ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಡುಗೆ
ಚುಮು ಚುಮು ಚಳಿಯ ಮಜಾ ಇನ್ನೂ ಇದೆ... ಈ ಚಳಿಯೊಂದಿಗೆ ಮೆಲ್ಲಲು ಒಂದಷ್ಟು ಗರಿ ಗರಿ ಕಜ್ಜಾಯವಿದ್ದರೆ ಎಷ್ಟು ಚೆನ್ನ... ಈ ಕಜ್ಜಾಯ ಹೀಗೆ ಮಾಡೋಣ...ಜೊತೆಯಾಗಿ ಸವಿಯೋಣ...

1. ಅತಿರಸ ಏನೇನು ಬೇಕು : ಅಕ್ಕಿ ಹುಡಿ ಅರ್ಧ ಕೆ.ಜಿ, ಬೆಲ್ಲ ಅರ್ಧ ಕೆ.ಜಿ , ಎಣ್ಣೆ ಒಂದು ಲೀಟರ್, ಬಾಳೆ ಎಲೆ.ಹೀಗೆ ಮಾಡಿ : ದಪ್ಪತಳದ ಪಾತ್ರೆಯಲ್ಲಿ ಬೆಲ್ಲ ಹಾಕಿ ಒಂದು ಲೋಟ ನೀರು ಹಾಕಿ ಸಣ್ಣ ಉರಿಯಲ್ಲಿಡಿ. ಬೆಲ್ಲ ನೂಲು ಪಾಕಕ್ಕೆ ಬಂದಾಗ ನುಣ್ಣಗಿನ ಅಕ್ಕಿಹುಡಿಯನ್ನು ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಗೊಟಾಯಿಸಿ ಕೆಳಗಿಡಿ. ತಣಿದ ಮೇಲೆ ಬಾಳೆ ಎಲೆಯಲ್ಲಿ ವಡೆಯಾಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕೆಂಪಗಾಗುವ ತನಕ ಕರಿಯಿರಿ. ಎಣ್ಣೆಯಿಂದ ತೆಗೆದ ಅತಿರಸವನ್ನು ಪೇಪರ್ ಮೇಲೆ ಹರವಿ. ಇದರಿಂದ ಹೆಚ್ಚಿರುವ ಎಣ್ಣೆ ಹೀರಿಕೊಳ್ಳುತ್ತವೆ. ಈ ತಿಂಡಿ ಡಬ್ಬದಲ್ಲಿಟ್ಟರೆ ಒಂದು ತಿಂಗಳ ತನಕವೂ ಕೆಡದೆ ಉಳಿಯುತ್ತದೆ. ವ್ಹಾವ್ ಎಷ್ಟು ರುಚಿ ಅಲ್ಲವೇ...?

2. ಅವಲಕ್ಕಿ ಉಂಡೆ...

ಏನೇನು ಬೇಕು : ದಪ್ಪ ಅವಲಕ್ಕಿ ಅರ್ಧ ಕೆ.ಜಿ, ಬೆಲ್ಲ ಕಾಲು ಕೆ.ಜಿ, ಗೋಡಂಬಿ, ದ್ರಾಕ್ಷಿ, ಎಳ್ಳು ಎರಡು ಚಮಚ.
ಹೀಗೆ ಮಾಡಿ : ಅವಲಕ್ಕಿ ಹಾಗೂ ಎಳ್ಳನ್ನು ಬೇರೆ ಬೇರೆಯಾಗಿ ಹುರಿಯಿರಿ. ಬೆಲ್ಲವನ್ನು ಪಾಕಕ್ಕೆ ಇಡಿ. ನೂಲು ಪಾಕ ಆಗುತ್ತಿದ್ದಂತೆ ಗೋಡಂಬಿ, ದ್ರಾಕ್ಷಿ , ಎಳ್ಳು ಮತ್ತು ಹುರಿದ ಅವಲಕ್ಕಿಯನ್ನು ಹಾಕಿ ಗೊಟಾಯಿಸಿ. ಬಿಸಿ ಇರುವಾಗಲೇ ಉಂಡೆ ಕಟ್ಟಿ. ಆಕರ್ಷಣೆಗಾಗಿ ಉಂಡೆಯ ಮೇಲ್ಭಾಗದಲ್ಲಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಅಲಂಕರಿಸಿ. ಏನು ರುಚಿ ನೋಡಿ.

3. ಕೂವೆ ಹಾಲ್ಬಾಯಿ
ಏನೇನು ಬೇಕು : ಕೂವೆ ಹುಡಿ ಒಂದು ಕಪ್, ಹುಡಿಮಾಡಿದ ಬೆಲ್ಲ ಕಾಲು ಕೆ.ಜಿ (ಎರಡೂವರೆ ಕಪ್ ), ಅಗತ್ಯವಿದ್ದಷ್ಟು ಗೋಡಂಬಿ, ದ್ರಾಕ್ಷಿ, ತುಪ್ಪ ನಾಲ್ಕು ಚಮಚ.
ಹೀಗೆ ಮಾಡಿ : ಕೂವೆ ಹುಡಿಯನ್ನು ನೀರು ಹಾಕಿ ತೆಳ್ಳಗೆ ಕದಡಿ ದಪ್ಪತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿಟ್ಟು ಗೊಟಾಯಿಸಿ. ಚೆನ್ನಾಗಿ ಬೆಂದಾಗ ಬೆಲ್ಲಹಾಕಿ ಒಂದಷ್ಟುಹೊತ್ತು ಗೊಟಾಯಿಸಿ. ಗೋಡಂಬಿ ದ್ರಾಕ್ಷಿ ಯನ್ನು ಹಾಕಿ ಗೊಟಾಯಿಸುತ್ತಿರಿ. ಪಾಕ ತಳಬಿಟ್ಟು ಬರುತ್ತಿದ್ದಂತೆಯೇ ತುಪ್ಪ ಸವರಿದ ತಟ್ಟೆಗೆ ಹಾಕಿ. ಏಕಪ್ರಕಾರವಾಗಿ ಹರಿತ ಚೂರಿಯಿಂದ ಕತ್ತರಿಸಿ. ಮೇಲ್ಭಾಗದಲ್ಲಿ ಅಲಂಕಾರಕ್ಕೆ ತುಂಡುಮಾಡಿದ ಗೋಡಂಬಿ ದ್ರಾಕ್ಷಿಗಳನ್ನು ಹರವಿರಿ. ರುಚಿಯೂ ಚೆನ್ನ.

4. ಮಂಡಕ್ಕಿ ಉಂಡೆ
ಏನೇನು ಬೇಕು : ಮಂಡಕ್ಕಿ ನೂರು ಗ್ರಾಂ., ಬೆಲ್ಲ ಇನ್ನೂರು ಗ್ರಾಂ. , ಗೋಡಂಬಿ ತುಂಡು ಅರ್ಧ ಕಪ್, ಏಲಕ್ಕಿ ಹುಡಿ ಅರ್ಧ ಟಿ.ಸ್ಪೂನ್.
ಹೀಗೆ ಮಾಡಿ : ಬೆಲ್ಲಕ್ಕೆ ಸ್ವಲ್ಪವೇ ನೀರು ಹಾಕಿ ದಪ್ಪತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿಡಿ. ಸ್ವಲ್ಪ ಹೊತ್ತಿಗೊಮ್ಮೆ ಸಟ್ಟುಗದಿಂದ ಮಗುಚಿ. ಏಲಕ್ಕಿ ಹುಡಿಯನ್ನೂ ಅದೇ ಸಂದರ್ಭ ಹಾಕಿ. ಬೆಲ್ಲದ ಪಾಕ ನೊರೆ ನೊರೆಯಾಗಿ ಬಂದಾಗ ಕೆಳಗಿಡಿ. ತಕ್ಷಣವೇ ಗೋಡಂಬಿ, ಮಂಡಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೈಗೆ ಸ್ವಲ್ಪ ತುಪ್ಪ ಅಥವಾ ನೀರು ಸವರಿಕೊಂಡು ಬೇಕಾದ ಆಕಾರದಲ್ಲಿ ಉಂಡೆಮಾಡಿ .ಗರಿ ಗರಿ ಉಂಡೆ ಮೆಲ್ಲಲು ಖುಷಿಯೋ ಖುಷಿ.


- ಪಾಕ: ಸುಮತಿ ಕೆ.ಸಿ.ಭಟ್ ಆದೂರು.

1 comments:

Vinaya said...

uttamavaada hosaruchi, baayi neeroorisuttade.

Post a Comment