ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಕುಂಜಾರುಗಿರಿಯ ಆಕರ್ಷಣೆ ಯಾರನ್ನಾದರೂ ಕ್ಷಣ ಹೊತ್ತು ಅದರತ್ತ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಕೆಳಗಿನಿಂದ ಮೇಲೆಕ್ಕೆ ಕತ್ತೆತ್ತಿ ನೋಡಿದರೆ ಗಗನ ಚುಂಬಿ ಬೆಟ್ಟ; ಮೇಲಿಂದ ಕೆಳಕ್ಕೆ ಗಮನಿಸಿದರೆ ಇಳಿಜಾರಿನ ಜಾರು ಪ್ರಪಾತ. ಸುತ್ತೆಲ್ಲ ಹಸುರು ವನರಾಶಿ. ಎತ್ತರಕ್ಕೆ ಆಗಸದ ನೀಲಿ ಪರದೆ. ದೃಶ್ಯ ಕಾವ್ಯವನ್ನು ಕಟ್ಟುವವರಿಗೆ ಇಂದೊಂದು ಗೋಲ್ಡನ್ ಅಪಾರ್ಚುನಿಟಿ. ಅಲ್ಲೇ ಕುಳಿತು ಸುತ್ತಲ ದೃಶ್ಯಗಳನ್ನು ನೋಡುತ್ತಿದ್ದರೆ ಹಸಿವು, ನಿದ್ದೆ ಮರೆತು ಹೋಗುವಷ್ಟು ಬೆರಗು ಹುಟ್ಟಿಸುತ್ತದೆ ಅಲ್ಲಿಯ ರಮಣೀಯ ದೃಶ್ಯಗಳು.

ಅಲ್ಲಿಯೆ ಕೆಳಗಿಳಿದು ಅರ್ಧ ಮೈಲುಗಳಾಚೆ ಸುತ್ತಾಡಿದರೆ ಇನ್ನಷ್ಟು ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಇಲ್ಲಿ ಬೆರಗು ಹುಟ್ಟಿಸುವ ಪುಷ್ಕರಿಣಿಗಳಿವೆ. ಪುಷ್ಕರಿಣಿಗಳಲ್ಲೇನು ಬೆರಗಿದೆ? ನೀರಿರುವವರೆಗು ಚೆನ್ನಾಗಿ ಕಾಣುತ್ತವೆ. ಹಾಗೆ ನಾವು ಅಂದುಕೊಳ್ಳಬಹುದು. ಆದರೆ ಇಲ್ಲಿಯ ಸುತ್ತ ಮುತ್ತಲ ಐದು ಪುಷ್ಕರಿಣಿಗಳಿರುವುದು ಬಂಡೆಯ ಮೇಲೆ. ನೆಲದ ಮೇಲಿರುವ ಪುಷ್ಕರಿಣಿಗಳಲ್ಲಿ ನೀರು ಬತ್ತಿ ಹೋಗುವಾಗ ಬಂಡೆಯ ಮೇಲೆ ಅದು ಹೇಗೆ ಅಷ್ಟೊಂದು ಜಲಸಂಪನ್ಮೂಲ ಕ್ರೂಢಿಕರಿಸಿರಲು ಸಾಧ್ಯ. ಅದೇ ಬೆರಗಿನ ವಿಷಯ. ಬಂಡೆಯ ಮೇಲಿನ ಅವುಗಳು ಸದಾ ನೀರಿನ ಸೆಲೆಗಳು. ಇಷ್ಟಕ್ಕೂ ಅವುಗಳ ಆಳ ಯಾರಿಗೂ ತಿಳಿದಿಲ್ಲ. ಅಷ್ಟು ಹಸಿರು ನೀಲಿಯ ನೀರ ರಾಶಿ ಅಲ್ಲಿದೆ.

ದೃಶ್ಯಗಳನ್ನು ಕಣ್ಣಿಗೆ ಕಟ್ಟಿಕೊಳ್ಳುವುದು, ಉದ್ಗಾರ ತೆಗೆದು ಬೆರಗಾಗುವುದು ಸುಲಭ. ಆದರೆ ಅವುಗಳನ್ನು ದೃಶ್ಯ ಮಾಧ್ಯಮಗಳಲ್ಲಿ ಹಿಡಿದಿಡುವುದು ಸುಲಭವೆ? ಅದೂ ಸಿನಿಮಾ ರಂಗದಲ್ಲಿ ಒಂದುಕಾಲಕ್ಕೆ ಕಥೆಯೇ ಜೀವಾಳವಾಗಿತ್ತು. ಕ್ರಮೇಣ ನಟ, ನಟಿಯರು ಆ ಜೀವಾಳದ ಸ್ಥಾನವನ್ನು ಆಕ್ರಮಿಸಿಕೊಂಡರೆ ಮುಂದೆ ನಿರ್ದೇಶನ, ಸಂಗೀತ ಮತ್ತು ಛಾಯಾಗ್ರಹಣ ಕೂಡ ಪ್ರಾಮುಖ್ಯತೆಯನ್ನು ಪಡೆಯಿತು. ಚಿತ್ರೀಕರಣದಲ್ಲಿ ಛಾಯಾಗ್ರಹಣವನ್ನು ಸಮರ್ಪಕವಾಗಿ ಬಳಸಿಕೊಂಡವರು ಬಿ.ಸಿ. ಗೌರಿಶಂಕರ್ ಅವರು. ಅವರು ಛಾಯಾಗ್ರಹಣ ಮಾಡಿರುವ ಪ್ರತೀಯೊಂದು ಚಿತ್ರಗಳಲ್ಲಿಯೂ ಪ್ರಕೃತಿಯ ಎಕ್ಸ್ಪೋಸಿಂಗ್ ಅದ್ಭುತ ಅನ್ನುವಷ್ಟರ ಮಟ್ಟಿಗೆ ಚಿತ್ರಿತವಾಗಿದೆ. ಅದರಲ್ಲೂ `ಏಳು ಸುತ್ತಿನ ಕೋಟೆ'ಯ ಮತ್ತು ಅವರು ಚಿತ್ರೀಕರಿಸಿಕೊಂಡಿರುವ ಕುದುರೆಮುಖದ ದೃಶ್ಯಗಳೆಲ್ಲಾ ಪ್ರಕೃತಿ ಪ್ರಿಯರನ್ನು ಸೆಳೆಯುವಲ್ಲಿ ಎರಡು ಮಾತಿಲ್ಲ.

ಆ ಪ್ರಕೃತಿಯ ದೃಶ್ಯಗಳು ಕಥೆಗೆ ಪೂರಕವಾಗಿದ್ದರೆ ಸಿನಿಮಾ ಇನ್ನಷ್ಟು ಅದ್ಭುತವಾಗಿ ಮೂಡಿಬರಬಲ್ಲದು. ಹಾಗೆ ನಮ್ಮೂರಿನ ದೃಶ್ಯಗಳನ್ನು ಚಿತ್ರೀಕರಿಸಲು `ಮಾಯಾಬಜಾರ್' ಸಿನಿಮಾ ತಂಡ ಬಂದಿತ್ತು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಅಕ್ಕತಂಗಿಯರ ಕಥೆಯಿರುವ ಈ ಚಿತ್ರದ ಹಾಗೇ ಅದೆಷ್ಟೋ ಸಿನಿಮಾಗಳು ಬಂದಿದ್ದರೂ ಇಲ್ಲಿರುವ ನಾವಿನ್ಯತೆ ಮೋಡರ್ನ್ ಟ್ರೆಂಡ್! ಕಾರು, ಬಂಗಲೆ, ಕಾಡು, ಪಿಸ್ತೂಲ್, ರಿವಾಲ್ವರ್, ಹಾವು, ಹಣ್ಣು ಹೀಗೆ...ಇಲ್ಲಿ ಸಣ್ಣ ಅಸೂಯೆ ಅಕ್ಕ ರೂಪಾಳಿಗೆ ತಂಗಿ ದೀಪಾಳ ಮೇಲೆ. ಇದೊಂದು ಮಾನಸಿಕ ಕಾಯಿಲೆಯಂತೆ ಒಳಗೊಳಗೆ ಕುದಿಯುತ್ತಾ ತಂಗಿಯನ್ನು ಅಸೂಯೆಯ ಮುಖವಾಡದೊಳಗೆ ಮುಸುಕೆಳೆದು ದ್ವೇಷಿಸಿತ್ತಲೇ ಇರುತ್ತದೆ. ಆ ದ್ವೇಷ ಎಷ್ಟಿರುತ್ತದೆಯೆಂದರೆ ಅವಳನ್ನು ಮುಗಿಸುವವರೆಗೆ. ಇದೇ ಮುಂದೆ ಅವಳನ್ನು ಅಂತ್ಯಗೊಳಿಸುವವರೆಗೆ ಸಾಗುತ್ತದೆಯಾದರೂ ಕಥೆ ದುತ್ತನೆ ಆಧುನಿಕ ಶಸ್ತ್ರಗಳ ಪ್ರವೇಶ ಪಡೆದು ಕೇವಲ ಮನೋರಂಜನೆಯಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ.

`ನಮ್ಮೂರ ಮಂದಾರ ಹೂವೆ' ಮತ್ತು `ಓಂ' ಚಿತ್ರದಲ್ಲಿ ಅಭಿನಯಿಸಿದ ಕನ್ನಡದ ಕೊಡಗಿನ ಬೆಡಗಿ ಪ್ರೇಮ ದ್ವಿಪಾತ್ರದಲ್ಲಿ ಮಿಂಚಿದ ಬೆಳ್ಳಿ ತೆರೆಯ `ಮಾಯಾಬಜಾರ್' ಸುಂದರ ದೃಶ್ಯಗಳನ್ನು ಸೆರೆಹಿಡಿದ ಸಿನಿಮಾ. `ಅವಳೇ ನನ್ನ ಹೆಂಡ್ತಿ' ಖ್ಯಾತಿಯ ವಿ. ಉಮಾಕಾಂತ್ ಅವರು ಈ ಚಿತ್ರದ ನಿರ್ದೇಶಕರು. ಕಾದಂಬರಿಯಾಧಾರಿತ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಲೇ ಅಲ್ಲೊಂದು ಇಲ್ಲೊಂದು ಚಿತ್ರಗಳು ಬಂದು ಹೋಗುವುದು ಸಾಹಿತ್ಯ ಪ್ರೇಮಿಗಳಿಗೆ ಸಮಾಧಾನ. ಮಾಯಾಬಜಾರ್ ಕನ್ನಡ ಕಾದಂಬರಿಯನ್ನಾಧರಿಸಿ ಮಾಡದಿದ್ದರೂ ಇಂಗ್ಲಿಷ್ನ ಥ್ರಿಲ್ಲರ್ ಬರಹಗಾರ ಸಿಡ್ನಿ ಶೆಲ್ಡನ್ ಅವರ ಕಾದಂಬರಿಯೊಂದನ್ನು ಆಧರಿಸಿ ತಯಾರಿಸಿದ ಚಿತ್ರ. ಶೆಲ್ಡನ್ ಅವರ ಕಾದಂಬರಿಗಳೇ ಹಾಗೆ. ಧುತ್ತನೆ ಓದುಗನನ್ನು ತುತ್ತ ತುದಿಗೇರಿಸಿ ದೊಪ್ಪನೆ ಪ್ರಪಾತವನ್ನು ಎದುರು ಬಾಯ್ದೆರೆದು ನಿಲ್ಲಿಸಿದಂತೆ. ಎಲ್ಲಿ ಕೆಳಗೆ ಬೀಳುವೆವೇನೋ ಅನ್ನುವಂತೆ ಥ್ರಿಲ್ಲ್ ಆಗಿ ಉಳಿದು ಬಿಡುತ್ತೇವೆ. ಅಂತಹ ಕಥೆಯ ಎಳೆಯೊಂದು ಇಲ್ಲಿಯ ಪರಿಸರಕ್ಕನುಗುಣವಾಗಿ `ಮಾಯಾಬಜಾರ್' ನಲ್ಲಿ ಮಿಳಿತವಾಗಿದೆ.

ಈ ಚಿತ್ರದ ಮಳೆ ದೃಶ್ಯದ ಕಾವ್ಯವೊಂದು ಹಿಂದಿ ಚಿತ್ರಗಳ ಹರಿಕಾರ ರಾಜ್ಕಪೂರ್ ಅವರ ಮಳೆಕಾವ್ಯದ ಚಿತ್ರೀಕರಣದ `ಪ್ಯಾರ್ ಹುವಾ ಇಕ್ ರಾರ್ ಹುವಾ' ಹಾಡನ್ನು ನೆನಪಿಸುವಂತಿದೆ. ಈ `ಮಯಾಬಜಾರ್'ನಲ್ಲಿ ಪ್ರೇಮ ಮತ್ತು ಕುಮಾರ್ ಗೋವಿಂದ್ ಅಭಿನಯದಲ್ಲಿ ಮಳೆಕಾವ್ಯ ಮೂಡಿ ಬಂದಿರುವುದು ಗಮನಾರ್ಹ. ಆ ಹಾಡು ಕೂಡ ತುಂಬಾ ಇಂಪಾಗಿರುವುದಲ್ಲದೆ ಅದರ ರಚನೆ ಕೂಡ ಶೋತೃಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಆ ಕವನದ ಸಾಲುಗಳು ಹೀಗಿವೆ:

ಪ್ರೇಮವೆ ಬಾಳಿನ ಬೆಳಕು, ಬಾ ಪಲುಕು
ಈ ಉಸಿರು ಕೈಗೆ ಸಿಗಲಿ.
ಜಿನುಗುವ ಕವನದ ಮಳೆಯ, ಈ ಸಮಯ
ಈ ಪ್ರೇಮ ಚಿಗುರೊಡೆಯಲಿ.
ಎದೆಯಲಿ ಸಾವಿರ ನಾದದುಯ್ಯಾಲೆಯಲಿ

ಈ ಹಾಡಿನ ಮುಂದಿನ ಸಾಲುಗಳು ಚಿತ್ರೀಕರಣವಾಗಿರುವುದು ಕುಂಜಾರುಗಿರಿಯ ಇಳಿಜಾರು ಬಂಡೆಯ ಬಳಿಯಲ್ಲಿ ನೀಲ ಬಣ್ಣದ ಆಕಾಶದುಯ್ಯಾಲೆಯಲ್ಲಿ ಪ್ರೇಮಿಗಳಿಬ್ಬರ ಆಶಾಕಿರಣದ ಗೀತೆಯ ಸಾಲುಗಳು...

`ಒಂದು ಹಿಡಿ ಪ್ರೀತಿ,
ಒಂದು ಹೂ ನಗೆಯ ಬಯಸಿ
ನಿನ್ನಲ್ಲಿ ಕೈ ಚಾಚಿದೆ...'

ಅಪೂರ್ವವಾಗಿ ಮೂಡಿ ಬಂದಿದೆ. ಈ ದೃಶ್ಯಗಳಲ್ಲದೆ ಸಿನಿಮಾದಲ್ಲಿ ದೀಪಾಳನ್ನು ಕಿಡ್ನಾಪ್ ಮಾಡಿಕೊಂಡು ಬಂದ ಬಳಿಕ ಅವಳ ಅಕ್ಕ ರೂಪಾಳ ಇನ್ನೊಂದು ಮುಖದ ಗೋಚರವಾಗಿ ತಾವು ಕಿಡ್ನಾಪ್ ಮಾಡಿಕೊಂಡು ಬಂದ ಹುಡುಗಿಯ ಮೇಲೆ ಕನಿಕರ ಮೂಡಿ ಅವಳಿಗೆ ರಕ್ಷಣೆ ಕೊಡಲು ನಿರ್ಧರಿಸುವ ಚಿತ್ರದ ಭಾಗ ಕೂಡ ಕುಂಜಾರುಗಿರಿಯ ತಪ್ಪಲಿನಲ್ಲಿಯೇ ಚಿತ್ರೀಕರಣವಾಗಿತ್ತು.

ಈ ಚಿತ್ರದ ನಿರ್ದೇಶನ, ನಿರ್ಮಾಣ, ಸಂಗೀತ ವಿ. ಉಮಾಕಾಂತ್ ಅವರದ್ದು. ಮುಖ್ಯ ಭೂಮಿಕೆಯಲ್ಲಿ ಕುಮಾರ್ ಗೋವಿಂದ್, ದಿವಾಕರ್, ಪ್ರೇಮ (ದ್ವಿಪಾತ್ರ), ಶೋಭರಾಜ್, ಆರ್. ಎನ್. ಸುದರ್ಶನ್ ಮೊದಲಾದವರಿದ್ದಾರೆ. ಮಳೆಕಾವ್ಯ ನೋಡುವಾಗಲೆಲ್ಲಾ ಮಾಯಾಬಜಾರ್ ನೆನಪಾಗದಿರದು.

0 comments:

Post a Comment