ವೈವಿಧ್ಯ
ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು. - ಟೀಂ ಈ ಕನಸು.
ಪ್ರಾದೇಶಿಕ ಸುದ್ದಿ
ಕುಂಬಳೆ: ``ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜ್ಯೋತಿಯಾಗು ಜಗಕೆಲ್ಲ ಎಂಬ ಮಾತು ನಮಗೆಲ್ಲ ದಾರಿದೀಪವಾಗಬೇಕು. ಪುಟಾಣಿಗಳು ದೀಪಗಳಂತೆ, ಅದು ಶಾಲೆಯಲ್ಲಿ ಬೆಳಗುತ್ತದೆ. ಜೀವನ ಮೌಲ್ಯಗಳನ್ನು ಅಭಿವ್ಯಕ್ತಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ.'' ಎಂದು ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಮುಖ್ಯೋಪಾಧ್ಯಾಯ ಪಿ. ನರಹರಿ ಅಭಿಪ್ರಾಯಪಟ್ಟರು.
ಅವರು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ತಿಂಗಳ `ಪ್ರತಿಭಾ ಭಾರತೀ' ಕಾರ್ಯಕ್ರಮವನ್ನು ಉದ್ಘಾಟಿಸಿದರು.ಆರನೇ ತರಗತಿ ವಿದ್ಯಾರ್ಥಿ ನವನೀತ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್.ಎಂ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಿರಣ ಮಹೇಶ ಸ್ವಾಗತಿಸಿ, ಸುಹಾಸ್ ಜಿ.ಕಾಕತ್ಕರ್ ವಂದಿಸಿದರು. ಕೃಷ್ಣಕಿರಣ ಮತ್ತು ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.
ಪ್ರಾದೇಶಿಕ ಸುದ್ದಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಮಕೂರಿನಲ್ಲಿ ಸಾವಯವ ಕೃಷಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.
ರಾಜ್ಯ - ರಾಷ್ಟ್ರ
ಮಂಗಳೂರು :ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸಲು ಹಾಗೂ ನೀರಿನ ದುರುಪಯೋಗವಾಗದಂತೆ ತಡೆಯಲು ಮೀಟರ್ ಅಳವಡಿಸುವಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಹೇಳಿದರು.ಅವರಿಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿ ಗಿನ ಸಂವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾ ಪಂಚಾಯತ್ ಮೌನವಾಗಿ ನಡೆಸಿರುವ ಸಾಧನೆಗಳನ್ನು ವಿವರಿಸಿದರು. ಗ್ರಾಮ ಪಂಚಾಯತ್ ಗಳು ಜಿಲ್ಲಾ ಕೇಂದ್ರಗಳು ಕಾರ್ಯ ನಿರ್ವಹಿಸುವ ಮಾದರಿಯಲ್ಲೇ ರೂಪುಗೊಳ್ಳಲು ಹಾಕಿಕೊಂಡಿರುವ ಯೋಜನೆಗಳನ್ನು ಸಭೆಗೆ ತಿಳಿಸಿದ ಅವರು, ಗ್ರಾಮ ಪಂಚಾಯತ್ ಗಳ ಸಬಲೀಕರಣಕ್ಕೆ ಪಿಡಿಒಗಳ ನೇಮಕ ಬಹಳಷ್ಟು ಶಕ್ತಿ ತುಂಬಲಿದೆ ಎಂದರು.
ಜಿಲ್ಲೆಯಲ್ಲಿ ಬಂಟ್ವಾಳ ಮತ್ತು ಮಂಗಳೂರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು ನೀರಿನ ಮೂಲಗಳ ಜಲ ಮರು ಪೂರಣಕ್ಕೆ ಹಾಗೂ ನಿರಂತರ ನೀರನ್ನು ಒದಗಿಸಲು ಎರಡೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ರೂಪಿಸಿ ಕಾರ್ಯಾರಂಭ ಮಾಡಲಾಗಿದೆ. ಈ ಸಂಬಂಧ ಮೊದಲ ಹಂತದ ಪ್ರಯೋಗವಾಗಿ ಕಿನ್ನಿಗೋಳಿ, ಹಳೆಯಂಗಡಿ, ತೋಕೂರು, ಗೋಳ್ತ ಮಜಲುಗಳನ್ನು ಆರಿಸಲಾಗಿದೆ ಎಂದರು. 203 ಗ್ರಾಮ ಪಂಚಾಯತ್ ಗಳ 127 ಗ್ರಾಮ ಪಂಚಾಯತ್ ಗಳಲ್ಲಿ 86,000 ನೀರು ಸಂಪರ್ಕ ನೀಡಿದ್ದು, 39,000 ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಯೋಜನೆ ಯಶಸ್ಸಿಗೆ ಜನರ ಸಹಕಾರವನ್ನು ಸ್ಮರಿಸಿದ ಅವರು, ನವದೆಹಲಿಯಲ್ಲಿ 5 ದೇಶಗಳು ಪಂಚತಂತ್ರ:ಪಾಲ್ಗೊಂಡ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು ಎಂದರು.ವ್ಯವಸ್ಥೆಯನ್ನು ಪಾರದರ್ಶಕ ಗೊಳಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮ ಪಂಚಾಯತ್ ಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಪೂರಕವಾಗಿ ಎಲ್ಲ 203 ಗ್ರಾಮ ಪಂಚಾಯಿತಿ ಗಳನ್ನು ಆನ್ ಲೈನ್ ಗೊಳಿಸಲಾಗಿದ್ದು, ಡಬಲ್ ಎಂಟ್ರಿ ಸಿಸ್ಟಮ್ ನ್ನು ಜಾರಿಗೊಳಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಚಾರ್ಟೆಡ್ ಅಕೌಂಟೆಂಟ್ ಗಳ ನೆರವನ್ನು ಪಡೆಯಲಾಗಿದೆ. ಈ ವೆಬ್ ಬೇಸ್ಡ್ ಸಾಫ್ಟ್ ವೇರ್ ನಿಂದ ಮಾನಿಟರಿಂಗ್ ಗೆ ಸಹಕಾರ ದೊರೆಯಲಿದೆ ಎಂದರು.
ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ನೀಡಿರುವ ಆದ್ಯತೆ, ಸ್ವಚ್ಛತಾ ಆಂದೋಲನ ನಿರಂತರವಾಗಿ ನಡೆಯಲು ಕೈಗೊಂಡಿರುವ ಕ್ರಮ, ಸ್ವಚ್ಛತಾ ಪುರಸ್ಕಾರಗಳು ಇದೇ ಉದ್ದೇಶಕ್ಕೆ ಸದ್ಬಳಕೆ ಯಾಗುವಂತೆ ವಹಿಸಿದ ಮುತುವರ್ಜಿಯ ಬಗ್ಗೆ ಸಿಇಒ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸುವರ್ಣ ಗ್ರಾಮೋದಯ: ಸುವರ್ಣ ಗ್ರಾಮೋದಯ ಯೋಜನೆ ಯಡಿ 65 ಗ್ರಾಮಗಳಲ್ಲಿ ನಿರುದ್ಯೋಗ ಹೊಂದಿರುವ ಯುವಕ/ಯುವತಿಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲು 243.63ಲಕ್ಷ ಅನುದಾನ ಲಭ್ಯವಿದೆ. ಈ ಬಗ್ಗೆ ಫಲಾನುಭವಿ ಆಯ್ಕೆ ಪ್ರಕ್ರಿಯೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈಗಾಗಲೇ ಆರಂಭಗೊಂಡಿದೆ. 7 ರಿಂದ 12 ರವರೆಗೆ ಕಲಿತು ನಿರುದ್ಯೋಗಿ ಗಳಾಗಿರುವ ಗ್ರಾಮೀಣ ಮಟ್ಟದ ಯುವಶಕ್ತಿಗೆ ಅವರು ಇಚ್ಛಿಸುವ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರೂ.10.00 ಲಕ್ಷ ಹಾಗೂ ತಾಲೂಕು ಪಂಚಾಯತ್ ಮಟ್ಟದಲ್ಲಿ ರೂ. 25.00 ಲಕ್ಷ ವೆಚ್ಚದಡಿ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ನಿರ್ಮಿಸಲು ಅನುದಾನವಿದೆ. ಈ ಕೇಂದ್ರವು ಎಂಜಿಎನ್ಆರ್ಇಜಿಎ ಕಾರ್ಯಕ್ರಮ ಅನುಷ್ಠಾನಕ್ಕೆ ಸ್ಥಳಾವಕಾಶ, ಗ್ರಾಮಸಭೆಗಳನ್ನು ನಡೆಸಲು ಸಭಾಂಗಣ, ಕಟ್ಟಡಗಳಿಲ್ಲದ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗೆ ಸ್ಥಳಾವಕಾಶ ನೀಡುವುದಲ್ಲದೆ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ ಆರ್ ಇ ಜಿ ಎ ಮತ್ತು ಇತರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಮತ್ತು ಸೌಲಭ್ಯ ಪಡೆಯಲು ನಾಗರೀಕ ಮಾಹಿತಿ ಮತ್ತು ಸೇವಾ ಕೇಂದ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಯೋಜನೆ ರೂಪಿಸಿದೆ.
ವಸತಿ ಯೋಜನೆಗಳ ಸಾಲದ ಮೇಲಿನ ಬಡ್ಡಿ ಮನ್ನಾ: ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸುತ್ತಿರುವ ವಿವಿಧ ವಸತಿ ಯೋಜನೆಗಳ ನಿರ್ಮಾಣಕ್ಕೆ ಸಾಲ ಹಾಗೂ ಸಹಾಯಧನ ಕಾರ್ಯಕ್ರಮದಡಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಶೇ.11ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಫಲಾನುಭವಿ ಮನೆ ನಿರ್ಮಾಣಕ್ಕೆ ರೂ.10,000 ಸಾಲವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಪಡೆದಿದ್ದಲ್ಲಿ ತಿಂಗಳ ರೂ.115 ಮಾಸಿಕ ಕಂತಿನಂತೆ 180 ಕಂತುಗಳಲ್ಲಿ ಸಾಲವನ್ನು ಮರು ಪಾವತಿಸ ಬೇಕಾಗುತ್ತದೆ ಸಾಲ ಪಡೆದ ಫಲಾನುಭವಿಗಳಿಗೆ ಬಡ್ಡಿ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಶ್ರಯ/ನವಗ್ರಾಮ ಯೋಜನೆಗಳ ಸಾಲಕ್ಕೆ ಸಂಬಂಧಿಸಿದಂತೆ 31.3.10 ರೊಳಗೆ ಸಾಲ ಪಾವತಿಸಿದ್ದಲ್ಲಿ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದರು. ದ.ಕ ಜಿಲ್ಲೆಯಲ್ಲಿ ಮೇಲ್ಕಂಡ ವಸತಿ ಯೋಜನೆಯಡಿ 26591 ಫಲಾನುಭವಿಗಳು ಸಾಲವನ್ನು ಪಡೆದಿದ್ದು ಅವರೆಲ್ಲರೂ ಸಾಲ ಪಾವತಿಸಲು ಮುಂದಾದರೆ ಒಟ್ಟು 1.84 ಕೋಟಿ ಬಡ್ಡಿ ಮನ್ನಾ ಮಾಡಿದಂತಾಗುತ್ತದೆ ಎಂದು ಶಿವಶಂಕರ್ ವಿವರಿಸಿದರು.ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಶಿವರಾಮೇಗೌಡ, ಸಿಪಿಒ ತಾಕತ್ ರಾವ್, ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ,ಮುಖ್ಯ ಲೆಕ್ಕಾಧಿಕಾರಿ ಬಾಣದ ತಿಮ್ಮಪ್ಪ ಅವರು ಉಪಸ್ಥಿತರಿದ್ದರು.
ಪ್ರಾದೇಶಿಕ ಸುದ್ದಿ
ಮುಲ್ಕಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಪ್ರೊ.ಜಗದೀಶ ಬಾಳ ಹೇಳಿದರು. ಅವರು ಮೂಲ್ಕಿ ವಿಜಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಎಂದರೆ ಕೇವಲ ಶ್ರಮ ದುಡಿಮೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದ್ದು ಅದನ್ನು ಹೋಗಲಾಡಿಸಿ ರಾಷ್ಟ್ರೀಯ ಸೇವಾ ಯೋಜನೆ ಸಮಾಜದ ಮೌಢ್ಯಗಳನ್ನು ತಿದ್ದುವ ಒಂದು ಶಕ್ತಿಯಂತೆ ಬೆಳಗಬೇಕು ಎಂದ ಅವರು ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ ಯೋಜನಾ ಘಟಕದ ಬೆಳವಣಿಗೆಗೆ ಅಗತ್ಯ ಎಂದರು. ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಅರವಿಂದ ಜೋಶಿ ವಹಿಸಿದ್ದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ಹಯವದನ ಉಪಾಧ್ಯ, ಕಾರ್ಯದರ್ಶಿಗಳಾದ ಪ್ರಾಣೇಶ್ ಭಟ್,ಪದ್ಮಶ್ರೀ,ತನಿಷಾ,ಪಜ್ವಲ್ ಮೆಂಡನ್ ವೇದಿಕೆಯಲ್ಲಿದ್ದರು.ಪ್ರಸಾದ್ ಸ್ವಾಗತಿಸಿದರು.ಅಭಿಜಿತ್ ಕಾರ್ಯಕ್ರಮ ನಿರೂಪಿಸಿದರು.ಚೈತ್ರಾ ವಂದಿಸಿದರು
ವರದಿ: ಭಾಗ್ಯವಾನ್ ಮುಲ್ಕಿ.
ವೈವಿಧ್ಯ
ಪರಿಸರ ವೈವಿದ್ಯತೆ, ಒಟ್ಟಾಗಿ ತೆಲೆಯೆತ್ತಿನಿಂತ ತರಹೇವಾರಿ ಕಾಂಡ್ಲ ಸಸ್ಯಗಳ ಸಂಚಯ, ಸಂಜೆ ಗಿಡದ ರಂಬೆ, ಕೊಂಬೆ, ಟಿಸುಲು ಹಾಗೂ ಎಲೆಯನ್ನೆಲ್ಲಾ ಆವರಿಸಿ ಕುಳಿತ ಹಕ್ಕಿಳ ಕಲರವ ಮುಂತಾದ ವೈವಿಧ್ಯ ದೃಶ್ಯಾವಳಿಗಳು ಪ್ರಪಂಚದ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ! ಅದು ರಾಜಾಡಿ ಕಾಂಡ್ಲಾ ವನದಲ್ಲಿ ಮಾತ್ರ ಸಾಧ್ಯ. ಮತ್ತೆಲ್ಲೂ ಕಂಡುಬಾರದ ಅಪರೂಪದ ದೃಶ್ಯಾವಳಿಗಳ ಸಂಚಯದಂತಿರುವ ರಾಜಾಡಿ ಕಾಂಡ್ಲಾ ವನ ಅರಣ್ಯ ಇಲಾಖೆಯ ಔದಾಸಿನ್ಯದಿಂದಾಗಿ ಹತ್ತರಲ್ಲಿ ಹನ್ನೊಂದಾಗಿದೆ. ಅರಣ್ಯ ಇಲಾಖೆ ಕಾಂಡ್ಲಾ ವೀಕ್ಷಣೆಯ ನಾಮಫಲಕ ಮತ್ತು ಕೊಡೆಯಾಕಾರದ ಕಟ್ಟಡ ಕಟ್ಟಿ ಬಟ್ಟಂಬಯಲಲ್ಲಿ ಕಾಂಡ್ಲಾ ವನವನ್ನು ಧಾತಾರರಿಲ್ಲದಂತೆ ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮಗ್ಗಲಲ್ಲೇ ಇರುವ ಕಾಂಡ್ಲಾ ವನ ವೀಕ್ಷಣೆ ಮಾತ್ರ ಕನಸಿನ ಗಂಟಾಗುತ್ತಿದೆ. ಪ್ರಾವಾಸೋಧ್ಯಮ ನಕ್ಷೆಯಲ್ಲಿ ಗುರುತಿಸುಕೊಳ್ಳುವ ಎಲ್ಲಾ ಅರ್ಹತೆಯಿದ್ದರೂ, ಕಾಂಡ್ಲಾ ವನ ಹಿತ್ತಿಲ ಗಿಡ ಮದ್ದಲ್ಲ ಎಂಬಂತಾಗಿದೆ.
ಕುಂದಾಪುರ ಸಮೀಪದ ತಲ್ಲೂರು ರಾಜಾಡಿ ಸೇತುವೆ ರಾಷ್ಟ್ರೀಯ ಹೆದ್ದಾರಿ 17ರ ಅಂಚಿನಲ್ಲಿ ಕಾಂಡ್ಲಾ ವನಗಳ ಸಂಚಯ ತಲೆಯೆತ್ತಿನಿಂತದೆ. ಕುಂದಾಪುರ, ಬೈಂದೂರು ಮಧ್ಯದಲ್ಲಿ ಸಿಗುವ ಕಾಡ್ಲಾ ಸಸ್ಯ ಹಲವಾರು ವೈವಿಧ್ಯತೆಗೆ ಹೆಸರಾಗಿದೆ. ಒಂದೇ ಪ್ರದೇಶದಲ್ಲಿ ಹತ್ತು ಹಲವು ದೃಶ್ಯ ವೈವಿಧ್ಯ ಕಾಣಲು ಬೇರೆಲ್ಲೂ ಸಾಧ್ಯವಿಲ್ಲ ಎಂಬುದು ಇಲ್ಲಿನ ಹೆಗ್ಗಳಿಕೆ. ಈ ಎಲ್ಲಾ ದೃಶ್ಯಾವಳಿಗಳ ವೈವಿದ್ಯತೆ ಪರಿಗಣನೆಗೆ ತೆಗೆದುಕೊಂಡ ಅರಣ್ಯ ಇಲಾಖೆ ಪ್ರವಾಸಿಗರನ್ನ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಿತು. ಅದೇಕೋ ಅರಣ್ಯ ಇಲಾಖೆ ಪ್ರಯತ್ನಕ್ಕೆ ಬಾಲಗ್ರಹ ಪೀಡೆ ಬಡಿದಿದೆ. ಕಾಂಡ್ಲಾ ವೀಕ್ಷಣೆ ಪ್ರವಾಸಿಗರಿಗೆ ಕೈಗೆಟುಕದ ಹುಳಿ ದ್ರಾಕ್ಷಿ.
ಅರಣ್ಯ ಇಲಾಖೆ ಆಶ್ರಯದಲ್ಲಿ ಕಾಂಡ್ಲಾ ವೀಕ್ಷಣೆಗಾಗಿ ಕೊಡೆಯಾಕಾರದ ಕಟ್ಟಡ ಕಟ್ಟಲಾಗಿದೆ. 1.30 ಲಕ್ಷರು. ವೆಚ್ಚದಲ್ಲಿ ಕಾಶ್ಮೀರಿ ಮಾದರಿಯ ವಿಹಾರ ದೋಣಿ ನಿರ್ಮಾಣವಾಗಿದೆ. ಕಾಂಡ್ಲಾ ವನ ವೀಕ್ಷೆಣೆಗಾಗಿ ವನದ ನಡುವೆ ಹಾದು ಹೋಗುವ ಪೈಬರ್ ಪುಟ್ಬೋರ್ಡ್ ನಿರ್ಮಿಸಲಾಗಿದೆ. ಎರಡು ದೋಣಿ ಅರಣ್ಯಾಧಿಕಾರಿ ಮನೆಯಂಗಳದಲ್ಲಿ ಪವಡಿಸಿದೆ. ಪುಟ್ಪಾತ್ ದೇವರಿಗೆ ಗೊತ್ತು. ಕಾಂಡ್ಲಾ ವನದ ಪರಿಸರಲ್ಲಿ ತಾಜ್ಯ ವಿಲೇವಾರಿಯಾಗುತ್ತಿದೆ. ಪರಿಸರ ಮತ್ತು ಬೇರೆ ಬೇರೆ ಪ್ರದೇಶದ ತ್ಯಾಜ್ಯ ನಿರ್ದಾಕ್ಷಿಣ್ಯವಾಗಿ ಕಾಂಡ್ಲ ವನದ ಪಕ್ಕದಲ್ಲಿ ಬಂದು ಬೀಳುತ್ತಿದೆ. ಕಾಂಡ್ಲಾ ವನದ ಪರಿಸರಲ್ಲಿ ಶೇಖರಣೆಯಾಗುತ್ತಿರುವ ಕಸದ ರಾಶಿಯಿಂದ ಕಾಂಡ್ಲಾ ವನ ಪರಿಸರ ಗಬ್ಬೆದ್ದು ನಾರುತ್ತಿದೆ.
ಕಾಂಡ್ಲಾ ವನದ ಪರಿಸರದಲ್ಲಿ ಹೇಳೋರು ಇಲ್ಲದ ನಿಮಿತ್ತ ಪ್ರವಾಸಿಗರು ತಿಂದು ಬಿಸಾಕಿದ ಎಂಜಲೆಲೆ, ಪ್ಲಾಸ್ಟಕ್ ತೊಟ್ಟೆ, ನೀರಿನ ಬಾಟಲಿಗಳು ತುಂಬಿ ತುಳುಕುತ್ತಿದೆ. ಬರುವ ಪ್ರವಾಸಿಗರು ಜವಾಬ್ದಾರಿ ಮರೆತು ಕಾಂಡ್ಲಾ ವನದ ಸೊಬಗನ್ನು ಹಾಳುಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಕಾಂಡ್ಲಾ ಪರಿಸರದಲ್ಲಿ ಗಾರ್ಡ್ ಗಳನ್ನು ನಿಯುಕ್ತಿ ಗೊಳಿಸಿ ಪರಿಸರದ ಸ್ವಶ್ಛತೆಯನ್ನು ಕಾಪಾಡುವ ಪ್ರಯತ್ನ ಕೂಡಾ ಮಾಡುತ್ತಿಲ್ಲ. ಅರಣ್ಯ ಇಲಾಖೆ ಹಾಕಿದ ನಾಮಫಲಕ ಕೂಡಾ ಅರಣ್ಯ ಇಲಾಖೆಯ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಂತೆ ನಿಂತಿದೆ.
ಕಾಂಡ್ಲಾ ವನ ಬರೆ ಸಸ್ಯ ವೈವಿಧ್ಯಕ್ಕೆ ಸೀಮಿತವಾಗಿಲ್ಲ. ಮುಸ್ಸಂಜೆಯಲ್ಲಿ ಎಲ್ಲೆಲ್ಲಿಂದಲೋ ಬರುವ ತರಹೇವಾರಿ ಪಕ್ಷಿಗಳ ಕಲರವವೂ ಜೋರಾಗಿರುತ್ತದೆ. ಸಂಜೆ ಒಮ್ಮೆ ರಾಜಾಡಿ ಸೇತುವೆ ಮೇಲೆ ನಿಂತು ಕಣ್ಣು ಹಾಯಿಸಿದರೆ ಹಸಿರು ಸಸ್ಯ ಬೆಳ್ಳಕ್ಕಿಗಳಿಂದ ಅಲಂಕೃತಗೊಳ್ಳುತ್ತದೆ. ಬಿಳಿ, ಕಂದು, ಕಪ್ಪು, ಬಣ್ಣಗಳ ಸಂಚಯನದ ಪಕ್ಷಿಗಳ ಅಡಂಬೋಲಾವಾಗಿ ಕಾಂಡ್ಲಾ ವನ ರೂಪಾಂತರ ಪಡೆಯುತ್ತದೆ.
ರಾಜಾಡಿ ಕಾಂಡ್ಲಾ ವನದಲ್ಲಿ ಹತ್ತಾರು ತರತರದ ಪಕ್ಷಿಗಳು ಆಶ್ರಯ ಪಡೆದುಕೊಂಡಿದೆ. ಈ ಹಕ್ಕಿಗಳಿಗೆ ಇಲ್ಲಿ ಆಹಾರ ಹುಡುಕಾಟವುದೂ ಸುಲಭ. ಕರಾವಳಿ ತೀರದಲ್ಲಿ ಸಿಕ್ಕುವ ಹುಳು, ಹುಪ್ಪಟೆ ಹಿಡಿದು ಹೊಟ್ಟೆ ತುಂಬಿಸಿಕೊಂಡು ಉಳಿದದ್ದನ್ನು ಮರಿಗಳಿಗೆ ಗುಡುಕು ನೀಡುವ ದೃಶ್ಯವಂತೂ ವರ್ಣಿಸಲಸದಳ.
ಕಪ್ಪು ಕೊಕ್ಕಿನ ಕೊಕ್ಕರೆ, ಬೆಳ್ಳಕ್ಕಿ, ಕಾಗೆ, ಕೊಕ್ಕರೆ, ಕುಕ್ಕಾ ಮುಂತಾದ ಪಕ್ಷಿಗಳಿಗೆ ಕಾಂಡ್ಲಾ ವನ ಆಶ್ರಯತಾಣ. ಪ್ರಾಕೃತಿಕ ವೈಧ್ಯತೆಯ ಕೊಡುಗೆಯನ್ನು ಸದ್ವಿನಿಯೋಗ ಮಾಡಿಕೊಳ್ಳುವ ಯೋಗ ಪ್ರವಾಸಿಗರಿಗೆ ಸಿಕಿಲ್ಲ. ರಾಜಾಡಿಯಲ್ಲೊಂದು ವೈವಿಧ್ಯತೆ ಇದೆ ಎಂಬ ಅರಿವು ಮೂಡಿಸುವ ಪ್ರಯತ್ನ ಕೂಡಾ ಅರಣ್ಯ ಇಲಾಖೆ ಮಾಡುತ್ತಿಲ್ಲ.
ಹಿಂದೆ ಕುಂದಾಪುರದಲ್ಲಿ ಅರಣ್ಯ ಅಧಿಕಾರಿಯಾಗಿದ್ದ ಒಬ್ಬರು ಅಧಿಕಾರಿಗಳು ರಾಜಾಡಿ ಕಾಂಡ್ಲಾ ವನವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆ ರೂಪಿಸಿದ್ದರು. ಪ್ರವಾಸಿಗರ ವಸತಿ, ಸುಸಜ್ಜಿತ ಹೋಟೆಲ್ ಮತ್ತು ಕಾಂಡ್ಲಾ ವೀಕ್ಷಣೆಗೆ ದೋಣಿ ಮತ್ತು ಪ್ಲಾಟ್ಪಾರಂ ನಿರ್ಮಿಸುವ ಪ್ರಯತ್ನ ಮಾಡಿದ್ದರು. ಅದರ ಪ್ರತಿಫಲವಾಗಿ ಆಕರ್ಷಕ ದೋಣಿ ಮತ್ತು ಪುಟ್ಪೋರ್ಡ್ ನಿರ್ಮಾಣಗೊಂಡಿತು. ಆದರೆ ಈ ಅಧಿಕಾರಿ ಕುಂದಾಪುರದಿಂದ ಎತ್ತಂಗಡಿಯಾದರು. ನಂತರ ರಾಜಾಡಿ ಕಾಂಡ್ಲಾ ವನ ಬಣಬಣಿಸುತ್ತಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಹಾಗಾಗಿದೆ. ಬೈಂದೂರು ಪರಿಸರದಲ್ಲಿ ಹೆಜ್ಜೆಗೊಂದರಂತೆ ಪ್ರಾಕೃತಿಕ ಕೊಡುಗಿಯಿದೆ. ಅವೆಲ್ಲೂ ನಿರ್ಲಕ್ಷೆಗೆ ಒಳಗಾಗಿವೆ. ಅದಕ್ಕೆ ಹೊಸ ಸೇರ್ಪಡೆ ರಾಜಾಡಿ ಕಾಂಡ್ಲಾ ವನ. ಅರಣ್ಯ ಇಲಾಖೆ ಕೂಡಾ ರಾಜಾಡಿ ಕಾಂಡ್ಲಾ ವನದ ಕುರಿತು ಚಕಾರವೆತ್ತುವುದಿಲ್ಲ.
ಶ್ರೀಪತಿ ಹೆಗಡೆ ಹಕ್ಲಾಡಿ
ಪ್ರಾದೇಶಿಕ ಸುದ್ದಿ
ಮಂಗಳೂರು :ಉಳಿದೆಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿ ವಿಭಿನ್ನವಾಗಿದ್ದು, ಆರೋಗ್ಯ ಸೇವೆ ನೀಡುವವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಹಾಗೂ ಸೇವೆಯಲ್ಲಿ ವಿಶಿಷ್ಟತೆಯನ್ನು ಕಾಯ್ದು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಸಭಾಂಗ ಣದಲ್ಲಿ ಏರ್ಪಡಿಸ ಲಾಗಿದ್ದ ಆರೋಗ್ಯಾ ಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾ ಡುತ್ತಿದ್ದರು. ಇಂದು ಜಿಲ್ಲೆಯ 63 ಪ್ರಾಥಮಿಕ ಆರೋಗ್ಯ ಕೇಂದ್ರಗಳ, 7 ಸಮುದಾಯ ಆರೋಗ್ಯ ಕೇಂದ್ರಗಳ, ನಗರ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೆನ್ ಲಾಕ್ ವೈದ್ಯಾಧಿ ಕಾರಿಗಳ ಪಾಲ್ಗೊಂಡ ಸಭೆಯಲ್ಲಿ ಆರೋಗ್ಯ ಸೇವೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸದ್ಬಳಕೆ, ಜನರಿಗೆ ಆರೋಗ್ಯ ಇಲಾಖೆ ನೀಡುತ್ತಿರುವ ಸೇವೆ, ಸೇವೆ ನೀಡುತ್ತಿರುವ ಡಾಕ್ಟರ್ ಗಳ ಸ್ಥಿತಿ-ಗತಿ, ಸಮಸ್ಯೆ, ಅವರ ದೂರದೃಷ್ಟಿ, ಮಾದರಿ ಆಲೋಚನೆ ಗಳ ಬಗ್ಗೆ ಸವಿವರ ಸಮಾ ಲೋಚನೆ ಜಿಲ್ಲಾಧಿ ಕಾರಿಗಳ ನೇತೃತ್ವದಲ್ಲಿ ನಡೆಯಿತು. ಪ್ರಸಕ್ತ ಪರಿಸ್ಥಿತಿಯಲ್ಲಿ ಸೇವೆ ಗಳನ್ನು ಇನ್ನಷ್ಟು ಉತ್ತಮವಾಗಿ ನೀಡುವ ಬಗ್ಗೆ, ಇದ್ದ ಸಂಪನ್ಮೂಲ ಗಳನ್ನು ಸದ್ಬಳಕೆ ಮಾಡಿ ಅಗತ್ಯ ಜನರಿಗೆ ಸೌಲಭ್ಯ ತಲುಪಿಸುವ ಬಗ್ಗೆ ಉಪಸ್ಥಿತರಿದ್ದ ಅನುಭವಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ಅಭಿಪ್ರಾಯ ಪಡೆದರು. ಮಾದರಿ ಆರೋಗ್ಯ ಕೇಂದ್ರಗಳನ್ನು ಅದೇ ಮಾದರಿ ರೂಪಿಸಲು ದೊರೆತ ಸ್ಪೂರ್ತಿ ಮತ್ತು ನೆರವಿನ ಬಗ್ಗೆ ಸಹೋದ್ಯೋಗಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಎಲ್ಲರಿಂದಲೂ ಪಡೆಯಲು ಮಾದರಿ ಪ್ರಶ್ನೆಗಳನ್ನು ತಯಾರಿಸಿ ಫೀಡ್ ಬ್ಯಾಕ್ ಪಡೆಯಲು ನಿರ್ಧರಿಸಲಾಯಿತು. ತಾಲೂಕು ವೈದ್ಯಾಧಿಕಾರಿಗಳು ವೈದ್ಯಕೀಯ ಸೇವೆಗಿಂತ ಮಿಗಿಲಾಗಿ ಡಾಟಾ ಎಂಟ್ರಿ ಆಪರೇಟರ್ ಕೆಲಸ ಮಾಡಲು ಹೆಚ್ಚಿನ ಸಮಯ ಮೀಸಲಿಡಬೇಕಾದ ಕುರಿತು ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಇದ್ದ ವ್ಯವಸ್ಥೆಯಲ್ಲೇ ಅದಕ್ಕೆ ಪರಿಹಾರ ಕಂಡುಹಿಡಿಯಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.ಈ ಕುರಿತು ಸ್ಪಷ್ಟ ಮಾಹಿತಿ ಹಾಗೂ ಪ್ರಾಜೆಕ್ಟ್ ತಯಾರಿಸಲು ಶ್ರೀನಿವಾಸ ಕಾಲೇಜಿನ ಸಿಬ್ಬಂದಿಗಳು ಮುಂದಾಗಿದ್ದು, ದೂರುಗಳನ್ನು ಮಾತ್ರ ದಾಖಲಿಸದೆ ಸೇವಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವರದಿ ತಯಾರಿಸಲು ಮುಂದೆ ಬಂದಿದ್ದಾರೆ ಎಂದರು. ಈ ಸಂಬಂಧ ಮುಂದಿನ ತಿಂಗಳು ಇನ್ನೊಂದು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಇಂದಿನ ಸಭೆಯಿಂದ ಬಹಳಷ್ಟು ಅನುಕೂಲವಾಗಿದೆ. ಆತ್ಮಾವಲೋಕನ, ಗುರಿ, ಸಾಧನೆ, ಕೊರತೆಗಳ ಬಗ್ಗೆ ಮಾಹಿತಿ ವಿನಿಮಯ, ಸಮಸ್ಯೆಗಳು, ಅದಕ್ಕೆ ಪರಿಹಾರದ ಬಗ್ಗೆಯೂ ಹಾಗೂ ಗುಣಮಟ್ಟದ ಸೇವೆಯಲ್ಲಿ ಪರಿಪೂರ್ಣತೆ ಸಾಧಿಸುವ ಕುರಿತು ಐದು ಹಂತಗಳಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ ಉಪಸ್ಥಿತರಿದ್ದರು
ರಾಜ್ಯ - ರಾಷ್ಟ್ರ
ಅಕ್ಷರಶಃ ಕರಾವಳಿ ಈ ಬಾರಿ ಮಳೆಯಿಂದ ತತ್ತರಿಸಿದೆ. ಕಾರಣ ಕುಂಭದ್ರೋಣ ಮಳೆ...ಎಲ್ಲೆಲ್ಲೂ ಮಳೆಯಿಂದಾದ ಅನಾಹುತಗಳೇ. ಸಂಪೂರ್ಣ ಜಲಾವೃತ, ಭಾಗಶಃ ನೀರು ಹೀಗೆ ಒಬ್ಬೊಬ್ಬರ ಬಾಯಲ್ಲೂ ಒಂದೊಂದು ಸುದ್ದಿ. ಮಳೆಗಾಲದಲ್ಲಿ ಕಡಲೂ ಅಬ್ಬರಿಸಿದೆ. ತೀರವನ್ನು ನುಂಗಿದೆ. ಕಡಲ್ಕೊರೆತಕ್ಕೆ ಅನೇಕ ಮನೆಗಳು ಹಾನಿಗೊಂಡಿವೆ. 


ಚಿತ್ರ: ಮಹೇಶ್ ಪುಚ್ಚಪ್ಪಾಡಿ.
ರಾಜ್ಯ - ರಾಷ್ಟ್ರ
ಮಂಗಳೂರು: ಅಕ್ಷರಶಃ ಕರ್ನಾಟಕದಲ್ಲಿ ಮೇಘ ಸ್ಫೋಟವೇ ಆಗಿದೆ. ಕಳೆದ ೩ ದಿನಗಳಿಂದ ಏಕಾಏಕಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಲವು ಕಡೆಗಳಲ್ಲಿ ತೀವ್ರ ತೊಂದರೆಗಳುಂಟಾಗಿವೆ. ಶಾಲೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಕೃತಕ ನೆರೆ, ತಗ್ಗು ಪ್ರದೇಶಗಳು ಜಲಾವೃತ ಸೇರಿದಂತೆ ಮಹಿಳೆಯೊಬ್ಬಳು ನೀರಲ್ಲಿ ಕೊಚ್ಚಿಹೋದ ಘಟನೆಗಳು ಸಂಭವಿಸಿವೆ.
ಬಂಟ್ವಾಳದ ಸೀತಮ್ಮ ಎಂಬವರು ಭೀಕರ ಮಳೆಗೆ ಕೊಚ್ಚಿಹೋಗಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಶಾಲೆಗಳ ಗೋಡೆ ಮಳೆಗೆ ಆಹುತಿಯಾಗಿವೆ. ಹಲವೆಡೆಗಳಲ್ಲಿ ನದೀಗಳು ಉಕ್ಕಿ ಹರಿದು ಸಂಚಾರಕ್ಕೆ ತೊಡಕಾಗಿವೆ. ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡು "ದ್ವೀಪ"ಗಳಂತಾಗಿವೆ.
ಮಂಗಳೂರಿನ ಕೊಟ್ಟಾರದಲ್ಲಿ ಕೃತಕ ನೆರೆ ಉಂಟಾಗಿದೆ. ಬಂಟ್ವಾಳ ಪ್ರದೇಶದಲ್ಲೂ ತೀವ್ರ ತೊಂದರೆಯುಂಟಾಗಿದೆ. ಎಲ್ಲಾ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಜನ ತೀವ್ರ ತೊಂದರೆಗೊಳಗಾಗಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿವೆ. ಒಟ್ಟಾರೆಯಾಗಿ ನಿರಂತರ ಮಳೆ ಯಿಂದ ತೊಡಕುಗಳ ಸರಮಾಲೆಯೇ ಉಂಟಾಗಿವೆ.
ರಾಜ್ಯ - ರಾಷ್ಟ್ರ
ಮಂಗಳೂರು: ನದಿ ತುಂಬಿತು ದಾರಿ ಕಾಣದಾಯಿತು. ಇದು ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಇಂದಿನ ಸ್ಥಿತಿ. ಘಟ್ಟ ಪ್ರದೇಶವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದೆ. ಪರಿಣಾಮ ಸುಬ್ರಹ್ಮಣ್ಯದಲ್ಲಿ ನದೀ ನೀರ ಮಟ್ಟ ಏರಿದ್ದು ಕುಮಾರಧಾರಾ ಸೇತುವೆ ಮುಳುಗಡೆಯಾಗಿದೆ. ಕಳೆದೆರಡು ದಿನಗಳಿಂದ 4ಬಾರಿ ಈ ಸೇತುವೆ ಮುಳುಗಡೆಯಾಗಿದೆ. ಗುಂಡ್ಯ - ಕುಕ್ಕೆ ರಸ್ತೆ ಸಂಪರ್ಕ ಕಡಿದುಕೊಂಡಿದೆ. ಕ್ಷೇತ್ರಕ್ಕಾಗಮಿಸಿದ ಭಕ್ತಾಧಿಗಳು ತೀವ್ರ ತೊಂದರೆಗೆ ಸಿಕ್ಕುವಂತಾಗಿದೆ.
ವಿಶೇಷ ವರದಿ
ಸಮಸ್ಯೆ ಯಾವುದೂ ಇರಬಹುದು, ಯಾರಿಗೂ ಬರಬಹುದು. ಒಂದು ಮಾಧ್ಯವಾಗಿ ಸಮಸ್ಯೆಗೆ ಎರಡು ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಒಂದು: ಆ ಸಮಸ್ಯೆಯಿಂದ ಬಾಧಿತರಾಗಿರುವವರ ನೋವಿಗೆ ದನಿಯಾಗಿ, ಅವರ ಬಗ್ಗೆ ಒಂದಿಷ್ಟು ಅನುಕಂಪ ತೋರಿಸಿ ನಂತರ ಸುಮ್ಮನಾಗುವುದು. ಇನ್ನೊಂದು : ನೋವಿಗೆ ದನಿಯಾಗುವುದು ಮತ್ತು ಅನುಕಂಪತೋರುವುದಕ್ಕಿಂತ ಮಿಗಿಲಾಗಿ, ಸಮಸ್ಯೆಗೆ ಸ್ಪಷ್ಟ ಪರಿಹಾರ ಸೂಚಿಸುವುದು.
ಎರಡನೆಯ ಮಾದರಿಗೆ ಒಂದು ಅನನ್ಯ ಉದಾಹರಣೆ ಎಂದರೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್‌ನ ಅಡಿಕೆ ಪತ್ರಿಕೆ ಮತ್ತು ಅದರ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ.
ಪತ್ರಿಕೆ ಆರಂಭವಾದದ್ದು ಹೀಗೆ:
ಅದು ಎಂಭತ್ತರ ದಶಕದ ಮಧ್ಯಭಾಗ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಮಾರುಕಟ್ಟ ಧಾರಣೆ ತೀವ್ರವಾಗಿ ಕುಸಿದಿತ್ತು. ಅಸಂಖ್ಯ ಅಡಿಕೆ ಬೆಳೆಗಾರರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾಲ ಅದು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಅಡಿಕೆ ಕೃಷಿಕರನ್ನು ಸಂಕಷ್ಟದಿಂದ ಪಾರುಮಾಡಲು ಮತ್ತು ಅಡಿಕೆ ಕೃಷಿಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಯೋಚಿಸಲಾರಂಭಿಸಿತು. ಇದೇ ಸಂದರ್ಭದಲ್ಲಿ (ಅಂದರೆ ೧೯೮೫-೮೬ರಲ್ಲಿ) ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಸ್ಥಾನವನ್ನು ವಾರಣಾಶಿ ಸುಬ್ರಾಯ ಭಟ್ಟರಿಂದ ಡಾ. ಪಿ ಕೆ ಎಸ್ ಭಟ್ ಪಾಣಾಜೆ ಇವರು ವಹಿಸಿಕೊಂಡರು.
ಸಂಘದ ಅಧ್ಯಕ್ಷತೆ ವಹಿಸಿಕೊಂಡ ತಕ್ಷಣವೇ ಒಂದಿಷ್ಟು ಸಮಾನ ಮನಸ್ಕ ಅಡಿಕೆ ಬೆಳೆಗಾರರನ್ನು ಸಂಘಕ್ಕೆ ಆಹ್ವಾನಿಸಿದ ಡಾ. ಭಟ್ ಅಡಿಕೆ ಕೃಷಿಯಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಚರ್ಚಿಸಲು ಒಂದಷ್ಟು ಮಂದಿ ಸಮಾನ ಮನಸ್ಕರ ಸಭೆ ಸೇರಿಸಿದರು. ಇದೇ ಸಭೆಯಲ್ಲಿ ಅಡಿಕೆ ಬೆಳೆಗಾರರ ಆಶೋತ್ತರಗಳಿಗೆ ಸ್ಪಂದಿಸಲೆಂದೇ ಮತ್ತು ಅಡಿಕೆ ಕೃಷಿಯಲ್ಲಿ ಹೊಸ ಸಾಧ್ಯತೆಗಳ ಕುರಿತು ಮಾತುಕತೆ ನಡೆಸಲು ವೇದಿಕೆಯಾಗಿ ಒಂದು ಪತ್ರಿಕೆಯನ್ನು ಪ್ರಕಟಿಸುವ ಕುರಿತೂ ಚರ್ಚೆಯಾಯಿತು. ಸಂಘದ ವತಿಯಿಂದ ಹೊರತರಲು ಉದ್ದೇಶಿಸಿದ ಪತ್ರಿಕೆಯ ಜವಾಬ್ದಾರಿ ಆ ಸಮಯಕ್ಕಾಗಲೇ ಹವ್ಯಾಸಿ ಪತ್ರಕರ್ತರಾಗಿ ಹೆಸರು ಮಾಡಿದ್ದ ಶ್ರೀ ಪಡ್ರೆಯವರ ಹೆಗಲೇರಿತು.
ಅನಂತರ ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಘಟಿಸಿದ್ದು ಒಂದು ಇತಿಹಾಸವೇ ಸರಿ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಕಾಶನದಡಿಯಲ್ಲಿ ಹೊರಬಂದರೂ ಸಂಘದ ಮುಖವಾಣಿಯಾಗಲೊಲ್ಲದ, ಇಡೀ ರೈತಸಮುದಾಯದ ಮುಖವಾಣಿಯಾಗುವ ಉದ್ದೇಶದೊಂದಿಗೆ ಶ್ರೀ ಪಡ್ರೆಯವರ ಸಂಪಾದಕತ್ವದಲ್ಲಿ ’ಅರೆಕಾ ನ್ಯೂಸ್’ ಎಂಬ ದ್ವೈಮಾಸಿಕ ಪತ್ರಿಕೆ ೧೯೮೭ರ ನವೆಂಬರ್ ತಿಂಗಳಿನಲ್ಲಿ ಜನ್ಮತಾಳಿತು. ಅರೆಕಾ ನ್ಯೂಸ್ ಎಂಬ ಇಂಗ್ಲಿಷ್ ನಾಮ ಹೊಂದಿದ್ದ ಕನ್ನಡ ಪತ್ರಿಕೆಗೆ ಸಿಕ್ಕ ಧನಾತ್ಮಕ ಪ್ರತಿಕ್ರಿಯೆ ಕಂಡ ಅಡಿಕೆ ಬೆಳೆಗಾರರ ಸಂಘ ಪತ್ರಿಕೆಯನ್ನು ಮಾಸಿಕವನ್ನಾಗಿಸುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದೊಂದಿಗೆ ಹೊರಬಂದ ಪತ್ರಿಕೆಯೇ ಅಡಿಕೆ ಪತ್ರಿಕೆ. ಬಹುಷಃ ಅಡಿಕೆ ಪತ್ರಿಕೆ ಕನ್ನಡದ ಮೊಟ್ಟಮೊದಲ ’ಕೃಷಿಕರೇ ರೂಪಿಸಿದ ಕೃಷಿಕಪರ ಮಾಧ್ಯಮ.’
ಅಡಿಕೆ ಪತ್ರಿಕೆ ಎಂಬ ೧೯೮೮ರಲ್ಲಿ ಜನ್ಮತಳೆದ, ಈಗ ತನ್ನ ೨೨ರ ಹರೆಯದಲ್ಲಿರುವ, ಪುತ್ತೂರಿನಂತಹ ತಾಲೂಕು ಕೇಂದ್ರವೊಂದರಿಂದ ಹೊರಬರುತ್ತಿರುವ ಪತ್ರಿಕೆ ನಾಡಿನ ಸಮಸ್ತ ಮಾಧ್ಯಮಾಸಕ್ತರಿಗೆ ಅಧ್ಯಯನಯೋಗ್ಯ ವಿಷಯ. ಇದಕ್ಕೆ ಕಾರಣಗಳು ಹಲವಾರು.
ಅಡಿಕೆ ಪತ್ರಿಕೆಯ ಜನನದ ವರೆಗೆ ಕನ್ನಡದಲ್ಲಿ ಕೃಷಿ ಸಂಬಂಧಿ ಸಂವಹನ ಇರಲೇ ಇಲ್ಲ ಎಂದಲ್ಲ. ಆದರೆ ಅಲ್ಲಿಯವರೆಗೆ ಕೃಷಿ ಸಂಬಂಧಿ ಲೇಖನಗಳನ್ನು ಹೆಚ್ಚಾಗಿ ವಿಜ್ಞಾನಿಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಉಪನ್ಯಾಸಕರೇ ಬರೆಯುತ್ತಿದ್ದರು. ದಿನವಿಡೀ ಜಮೀನಿನಲ್ಲಿ ದುಡಿಯುವ, ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ರೈತ ಕೃಷಿ ಪತ್ರಿಕೆಗಳಿಗೆ ಬರೆಯುವುದು ತೀರಾ ನಗಣ್ಯವಾಗಿತ್ತು. ಅದಲ್ಲದೆ, ಅಂದಿನ ಸಂದರ್ಭದಲ್ಲಿ ಕೃಷಿ ಪತ್ರಿಕೆಯೊಂದು ಸರಕಾರ ಅಥವಾ ವಿಶ್ವವಿದ್ಯಾಲಯಗಳ ಧನಸಹಾಯವಿಲ್ಲದೆ, ಕೇವಲ ಓದುಗ ಮತ್ತು ಜಾಹೀರಾತುದಾರ ನೀಡುವ ಹಣವನ್ನು ನೆಚ್ಚಿಕೊಂದು ನಡೆಯುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು. ಸರಕಾರದ ಸಹಾಯದ ಕೃಷಿ ಪತ್ರಿಕೆಗಳಿದ್ದರೂ ಅವುಗಳಲ್ಲಿ ರೈತ ಬರೆದ ಯಾವ ಲೇಖನಗಳೂ ಇರುತ್ತಿರಲಿಲ್ಲ. ಏಕೆಂದರೆ ರೈತ ತನಗಾಗಿ ತಾನು ಬರೆಯುತ್ತಲೇ ಇರಲಿಲ್ಲ.
ಇಂಥದ್ದೊಂದು ಅಲಿಖಿತ ನಿಯಮವನ್ನು ಮುರಿದು, ’ರೈತರಿಂದ ರೈತರೆಡೆಗೆ’, ’ರೈತರಿಂದ ವಿಜ್ಞಾನಿಗಳೆಡೆಗೆ’ ಮಾದರಿಯ ಸಂವಹನಕ್ಕೆ ಚಾಲನೆ ನೀಡಿದ್ದು ಅಡಿಕೆ ಪತ್ರಿಕೆ ಬಳಗ. ಅಡಿಕೆ ಪತ್ರಿಕೆಯ ಆಡಳಿತ ಮಂಡಳಿಯಲ್ಲಿರುವವರಿಂದ ಹಿಡಿದು ಸಂಪಾದಕರವರೆಗೆ ಎಲ್ಲರೂ ಕೃಷಿಕರೇ ಆಗಿರುವುದು ಇನ್ನೊಂದು ವಿಶೇಷ.
ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ:
ಕೃಷಿಕರ ಅನುಭವಗಳು, ಆ ಅನುಭವದಿಂದ ದಕ್ಕುವ ಜ್ಞಾನವನ್ನೇ ಪತ್ರಿಕೆಯಲ್ಲಿ ಪ್ರಧಾನವಾಗಿ ಪ್ರಕಟಿಸಬೇಕು ಎಂಬ ಮೂಲೋದ್ದೇಶದಿಂದ ಜನ್ಮತಾಳಿದ ಅಡಿಕೆ ಪತ್ರಿಕೆಗೆ ರೈತರ ಕಡೆಯಿಂದ ಲೇಖನಗಳೆನೂ ಹರಿದುಬರಲಿಲ್ಲ. ಮೊದಮೊದಲು ಒಂದಷ್ಟು ಮಂದಿ ಉತ್ಸಾಹದಿಂದ ಬರೆದರೂ ಕೊನೆಗೆ ಅವರ ಲೇಖನ ಹರಿವಿನ ತೀವ್ರತೆ ಕುಗ್ಗಲಾರಂಭಿಸಿತು. ಪತ್ರಿಕೆಯ ಓದುಗರಿಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಮಾಹಿತಿಗಳು ಹೆಚ್ಚು ಉಪಯುಕ್ತವಾಗಲು ವಿಸ್ತಾರವಾದ ಲೇಖಕರ ವರ್ಗದ ಅವಶ್ಯಕತೆ ಆ ಹೊತ್ತಿಗಾಗಲೇ ಅಡಿಕೆ ಪತ್ರಿಕೆ ಬಳಗಕ್ಕೆ ಅರಿವಾಗಿತ್ತು. ಆದರೇನು ಮಾಡುವುದು? ಕೃಷಿಕರೇನೂ ಮುಗಿಬಿದ್ದು ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿರಲಿಲ್ಲ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಆರಂಭವಾಗಿದ್ದೇ ಕೃಷಿಕರ ಕೈಗೆ ಲೇಖನಿ ಎಂಬ ವಿನೂತನ ಕಾರ್ಯಕ್ರಮ.
ನೇಗಿಲು ಹಿಡಿದವನ ಕೈಗೆ ಲೇಖನಿ ಕೊಟ್ಟು ಬರೆಸುವ ಈ ಸಾಹಸದ ಬಗ್ಗೆ ಡಾ. ನಿರಂಜನ ವಾನಳ್ಳಿ ಹೇಳಿರುವ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ಡಾ. ವಾನಳ್ಳಿ ಅಡಿಕೆ ಪತ್ರಿಕೆಯ ಬೆಳವಣಿಗೆಯನ್ನು ತುಂಬ ಹತ್ತಿರದಿಂದ ಗಮನಿಸಿದವರು. ಕಳೆದೆರಡು ದಶಕಗಳಿಂದ ಕರ್ನಾಟಕದಲ್ಲಿ ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ ನಡೆಯುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ತಿರುವು ಕೊಟ್ಟ ಚಳವಳಿ ಇದು. ನಮ್ಮ ರೈತರ ಬಳಿ ಅಪಾರ ಅನುಭವ, ಜ್ಞಾನ ಇರುವುದು ಹೌದಾದರೂ ಅವರಲ್ಲಿ ಅನೇಕರು ಅನಕ್ಷರಸ್ಥರು. ಅಕ್ಷರಸ್ಥ ರೈತರಲ್ಲಿ ಬರೆಯುವ ಕೌಶಲ್ಯ ಸಾಕಷ್ಟು ಇಲ್ಲದ ಕಾರಣ ಕೃಷಿಯ ಬಗ್ಗೆ ಯಾರೂ ಬರೆಯಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಯಾವತ್ತೂ ಕೃಷಿ ಮಾಡದವರು ಕೃಷಿಕ ಸಮೂಹದ ಏಕೈಕ ಧ್ವನಿಯೋ ಎಂಬಂತೆ ಬರೆಯುತ್ತಿದ್ದರು. ಇಂಥ ಒಂದು ಪರಿಸ್ಥಿತಿಯನ್ನು ನೋಡಿಯೇ ಶ್ರೀ ಪಡ್ರೆ ಮತ್ತು ಅವರ ಸ್ನೇಹಿತರು ಕೃಷಿಕರ ಕೈಗೆ ಲೇಖನಿ ಆಂದೋಲನವನ್ನು ಆರಂಭಿಸಿದರು ಎನ್ನುತ್ತಾರೆ ಡಾ. ವಾನಳ್ಳಿ.
ಅಡಿಕೆ ಪತ್ರಿಕೆಯ ಪುಟದಲ್ಲಿ ಒಂದು ಪುಟ್ಟ ಪ್ರಕಟಣೆಯ ಮೂಲಕ ’ಕೃಷಿಕರ ಕೈಗೆ ಲೇಖನಿ’ ತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ರೈತರು ತಮ್ಮ ಅರ್ಜಿಗಳ ಜೊತೆಗೆ ಅವರ ಬರಹದ ಒಂದು ಪ್ರತಿಯನ್ನೂ ಇಡುವಂತೆ ಕೇಳಿಕೊಳ್ಳಲಾಯಿತು. ಹಾಗೆ ಪಡೆದುಕೊಂಡ ಅರ್ಜಿ ಮತ್ತು ಬರಹದ ಮಾದರಿಯ ಆಧಾರದ ಮೇಲೆ ೨೫-೩೦ ಮಂದಿ ಶಿಬಿರಾರ್ಥಿ ಕೃಷಿಕರನ್ನು ಆಯ್ಕೆ ಮಾಡಲಾಯಿತು. ಶಿಬಿರ ನಡೆಯುವ ಊರಿನ ರೈತರ ಜೊತೆ ಮಾತನಾಡಿ ಅವರಿಗೆ ಈ ಶಿಬಿರದ ಬಗ್ಗೆ ವಿಶ್ವಾಸ ಮೂಡುವಂತೆ ಮಾಡುವ ಕೆಲಸವೂ ಆಯಿತು. ಆ ಊರಿನ ರೈತರ ಬಳಿ ತರಬೇತುದಾರರಾಗಿ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಬಗ್ಗೆಯೂ ಮಾತುಕತೆ ನಡೆಸಲಾಯಿತು. ನಾಲ್ಕು ದಿನಗಳ ಕಾಲ ನಡೆಯುವ ಪ್ರತಿ ಶಿಬಿರದಲ್ಲಿಯೂ ಉಪನ್ಯಾಸ ಕಾರ್ಯಕ್ರಮ ಹೊರತುಪಡಿಸಿ ಅನೇಕ ಪ್ರಾಯೋಗಿಕ ತರಗತಿಗಳೂ ಇದ್ದವು. ಬರಹಕ್ಕೆ ವಿಷಯವನ್ನು ಗುರುತಿಸುವ ಮತ್ತು ಆಯ್ದುಕೊಳ್ಳುವ ಬಗ್ಗೆ, ಬರಹದ ವಿಧಾನಗಳ ಬಗ್ಗೆ ಮತ್ತು ಅದನ್ನು ಪ್ರಸ್ತುತಪಡಿಸುವ ವಿಧಾನಗಳ ಕುರಿತು, ಅಭ್ಯುದಯ ಸಂವಹನ, ಕೃಷಿ ಪತ್ರಿಕೋದ್ಯಮ ಮತ್ತು ಪರಿಸರ ಹೀಗೆ ಅನೇಕ ವಿಚಾರಗಳ ಕುರಿತು ಸರಣಿ ಉಪನ್ಯಾಸ ಮತ್ತು ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳಲಾಯಿತು.
ಪ್ರತಿ ಶಿಬಿರದಲ್ಲಿಯೂ ಮೂರು ಪ್ರಾಯೋಗಿಕ ಬರಹದ ತರಗತಿಗಳು ಇದ್ದವು. ಮೂರನೆಯ ಬಾರಿ ಶಿಬಿರಾರ್ಥಿಗಳು ತಮ್ಮ ಹತ್ತಿರದ ಹೊಲಕ್ಕೋ ತೋಟಕ್ಕೋ ಹೋಗಿ ಅಲ್ಲಿ ತಮ್ಮ ಬರಹಕ್ಕೆ ವಸ್ತುವಾಗಬಲ್ಲ ವಿಷಯವೊಂದನ್ನು ಹುಡುಕಿ ನುಡಿಚಿತ್ರವೊಂದನ್ನು ಬರೆಯಬೇಕಿತ್ತು. ತಾವು ಶಿಬಿರದಲ್ಲಿ ಕಲಿತ ಎಲ್ಲ ಬಗೆಯ ಪ್ರಾಯೋಗಿಕ ವಿಚಾರಗಳು ಆಗ ಬಳಕೆಗೆ ಬರುತ್ತಿದ್ದವು. ಹಾಗೆ ಶಿಬಿರಾರ್ಥಿಗಳು ಬರೆದ ನುಡಿಚಿತ್ರವನ್ನು ಅಡಿಕೆ ಪತ್ರಿಕೆಯ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡುತ್ತಿದ್ದರು. ಶಿಬಿರಾರ್ಥಿಗಳ ಪೈಕಿ ಆಯ್ದ ಹತ್ತು ಮಂದಿಗೆ ತಮ್ಮ ಬರಹವನ್ನು ಓದಿ ಹೇಳುವಂತೆ ತಿಳಿಸಲಾಗುತ್ತಿತ್ತು. ಪ್ರತಿಯೊಬ್ಬ ಶಿಬಿರಾರ್ಥಿ ತನ್ನ ಬರಹವನ್ನು ಓದಿದ ನಂತರ ಸಂಪನ್ಮೂಲ ವ್ಯಕ್ತಿಗಳು ಆತನ ಬರವಣಿಗೆ, ಪ್ರಸ್ತುತಪಡಿಸುವ ಶೈಲಿಯ ಕುರಿತು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇದರಿಂದ ಎಲ್ಲ ಶಿಬಿರಾರ್ಥಿಗಳಿಗೂ ತಮ್ಮ ಬರಹವನ್ನು ಸುಂದರವಾಗಿಸುವ ಕುರಿತು ಸ್ಪಷ್ಟ ಕಲ್ಪನೆ ಮೂಡುತ್ತಿತ್ತು.
ಅಡಿಕೆ ಪತ್ರಿಕೆಯ ಮೂಲಕ ನಾವು ನಮ್ಮ ಕೃಷಿಕ ಓದುಗರಿಗೆ ಬರೆಯುವಂತೆ ಆಹ್ವಾನ ನೀಡಿದ್ದೆವು. ನಾವು ಕೃಷಿಕರಿಂದ ದೊಡ್ಡ ಮಟ್ಟದ ಲೇಖನಗಳನ್ನು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಕೆಲವೇ ದಿನಗಳಲ್ಲಿ ಸುಳ್ಳಾಯಿತು. ನಮ್ಮ ಆಹ್ವಾನಕ್ಕೆ ಬಂದ ಸಣ್ಣ ಮಟ್ಟದ ಪ್ರತಿಕ್ರಿಯೆ ನೋಡಿ ಈ ಬಗ್ಗೆ ಏನಾದರೂ ಮಾಡಬೇಕು, ಕೃಷಿಕರು ತಮ್ಮ ಸಮಸ್ಯೆ, ಸಾಧನೆಗಳ ಬಗ್ಗೆ ತಾವೇ ಬರೆಯುವಂತಾಗಬೇಕು ಎಂಬ ಉದ್ದೇಶದಿಂದ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ ಆರಂಭವಾಯಿತು ಎನ್ನುತ್ತಾರೆ ಶ್ರೀ ಪಡ್ರೆ. ಅಂದಹಾಗೆ ಇದುವರೆಗೆ ಶಿರಸಿ ತಾಲೂಕಿನ ಭೈರುಂಬೆ ಮತ್ತು ಯಡಳ್ಳಿ, ಕಾಸರಗೋಡು ತಾಲೂಕಿನ ನೀರ್ಚಾಲು, ಕೊಪ್ಪ, ಚಿತ್ರದುರ್ಗದ ಭೀಮಸಮುದ್ರ ಸೇರಿದಂತೆ ವಿವಿಧೆಡೆ ಇಂಥ ಆರು ಕಾರ್ಯಕ್ರಮಗಳು ನಡೆದಿವೆ. ಅದಲ್ಲದೆ ಮೊಟ್ಟಮೊದಲ ಕೃಷಿಕರ ಕೈಗೆ ಲೇಖನಿ ಶಿಬಿರ ನಡೆದ ಎರಡು ದಶಕಗಳೇ ಕಳೆದಿವೆ.
ನಾಡಿನ ವಿವಿಧೆಡೆ ನಡೆದ ಈ ಕಾರ್ಯಕ್ರಮಗಳಲ್ಲಿ ಬರವಣಿಗೆಯ ಪ್ರಾಥಮಿಕ ಜ್ಞಾನ ಪಡೆದ ಅನೇಕ ಮಂದಿ ಇವತ್ತು ಅಡಿಕೆ ಪತ್ರಿಕೆಯ ಬರಹಗಾರರ ಪಡೆಯಲ್ಲಿ ಸೇರಿದ್ದಾರೆ. ಇನ್ನೂ ಅನೇಕ ಮಂದಿ ನಾಡಿನ ವಿವಿಧ ಪತ್ರಿಕೆಗಳಿಗೆ ಕೃಷಿ ಸಂಬಂಧಿ ವಿಚಾರಗಳ ಬಗ್ಗೆ ಬರೆಯುತ್ತಿದ್ದಾರೆ. ಅವರ್ಯಾರೂ ರೈತರ ನೋವಿಗೆ ಕೇವಲ ಧ್ವನಿಯಾಗಿ, ತಮ್ಮ ಆಕ್ರೋಶವನ್ನು ಅಕ್ಷರ ರೂಪಕ್ಕಿಳಿಸಿ ನಂತರ ಸುಮ್ಮನೆ ಕೂರುವುದಿಲ್ಲ. ಬದಲಿಗೆ, ರೈತನ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ. ತಮ್ಮದೇ ಒಂದು ಸಮಸ್ಯೆಗೆ ತಾವೇ ಕಂಡುಕೊಂಡ ಪರಿಹಾರವನ್ನೂ ಬರಹರೂಪಕ್ಕಿಳಿಸುತ್ತಾರೆ. ತನ್ಮೂಲಕ ಅದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ಇನ್ನೊಬ್ಬ ರೈತನಿಗೆ ಪರಿಹಾರ ಸೂಚಿಸುವ ಕೆಲಸ ಮಾಡುತ್ತಾರೆ. ನಾಡಿನೆಲ್ಲೆಡೆ ರೈತಾಪಿ ಎಂದರೆ ನಷ್ಟದ ಕಾಯಕ ಎಂಬ ನಂಬಿಕೆಯೇ ಗಟ್ಟಿಯಾಗಿರುವಾಗಲೂ, ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂದೂ ವಿಶ್ವಾಸದಿಂದ ಹೇಳುತ್ತಾರೆ. ಅಭ್ಯುದಯ ಮಾಧ್ಯಮವೊಂದು ನಾಡಿನ ಸಮಸ್ಯೆಗೆ ಸ್ಪಂದಿಸುವ ವಿಧಾನಕ್ಕೆ ಮಾದರಿ ಎಂಬಂತೆ ಈ ಆಂದೋಲನ ಬೆಳೆದುನಿಂತಿದೆ.
ವಿಜಯ್ ಜೋಶಿ
ವಿಶೇಷ ವರದಿ
ಪ್ರಕೃತಿ ಇರುವುದು ಮಾನವನ ಅಗತ್ಯಗಳನ್ನು ಪೂರೈಸಲು,ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದರು. ಕಾಲಚಕ್ರ ಸುತ್ತುತ್ತಿರುತ್ತದೆ;ಮಾನವ ಪ್ರಕೃತಿಯೊಂದಿಗೆ ಪೂರಕ ಬದುಕನ್ನು ನಡೆಸಬೇಕು.ಸಾವಯವ ಕೃಷಿಗೆ ಇಂದು ಕೃಷಿಕರು ಮರಳುತ್ತಿರುವುದು ಇದನ್ನೇ ಸಾಬೀತು ಪಡಿಸುತ್ತದೆ.
ಹಸಿರು ಕ್ರಾಂತಿಯಿಂದ ಆಹಾರ ಉತ್ಪಾದನೆ ಹೆಚ್ಚಾಯಿ ತಾದರೂ, ಕೃಷಿ ಭೂಮಿಯ ಮೇಲೆ ದುಷ್ಪರಿಣಾ ಮಗಳಾದವು. ಮಿತಿಮೀರಿದ ರಾಸಾಯಿ ನಿಕಗಳ ಬಳಕೆ ಯಿಂದ ಭೂಮಿಯ ಫಲವತ್ತತೆ ಕಡಿಮೆ ಯಾಯಿತು. ಕೃಷಿಕರು ಹಲವು ಸಮಸ್ಯೆಗಳನ್ನು,ಸವಾಲುಗಳನ್ನು ಎದುರಿಸಲು ಆರಂಭಿ ಸಿದರು. ಗೊಬ್ಬರ ಕೊರತೆಯ ಬಿಸಿ ರಾಜ್ಯಾಡ ಳಿತವನ್ನೇ ಅಲುಗಾಡಿಸಿತು. ಇಂತಹ ಸಂದರ್ಭದಲ್ಲಿ ಪರ್ಯಾಯ ಮಾರ್ಗವಾಗಿ ಸಾವಯವ ಕೃಷಿ ಜನಪ್ರಿಯ ವಾಗ ಲಾರಂಭಿಸಿತು.ಸರ್ಕಾರವು ಇದಕ್ಕೆ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಲಾ ರಂಭಿಸಿತು.ಸಾವಯವ ಕೃಷಿ ಮಿಷನ್ ಸ್ಥಾಪಿಸಿತು. ಸಾವಯವ ಕೃಷಿ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.
ಈ ಕಾಲ ಘಟ್ಟದಲ್ಲಿ ಇಂತಹ ಯಾವುದೇ ಆಕರ್ಷ ಣೆಗಳಿಗೆ ಒಳಗಾಗದೆ ಕೃಷಿ ವಲಯದ ಎಲ್ಲ ಸವಾಲು ಗಳನ್ನು ಎದುರಿಸಿ ಸಾವಯವ ಬೆಳೆಗಾ ರರಿಗೆ ಸ್ಫೂರ್ತಿಯಾಗಿ 1972 ರಿಂದಲೇ ಸುಳ್ಯದ ಭಾರದ್ವಾಜ ಕುಟುಂಬದವರು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ ಸಾರ್ಥಕ ಬದುಕು ನಡೆಸು ತ್ತಿದ್ದಾರೆ. ಸುಳ್ಯದ ಅರಂಬೂ ರಿನಲ್ಲಿ ಪಯಸ್ವಿನಿ ನದಿ ಮೂರು ದಿಕ್ಕನ್ನು ಸುತ್ತುವರಿ ದಿರುವ ಪ್ರಕೃತಿ ರಮಣೀಯ ಪರಿಸರದಲ್ಲಿ ಸಹೋದರರು 40 ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಕೃಷಿ ಮಾಡು ತ್ತಿದ್ದಾರೆ; ಹಸಿವನ್ನು ನೀಗಿಸುವ ಕಾಯಕದಲ್ಲಿ ತೊಡಗಿ ಕೊಂಡಿದ್ದಾರೆ. 12 ಜನ ಸಹೋದರರು ಕೃಷಿಯಲ್ಲಿ ತೊಡಗಿದ್ದು, ಇವರಲ್ಲೊಬ್ಬರು ಸಿವಿಲ್ ಇಂಜಿನಿಯರ್ ತೂಗು ಸೇತುವೆ ನಿರ್ಮಾಣದಲ್ಲಿ ಪ್ರಸಿದ್ಧಿಯನ್ನು ಪಡೆದ ಗಿರೀಶ್ ಭಾರದ್ವಾಜ.ಇವರಿಗೂ ಇಲ್ಲಿ ಕೃಷಿ ಭೂಮಿ ಇದೆ ಹಾಗೂ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇವರ ಅಪ್ಪ ಇವರಲ್ಲರಿಗೂ ಮಾದರಿ. ಬ್ರಿಟಿಷ್ ರ ಆಡಳಿತದಲ್ಲಿ ಆಂಧ್ರ ಪ್ರದೇಶದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದವರು ಇವರು.ಅನಿವಾರ್ಯ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಾತಂತ್ರ ಪೂರ್ವ 1930-31 ರಲ್ಲಿ ಮಂಗಳೂರಿಗೆ ಆಗಮಿಸಿದ ಇವರು ಪಾವಂಜೆ ಅಣೆಕಟ್ಟು, ಕೂಳೂರು ಸೇತುವೆ, ಮೋಹಿನಿ ವಿಲಾಸ ಹೋಟೆಲ್, ಧರ್ಮಸ್ಥಳದ ಮಂಜಯ್ಯ ಹೆಗಡೆ ಯವರ ಬೀಡಿನ ಕೆಳ ಅಂತಸ್ತು, ಹೊಳೆ ಮಧ್ಯೆ ಇರುವ ಕಟೀಲು ದೇವ ಸ್ಥಾನದ ಅಡಿ ಅಂತಸ್ತು ಯೋಜನೆ ವಿನ್ಯಾಸ ರೂಪಿಸಿದ ಬಿ.ಕೆ. ಭಟ್ಟ ಅವರು ನಂತರ ಉತ್ತಮ ಕೃಷಿಕ ರಾದರು.ಮಕ್ಕಳಲ್ಲೂ ಕೃಷಿಯ ಬಗ್ಗೆ ಪ್ರೀತಿ ಬೆಳೆಸಿದರು.ಎಲ್ಲ ವೃತ್ತಿಗಿಂತಲೂ ಕೃಷಿ ಕೊಡುವ ಖುಷಿಯನ್ನು ಅರಿಯುವ ಬಗ್ಗೆ ಮಾರ್ಗದರ್ಶನ ನೀಡಿದರು.ಅವರ 15 ಜನ ಮಕ್ಕಳಲ್ಲಿ 12 ಗಂಡು ಮಕ್ಕಳು. ಅವರಲ್ಲಿ ಗಿರೀಶ್ ಭಾರದ್ವಾಜ ಅವರು ಅಪ್ಪನಂತೆ ಇಂಜಿನಿಯರ್ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. ಉಳಿದವರೆಲ್ಲರೂ ಕೃಷಿ ಋಷಿಗಳು. ಇಲ್ಲಿ ಅವರಿಗೆ ಕೃಷಿ ಮಾಡಲು ನೀರಿನ ತೊಂದರೆ ಇಲ್ಲ; ಆದರೆ ಇತ್ತೀಚೆಗೆ ಕೃಷಿ ಮಾಡಲು ಜನರೇ ದೊರೆಯದಂತಹ ಪರಿಸ್ಥಿತಿ. ಹಾಗಾಗಿ ಕೃಷಿ ಇಲಾಖೆ ಯಿಂದ ಮಾಹಿತಿ ಪಡೆದು ಕಟಾವು ಸೇರಿದಂತೆ ವಿವಿಧ ಕೆಲಸಗಳಿಗೆ ಯಂತ್ರಗಳನ್ನು ಉಪಯೋಗಿಸಲು ಆರಂಭಿಸಿದರಾದರೂ ಸಾವಯವ ಕೃಷಿ ಪದ್ಧತಿಯನ್ನು ಮುಂದುವರಿಸಿದ್ದೇವೆ ಎನ್ನುತ್ತಾರೆ ರವಿಶಂಕರ್ ಭಾರದ್ವಾಜ. ಹೂಮಲೆಯ ಬುಡದಲ್ಲಿ ಪ್ರಕೃತಿಸಹ್ಯ ಕೃಷಿ ನಡೆಸುತ್ತಿರುವ ಈ ಸಹೋದರರು ತಮಗೆ ಅಗತ್ಯವಿರುವ ಎಲ್ಲ ದವಸ ಧಾನ್ಯಗಳನ್ನು ಅವರ ಕೃಷಿ ಭೂಮಿಯಲ್ಲೇ ಬೆಳೆಯುತ್ತಾರೆ.ಹುಲ್ಲು ತೆಗೆಯಲು ಜನ ಸಿಗುತ್ತಿಲ್ಲ ಹಾಗಾಗಿ ಹಸುಗಳೇ ಹುಲ್ಲು ತೆಗೆಯುವ ಹಾಗೆ ಹುಲ್ಲು ಬೆಳೆದೆಡೆಗಳಲ್ಲಿ ಅವುಗಳನ್ನು ಮೇಯಲು ಬಿಡುತ್ತೇವೆ; ಶ್ರೀ ಪದ್ಧತಿ ಬೆಳೆಯಲ್ಲಿ ಕಳೆ ಜಾಸ್ತಿ, ಅದು ನಮ್ಮ ಪ್ರದೇಶಕ್ಕೆ ಒಗ್ಗದು ಎನ್ನುವ ಇವರು ಸಾಮಾನ್ಯ ನಾಟಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.
ಕೃಷಿ ಕಾರ್ಮಿಕರ ಕೊರತೆ ಯಿಂದಾಗಿ ಕಟಾವಿಗೆ, ಉಳುಮೆಗೆ, ಕಳೆ ತೆಗೆಯಲು ಯಂತ್ರಗಳ ಮೊರೆ ಹೋಗಿದ್ದಾರೆ. ಪವರ್ ಟಿಲ್ಲರ್, ರೀಪರ್, ಮಿನಿಟ್ರ್ಯಾಕ್ಟರ್, ವಿನ್ನೋವರ್ (ಗಾಳಿಯಂತ್ರ), ಪವರ್ ವೀಡ್, ಕೋನೋ ವೀಡರ್ ಗಳ ಸಹಾಯದಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.ಸಿವಿಲ್ ಇಂಜಿನಿಯರ್ ಸಹೋದರನ ಮಾರ್ಗ ದರ್ಶನದಲ್ಲಿ ಭತ್ತ ಸಂಗ್ರಹಿಸಲು, ತಲೆಹೊರೆ ಕಷ್ಟ ಕಡಿಮೆ ಮಾಡಿ ನೇರವಾಗಿ ಭತ್ತವನ್ನು ಮನೆಗೆ ತಂದು ಹಾಕಲು, ಚರ್ತು ಭುಜಾಕಾರ ಹಾಗೂ ನಾಲ್ಕು ಬಾಗಿಲಿರುವ ಮಗುಚಿ ಹಾಕಿದ ತೆಂಗಿನ ಸಿಪ್ಪೆ ಮಾದರಿಯ ಸಣ್ಣ ಕಟ್ಟಡ ನಿರ್ಮಿಸಿದ್ದು ಟ್ರ್ಯಾಕ್ಟರ್ ನೇರವಾಗಿ ಇದರೊಳಗೆ ತಂದು ಭತ್ತ ರಾಶಿ ಹಾಕುವು ದಲ್ಲದೆ ಬೈಹುಲ್ಲು ಮತ್ತು ಭತ್ತವನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತದೆ. ಆದರೆ ಈ ಆವಿಷ್ಕಾರದಲ್ಲಿ ಭತ್ತ ಸೂಡಿ ಕಟ್ಟಲು ಆಗುವುದಿಲ್ಲ ಎಂಬ ಅನಾನುಕೂಲ ಹೊರತು ಪಡಿಸಿದರೆ ಉಳಿದಂತೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ. ಭತ್ತದ ಕೃಷಿಯೊಂದಿಗೆ ಅಡಿಕೆ, ತೆಂಗು,ಬಾಳೆ, ನೇಂದ್ರಬಾಳೆ, ಕಾಳು ಮೆಣಸು, ಹಣ್ಣಿನ ಗಿಡಗಳು, ಹೂಗಿಡಗಳನ್ನು ಬೆಳೆಸಿರುವ ಸಹೋದರರು ತಮ್ಮೆಲ್ಲ ಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿ ಕೊಂಡಿದ್ದಾರೆ. ವಿದ್ಯಾರ್ಜನೆ ಕೃಷಿಯಿಂದ ನಮ್ಮನ್ನು ದೂರ ಸರಿಸದೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು, ನೂತನ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸಿದೆ ಎನ್ನುತ್ತಾರೆ. ಇವರಲ್ಲಿ ವಿಶ್ವೇಶ್ವ ಭಾರದ್ವಾಜ ಅವರಿಗೆ 2004 ರಲ್ಲಿ ಅತ್ಯುತ್ತಮ ಕೃಷಿಕ ಪ್ರಶಸ್ತಿ ರಾಜ್ಯೋತ್ಸವದಂದು ಲಭಿಸಿದೆ. ಸುಳ್ಯದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವ ಅವರ ಸಹಕಾರವನ್ನು ರವಿಶಂಕರ್ ಸ್ಮರಿಸುತ್ತಾರೆ.
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸುಳ್ಯದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರಂಬೂರಿದೆ. ಇಲ್ಲಿಂದ ಎಡಕ್ಕೆ ತಿರುಗಿ ಒಂದು ಕಿಲೋಮೀಟರ್ ಒಳರಸ್ತೆಯಲ್ಲಿ ಸಾಗಿದರೆ ಇಡ್ಯಡ್ಕ ಇಲ್ಲೆ ಈ ಕೃಷಿ ಋಷಿಗಳ ವಾಸ.
ರಾಜ್ಯ - ರಾಷ್ಟ್ರ
ಉಡುಪಿ : ನಂಬೋದು ಬಿಡೋಡು ಓದುಗರಿಗೆ ಬಿಟ್ಟ ವಿಚಾರ. ಆದರೆ ಒಂದಂತೂ ಸತ್ಯ. ವಿಶ್ವವಿಖ್ಯಾತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪಡಸಾಲೆಯಲ್ಲಿ ಅಧಿಕಾರಿಗಳ ಮತ್ತು ಪುರೋಹಿತರದ್ದೇ ಕಾರುಬಾರ್!
ದೇವಸ್ಥಾನದ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥಾಪನಾ ಸಮಿತಿಯಿಲ್ಲದೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಒಂದು ವರ್ಷ ಪೂರೈಸಿದ ಸಿಂಹಾವಲೋಕನದ ದಾರಿಯಲ್ಲಿ ಸಿಗೋ ಫಲಿತಾಂಶ ಸೊನ್ನೆ!
ಕೊಲ್ಲೂರಿಗೆ ಬರೋ ಭಕ್ತರನ್ನು ಕೇಳೋರಿಲ್ಲ. ದೇವಸ್ಥಾನದ ವಸತಿಗೃಹಗಳು ರಾಮಕೃಷ್ಣನ ಲೆಕ್ಕದಲ್ಲಿ ದುಡ್ಡು ಕೊಟ್ಟೋರಿಗೆ ಒಲಿಯುತ್ತೆ. ದರ್ಶನ, ಸೇವೆ ಮುಂತಾದ ಸಂಗತಿಗಳು ಭಕ್ತರ ಜೇಬಿಗೆ ಕತ್ತರಿ. ಭಕ್ತರೇ ಆಸ್ತಿಯಾದ ಕೊಲ್ಲೂರಿನಲ್ಲಿ ಎಲ್ಲೆಲ್ಲಿಂದಲೋ ಬಂದ ಭಕ್ತರ ಅಸ್ತಿತ್ವಕ್ಕೆ ಕೊಡಲಿಪೆಟ್ಟು ಬೀಳುತ್ತಿದೆ.
ಕೊಲ್ಲೂರು ವ್ಯವಸ್ಥಾಪನಾ ಸಮಿತಿ ವಿರುದ್ದ ನ್ಯಾಯಾಲಯದಲ್ಲಿರುವ ತಡೆ ತೆರವುಗೊಳಿಸಿ, ವ್ಯವಸ್ಥಾಪನಾ ಮಂಡಳಿ ಪುನರ್ ಸ್ಥಾಪಿಸಲಾಗದಷ್ಟು ದುರ್ಬಲವಾಗಿದೆಯೇ ಸರಕಾರ ಎಂಬ ಭಕ್ತರ ಕೂಗು ಕೊಡಚಾದ್ರಿ ಬೆಟ್ಟಕ್ಕೆ ಅಪ್ಪಳಿಸಿ ಸದ್ದಿಲ್ಲದಂತಾಗುತ್ತಿದೆ. ಸರಕಾರ ದತ್ತಪೀಠಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ಕೊಲ್ಲೂರು ವಿಷಯದಲ್ಲಿ ತೋರಿಸುತ್ತಿಲ್ಲ ಎಂಬ ಅಪವಾದದಿಂದಲೂ ಸರಕಾರ ಪಾರಾಗಿಲ್ಲ. ಮುಜರಾಯಿ ಸಚಿವ ಡಾ.ವಿ.ಎಸ್. ಆಚಾರ್ಯ ಅವರ ತವರು ಜಿಲ್ಲೆಯಲ್ಲಿ ಇಂಥಹದೊಂದು ವೈಪರೀತ್ಯ ನಡೆದಿದ್ದು ಖೇದಕರ.
ಕೊಲ್ಲೂರಿಗೆ ಇತಿಹಾಸವಿದೆ : ಕೊಲ್ಲೂರಿಗೆ ಅದರದ್ದೇ ಆದ ಇತಿಹಾಸವಿದೆ. ಮೂಕಾಸುರನನ್ನು ಕೊಂದ ತಾಯಿ ಇಲ್ಲಿ ಮೂಕಾಂಬಿಕೆಯಾಗಿ ನಿಂತಿದ್ದಾಳೆ ಎಂಬುದು ಪುರಾಣ.ಆದಿಗುರು ಶ್ರೀ ಶಂಕರಾಚಾರ್ಯರ ಪಾದಸ್ಪರ್ಶದ ಇತಿಹಾಸವಿದೆ. ಇದಕ್ಕೆ ಶಂಕರರು ಸ್ಥಾಪಿಸಿದ ಶ್ರೀ ಚಕ್ರ ಸಾಕ್ಷಿ.
ಹಚ್ಚ ಹಸಿರಿನ ವನಸಿರಿ ಕೊಲ್ಲೂರಿನ ಅಂದಕ್ಕೆ ಇಟ್ಟ ದೃಷ್ಟಿ ಬೊಟ್ಟು. ಕೊಡಚಾದ್ರಿ ಬೆಟ್ಟವಂತೂ ಕೊಲ್ಲೂರು ರಕ್ಷಣೆಗೆ ಕಟ್ಟಿದ ಕೋಟೆ. ಕೊಡಚಾದ್ರಿ ಕೂಡಾ ಪವಿತ್ರ ಸ್ಥಳವಾಗಿದ್ದು ಚಾರಣಕ್ಕೆ ಹೇಳಿಮಾಡಿಸಿದಂದೆ. ಅಂಭವನ, ಭಸ್ಮತೀರ್ಥ, ಸೌಪರ್ಣಿಕಾ ನದಿ ಕೊಲ್ಲೂರಿನ ಇತರ ಸಂಗತಿಗಳು. ಅರಿಸಿನಗುಂಡಿ, ಬೆಳ್ಕಲ್ ತೀರ್ಥ ಮುಂತಾದ ಪ್ರೇಕ್ಷಣೀಯ ಸ್ಥಳಗಳೂ ಇದೆ.
ಕೊಲ್ಲೂರು ರಾಜ್ಯದ ಶ್ರೀಮಂತ ದೇವಸ್ಥಾನದಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅತೀ ಹೆಚ್ಚು ಭಕ್ತರು ಮತ್ತು ವರಮಾನ ತರುವ ಕೊಲ್ಲೂರು ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ಇಲ್ಲದಿರುವುದು ಕೊರತೆ.
ವ್ಯವಸ್ಥಾಪನಾ ಸಮಿತಿಗೆ ಏನಾಯ್ತು : ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಖ್ಯಸ್ಥರಾಗೋದು ಮತ್ತು ಸದಸ್ಯರಾಗೋದು ಪ್ರತಿಷ್ಠೆಯ ಸಂಕೇತ. ಹಾಗಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯತ್ವಕ್ಕೆ ನೂಕುನುಗ್ಗಲಿರುತ್ತದೆ.
ಹಿಂದೆ ಕೊಲ್ಲೂರಿನಲ್ಲಿ 5 ವರ್ಷ ಅವಧಿಯ ಆಡಳಿತ ಮಂಡಳಿಯಿತ್ತು. ಅದಕ್ಕೆ ಒಬ್ಬರು ಮೊಕ್ತೇಸರರಾಗುತ್ತಿದ್ದರು. ಸದ್ಯ ಅದು ಬದಲಾಗಿದೆ. ವ್ಯವಸ್ಥಾಪನಾ ಸಮಿತಿ ಎಂಬ ಹೆಸರಲ್ಲಿ ಮೂರು ವರ್ಷಕ್ಕೆ ಬದಲಾವಣೆಯ ಕಾಣುವ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಅದಕ್ಕೆ ಮುಖ್ಯಸ್ಥರೂ ಇರುತ್ತಾರೆ.
ಬಿಜೆಪಿ ಮತ್ತ ಜೆಡಿಎಸ್ ಟೊಂಟಿ ಟೊಂಟಿ ಸರಕಾರದ ಸಮಯದಲ್ಲಿ ಕೃಷ್ಣಪ್ರಸಾದ್ ಅಡ್ಯಂತಾಯ ಸಮಿತಿಯ ಮುಖ್ಯಸ್ಥರಾಗಿ ನಿಯಕ್ತಿಗೊಂಡಿದ್ದರು. ಕಳೆದ ಒಂದು ವರ್ಷದ ಹಿಂದೆ ಅವರ ಅಧಿಕಾರ ಅವಧಿ ಮುಗಿದಿದ್ದರಿಂದ ಹೊಸ ಸಮಿತಿ ರಚೆನೆಗೆ ಸರಕಾರ ಮುಂದಾಗಿದೆ.
ವ್ಯವಸ್ಥಾಪನಾ ಸಮಿತಿ ಒಳ ಸೇರಲು ಭರೀ ಪೈಪೋಟಿಯಿದ್ದರೂ, ಕೃಷ್ಣಪ್ರಸಾದ್ ಅಡ್ಯಂತಾಯ ಮುಂದಾಳತ್ವದ ಸಮಿತಿಗೆ ಸರಕಾರ ಅಸ್ತು ಎಂದಿತು. ಅವರೇ ಸಮಿತಿಯ ಮುಖ್ಯಸ್ಥರಾಗಿ ನೇಮಕ ಆಗಿದ್ದರು.
ಬೈಂದೂರು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರ ರಾಜ್ಯ ಉಚ್ಛನ್ಯಾಯಾಲಯದಲ್ಲಿ ನೇಮಕಾತಿ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಮಾನ್ಯಮಾಡಿದ ನ್ಯಾಯಾಲಯ ಸಮಿತಿ ರಚನೆಯನ್ನು ತಡೆಹಿಡಿಯಿತು. ಅಂದಿನಿಂದ ಇಂದಿನವರಗೆ ಕೊಲ್ಲೂರು ಯಜಮಾನನಿಲ್ಲದ ಮನೆ.
ಹೇಳೋರಿಲ್ಲ ಕೇಳೋರಿಲ್ಲ : ವ್ಯವಸ್ಥಾಪನಾ ಸಮಿತಿ ಇಲ್ಲದಿರುವುದರಿಂದ ಕೊಲ್ಲೂರಿನಲ್ಲಿ ಹೇಳೋರು, ಕೇಳೋರೇ ಇಲ್ಲ. ಎಲ್ಲವೂ ಬೇಕಾಬಿಟ್ಟಿ. ಇದರೊಟ್ಟಿಗೆ ಒಂದು ಸಂತೋಷದ ಸಂಗತಿಯೆಂದರೆ ಮಾತು ಮಾತಿಗೆ ನ್ಯಾಯಾಲಯದ ಮಟ್ಟಲೇರುತ್ತಿದ್ದ, ಪ್ರತಿನಿತ್ಯ ಒಂದೆಲ್ಲಾ ಒಂದು ಸುದ್ದಿ ಮಾಡುತ್ತಿರುವದು ನಿಂತಿದೆ.
ವ್ಯವಸ್ಥಾಪನಾ ಸಮಿತಿಯಿದ್ದಾಗ ಕೊಲ್ಲೂರು ದೇವಸ್ಥಾನದ ವ್ಯವಸ್ಥೆಯ ಮೇಲೆ ಹಿಡಿತವಿರುತ್ತಿತ್ತು. ಇಂದು ಲಂಗುಲಗಾಮಿಲ್ಲದ ಸ್ಥಿತಿ ಮುಟ್ಟಿದೆ. ಪ್ರತಿಯೊಂದಕ್ಕೂ ಭಕ್ತರು ದುಡ್ಡು ಬಿಚ್ಚಬೇಕಾದ ಸ್ಥಿತಿಗೆ ಬಂದಿದ್ದಾರೆ. ಅನ್ನ ಪ್ರಸಾದಿಂದ ಹಿಡಿದು, ಸೇವೆಯವರೆಗೆ, ದರ್ಶನದಿಂದ ವೊದಲ್ಗೊಂಡು ಚಂಡಿಕಾ ಹೋಮದವರೆಗೆ ಭಕ್ತರು ಶೋಷಿತರು. ಒಟ್ಟಾರೆ ಆತ್ಮ ಶಾಂತಿ ಅರಸಿ ಬರುವ ಭಕ್ತರಿಗೆ ಶಾಂತಿ , ಮರೀಚಿಕೆ.
ದೇವಸ್ಥಾನದ ವ್ಯವಸ್ಥೆಗಾಗಿ ಕಾರ್ಯನಿರ್ವಹಣಾಧಿಕಾರಿ ಮುಖ್ಯಾಧಿಕಾರಿ ಮುಂತಾದವರಿದ್ದರೂ ಅವರಿಗೆ ದೇವಸ್ಥಾನದ ಪುರೋಹಿತರ ಮತ್ತು ಸಿಬ್ಬಂಧಿಗಳ ಮೇಲೆ ಹಿಡಿತವಿಲ್ಲ. ಅಧಿಕಾರಿಗಳನ್ನು ಕಂಡರೆ ಅವರಿಗೂ ಭಯವಿಲ್ಲ.
ಇನ್ನೂ ಕೊಲ್ಲೂರು ಸ್ಚಚ್ಛೆತೆ ಬಗ್ಗೆ ಹೇಳದಿರೋದು ಒಳ್ಳೆಯದು. ಒಳಚರಂಡಿ, ಕುಡಿಯುವ ನೀರು, ವಸತಿ ಮತ್ತು ವಾಹನ ನಿಲುಗಡೆ ಸೌಪಣರ್ಿಕಾ ಸ್ನಾನಘಟ್ಟ ಮುಂತಾದ ಸಮಸ್ಯೆಗಳು ಸಮಸ್ಯೆಯಾಗಿಯೇ ಇದೆ. ಒಟ್ಟಾರೆ ಕೊಲ್ಲೂರು ವ್ಯವಸ್ಥಾಪನಾ ಸಮಿತಿಯಿಲ್ಲದೆ ದಿಕ್ಕುತಪ್ಪಿದ ನಾವೆಯಂತಾಗಿದೆ. ಸರಕಾರ ಶಿಘ್ರ ನ್ಯಾಯಾಲಯದಲ್ಲಿರುವ ತಡೆ ತೆರವುಗೊಳಿಸಿ ವ್ಯವಸ್ಥಾಪನಾ ಸಮಿತಿ ರಚಿಸದಿದ್ದರೆ ಭಕ್ತರು ಶಾಪಹಾಕಿಯಾರು.
ಶ್ರೀಪತಿ ಹೆಗಡೆ ಹಕ್ಲಾಡಿ
ಪ್ರಾದೇಶಿಕ ಸುದ್ದಿ
ಮಹೇಶ್ ಕೂಳಕ್ಕೋಡ್ಲು ಸಿದ್ಧಪಡಿಸಿದ `ಎ ಕ್ರಿಟಿಕಲ್ ಸ್ಟಡಿ ಓಫ್ ಸಿದ್ಧಾಂತ ದರ್ಪಣ ಓಫ್ ನೀಲಕಂಠ ಸೋಮಯಾಜಿ' ಶೀರ್ಷಿಕೆಯ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಸಂದಿದೆ. ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಈ ಪ್ರಬಂಧ ಸಲ್ಲಿಸಿದ್ದಾರೆ. ಸಂಸ್ಕೃತದಲ್ಲಿರುವ ವಿಜ್ಞಾನ ವಿಷಯವನ್ನು ಆಧರಿಸಿ ಸಿದ್ಧವಾದ ಮೊದಲ ಪಿಎಚ್ ಡಿ ಇದಾಗಿದೆ ಎಂಬುದು ಹೆಗ್ಗಳಿಕೆ.
ಕಾರಿಡಾರ್
ಇವತ್ತಿನ ದಿನಗಳಲ್ಲಿ "ಫಾಸ್ಟ್" ಎಂಬುವುದು ಎಲ್ಲರ ಸ್ಲೋಗನ್ ಆಗುತ್ತಿದೆ. ಫಾಸ್ಟ್ ಫುಡ್, ಫಾಸ್ಟ್ ಟ್ರಾನ್ಸ್ ಪೋರ್ಟ್, ಫಾಸ್ಟ್ ಎಂಟರ್ ಟೈನ್ ಮೆಂಟ್... ಹೀಗೆ ಎಲ್ಲವೂ ಫಾಸ್ಟ್ ಮಯ. ಎಷ್ಟೆಂದರೆ ನಮ್ಮ ಪ್ರೀತಿಯ ಕ್ರೀಡೆಯಾಗಿರುವ ಕ್ರಿಕೆಟ್ಗೂ ಕೂಡಾ ಫಾಸ್ಟ್ ಟಚ್ ಸಿಕ್ಕಿದೆ. 50 ಓವರುಗಳ ಕ್ರಿಕೆಟ್ ಗೆ ಈಗ 20 ಓವರುಗಳ ಟಚ್ ಸಿಕ್ಕಿದೆ. ಈ ವೇಗವು ಸಾಂಸ್ಕೃತಿಕ ಚಟುವಟಿಕೆಗಳ ಮೇಲೂ ತನ್ನ ಪ್ರಭಾವ ಬೀರಿದೆ. ಆದರೆ ಈ ಕ್ಷೇತ್ರದಲ್ಲಿ ವೇಗದ ಪ್ರಭಾವದಿಂದಾಗಿ ಸಂಸ್ಕೃತಿಯು ಪ್ರಕಾಶಿಸುವುದರ ಬದಲು ನಶಿಸುವುದರತ್ತ ಹೋಗುತ್ತಿದೆ.
ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನಕ್ಕೂ ಈ ವೇಗದ ಪರಿಣಾಮವು ಮೆಲ್ಲನೆ ತಾಗುತ್ತಿದೆ. ಒಂದು ಕಾಲದಲ್ಲಿ
ರಾತ್ರಿಯಿಡೀ ಅಥವಾ 6 ರಿಂದ 8 ಗಂಟೆಗಳವರೆಗೆ ನಡೆಯುತ್ತಿದ್ದ ಈ ಯಕ್ಷಗಾನ ಕಲೆಯು ಇತ್ತೀಚಿನ ದಿನಗಳಲ್ಲಿ 2 ರಿಂದ 3 ಗಂಟೆಗಳ ಸೀಮಿತ ಅವಧಿಗೆ ಇಳಿದುಬಿಟ್ಟಿವೆ. ಅಲ್ಲದೆ ಈ ಪ್ರಯೋಗಕ್ಕೆ ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವುದು ಕೂಡಾ ಇಂತಹ ಬದಲಾವಣೆಗೆ ಕಾರಣವಾಗಿದೆ.
ಯಕ್ಷಗಾನ ಕಲೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅನಾಸಕ್ತಿ ಹೆಚ್ಚುತ್ತಿದೆ. ಯಕ್ಷಗಾನ ಎಂದ ಕೂಡಲೆ ಮುಖ ತಿರುಗಿಸುವವರೇ ಜಾಸ್ತಿ. ದೃಶ್ಯ ಮಾಧ್ಯಮದ ಮುಂದೆ ಯಕ್ಷಗಾನ ಎಂಬ ಕಲೆಯು ಇವತ್ತೋ ನಾಳೆಯೋ ಅನ್ನುವ ರೀತಿಯಲ್ಲಿದ್ದರೂ ಕೂಡಾ, ಇಲ್ಲೊಬ್ಬರು ಈ ಕಲೆಯಲ್ಲೇ ಸುಖವನ್ನು, ಸಾಕ್ಷಾತ್ಕಾರವನ್ನು ಪಡೆಯುತ್ತಿದ್ದಾರೆ. ಅವರೇ ಉಜಿರೆಯ ಎಸ್.ಡಿ.ಎಮ್. ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಓದುತ್ತಿರುವ ಸುಚಿತ್ರಾ ಕೆ. ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದ ಸುಚಿತ್ರಾ ಅವುಗಳಲ್ಲಿ ಕ್ರಮೇಣವಾಗಿ ಪಕ್ವಗೊಂಡಂತೆ, ರಾಜವೇಷ, ಸ್ತ್ರೀವೇಷ, ರಾಕ್ಷಸವೇಷ ಮುಂತಾದ ದೊಡ್ಡ ಮಟ್ಟದ ಪಾತ್ರಗಳನ್ನು ನಿರ್ವಹಿಸತೊಡಗಿದರು. ಅದರಲ್ಲಿ ಸಫಲತೆಯನ್ನೂ ಕೂಡಾ ಪಡೆದರು.
ಸುಚಿತ್ರಾ ಇಂದು ಸವಾಲಿನ ಪ್ರಸಂಗಗಳಾಗಿರುವ ದೇವೀ ಮಹಾತ್ಮೆ, ಬಭ್ರುವಾಹನ ಕಾಳಗ, ದಕ್ಷಯಜ್ಞ, ಶ್ರೀ ಕೃಷ್ಣ ಪಾರಿಜಾತ ಮುಂತಾದುವುಗಳಲ್ಲಿ ಯಶಸ್ವಿಯಾಗಿ ಉತ್ತಮ ಕಲಾಸೇವಕಿಯಾಗಿ ಹೊರಹೊಮ್ಮಿದ್ದಾಳೆ. " ತಾನು ಯಕ್ಷಗಾನವನ್ನು ತನ್ನ 9 ನೇ ವರ್ಷದಿಂದ ಕಲಿಯುತ್ತಿದ್ದೇನೆ, ಅಲ್ಲದೆ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕ್ರತಿಕ ಕಾರ್ಯಕ್ರಮದ ಸಂದರ್ಭಗಳಲ್ಲಿಯೇ ತಾನು ಯಕ್ಷಗಾನದಲ್ಲಿ ತೊಡಗಿಕೊಂಡಿದ್ದೇನೆ. ನನ್ನ ಮನೆಯವರ ಸಹಕಾರ ಹಾಗೂ ಪ್ರೋತ್ಸಾಹದಿಂದಾಗಿ ತಾನು ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯ್ತು "ಎನ್ನುವುದು ಈ ಕಲಾಸಾಧಕಿಯ ಮನದಾಳದ ಮಾತುಗಳು
ಪ್ರಾರಂಭದಲ್ಲಿ ವೆಂಕಟೇಶ್ ಬಾಳ್ತಿಲ್ಲಾಯ ಅವರು ಈಕೆಯ ಮೊದಲ ಪ್ರಯತ್ನಕ್ಕೆ ಬೆಂಬಲ ನೀಡಿದ ಗುರುಗಳು. ನಂತರ ಸುಬ್ರಹ್ಮಣ್ಯ ಶಗ್ರಿತ್ತಾಯ, ಪ್ರಕಾಶ್ ಬಾಳ್ತಿಲ್ಲಾಯ ಮತ್ತು ಯೋಗೀಶ್ ಆಚಾರ್ಯ ಅಳದಂಗಡಿ ಇವರ ಗರಡಿಯಲ್ಲಿ ಮತ್ತಷ್ಟು ಪಕ್ವ ವೇಷಧಾರಿಯಾಗಿ ಹೊರಹೊಮ್ಮಿದಳು. ಈಕೆ ಕೇವಲ ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೆ ಧರ್ಮಸ್ಥಳ, ಮಂಗಳೂರು, ಪುತ್ತೂರು, ಉಡುಪಿ ಮುಂತಾದ ಬಹಳಷ್ಟು ಕಡೆ ಯಶಸ್ವಿಪ್ರದರ್ಶನವನ್ನು ನೀಡಿದ್ದಾಳೆ. ಅನೇಕ ಪ್ರತಿಷ್ಠಿತ, ಮಹಾನ್ ಯಕ್ಷಗಾನ ಕಲಾವಿದರಿಂದ "ಶಹಬ್ಬಾಸ್"ಗಿರಿಯನ್ನೂ ಗಿಟ್ಟಿಸಿಕೊಂಡಿರುತ್ತಾಳೆ. ಇತ್ತೀಚೆಗೆ ಮಂಗಳೂರಲ್ಲಿ ನಡೆದ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಗಳಿಸಿದ್ದಾಳೆ.
ಹಲವಾರು ಬಹುಮಾನ , ಪ್ರಶಸ್ತಿಗಳು ಇವಳನ್ನರಸಿಕೊಂಡು ಬಂದಿವೆ. ಪ್ರಾರಂಭದಲ್ಲಿ, ಯಕ್ಷಗಾನದ ವೇಷ ಭೂಷಣ, ಅದರ ನಾಟ್ಯವನ್ನು ನೋಡಿ ಯಕ್ಷಗಾನದತ್ತ ಪುಟ್ಟ ಹೆಜ್ಜೆಗಳೊಂದಿಗೆ ಪ್ರಾರಂಭವಾದ ಸುಚಿತ್ರಾಳ ಪಯಣವು, ಇಂದು ಒಬ್ಬ ಯಶಸ್ವಿ ಯಕ್ಷಗಾನ ಕಲಾವಿದೆಯಾಗಿ ಹೊರಹೊಮ್ಮುವ ತನಕ ಬೆಳೆದುಬಿಟ್ಟಿರುವುದು ಒಂದು ಹೆಮ್ಮೆಯ ವಿಷಯವೇ ಸರಿ. ಇಂದು ವಿಶ್ವವು ದೃಶ್ಯ ಮಾಧ್ಯಮ ಎಂಬ ಮಾಯಾಲೋಕದೊಡನೆ
ಸಾಗುತ್ತಿರುವ ಇಂತಹ ಸಂದರ್ಭ ದಲ್ಲಿ, ಸುಚಿತ್ರಾ ಎಂಬ ಬಾಲೆಯು ಯಕ್ಷಗಾನ ಎಂಬ ಸಾಂಸ್ಕೃತಿಕ ಕಲೆಯೊಂದಿಗೆ ಸಂತೋಷವನ್ನು ಕಂಡುಕೊಳ್ಳುತ್ತಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿಯಲ್ಲವೆ ...
ಪುಷ್ಪಾ ಬಿ.ಎಂ.
ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ್. ಕಾಲೇಜು, ಉಜಿರೆ.
ಕಾರಿಡಾರ್
ಜೋಗ ಜಲಪಾತದ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಕೈಗೊಂಡ ಘಟನೆ ನಿಮಗೆಲ್ಲರಿಗೂ ಗೊತ್ತೇ ಇದೆ. ವಿಪರ್ಯಾಸದ ಸಂಗತಿಯೆಂದರೆ ಯೋಜನೆಯ ಉದ್ದೇಶವೇ ಈಡೇರಿದಂತೆ ಕಂಡುಬಂದಿಲ್ಲ. "ದೀಪದ ಬುಡ ಕತ್ತಲು" ಎಂಬಂತೆ ಜೋಗ ಜಲಪಾತದ ಸಮೀಪದ ಹಲವು ಹಳ್ಳಿಗಳು ಇಂದಿಗೂ "ಕತ್ತಲೆ"ಯಲ್ಲೇ ಮುಳುಗಿದೆ...!
ಜೋಗದ ಅದ್ಭುತ ವೈಭವದ ಸೆರಗಿನಲ್ಲಿ "ಮೃತ್ಯು"ವೂ ಅಡಗಿ ಕುಳಿತಿದೆ. ಅನೇಕ ಪ್ರವಾಸಿಗರು ಜಲಪಾತದ ಸವಿ ಸವಿದು "ಮೈಮರೆತ" ಸಂದರ್ಭಗಳಲ್ಲಿ ಜೋಗದ "ಗುಂಡಿ" ಸೇರಿದ್ದಾರೆ.
ಜೋಗ ಜಲಪಾತ ಭಾರತದ ನಕ್ಷೆಯಲ್ಲಿ ಒಂದು ವಿಶಿಷ್ಠ ಸ್ಥಾನ ಪಡೆದಿದೆಯಾದರೂ ಅದು ಮಳೆಗಾಲದಲ್ಲಿ ಮಾತ್ರ "ರಮ್ಯಾದ್ಭುತ "ವಾಗಿ ಗೋಚರಿಸುವಂತಾಗುತ್ತಿದೆ.
ಲಿಂಗನ ಮಕ್ಕಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಹಲವು ಮನಕಲುಕುವ ಸಂಗತಿಗಳು ನಡೆದುಹೋಗಿವೆ. ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಮ್ಮ "ದ್ವೀಪ" ಚಿತ್ರದಲ್ಲಿ ಈ ಘಟನಾವಳಿಗಳನ್ನು ಸವಿಸ್ತಾರವಾಗಿ ಚಿತ್ರಿಸಿದ್ದಾರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಪ್ರಾಪ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ವಿಶ್ವ ವಿಖ್ಯಾತ. ತೀರ್ಥಹಳ್ಳಿ ಸನಿಹದ ಅಂಭುತೀರ್ಥ ಎಂಬಲ್ಲಿ ಜನಿಸುವ ಶರಾವತೀ ನದೀ ಸಾಗರ ಸೇರುವ ಹಾದಿಯ ಮಧ್ಯೆ ಈ ಸೊಗಸಾದ ಜಲಪಾತವನ್ನು ಸೃಷ್ಠಿಸಿದ್ದು ಅಷ್ಟೇ ಅದ್ಭುತ. 900 ಅಡಿ ಆಳಕ್ಕೆ ಭೋರ್ಗರೆಯುತ್ತಾ ನದೀ ನಾಲ್ಕು ಕವಲಾಗಿ ಧುಮ್ಮಿಕ್ಕಿ ರಮ್ಯ ನೋಟವನ್ನು ಸೃಷ್ಠಿಸಿದ ಪರಿ ಅತ್ಯದ್ಭುತ.
ಆದರೆ ಇಂದು ಯತೇಚ್ಛ ಮಳಯಾದರೆ ಮಾತ್ರ ಜೋಗದ ಅದ್ಭುತ ಜಲಧಾರೆಯ ರುದ್ರ ನರ್ತನ ವೀಕ್ಷಿಸಲು ಸಾಧ್ಯ ಎಂಬ ಸ್ಥಿತಿ ನಿರ್ಮಾಣಗೊಂಡಿದೆ.
ಜೋಗ ಪ್ರವಾಸಿಗರ ಪಾಲಿಗೆ ಸ್ವರ್ಗ ಹೌದು...ಅದು ಜೋರಾಗಿ ಮಳೆಯಿದ್ದರೆ ಮಾತ್ರ!!!.
ಮಾನಸ ಎಂ.ಎನ್.
ಪ್ರಥಮ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜು, ಮೂಡಬಿದಿರೆ.
ಕಾರಿಡಾರ್
ಹಾಯ್ ಹೇಗಿದ್ದಿಯಾ...? ನನ್ನನ್ನು ಮರೆತು ಬಿಟ್ಟಿಯೋ...? ಯಾರೋ ಮಾತಾಡಿದಂತಾಯಿತು... ತಿರುಗಿ ನೋಡಿದೆ. ನೋಡಿದರೆ ಅಂಚಿನಲ್ಲಿ ತೂಗುಹಾಕಿದ್ದ `ಅಜ್ಜನ ಕೊಡೆ' ಮಾತನಾಡಿದಂತೆ ಭಾಸವಾಯಿತು. ಅದನ್ನು ನೋಡಿದ್ದೇ ಕ್ಷಣ... ಬಾಲ್ಯದ ನೆನಪುಗಳು ಮರುಕಳಿಸಿದವು. ಆಗಿನ ಬದುಕಿಗೂ ಈಗಿನ ವಾಸ್ತವ ಬದುಕಿಗೂ ಎಷ್ಟೊಂದು ವ್ಯತ್ಯಾಸ ಎಂದನಿಸಿತು.
ಆದರೆ ಯಾವ ಕೊಡೆ ಅಜ್ಜನ ಕೊಡೆ ಎಂದು ಹೇಳಿ ಶಾಲೆಗೆ ಕೊಂಡೊಯ್ಯಲು ಹಿಂಜರಿಯುತ್ತಿದ್ದೆವೋ ಅದೇಕೊಡೆ ಇಂದು ಒಂದಷ್ಟು ಮಾರ್ಪಾಟುಗೊಂಡು `ಫ್ಯಾಶನ್" ಆಗಿ ಬದಲಾಗಿದೆ. ಅದು ಬೇರೆ ಮಾತು ಬಿಡಿ. ಬಾಲ್ಯದ ಬಗ್ಗೆ ಯೋಚಿಸಿದಾಗ ಆ ದಿನಗಳು ಮಳೆಗಾಲದಲ್ಲಿ ಒಬ್ಬರ ಕೊಡೆಯನ್ನು ಇನ್ನೊಬ್ಬರ ಕೊಡೆಗೆ ತಾಗಿಸಿ ಪರಾರಿಯಾಗುತ್ತಿದ್ದುದು , ಕೊಡೆ ತಿರುಗಿಸುತ್ತಾ ಶಾಲೆಗೆ ಹೋಗುತ್ತಿದ್ದುದು ಇವೆಲ್ಲವೂ ಕಣ್ಣ ಮುಂದೆ ಹಾದು ಹೋಯಿತು.
ಅದು ಬಾಲ್ಯದ ನೆನಪುಗಳು. ಚಿಕ್ಕವರಿದ್ದಾಗ ಸ್ನೇಹಿತರೊಂದಿಗೆ ಕೆಸರುಗದ್ದೆಯಲ್ಲಿ ಕೆಸರು ನೀರಲ್ಲಿ ಆಡುತ್ತಾ, ಶಾಲೆಗೆ ತಲುಪುವಾಗ ಪೂರ್ತಿ ಒದ್ದೆ. ಅವೆಲ್ಲವೂ ಇಂದು ಸಿಹಿನೆನಪುಗಳಷ್ಟೆ. ಅಟೊ ರಿಕ್ಷಾ, ಸ್ಕೂಲ್ ವ್ಯಾನ್ ಗಳಲ್ಲಿ ಶಾಲೆಗೆ ತೆರಳುವ ಇಂದಿನ ಮಕ್ಕಳಿಗೆ ಈ ಮೋಜು ತಿಳಿಯದು.
ಇನ್ನೂ ಒಂದು ಸಂಗತಿಯಿದೆ. ಹಿಂದೆಲ್ಲಾ ತೆಳುಬಟ್ಟೆ ಹಿಡಿದು ತೋಡಿನ ನೀರಲ್ಲಿ ಮೀನು ಹಿಡಿಯಲು ಹೋಗುತ್ತಿದ್ದ ಆ ಸಂತಸ ಅನುಭವಿಸಿಯೇ ತಿಳಿಯಬೇಕು... ಆದರೆ ಇಂದಿನ ಮಕ್ಕಳು ಕಂಪ್ಯೂಟರ್ ಮುಂದೆ ಕೂತಲ್ಲಿಯೇ ಬೈಕ್, ಕಾರು ಓಡಿಸುತ್ತಾರೆ. ನಮ್ಮ ಬಾಯಲ್ಲಿ "ಕಣ್ಣಾ ಮುಚ್ಚೇ ಕಾಡೇ ಗೂಡೆ" ಹಾಡು ಬರುತ್ತಿತ್ತು... ಆದರೆ ಇಂದಿನ ನರ್ಸರಿ ಮಕ್ಕಳು... ಜಿಂಕೆ ಮರೀನಾ ಜಿಂಕೆ ಮರೀನಾ... ಎಂಬ ಹಾಡು ಗುನುಗುತ್ತಿರುತ್ತಾರೆ.
ಇವೆಲ್ಲಾ ತಪ್ಪೆಂದು ಹೇಳಲಾಗದು. ಆದರೆ ಆಧುನಿಕತೆಯ ಜೊತೆಗೆ ಪರಿಸರ ಪ್ರಜ್ಞೆ, ಮುಗ್ಧತೆಯೂ ಇರಬೇಕು. ದೊಡ್ಡವರು ಒಂದು ಮಾತು ಹೇಳಿದ್ದಾರರೆ. " ದೇಹಕ್ಕೆ ವಯಸ್ಸಾದರೂ ಮನಸ್ಸು ಮಗುವಿನಂತೆ ಇರಬೇಕು". ಆದರೆ ಈಗ ಮಕ್ಕಳಲ್ಲಿಯೂ ಮುಗ್ಧತೆ ಕಡಿಮೆಯಾಗುತ್ತಿದೆ.
ಇದನ್ನು ಸರಿಪಡಿಸುವುದು ಹೆತ್ತವರ ಕರ್ತವ್ಯವೂ ಹೌದು. ಬೇಸಿಗೆ ರಜೆಯಲ್ಲಾದರೂ ಮಕ್ಕಳನ್ನು ಪಟ್ಟಣದಿಂದ ಹಳ್ಳಿಗಳಿಗೆ ಕರೆದೊಯ್ದು ಅಲ್ಲಿನ ಪರಿಸರದ ಕುರಿತಾದ ಪರಿಚಯ ಮಾಡಿಸಬೇಕಾಗಿದೆ. ಹಳ್ಳಿ ಬದುಕಿನ ಅದರ ಸೊಗಡಿನ ಅನುಭವ ಅವರಿಗೆ ಆಗುವಂತಾಗಬೇಕಾಗಿದೆ.
ಜೊಸ್ವಿತ
ಪ್ರಥಮ ಬಿ.ಎ. ಪತ್ರಿಕೋದ್ಯಮ,
ಆಳ್ವಾಸ್ ಕಾಲೇಜು , ಮೂಡಬಿದಿರೆ.
ಪ್ರಾದೇಶಿಕ ಸುದ್ದಿ
ಎರಡೆಳೆಯಲ್ಲಿ ಜೀವನ...
ಚಿತ್ರ: ಅಭಿಲಾಷ್ ಪಿ.ಎಸ್.
ಪ್ರಾದೇಶಿಕ ಸುದ್ದಿ
ಮೂಡುಬಿದಿರೆ : ಆರೋಗ್ಯಕರ ಜೀವನಕ್ಕೆ ಪರಿಸರ ಸಂರಕ್ಷಣೆ ಅಗತ್ಯ .ಸರಕಾರದ ಜೊತೆಗೆ ಸಂಘಸಂಸ್ಥೆಗಳು ಪರಿಸರ ಸ್ನೇಹಿ ಕಾರ್ಯಕ್ರಮಗಳಲ್ಲಿ ತೊಡಗಿಸಬೇಕು ಎಂದು ಪುತ್ತಿಗೆ ಗ್ರಾಮ ಪಂಚಾಯತ್ತಿನ ಅದ್ಯಕ್ಷ ಶಶಿಧರ ನಾಯಕ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಂಡೇಲು ಇಲ್ಲಿ ನಡೆದ ಅಗ್ರಿಗೋಲ್ಡ್ ಗ್ರೂಪ್ ಅಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಗ್ರಿಗೋಲ್ಡ್ ಸಂಸ್ಥೆಯ ಹಿರಿಯ ಅಧಿಕಾರಿ ಪ್ರಕಾಶ್.ಎಸ್.ದೇವಾಡಿಗ ರೈತರು ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಬೇಕು.ಶುದ್ದ ಗಾಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವುದು ಅವಶ್ಯಕ. ಮಿತಿಮೀರುತ್ತರುವ ಕೈಗಾರಿಕೆಗಳಿಂದ ಕೃಷಿಯು ಬರಡಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಪತ್ರಕರ್ತ ಶೇಖರ್ ಅಜೆಕಾರ್,ಪಂಚಾಯತ್ ಸದಸ್ಯ ಶಿವಾನಂದ ಪೂಜಾರಿ,ಮುಖ್ಯ ಶಿಕ್ಷಕ ಟಿ.ಎನ್.ಕೆಂಬಾರೆ, ಅಗ್ರಿಗೋಲ್ಡ್ ಕಾರ್ಯಕರ್ತರಾದ ಉಮೇಶ್ ಕುಲಾಲ್,ನಾರಯಣ್ ನಾಯಕ್,ವೆಂಕಟೇಶ್ ಬಂಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ:ಯಶೋಧರ ಬಂಗೇರ
ದ್ವಿತೀಯ ಪತ್ರಿಕೋದ್ಯಮ , ಆಳ್ವಾಸ್ ಕಾಲೇಜು ,ಮೂಡುಬಿದಿರೆ
ಛಾಯಚಿತ್ರ: ಸುಷ್ಮಾ ಸ್ಟುಡಿಯೊ ,ಮೂಡುಬಿದಿರೆ
ಈ ಕನಸು ಸ್ಪೆಷಲ್
ಇಲ್ಲೊಂದು ದನಕ್ಕೆ ಮೂರು ಕೊಂಬು. . . .!!!
ಹಸುಗಳಿಗೆ ರಕ್ಷಣೆಗಾಗಿ ಎರಡು ಕೊಂಬಿರುವುದು ನೋಡಿದ್ದೇವೆ.ಆದ್ರೆ ಮೂರು ಕೊಂಬಿರುವುದನ್ನು ಎಲ್ಲಾದರೂ ನೋಡಿದ್ದೀರಾ.ಹೌದು ಇಲ್ಲೊಂದು ಕಡೆ ಮೂರು ಕೊಂಬಿನ ಹಸುವಿದೆ.ಎರಡು ಕೊಂಬು ತಲೆಯ ಮೇಲಾದರೆ ಇನ್ನೊಂದು ಕೊಂಬು ದೇಹದ ಹಿಂಭಾಗದಿಂದ ಮೂಡುತ್ತಿದೆ. ಇದು ಕಂಡುಬಂದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ನಂದಪ್ಪ ಶೆಟ್ಟು ಎನ್ನುವವರ ಮನೆಯಲ್ಲಿ. ಇವರು ಕಳೆದ ೧೦ ವರ್ಷಗಳಿಂದ ಈ ಹಸುವನ್ನು ಸಾಕುತ್ತಿದ್ದಾರೆ.ಆದರೆ ಇತ್ತೀಚೆಗಿನ ಎರಡು ತಿಂಗಳಿನಿಂದ ಈ ಕೊಂಬು ಮೂಡುವುದಕ್ಕೆ ಶುರುವಾಗಿದೆ.ಎಕ್ಟ್ರಾ ಕೊಂಬು ಬಂದ ಪ್ರದೇಶದಲ್ಲಿ ಮೊದಲು ಗಾಯದಂತೆ ಕಂಡುಬಂದಿತ್ತು.ಅದಾದ ಬಳಿಕ ಕೊಂಬು ಮೂಡುವುದಕ್ಕೆ ಆರಂಭವಾಗಿತ್ತು.ಇದೀಗ ಈ ಸಂಗತಿ ಗೊತ್ತಾಗುತ್ತಿದ್ದಂತೆ ಜನ ಕುತೂಹಲದಿಂದ ನಂದಪ್ಪ ಶೆಟ್ಟರ ಮನೆಗೆ ಬರಲು ಆಗಮಿಸಿದ್ದಾರೆ. ಒಟ್ಟಿನಲ್ಲಿ ವೈದ್ಯ ಲೋಕಕ್ಕೊಂದು ಸವಾಲಾಗಿದೆ.
ವಿಶೇಷ ವರದಿ: ಮಹೇಶ್ ಪುಚ್ಚಪ್ಪಾಡಿ.
ಸಾಹಿತ್ಯ
ಹಾಗೆ ಕಿಟಕಿ ಬಾಗಿಲನ್ನು ಕೈಯ್ಯಲ್ಲಿ ತಳ್ಳಿದೆ ಕಿರ್ರೆಂದು ಸದ್ದು ಮಾಡಿತು. ಹಳೇ ಕಾಲದ ಮರದ ಕಿಟಕಿ ಅದೆಷ್ಟು ವರ್ಷವಾಯ್ತೋ ಆ ಕಿಟಕಿ ತೆರೆಯದೆ. ನನ್ನ ಮುತ್ತಜ್ಜ ಕಟ್ಟಿಸಿದ ಮನೆ ಅದು ಸುಮಾರು ಆರು ವರ್ಷ ಆಯ್ತು ನಾನು ಆ ಮನೆಗೆ ಹೋಗದೆ. ತೊಂಭತ್ತೊಂದು ವರ್ಷ ಹಿಂದಿನ ಮೂರು ಮಹಡಿಯ ಮನೆಯದು. ಒಟ್ಟು ಇಪ್ಪತ್ನಾಲ್ಕು ಕೋಣೆಗಳಿವೆ. ನನಗಿನ್ನೂ ಸರಿಯಾಗಿ ನೆನಪಿದೆ ಇಲ್ಲಿಗೆ ಬಂದ್ರೆ ಅಮ್ಮ, ಅಪ್ಪ ಇದೇ ಕೋಣೆಯಲ್ಲಿ ಮಲಗ್ತಾ ಇದ್ದಿದ್ದು,ಅಷ್ಟೇ ಅಲ್ಲಾ ನಾನು ಕಣ್ಣು ಬಿಟ್ಟಿದ್ದು ಅದೇ ಕೋಣೆಯಲ್ಲಿ. ರಜಾ ಸಿಕ್ರೆ ಸಾಕು ನಾನು ಅಕ್ಕ ಓಡಿ ಬರ್ತಾ ಇದ್ವಿ ಇಲ್ಲಿಗೆ, ಅಪ್ಪಂಗೆ ಅಮ್ಮಂಗೆ ನಾವಿಲ್ಲಾಂದ್ರೆ ಹೊತ್ತೇ ಹೋಗ್ತಿರ್ಲಿಲ್ಲನ್ಸುತ್ತೆ ಅದ್ಕೆ ಐದೇ ದಿನದಲ್ಲಿ ಇಬ್ರು ಹಾಜರ್ ಆಗ್ತಿದ್ರು .
ಆ ದಿನಗಳು ಎಷ್ಟು ಮಜಾ ಇತ್ತು..! ಬರೀ ನಮ್ಮಜ್ಜನ ಮನೆಯಲ್ಲೇ ಹನ್ನೆರಡು ಮಕ್ಕಳು. ಇನ್ನು ನಾವು ಅಂಗಳಕ್ಕಿಳಿದರೆ ಏನಿಲ್ಲಂದ್ರು ಆ ಕಡೆ ಕುಂಡೆಚ್ಚಜ್ಜನ ಮೊಮ್ಮೊಕ್ಕಳು ಆರು ಜನ , ಕೆಳಗಿನ ಮನೆಯ ಎಂಟು , ಮೂಲೆಮನೆಯ ಏಳು ಮಕ್ಕಳು ಹಾಜರ್. ಒಟ್ಟು ಮೂವತ್ತಮೂರು ಮಕ್ಕಳು. ನನ್ನ ದೊಡ್ಡ ಮಾಮಂದೆ ಉಸ್ತುವಾರಿ ಮಕ್ಕಳ ತಂಟೆ ತಕರಾರುಗಳಿಗೆಲ್ಲ ಅವನದ್ದೇ ತೀರ್ಪು. ಒಂತರಾ ಶಾಲೆಯಲ್ಲಿ ಸ್ಪೋರ್ಟ್ಸ್ ಟೀಚರ್ ಇದ್ದಂಗೆ. ನಾವು ಹುಡುಗರು ಹದಿನಾಲ್ಕು ಜನ ಎಲ್ಲಾ ಒಂದೇ ಮಾಡೆಲ್, ಅಂದ್ರೆ ಹೆಚ್ಚು ವಯಸ್ಸಿನ ಅಂತರವಿಲ್ಲ. ಒಂಭತ್ತು ಹುಡುಗಿಯರು ಅವರದ್ದು ಬೇರೆಯೇ ಸಾಮ್ರಾಜ್ಯ ಮತ್ತುಳಿದವೆಲ್ಲ ನಮ್ಮ ಪಾಲಿಗೆ ಪಿಟ್ಟೆಗಳು. ಆಟಕ್ಕುಂಟು ಲೆಕ್ಕಕ್ಕಿಲ್ಲ. ಪುಟ್ಟು ಮಾಮ ಬಂದ್ರೆ ಲಗೋರಿ ಆಟ ಅಂಗಳದ ತುಂಬೆಲ್ಲ ನಮ್ಮ ಓಟ. ಅವನಿಲ್ಲಂದ್ರೆ, ಹುಡುಗಿಯರದ್ದು ಟೊಂಕ, ಜುಬಿಲಿ,ಕಣ್ಣಾಮುಚ್ಚಾಲೆ, ಅಂತ್ಯಾಕ್ಷರಿ. ಇನ್ನು ನಮ್ದು ಕ್ರಿಕೆಟ್ ಬಿಟ್ಟು ಬೇರೇನಿಲ್ಲ. ಕೆಲ ಪಿಟ್ಟೆಗಳು ನಮ್ಮ ಸಹಾಯಕ್ಕೆ ನಿಂತರೆ ಮತ್ತೆ ಕೆಲವಕ್ಕೆ ಅವುಗಳದ್ದೇ ಲೋಕ. ನಮ್ಮ ಆಟಕ್ಕಿದ್ದ ಒಂದೇ ಒಂದು ರಸಭಂಗವೆಂದರೆ ನನ್ನ ಮೂವರು ಮಾಮಂದಿರು. ಅವರಿಗೂ ನಮ್ಮ ಜೊತೆ ಬ್ಯಾಟ್ ಹಿಡಿವ ಹುಚ್ಚು. ನಮಗೋ….. ಹೇಳಿ ಪ್ರಯೋಜನವಿಲ್ಲ ಆ ಸಿಟ್ಟಿನ ಬಗ್ಗೆ. ಕತ್ತಲಾದರೂ ಮುಗಿಯದು ಆಟ. ಮತ್ತೆ ಅಜ್ಜಿ ಕೈಯ್ಯಲ್ಲಿ ಅತ್ತೆಯಂದಿರ ಕೈಯ್ಯಲ್ಲಿ ಬೈಸಿಕೊಂಡರೇನೇ ಆ ದಿನದ ಆಟಕ್ಕೆ ಮಂಗಳ ಹಾಡುವುದು.
ಜಗಲಿಯುದ್ದಕ್ಕು ಬಿದ್ದುಕೊಂಡು ಮತ್ತೆ ಹೆಂಗಸರ ಧ್ವನಿ “ಸ್ನಾನ ಮಾಡಿ ಬನ್ನಿ ಮಕ್ಕಳೇ” ಎಂದು ಗದರುವವರೆಗೂ ಒಬ್ಬರಿಗೊಬ್ಬರು ಆ ದಿನದ ಆಟದ್ದೇ ಪರಾಮರ್ಶೆ ನಮ್ಮೊಳಗೇ. ಅಷ್ಟೊತ್ತಿಗೆಲ್ಲ ಪಿಟ್ಟೆಗಳು ಸ್ನಾನ ಮುಗಿಸಿ ಊಟ ಮಾಡಿಯೋ ಮಾಡದೆಯೂ ಅತ್ತು ಅತ್ತು ಸುಸ್ತಾಗಿ ಮಲಗಿರುತ್ತವೆ. ಇನ್ನು ಹುಡುಗಿಯರೆಲ್ಲ ಮಿಂದು ಸುಬ್ಬಕ್ಕಗಳಂತೆ ದೇವರ ಕೋಣೆ ಸೇರಿ ಅಜ್ಜಿ ಸುತ್ತ ಕೂತಾಗಿರುತ್ತೆ. ಮತ್ತೆ ನಮ್ಮ ಸಾಮೂಹಿಕ ಜಳಕ ಕಾರ್ಯಕ್ರಮ, ಅಲ್ಲಿಗೆ ಡುಮ್ಮ ಮಾಮನ ಆಗಮನ ಆಗುತ್ತಿದ್ದಂತೆ ನಮ್ಮ ಕಾರ್ಯಕ್ರಮಕ್ಕೆ ಹೊಸ ಮೆರಗು ಸಿಗುತ್ತೆ. ಅಷ್ಟು ದೊಡ್ಡ ಅಬ್ಬಿ (ಬಚ್ಚಲು ಮನೆ) ನಮ್ಮ ಗೌಜಿ ಕಂಡು ಖುಷಿ ಪಡುತ್ತದೆ. ಡುಮ್ಮ ಮಾಮನ ಪುಂಖಾನು ಪುಂಖ ಡೈಲಾಗ್ ನಮ್ಮ ಜಳಕ ಕಾರ್ಯಕ್ರಮಕ್ಕೆ ಅನಿವಾರ್ಯವೇ ಆಗಿತ್ತು. ಅಲ್ಲಿಗೆ ದೊಡ್ಡ ಮಾಮ ಮತ್ತು ಸಣ್ಣ ಮಾಮನ ಎಂಟ್ರಿ ಆಗುತ್ತಿದ್ದಂತೆ ನಮ್ಮ ಜಳಕ ಕಾರ್ಯಕ್ರಮ ಮುಗಿಸಲೇಬೇಕು ಎನ್ನುವ ಸೂಚನೆ ನಮಗೆ, ಇಲ್ಲದಿದ್ರೆ ಮತ್ತೆ ಹೆಂಗಸರ ಬಾಯಿ ಒಳಗೆ ಮಾಮಂದಿರೆಲ್ಲ ಸಿಕ್ಕೋದು ಗ್ಯಾರೆಂಟಿ. ಅಲ್ಲಿಂದ ಸೀದ ದೇವರ ಕೋಣೆಗೆ, ಅಜ್ಜಿ ನೇತೃತ್ವದಲ್ಲಿ ಭಜನೆ. ನಾವೆಲ್ಲ ಹೋಗ್ತಿದ್ದದ್ದು ಭಜನೆಗೆ ಅಂತಲ್ಲ ಅದಕ್ಕೆ ಬೇರೆ ಇನ್ನೆರಡು ಕಾರಣ ಇತ್ತು ೧.ಭಜನೆ ಆದ ತಕ್ಷಣ ರುಚಿಯಾದ ಪ್ರಸಾದ ೨.ರಾತ್ರಿ ಚಪ್ಪರಿಸಿ ಚಪ್ಪರಿಸಿ ಕೇಳುವಂತ ಜೀವನದ ಕೋಣೆ ಉಸಿರಿನ ವರೆಗೂ ಮರೆಯಲಾಗದಂತ ರಸವತ್ತಾದ ನಮ್ಮಜ್ಜಿ ಹೇಳೋ ಕಥೆಗಳು. ಭಜನೆಗೆ ಹೋಗಿಲ್ಲ ಎಂದರೆ ಇದೆರಡು ಇಲ್ಲ… ರಾತ್ರಿ ಪೂರಾ ನಾನು ಅಜ್ಜಿ ಹೇಳಿದ ಕಥೆಯ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಿದ್ದೆ ಒಂದೋ ಅಜ್ಜಿಗೆ ಬೇಗ ನಿದ್ದೆ ಬಂದು ಇಲ್ಲ ಈ ಸುಬ್ಬಕ್ಕಗಳು ನಮ್ಮ ಕೆಲ ಮಾಣಿಗಳು ನಿದ್ದೆ ಮಾಡಿ . ರಾಕ್ಷಸ ಹೊತ್ತೊಯ್ದ ರಾಜ ಕುಮಾರಿಯದ್ದೋ, ಚಾತುರ್ಯದಿಂದ ಪಂಡಿತರನ್ನು ಗೆದ್ದ ಮಾಳವಿಕಳದ್ದೋ, ಇಲ್ಲ ಚಕ್ರ ವ್ಯೋಹವನು ಹೊಕ್ಕ ಅಭಿಮನ್ಯುವಿನದ್ದೋ ಹೀಗೆ ಒದೊಂದು ರಾತ್ರಿಯೂ ಕಥೆ ಅರ್ಧದಲ್ಲಿ ನಿಂತು ನನ್ನ ಕಲ್ಪನೆಗಳಿಗೆ ರೆಕ್ಕೆ ಹುಟ್ಟಿಸಿ ನಿದ್ದೆ ಓಡಿಸಿ ನನ್ನ ಬೆಳಗಿನವರೆಗೂ ಕಾಡುತ್ತಿದ್ದವು.
ಇನ್ನು ಹಗಲಲ್ಲಿ ತೋಟದ ತುಂಬೆಲ್ಲ ನಮ್ಮ ಕಾರುಬಾರು ಹೇಳಿ ಪ್ರಯೋಜನವಿಲ್ಲ. ಮಾಮಂದಿರಿಗೆ ಉಪಕಾರ ಆಗದಿದ್ದರು ನಮಗೆಲ್ಲ ಮನೋರಂಜನೆ ಅಂತು ಖಂಡಿತ ಇತ್ತು. ಕೊಕ್ಕೋ ಕೊಯ್ಯಲು ಹೊರಟರೆ ಸಾಕು ನಾವು ಮಕ್ಕಳೇ ಮರ ಹತ್ತುವುದು, ಅದರಲ್ಲೂ ನಮ್ಮೊಳಗೇ ಸ್ಪರ್ಧೆ.ನಾವು ಹತ್ತಿದ ಮರಕ್ಕೆ ಮತ್ತೆ ಮಾಮಂದಿರು ಹತ್ತಿಲ್ಲವೆಂದರೆ ನಾಲ್ಕೈದು ಕೊಕ್ಕೋ ಹಣ್ಣು ಮರದಲ್ಲೇ ಬಾಕಿ. ಇನ್ನು ಅಡಿಕೆ ಹೆಕ್ಕಿದರು ಅಷ್ಟೇ ನಾವು ಅಡಿಕೆ ಹೆಕ್ಕಿದಲ್ಲಿ ಮತ್ತೆ ಹುಡುಕಿದರೆ ಪ್ರತಿ ಮರದ ಬುಡದಲ್ಲೂ ಕನಿಷ್ಠ ಮೂರ್ನಾಲ್ಕು ಅಡಿಕೆ ಸಿಕ್ಕೆ ಸಿಗುತ್ತಿತ್ತು ಮಾಮಂದಿರಿಗೆ…ಅಯ್ಯೋ ಅತ್ತೆಯಂದ್ರನ್ನ ಗೋಳು ಹೊಯ್ಕೊಳ್ತಿದ್ದ ಮಜಾನೆ ಬೇರೆ. ಅದು ಏನಾಗ್ತಿತ್ತು ಅಂದ್ರೆ, ನಾವೆಲ್ಲಾ….
ಅಷ್ಟರಲ್ಲಿ “ಭಾವಾ …”…
ಹಿಂತಿರುಗಿ ನೋಡಿದೆ ಜನಕ ನಿಂತಿದ್ದ ಬೆನ್ನ ಮೇಲೆ ಸ್ಕೂಲ್ ಬ್ಯಾಗ್ ಹಾಗೇ ಇತ್ತು. ಹೋಗಿ ಹಾಗೇ ತಬ್ಬಿಕೊಂಡೆ ಮೂರು ವರ್ಷ ಆಯ್ತು ಅವನ ಪ್ರತ್ಯಕ್ಷ ನೋಡದೆ. ಬರೀ ಫೋಟೋದಲ್ಲೇ… ಜನಕ ಆ ಪಿಟ್ಟೆಗಳಿಗಿಂತಾನು ನಂತರ ಹುಟ್ಟಿದವನು ನನ್ನ ಸಣ್ಣ ಮಾಮನ ಮಗ ಈಗಿನ್ನೂ ೨ನೆ ತರಗತಿ. ಆದರೆ ನಮ್ಮೆಲ್ಲರಿಗಿಂತಲೂ ಭಯಂಕರ ತುಂಟ, ಭಾರೀ ದೊಡ್ಡ ಪೋಕರಿ ಅಷ್ಟೇ ಬುದ್ಧಿವಂತ ಈ ಎಲ್ಲಾ ಚಿತ್ರಣ ನನ್ನ ಸಣ್ಣತ್ತೆ, ಮಾಮ ನನ್ನಲ್ಲಿ ಹೇಳಿದ ಇವನ ಕುರಿತಾದ ಕಥೆಗಳಿಂದ ನನಗೆ ಧೃಡಪಟ್ಟಿತ್ತು. ಹಾಗೇ ಅವನ ಕೈ ಹಿಡಿದು, ನನ್ನ ಬಾಲ್ಯದ ಮಧುರ ನೆನಪಿನ ಖಜಾನೆಯೆನ್ನಲಡ್ಡಿಯಿಲ್ಲದ ಎರಡನೆ ಮಹಡಿಯ ಆ ಕೋಣೆಯಿಂದ ಹೊರಬಂದೆ. ಹಾಗೇ ಹರಟುತ್ತಾ ಕೆಳಗಿಳಿದು ಬಡಗ ಜಗುಲಿತಲುಪಿದೆವು
ಜನಕನ ಗೆಳೆಯ ಮೆಚ್ಚಿನ ನಾಯಿ “ಸಿಂಗ” ಬಾಲ ಅಲ್ಲಾಡಿಸುತ್ತ ಹಾಗೇ ಬಳಿಬಂತು. ಹೋಗೋ ಅನ್ನುವಂತೆ ಅದಕ್ಕೊಂದು ಒದೆ ಬಿತ್ತು ಅವನಿಂದ. ಅದು ತಲೆ ಅಲ್ಲಾಡಿಸುತ್ತ ಹಾಗೇ ಅಲ್ಲೇ ನೆಲದಲ್ಲಿ ಉರುಳಾಡಿ ಒಮ್ಮೆ ಆಟಕ್ಕೆ ಬಾ ಎಂಬಂತೆ ಅತ್ತಿತ್ತ ಕುಣಿಯಿತು. “ಹೇ ಹೋಗು ಸಿಂಗ ಯಾವಾಗಲು ನಿಂಗೆ ಒಂದೇ ರಾಗ ..ಆಟ ಅಡ್ತ ಕೂತರೆ ಹೋಂ ವರ್ಕ್ ನೀನು ಮಾಡ್ತಿಯ?”
ಒಂದು ಡೈಲಾಗ್ ಬಂತು. ಆಶ್ಚರ್ಯದಿಂದ ನೋಡಿದೆ ಏನಪ್ಪಾ ಇವನ ಅಪ್ಪಮ್ಮ ಹೇಳಿರೋ ಕಥೆಗೊ ಈಗಿವನು ಮಾಡೋದಿಕ್ಕೆ ಹೊರಟಿರುವುದಕ್ಕು ವೆತ್ಯಾಸ ಇದೆ, ಹುಂ ಇರ್ಲಿ ಎಲ್ಲೋ ನನ್ನೇ ಬಕ್ರ ಮಾಡೋ ಪ್ಲಾನ್ ಇರ್ಬೇಕು ಹುಶರಾಗಿದ್ರೆ ಆಯ್ತು ಅಂದು ಕೊಂಡೆ. ಹಾಗೇ ಚಾವಡಿ ಚಿಟ್ಟೆ ಮೇಲೆ ಕೂತವನೇ ಬೆನ್ನಿಗಂಟಿದ್ದ ಬ್ಯಾಗ್ ತೆಗೆದು ಅದರೊಳಗೆ ತುಂಬಿದ್ದ ಪುಸ್ತಕವನ್ನೆಲ್ಲ ಎದುರಿಗೆ ಹರಡಿಟ್ಟ. “ಭಾವ ನೀನು ಯಾವತ್ತು ವಾಪಾಸ್ ಹೋಗೋದು?” ಅಂತ ಮುದ್ದಾಗಿ ಕೇಳಿದ. ‘ಹೂಂ.. ಒಂದೈದು ದಿನ ಇದೀನಿ ಮಾರಾಯ’ ಅಂದೆ ಅದ್ಕೆ ಖುಷಿಯಿಂದ “ಹಾಗಾದ್ರೆ ಆದಿತ್ಯವಾರ ಅಲ್ವ ನೀನು ಹೋಗೋದು ಅಪ್ಪನ ಜೊತೆ ನಾನು ನಿನ್ನ ಏರ್ಪೋರ್ಟ್ ಗೆ ಬಿದೊದಿಕ್ಕೆ ಬರಬಹುದು” ಅಂತ ಖುಷಿಯಿಂದ ಕೂಗಿ ಹೇಳಿದ. ಅಷ್ಟೇ ಅವನ ಕೈಲಿದ್ದ ಪುಸ್ತಕ ನನ್ನ ಕಣ್ಸೆಳೆಯಿತು . ಹಾಗೇ ಮುಂದಕ್ಕೆ ಬಾಗಿ ‘ಹೇ ಕೊಡು ಅದನ್ನೊಮ್ಮೆ ಅಂದೆ’. ನನ್ನೇ ದುರುಗುಟ್ಟಿ ‘ನಾನೇ ಇನ್ನೂ ಸರಿಯಾಗಿ ನೋಡಿಲ್ಲ ಈ ಪುಸ್ತಕಾನ, ಬರ್ತಾ ದಾರೀಲಿ ಬಿದ್ದಿತ್ತು ಹಾಗೇ ಎತ್ಕೊಂಡು ಬಂದೆ. ನೋಡು ಪುಸ್ತಕದ ಕವರ್ ಪೇಜ್ ಎಷ್ಟು ನೈಸ್ ಇದೆ ಅಂತ’ ಅಂದು ನನ್ನ ಕೈಗಿತ್ತ . ಅಷ್ಟರಲ್ಲಿ ಸಣ್ಣತ್ತೆ ಬಂದವರೇ ತಿಂಡಿ ,ಕಾಫಿ ರೆಡಿಯಿದೆ ಬನ್ನಿ ಇಬ್ರು ಒಳಗೆ ಅಂತ ಕರೆದರು. ಪುಸ್ತಕವನ್ನೊಮ್ಮೆ ಬಿಡಿಸಿದೆ ಮೊದಲ ಪುಟದ ಮೇಲಿತ್ತು
“ಉನ್ಮೇಷನಾ”
‘ನಾನು ಮತ್ತು ನೀನು’
ಹಾಗೇ ಪುಟ ಬಿಡಿಸಿದೆ ಇದು ಯಾರ ಡೈರಿ ಎಂಬ ಕುತೂಹಲದಿಂದ, ಯಾರದ್ದು? ಹಾಗೇ ಮೇಲಿಂದ ಮೇಲೆ ನೋಡಿದೆ ಮಾಹಿತಿ ಇಲ್ಲ. ಅನಾಥ ಡೈರಿ ಆದರೆ ಇದೇ ವರ್ಷದ್ದು ಇನ್ನು ಅರ್ಧ ವರ್ಷ ಮುಗಿದಿಲ್ಲ ಆಗ್ಲೇ….? ಇವನ ಕೈಗೆ ಹೇಗೆ ಬಂತು? ತಪ್ಪಿ ದಾರೀಲಿ ಬಿದ್ದಿರಬೇಕು ವಿಳಾಸ ಅಲ್ಲಾ ಹೆಸರೆ ಇಲ್ಲ. ಆದರು ಆ ಡೈರಿ ಓದೋ ಕುತೂಹಲ ಹೆಚ್ಚಾಯಿತು. ಅಷ್ಟರಲ್ಲಿ ಸಣ್ಣತ್ತೆ ಧ್ವನಿ ಕೇಳಿ ಡೈರಿಯನ್ನು ಅಲ್ಲೇ ಬಿಟ್ಟು ಜನಕನ ಕೂಡಿ ಒಳಕ್ಕೊಡಿದೆ… ಮನಸ್ಸಿನ ತುಂಬ ಅದೇ ಡೈರಿ ತುಂಬಿತ್ತು ಏನು ತಿಂಡಿ ತಿಂದೆನೋ ಅದೇನು ಕುಡಿದೆನೋ ದೇವರಾಣೆ ಗೊತ್ತಿಲ್ಲ. ಅತ್ತೆ ಅದೇನೋ ಕೇಳಿದ್ರು ನಾನೇನೋ ಹೇಳಿದೆ, ಜನಕ ಏನೋ ಕೇಳಿದ ನಾನೇನೋ ಹೇಳಿದೆ.. ಅತ್ತೆ ಒತ್ತಾಯ ಮಾಡಿ ಬಡಿಸಿದರು ನಾನು ಗಬ ಗಬ ತಿಂದೆ ಹಾಗೇ ಹೊರಕ್ಕೊಡಿ ಬಂದೆ ಡೈರಿಯನ್ನು ಓದುವ ಕುತೂಹಲ ತಾಳದೆ . ಆದ್ರೆ ಡೈರಿ ಮಾತ್ರ ಅಲ್ಲಿರಲಿಲ್ಲ..!!! ಗಾಬರಿಯಾಯ್ತು… ಯಾರು ಯೆತ್ಕೊಂಡಿರ್ಬಹುದು? ಪ್ರಶ್ನೆ ಹಾಗೇ ಬೃಹದಾಕಾರವಾಗಿ ಬೆಳೆಯಿತು. ಎಲ್ಲಾ ಕಡೆ ಹುಡುಕಿದೆ, ಅತ್ತೆ ನನ್ನ ಪೇಚಾಟ, ಹುಡುಕಾಟ ಕಂಡು ಏನೆಂದರು. ನಾನು ಒಂದು ಡೈರಿ ಕಾಣಿಸ್ತಿಲ್ಲ ಅಂದೆ ಅತ್ತೆನೂ ಹುಡುಕಿದರು ಪತ್ತೇನೆ ಇಲ್ಲ. ಜನಕನೂ ಹುಡುಕಿದ.. ಇಲ್ಲ ಡೈರಿ ಮಾತ್ರ ಇಲ್ಲ…! ಆ ರಾತ್ರಿ ಊಟ ಕೂಡ ಮಾಡಕಾಗ್ಲಿಲ್ಲ ಆ ಡೈರಿ ಕೆರಳಿಸಿಟ್ಟ ಕುತೂಹಲಕ್ಕೆ. ರಾತ್ರಿ ಮಲಗಿದೆ ಆದರೂ ಅದೇ ಕುತೂಹಲ ಡೈರಿ ಎಲ್ಲಿ? ಆ ಕುತೂಹಲಕ್ಕೆ ಮುಖ್ಯ ಕಾರಣವಿದೆ ,ಹೇಗೆ ತಾನೆ ಮರೆಯೋದು ಹಾಗೇ ಪುಟ ಸಮೇತ ಅಚ್ಚೊತ್ತಿರುವ ಡೈರಿಯ ಕೊನೆಯಸಾಲುಗಳನ್ನ.
Sorry…ಕೊನೆಯಸಾಲು…???
“ಅವಳಿಗೆ ಮದುವೆಯಂತೆ….!!!” ಮತ್ತೊಂದು ಅಗ್ನಿ ಪರೀಕ್ಷೆ, ಅಲ್ಲಾ ಅವಳಾದರು ಹೇಗೆ ಒಪ್ಪಿದಳು?… ಅವಳ ಮೊಬೈಲ್ ಸ್ವಿಚ್ ಆಫ್ ಇದೆ… ಅವಳನ್ನು ಬಿಟ್ಟಿರೋದು ನನ್ನಿಂದ ಅಸಾಧ್ಯ ಅದಕ್ಕೆ ಶಿವಮೊಗ್ಗೆಗೆ ಹೊರಟಿದ್ದೇನೆ.
ನಾನು ಹೊರಟಿದ್ದೇನೆ, ಒಂದೋ ಅವಳು ಇಲ್ಲಾ ನಾನೇ ಇಲ್ಲಾ ಇದು ಖಂಡಿತ…ಹೇ ವಿಧಿ ಹೇಳು ನೀನು ನನಗೆ ಗುಡ್ ಲಕ್.
ಶ್ರೀನಿಧಿ , ಧರ್ಬೆ
ಕ್ಲಿಕ್...
ಗೆಳೆಯ , ಪತ್ರಿಕಾ ಛಾಯಾಗ್ರಾಹಕ ಪ್ರಸನ್ನ ಬಿ.ಪಿ. ತೆಗೆದ ವನ್ಯಮೃಗಗಳ ಛಾಯಾಚಿತ್ರ. ನೀವೂ ನೋಡಿ. ಅಭಿಪ್ರಾಯಿಸಿ...

ಚಿತ್ರ: ಪ್ರಸನ್ನ ಬಿ.ಪಿ.
ರಾಜ್ಯ - ರಾಷ್ಟ್ರ
ಅದು ಜುಲೈ 26 2009 ರಂದು. ಇಡೀ ಜಗತ್ತೇ ಒಂದು ಬಾರಿ ಭಾರತದತ್ತ ದೃಷ್ಠಿ ನೆಟ್ಟಿದ್ದಂತೂ ಸತ್ಯ...ಪರಮಸತ್ಯ. ಅದುವೇ ಕಾರ್ಗಿಲ್ ಕದನದಲ್ಲಿ ಭಾರತದ ವೀರ ಪುತ್ರರು ವಿಜಯ ಸಾಧಿಸಿದ ದಿನ. ಇದೀಗ ಈ ವಿಜಯ ದಿನಕ್ಕೆ ಹತ್ತು ವರುಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಹುತಾತ್ಮರಾದ ಕಾರ್ಗಿಲ್ ಯೋಧರನ್ನು ಸ್ಮರಿಸೋಣ. ಜೀವದ ಹಂಗು ತೊರೆದ ಅನೇಕಾನೇಕ ವೀರ ಯೋಧರ ಕೆಚ್ಚೆದೆಯ ಹೋರಾಟವನ್ನು ಮತ್ತೊಮ್ಮೆ ಸ್ಮರಿಸೋಣ...ಜೈ ಭಾರತ್...
ವಿಶೇಷ ವರದಿ
ಉಡುಪಿ : `ಕೂರಿಗೆ' ಹೆದರಿ ಸೀರೆ ಉಡೋದು ಬಿಡೋಕೆ ಆಗುತ್ತಾ..? ಆದರೆ ಉಡುಪಿಯಲ್ಲಿ ಬುಸ್ಸಪ್ಪನಿಗೆ ಹೆದರಿ ಟೆಂಟ್ ಶಾಲೆಯೇ ಎತ್ತಂಗಡಿಯಾಗಿದ್ದಂತೂ ಸತ್ಯ! ಶಾಲೆ ಆಜು,ಬಾಜು ಹತ್ತಾರು ಮನೆಗಳಿವೆ. ಅದರಲ್ಲಿ ನೂರಾರು ಮಂದಿ ವಾಸವಾಗಿದ್ದಾರೆ. ಅವರ್ಯಾರಿಗೂ ತೊಂದರೆ ಕೊಡದ ನಾಗರ ಹಾವು ಟೆಂಟ್ ಶಾಲೆಗೆ ಬಂದು ಪಾಠ ಕೇಳುತ್ತೆ ನಮಸ್ತೆ ಸಾರ್..ಎನ್ನುತ್ತೆ ಅಂದರೆ ನಂಬೋದು ಹೇಗೆ?
ಕುಣಿಲಾರದೋಳು ನೆಲ ಡೊಂಕು ಅಂದಿದ್ಲಂತೆ. ಹಾಗೆ ಶಾಲೆ ಎತ್ತಂಗಡಿಗೆ ನಾಗರ ಹಾವು ನೆವ ಅಂತಾರೆ ಅಲೆಮಾರಿ ಕಾರ್ಮಿಕರು. ಒಟ್ಟಾರೆ ಮಕ್ಕಳು ಕಲಿಯಬೇಕು ಎಂಬ ಅಲೆಮಾರಿಕಾರ್ಮಿಕರ ಆಸೆಯೂ ಟೆಂಟ್ ಶಾಲೆ ಎತ್ತಂಗಡಿಯಿಂದ ಸುಟ್ಟುಬೂದಿಯಾಗಿದೆ.ಮಕ್ಕಳನ್ನು ದುಡಿಸಿಕೊಳ್ಳಬಾರದು ಅನ್ನುತ್ತೆ ಕಾನೂನು. ಹದಿನಾಲ್ಕು ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಎನ್ನುತ್ತದೆ ಸರಕಾರ. ಆದರೆ ಟೆಂಟ್ ಶಾಲೆಯಲ್ಲಿ ಕಲಿತ ಮಕ್ಕಳ ಮೂಲಕವೇ ಶಿಕ್ಷಕರು ಮುಂದೆ ನಿಂತು ಶಾಲೆ ತರವುಗೊಳಿಸಿದ್ದು ಮತ್ತೊಂದು ದುರಂತ!
ಎಲ್ಲಿತ್ತು ಟೆಂಟ್ ಶಾಲೆ : ಉಡುಪಿ ಮತ್ತು ಸಂತೆಕಟ್ಟೆಯ ನಡುವಿನ ನಿಟ್ಟೂರಿನಲ್ಲಿ ಟೆಂಟ್ ಶಾಲೆ ಸರಿ ಸುಮಾರು ದಶಕದಿಂದ ಕಾರ್ಯನಿರ್ವಹಿಸುತ್ತಿದೆ. ಅಲೆಮಾರಿ ಜನಾಂಗದ ಮಕ್ಕಳೂ ವಿದ್ಯಾವಂತರಾಗಬೇಕು ಎನ್ನುವ ನಿಟ್ಟಿನಲ್ಲಿ ಟೆಂಟ್ ಶಾಲೆ ತೆರೆಯಲಾಗಿದೆ. ಅದೂ ಕೋಳಿಗೋಡಿನಂತ ಕಟ್ಟಡದಲ್ಲಿ ತಗಡು ಮಾಡುಮಾಡಿ ಶಾಲೆ ತೆರೆಯಲಾಗಿದೆ.ಅಲೆಮಾರಿ ಜನಾಂಗದ ಚಳ್ಳೆಪಿಳ್ಳೆ ಎಲ್ಲಾ ಸೇರಿ ವಿವಿಧ ತರಗತಿಯಲ್ಲಿ ಸುಮಾರು 60 ಕ್ಕೂ ಮಿಕ್ಕ ಮಕ್ಕಳಿದ್ದರು. ಏಕಾಏಕಿ ನಾಗರ ಹಾವು ಶಾಲೆಗೆ ಬರುತ್ತದೆ ಎಂಬ ನೆವದಲ್ಲಿ ಶಾಲೆ ಕುಂದಾಪುರಕ್ಕೆ ಸ್ಥಳಾಂತರ. ಅಲೆಮಾರಿ ಜನಾಂಗದ ಕೆಲ ಮಕ್ಕಳು ಸಂತೆಕಟ್ಟೆ ಶಾಲೆ ಕಡೆ ಮುಖ ಮಾಡಿದ್ದಾರೆ. ಉಳಿದವರು ಟೆಂಟ್ ಮನೆಯಲ್ಲಿ ಸೂರು ನೋಡುತ್ತಿವೆ.
ಯಾಕಾಗಿ ಸ್ಥಳಾಂತರ : ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳ ಕೊರತೆಯಿಂದ ಕೆಲ ಸರಕಾರಿ ಶಾಲೆಗಳು ದಿನಗಳ ಎಣಿಕೆಯಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 97 ಸರಕಾರಿ ಶಾಲೆಗಳು ಹರೋಹರ. ಇದೆಲ್ಲಕ್ಕೂ ಕಾರಣ ವಿದ್ಯಾರ್ಥಿಗಳ ಕೊರತೆ. ಆದರೆ ಉಡುಪಿ ಟೆಂಟ್ ಶಾಲೆಗೆ ಮಕ್ಕಳ ಬರಬರಲಿಲ್ಲ. ಶಾಲೆ ಸ್ಥಳದಲ್ಲಿ ನಾಗನ ನಡೆಯಿದೆ. ಶಾಲೆಗೆ ಹಾವು ಬಂದು ಕೂರುತ್ತದೆ. ಮಕ್ಕಳು ನಾಗರಹಾವೇ.. ಹಾವಳ ಹೂವೇ.. ಎಂದರೆ ತಲೆಯಾಡುಸುತ್ತಾ ಕುಳಿತು ಬಿಡುತ್ತದೆ. ಹಾವನ್ನು ಕುಂತಲ್ಲಿಂದ ಸಾಗಹಾಕುವುದು ಕಷ್ಟ. ಹಾವೆಲ್ಲಾದರೂ ಮಕ್ಕಳಿಗೆ ಕಚ್ಚಿದರೆ ಕಷ್ಟ. ಎಂಬಲ್ಲಾ ಸಂಗತಿಗಳು ಶಾಲೆ ಎತ್ತಂಗಡಿಗೆ ಕಾರಣ.
ಹಾಗಂತ ಹಾವು ಇದೂವರಗೆ ಯಾರನ್ನೂ ಕಚ್ಚಿದ ಬಗ್ಗೆ ಉಲ್ಲೇಖವಿಲ್ಲ. ಬಟ್ಟಂಬಯಲಲ್ಲಿ ಟೆಂಟ್ ಹಾಕಿ ಹಗಲು ರಾತ್ರಿ ಕೂತ ಕಾರ್ಮಿಕರ ಗುಡಿಸಲು ನುಗ್ಗಿ ಬುಸ್ಸಪ್ಪ ತೊಂದರೆ ಕೊಟ್ಟಿಲ್ಲ. ಅದೂ ಹೊತ್ತಲ್ಲದ ಹೊತ್ತಿಗೆ ಶಾಲೆಗೆ ಬಂದು ಹಾವು ಸ್ಥಾಪನೆಯಾಗುತ್ತದೆ. ಅದರಿಂದ ತೊಂದರೆಯಾಗುತ್ತದೆ ಎಂದು ಶಾಲೆ ತೆರವು ಮಾಡಿದ್ದು ನ್ಯಾಯವಾ ಅಂತಾರೆ ಅಲೆಮಾರಿ ಜನಾಂಗ.
ದಕ್ಷಿಣ ಕನ್ನಡದಲ್ಲಿ ನಾಗರ ಹಾವಿಗೆ ವಿಷೇಶ ಸ್ಥಾನ ಮಾನವಿದೆ. ಅದಕ್ಕಾಗಿ ಲಕ್ಷಾಂತರ ಸುರಿದು ನಾಗ ಮಂಡಲ ಮಾಡಲಾಗುತ್ತದೆ. ಸತ್ತ ಹಾವು ಸಿಕ್ಕರೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡೋದು ಸುಳ್ಳಲ್ಲ. ಬೇಕಾದಷ್ಟು ಹಣ ಸುರಿದು ನಾಗನಿಗೆ ಗುಡಿ, ಗೋಪುರ ಕಟ್ಟೋರು ಇದ್ದಾರೆ. ನಾಗನ ಬಗ್ಗೆ ದಕ್ಷಿಣ ಕನ್ನಡ ಜನರಿಗೆ ವಿಶೇಷ ಭಯಭಕ್ತಿಯಿದೆ. ಹಾಗೆ ನಾಗನನ್ನು ಕೊಲ್ಲುವವರೂ ಇದ್ದಾರೆ. ಜೊತೆಗೆ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡೋರೂ ಇದ್ದಾರೆ. ನಾಗನನ್ನು ಕೊಂದರೆ ಪಾಪ ಅಂತ ಹೊಳಲಾಗಿದೆಯೇ ಹೊರತು ಹಿಡಿದು ಬೇರೆ ಸಾಗಿಸಿದರೆ ಪಾಪ ಅಂತ ಎಲ್ಲೂ ಯಾರೂ ಹೇಳಿಲ್ಲ. ನಾಗನ ಹಿಡಿದು ಹೆಡೆ ಮುಡಿಕಟ್ಟಿ ಬೇರೆಡೆ ಬಿಡೋ ಬದಲು ಶಾಲೆಯೇ ಸ್ಥಳಾಂತರ ವಾಗೋದು ಎಲ್ಲಾದರೂ ಉಂಟಾ! ಮನೆಗೆ ನಾಗರ ಹಾವು ಬಂತು ಅಂತ , ಮನೆ ಬಿಡೋಕೆ ಆಗುತ್ತಾ. ಈ ಸಣ್ಣ `ಲಾಜಿಕ್' ಶಿಕ್ಷಣ ಇಲಾಖೆ ಗಮನಕ್ಕೆ ಬಂದಿಲ್ವಾ?
ನಷ್ಟ ಮಕ್ಕಳಿಗೆ : ಟೆಂಟ್ ಶಾಲೆ `ರಿಮೂ' ಕೆಲಸ ನಡೆಸುತ್ತಿದ್ದ ಅಧ್ಯಾಪಕರು ಈ ಕನಸು ಜೊತೆಗೆ ಮಾತನಾಡಿ, ಶಾಲೆಗೆ ನಾಗರ ಹಾವುಬರುತ್ತದೆ. ಇದರಿಂದ ಶಾಲೆ ಮಕ್ಕಳಿಗೆ ತೊಂದರೆಯಾಗಬಹುದೆಂದು ಟೆಂಟ್ ಶಾಲೆ ಕುಂದಾಪುರಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ.
ಹಾವು ಪದೇ ಪದೇ ಬಂದು ತೊಂದರೆ ಕೊಡುತ್ತದೆ. ಶಾಲೆಯಿರುವ ಜಾಗದಲ್ಲಿ ನಾಗನ ನಡೆಯಿರಬೇಕು ಅನ್ಸುತ್ತೆ. ನಾಗನ ಉಸಾಬರಿಯಾಕೆ ಎಂಬ ಹಿನ್ನೆಲೆಯಲ್ಲಿ ಶಾಲೆ ತೆರವು ಮಾಡುತ್ತಿದ್ದೇವೆ ಎಂದು ನಿರ್ಲಿಪ್ತರಾಗಿ ಹೇಳುತ್ತಾರೆ. ಶಾಲೆ ತೆರೆವು ಮಾಡಿದರೆ ವಲಸೆ ಕಾರ್ಮಿಕರ ಮಕ್ಕಳ ಗತಿಯಂತೂ ಅಂದರೆ ಇಲ್ಲೇ ಹತ್ತಿರದಲ್ಲಿ ಶಾಲೆಯಿದೆ ಎಂದು ಸಮಜಾಯಿಸಿ ನೀಡುತ್ತಾರೆ.
ಸರಕಾರ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಹತ್ತು ಹಲವು ಯೋಜನೆ ಹಾಕಿಕೊಂಡಿದೆ. ಈ ಬಾರಿಯಂತೂ ಚಿಕ್ಕಪುಟ್ಟ ನೂನ್ಯತೆ ಹೊರತುಪಡಿಸಿದರೆ ಪಠ್ಯ ಪುಸ್ತಕ,ಸಮವಸ್ತ್ರ ಮತ್ತು ಬಿಸಿ ಊಟ ಯಶಸ್ವಿಯಾಗಿ ಆರಂಭಿಸಿದೆ. ಇದರೊಟ್ಟಿಗೆ ಇಂಥಹಾ ಅಪಸೌವ್ಯಗಳು ನಡೆಯುತ್ತಿದೆ. ಇದಕ್ಕೆ ಹೊಣೆಯಾರು? ಶಿಕ್ಷಣ ಸಚಿವರು ಇತ್ತ ಗಮನಹರಿಸಬೇಕಾಗಿದೆ. ಮಾಹಾ ತಂತ್ರಗಾರ ಕಡಗೋಲ ಕೃಷ್ಣನ ನಾಡಲ್ಲಿ ಹಾವಿಗೆ ಮದ್ದರೆಯಾಲಾಗದೆ ಟೆಂಟ್ ಶಾಲೆಯನ್ನೇ ಎತ್ತಂಗಡಿ ಮಾಡುತ್ತಾರೆ ಅಂತಾದ್ರೆ ಅದಕ್ಕಿಂತ ಶೇಮ್ ಮತ್ತೊಂದಿಲ್ಲ.
ಶ್ರೀಪತಿ ಹೆಗಡೆ ಹಕ್ಲಾಡಿ
ವೈವಿಧ್ಯ
ಆಷಾಡ ಮಾಸವನ್ನು ಕರಾವಳಿ ಜಿಲ್ಲೆಯಲ್ಲಿ ಆಟಿ ತಿಂಗಳು ಎಂದು ಕರೆಯುತ್ತಾರೆ. ಅಂತಹ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ.ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು.ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಕರಾವಳಿ ಜಿಲ್ಲೆಯಲ್ಲಿ ಆಟಿ ತಿಂಗಳಲ್ಲಿ ವಿವಿದ ಆಚರಣೆಗಳು ನಡೆಯುತ್ತದೆ.ಅದರಲ್ಲಿ ಆಟಿ ಕಳೆಂಜ ಪ್ರಮುಖವಾಗಿದೆ.ಈ ಆಚರಣೆಯ ಮೂಲಕ ಜನ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಆಟಿ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳು ಕರಾವಳಿ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಆಟಿ ತಿಂಗಳೆಂದರೆ ತುಂಬಾ ಕಷ್ಟದ ಸಮಯ ಎಂದೂ ನಂಬಲಾಗುತ್ತದೆ. ಈ ಆಟಿಯ ಸಮಯದಲ್ಲಿ ಒಮ್ಮೆ ದೋ.... ಸುರಿಯುವ ಮಳೆ .. ಇನ್ನೊಂದು ಕ್ಷಣದಲ್ಲಿ ಸುಡು ಬಿಸಿಲು. ... ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಊರಿನಲ್ಲಿ ರೋಗಗಳು ಆರಂಭಗೊಳ್ಳುತ್ತಿದ್ದವು. ಹೀಗಾಗಿ ಆಟಿ ತಿಂಗಳು ಆರಂಭವಾಯಿತೆಂದರೆ ಜನ ಹೆದರುವ ಕಾಲವಿತ್ತು. ಇಂತಹ ಸಮಯದಲ್ಲಿ ಆರೋಗ್ಯ ಕಾಪಾಡಲು ಕೆಲ ಆಚರಣೆಗಳನ್ನು ಮಾಡಿದರೆ ಮಾನಸಿಕವಾಗಿ ಸಮಾಜವನ್ನು ಗಟ್ಟಿಗೊಳಿಸಲು ಇನ್ನೂ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಅಂತಹ ಆಚರಣೆಗಳಲ್ಲಿ ಆಟಿ ಕಳೆಂಜ ಮುಖ್ಯವಾದ್ದು.
ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆಯೊಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ.
ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ.ಹೀಗೇ ಬೆಳೆದು ಬಂದ ಒಂದು ಆಚರಣೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.ಆದ್ರೆ ಆಧುನಿಕವಾದ ಈ ಕಾಲದಲ್ಲಿ ಅದೆಲ್ಲಾ ಮೂಲೆಗುಂಪಾಗುತ್ತಿರುವುದು ಒಪ್ಪಲೇ ಬೇಕಾದ ಸತ್ಯ.
- ಮಹೇಶ್ ಪುಚ್ಚಪ್ಪಾಡಿ
ರಾಜ್ಯ - ರಾಷ್ಟ್ರ
ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ ೧೯೯೪ರ ಏಪ್ರಿಲ್ ನಲ್ಲಿ ಸಂನ್ಯಾಸದೀಕ್ಷೆ ಪಡೆದರು. ೧೯೯೯ರ ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಅಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೊಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಟ ಅಧ್ಯಾತ್ಮನಾಯಕರನ್ನಾಗಿಸಿವೆ. ಶ್ರೀ ವಿಕೃತಿ ಸಂವತ್ಸರದ ಆಷಾಢ ಶುದ್ಧ ಪೂರ್ಣಿಮೆಯಿಂದ ಭಾದ್ರಪದ ಶುದ್ಧ ಪೂರ್ಣಿಮೆ ಪರ್ಯಂತ
ದಿನಾಂಕ: 25-07-2010 ರಿಂದ 23-09-2010 ವರೆಗೆ ಅಶೋಕೆ, ಗೋಕರ್ಣ ದಲ್ಲಿ ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ ನಡೆಯಲಿದೆ.
ವಿಶೇಷ ವರದಿ
ಉಡುಪಿ: ಇವರ ಬದುಕು ನೆನೆಸಿಕೊಂಡರೆ ನಿದ್ದೆಯಲ್ಲೂ ಬೆಚ್ಚಿ ಬೀಳಬೇಕಾಗುತ್ತದೆ! ಹೀಗೂ ಬದುಕುತ್ತಾರಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೂಲಭೂತ ಸೌಲಭ್ಯವಿಲ್ಲದೆ ಪ್ರಾಣಿಗಿಂತಲೂ ಹೀನ ಬದುಕು ಇವರದ್ದು. ಅದೂ ರಸ್ತೆ ಬದಿಯಲ್ಲಿ ವಾಸಮಾಡೋ ಈ ಮಂದಿಗೆ ಟೆಂಟೇ ದಿಕ್ಕುದಿಶೆ. ಹೊಟ್ಟೆ ಪಾಡಿಗಾಗಿ ಎಲ್ಲಿಂದಲೋ ಬಂದು ಉಡುಪಿ ಕಲ್ಯಾಣಪುರ ಮಧ್ಯದ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 17ರ ಮಗ್ಗಲೇ ಇವರಿಗೆ ಅರಮನೆ. ಟೆಂಟ್ ಹೌಸ್ನಲ್ಲಿ ವಾಸಾಮಾಡೋ ವಲಸೆ ಕಾರ್ಮಿಕರ ಬದುಕು ಪಕ್ಕಾ ನರಕ. ಧವಾಖಾನೆ, ಪಾಯಿಖಾನೆ ಸ್ನಾನ, ಊಟ, ನಿದ್ದೆ, ಮಿಲನ
ಎಲ್ಲವೂ ಟೆಂಟ್ ಹೌಸ್ ಒಳಗೆ!
ಎಲ್ಲಿಂದಲೋ ಬಂದವರು : ಚಿಕ್ಕಚಿಕ್ಕ ಗುಬ್ಬಚ್ಚಿಗೂಡಿನಷ್ಟು ಅಗಲದ ಟೆಂಟ್ ಮನೆಯಲ್ಲಿ ತಲೆಯೆತ್ತಿ ನಿಲ್ಲೋದಾಗಲೀ, ಕಾಲುಚೆಲ್ಲಿ ಮಲಗಲೂ
ಸಾಧ್ಯವಿಲ್ಲ. ನಾಲ್ಕು ಜನ ಒಟ್ಟಾಗಿ ಪಟ್ಟಾಂಗ ಹೊಡೆಯಲೂ ಬರೋದಿಲ್ಲ. ಮನೆಯ ಒಳಗೆ ಇಬ್ಬರಿದ್ದರೆ ಮತ್ತುಳಿದವರು ಹೊರಗೆ ಇರಬೇಕಾದ ಸ್ಥಿತಿ. ಅಂಗೈ ಅಗಲದ ಟೆಂಟ್ ಮನೆಯೇ ಇವರಿಗೆ ಅರಮನೆ. ಗಾಳಿ, ಬೆಳಕು, ನೀರು, ವಿದ್ಯುತ್, ಶಿಕ್ಷಣ ಮುಂತಾದ ಮೂಲಭೂತ ಸೌಲಭ್ಯಗಳು ಟೆಂಟ್ ಹೌಸಿನಲ್ಲಿ ಅರ್ಥ ಕಳೆದುಕೊಂಡಿದೆ. ಇಂಥಹಾ ಹೀನ ಸ್ಥಿತಿಯಲ್ಲಿ ಮನುಷ್ಯರು ಬದುಕುತ್ತಾರಾ ಅಂದರೆ ಜೀರ್ಣಿಸಿಕೊಳ್ಳುವುದು ಕಷ್ಟ. ಪ್ರಾಣಿಗಿಂತಲೂ ಹೀನ ಸ್ಥಿತಿಯಲ್ಲಿ ಅಲೆಮಾರಿ ಕಾರ್ಮಿಕರು ಬದುಕುತ್ತಿದ್ದಾರೆ ಅಂದರೆ ಅದು ಅವರಿಗೆ ಅನಿವಾರ್ಯ. ಸಂಪೂರ್ಣ ಸಾಕ್ಷರತೆ, ಬುದ್ದಿವಂತರ ಜಿಲ್ಲೆ ಪಿಳ್ಳಂಗೋವಿ ಕೃಷ್ಣನ ನಾಡೆಂದೇ ಪ್ರಖ್ಯಾತಿ ಪಡೆದ ಉಡುಪಿ ಜಿಲ್ಲೆಯಲ್ಲಿ ಇಂಥಹದ್ದೊಂದು ಅಪಸೌವ್ಯ ಎಂದರೆ ನಂಬಲಾಗದಿದ್ದರೂ ಕಠೋರ ಸತ್ಯ. ವಿಚಿತ್ರ ಆಚರಣೆಯ, ವಿಭಿನ್ನ ನಂಬಿಕೆಯ ಅಂಧಶ್ರದ್ಧೆಯ ನಂಬಿಕೆ ಮಂದಿ ಉಡುಪಿಯವರಲ್ಲಿ ಹೊಟ್ಟೆ ಹೊರೆದುಕೊಳ್ಳಲು ಎಲ್ಲಿಂದಲೋ ಬಂದವರು.
ಯಾರೂ ಇಲ್ಲಿಯವರಲ್ಲ : ಉಡುಪಿ ರಾಷ್ಟ್ರೀಯ ಹೆದ್ದಾರಿ ಮಗ್ಗಲಿನ ನಿಟ್ಟೂರಿನಲ್ಲಿ ಟೆಂಟ್ ಹೂಡಿ ಬದುಕು ಕಟ್ಟಿಕೊಳ್ಳಲು ಬಂದವರಾರು ಇಲ್ಲಿಯವರಲ್ಲ. 30ಕ್ಕೂ ಮಿಕ್ಕ ಮನೆಯಲ್ಲಿ ಮಕ್ಕಳು ಮರಿಗಳು ಸೇರಿ 300ಕ್ಕೂ ಮಿಕ್ಕ ಕ್ರೌಡ್ ಇದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಕೆಲಸ ಹುಡುಕಿ ಉಡುಪಿಗೆ ಬಂದಿದ್ದಾರೆ. ಕುಷ್ಟಗಿ, ಲಕ್ಷ್ಮೀಪುರ, ಧಾರವಾಡ, ಹುಬ್ಬಳ್ಳಿ, ಬೆಳಗಾಂ ಕಡೆಯಿಂದ ಇಲ್ಲಿ ಬಂದು ಕುಳಿತಿದ್ದಾರೆ. ಕಳೆದ 15 ವರ್ಷದಿಂದ ನಿಟ್ಟೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ವಿಚಿತ್ರ ನಂಬಿಕೆಯ ಬುಡಕಟ್ಟು ಜಂಗಮ ಜನಾಂಗದವರಾದ ಇವರು ಹೆಮ್ಮಕ್ಕಳಿಗೂ ವೆಂಕಟರಮಣಾ ಅಂತ ನಾಮಕರಣ ಮಾಡುತ್ತಾರೆ! ಹಸನಪ್ಪ, ಹಸನಮ್ಮ, ಚಂದ್ರಮ್ಮ, ಮಲ್ಲಮ್ಮ,ಮಲ್ಲಪ್ಪ, ಯಲ್ಲಮ್ಮ, ಯಲ್ಲಪ್ಪ ಮುಂತಾದ ಹೆಸರು ಸವಕಲು ನಾಣ್ಯ. ಹಿಂದೂ ಹೆಸರಿನ ಮುಸ್ಲಿಂ ಇದ್ದಾರೆ. ಮುಸ್ಲಿಂ ಹೆಸರಿಟ್ಟುಕೊಂಡ ಹಿಂದುಗಳಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಜಾತಿಯ ಸಾಮರಸ್ಯವಿದೆ. ನಿಟ್ಟೂರು ಮಗ್ಗಲಲ್ಲಿ ವಾಸಮಾಡುವ ಅಲೆಮಾರಿ ಜನಾಂಗದ ಪಕ್ಕದಲ್ಲಿ ಉಡುಪಿ ನಗರಸಭೆ ಕೊಚ್ಚೆನೀರು ಶುದ್ಧಿಕರಣ ಘಟಕವಿದೆ. ಬೇಸಿಗೆಯಲ್ಲಂತೂ ಇವರ
ಬದುಕು ದೇವರಿಗೆ ಪ್ರೀತಿ. ಸೊಳ್ಳೆ ರಾತ್ರಿ ಸಂಗಾತಿ. ಮಲೇರಿಯಾ ಕೂಡಾ ಇವರೊಟ್ಟಿಗಿದೆ. ದುಡಿಯ ಬೇಕು ಹೊಟ್ಟೆ ತುಂಬಿಸಿಕೊಳ್ಳಬೇಕು. ಇವರ ಬದುಕು ಒಂಥರ ಅಂಗಡಿ ಅಕ್ಕಿ ಬಂಗಡೆ ಮೀನು!
ತರಾವರಿ ಮಂದಿ ಇದ್ದಾರೆ : ಟೆಂಟ್ ಮನೆಯಲ್ಲಿ ವಾಸಮಾಡೋ ಈ ಜನರಲ್ಲಿ ತರಾವರಿ ವೃತ್ತಿಯ ಮಂದಿಯಿದ್ದಾರೆ. ಕೆಲವರು ಮಲ್ಪೆ ಬಂದರಿನಲ್ಲಿ ಮೀನು ಗೋರಲು ಹೋಗುತ್ತಾರೆ. ಮತ್ತೆ ಕೆಲವರು ಕೂಲಿಗಿಳಿಯುತ್ತಾರೆ. ತಬಲ, ಹಾರ್ಮೋನಿಯಂ, ಬಕೇಟ್ ಸ್ಟವ್, ಕೊಡೆ ರಿಪೇರಿ ಕಾಯಕ ಮಾಡುತ್ತಾರೆ. ಮಹಿಳೆಯರೂ ಕೂಲಿ ಮಾಡುತ್ತಾರೆ. ಮತ್ತೆ ಕೆಲವರು ವೇಷ ಹಾಕಿ ದುಡಿಯುತ್ತಾರೆ. ಸಂಜೆ ಟೆಂಟ್ ಗೂಡು ಹೊಕ್ಕರೆ ಮತ್ತದೇ ಸೂರ್ಯೋದಯಕ್ಕೆ ಟೆಂಟ್ ಕಾಲಿಯಾಗುತ್ತದೆ. ಟೆಂಟ್ ಕಾವಲಿಗೆ ಒಂದಿಬ್ಬರು ಉಳಿಯುತ್ತಾರೆ. ದೇವರ ತಲೆಯ ಮೇಲೆ ಹೂವು ತಪ್ಪಿದರೂ ಈ ಪದ್ದತಿ ಮಾತ್ರ ತಪ್ಪೊಲ್ಲ. ಮಲ್ಪೆ ಬಂದರಿಗೆ ಕೆಲಸಕ್ಕೆ ಹೋಗುವವರಿಗೆ ದೋಣಿಗಳಿಗೆ ಹೆಚ್ಚು ಮೀನು ಸಿಕ್ಕರೆ ಪಾಯಿದೆ ಬರುತ್ತದೆ. ಮೀನಿಲ್ಲದಿದ್ದರೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗತಿ. ಮಳೆಗಾಲದಲ್ಲಿ ಮೀನುಗಾರಿಕೆಗೆ ರಜಾ ಇರೋದ್ರಿಂದ ಇವರ ಪಾಡು ಹೇಳತೀರ.
ಇವರೆಲ್ಲಾ ಹುಟ್ಟಿದಾರಭ್ಯ ಊರು ಬಿಟ್ಟವರಲ್ಲ. ಇವರಿಗೆ ಊರಲ್ಲಿ ಮನೆಯಿದೆ ಹಿರಿಯರು ತಂದೆ, ತಾಯಿಯರಿದ್ದಾರೆ. ಅಲ್ಲಿ ದುಡಿದು ಬದುಕಲಾಗದಿದ್ದರಿಂದ ವಲಸೆ ಬಂದಿದ್ದಾರೆ. ಇಲ್ಲಿ ದುಡಿದಿದ್ದನ್ನು ಊರಲ್ಲಿರುವವರಿಗೆ ಕಳುಹಿಸುತ್ತಾರೆ.
ವಿಚಿತ್ರ ನಂಬಿಕೆ : ಟೆಂಟ್ನಲ್ಲಿರೋರು ವಿಚಿತ್ರ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಅದಕ್ಕೆ ಕಾರಣ ಇವರು ನಂಬಿಕೊಂಡು ಬಂದ ದೇವರು.
ಅಲ್ಲಾನಿಗೆ ಹರಸಿಕೊಂಡರೆ ಹಸನಪ್ಪ ಅಂತಲೋ, ಹಸನಮ್ಮ ಅಂತಲೋ ಇಟ್ಟು ಕೊಳ್ಳುತ್ತಾರೆ. ಇವರಿಗೆ ಯಲ್ಲಮ್ಮ ಹ್ಯಾಗೆ ದೇವರೋ ಹಾಗೆ ಕೊಪ್ಪಳ ಜಿಲ್ಲೆ ಕುದ್ರೆಮೂತಿ ಅಲ್ಲಾಸಾಬ್ ಕೂಡಾ ದೇವರು. ಕೊಪ್ಪಳದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಲ್ಲಾಸಾಬ್ ಜಾತ್ರೆಗೆ ಇವರು ಹೋಗುತ್ತಾರೆ. ಅಲ್ಲೇ ವಯಸ್ಸಿಗೆ ಬಂದವರನ್ನು ಹಿಂದೂ ಸಂಪ್ರದಾಯದಂತೆ ಮೂರು ದಿನದ ಮದುವೆ ನಡೆಯುತ್ತದೆ. ಸಂಭಂದದಲ್ಲೇ ಸಂಭಂದ ಕೂಡಿಬರುತ್ತದೆ. ಎಲ್ಲಾದರೂ ಪ್ರೀತಿ, ಪ್ರೇಮ ಅಂತಹೋದ್ರೆ ಅಷ್ಟೇ. ಜಾತಿಯಿಂದಲೇ ಅಂಥವರು ಔಟ್! ಇವರಿಗೆ ಹಿತ ಸಂತಾನ ಮಿತ ಸಂತಾನ ಅರ್ಥವಾಗಿಲ್ಲ. ಹಾಗಾಗಿ ಮನೆ ತುಂಬೆಲ್ಲಾ ಮಕ್ಕಳು ಮರಿಗಳು. ಎಲ್ಲರ ಕಟುಂಬವೂ ದೊಡ್ಡದಿದೆ.
ಇವರ ಭವಿಷ್ಯ ಏನು : ನಾವಂತೂ ಹಾಳಾಗಿ ಆಯ್ತು ನಮ್ಮ ಮಕ್ಕಳಾದರೂ ವಿಧ್ಯೆ ಕಲಿಯಲಿ ಎಂಬುದು ಚಂದ್ರಮ್ಮ ಅವರ ಆಸೆ. ಹಾಗಂತ ಇವರಿಗೆ ಅಕ್ಷರ ಜ್ಞಾನಿವಿದೆಯಾ ಅಂದರೆ ಅದೂ ಇಲ್ಲ. ಇರೋ ಒಂದು ಟೆಂಟ್ ಶಾಲೆಯೂ ಎತ್ತಂಗಡಿಯಾಗುತ್ತಿದೆ. ರಾಮಾಪುರದ ಯಲ್ಲಮ್ಮ,
ಕುಷ್ಟಗಿಯ ಚಂದ್ರಮ್ಮ, ಲಕ್ಷ್ಮೀಶ್ವರದ ಯಲ್ಲಮ್ಮ, ಅಗ್ಲಗುಂಡಿಯ ಹಸನಮ್ಮ ಇವರಿಗೆ ಮಕ್ಕಳು ವಿದ್ಯಾವಂತರಾಗಬೇಕು. ಅದಕ್ಕಾಗಿ ಈ ಎಲ್ಲಾ ಕಷ್ಟದೊಟ್ಟಿಗೆ ಬದುಕುತ್ತಿದ್ದೇವೆ. ಕಷ್ಟ ಕೋಟಲೆ ನಮ್ಮ ತಲೆಮಾರಿಗೆ ಮುಗಿಯಲಿ ಅಂತಾರೆ ಮಹಿಳೆಯರು.
ರಾಷ್ಟ್ರೀಯ ಹೆದ್ದಾರಿ 17ರ ವಿಸ್ತರಣೆ ಕೂಡಾ ಇವರ ನಿದ್ದೆಗೆಡಿಸಿದೆ. ಯಾವತ್ತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇವರ ಟೆಂಟ್ ಮನೆಗೆ ಜೆಸಿಬಿ
ನುಗ್ಗಿಸುತ್ತಾರೋ ಗೊತ್ತಿಲ್ಲ. ಒಟ್ಟಾರೆ ಇವರ ಬದುಕು ಅತ್ತ ಧರೆ ಇತ್ತ ಹುಲಿ ಎಂಬ ಹಾಗಾಗಿದೆ. ಸರಕಾರ ಅಲೆಮಾರಿ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ಭವಿಷ್ಯ ರೂಪಿಸಲು ಮನಸ್ಸು ಮಾಡುತ್ತಾ?
ಶ್ರೀಪತಿ ಹೆಗಡೆ ಹಕ್ಲಾಡಿ
ವಿಚಾರ
'ಬೆಲೆ ಏರಿಕೆಯೇ ಬಿಜೆಪಿಯೊಂದೇ ಪರಿಹಾರ' ಎಂದು ಚುನಾವಣೆ ಸಂದರ್ಭದಲ್ಲಿ ಘೋಷಿಸಿಕೊಂಡ ನಮ್ಮ ಬಿಜೆಪಿ ಪಕ್ಷ ಈಗ ಬೆಲೆ ಏರಿಕೆಯೇ ಅದಕ್ಕೆ 'ಬಂದ್',ಪ್ರತಿಭಟನೆಯೇ ಪರಿಹಾರ ಎಂಬುದನ್ನು ಸಾಬೀತು ಪಡಿಸುತ್ತಿದೆ. ಬಂದ್ ಮೂಲಕ ಸಮಸ್ಯೆಗಳನ್ನು ದೂರವಾಗಿಸಬಹುದು ಎಂದು ಸಮರ್ಥಿಸಿಕೊಳ್ಳುವವರ ಸಂಖ್ಯೆ ಕೂಡ ಕಡಿಮೆ ಇಲ್ಲ.ಬಂದ್ ಮಾಡಿದಮಾತ್ರಕ್ಕೆ ಬೆಲೆ ಕಡಿಮೆಯಾಗುವುದೇ? ಇಲ್ಲಿವರೆಗೆ ಎಷ್ಟು ಕಡಿಮೆಯಾಗಿದೆ? ಇದು ಬಂದ್ ಪರ ಇರುವವರು ಯೋಚಿಸಬೇಕಾದ ಪ್ರಶ್ನೆಯಾಗಿದೆ. ಬಂದ್ ನಿಂದ ನಿಜವಾಗಿ ಸಂಕಷ್ಟ ಪಡುವವರು ಸಾಮಾನ್ಯ ಜನರು.ಕಾಂಗ್ರೆಸ್ ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡುತ್ತಾ ದೇಶದ ಜನತೆಯ ಜೀವನದಲ್ಲಿ ಗಾಯ ಮಾಡುತ್ತಿದ್ದರೇ ಬಿಜೆಪಿಯು ಅದಕ್ಕೆ ಬರೆಯನ್ನು ಎಳೆಯುತ್ತಿದೆ.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕೂಡ ಕಡಿಮೆ ಇಲ್ಲ. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಬೇಕು ಎಂದು ರಾಜ್ಯದ ಎಲ್ಲೆಡೆ ಪ್ರತಿಭಟನೆ ಮಾಡಿದವರು ಕಾಂಗ್ರೆಸಿಗರು .ಆದರೆ ದುರಂತವೇಂದರೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿದಾಗ ಕಾಂಗ್ರೆಸ್ಸಿನಲ್ಲಿಯೇ ಒಮ್ಮತವಿರಲಿಲ್ಲ. ಅವರು ಮಾಡಿದ ಪ್ರತಿಭಟನೆಗೆ ಏನಾದರೂ ಅರ್ಥವಿದೆಯೇ?
ಮತ್ತೊಂದು ಶೋಚನಿಯ ಸಂಗತಿಯೇಂದರೇ ರಾಜಕೀಯ ಪಕ್ಷಗಳು ಮಾಡುವ ಪ್ರತಿಭಟನೆಯಲ್ಲಿ ಜನರ ಸಮಸ್ಯೆಗಿಂತ ಪಕ್ಷದ ಪ್ರಚಾರ ಭರದಿಂದ ಸಾಗುತ್ತಿದೆ. ಪಕ್ಷದ ಬಾವುಟಗಳು ಪ್ರತಿಭಟನೆ ನಿರತರ ಕೈಗಳಲ್ಲಿ,ವಾಹನಗಳಲ್ಲಿ ರಾರಾಜಿಸುತ್ತಿದೆ. ಬಂದ್ ,ಪ್ರತಿಭಟನೆಗಳಿಂದ ಸಾರ್ವಜನಿಕ ಸೊತ್ತುಗಳ ಹಾನಿ,ಪ್ರಾಣಹಾನಿಗಳು ಸಂಭವಿಸುತ್ತಿದೆ.ಅಪಾರ ಕಷ್ಟನಷ್ಟಗಳು ಉಂಟಾಗುತ್ತದೆ. ಸಮಸ್ಯೆಗಳಿಗೆ ಬಂದ್ ಒಂದೇ ಪರಿಹಾರವಲ್ಲ.ರೋಡಲ್ಲಿ ಬಂದು ಪ್ರತಿಭಟನೆ ಮಾಡುವ ಮೊದಲು ಸದನದಲ್ಲಿ ಅನಾಗರಿಕಂತೆ ವರ್ತಿಸುವ ಬದಲು ಸದನದಲ್ಲಿ ಆರೋಗ್ಯಕರ ಚರ್ಚೆಯಾಗಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.ಇದರಿಂದ ದೇಶಕ್ಕಾಗುವ ಕೋಟಿಗಟ್ಟಲೆ ನಷ್ಟವನ್ನು ತಡೆಯಬಹುದು.
ಯಶೋಧರ.ವಿ.ಬಂಗೇರ,
ದ್ವಿತೀಯ ಪತ್ರಿಕೋದ್ಯಮ ,
ಆಳ್ವಾಸ್ ಕಾಲೇಜು , ಮೂಡಬಿದಿರೆ.
ಕ್ಲಿಕ್...
ಗೆಳೆಯ ಅವಿನಾಶ್ ಪಿ.ಎಸ್ ಈ ಕನಸಿಗಾಗಿ ಕೆಲವೊಂದು ಅತ್ಯಂತ ಸುಂದರ ಛಾಯಾಚಿತ್ರಗಳನ್ನು ಕಳುಹಿಸಿದ್ದಾರೆ. ನೀವೂ ಇದರ ಸವಿ ಸವಿಯಿರಿ...





Video
