ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮೊನ್ನೆ ರೆಂಜೆ ಹೂವಿನ ಮರ ಬದುಕು ಕಳೆದುಕೊಂಡಿತ್ತು. ನೀನು ಕೋಲ್ಮಿಂಚಿನಂತೆ ನೆನಪಲ್ಲಿ ಹಾದುಹೋದೆ... ಸುಮಾರು ಎಂಟು ವರುಷಗಳ ಹಿಂದೆ ನೀನು ಆ ರೆಂಜೆ ಹೂವನ್ನೆಲ್ಲ ಹೆಕ್ಕಿ ತಂದು ನನ್ನ ಅಂಗಿಗೆ ಹಾಕಿದ್ದೆ. ಅದನ್ನು ಹೇಗೆ ಮುಡಿದುಕೊಳ್ಳೋದು ಅಂತ ಗೊತ್ತಾದಾಗ ಈ ಕಾಡ ಹೂವು ನಂಗ್ಯಾಕೆ ಅಂದಿದ್ದೆ. ನೋಡು ಆಕಾಶದಲ್ಲಿ ಮಿನುಗೋ ನಕ್ಷತ್ರ ಕೂಡ ಒಂದು ದಿನ ಕಾಲಿಗೆ ನೋವು ಕೊಡೋ ಉಲ್ಕೆಯೇ ಎಂದು ಆ ಎಲ್ಲಾ ರೆಂಜೆ ಹೂವನ್ನು ತುಂಬಾ ತಾಳ್ಮೆಯಿಂದ ಪೋಣಿಸಿ ನನ್ನ ಹೆರಳ ಮುಡಿಗಿಟ್ಟಿದ್ದೆ. ಅಂದು ಹುಟ್ಟಿಕೊಂಡ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
ಹುಡುಗರು ಹೀಗೂ ಇರುತ್ತಾರಾ... ನಂತರ ಅದೇ ಕಾಯಕವಾಯ್ತು... ರೆಂಜೆ ಹೂವು ವರುಷವಿಡೀ ಇರಬಾರದಾ ಅಂತ ಅನ್ನಿಸೋವಷ್ಟು ರೆಂಜೆ ಮರ ನೆನಪಾಗೋಯ್ತು. ಹೌದು ಆ ರೆಂಜೆ ಮರದ ಹೂವೇ ನನ್ನ ಬಾಲ್ಯದ ನೆನಪುಗಳನ್ನೆಲ್ಲಾ ಸಿಹಿಯಾಗಿಸಿದ್ದು.ಗಂಡುಬೀರಿ ಹುಡುಗಿ ಎಂಬ ಬಿರುದಿನೊಂದಿಗೆ ನನಗೆ ಊರು ಸುತ್ತೋಕೆ ಜೊತೆಗಾರನಾದೆ... ಮರ ಹತ್ತೋಕೆ ಕೋತಿಯಾದೆ. ಯಾವತ್ತೂ ನಿನ್ನ ಜೊತೆ ಜಗಳ ಆಡಿಲ್ಲ, ಮಾತು ಬಿಟ್ಟಿಲ್ಲ, ನೆನಪಾದಾಗ ಅದೇ ರೆಂಜೆಮರದ ನೆರಳಲ್ಲಿ ಕಲ್ಲಾಟ ಆಡುತ್ತಿದ್ದೆವು... ಈಗಲೂ ಊರಿಗೆ ಹೋದಾಗ ಆ ಹೂವ ಮುಡಿದುಕೊಂಡು ನಿನ್ನ ನೆನಪಲ್ಲಿ ದಿನ ಕಳೆಯಬೇಕೆಂಬ ಆಸೆ. ಆದರೆ ಮುಳ್ಳಲ್ಲಿ ಅರಳೋ ಗುಲಾಬಿಯ ಎದುರು ರೆಂಜೆ ಹೂವು ನಕ್ಷತ್ರವಾಗಿ ಕಾಣಲೇ ಇಲ್ಲ ನನಗೆ.
ಆದರೆ ಇಂದಿಗೂ ನನಗೆ ಒಂದು ಕಪ್ ಐಸ್ಕ್ರೀಮಿಗಿಂತ ಒಂದು ಮೊಳ ಮಲ್ಲಿಗೆಯೇ ಜೀವ. ಆ ಹೂವ ಪ್ರೀತಿಯಲ್ಲಿ ಜೀವನ ಪ್ರೀತಿಯನ್ನು ಕಲಿಸಿಕೊಟ್ಟ ನಿನ್ನನ್ನು ಇಂದು ನಾನು ಬಣ್ಣಗಳ ಕುಂಚದಲ್ಲಿ ಹುಡುಕಬೇಕಾಗಿದೆ. ಅಮ್ಮ ಯಾವತ್ತೂ ಅವನ ಜೊತೆ ಏನೂಂತ ಮಾತಾಡ್ತೀಯ ಅಂತಾ ಪ್ರಶ್ನಿಸಲೇ ಇಲ್ಲ. ನಿನ್ನ ಜೊತೆ ಮಾತನಾಡಬಾರದೆಂದು ಅಣ್ಣ ಲಕ್ಷ್ಮಣರೇಖೆಯನ್ನು ಹಾಕಲಿಲ್ಲ. ಆದರೆ ನಮಗೆ ನಾವೇ ದೂರವಾದೆವು... ರೆಂಜೆ ಮರದಲ್ಲಿ ಹೂವು ಅರಳೋದೇ ಇಲ್ವೇನೋ ಅನ್ನೋಷ್ಟರಮಟ್ಟಿಗೆ ದೂರವಾದೆವು. ಆ ಮರ ಬದುಕ ಕಳೆದುಕೊಂಡಾಗ ಏನೂ ಅನ್ನಿಸಲೇ ಇಲ್ವಾ ಬಿಡು ನನಗೂ ಏನೂ ಅನಿಸಲೇ ಇಲ್ಲಾ... ಮರ ಸತ್ತುಹೋಯಿತು ಅಷ್ಟೇ....!
ಬಹುಷಃ ನಿನ್ನ ಮನದಲ್ಲಿರೋ ಹೂವಿನ ಪ್ರೀತಿಯಂತಹ ಆ ನೆನಪು, ನನ್ನ ಮನಸ್ಸಿನಲ್ಲಿರೋ ಮರದ ನೆರಳಿನಂತಿರುವ ನೆನಹು... ಕಾಲನ ಕೈಯಲ್ಲಿ ಮಾತ್ರ ಸಾಯೋಕೆ ಸಾಧ್ಯವೇನೋ... ಬಣ್ಣಗಳ ಜೊತೆ ಆಟವಾಡೋ ನೀನು ಬಿಡಿಸುವ ಹುಡುಗಿಯ ಮುಖದ ಕಣ್ಣುಗಳಾಗೋ ಆಸೆ ನನಗೆ. ನಾನು ಬರೆಯೋ ಲೇಖನದ ಪ್ರೀತಿಯ ಹುಡುಗ ಆಗೋ ಬಯಕೆ ನಿನಗೆ... ಆದರೆ ಆ ರೆಂಜೆ ಹೂವು ಅರಳೋಕೆ ಕೇಳ್ತಾನೇ ಇಲ್ಲಾ...


ದೀಷ್ಮಾ ಡಿ.ಶೆಟ್ಟಿ.

0 comments:

Post a Comment