ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಲೇಖನ ಮಾಲೆ :9

ದೃಶ್ಯ ಮಾಧ್ಯಮದ ನೆನಪಿನ ಸವಾರಿ...

ಕಡಲ ಮಕ್ಕಳ ಸಾಂತ್ವನದ `ಸಾಗರದೀಪ'

ಕಡಲು ಯಾರಿಗೂ ಕಾಯುವುದಿಲ್ಲ. ಆದರೆ ಕಡಲನ್ನೇ ಕಾಯುತ್ತಾ ಬದುಕುವ ಅದೆಷ್ಟೋ ಕುಟುಂಬಗಳನ್ನು ನಾವು ಕಣ್ಣಾರೆ ಕಾಣುತ್ತೇವೆ. ಕಡಲ ಅಲೆಗಳ ಅಬ್ಬರಕ್ಕೆ ಹೆದರಿದರೆ ಅವರಿಗೆ ಬದುಕಿಲ್ಲ. ಒಂದು ಮುಂಜಾನೆ ದೋಣಿ ಹಿಡಿದು ಮೀನು ಹಿಡಿಯಲು ಹೊರಟರೆಂದರೆ ಕಡಲಿನ ಅಲೆಗಳ ಜೊತೆಗೆ ಹೋರಾಟ ನಡೆಸುತ್ತಾ ಮೀನು ಹಿಡಿದು ಹಿಂತಿರುಗಿ ಬರುವುದು ಸೂರ್ಯ ಸಮುದ್ರಕ್ಕೆ ಬಿದ್ದ ಬಳಿಕವೆ.ಕಡಲಿಗೊಂದು ಗುಣವಿದೆ. ಸೂರ್ಯನ ಶಾಖಕ್ಕೆ ಪಕ್ಕನೆ ಬಿಸಿಯಾಗಿ ತಣಿಯುವುದಕ್ಕೆ ಅರ್ಧದಿನಗಳಷ್ಟು ಕಾಲ ಬೇಕಾಗುತ್ತದೆ. ಅದಕ್ಕಾಗಿಯೆ `ಕರಾವಳಿಯ ಬಿಸಿಲು ಮತ್ತು ಕಾದ ಬಾಣಲೆ ಒಂದೇ' ಅನ್ನುವ ಗಾದೆ ಮಾತಿದೆ. ಹಾಗೆ ನೀರು ಬಿಸಿಯಾದಾಗ ಕಡಲಿನಲ್ಲಿ ದೋಣಿಯ ಪ್ರಯಾಣ ಮತ್ತು ನಡು ನೆತ್ತಿಯ ಮೇಲೆ ಸುಡುವ ಸೂರ್ಯ. ಅದು ನಮ್ಮ ಊಹೆಗೂ ನಿಲುಕದ ಕರಾಳ ಬದುಕು. ಆದರೆ ಕಡಲಿನ ಮಕ್ಕಳಿಗೆ ಅದೆಲ್ಲಾ ಗೌಣ. ಅವರದ್ದೇನಿದ್ದರೂ ವೃತ್ತಿಯನ್ನು ನಿಯತ್ತಾಗಿ ಪಾಲಿಸುವ ಕಡಲಿಗೂ ಬೆದರದ ಧೈರ್ಯವಂತರು.


ದೋಣಿ ತುಂಬಾ ಮೀನು ತಂದು ಅದನ್ನು ದಡಕ್ಕೆ ಒಪ್ಪಿಸಿದ ಮೇಲೆಯೇ ಅವರು ಮುಂದಿನ ಕೆಲಸಕ್ಕೆ ಅಣಿಯಾಗುವುದು.ಒಮ್ಮೆ ಕಾಪು ಬೀಚ್ ನಲ್ಲಿ ಕುಳಿತು ಸುಮ್ಮನೆ ಸಮುದ್ರದ ಅಲೆಗಳ ಆಟವನ್ನು ನೋಡುತ್ತಿದ್ದಂತೆ ದಂಡೆಯಲ್ಲಿ ಹೆಂಗಸರ ಗುಂಪೊಂದು ಕುಳಿತು ಹರಟುತ್ತಿತ್ತು. ಆಮೇಲೆ ಅವರ ಮಾತುಕತೆಯಿಂದ ಅವರೆಲ್ಲಾ ದೋಣಿಯನ್ನು ನಿರೀಕ್ಷಿಸುತ್ತಾ ಕುಳಿತಿರುವವರೆಂದು ತಿಳಿಯಿತು. ದೋಣಿಯಲ್ಲಿ ಕುಳಿತು ಅವರ ಪ್ರಯಾಣ ಎಲ್ಲಿಗಪ್ಪಾ? ಅನ್ನುವ ಆಶ್ಚರ್ಯ ನನಗೆ. ನಾನು ಎದ್ದು ಅವರತ್ತ ನಡೆದೆ. ಕುತೂಹಲದಿಂದ ಕೇಳಿದೆ. `ನೀವು ಎಲ್ಲಿಗೆ ಹೋಗುವವರು?' ಅಂದೆ. ಅವರು ವಿಚಿತ್ರವಾಗಿ ನನ್ನ ನೋಡುತ್ತಾ ನಕ್ಕರು. ನಾನು ಸುಮ್ಮನಾದೆ. ಮತ್ತೆ ಅವರ ಪಕ್ಕದಲ್ಲಿಯೆ ಬುಟ್ಟಿಗಳು ಕಂಡವು. ಮತ್ತೇ ನಾನು ಅವರ ಮುಂದೆಯೇ ಬರುತ್ತಲೇ ಅವರು, `ನಿಮ್ಮದು ಯಾವೂರಾಯಿತು?' ಅಂದರು. `ನಮ್ಮದು ಇಲ್ಲಿಯ ಶಿರ್ವದ ಪಕ್ಕದಲ್ಲಿ ಪಡುಬೆಳ್ಳೆಂತ ಇದೆ, ಅಲ್ಲಿ' ಅಂದೆ. ಅವರಲ್ಲೊಬ್ಬಳು ನನ್ನನ್ನು ಗುರುತಿಸಿದಂತೆ, `ಅಯ್ಯೋ! ನೀವು ಭಟ್ರ ಮಗ ಅಲ್ವಾ?' ಅಂದ್ರೆ ನನಗೆ ಆಶ್ಚರ್ಯವಾಯಿತು. ಅವಳಿಗೆ ನನ್ನ ಪರಿಚಯ ಹೇಗೆ? ಎಂದು ಆಲೋಚಿಸುತ್ತಿರುವಾಗ ತಟ್ಟನೆ ನೆನಪಾಯಿತು.

ಅವಳು ನಮ್ಮೂರಿಗೆ ಮೀನು ಮಾರಲು ಬರುವ ಹೆಂಗಸು. ಮನೆ ಮನೆಗೆ ಬುಟ್ಟಿಯಲ್ಲಿ ಮೀನು ಹಿಡಿದುಕೊಂಡು ಬರುವವಳು. ನಾವು ಬ್ರಾಹ್ಮಣರೆಂದು ತಿಳಿಯದೆ ನಮ್ಮ ಮನೆಯ ಎದುರು ಬುಟ್ಟಿ ಇಳಿಸಿ, `ಬೇಕಾ?' ಅಂದ್ರೆ ನಮಗೆಲ್ಲಾ ಆಶ್ಚರ್ಯ. ಕೊನೆಗೆ ಪಕ್ಕದ ಮನೆಯ ಪುರುಷರ ಮನೆಯ ಹೆಂಗಸು ಬಂದು, `ಎಂತ ಮಾರಾಯ್ತಿ, ನಿನಗೆ ಅಷ್ಟು ಗೊತ್ತಾಗುವುದಿಲ್ವಾ? ಒಟ್ಟು ನಿನ್ನತ್ರ ಮೀನು ಇದ್ದದ್ದು ಖಾಲಿಯಾಗಬೇಕೂಂತ ನೀನು ಆ ರೀತಿ ಸಿಕ್ಕ ಸಿಕ್ಕ ಮನೆಗೆಲ್ಲಾ ಹೋಗುವುದಾ?' ಅಂತ ಗದರಿದಾಗ ಆ ಹೆಂಗಸು, `ಅಯ್ಯೋ ದೇವಾ! ತಪ್ಪಾಯ್ತು. ನನಗೆ ಗೊತ್ತೇ ಇರ್ಲಿಲ್ಲ' ಅಂತ ಕ್ಷಮಾಪಣೆ ಕೇಳುವಾಗ ನಾವೆಲ್ಲಾ ಹಿಡಿಯಂತಾಗಿದ್ದೆವು. ಕೊನೆಗೆ ನಮ್ಮಮ್ಮ, `ಗೊತ್ತಿಲ್ದೆ ಕೇಳಿದ್ರಿ. ಅದಕ್ಕೇನು?' ಅಂದು ಅವಳಿಗೆ ಸಮಾಧಾನವಾಗುವಂತೆ ಹೇಳಿದರು. ಆ ಹೆಂಗಸು ನನ್ನನ್ನು ಗುರುತು ಹಿಡಿದಿದ್ದು ನನಗೆ ತಿಳಿಯಿತು.

ನಾನು ಆ ಹೆಂಗಸಿಗೆ, `ಹೌದು, ನಾನು ಭಟ್ರ ಮಗ' ಅಂದೆ. ಮತ್ತೆ ನಾನೇ, `ನೀವೇನು ಇಲ್ಲಿ ಕುಳಿತಿರುವಿರಿ' ಅಂದೆ. `ದೋಣಿಗಳು ಕಡಲಿಗೆ ಇಳಿದಿವೆ. ಇನ್ನೊಂದರ್ಧಗಂಟೆಯಲ್ಲಿ ಹಿಂತಿರುಗುತ್ತವೆ. ಇಲ್ಲಿ ಮೀನುಗಳನ್ನು ಏಲಂ ಹಾಕ್ತಾರೆ. ಅದನ್ನು ನಾವು ಖರೀದಿಸಿ. ಮನೆ ಮನೆಗೆ ಹೊತ್ತುಕೊಂಡು ಹೋಗಿ ಮಾರ್ತೇವೆ' ಅಂದಳು. ಅವರ ಆ ಪರಿಶ್ರಮ, ಅವಿರತ ದುಡಿತ, ಮನೆ ಮನೆಗೆ ಹೋಗಿ ಮೀನು ಮಾರುವ ಕೆಲಸ ನೆನೆಯುತ್ತಲೆ ಅನುಕಂಪ ಮೂಡಿತು. ಕೊನೆಗೆ ನಾನು ಆ ಹೆಂಗಸಿಗೆ ಹೇಳಿ ಮತ್ತೆ ದೂರಕ್ಕೆ ಕುಳಿತೆ.


ಅವರು ನಿರೀಕ್ಷಿಸುವಂತೆಯೇ ಅಲೆಗಳ ಅಬ್ಬರದ ನಡುವೆ ದೋಣಿ ಏರಿ ಇಳಿಯುತ್ತಾ ಬರುತ್ತಿರುವಾಗ ಅವರೆಲ್ಲಾ ಎದ್ದು ನಿಂತರು. ಆಗ ಉಬ್ಬರದ ಸಮಯ. ಅಲೆಗಳನ್ನು ದಾಟಿ ಬರುವುದಕ್ಕೆ ದೋಣಿ ಹರ ಸಾಹಸ ಪಡುತ್ತಿತ್ತು. ನಾನು ಆ ದೈತ್ಯ ಅಲೆಗಳನ್ನು ಬೆರಗಿನಿಂದ ನೋಡುತ್ತಾ ಕುಳಿತಿದ್ದೆ. ಎಷ್ಟೇ ಪ್ರಯತ್ನ ಪಟ್ಟರೂ ದೋಣಿ ಅಲೆಗಳನ್ನು ದಾಟಿ ಬರುವುದು ಕಷ್ಟವೆನಿಸಿತು. ದೋಣಿಯೊಳಗಿದ್ದವರೆಲ್ಲಾ ಎಷ್ಟೇ ಬಲ ಉಪಯೋಗಿಸಿ ಹುಟ್ಟು ಹಾಕಿದರೂ ಅಲೆ ಎತ್ತರಕ್ಕೆ ಏರಿ ಆ ದೋಣಿಯನ್ನು ಮತ್ತೆ ಕಡಲಿನತ್ತ ದೂಡುತ್ತಿತ್ತು. ಅಷ್ಟರಲ್ಲಾಗಲೆ ಆ ಹೆಂಗಸರೆಲ್ಲಾ ಅಲೆಗಳು ಮುತ್ತಿಕ್ಕುವ ದಂಡೆಯವರೆಗೂ ಬಂದು ದೋಣಿಯಲ್ಲಿದ್ದವರಿಗೆ ಉತ್ತೇಜನ ಕೊಡುವಂತೆ ಬೊಬ್ಬಿಡುತ್ತಿದ್ದರು. ಆದರೂ ದೋಣಿ ಪ್ರಕೃತಿಯ ಕೋಪಕ್ಕೆ ತುತ್ತಾದಂತೆ ಅಲೆಗಳ ಹೊಡೆತಕ್ಕೆ ಸಿಕ್ಕು ಕವಚಿ ಬಿತ್ತು. ದಡದಲ್ಲಿದ್ದ ಮಹಿಳೆಯರ ಆರ್ತನಾದಕ್ಕೆ ಬೆದರಿ ಎದ್ದು ನಿಂತು ಬೆದೆ ಹಿಡಿದವರಂತೆ ನೋಡುತ್ತಿದ್ದೆ. ದೋಣಿಯಲ್ಲಿದ್ದವರೆಲ್ಲಾ ಮುಳುಗಿದರೇನೋ? ನನ್ನ ಕಣ್ಣೆದುರಿಗೆ ಇಂತಹ ದುರ್ಘಟನೆ ನಡೆಯಬೇಕೆ ಎಂದು ಹೆದರುತ್ತಲೇ ಇದ್ದ ನನಗೆ ದೋಣಿಯಲ್ಲಿದ್ದವರೆಲ್ಲಾ ದೋಣಿಯನ್ನ ಗಟ್ಟಿಯಾಗಿ ಹಿಡಿದುಕೊಂಡು ದಡದತ್ತ ಬರುತ್ತಿರುವುದು ಕಂಡು ಸಮಾಧಾನವಾದರೂ ಕೊನೆ ಪಕ್ಷ ಒಬ್ಬನಾದರೂ ನೀರಲ್ಲಿ ಮುಳುಗಿದರೇನೋ ಅಂದುಕೊಂಡು ಹೆಂಗಸರತ್ತ ನಡೆದೆ. ಮೆಲ್ಲನೆ, `ಏನೂ ಆಗಿಲ್ಲ ತಾನೆ?' ಎಂದು ಅನುಮಾನಿಸುತ್ತಾ ಕೇಳಿದೆ. ಆ ಹೆಂಗಸರ ಅಳು ನಿಂತಿರಲಿಲ್ಲ. ನನ್ನ ಪರಿಚಿತ ಹೆಂಗಸು, `ಎಂತ, ಏನೂ ಆಗ್ಲಿಲ್ಲ. ದೋಣಿ ಕವಚಿ ಬಿದ್ರೆ ಕಷ್ಟ ಪಟ್ಟು ಹಿಡಿದ ಮೀನುಗಳು ನೀರಿಗೆ ಬೀಳ್ತಾವಲ್ಲ. ನಮ್ಮ ಹೊಟ್ಟೆಗೆ ಕಲ್ಲು ಬಿದ್ದ ಹಾಗಲ್ವಾ?' ಅಂತ ಕಣ್ಣೀರು ಒರೆಸಿಕೊಂಡಳು. ಅವರ ಆ ಪರಿಶ್ರಮದ ಹಿಂದಿರುವ ಅಳಲು ನನ್ನೆದೆಯನ್ನು ತಟ್ಟಿತು. ನಿಧಾನವಾಗಿ ಹೆಜ್ಜೆ ಹಾಕುತ್ತಾ ರಸ್ತೆಯತ್ತ ನಡೆದೆ.

ಇಂತಹುದೇ ಸನ್ನಿವೇಶವೊಂದು ಟಿ.ಎಸ್. ನಾಗಾಭರಣ ನಿರ್ದೇಶನದ, ಮಾಜಿ ಮುಖ್ಯ ಮಂತ್ರಿ ಎಂ. ವೀರಪ್ಪ ಮೊಯ್ಲಿಯವರ ಕಥೆಯನ್ನು ಆಧರಿಸಿದ ಚಿತ್ರ `ಸಾಗರದೀಪ' ದಲ್ಲಿದೆ. ಅಲ್ಲಿ ಬಿರುಗಾಳಿಗೆ ತುತ್ತಾದ ಸಣ್ಣ ವಿಕಲಾಂಗ ಹುಡುಗನನ್ನು ಚಿತ್ರದ ನಾಯಕ (ರಾಘವೇಂದ್ರ ರಾಜ್ಕುಮಾರ್) ರಕ್ಷಿಸಿ ದೋಣಿಯಲ್ಲಿ ಕರೆತರುವ ದೃಶ್ಯ. ಈ ಚಿತ್ರದ ಚಿತ್ರೀಕರಣವೆಲ್ಲಾ ನಡೆದಿರುವುದು ದಕ್ಷಿಣದ ಬೇಕಲ ಕೋಟೆಯಿಂದ ಉತ್ತರದ ಮಲ್ಪೆಯವರೆಗಿನ ಪಶ್ಚಿಮದ ಕರಾವಳಿಯಲ್ಲಿ.

ನಾಯಕ ಕಾನೂನು ಓದಿ ಹದಿಹರೆಯದ ಕನಸು ಕಾಣುವ ಯುವಕನಂತೆ ದೂರದ ಬೆಂಗಳೂರಿಗೆ ಹೋಗಿ ಅಲ್ಲಿ ಲಾ ಪ್ರಾಕ್ಟೀಸ್ ಮಾಡುವ ಮನಸ್ಸಿನವನು. ಆದರೆ ಅವನು ಊರಿಗೆ ಬಂದಾಗ ಅಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದು ಊರಿನ ಶ್ರೀಮಂತನೊಬ್ಬನ ಮಗಳ ಮಾತಿಗೆ ಅಬ್ಬರದ ಅಲೆಗಳ ನಡುವೆಯೂ ಮೀನು ಶಿಕಾರಿ ಮಾಡಿಕೊಂಡು ಬರುತ್ತಾನೆ. ಮಾತುಕತೆಯಾದಂತೆ ಆ ಮೀನು ನಾಯಕನಿಗೆ ಸೇರಬೇಕಾಗಿರುತ್ತದೆ. ಆದರೆ ಅದನ್ನು ಬಿಟ್ಟುಕೊಡಲು ಮನಸಿಲ್ಲದ ಹುಡುಗಿಯ ತಂದೆ ಅವನ ಜೊತೆಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮುಂದೆ ನಾಯಕ ಮದುವೆಯಾಗಬೇಕೆಂದಿರುವ ಹುಡುಗಿಯ ತಂದೆ ಗುರಿಕಾರನನ್ನು ಸಾಯಿಸಿ ಮುಂದಿನ ಗುರಿಕಾರ ತಾನೆ ಎಂದು ಬೀಗಿಕೊಳ್ಳುತ್ತಿರುತ್ತಾನೆ. ಆದರೆ ನಾಯಕ ಬೆಂಗಳೂರಿನ ತನ್ನ ಕನಸನ್ನು ಪಕ್ಕಕ್ಕಿಟ್ಟು ತನ್ನ ಜನರಿಗಾಗುವ ಅನ್ಯಾಯವನ್ನು ಮೆಟ್ಟಿ ನಿಲ್ಲುವುದೇ ತಾನು ಮಾಡಬೇಕಾಗಿರುವ ಕರ್ತವ್ಯವೆಂದು ತಿಳಿದುಕೊಳ್ಳುತ್ತಾನೆ. ಹೀಗೆ ಮುಂದುವರಿಯುತ್ತದೆ `ಸಾಗರ ದೀಪ' ದ ಕಥೆ. ಕಡಲಿನ ನ್ಯಾಯ ದೊಡ್ಡ ಮೀನು ಸಣ್ಣ ಮೀನನ್ನು ತಿಂದೇ ಬದುಕೋದು. ಆದರೆ ಇಲ್ಲಿ ಅದು ಅಸಾಧ್ಯವಾಗುತ್ತದೆ. ಹೆಗಲಿನ ಮೇಲೆ ಶನಿ ಕೂತಾಗ ಮನುಷ್ಯನ ಬುದ್ಧಿ ಮಂಕಾಗುತ್ತದೆಯೆನ್ನುವಂತೆ ಸರ್ವಾಧಿಕಾರ ಸ್ಥಾಪಿಸಲು ಹೊರಟವನ ಸೊಕ್ಕು ಮುರಿಯುತ್ತದೆ.

ಸಾಗರದೀಪ ಕೇವಲ ಮನೋರಂಜನಾತ್ಮಕ ಸಿನೆಮಾ ಮಾತ್ರವಲ್ಲ, ಇಲ್ಲಿ ಕನ್ನಡದ ಕರಾವಳಿಯ ಶ್ರೀಮಂತಿಕೆ, ಮೊಗವೀರ ಜನಾಂಗದ ರೀತಿ, ರಿವಾಜುಗಳು, ಭೂತದ ದರ್ಶನ, ಭೂತಾರಾಧನೆ, ಕೋಲ, ನೇಮ, ಕರಾವಳಿಯ ಗಂಡು ಮೆಟ್ಟಿನ ಕಲೆ ಯಕ್ಷಗಾನ, ಬಲೆ ತುಂಬಾ ಭಾಗ್ಯ ತುಂಬೆಂದು ಪ್ರಾರ್ಧಿಸುವ ಗಂಗಾಪೂಜೆ ಮುಂತಾದವುಗಳನ್ನು ಕಾಣಬಹುದು. ಹಾಗೆಯೇ ಸಿನಿಮಾದುದ್ದಕ್ಕೂ ತುಳು ಭಾಷೆಯ ಬಳಕೆಯಾಗಿರುವುದು ಸಿನಿಮಾ ನಮ್ಮೂರಿನದ್ದೇ ಅನ್ನುವಷ್ಟು ಆತ್ಮೀಯವಾಗಿ ಬಿಡುತ್ತದೆ.

ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್, ಸುಪ್ರಿಯಾ, ಶ್ರೀಭಾರತಿ, ವಜ್ರಮುನಿ, ಶ್ರೀನಾಥ್, ಬಾಲರಾಜ್, ಗಿರಿಜಾ ಲೋಕೇಶ್ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಸುರತ್ಕಲ್ ಲೈಟ್ ಹೌಸ್, ಬೇಕಲಕೋಟೆ, ಸೈಂಟ್ ಮೇರಿಸ್ ದ್ವೀಪಗಳ ಸೊಬಗು ಸಿನಿಮಾದುದ್ದಕ್ಕೂ ಮುದಗೊಳಿಸುತ್ತದೆ.

- ಅನು ಬೆಳ್ಳೆ.

0 comments:

Post a Comment