ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:54 AM

ಅರೆ ವಿಧವೆಯರು...!

Posted by ekanasu

ಸಿನೆಮಾ
ಆತ ಬದುಕಿದ್ದರೆ ಆತನ ಮುಖವನ್ನೊಮ್ಮೆ ತೋರಿಸಿ...ಸತ್ತಿದ್ದರೆ ಆತನ ಸಮಾಧಿಯೆಲ್ಲಿದೆಯೆಂದಾದರೂ ಹೇಳಿ. ಕೊನೇಪಕ್ಷ ಆತನ ಸಮಾಧಿಯ ಮೇಲೆ ಮಲಗಿ ಎರಡು ಹನಿ ಕಣ್ಣೀರನ್ನಾದರೂ ಹಾಕುತ್ತೇನೆ. ಕತ್ತಲು ಕೋಣೆಯೊಂದರಲ್ಲಿ ಕುಳಿತು ಕ್ಯಾಮರಾಕ್ಕೆ ಮುಖಮಾಡಿ ಆಕೆ ತನ್ನ ಕಣ್ಣೀರ ಕಥೆಯನ್ನು ಹೇಳುತ್ತಿದ್ದರೆ ವೀಕ್ಷಕನ ಕಣ್ಣಾಲಿಗಳು ತುಂಬಿ ಬರುತ್ತವೆ. ಅಸ್ಪಷ್ಟವಾಗಿ ಗೋಚರಿಸುತ್ತಿರುವ ಆಕೆಯ ಹತಾಶ ಮುಖವನ್ನೊಮ್ಮೆ ಸರಿಯಾಗಿ ನೋಡಬೇಕೆಂಬ ಹಂಬಲ ಉಂಟಾಗುತ್ತದೆ. ಹೌದು! ಇದು ಭೂಲೋಕದ ಸ್ವರ್ಗವೆನಿಸಿಕೊಂಡಿರುವ ಕಾಶ್ಮೀರದ ಸುಂದರ ಕಣಿವೆಯಲ್ಲಿ ಜೀವಿಸುತ್ತಿರುವ ಸಾವಿರಾರು ಅರೆ ವಿಧವೆಯರ ನರಕಸದೃಶ್ಯ ಕಥೆ. ಸದಾ ಕೋಮುಗಲಭೆ ಹಾಗೂ ಭಯೋತಾದ್ಪಕ ಕೃತ್ಯಗಳಿಂದ ತತ್ತರಿಸುತ್ತಿರುವ ಕಾಶ್ಮೀರದಲ್ಲಿ ಇಂದು ಸಾಮಾನ್ಯ ಜನತೆ ನೆಮ್ಮದಿಯ ಬದುಕು ಕಾಣಲು ಹವಣಿಸುತ್ತಿದೆ.'ರಕ್ಷಕನೇ ಭಕ್ಷಕನಾದ' ಎಂಬ ನಾನ್ನುಡಿಯಂತೇ ಇಲ್ಲಿನ ಪೊಲೀಸ್ ಹಾಗೂ ಸಶಸ್ತ್ರ ಪಡೆಗಳೇ ಜನಸಾಮಾನ್ಯರ ನೆಮ್ಮದಿಯನ್ನು ಕಸಿಯುತ್ತಿರುವುದು ವಿಷಾದನೀಯ. ತಮಗೆ ನೀಡಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಶಸ್ತ್ರ ಪಡೆಗಳು ಸಂಶಯದ ನೆಲೆಯಲ್ಲಿ ಅಮಾಯಕ ವ್ಯಕ್ತಿಗಳನ್ನು ಎಲ್ಲೆಂದರಲ್ಲಿ ಬಂಧಿಸುತ್ತಿದ್ದಾರೆ. ಬಂಧಿತ ವ್ಯಕ್ತಿ ವಿಚಾರಣೆಯ ಮೇರೆಗೆ ವರುಷಗಳ ಕಾಲ ಸೆರೆಮನೆಯಲ್ಲಿರಬೇಕಾಗುತ್ತದೆ. ಆತನ ಬಂಧನದ ವಿಚಾರವನ್ನು ಕುಟುಂಬದವರಿಗೆ ತಿಳಿಸುವ ಕನಿಷ್ಟ ಸೌಜನ್ಯವೂ ಈ ಪಡೆಗಳಿಗಿಲ್ಲ. ವಿಚಾರಣೆಯ ಅವಧಿಯಲ್ಲಿ ವ್ಯಕ್ತಿ ಮೃತಪಟ್ಟರೆ ಆತನ ಸಾವಿನ ಬಗ್ಗೆಯೂ ಕುಟುಂಬದವರಿಗೆ ಮಾಹಿತಿಯಿರುವುದಿಲ್ಲ. ಇಂತಹ ಮರೆಯಾದ ಪುರುಷರ ಮಡದಿಯರನ್ನು ಅರೆವಿಧವೆಯರೆಂದು ಘೋಷಿಸಲಾಗುತ್ತದೆ. ಮರೆಯಾದ ವ್ಯಕ್ತಿಯ ಮಡದಿ ಪತಿ ಬದುಕಿರುವನೇ?...ಇಲ್ಲವೇ..? ಎಂಬ ಗೊಂದಲದಲ್ಲಿ ಅರೆ ವಿಧವೆಯಾಗಿ ಬದುಕಬೇಕಾಗುತ್ತದೆ. ತನ್ನ ಉಳಿದ ಜೀವನನ್ನು ಆಕೆ ಆತನ ಹುಡುಕಾಟದಲ್ಲಿ ಕಳೆಯಬೇಕಾಗುತ್ತದೆ. ಈ ಹುಡುಕಾಟ ಆಕೆಯ ಉಸಿರು ನಿಲ್ಲುವವವರೆಗೂ ನಿರಂತರವಾಗಿ ಸಾಗುತ್ತದೆ. ಇದೇ ಲೆಬುಲ್ ನಿಸಾ ನಿರ್ದೇಶನದ ' ಕಾಶ್ಮೀರ್ಸ್ ಹಾಫ್ ವಿಡೋಸ್" ಸಾಕ್ಷ್ಯ ಚಿತ್ರದ ಕಥಾವಸ್ತು.

ಲೆಬುಲ್ ನಿಸಾ ವೃತ್ತಿಯಲ್ಲಿ ಲಾಯರ್. ಮಾನವ ಹಕ್ಕುಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವವರು. ಅವರು ಕಾಶ್ಮೀರೀ ಸಮಾಜ ಹಾಗೂ ಸರಕಾರ ಅಲ್ಲಿರುವ ಅರೆವಿಧವೆಯರ ಕುರಿತಾಗಿ ತಾಳಿರುವ ನಿರ್ಲಕ್ಷ್ಯ ಭಾವದಿಂದ ಬೇಸತ್ತು ಆ ಸಮಸ್ಯೆಯನ್ನು ಇಡೀ ಪ್ರಪಂಚಕ್ಕೆ ತಿಳಿಸಬೇಕೆಂಬ ಹಂಬಲದಿಂದ 2010 ರಲ್ಲಿ ' ಕಾಶ್ಮೀರ್ಸ್ ಹಾಫ್ ವಿಡೋಸ್" ಎಂಬ ಸಾಕ್ಷ್ಯ ಚಿತ್ರವನ್ನು ನಿರ್ದೇಶಿದರು. ವಕೀಲೀ ವೃತ್ತಿಯಲ್ಲಿರುವ ಇವರು ಫಿಲ್ಮ ಮೇಕಿಂಗ್ನಲ್ಲಿ ವಿಶೇಷ ಪರಿಣತಿಯನ್ನೇನು ಹೊಂದಿಲ್ಲ. ಇವರು ನಿರ್ದೇಶಿಸಿರುವ ಆರು ನಿಮಿಷಗಳ ಸಾಕ್ಷ್ಯಚಿತ್ರ ಹಲವಾರು ತಾಂತ್ರಿಕ ದೋಷಗಳನ್ನೊಳಗೊಂಡಿದ್ದರೂ ಅದರ ಕಥಾವಸ್ತು ಮಾತ್ರಾ ಪರಿಣಾಮಕಾರಿಯಾಗಿದೆ. ಹಲವಾರು ಅರೆವಿಧವೆಯರ ಕಥೆಯನ್ನು ಜತೆಯಾಗಿ ಪೋಣಿಸಿ ನಮ್ಮ ಮುಂದಿಡುವ ಸಾಕ್ಷ್ಯಚಿತ್ರ ಅಪರಿಚಿತ ಪ್ರಪಂಚವೊಂದಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಮಾತ್ರವಲ್ಲ...ಕಲ್ಪನೆಗೂ ನಿಲುಕದ ವಾಸ್ತವವನ್ನು ಪರಿಚಯಿಸುತ್ತದೆ.

ಸಶಸ್ತ್ರ ಪಡೆಗಳು ನಡೆಸಿದ ಸ್ಪೋಟವೊಂದರಿಂದ ಪ್ರಾರಂಭವಾಗುವ ಚಿತ್ರಕಥೆ ಬಳಿಕ ಶಮಿಮಾ ಎಂಬ ಪಾತ್ರದೆಡೆ ಹೊರಳುತ್ತದೆ. ಶಮಿಮಾ ಎರಡು ಮಕ್ಕಳ ತಾಯಿ. ಆಕೆಯ ಪತಿಯನ್ನು ಕಾಶ್ಮೀರದ ಸಶಸ್ತ್ರ ಪಡೆ ಜನವರಿ22, 2000ರಂದು ಬಲವಂತವಾಗಿ ಮನೆಯಿಂದ ಕರೆದೊಯ್ದಿತ್ತು. ಬಳಿಕ ಶಮೀಮಾ ಆತನ ಕುರಿತು ಅಧಿಕಾರಿಗಳಲ್ಲಿ ವಿಚಾರಿಸಿದಾಗೆಲ್ಲಾ "ಗೊತ್ತಿಲ್ಲ" ವೆಂಬ ಉತ್ತರದ ವಿನಾ ಬೇರೇನು ಸಿಕ್ಕಿಲ್ಲ. ಕುಟುಂಬಕ್ಕಿದ್ದ ಏಕೈಕ ಆಧಾರ ಆಕೆಯ ಪತಿ. ಆತ ಕಾಣೆಯಾದ ಬಳಿಕ ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆಗಾಗಿ ಆಕೆ ಕೂಲಿ ಕೆಲಸವನ್ನು ಅವಲಂಬಿಸಿದ್ದಾಳೆ. ಆತ ಸತ್ತಿರಬಹುದೇ...? ಎಂಬ ಪ್ರಶ್ನೆ ಆಕೆಯನ್ನು ಆಗಾಗ್ಗೆ ಕಾಡುತ್ತದೆ. ಆದರೂ ಬದುಕಿರಬಹುದೆಂಬ ಆಶಾವಾದದಲ್ಲಿ ಆಕೆ ದಿನ ದೂಡುತ್ತಿದ್ದಾಳೆ.

ಪತಿ ನಾಪತ್ತೆಯಾದ ಪ್ರಕರಣದಲ್ಲಿ ಆತನ ಮೃತ ದೇಹ ದೊರಕದಿದ್ದರೆ ಮುಂದಿನ ಏಳು ವರುಷಗಳವರೆಗೆ ಪತ್ನಿ ಆತನ ಆಸ್ತಿಯಲ್ಲಿ ಹಕ್ಕು ಚಲಾಯಿಸುವಂತಿಲ್ಲ. ಏಳು ವರುಷಗಳೊಳಗೆ ಆತ ಮರಳಿ ಬಾರದಿದ್ದರೆ ಆತನನ್ನು ಮೃತನೆಂದು ಘೋಷಿಸಿ ಆತನ ಆಸ್ತಿಯನ್ನು ಪತ್ನಿಗೆ ನೀಡಲಾಗುತ್ತದೆ. ಇದು ಕಾಶ್ಮೀರದ ಸರಕಾರ ಅರೆವಿಧವೆಯರಿಗಾಗಿ ಮಾಡಿರುವ ಹೊಸ ಕಾನೂನು. ಸಾವಿರಾರು ಅರೆವಿಧವೆಯರು ಈ ಕಾನೂನಿಂದ ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತಿಯನ್ನು ಕಳೆದುಕೊಂಡು ದುಖಃತಪ್ತ ಜೀವನ ಸಾಗಿಸುತ್ತಿರುವ ಅರೆವಿಧವೆಯರ ಬಗ್ಗೆ ಸರಕಾರ ತಾಳಿರುವ ಈ ಕರುಡು ನೀತಿಯನ್ನು ಚಿತ್ರದೆಲ್ಲೆಡೆ ಟೀಕಿಸಲಾಗಿದೆ.
ನಾಪತ್ತೆಯಾದ ತಮ್ಮ ಪತಿಯ ಭಾವಚಿತ್ರದೊಂದಿಗೆ ಕಾಶ್ಮೀರದ ರಸ್ತೆಗಳಲ್ಲಿ ಮಳೆ ಬಿಸಿಲೆನ್ನದೆ ಹುಡುಕಾಟ ನಡೆಸುವ ಅರೆವಿಧವೆಯರು ಚಿತ್ರದೆಲ್ಲೆಡೆ ಸಾಮಾನ್ಯವಾಗಿ ಕಾಣ ಸಿಗುತ್ತಾರೆ. ಪ್ರತೀ ಮುಂಜಾನೆ ಆತ ಇಂದು ಸಿಗುವನೆಂಬ ಆಶಾವಾದದೊಂದಿಗೆ ಬೀದಿಗಿಳಿಯುವ ಅವರು ಸಂಜೆಯಾಗುತ್ತಲೇ ಹತಾಶರಾಗಿ ಮನೆಗೆ ಮರಳುತ್ತಾರೆ. ಆದರೂ ಮರುಮುಂಜಾನೆ ಸಿಗುವನೆಂಬ ಆಶಾಭಾವ ಮತ್ತೆ ಅವರಲ್ಲಿ ಚಿಗುರೊಡೆದಿರುತ್ತದೆ. ಅರೆವಿಧವೆಯರೆಲ್ಲಾ ಸೇರಿಕೊಂಡು ಇಂದು ಕಾಶ್ಮೀರದಲ್ಲಿ ತಮ್ಮದೇ ದ ಸಂಘಟನೆಯೊಂದನ್ನು ಸ್ಥಾಪಿಸಿದ್ದಾರೆ. ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಮ್ಮ ಹಕ್ಕುಗಳಿಗಾಗಿ ಅವರು ಹೋರಾಡುತ್ತಿದ್ದಾರೆ. ಕಾಶ್ಮೀರ್ಸ್ ಹಾಫ್ ವಿಡೋಸ್ ಜಗತ್ತಿಗೆ ಅವರ ಈ ಹೋರಾಟದ ಬದುಕಿನ ಕಿರು ಪರಿಚಯವನ್ನು ಮಾಡಿಕೊಡುತ್ತಿದೆ.

ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಕ್ಯಾಮರಾ ವರ್ಕ್ ಅಷ್ಟೇನೂ ಉತ್ತಮವಾಗಿಲ್ಲ. ಆದರೂ ಅದು ಪರಿಚಯಿಸಿಕೊಡುವ ವಾಸ್ತವದ ಗಂಭೀರತೆ ಚಿತ್ರದ ಉಳಿದೆಲ್ಲಾ ಲೊಪದೋಷಗಳನ್ನು ಮರೆಮಾಚುತ್ತದೆ. ಈಗಾಗಲೇ ಹಲವಾರು ಸಿನಿಮಾ ಅಂರ್ತಜಾಲ ತಾಣಗಳಲ್ಲಿ ತೆರೆಕಂಡಿರುವ ಕಾಶ್ಮೀರ್ಸ್ ಹಾಫ್ ವಿಡೋಸ್ ಹೆಚ್ಚೇನು ಪ್ರಚಾರ ಗಿಟ್ಟಿಸದ ಸಾಕ್ಷ್ಯಚಿತ್ರ. ಮಾನವ ಹಕ್ಕುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚಿತ್ರ ಮಾಡಿದೆ ವಿನಃ ಮಾರಾಟಕ್ಕಲ್ಲ. ಜನ ಚಿತ್ರವನ್ನು ನೋಡಿ ಸಮಸ್ಯೆಯನ್ನು ಅರ್ಧೈಸಿಕೊಂಡರೆ ನಾವು ಪಟ್ಟ ಶ್ರಮಕ್ಕೊಂದು ಬೆಲೆ ಸಿಕ್ಕಹಾಗಾಗುತ್ತದೆ ಎನ್ನುತ್ತಾರೆ ಲೆಬುಲ್ ನಿಸಾ

ಅಕ್ಷತಾ ಭಟ್ .ಸಿ.ಎಚ್.

6 comments:

Anonymous said...

ಅಕ್ಕಾ,
ಕಾಶ್ಮೀರದ ವಿಧವೆಯರ ಪರಿಸ್ಥಿಥಿ ಸ್ವಲ್ಪ ಮಟ್ಟಿಗೆ ಇಲ್ಲಿ ಚಿತ್ರಿಸಿದ೦ತೆ ಇರುವುದು ನಿಜವಿರಬಹುದೇನೋ.. ಆದರೆ ಇದೇ ವಿಧವೆಯರ ಗ೦ಡ೦ದಿರು ಒ೦ದು ಕಾಲದಲ್ಲಿ ಅದೆಸ್ಟೋ ಕಾಶ್ಮೀರಿ ಪ೦ಡಿತ ಸಮುದಾಯದ ಹೆ೦ಗಸರನ್ನು ವಿಧವೆಯರನ್ನಾಗಿಸಿದವರೆ.. ಯಕೆ೦ದರೆ ಈಗ ಕಶ್ಮೀರ ಕಣಿವೆಯಲ್ಲಿ ಪ೦ಡಿತರೆ ಇಲ್ಲ.. ಅವರೆಲ್ಲ ಉತ್ತರ ಭಾರತದಲ್ಲಿ, ಅದರಲ್ಲೂ ದಿಲ್ಲಿಯಲ್ಲಿ ನಿರ್ವಸಿತರಾಗಿ ದಿನ ದೂಡುತ್ತಿದ್ದಾರೆ.. ಸಕಲ ಮಾಧ್ಯಮದವರಿಗೂ ಸರಕಾರಕ್ಕೂ ಅವರ ಬಗ್ಗೆ ದಿವ್ಯ ನಿರ್ಲಕ್ಶ್ಯವಿದೆ.. ಬಹುಶ ಕಾಶ್ಮೀರದ ವಿಧವೆಯರ ಗೋಳನ್ನು ಚಿತ್ರಿಸುವಾಗ ಅಮಯಕ ನಿರ್ವಸಿತರ ಗೋಳನ್ನೂ ಸೇರಿಸಿದ್ದರೆ ಬಹುಶ ಈ ಇನ್ಥಾ ಚಿತ್ರಗಳು ಹೆಚ್ಚು ನೈಜ ಮತ್ತು ಪರಿಪೂರ್ಣವೆನಿಸುತ್ತಿದ್ದವೆನೋ..

Anonymous said...

"kashmir's half widows" documentary narration itself brings tears into our eyes.....but it is not only the problem of kashmiris, but also of others in different ways.....

Anonymous said...

widows are widows... no classification....suffering has no religion...but the circumstances necessitating the posting of military to kashmir are to be looked into...why present "half widows" have not prevented their husbands while they do harm to others...

ತೇಜಸ್ವಿನಿ ಹೆಗಡೆ said...

ಉತ್ತಮ ಲೇಖನ. ಮಾಹಿತಿಪೂರ್ಣ ಕೂಡ. want to see this documentary.

ಪ್ರತಿಕ್ರಿಯೆಯಲ್ಲಿ ಓರ್ವರು ಹೇಳಿರುವಂತೆ.. ಸಮಸ್ಯೆಗಳು ಸರಪಣಿಯಂತಿವೆ... ಎಲ್ಲಿದೆ ಮೂಲ ಎಂದು ಶೋಧಿಸಿ ಎಲ್ಲವನ್ನೂ ಸೇರಿಸಿದರೆ ಮಾತ್ರ ಅದಕ್ಕೊಂದು ಆಕರ ಸಿಗಬಹುದೇನೋ... ಅಲ್ಲಿಯ ಹಿಂಸೆಗೆ, ಕ್ರೌರ್ಯಕ್ಕೆ, ರಾಜಕೀಯಕ್ಕೆ ಮೂಲ ಕಾರಣ ಸಿಕ್ಕಾಗ ಮಾತ್ರ ಪರಿಹಾರವೂ ಸಾಧ್ಯ. ಆದರೆ ಮೂಲ ಕಾರಣ ಹಲವರ ಬುಡವನ್ನೇ ಅಲುಗಾಡಿಸುವುದರಿಂದ ಉಸಿರೆತ್ತುವವರೇ ಇಲ್ಲ!

Anonymous said...

i agree with tejaswini....grassroot of the problem is to be sought out.... not easy to solve the deep rooted problem ...when we enjoy others' suffering, one day we may succumb to the same...that is the reality of worldly things...let us hope better...

Anonymous said...

ಕಾಶ್ಮೀರದ ರಸ್ತೆಗಳಲ್ಲಿ ಹುಡುಕಾಟ ನಡೆಸುವ ಅರೆವಿಧವೆಯರ ಶ್ರಮಕ್ಕೊಂದು ಬೆಲೆ ಸಿಗಲಿ.....ಜನ ಚಿತ್ರವನ್ನು ನೋಡಿ ಸಮಸ್ಯೆಯನ್ನು ಅರ್ಧೈಸಿಕೊಳಲಿ.....

Post a Comment