ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ವಿಧಾನ ಮಂಡಲದಲ್ಲಿ ಅಧಿವೇಶನ ನಡೆಯುತ್ತಿದೆ. ಪ್ರತಿಪಕ್ಷಗಳ ಅಬ್ಬರ, ಅರಚಾಟಗಳು, ಆಡಳಿತ ಪಕ್ಷಗಳ ನಿಸ್ಸಹಾಯಕತೆಗಳೆಡೆಯಲ್ಲಿ ಸಮಯ ಪೋಲಾಗುತ್ತಿದೆ. ನೋಟಿಫೈ, ಡಿನೋಟಿಫೈಗಳ ಸಂಗತಿ ಚರ್ಚೆಗಳಿಲ್ಲದೆ ಕಳೆದುಹೋಗುತ್ತಿದೆ. ಯಾವುದೋ ಸರಕಾರಗಳ ಕಾಲದ ಭೂಹಗರಣಗಳು ಇಂದೆಂದಿನದ್ದೋ ಸೈಟುಗಳೆಡೆಯಲ್ಲಿ ತಳುಕು ಹಾಕಿಕೊಂಡು ಸದನದ ಅಬ್ಬರ ಜಾಸ್ತಿಯಾಗುತ್ತಿದೆ. ತನ್ನ ಪಾಡಿಗೆ ಎಲ್ಲೋ ಮೂಲೆಯಲ್ಲಿ ಬಿದ್ದುಕೊಂಡಿರುತ್ತಿದ್ದ ಜಮೀನಿಗೆ ಕೋಟಿಗಳ ಬೆಲೆ ಬಂದು ಬಿಟ್ಟಿದೆ. ಒಂದು ತುಂಡು ನೆಲ ಕರ್ನಾಟಕದಲ್ಲಿ ಮನೆಮಾತಾಗಿ ಬಿಟ್ಟಿದೆ. ಜನಪ್ರತಿನಿಧಿಗಳ ಸಂಬಂಧಿಕರಾರೋ ಕಾಯ್ದೆಯ ಸುಖವನ್ನು ಅನುಭವಿಸುತ್ತಿದ್ದಾರೆ. ಇದು ರಾಜಧಾನಿಯ ಕತೆ.ತುಂಡು ಭೂಮಿಯೊಂದು ಬೃಹತ್ ಬ್ರಹ್ಮಾಂಡದಂತೆ ವಿಧಾನಮಂಡಲದಲ್ಲಿ ಚರ್ಚೆಯಾಗಿ ನೆಲದ ಮಹತ್ವವನ್ನು ಸಾರಿ ಹೇಳಿದಂತಿದೆ. ರಾತ್ರೋರಾತ್ರಿ ನೋಟಿಫೈ ಆಗಿದ್ದ ಭೂಮಿ ಬೆಳಗಾಗುವುದರೊಳಗೆ ಡಿನೋಟಿಫೈ ಆಗಿ ಯಾರದ್ದೋ ಕೈ ಸೇರಿಕೊಂಡ ಕತೆ ರಾಜಧಾನಿಯದ್ದಾದರೆ ಅಲ್ಲಿಂದ ದೂರದ ಕರಾವಳಿಯಲ್ಲಿ ನಡೆದದ್ದೇ ಬೇರೊಂದು ಕತೆ. ಅದು ವಿಧಾನಮಂಡಲದಲ್ಲಿ ಚರ್ಚೆಯಾಗಲಿಲ್ಲ. ಆಗುವುದೂ ಇಲ್ಲ. ಏಕೆಂದರೆ ಕರಾವಳಿಯ ಸದ್ಯದ ಚರ್ಚೆಯು ಭೂಮಿಗೆ ಆ ಯೋಗವಿಲ್ಲ. ಆ ಭೂಮಿ ರಾತ್ರೋರಾತ್ರಿ ನೋಟಿಫೈ ಆಗಿಬಿಡುತ್ತದೆ . ಹಾಗಾಗಿ ಅದೊಂದು ಭಿನ್ನ ಕತೆ.
ಅದು ರಾಜಧಾನಿಯ ಭೂಮಿಯಂತೆ ತುಂಡು ಭೂಮಿಯ ಕತೆಯಲ್ಲ. ಹಚ್ಚಹಸುರಿನ, ನಳನಳಿಸುತ್ತಿದ್ದ ಎಕರೆಗಟ್ಟಲೆ ಭೂಮಿಯ ಕತೆ. ಕಳೆದುಹೋದ ಸಾವಿರಾರು ಎಕರೆ ಭೂಮಿಯ ಕತೆ. ಇನ್ನೂ ಕಳೆದುಕೊಳ್ಳಲು ಸರತಿಯಲ್ಲಿರುವ ವ್ಯಥೆ. ವಿಧಾನಮಂಡಲದಲ್ಲಿ ಚರ್ಚೆತ ವಿಷಯ. ಆಡಂಬರದ ಬದುಕಿನ ಭೂಮಿಯದ್ದಾದರೆ ಈ ಭೂಮಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಕತೆ. ರಾಜಧಾನಿಯ ಭೂಮಿ ಉಳ್ಳವರಿಗಾಗಿಯಾದರೆ ಕರಾವಳಿಯ ಭೂಮಿ ಇಲ್ಲದವರದ್ದು. ಅದು ಖಚಿತ.
ಮಂಗಳೂರು ವಿಶೇಷ ಆರ್ಥಿಕ ವಲಯ ಎಂದರೆ ಹಾಗೆಯೆ. ಅದಕ್ಕೆ ಎದುರು ಬಂದವರನ್ನು ಅದು ಸಹಿಸುವುದಿಲ್ಲ. ಹಾಗಾಗಿ ಅದರ ಬಗ್ಗೆ ಮಾತಾಡಬಲ್ಲ ಧೈರ್ಯ ಇಲ್ಲಿನ ಪ್ರಜ್ಞಾವಂತರಿಗೂ ಸಾಕಾಗುವುದಿಲ್ಲ. ಹೀಗೆ ವರ್ತಿಸುತ್ತಲೇ ಅದು 1800 ಚಿಲ್ಲರೆ ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಅದರ ಮುಂದುವರಿದ ಭಾಗವೆಂಬಂತೆ 2035 ಎಕರೆಯ ಮೇಲೂ ಕಣ್ಣಿಟ್ಟು ಅದರ ಕಬಳಿಕೆಯ ಪ್ರಯತ್ನ ಮಾಡುತ್ತಿದೆ.
ಮೊದಲ ಹಂತದ ಅನಾಹುತಗಳನ್ನು ಕಂಡ ಜನನಾಯಕರು ಎರಡನೆ ಹಂತಕ್ಕೆ ಆಸ್ಪದವಿಲ್ಲ ಎಂದು ಹೇಳಿಕೆ ಕೊಟ್ಟರಷ್ಟೇ ಹೊರತು ಅಧಿಕೃತ ಸೂಚನೆ ಹೊರಬರಲಿಲ್ಲ. ಹಾಗಾಗಿ ಗೊಂದಲಗಳನ್ನು ಹುಟ್ಟಿಸುತ್ತಾ, ಭಯವನ್ನು ನಿರ್ಮಿಸುತ್ತಾ ತನ್ನ ಕೆಲಸ ತಾನು ಮಾಡುತ್ತಿದೆ. ವಿಧಾನಮಂಡಲದ ತುಂಡು ನೆಲದ ಬಗೆಗಿನ ಚರ್ಚೆಗಳೆಡೆಯಲ್ಲಿ ರೈತರ ಭೂಮಿಯ ಸಂಗತಿ ಚರ್ಚೆಗೆ ಆಸ್ಪದವಿಲ್ಲದೆ ಹೋಗುತ್ತಿದೆ. ಇವಿಷ್ಟು ಕರಾವಳಿಯ ರೈತನ ಭೂಮಿಯ ಕತೆ. ಈಗ ಮುಂದುವರೆದಿರುವುದು ಅದರ ಎರಡನೆ ಭಾಗ.
ಮಂಗಳೂರು ತಾಲೂಕು ಪೆರ್ಮುದೆ ಎಂಬ ಗ್ರಾಮದ ಒಂದು ಭಾಗ ಕುಡುಬಿ ಪದವು. ಬುಡಕಟ್ಟು ವರ್ಗದ ಕುಡುಬಿ ಜನಾಂಗದ ಈ ಗ್ರಾಮ ಹಸಿರಿನ ನೆಲ. ಭತ್ತ, ತರಕಾರಿ ಬೆಳೆಯುತ್ತಾ ತಮ್ಮ ಪಾಡಿಗೆ ತಾವಿರುತ್ತಿದ್ದ ಈ ಕುಡುಬಿಗಳು ಶ್ರಮಜೀವಿಗಳು. ವಿಶೇಷ ಆರ್ಥಿಕ ವಲಯ ಪ್ರದೇಶದ ಅಂಚಿನಲ್ಲಿರುವ ಇವರಿಗೆ ಅದರಿಂದಾಗುವ ಪ್ರಯೋಜನವೇನೂ ಇರಲಿಲ್ಲ. ತಮ್ಮ ತರಕಾರಿಗಳನ್ನು ಮಾರುತ್ತಾ ಸಮೃದ್ಧಿಯ ಜೀವನ ನಡೆಸುತ್ತಿದ್ದ ಇವರಿಗೆ ಕೊನೆಗೆ ಮುಳುವಾಗಿದ್ದು ಅದೇ ಭೂಮಿ. ಒಂದು ದಿನ ಸೂರ್ಯಾಸ್ತದ ಅನಂತರ ಬಂದ ಸೂಟುಧಾರಿಗಳು ಹೆಬ್ಬೆಟ್ಟು ಒತ್ತಿಸಿಕೊಂಡು ಹೋಗುವಾಗಲೂ ಇವರಿಗೆ ಏನೊಂದೂ ಗೊತ್ತಿರಲಿಲ್ಲ. ಮರುದಿನ ಸರ್ವೆ ನಡೆಸುವ ಹೊತ್ತಿಗೆ ಎಲ್ಲವೂ ಸ್ಪಷ್ಟವಾಗಿ ಹೋಗಿತ್ತು. ಮುಂದೆ ನಡೆದಿದ್ದೆಲ್ಲಾ ಒಂಥರಾ ರಕ್ತ ಚರಿತ್ರೆಯೇ. ಬೆಳೆದು ನಿಂತಿದ್ದ ಭತ್ತ, ತರಕಾರಿಗಳ ಮೇಲೆ ಯಂತ್ರಗಳು ಮಣ್ಣು ಸುರಿದವು. ಬಾವಿ, ಬಾವಿಯೊಳಗಿನ ಮೋಟಾರುಗಳು ಮುಚ್ಚಿಹೋದವು. 15 ಚಿಲ್ಲರೆ ಎಕರೆ ಪ್ರದೇಶ ಸಪಾಟು ಮೈದಾನವಾಯಿತು. ಕುಡುಬಿಗಳ ಮನೆಯ ಮುಂದಿನ ದೃಶ್ಯ ಬದಲಾಗಿ ಹೋಗಿತ್ತು. ಅಲ್ಲಿ ನಡೆದ ಇನ್ನೂ ಒಂದು ವಿಚಿತ್ರ ವೆಂದರೆ ಮೊದಲ ಹಂತದ ಭೂ ಸ್ವಾಧೀನದಲ್ಲಿ ನೆಲ ಕಳೆದುಕೊಂಡ ಕರಾವಳಿಯ ಗುತ್ತಿನ ಮನೆಗಳ ಕುಟುಂಬಗಳಿಗೆ ಕುಡುಬಿಗಳ ಜಾಗದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ನೋಡನೋಡುತ್ತಲೇ ಕುಡುಬಿಗಳ ಭೂಮಿಯಲ್ಲಿ ಹೊಸ ಬಡಾವಣೆಯೊಂದು ಎದ್ದು ನಿಂತಿತು. ತುಳುವರ ಗುತ್ತಿನ ಮನೆ ಕಾಂಕ್ರೀಟ್ ಬಂಗಲೆಗಳಾದವು. ಗುತ್ತಿನ ಮನೆಗಳ ದೇವರು, ದೈವಸ್ಥಾನಗಳಿಗೂ ಪುನರ್ವಸತಿ ಕಲ್ಪಿಸಲಾಯಿತು. ಇಡೀ 15 ಎಕರೆ ತುಂಬಾ ದೇವರಿಗೂ ದೈವಗಳಿಗೂ ಮನೆಗಳು ಎದ್ದವು. ಸಂಸ್ಕೃತಿಯ ಪ್ರತೀಕವಾದ, ಸೊಗಡಿನ ಸಂಕೇತವಾದ ಗುತ್ತು ಮತ್ತು ಅದರ ದೇವರು ಸರತಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟವು. ಅದುರೆದುರಿನಲ್ಲೇ ಭೂಮಿ ಕಳೆದುಕೊಂಡ ಕುಡುಬಿಗಳ ಮನೆಗಳು ನಿಂತವು. ಒಂದೆಡೆ ದೇವರನ್ನು ತಮ್ಮೊಟ್ಟಿಗೆ ಕಾಸ್ಮೋಪಾಲಿಟೀಕರಣಗೊಳಿಸಿದ ಶ್ರೀಮಂತರು. ಇನ್ನೊಂದೆಡೆ ಅನ್ನಕ್ಕಾಗಿ ಹೋರಾಟ ಮಾಡುವ ಕುಡುಬಿಗಳು! ಇದು ವಿಚಿತ್ರವಾದರೂ ಸತ್ಯ. ಇದೆಲ್ಲಾ ಬುದ್ಧಿವಂತರ ಜಿಲ್ಲೆ ಎಂದು ಕರೆದುಕೊಳ್ಳುವ, ಒಂದು ಕಾಲದಲ್ಲಿ ಹೋರಾಟಗಳ ತವರು ಮನೆಯಾಗಿದ್ದ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಇಂದಿಗೂ ನಡೆಯುತ್ತಿದೆ. ಹೀಗೆ ದೇವರಿಗೆ ಕ್ವಾಟ್ರಸ್ ಕಟ್ಟಿಸಿ ಕುಡುಬಿಗಳನ್ನು ಬೀದಿಗೆ ತಂದು 1800 ಎಕರೆಗಳ ಮೊದಲ ಹಂತದ ಭೂಸ್ವಾಧೀನ ಕಾರ್ಯ ಮುಗಿಯಿತು. ಕಾಂಕ್ರೀಟ್ ನಾಗಬನಗಳಲ್ಲಿ ಬ್ರಹ್ಮಕಲಶಗಳು ನಡೆದವು. ಅದರೆಡೆಯಲ್ಲಿ ಉಳಿದವರು ಬೆರಳೆಣಿಕೆಯ ಕುಡುಬಿಗಳು. ಕೆಲವರು ಊರು ಬಿಟ್ಟರು. ಕೂಲಿಗೆ ಹೋದರು. ಕಳೆದ ವಾರದವರೆಗೂ ಅವರು ಕೂಲಿನಾಲಿ ಮಾಡಿಕೊಂಡು, ಇದ್ದ ತುಂಡು ನೆಲದಲ್ಲಿ ಬಸಳೆ, ಕುಂಬಳ, ತೊಂಡೆ ಬೆಳೆದುಕೊಂಡು ಬದುಕಿದ್ದರು. ಇದೀಗ ಹೊಸ ವರಸೆಯಿಂದ ಈ ಅಲ್ಪಸ್ವಲ್ಪ ನೆಮ್ಮದಿಗೂ ಸಂಚಕಾರ ಬಂದಿದೆ. ಏಕೆಂದರೆ ಈಗ ಕುಡುಬಿಗಳ ಕೈಯಲ್ಲಿ ಉಳಿದಿರುವ 4.3 ಎಕರೆ ಭೂಮಿಯಲ್ಲಿ ಮೊದಲು ನಡೆದಂತೆ ಕತ್ತಲಾದ ಅನಂತರ ಪತ್ರ ವ್ಯವಹಾರ, ಬೆದರಿಸುವಿಕೆ, ಜೆಸಿಬಿಗಳ ಸದ್ದುಗಳು ಕೇಳಿ ಬರುತ್ತಿವೆ. ರಾಯಲ್ ಕುಳಗಳಿರುವ ಬೀದಿಯ ಎದುರೇ ಕಪ್ಪುಕಪ್ಪಾದ ಕುಡುಬಿಗಳು ಅನಿಷ್ಟವಲ್ಲವೇ ಎಂಬುದು ಜೆಸಿಬಿ ಇಟ್ಟುಕೊಂಡವರ ಹುನ್ನಾರ ಇರಬಹುದು.ಕಾರಣ ಏನೇ ಇದ್ದರೂ ಆರ್ಥಿಕ ವಲಯದ ಅಧಿಕಾರಿಗಳು ಇದು ಮೊದಲನೆ ದರ್ಜೆಗಾಗಿ ನೋಟಿಫೈ ಆದ ಭೂಮಿ ಎನ್ನುತ್ತಿದ್ದಾರೆ. ಎಂದೋ ಮುಗಿದುಹೋದ ಭೂಸ್ವಾಧೀನವನ್ನು ಮತ್ತೆ ಕೆದಕುವ ಪ್ರಯತ್ನ ನಡೆದಿದೆ. ಕುಡುಬಿಗಳನ್ನು ಸಂಪೂರ್ಣ ಖಾಲಿ ಮಾಡಲು ಹುನ್ನಾರ ನಡೆಯುತ್ತಿದೆ. ಕುಡುಬಿಗಳ ರೋದನಕ್ಕೆ ಪೇಜಾವರ ಸ್ವಾಮಿಗಳ ಪ್ರವೇಶವಾಯಿತು. ಅನಂತರ `ನಾವು ರಸ್ತೆ ಕಾಮಗಾರಿ ಮಾಡುತ್ತಿದ್ದೇವೆ' ಎಂದು ಜಿಲ್ಲಾಡಳಿತ ಹೇಳಿತು. ಎಂಥಾ ವಿಪರ್ಯಾಸ. ಕಾಂಕ್ರೀಟ್ ನಾಗಬನಗಳಿಗೆ, ಕುಡುಬಿಗಳ ಬಸಳೆಗೆ ಮಣ್ಣು ಹಾಕಿ ರಾಜಮಾರ್ಗದ ನಿರ್ಮಾಣ. ಇದೆಷ್ಟು ಸರಿ? ಅನಂತರ ಕಾನೂನುಬದ್ಧವಾಗಿಯೇ ಇದನ್ನು ಮಾಡುತ್ತಿದ್ದೇವೆ ಎಂಬ ಮಾತಾಡುತ್ತಿದ್ದಾರೆ. ಏನು ಕಾನೂನುಬದ್ಧವಾಗಿದೆ ಎಂದರೆ ಇನ್ನೂ ವಿಚಿತ್ರಗಳು ತೆರೆದುಕೊಳ್ಳುತ್ತವೆ. ಕುಡುಬಿಗಳೆಂಬ ಅಕ್ಷರಜ್ಞಾನವಿಲ್ಲದವರಿಗೆ ಇಂಗ್ಲಿಷಿನಲ್ಲಿ ಪ್ರಿಂಟೌಟು ತೆಗೆದ, ಮೊಹರಿನ ಲಕೋಟೆಗಳು ರವಾನೆಯಾಗುತ್ತವೆ. ಅದನ್ನು ರೂಪಿಸುವ ವೆಲ್ಪ್ರನೌನ್ಸ್ಡ್ ಇಂಗ್ಲಿಷ್ ಬಲ್ಲವರು ಕುಡುಬಿಗಳೊಡನೆ ವ್ಯವಹರಿಸುತ್ತಿದ್ದಾರೆ. ಕನ್ನಡವೇ ಸರಿಯಾಗಿ ಬರದ ಈ ಕುಡುಬಿಗಳೊಂದಿಗೆ ಎಂ.ಎಸ್.ಇ.ಝಡ್ ವ್ಯವಹರಿಸಿದ್ದು ಹೀಗೆ. ಒಂದು ಹೆಬ್ಬೆಟ್ಟು ಒತ್ತಿಸಿಕೊಳ್ಳುವುದು ಇವರಿಂದೇನೂ ಕಷ್ಟವಲ್ಲ. ವಾಸ್ತವವಾಗಿ ಇದು ನೋಟಿಫೈ ಆದ ಭೂಮಿಯೇ ಅಲ್ಲ. ಆದರೆ ಇದೀಗ ಅದನ್ನು ಮೊದಲ ಹಂತದ ನೋಟಿಫೈ ಆದ ಭೂಮಿ ಎಂದು ಹೇಳುತ್ತಿದೆ. ಅಡಿಗಡಿಗೆ ಗೊಂದಲ, ಸಾಮಾನ್ಯರಿಗೆ , ಹೋರಾಟಗಾರರಿಗೆ ಸುಲಭವಾಗಿ ಅರ್ಥವಾಗದ ಹಾಗೆ ಕಡತಗಳನ್ನು ಸೃಷ್ಟಿಸುತ್ತಿದೆ. ಅಷ್ಟಕ್ಕೂ ರಸ್ತೆ ಮಾಡಲು 4 ಎಕರೆ ಭೂಮಿ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಇಂದು ಕುಡುಬಿ ಪದವಿಗೆ ತೆರಳಿದರೆ ಎಂಥವರಿಗೂ ಪರಿಸ್ಥಿತಿಯ ಮರ್ಮವೇನು ಎಂಬುದು ಅರಿವಾಗುತ್ತದೆ. `ಬಲಾತ್ಕಾರದ ಭೂ ಸ್ವಾಧೀನತೆ ಸಲ್ಲದು' ಎಂಬ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದೇಶದ ಉಲ್ಲಂಘನೆ ಇಲ್ಲಿ ಸ್ಪಷ್ಟವಾಗಿ ಆಗಿದೆ. ಕುಡುಬಿಗಳ ಜಾಗವನ್ನು ಕಿತ್ತು ಪುನರ್ವಸತಿ ಕಲ್ಪಿಸುವುದಾದರೆ ಕುಡುಬಿಗಳಿಗೆ ವಸತಿಯ ಹಕ್ಕಿಲ್ಲವೇ? ಅದು ಕಾನೂನು ಬಾಹಿರವಲ್ಲವೇ? ಹಣ ನೀಡಬಹುದು. ಆದರೆ ಕೃಷಿಯೊಂದನ್ನು ಬಿಟ್ಟು ಬೇರೇನನ್ನೂ ತಿಳಿಯದ ಕುಡುಬಿಗಳು ಮಾಡುವುದೇನು? ಹೋಗುವುದೆಲ್ಲಿಗೆ? ಇಂದು ಕುಡುಬಿ ಪದವು ರಸ್ತೆಯಲ್ಲಿ ಸಾಗಿದರೆ ಬಲಗಡೆಗೆ ಕಾಣುವುದು ವಿಚಿತ್ರ ಬಡಾವಣೆ. ಎಡಗಡೆಯಲ್ಲಿ ಕುಡುಬಿಗಳ ಪುಟ್ಟ ಮನೆಗಳು. ಒಂಥರಾ ವಿಷಣ್ಣತೆಯನ್ನುಂಟು ಮಾಡುತ್ತವೆ. ಹೊಸ ಬಡಾವಣೆಯಲ್ಲಿ ಒತ್ತೊತ್ತಾಗಿ ಕಲ್ಪಿಸಿಕೊಟ್ಟ ದೇಗುಲಗಳಲ್ಲಿ ದೇವರಿರುವನೋ ಅಥವಾ ಕುಡುಬಿಗಳ ರೋದನದಲ್ಲಿರುವವನೋ ಎಂಬ ವೇದನೆಯೋ ಸಂವೇದನೆಯೋ ಏನೋ ಒಂದು ಹಾದು ಹೋಗುತ್ತದೆ. ಫ್ಯಾಂಟಸಿ ಪ್ರಪಂಚದೊಳಗೆ ಹೊಕ್ಕ ಅನುಭವವಾಗುತ್ತದೆ.
ಮಂಗಳೂರು ವಿಶೇಷ ಆರ್ಥಿಕ ವಲಯದ ಇಂಥ ಅಟಾಟೋಪಗಳು ಕೇವಲ ಕರಾವಳಿಗೆ ಸೀಮಿತ ಎಂದುಕೊಳ್ಳುವ ಹಾಗೂ ಇಲ್ಲ. ಇದರ ಯಶಸ್ಸು ಹಲವು ಕೃಷಿ ಭೂಮಿಯನ್ನು ಬಲಿತೆಗೆದುಕೊಳ್ಳಲು ಕಾಯುತ್ತಿದೆ ಮತ್ತು ಇಂದು ನಡೆಯುತ್ತಿರುವ ರಕ್ಕಸತನಗಳು ನಾವು ಕಂಡಷ್ಟೇ ಅಲ್ಲ ಕೂಡ. ಏಕೆಂದರೆ ಅದರ ಬಾಹುಗಳು ಆಳವಾಗಿಯೂ, ವಿಶಾಲವಾಗಿಯೂ ವ್ಯಾಪಿಸಿವೆ. ಅದು ಹಲವರ ಬಾಯನ್ನು ಮುಚ್ಚಿಸಿದೆ. ಕೆಲವರು ಮಾತಾಡಲು ಹೆದರುತ್ತಿದ್ದಾರೆ. ಹಲವರು ಸಾತ್ವಿಕತೆಯ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಮುಖವಾಡ ಹೊದ್ದುಕೊಂಡಿದ್ದಾರೆ. ಕೃಷಿಯ ಉತ್ತುಂಗ, ವೈಭವದ ಬಗ್ಗೆ ಮಾತಾಡುತ್ತಲೇ ಪರಿಸ್ಥಿತಿಗೆ ಬಲಿಯಾಗಿ ಮಾರಾಟವಾಗಿ ಹೋದವರಿದ್ದಾರೆ. ಪತ್ರಿಕಾ ಪ್ರಪಂಚ, ಜಾಹೀರಾತು ಜಗತ್ತು, ಎನ್ಜಿಓಗಳು , ಉದ್ಯೋಗಗಳು ಒಬ್ಬೊಬ್ಬರಾಗಿ ಎಂ.ಎಸ್.ಇ.ಝಡ್ ನತ್ತ ವಾಲಿಕೊಳ್ಳುತ್ತಿದ್ದಾರೆ. ಅದರ ಅಮಾನುಷತೆಯನ್ನು ಹೊರಗೆಳೆಯುವ ಪತ್ರಕರ್ತರಿಗೆ ಒತ್ತಡಗಳು ಸಾಮಾನ್ಯವಾಗುತ್ತಿವೆ. ಇದೆಲ್ಲಾ ಯಾಕಾಗಿ ಆಗುತ್ತಿದೆ? ಅದೂ ಕರಾವಳಿಯಂಥ ಪ್ರದೇಶದಲ್ಲಿ? ಒಂದು ಸಮಯದಲ್ಲಿ ಇಡೀ ಪರಿಸರ ಚಳವಳಿಯ ಕೇಂದ್ರಬಿಂದುವಾಗಿದ್ದ ಕರಾವಳಿ ಕರ್ನಾಟಕದಲ್ಲಿ ಪರಿಸರಕ್ಕೇ ಮಾರಕವಾಗುವ ಯೋಜನೆಗಳಿಗೆ ಏಕೆ ಇಂದು ವಿರೋಧ ವ್ಯಕ್ತವಾಗುತ್ತಿಲ್ಲ? ಪಶ್ಚಿಮ ಘಟ್ಟವನ್ನೇ ಉಳಿಸಿ ಎಂದು ಪಾದಯಾತ್ರೆ ಮಾಡಿದವರೀಗ ಹಿಂದೆ ನಿಂತು ಬಿಟ್ಟಿದ್ದಾರೆ. ಮಂಗಳೂರಿನಲ್ಲಿ ಕೆಂಟುಕಿ ಪ್ರೈಡ್ ಚಿಕನ್ ಆರಂಭಗೊಂಡಿದೆ, ಕಂಟಕಪ್ರಾಯ ಎಂ.ಎಸ್.ಇ.ಝಡ್ ಆಟಾಟೋಪ ಹೆಚ್ಚುತ್ತಿದೆ. ಜನ ಭಯದಿಂದಲೂ ಭಕ್ತಿಯಿಂದಲೂ ಅರ್ಚಿಸುವ ಕಲ್ಲುರ್ಟಿ, ಪಂಜುರ್ಲಿ, ರಾಜನ್ ದೈವ, ಕೊಡಮಣಿತ್ತಾಯ, ಪಿಲಿಚಾಮುಂಡಿಗಳಿಗೆ ಮಾಲ್ನಂಥ ಮನೆಗಳ ನಿರ್ಮಾಣವಾಗಿವೆ. ಇದೆಲ್ಲಾ ಕರಾವಳಿಗೆ ಸಾಧುವೇ? ವಿರೋಧಿಸಲು ಕಾರಣಗಳಿಲ್ಲವೇ? ಕುಡುಬಿಗಳ ಒಕ್ಕಲೆಬ್ಬಿಸುವಿಕೆ ಮೂಲಸಂಸ್ಕೃತಿಯ ನಾಶವಲ್ಲವೇ? ರಾಷ್ಟ್ರಸಂತ ಗುರೂಜಿ ಗೋಳವಲಕರರು ಅಂದೇ ``ನಮ್ಮ ಹೋರಾಟ ಕೇವಲ ಸ್ವಾತಂತ್ರ್ಯಕ್ಕಷ್ಟೇ ಸೀಮಿತವಾಗಬಾರದು. ತಮ್ಮ ನಾಗರಿಕತೆಯ ಹೇರಿಕೆಯ ವಿರುದ್ಧ , ಸಂಸ್ಕೃತಿಯ ರಕ್ಷಣೆಗಾಗಿ ಹೋರಾಟ ಮುಂದುವರಿಯಬೇಕು ಅಂದಿದ್ದರು. ಆದರೆ ಇಪ್ಪತ್ತುನೂರಾ ಹನ್ನೊಂದಾದರೂ ಮೂಲಸಂಸ್ಕೃತಿಯ ನಾಶದ ವಿರುದ್ಧ ಸಾರ್ವತ್ರಿಕ ಹೋರಾಟಕ್ಕೆ ಇನ್ನೂ ತೀವ್ರತೆ ಜನರಲ್ಲಿ ಬರಲಿಲ್ಲ. ತಮಗೆ ಬೇಕಾದಾಗ ಡಿನೋಟಿಫೈ ಮಾಡಿಕೊಳ್ಳುವ ಆಡಳಿತ ಕುಡುಬಿಗಳಂತಹ ತಳಮಟ್ಟದ ಜನರಿಗೆ ಡಿನೋಟಿಫೈ ಮಾಡಲು ಇನ್ನೂ ಮನಸ್ಸು ಮಾಡಿಲ್ಲ. ನಾವು ಒಂದಂತೂ ನೆನಪಿನಲ್ಲಿಟ್ಟು
ಕೊಳ್ಳಬೇಕು. ಮೂಲ ಸಂಸ್ಕೃತಿಯ ಕಾಳಜಿ ಮತ್ತು ಎಂ.ಎಸ್.ಇ.ಝಡ್ ಪ್ರೇಮ ಒಟ್ಟೊಟ್ಟಿಗೇ ಇರಲು ಸಾಧ್ಯವಿಲ್ಲ.
ನಾವಿನ್ನೂ ಹಳೇ ಹಿಸ್ಟ್ರೀಯ ಗುಂಗಿನಲ್ಲೇ ಇದ್ದೇವೆ ಎಂದು ಅನಿಸುತ್ತದೆ. ವಾಸ್ಕೋಡಗಾಮ ಸಮುದ್ರಮಾರ್ಗದ ಮೂಲಕ ಭಾರತಕ್ಕೆ ಕಾಲಿರಿಸಿದ್ದು, ಜಾಮೊರಿನ್ ದೊರೆ ಆತನಿಗೆ ಭೂಮಿ ಕೊಟ್ಟಿದ್ದು, ಮೆಣಸು, ಏಲಕ್ಕಿ ಯುರೋಪಿಗೆ ರಫ್ತು ಆಗಿದ್ದು, ಅನಂತರ ಒಬ್ಬರಾದ ಮೇಲೊಬ್ಬರು ಐರೋಪ್ಯರು ಬಂದಿದ್ದು, ಈಸ್ಟ್ಇಂಡಿಯಾ ಸ್ಥಾಪನೆಯಾಗಿದ್ದು , ಬ್ರಿಟಿಷರು ಆಳಿದ್ದು, ಡೌಲ್ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದಿದ್ದು, ವೆಲ್ಲೆಸ್ಲಿ ಸಹಾಯಕ ಸೈನ್ಯಪದ್ಧತಿ ವಿಧಿಸಿದ್ದು, ಗಾಂಧೀಜೀ ಊಟ ಬಿಟ್ಟಿದ್ದು, ಮುಂದೆ ಎಲ್ಲಾ ಸರಿಹೋಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ವಸಾಹತು ವ್ಯವಸ್ಥೆ ಕೊನೆಗೊಂಡಿತು ಎಂದು ಪಠ್ಯದ ಕಥೆಯನ್ನೇ ನಂಬಿಕೊಂಡಿದ್ದೇವೆ. ಆದರೆ ನವ ವಸಾಹತು ವ್ಯವಸ್ಥೆ ಬಗಲಲ್ಲೇ ಕೂತಿದೆ. ಆದರೆ ಹೋರಾಡಬೇಕೆನಿಸುತ್ತಿಲ್ಲ ಏಕೆಂದರೆ ಅಲ್ಲಿ ಅಧಿವೇಶನ ನಡೆಯುತ್ತಿದೆ.
- ಸಂತೋಷ್ ತಮ್ಮಯ್ಯ
(ಲೇಖಕರು ಅಸೀಮಾ ಕನ್ನಡ ಮಾಸಿಕದ ಸಂಪಾದಕರು. ಜನಪರ ಕಾಳಜಿ ಹೊಂದಿದ ಸರಳ ವ್ಯಕ್ತಿ.)

0 comments:

Post a Comment