ ಭಟ್ ಉಪಸ್ಥಿತರಿದ್ದರು.
ಬಿ.ಪಿ.ಕಿಶೋರ್ ಸ್ವಾಗತಿಸಿದರು. ಎಡ್ಮೆಮಾರ್ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಪ್ರಭಾ ಶಂಕರ ರೈ ವಂದಿಸಿದರು. ಮೂರನೇ ವರ್ಷದ ಉಚಿತ ಸಿಇಟಿ ತರಬೇತಿಗಾಗಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಅರ್ಹ ಮದ್ಯಮ ಮತ್ತು ಬಡ ವರ್ಗದ 75 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಚಿತ್ರ-ವರದಿ: ಭಾಗ್ಯವಾನ್ ಮುಲ್ಕಿ
ರಾಜ್ಯ - ರಾಷ್ಟ್ರ
ಮಂಗಳೂರು: 2009ರ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಪತ್ರಕರ್ತ,ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ.ಆದೂರು ಅವರಿಗೆ ರವಿವಾರ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರದಾನಿಸಿ ಗೌರವಿಸಲಾಯಿತು. ಮೇ 26, 2009ರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಮಳೆ ಬಿದ್ದ ಮೇಲೆ ಹೊರಜಗತ್ತಿಗಿವರು ಅಜ್ಞಾತ ವರದಿಗೆ ಪ್ರಶಸ್ತಿ ಲಭಿಸಿತ್ತು.ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೆ ಅರಸ್(ಭಾ.ಆ.ಸೇ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ವ್ಯಕ್ತಿನಿಷ್ಠೆ, ಪಕ್ಷನಿಷ್ಠೆಗಳಿಂದ ಹೊರತಾಗಿ ವೃತ್ತಿನಿಷ್ಠೆಯನ್ನು ಮಾಧ್ಯಮ ಪ್ರತಿನಿಧಿಗಳು ಪಾಲಿಸಬೇಕು. ಗ್ರಾಮೀಣ ಪ್ರದೇಶದ ವರದಿಗಾರರೂ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಾರೆ. ಅಲ್ಲಿ ಗ್ರಾಮೀಣ ವರದಿಗಾರರು, ಜಿಲ್ಲಾ ವರದಿಗಾರರು, ರಾಜ್ಯ ಮಟ್ಟದ ವರದಿಗಾರರು ಎಂಬ ತಾರತಮ್ಯ ಬೇಧ ಭಾವಗಳು ಬೇಡ. ಜನತೆಯೆಡೆಗೆ ಮಾಧ್ಯಮ ಪ್ರತಿನಿಧಿಗಳು ಸಾಗಿ, ಪ್ರತ್ಯಕ್ಷ ವಿಚಾರಗಳನ್ನು ಪರಾಂಬರಿಸಿ ಸತ್ಯಾಸತ್ಯತೆಗಳನ್ನು ಜನತೆಗೆ, ಸರಕಾರಕ್ಕೆ ತಿಳಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಜಯರಾಮರಾಜೆ ಅರಸ್ ಅಭಿಪ್ರಾಯ ಪಟ್ಟರು.
ರಾಜ್ಯ ಸರಕಾರದಿಂದ ಪ್ರಶಸ್ತಿ
ಇಂದು ರಾಜ್ಯ ಸರಕಾರ ಮಾಡಬೇಕಾದ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪತ್ರಕರ್ತರ ಸಂಘ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ವರದಿಗಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯವನ್ನು ಸಂಘ ನಡೆಸುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಇಂತಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಬೇಕಾಗಿದೆ. ಈ ಬಗ್ಗೆ ಸೂಕ್ತ ಮನವರಿಕೆಯನ್ನು ಸರಕಾರಕ್ಕೆ ಮಾಡಲಾಗುವುದು ಎಂದು ಅರಸ್ ಅಭಿಪ್ರಾಯಿಸಿದರು.
ಪಠ್ಯಪುಸ್ತಕಗಳಲ್ಲಿ ಬದಲಾವಣೆ ಬರಲಿ:
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಹರೀಶ್ ಕೆ.ಆದೂರು ಅವರು ಇಂದು ಪತ್ರಿಕೋದ್ಯಮ ವಿಭಾಗದ ಪಠ್ಯಕ್ರಮಗಳಲ್ಲಿ ಸೂಕ್ತ ಬದಲಾವಣೆ ಆಗಬೇಕಾಗಿದೆ. ವಿ.ವಿ.ಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮಾಧ್ಯಮ ಜಗತ್ತು ಕ್ಷಿಪ್ರ ಪ್ರಗತಿಯನ್ನು ಕಾಣುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಪತ್ರಿಕೋದ್ಯಮ ಪಠ್ಯಕ್ರಮದಲ್ಲೂ ಅಂತಹುದೇ ಬದಲಾವಣೆ ಬರಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಹೆತ್ತವರಿಗೆ ಸಮರ್ಪಣೆ:
ಪ್ರತಿಷ್ಠಿತ ಪ.ಗೋ.ಪ್ರಶಸ್ತಿಗೆ ಭಾಜನರಾದ ಹರೀಶ್ ಕೆ.ಆದೂರು ಪ್ರಶಸ್ತಿಯನ್ನು ತನ್ನ ಹೆತ್ತವರಿಗೆ ಸಮರ್ಪಿಸಿದರು. ತನ್ನ ಇಂದಿನ ಈ ಸಾಧನೆಗೆ ಹೆತ್ತವರೇಕಾರಣ. ಆ ಕಾರಣಕ್ಕಾಗಿ ಪ್ರಶಸ್ತಿಯನ್ನು ಅವರಿಗೆ ಸಮರ್ಪಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.
ಪ್ರಶಸ್ತಿ ಮೊತ್ತ ರೂ.5001/- , ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರ್ಷ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್,ಟಿ,ಬಾಳೇಪುಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ಸಂಘದ ಸದಸ್ಯ ಪುಷ್ಪರಾಜ್ ವಂದಿಸಿದರು. 
ವಿಚಾರ
ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ. ೩೩ರಷ್ಟು ಸ್ಥಾನ ಮೀಸಲು ಪಡೆಯುವ ಮೂಲಕ
ತಾವೀಗ ಅಬಲೆಯರು ಎಂಬುದನ್ನು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಪುರುಷನ ಸಹಾನುಭೂತಿ
ತನಗೆ ಬೇಕಿಲ್ಲ, ಪುರುಷನಿಗೆ ಸರಿ ಸಮಾನವಾಗಿ ನಿಲ್ಲುವ ತಾಕತ್ತು, ದೃಢತೆ ತನಗಿದೆ
ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಮಹಿಳೆಯ ಮನಸ್ಸಿನ ಅಳುಕು ಹೊರ ಬಿದ್ದಿದೆ.
ರಾಜಕಾರಣ ಮಾಡಲು ಇನ್ನು ಮುಂದೆ ಮಹಿಳೆ ಪುರುಷನ ಜತೆ ಹೊಡೆದಾಡಬೇಕಾಗಿಲ್ಲ. ಮಹಿಳೆಗೀಗ
ಮಹಿಳೆಯೇ ಎದುರಾಳಿ. ಮಹಿಳೆಗೀಗ ಮಹಿಳೆಯೇ ವೈರಿ. ಮಹಿಳೆಯ ವಿರುದ್ಧವೇ ರಾಜಕೀಯ ಬಲೆ
ಹೆಣೆಯಬೇಕಾದ ಅನಿವಾರ್ಯತೆ ಆಕೆಗೆ.
ತೊಟ್ಟಿಲು ತೂಗುವ ಕೈ ದೇಶವನ್ನೇ ಆಳೀತು? ಎಂದೀಗ
ನಾವು ಹೆಮ್ಮೆ ಪಡಬೇಕಾಗಿದ್ದಿಲ್ಲ. ಕಾರಣ, ಆಕೆಯೀಗ ಆರಿಸಿ ಬರುವುದು ಮೀಸಲು
ಕ್ಷೇತ್ರದಿಂದ. ಇನ್ನೊಬ್ಬ ಮಹಿಳೆಯ ವಿರುದ್ಧ ಆಕೆ ಸೆಣಸುತ್ತಾಳೆಯೇ ಹೊರತು, ಪುರುಷನ
ಜತೆ ಅಲ್ಲ.
೨೧ನೇ ಶತಮಾನದ ಇಂದಿನ ಆಧುನಿಕ ಯುಗದಲ್ಲೂ ಮಹಿಳೆಗೆ ಮೀಸಲು ಬೇಕಿತ್ತಾ? ತನ್ನ
ಸಾಮರ್ಥ್ಯದ ಮೇಲೆ ಆಕೆ ನಂಬಿಕೆ ಕಳೆದುಕೊಳ್ಳುತ್ತಿದ್ದಾಳೆಯೇ?. ಎಲ್ಲಾ ರಂಗಗಳಲ್ಲೂ
ಪುರುಷರನ್ನು ಮೀರಿಸುವ ಮಟ್ಟದಲ್ಲಿ ಸಾಧನೆ ಮಾಡುತ್ತಿರುವಾಕೆ, ಪುರುಷನ ಹಕ್ಕನ್ನೂ
ಕಸಿದುಕೊಳ್ಳಲು ಮುಂದಾಗುತ್ತಿದ್ದಾಳೆಯೇ?. ಮಹಿಳೆ ತ್ಯಾಗಮಯಿ, ಕ್ಷಮೆಯಾಧರಿತ್ರಿ
ಎನ್ನುವ ಮಾತುಗಳಿನ್ನು ಅರ್ಥ ಕಳೆದುಕೊಂಡಾವೇ? ಎನ್ನುವ ಪ್ರಶ್ನೆಗಳು ಏಳುವುದು ಸಹಜ.
ದೇಶದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ, ಪ್ರತಿ ಮನೆಯನ್ನೂ ಬೆಳಗುವ ಮಹಿಳೆಗೆ ಸಮಾಜದ
ಎಲ್ಲಾ ಕ್ಷೇತ್ರಗಳಲ್ಲೂ ಸರಿ ಸಮಾನವಾದ ಸ್ಥಾನಮಾನ ಸಿಗಬೇಕು ಎಂಬ ಕೂಗಿಗೆ ಅರ್ಥವಿದೆ.
ಪ್ರತಿಭಾವಂತ ಮಹಿಳೆಯರಿಗೆ ಸೂಕ್ತ ಸ್ಥಾನಮಾನ, ಸಮಾನ ಅವಕಾಶ ಸಿಗಲೇ ಬೇಕು
ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಸಮಾಜದಲ್ಲಿ ಮೇಲೆ ಬರಲು ಆಕೆಗೆ ಪ್ರೋತ್ಸಾಹ
ಬೇಕೇ ಬೇಕು ಎನ್ನುವುದು ಸಹಜ. ಪುರುಷನ ಅಣತಿಗೆ ಕಾಯದೆ, ಸ್ವಂತ ಕಾಲ ಮೇಲೆ ನಿಲ್ಲಲು
ಆಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಹಂಬಲ ಸ್ವೀಕಾರಾರ್ಹವೇ. ಆದರೆ, ಆ
ಹಕ್ಕನ್ನು ಆಕೆ ಮೀಸಲು ಮೂಲಕವೇ ಪಡೆಯಬೇಕಿತ್ತೇ?. ಇದು ಆಕೆಯ ಸ್ವಾಭಿಮಾನಕ್ಕೆ ಧಕ್ಕೆ
ತಂದಂತೆ ಆಗಲಿಲ್ಲವೇ?.
ಭ್ರಷ್ಠಾಚಾರದಲ್ಲಿ ಮಹಿಳೆಯರೇನೂ ಕಡಿಮೆಯಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ, ಬಿಹಾರದ ಮಾಜಿ ಮುಖ್ಯಮಂತ್ರಿ
ರಾಬ್ಡಿದೇವಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಈಗಾಗಲೇ ಇದನ್ನು ಸಾಬೀತು
ಪಡಿಸಿದ್ದಾರೆ. ಹಾಗಾಗಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್, ಇಲ್ಲವೇ
ವಿಧಾನಸಭೆ ಪ್ರವೇಶಿಸಿದಾಕ್ಷಣ ಆಡಳಿತ ಯಂತ್ರ ಶುದ್ಧವಾಗುತ್ತದೆ ಎಂಬುದಾಗಲಿ, ನಮ್ಮ
ಆಡಳಿತ ವ್ಯವಸ್ಥೆ ಚುರುಕಾಗುತ್ತದೆ ಎಂಬ ಭ್ರಮೆಯನ್ನಾಗಲಿ, ಅರ್ಥಗರ್ಭಿತ ಚರ್ಚೆ
ನಡೆಯುತ್ತದೆ ಎಂಬ ಆಶಯವನ್ನಾಗಲಿ ನಾವು ಹೊಂದುವುದರಲ್ಲಿ ಅರ್ಥವಿಲ್ಲ. ಪ್ರಜಾತಂತ್ರ
ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕಿರಬೇಕು. ಹಾಗಾಗಿ, ಮೀಸಲು ಆಧಾರದ ಮೇಲೆ
ಕೆಲವರು ಆರಿಸಿ ಬರುತ್ತಾರೆಂದಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಂತೆಯೇ
ಸರಿ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು
ಕಲ್ಪಿಸಲಾಗಿದೆ. ಇದು ಕೆಲವೆಡೆ ಗೊಂದಲದ ಸನ್ನಿವೇಶವನ್ನು ಸೃಷ್ಠಿಸಿದೆ. ಮಹಿಳೆಯರ
ಹೆಸರಿನಲ್ಲಿ ಅಲ್ಲಿ ಅಕಾರ ಚಲಾಯಿಸುವವರು ಅವರ ಗಂಡಂದಿರು. ಜನಸಾಮಾನ್ಯರು ಕೆಲಸ
ಮಾಡಿಸಿಕೊಳ್ಳಬೇಕಿದ್ದರೆ, ಗಂಡ-ಹೆಂಡತಿ ಇಬ್ಬರನ್ನೂ ಓಲೈಸಬೇಕಾದ ಅನಿವಾರ್‍ಯತೆ.
ಹಾಗಾಗಿ, ಪ್ರತಿ ಪುರುಷನ ಸಾಧನೆಯ ಹಿಂದೆ ಮಹಿಳೆಯ ಪಾತ್ರವಿರುತ್ತದೆ ಎಂಬ ನಾಣ್ಣುಡಿ
ಹೋಗಿ ಮಹಿಳೆಯ ಆಡಳಿತದ ಹಿಂದೆ ಪುರುಷನ ಕೈವಾಡವಿರುತ್ತದೆ ಎಂಬ ಮಾತು ಚಾಲ್ತಿಗೆ
ಬರುತ್ತಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಿದ ಮೇಲೆ ಗ್ರಾಮಗಳು
ಸುಧಾರಿಸಬೇಕಿತ್ತು. ಅಭಿವೃದ್ಧಿ ಹೊಂದಬೇಕಿತ್ತು. ಗ್ರಾಮೀಣ ಭಾಗದಲ್ಲಿನ ಅದೆಷ್ಟೋ ಬಡ
ಮಹಿಳೆಯರ ಬದುಕು ಸುಧಾರಿಸಬೇಕಿತ್ತು. ತುಳಿತಕ್ಕೊಳಗಾಗುತ್ತಿರುವ ಮಹಿಳೆಯರ ಜೀವನ
ಸುಧಾರಣೆಗೆ ಕಾರ್‍ಯಕ್ರಮಗಳು ರೂಪಿತವಾಗಬೇಕಿತ್ತು. ಗ್ರಾಮಸಭೆಗಳಲ್ಲಿ ಮಹಿಳೆಯರ
ಕುರಿತಾದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಹಾಗಾಗಿಲ್ಲ. ಬದಲಿಗೆ
ರಾಜಕೀಯ ದ್ವೇಷ, ಕಚ್ಚಾಟ, ಮನೆ-ಮನೆ ಬಾಗಿಲು ತಲುಪಿದೆ. ಅದೆಷ್ಟೋ ಕುಟುಂಬಗಳ ಸಾಮರಸ್ಯ
ಕೆಡಿಸಿವೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ಚೆನ್ನಮ್ಮನ ಕಿಚ್ಚಿನ ಕಥೆ ಕೇಳಿದಾಗ ನಮ
ಹೃದಯದಲ್ಲೂ ದೇಶಪ್ರೇಮದ ಕಿಚ್ಚು ಉಕ್ಕುತ್ತದೆ. ತ್ರಿವೇಣಿ ಅವರ ಕಾದಂಬರಿ ಓದಿದಾಗ
ನಮಗೂ ಸಾಹಿತ್ಯದ ಮೇಲೆ ಪ್ರೇಮ ಹುಟ್ಟುತ್ತದೆ. ಇಂದಿರಾಗಾಂಯವರನ್ನು ನೆನಪಿಸಿಕೊಂಡಾಗ
ನಾವೂ ನಾಯಕರಾಗಿ ಬೆಳೆಯಬೇಕು ಎನಿಸುತ್ತದೆ. ಅದೇ ರೀತಿ ಲತಾ ಮಂಗೇಷ್ಕರ್ ಹಾಡು, ಸೈನಾ
ನೆಹವಾಲ್ ಆಟ, ಕಿರಣ್ ಬೇಡಿಯ ಹೋರಾಟ, ಕಿರಣ್ ಮಜುಂದಾರ್ ಷಾರ ಸಾಧನೆ ನಮಗೆ
ಆದರ್ಶಪ್ರಾಯವಾಗುವುದು ಶ್ರಮಪಟ್ಟು, ಸ್ವ-ಸಾಮರ್ಥ್ಯದಿಂದ ಅವರು ಮೇಲೆ ಬಂದ ರೀತಿಯಿಂದ.
ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಮಹಿಳೆಯರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇದು
ಸಾಧ್ಯವಾಗಿದ್ದು ಅವರಲ್ಲಿನ ಪ್ರತಿಭೆಯಿಂದ, ಸ್ವ-ಸಾಮರ್ಥ್ಯದಿಂದ. ಮೀಸಲು ಪಡೆದು
ಇವರೆಲ್ಲಾ ಈ ಸಾಧನೆ ಮಾಡಿದ್ದರೆ ನಮಗವರು ಆದರ್ಶರಾಗುತ್ತಿದ್ದರೇ?.
ಇಂದಿನ ಸಂಸತ್, ರಾಜ್ಯ ವಿಧಾನಸಭೆಗಳಲ್ಲಿ ಪ್ರಜಾತಂತ್ರ ರೂಪವೇ ನಶಿಸುತ್ತಿದೆ. ಜಾತಿ,
ಧರ್ಮಗಳ ಹೆಸರಲ್ಲಿ ಅದು ಹಂಚಿಹೋಗಿದೆ. ಮೀಸಲಾತಿ ಮೂಲಕ ಆರಿಸಿ ಬರುವವರ ಸಂಖ್ಯೆಯೇ
ಹೆಚ್ಚಿದೆ. ಚುನಾವಣೆಗೆ ಟಿಕೆಟ್ ನೀಡಿಕೆಯಿಂದಲೇ ಶುರುವಾಗುತ್ತದೆ ಜಾತಿ, ಧರ್ಮ,
ಲಿಂಗಗಳ ಪ್ರಸ್ತಾವ. ಹೀಗೆಯೇ ಪ್ರತಿ ಗುಂಪಿಗೂ ಮೀಸಲು ಕಲ್ಪಿಸುತ್ತಾ ಹೋದರೆ ಮುಂದೊಂದು
ದಿನ ಪ್ರತಿಭೆ ಮೇಲೆ ಸಂಸತ್‌ಗೆ, ವಿಧಾನಸಭೆಗಳಿಗೆ ಆರಿಸಿ ಬರುವವರೇ ಇಲ್ಲವಾಗಬಹುದು.
ಪ್ರಜಾತಂತ್ರ ವ್ಯವಸ್ಥೆಗೆ ಅದು ಮಾರಕವೇ ಸರಿ. ಸಂವಿಧಾನದ ೧೪ನೇ ಪರಿಚ್ಛೇದದ ಪ್ರಕಾರ
ವ್ಯಕ್ತಿಯೊಬ್ಬನನ್ನು ಲಿಂಗ, ಜಾತಿ, ಧರ್ಮಗಳ ಆಧಾರದ ಮೇಲೆ ವಿಂಗಡಿಸುವುದು, ತಾರತಮ್ಯ
ತೋರುವುದು ಅಪರಾಧ. ಅದು ಕಾನೂನು ಬಾಹೀರ. ಹಾಗಾಗಿ, ಮೀಸಲು ಸಂವಿಧಾನದ ಮೂಲ ಆಶಯಕ್ಕೇ
ವಿರುದ್ಧ.
ಅತ್ತ ಶ್ರೀಮಂತ, ಪ್ರತಿಷ್ಠಿತ, ಚಾಲಾಕಿ ಮಹಿಳೆಯರು ಸಂಸತ್ ಭವನದಲ್ಲಿ
ರಾರಾಜಿಸುತ್ತಿದ್ದರೆ, ಇತ್ತ ಗ್ರಾಮೀಣ ಭಾಗದಲ್ಲಿ, ಕೊಳಚೆ ಪ್ರದೇಶಗಳಲ್ಲಿ ವಯಸ್ಸು
ಐದಾಗುತ್ತಿದ್ದಂತೆ ಒಪ್ಪತ್ತಿನ ಕೂಳಿಗಾಗಿ ಕೂಲಿಗೆ ತೆರಳುವ ಬಾಲೆಯ ದಯನೀಯ ಸ್ಥಿತಿ
ಹಾಗೆಯೇ ಮುಂದುವರಿದರೆ ಅದಕ್ಕೆ ಏನನ್ನೋಣ?. ಹಾಗಾಗಿ, ಮೀಸಲಿನ ಬದಲಿಗೆ ದೇಶದ
ಪ್ರತಿಯೊಬ್ಬ ಹೆಣ್ಣು ಮಗುವಿಗೂ ಶಿಕ್ಷಣ, ಉತ್ತಮ ಆರೋಗ್ಯ, ಮೂಲಭೂತ ಅವಶ್ಯಕತೆ ದೊರಕುವ
ರೀತಿಯಲ್ಲಿ ಕಾರ್‍ಯಕ್ರಮ ರೂಪಿಸುವುದು ಒಳ್ಳೆಯದಿತ್ತು. ಈ ಬಗ್ಗೆ ಜನಜಾಗೃತಿ ಮೂಡಿಸುವ
ಅವಶ್ಯಕತೆಯಿತ್ತು. ಈ ವಿಧೇಯಕ ಅಂಗೀಕಾರದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ
ಕುಟುಂಬದ ಮಹಿಳಾ ಸದಸ್ಯರಿಗೆ ಅದೆಷ್ಟರ ಮಟ್ಟಿಗೆ ಪ್ರಯೋಜನ ದೊರಕೀತು ಎನ್ನುವುದನ್ನು
ಕಾಲವೇ ಹೇಳಬೇಕಿದೆ. ಆಶಯವೇನೆ ಇರಲಿ, ಮೀಸಲಿನಿಂದಾಗಿ ಸಂಸತ್ ಹಾಗೂ ರಾಜ್ಯ
ವಿಧಾನಸಭೆಗಳಿಗೆ ಇನ್ನು ಮುಂದೆ ಹೆಚ್ಚು ರಂಗು ಬರುವುದಂತೂ ಗ್ಯಾರಂಟಿ.
- ಮಹಾಬಲೇಶ್ವರ ಹೊನ್ನೆಮಡಿಕೆ
ಪ್ರಾದೇಶಿಕ ಸುದ್ದಿ
ವೇಣೂರು: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಕೊಡಮಣಿತ್ತಾಯ ಮೂಲದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆಗಳು ನಡೆದವು.ಶ್ರೀನಿವಾಸ್ ಭಾಗವತ್ ಬಳದವರಿಂದ ಭಕ್ತಿ ಭಾವ ಗಾನ ಲಹರಿ ಕಾರ್ಯಕ್ರಮ ನಡೆಯಿತು.

ರಾಜ್ಯ - ರಾಷ್ಟ್ರ
ಸಾಮರಸ್ಯ ಪೂರ್ಣ ಅಭಿವೃದ್ಧಿ ಪ್ರಕ್ರಿಯೆಗಾಗಿ ಸಾಮರಸ್ಯ ಗ್ರಾಮ ಯೋಜನೆ : ಸದನದಲ್ಲಿ ಮುಖ್ಯಮಂತ್ರಿಗಳ ಘೋಷಣೆ
ಬೆಂಗಳೂರು:ಪ್ರಸಕ್ತ ಸರಕಾರದ ಅವಧಿಯಲ್ಲಿ ಆಯವ್ಯಯದ ಗಾತ್ರವನ್ನು 1.00 ಲಕ್ಷ ಕೋಟಿ ರೂ ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು. ಅವರು ಇಂದು ಆಯವ್ಯಯದ ಚರ್ಚೆಗೆ ಉತ್ತರಿಸುತ್ತಿದ್ದರು.
ವಿರೋಧ ಪಕ್ಷಗಳ ನಾಯಕರ ಟೀಕೆ, ಸಲಹೆ , ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಜಗತ್ತಿನಾದ್ಯಂತ ಆರ್ಥಿಕ ಹಿನ್ನೆಡೆ ಇದ್ದು ಸಂಕಷ್ಟ ಪರಿಸ್ಥಿತಿ ಇರುವ ಸಂದರ್ಭದಲ್ಲಿಯೂ ಇತರ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದ ಸಾಲದ ಮೊತ್ತ ಬಹಳ ಕಡಿಮೆ. ರಾಜ್ಯದ ತೆರಿಗೆ ಸಂಗ್ರಹಣೆ ಅತ್ಯುತ್ತಮ, ವಿತ್ತೀಯ ಕೊರತೆ ಕೇಂದ್ರದ ಮಿತಿಯಲ್ಲಿದ್ದು ಆರ್ಥಿಕ ನಿರ್ವಹಣೆಗೆ 13ನೇ ಹಣಕಾಸು ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಯೋಜನಾ ಆಯೋಗವು ಮುಕ್ತಕಂಠದ ಶ್ಲಾಘನೆಮಾಡಿದೆ ಎಂದರು.
ವಿದ್ಯುತ್ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈಗಾಗಲೇ ಪ್ರಾರಂಭಗೊಂಡ ಯೋಜನೆಗಳನ್ನು ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮ. ಪವನ ವಿದ್ಯುತ್, ಕಿರುಜಲ ವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲಾಗುವುದು. 5000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಯನ್ನುಯಿರಿಸಿಕೊಳ್ಳಲಾಗಿದೆ ಎಂದರು.
ಕೃಷಿ ಉತ್ಪಾದನೆ ಹೆಚ್ಚಿಸುವ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸುವ ಮೂಲಕ ಜಿ.ಡಿ.ಪಿ. ಯನ್ನ ಶೇ 9 ರಷ್ಟು ಸಾಧಿಸುವ ಗುರಿಯಿದೆ ಎಂದರು.
ಪ್ರಧಾನ ಮಂತ್ರಿಗಳು ಪ್ರತಿಬಾರಿಯು ತಾವು ಭೇಟಿಮಾಡಿದ ಸಂದರ್ಭದಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ಕುರಿತು ವಿಚಾರಿಸುವುದು ಸಂತಸದ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ನಗರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಕೇಂದ್ರದಿಂದ ದೊರಕಿಸಲು ಪ್ರಯತ್ನಿಸಬೇಕೆಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸಂಘರ್ಷದ ವಾತಾವರಣ ನಿವಾರಿಸಿ ಸಾಮರಸ್ಯದ ಬದುಕಿಗೆ ನಾಂದಿ ಹಾಡಿ ಅಭಿವೃದ್ಧಿ ಪ್ರಕ್ರಿಯೆಯನ್ನು ಸುಧಾರಿಸಲು 2010-11 ನೇ ಸಾಲಿನಿಂದ ಪ್ರೋತ್ಸಾಹಧನ ನೀಡಲು ಸಾಮರಸ್ಯ ಯೋಜನೆ ಪ್ರಾರಂಭಿಸಲಾಗುವುದು.
ಈ ಯೋಜನೆಯಡಿ ಪ್ರೋತ್ಸಾಹಧನಕ್ಕೆ ಅರ್ಹವಾಗಲು ಈ ಕೆಳಕಂಡ ನಿಬಂಧನೆಗಳಿಗೆ ಒಳಪಡಬೇಕಾಗುತ್ತದೆ.
ಗ್ರಾಮವು ಸಂಘರ್ಷ, ಘರ್ಷಣೆ, ಜಗಳ, ತಂಟೆಗಳಿಂದ ಮುಕ್ತವಾಗಿರಬೇಕು.
ಗ್ರಾಮದಲ್ಲಿ ಸೌಹಾರ್ದ-ಸಾಮರಸ್ಯದಿಂದ ಕೂಡಿದ ವಾತಾವರಣ ಇರಬೇಕು.
ಗ್ರಾಮದಲ್ಲಿ ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೆ ಗ್ರಾಮದಲ್ಲಿನ ಸಮಸ್ಯೆಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ವಾತಾವರಣವಿರಬೇಕು.
ಒಗ್ಗಟನ್ನು ಪ್ರದರ್ಶಿಸುವ ಮೂಲಕ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ, ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವುದು.
ಗ್ರಾಮವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡ್ಯೊಯಲು ನೆರವಾಗುವಂತೆ ಸಾಧ್ಯವಾದರೆ ಚುನಾವಣೆ ಅಥವಾ ಇನ್ನಿತರೆ ವಿಷಯಗಳಲ್ಲಿ ತೀವ್ರ ಭಿನ್ನಮತಕ್ಕೆ ಎಡೆಮಾಡಿ ವೈಷಮ್ಯಕ್ಕೆ ತಿರುಗದೆ ಒಮ್ಮತ ನಿರ್ಧಾರಕ್ಕೆ ಬರುವ ವಾತಾವರಣ ಇರಬೇಕು ಈ ವಿಚಾರಗಳನ್ನು ತಿಳಿಸಿದರು.
ಬೆಳಗಾವಿ ವಿಶ್ವವಿದ್ಯಾಲಯ
ಬೆಳಗಾವಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಸ್ನಾತಕೋತ್ತರ ಕೇಂದ್ರವನ್ನು 2010-11 ನೇ ಸಾಲಿನಲ್ಲಿ ನೂತನ ವಿಶ್ವವಿದ್ಯಾಲಯ ಎಂದು ಘೋಷಿಸಿ ಅಭಿವೃದ್ಧಿಪಡಿಸಲಾಗುವುದು.
ಉಚಿತ ಬೈಸಿಕಲ್ ಯೋಜನೆ:
8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾಥಿ/ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಉಚಿತ ಬೈಸಿಕಲ್ ಸೌಲಭ್ಯವನ್ನು 2010-11 ನೇ ಸಾಲಿನಿಂದ ಬಸ್ಪಾಸ್ ಮತ್ತು ಹಾಸ್ಟೆಲ್ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು.
ತಂಬಾಕು ಮೇಲಿನ ತೆರಿಗೆ ಇಳಿತ:
ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ 12.5 ರಿಂದ ಶೇ 15 ಕ್ಕೆ ಏರಿಕೆ ಹಾಗೂ ಅವುಗಳ ಮೇಲೆ ಗರಿಷ್ಠ ಚಿಲ್ಲರೆ ಬೆಲೆ ಆಧಾರದ ಮೇಲೆ ಮೌಲ್ಯವರ್ಧಿತ ತೆರಿಗೆ ವಿಧಿಸಲು ನಾನು ಮುಂಗಡ ಪತ್ರದಲ್ಲಿ ತಾವು ಪ್ರಸ್ತಾಪಿಸಿದ್ದಾಗಿಯೂ, ಆದರೆ ಈಗಾಗಲೇ ತಂಬಾಕು ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ಹೆಚ್ಚಾಗಿದೆ ಹಾಗೂ ಅದರಂತೆ ಅವುಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ಏರಿಕೆ ಪ್ರಸ್ತಾಪನೆಯನ್ನು ಪುನರ್ ಪರಿಶೀಲಿಸಲು ಮಾನ್ಯ ವಿರೋಧ ಪಕ್ಷದ ನಾಯಕರು ಮಾಡಿರುವ ಸಲಹೆಯನ್ನು ಪರಿಗಣಿಸಿ ಜೊತೆಗೆ ನೆರೆಯ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ತೆರಿಗೆ ದರ ಕಡಿಮೆ ಇರುವುದರಿಂದ ಕಾನೂನುಬಾಹಿರವಾಗಿ ಆ ರಾಜ್ಯಗಳಿಂದ ತಂಬಾಕು ಉತ್ಪನ್ನಗಳನ್ನು ತಂದು ನಮ್ಮ ರಾಜ್ಯದಲ್ಲಿ ಮಾರಾಟಮಾಡಿ ತೆರಿಗೆ ವಂಚಿಸುವ ಸಾಧ್ಯತೆಗಳು ಇರುವ ಅಂಶವನ್ನು ಪರಿಗಣಿಸಿ ತಂಬಾಕು ಉತ್ಪನ್ನಗಳ ಮೇಲಿನ ಪ್ರವೇಶ ತೆರಿಗೆಯನ್ನು ಶೇ 4 ರಿಂದ 2 ಕ್ಕೆ ಇಳಿಸಲು ಉದ್ದೇಶಿಸಲಾಗಿದೆಯೆಂದು ಮುಖ್ಯಮಂತ್ರಿಗಳು ತಿಳಿಸಿದರು.
ಶಾಲೆಗಳಿಗೆ ಅನುದಾನ:
1987-95 ರವರೆಗಿನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಆರ್ಥಿಕ ಮಿತವ್ಯಯ ಆದೇಶವನ್ನು ಸಡಿಲಿಸಿ 1-4-2010 ರಿಂದ ಅನುದಾನವನ್ನು ನೀಡಲಾಗುತ್ತದೆ. ಜಿಲ್ಲಾ ಪಂಚಾಯಿತಿಗಳಿಗೆ 2010-11 ರಿಂದ 1 ಕೋಟಿ ರೂ ಗಳ ಅನಿರ್ಬಂಧಿತ ಅನುದಾನ (ಅನ್ಟೈಟ್ ಗ್ರಾಂಟ್) ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸಿದರು.
ರಾಜ್ಯ - ರಾಷ್ಟ್ರ
ಮಂಗಳೂರು:ಜಿಲ್ಲೆಯ 45 ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಡಿಬಾರ್ ಪ್ರಕರಣಗಳಾಗಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.ಇಂದು ರಸಾಯನಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಪರೀಕ್ಷೆಗಳು ನಡೆದಿದ್ದು, ರಸಾಯನ ಶಾಸ್ತ್ರ ಪರೀಕ್ಷೆಗೆ ಒಟ್ಟು 7,975 ವಿದ್ಯಾರ್ಥಿಗಳು ಹಾಜರಾಗಬೇಕಿದ್ದು, 101 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. 7,874 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಲೆಕ್ಕಶಾಸ್ತ್ರಕ್ಕೆ (ಅಕೌಂಟ್ಸ್) 11,011 ಮಕ್ಕಳಲ್ಲಿ 263 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 10,748ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ವಿಶೇಷ ವರದಿ
ವಿದ್ಯೆವುಳ್ಳವನ ಮುಖ ಮುದ್ದು ಬರುವಂತ್ತಿಕ್ಕು,
ವಿದ್ಯೆ ಇಲ್ಲದವನ ಬರಿ ಮುಖ
ಹಾಳೂರು ಹದ್ದಿನಂತ್ತಿಕ್ಕು ಸರ್ವಜ್ಞ
ಸರ್ವಜ್ಞನು ವಿದ್ಯೆಯ ಮಹತ್ವವನ್ನು ಹದಿನಾರನೇಯ ಶತಮಾನದಲ್ಲಿಯೇ ತಿಳಿಸಿದ್ದಾನೆ. ವೇದ, ಪುರಾಣ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ನಮಗೆ ಮಾರ್ಗದರ್ಶನವಾಗಿವೆ. ಇದೂ ಅಲ್ಲದೇ ಬೌದ್ಧ ಹಾಗೂ ಜೈನ ಧರ್ಮಗಳು ಹುಟ್ಟಿ ವಿಶ್ವಕ್ಕೆ ಶಾಂತಿ, ಸತ್ಯ ಹಾಗೂ ಅಹಿಂಸಾ ಮಾರ್ಗವನ್ನು ತೋರಿಸಿವೆ.
ಈ ದೇಶವನ್ನು ದೇಶಿಯ ಅರಸರು ಮತ್ತು ಪರಕೀಯರು ಆಳಿದ್ದಾರೆ. ಅವರ ಕಾಲದಲ್ಲಿ ಆದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಇತಿಹಾಸ ತಿಳಿಸುತ್ತದೆ. ವಿನ: ಸಾಮಾನ್ಯ ಜನರಿಗೆ ಶಿಕ್ಷಣ ಕಡ್ಡಾಯವಾದ ಬಗ್ಗೆ ಎಲ್ಲಿಯೂ ಉಲ್ಲೇಖ ಇರುವುದಿಲ್ಲ. ಶಿಕ್ಷಣವಿದ್ದರೂ ಕೆಲವು ಸೀಮಿತ ವರ್ಗದವರಿಗೆ ಮಾತ್ರ ಮೀಸಲಾಗಿತ್ತು. ಈ ಕಾರಣಕ್ಕಾಗಿ ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅನಕ್ಷರರಾಗಿದ್ದರು.
ಬ್ರಿಟೀಷರು ಈ ದೇಶವನ್ನು 300 ವರ್ಷಗಳ ಕಾಲ ಆಳಿದ್ದಾರೆ. ಅವರ ಕಾಲದಲ್ಲಿ ಕೈಗಾರಿಕಾ ಕ್ರಾಂತಿ ಆರಂಭಿಸಿ, ಬಂದರು, ರೈಲ್ವೆ, ಸಾರಿಗೆ ವ್ಯವಸ್ಥೆಯನ್ನು ತಂದರು. ಆಗ ನಮ್ಮಲ್ಲಿ ಶಿಕ್ಷಣದ ಬಗ್ಗೆ ಗುಲಾಮಗಿರಿ ಮತ್ತು ಸ್ವಾತಂತ್ರ್ಯ ಬಗ್ಗೆ ಅರಿವು ಬರ ತೊಡಗಿತು. ಇದೇ ಸಮಯದಲ್ಲಿ ಲಾರ್ಡ್ ಮೆಕಾಲೆ ಅವರು ಹೆಣ್ಣು ಮಕ್ಕಳಿಗೆ ಇಂಗ್ಲೀಷ ಶಾಲೆಯನ್ನು ಆರಂಭಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯವು ಅಂದಿನ ಸಮಾಜದಲ್ಲಿತ್ತು. ನಿರಕ್ಷರಸ್ಥರಾಗಿ ಶೋಷಣೆಯಲ್ಲಿ ಬಾಳುವುದಕ್ಕಿಂತ ಅಕ್ಷರಸ್ಥರಾಗಿ ಪ್ರಜ್ಞಾವಂತರಾಗಿ ಬಾಳಲಿ ಎಂದು ಮಹಾತ್ಮಾಗಾಂಧಿ, ಲೋಕಮಾನ್ಯ ತಿಲಕ, ರಾಜಾರಾಮ ಮೋಹನರಾಯ, ಡಾ| ಬಿ.ಆರ್. ಅಂಬೇಡ್ಕರ ಮುಂತಾದವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪ್ರೋತ್ಸಾಹಿಸಿದರು. ಆದರೆ ಅಂದಿನ ಸಮಾಜ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟೊಂದು ಮಹತ್ವ ಕೊಡಲಿಲ್ಲ. ದೇಶ 1947 ರಲ್ಲಿ ಸ್ವಾತಂತ್ರ್ಯವಾಯಿತು. ನಾವು ಸ್ವತಂತ್ರ ಭಾರತದ ಪ್ರಜೆಗಳೆಂದು ಆನಂದಭರಿತರಾಗಿ ಸ್ವಾತಂತ್ರೋತ್ಸವವನ್ನು ಆಚರಿಸಿ, ಇಂದಿಗೂ ಆಚರಿಸುತ್ತಿದ್ದೇವೆ. ಆದರೆ ಅನಕ್ಷರತೆ ಮಾತ್ರ ನಿರ್ಮೂಲನೆ ಆಗಲಿಲ್ಲ.
ಎರಡನೇ ಮಹಾಯುದ್ಧದ ನಂತರ ಸಾಕ್ಷರತೆಯ ಮಹತ್ವವನ್ನು ತಿಳಿದು 1965 ಸೆಪ್ಟೆಂಬರ್ 8 ರಿಂದ 17 ರವರೆಗೆ ಟೆಹರಾನ್ನಲ್ಲಿ ಅನಕ್ಷರತೆ ನಿರ್ಮೂಲನೆ ಬಗ್ಗೆ ಶಿಕ್ಷಣ ಮಂತ್ರಿಗಳ ವಿಶ್ವ ಸಮ್ಮೇಳನ ಏರ್ಪಡಿಸಲಾಯಿತು. ಅದೇ ದಿನ ಸೆಪ್ಟೆಂಬರ್ 8 ಅಂತರರಾಷ್ಟ್ರೀಯ ಸಾಕ್ಷರತೆ ದಿನವೆಂದು ಘೋಷಣೆ ಮಾಡಲಾಯಿತು. ಪ್ರತಿವರ್ಷ ಸೆಪ್ಟೆಂಬರ್ 8 ಅಂತರರಾಷ್ಟ್ರೀಯ ಸಾಕ್ಷರತಾ ದಿನವೆಂದು ಆಚರಿಸಲಾಗುತ್ತಿದೆ. ನಿರಕ್ಷರತೆ ಹೊಗಲಾಡಿಸಲು ಕೇಂದ್ರ ಸರಕಾರ ದೇಶದಲ್ಲಿ ಪ್ರಪ್ರಥಮವಾಗಿ ಸಾಕ್ಷರತಾ ಕಾರ್ಯಕ್ರಮವನ್ನು ಆರಂಭಿಸಿದ ಕೆಲವು ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದು. 1978 ರಲ್ಲಿ ವಯಸ್ಕರರಿಗೆ ಅಕ್ಷರ ಕಲಿಸಲು ವಯಸ್ಕರ ಶಿಕ್ಷಣ ನಿರ್ದೇಶನಾಲಯವನ್ನು ಕರ್ನಾಟಕದಲ್ಲಿ ಆರಂಭಿಸಲಾಯಿತು. ಜಿಲ್ಲಾ ಸಾಕ್ಷರತಾ ಸಮಿತಿಗಳ ಮೂಲಕ 15 ರಿಂದ 35 ವರ್ಷದ ನಿರಕ್ಷರರಿಗೆ ಶಿಕ್ಷಣ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮ
ಕೇಂದ್ರ ಸರಕಾರ 5 ವರ್ಷದ ಅವಧಿಯ ಸಾಕ್ಷರತಾ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಗೆ 2005 ನೇ ಸಾಲಿನಲ್ಲಿ ಮಂಜೂರು ಮಾಡಿತು. ಮೊದಲ 3 ವರ್ಷ, ಈ ಕಾರ್ಯಕ್ರಮಕ್ಕೆ ತಗಲುವ ಪೂರ್ಣ ವೆಚ್ಚದ ಅನುದಾನ ಕೇಂದ್ರ ಸರಕಾರ ನೀಡುವುದಾಗಿ 4ನೇ ಮತ್ತು 5ನೇ ವರ್ಷದ ಅನುದಾನದಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಶೇ. 50 ರ ಅನುಪಾತದಲ್ಲಿ ಅನುದಾನ ನಿಗದಿಪಡಿಸಿತ್ತು. 2005 ರಲ್ಲಿ ಪ್ರತಿ ಕುಟುಂಬಗಳ ಸಮೀಕ್ಷೆ ಮಾಡಿ ಸುಮಾರು 4,51,237 ಅನಕ್ಷರಸ್ಥರನ್ನು ಗುರುತಿಸಿ ಪ್ರತಿ ಗ್ರಾಮದಲ್ಲಿ ಕಲಿಕಾ ಕೇಂದ್ರ ಆರಂಭಿಸಿ ಸ್ವಯಂ ಸೇವಕರ ಆಯ್ಕೆ ಮಾಡಿ ನಿರಂತರವಾಗಿ ಸಾಕ್ಷರತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕೇಂದ್ರ ಸರಕಾರದ ಆದೇಶದಂತೆ 31-3-2009 ಕ್ಕೆ 5 ವರ್ಷ ಅವಧಿ ಮೀರಿದ ನಂತರ ಸದರಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಜಿಲ್ಲೆಯಲ್ಲಿ ಅನಕ್ಷರಸ್ಥರು ಮತ್ತು ನವಸಾಕ್ಷರರು ಕಲಿತ ಕಲಿಕೆ ಸ್ಥೀರವಾಗಿ ಇರಲು ರಾಜ್ಯ ಸರಕಾರ ಪರ್ಯಾಯವಾಗಿ ಸಮುದಾಯ ಶಿಕ್ಷಣ ಮತ್ತು ವೃತ್ತಿ ಕೌಶಲ್ಯ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಈ ಕಾರ್ಯಕ್ರಮ ಹಿಂದುಳಿದ ತಾಲೂಕುಗಳಾದ ರಾಮದುರ್ಗ, ರಾಯಬಾಗ, ಬೈಲಹೊಂಗಲ, ಸವದತ್ತಿ, ಹುಕ್ಕೇರಿ, ಗೋಕಾಕ ಮತ್ತು ಅಥಣಿ ತಾಲೂಕುಗಳಲ್ಲಿ ಪ್ರತಿ ಗ್ರಾಮಪಂಚಾಯತಿಗೆ 2 ಕೇಂದ್ರಗಳಂತೆ 626 ಕೇಂದ್ರಗಳನ್ನು ಆರಂಭಿಸಿ ಸ್ವಯಂ ಸೇವಕರು, ಪ್ರೇರಕರು, ಉಪ ಪ್ರೇರಕರನ್ನು ಆಯ್ಕೆ ಮಾಡಿ ಅವರಿಗೆ ಪ್ರತಿ ತಿಂಗಳು ಗೌರವ ಧನ ರೂ. 700/- ನೀಡಿ ಉಳಿದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಜವಾಬ್ದಾರಿ ನೀಡಿದೆ.
ಇದೂ ಅಲ್ಲದೇ ಪ್ರೌಢಶಾಲೆಯ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ 6 ತಿಂಗಳಲ್ಲಿ ಇಬ್ಬರು ನಿರಕ್ಷರಸ್ಥರರನ್ನು ಅಕ್ಷರಸ್ಥರನ್ನಾಗಿ ಮಾಡಲು 270 ಪ್ರೌಢಶಾಲೆಗಳ 13,500 ವಿದ್ಯಾರ್ಥಿಗಳಿಗೆ ವಹಿಸಿಕೊಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವೃತ್ತಿ ತರಬೇತಿ ನೀಡಲು ಒಂದು ಶಿಬಿರಕ್ಕೆ 30,790/- ರೂ. ಹಾಗೂ ಕೌಶಲ್ಯ ತರಬೇತಿ ಶಿಬಿರಕ್ಕೆ 30,000 ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಅನಕ್ಷರರನ್ನು ಅಕ್ಷರಸ್ಥರನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರ ಕೋಟ್ಯಾಂತರ ರೂ. ಗಳನ್ನು ಖರ್ಚು ಮಾಡುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ಬರುತ್ತಿಲ್ಲ.
ಇಂದು ವಿಶ್ವದಲ್ಲಿ 75.90 ಕೋಟಿ ನಿರಕ್ಷರರು ಇದ್ದಾರೆ. ಇವರ ಪೈಕಿ ಗರಿಷ್ಠ ಸಂಖ್ಯೆಯ ನಿರಕ್ಷರರು ಭಾರತದಲ್ಲಿ ಇದ್ದಾರೆ ಎಂದು 2010 ರ ಜನೇವರಿ ತಿಂಗಳಲ್ಲಿ ಬಿಡುಗಡೆಯಾದ ಎಲ್ಲರಿಗೂ-ಶಿಕ್ಷಣ, ಜಾಗತಿಕ ಅವಲೋಕನ ವರದಿಯಲ್ಲಿ ವಿಶ್ವಸಂಸ್ಥೆ ಹೇಳಿದೆ. ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಮೌಲ್ಯ ಕುಸಿದಿದೆ. ಸಮಾಜದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಅಪಹರಣ, ಅಧಿಕಾರದ ದುರ್ಬಳಕೆ ಆಗುತ್ತಿದ್ದು, ಇದನ್ನು ಪ್ರತಿಭಟಿಸುವ ಪ್ರಜ್ಞಾವಂತ ನಾಗರಿಕರು ಇಲ್ಲವಾಗಿದ್ದಾರೆ. ಅನಕ್ಷರರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೇ ಮೊದಲು ಅಕ್ಷರಸ್ಥರಾಗಬೇಕು. ಸರ್ವಜ್ಞಾನಕ್ಕೂ ಅಕ್ಷರ ಜ್ಞಾನವೇ ಬೀಜಮಂತ್ರ ಕಾರಣ ಎಲ್ಲರೂ ಅಕ್ಷರಸ್ಥರಾದಾಗ ಇಡೀ ಸಮಾಜ, ದೇಶ, ಜಗತ್ತು ಸುಧಾರಿಸುತ್ತದೆ. ಸಂಪೂರ್ಣ ಸಾಕ್ಷರತೆಯೇ ಸಮಾಜಕ್ಕೆ ಒಂದು ದೊಡ್ಡ ಕೊಡುಗೆಯಾಗುವುದು.
- ಎನ್.ಡಿ. ಸಿಂಧೋಳ್ಕರ
ಸಹಾಯಕ ನಿರ್ದೇಶಕರು,
ವಾರ್ತಾ ಇಲಾಖೆ, ಬೆಳಗಾವಿ.
ರಾಜ್ಯ - ರಾಷ್ಟ್ರ
ಬೆಂಗಳೂರು/ಮಂಗಳೂರು:ಮಾರ್ಚ್ 18 ರಿಂದ 31 ರವರೆಗೆ ದ್ವಿತೀಯ ಪಿಯುಸಿ ಮಕ್ಕಳಿಗೆ ಪರೀಕ್ಷೆ ನಡೆಯಲಿದ್ದು,ರಾಜ್ಯಾದ್ಯಂತ ಆರೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ ರಾಜ್ಯಾದ್ಯಂತ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ರೀತಿಯ ಗೊಂದಲಗಳು ನಡೆಯದಂತೆ ಸೂಕ್ತ ವ್ಯವಸ್ಥೆಗೊಳಿಸಲಾಗಿದೆ.ಅವ್ಯವಹಾರಗಳು ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ. ಪರೀಕ್ಷೆ ನಡೆಯುವ ಪ್ರದೇಶಗಳ ಸುತ್ತ ಮುತ್ತಲು ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಅಂತಿಮ ಹಂತದ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯ ಬುಧವಾರ ಕಂಡುಬಂದಿದೆ. ಅಂತೂ ರಾಜ್ಯಾದ್ಯಂತ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ.
ಪರೀಕ್ಷೆ ಸುಲಲಿತವಾಗಿ ನಡೆಯುಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪವಿಭಾಗ ಮಟ್ಟದ ಜಾಗೃತದಳ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಹಾಯಕ ಕಮಿಷನರ್ ನೇತೃತ್ವದಲ್ಲಿ ಜಾಗೃತದಳ ರಚಿಸಲಾಗಿದೆ. ತಲಾ ಮೂರು-ನಾಲ್ಕು ಪರೀಕ್ಷಾ ಕೇಂದ್ರಗಳಿಗೆ ಓರ್ವ ಗ್ರೂಪ್-ಎ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷ ಸಂಬಂಧ ಯಾವುದೇ ರೀತಿ ಸಮಸ್ಯೆಗಳಿದ್ದರೆ ಉಪನಿರ್ದೇಶಕರು ಪ.ಪೂ. ಶಿಕ್ಷಣ ಇಲಾಖೆ- 9845097753, ವಿಶೇಷ ಜಾಗೃತ ದಳ ಅಧ್ಯಕ್ಷರು -9448215402, ಜಿಲ್ಲಾಧಿಕಾರಿ ಕಚೇರಿ - 0824- 2220590. 2220584, 1077 (ಉಚಿತ ಕರೆ) ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 45 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 29,168 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ರೆಗ್ಯುಲರ್ 23,439, ಪುನರಾವರ್ತಿತ 2301, ಖಾಸಗಿ 3428 ಅಭ್ಯರ್ಥಿಗಳಿರುತ್ತಾರೆ. ಪರೀಕ್ಷಾ ಕೇಂದ್ರದ ಪೂರ್ಣ ಸಿದ್ಧತೆಯನ್ನು ಮಾರ್ಚ್ 17 ರಂದೇ ಮಾಡಲಾಗಿದೆ.
ರಾಜ್ಯ - ರಾಷ್ಟ್ರ
ಮಂಗಳೂರು : ಕರಾವಳಿಯ ನದಿ ಹಾಗೂ ಮೀನುಗಾರಿಕೆ ಇಲ್ಲಿನ ಸೂಕ್ಷ್ಮ ಪರಿಸರವನ್ನು ಅವಲಂಬಿಸಿದ್ದು, ಈ ದೃಷ್ಟಿಯಿಂದ ಪಾರಂಪರಿಕ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಮತ್ತು ಸಹನಶೀಲ ಮೀನುಗಾರಿಕೆಯ ಉದ್ದೇಶ ಈಡೇರಿಸಲು ಸಮಗ್ರ ಸಹನಶೀಲ ಮೀನುಗಾರಿಕೆ ನೀತಿ ಜಾರಿಗೆ ತರಲು ಕಾರ್ಯಾಗಾರದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ರಾಜ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರದಲ್ಲಿ ಜಿಲ್ಲೆಯ ನದಿ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದಂತೆ ನಡೆದ ಸಮಗ್ರ ಚರ್ಚೆಯ ಬಳಿಕ ಸರ್ಕಾರಕ್ಕೆ ಇಲ್ಲಿನ ಜನಪರ ಹಾಗೂ ವೈಜ್ಞಾನಿಕ ಅಭಿಪ್ರಾಯಗಳನ್ನು ತಿಳಿಸುವುದಾಗಿ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.
ಕೈಗಾರಿಕೆ ಹಾಗೂ ನಗರ ತ್ಯಾಜ್ಯವನ್ನು ಸಮುದ್ರಕ್ಕೆ ಸಂಸ್ಕರಿಸಿ ಬಿಡುವ ಬಗ್ಗೆ ಹಾಗೂ ಜೂನ್ –ಆಗಸ್ಟ ತಿಂಗಳವರೆಗೆ ಮೀನುಗಾರಿಕೆಗೆ ವಿರಾಮ ನೀಡಲು ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಪರಿಣಾಮಕಾರಿ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು.
ಆಮೆ, ಡಾಲ್ಫಿನ್ ಸೇರಿದಂತೆ ಅತ್ಯಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಜಲಚರಗಳ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ಸಹಯೋಗದಿಂದ ಕರ್ತವ್ಯ ನಿರ್ವಹಿಸುವಂತೆ ಹಾಗೂ ಬೃಹತ್ ಮೀನುಗಾರಿಕೆ ದೋಣಿಗಳು ಟೆಡ್ ಉಪಕರಣ ಅಳವಡಿಸಬೇಕೆಂದು ಹೇಳಲಾಯಿತು.
ಮರಿಮೀನುಗಳ ಅನಾವಶ್ಯಕ ನಾಶ ತಪ್ಪಿಸಲು ಮೀನಿನ ಬಲೆಯ ಕಣ್ಣಿನ ಕನಿಷ್ಠ ಅಳತೆಯನ್ನು ಕರ್ನಾಟಕ ಸಮುದ್ರ ಮೀನುಗಾರಿಕೆ ಕಾಯ್ದೆಯನ್ವಯ ಜಾರಿಗೊಳಿಸಲು ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಪಶ್ಚಿಮ ಘಟ್ಟದಿಂದ ಹರಿದುಬರುವ ನದಿ ನೀರು ಸಮುದ್ರ ಸೇರುವ ಪ್ರಕ್ರಿಯೆ ಸುಸ್ಥಿರ ಮೀನುಗಾರಿಕೆಯ ಅಗತ್ಯವಾಗಿದ್ದು, ನೇತ್ರಾವತಿ ನದಿ ತಿರುವು ಯೋಜನೆ ಹಾಗೂ ಬೃಹತ್ ಯೋಜನೆಗಳು ಮೀನುಗಾರಿಕೆಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಇಂತಹ ಯೋಜನೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಲಾಯಿತು.
ಕರಾವಳಿ ಪ್ರದೇಶದುದ್ದಕ್ಕೂ ಇರುವ ಸೂಕ್ಷ್ಮ ಪ್ರದೇಶಗಳನ್ನು ಮೀನುಗಾರಿಕೆ ವೈವಿಧ್ಯದ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಸಂರಕ್ಷಿಸಬೇಕಲ್ಲದೆ, ಸರ್ಕಾರ ಜಾರಿಗೆ ತರುತ್ತಿರುವ ಕರಾವಳಿ ಹಸಿರು ಕವಚ ಕರಾವಳಿಯಾದ್ಯಂತ ವಿಸ್ತರಿಸಬೇಕು. ಮೀನುಗಾರರನ್ನು ಈ ಸಂಬಂಧ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿವಿಧ ಸಂಶೋಧನಾ ಸಂಸ್ಥೆಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಅಳಿವೆ, ಕಾಂಡ್ಲಾ ಹಾಗೂ ನದಿಮುಖಗಳನ್ನು ಮೀನುಗಾರಿಕೆಜ ಹಿತದೃಷ್ಟಿಯಿಂದ ಸಂರಕ್ಷಿಸಬೇಕೆಂಬ ನಿರ್ಣಯಗಳನ್ನು ಕಾರ್ಯಾಗಾರದಲ್ಲಿ ತೆಗೆದುಕೊಳ್ಳಲಾಗಿದೆ.
ರಾಜ್ಯ - ರಾಷ್ಟ್ರ
ವೇಣೂರು: ಕಾರಣೀಕ ಕ್ಷೇತ್ರ , ಕೊಡಮಣಿತ್ತಾಯ ದೈವದ ಮೂಲಸ್ಥಾನ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧೀ ಜಾತ್ರೋತ್ಸವ ಹಾಗೂ ದೈವದ ಕೋಲ ಬುಧವಾರ ನಡೆಯಿತು. ಊರ ಪರವೂರ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿ ಶ್ರೀ ದೈವದ ಕೃಪೆಗೆ ಪಾತ್ರರಾದರು.
ರಾಜ್ಯ - ರಾಷ್ಟ್ರ
ಗೋಫಾರ್ ವಿಶನ್ ಹೊಮಿಯೋ ಪತಿ ಕಿಟ್ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದಲ್ಲಿ ನಡೆಯಿತು. ಮಾರೂರು ಖಂಡಿಗದ ಶ್ರೀ ರಾಮದಾಸ ಆಸ್ರಣ್ಣ, ಗೋ ಫಾರ್ ವಿಶನ್ ನ ಉಮೇಶ್ ಭಟ್ ಬೆದ್ರಡ್ಕ ಮೊದಲಾದವರಿದ್ದರು. ಗೋ ಫಾರ್ ವಿಶನ್ ಸಂಸ್ಥೆ ಹೊಮಿಯೋ ಪಥಿ ಮದ್ದುಗಳನ್ನೊಳಗೊಂಡ ಕಿಟ್ ಗಳನ್ನು ಪ್ರಸ್ತುತ ಪಡಿಸುತ್ತಿದೆ.
ರಾಜ್ಯ - ರಾಷ್ಟ್ರ




ವಿಶ್ವಖ್ಯಾತಿಯ ಜೋಗ ಇಂದು ಸೊರಗಿ ಹೋಗಿದೆ. ದೇಶ ವಿದೇಶದಿಂದ ಬರುವ ವೀಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿದೆ. ಜೋಗ ದಲ್ಲಿ ಜಲಧಾರೆಯ ಅಬ್ಬರವಿಲ್ಲ. ಭೋರ್ಗರೆವ ಜೋಗ ಇಂದು ಪೇಚುಮುಖಮಾಡಿಕೊಂಡು ಸಪ್ಪೆಯಾಗಿದೆ. ಹನಿ ಹನಿ ನೀರ ಧಾರೆಯಷ್ಟೇ ಜೋಗದಲ್ಲಿ ಕಾಣಸಿಗುತ್ತದೆ. ಹತ್ತಾರು ಆಸೆಗಳನ್ನು ಕಣ್ಣಂಚಿನಲ್ಲಿ ಹೊತ್ತು ಬರುವ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ತೀವ್ರ ನಿರಾಸೆಯನ್ನು ಉಂಟುಮಾಡುತ್ತಿದೆ.
`ಸಾಯೋದ್ರೊಳಗೆ ನೋಡೋ ಒಮ್ಮೆ ಜೋಗದ್ ಗುಂಡಿ' ಎಂಬ ಮಾತು ಇದೀಗ ಜೋಗವನ್ನು ನೋಡಿದವರಿಗೆ `ಅಣಕಿಸುವಂತೆ' ಮಾಡುತ್ತಿದೆ. ಇಲ್ಲಿ ಕೇವಲ ಗುಂಡಿಗಳು ಮಾತ್ರ ಕಾಣುತ್ತಿದೆ. ಅದೂ ನೀರಿಲ್ಲದ ಗುಂಡಿ...
Video
